Thursday, 12th December 2024

ಬದಲಾವಣೆ ಒಂದು ಅಭ್ಯಾಸವಾಗಲಿ

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

2003ರ ಒಂದು ದಿನ, ಸೈಕ್ಲಿಂಗ್ ಕ್ರೀಡೆಯಲ್ಲಿ ಬ್ರಿಟನ್ ನ ಶುಕ್ರದೆಸೆ ಆರಂಭವಾಗಬಹುದು ಎಂದು ಯಾರೂ ಅಂದುಕೊಂಡಿರ ಲಿಲ್ಲ. 1908ರಲ್ಲಿ ಬ್ರಿಟನ್‌ಗೆ ಒಲಿಂಪಿಕ್ ಕ್ರೀಡೆಯಲ್ಲಿ ಸೈಕ್ಲಿಂಗ್ ವಿಭಾಗದಲ್ಲಿ ಬಂಗಾರದ ಪದಕ ಬಂದಿದ್ದೇ ಕೊನೆ, ಅನಂತರದ ನೂರಾ ಹತ್ತು ವರ್ಷಗಳ ಕಾಲ ಬ್ರಿಟನ್‌ಗೆ ಒಲಿಂಪಿಕ್ ಪದಕ ಸಿಗುವುದಿರಲಿ, ಒಂದೇ ಒಂದು ಅಂತಾರಾಷ್ಟ್ರೀಯ ಮಟ್ಟದ ಬಹುಮಾನವೂ ಸಿಕ್ಕಿರಲಿಲ್ಲ.

ಪ್ರತಿಷ್ಠಿತ ‘ಟೂರ್ ಡಿ ಫ್ರಾನ್ಸ್’ ಕ್ರೀಡಾಕೂಟದಲ್ಲೂ ಈ ಅವಧಿಯಲ್ಲಿ ಬ್ರಿಟನ್ನಿಗೆ ಪದಕ ಬಂದಿರಲಿಲ್ಲ. ಬ್ರಿಟಿಷ್ ಸೈಕ್ಲಿಂಗ್ ತಂಡಕ್ಕೆ ಸೈಕಲ್ ಮತ್ತು ಸೈಕಲ್ ಗೇರ್‌ಗಳನ್ನು ನೀಡಲು ಯೂರೋಪಿನ ಬೈಕ್ ಕಂಪನಿಗಳು ಮುಂದೆ ಬರುತ್ತಿರಲಿಲ್ಲ. ಒಂದು ವೇಳೆ ಬ್ರಿಟನ್ ಸೈಕಲ್ ಸವಾರರು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಸೋತರೆ, ತಮ್ಮ ಕಂಪನಿಯ ಸೈಕಲ್ ಮತ್ತು ಬಿಡಿ ಭಾಗಗಳ ಮಾರಾಟಗಳ ಮೇಲೆ ಅದರಿಂದ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಸೈಕಲ್ ಗಳನ್ನು ಮಾರಲು ಹಿಂದೇಟು ಹಾಕುತ್ತಿದ್ದವು.

ಸೈಕ್ಲಿಂಗ್ ಕ್ರೀಡೆಯಲ್ಲಿ ಒಂಥರಾ ನಿರುತ್ಸಾಹದ ವಾತಾವರಣ ಕವಿದಿತ್ತು. ಯುವಕರು ಆ ಕ್ರೀಡೆಯಲ್ಲಿ ಭಾಗವಹಿಸಲು ಮುಂದೆ ಬರುತ್ತಿರಲಿಲ್ಲ. ದಶಕಗಳಿಂದ ಪೆಡಲ್ ತುಳಿಯುತ್ತಿದ್ದವರೇ ಉಸ್ಸಪ್ಪಾ.. ಉಸ್ಸಪ್ಪಾ … ಎಂದು ಏದುಸಿರು ಬಿಡುತ್ತಿದ್ದರು. ಬ್ರಿಟನ್‌ನ ಕ್ರೀಡಾ ಇಲಾಖೆ ಈ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿತು. ಹಾಗಂತ ಸೈಕ್ಲಿಂಗ್ ಬಗ್ಗೆ ಜನರಲ್ಲಿ ನಿರುತ್ಸಾಹವೇನೂ ಮುಸುಕಿರಲಿಲ್ಲ. ಆದರೆ ಬಹುಮಾನ ಮಾತ್ರ ಬರುತ್ತಿರಲಿಲ್ಲ.

ಇದರಿಂದ ಸೈಕ್ಲಿಂಗ್ ಸ್ವಾಭಾವಿಕವಾಗಿ ಅನಾದರಕ್ಕೊಳಗಾಗಿತ್ತು. ಬ್ರಿಟಿಷ್ ಸರಕಾರ ಸೈಕ್ಲಿಂಗ್‌ನಲ್ಲಿ ಸಕ್ರಿಯವಾಗಿದ್ದ ವೃತ್ತಿಪರ ಕ್ಲಬ್‌ಗಳ ಜತೆಗೆ ಮಾತುಕತೆ ಮಾಡಿತು. ಯುವಕರನ್ನು ಸೆಳೆಯಲು ಪ್ರಯತ್ನ ಮಾಡಿತು. ಸೈಕ್ಲಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಮುಂದೆ ಬರುವ ತರುಣರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿತು. ಈ ಎಲ್ಲಾ ಕ್ರಮಗಳಿಂದ ಹೇಳಿಕೊಳ್ಳುವಂಥ ಬದಲಾವಣೆಯೇನೂ ಆಗಲಿಲ್ಲ. ಬ್ರಿಟನ್ ನ ಸೈಕ್ಲಿಂಗ್ ಸ್ಪರ್ಧಿಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಪದಕ ಮಾತ್ರ ಬರುತ್ತಿರಲಿಲ್ಲ. ಜೋಲು ರೆ ಹಾಕಿಕೊಂಡು ಸ್ವದೇಶಕ್ಕೆ ಮರಳುತ್ತಿದ್ದರು.

ಇಂಥ ಸಂದರ್ಭದಲ್ಲಿ ಸೈಕ್ಲಿಂಗ್ ಕ್ರೀಡೆಯ ಸ್ವರೂಪವನ್ನೇ ಬದಲಿಸಲು ಬ್ರಿಟನ್ ಸರಕಾರ ನಿರ್ಧರಿಸಿತು. ಈ ನಿಟ್ಟಿನಲ್ಲಿ ಅದು
ಮಾಡಿದ ಮೊದಲ ಕ್ರಮವೇನೆಂದರೆ ಡೇವ್ ಬ್ರೈಲ್ಸ್ ಫೋರ್ಡ್ ಎಂಬಾತನನ್ನು ಪರ್ಫಾರ್ಮನ್ಸ್ ಡೈರೆಕ್ಟರ್ ಆಗಿ ನೇಮಿಸಿದ್ದು. ಆತ
ತನ್ನ ಹೊಸ ಜವಾಬ್ದಾರಿ ವಹಿಸಿಕೊಳ್ಳುವಾಗ ನಿರ್ಧರಿಸಿದ – ಪ್ರತಿದಿನ ಒಂದೇ ಒಂದು ಸಣ್ಣ ಬದಲಾವಣೆ ಮಾಡಿದರೆ, ನನಗೆ ವಹಿಸಿದ ಜವಾಬ್ದಾರಿಯಲ್ಲಿ ಯಶಸ್ವಿಯಾಗುತ್ತೇನೆ ಮತ್ತು ನಾನು ಅಷ್ಟನ್ನೇ ಮಾಡುತ್ತೇನೆ.

ಪ್ರತಿದಿನ ಒಂದು ಸಣ್ಣ ಬದಲಾವಣೆ ಮಾಡಿದರೆ, ವರ್ಷದಲ್ಲಿ ಮುನ್ನೂರ ಅರವತ್ತೈದು ಬದಲಾವಣೆಗಳಾಗುತ್ತವೆ. ಅದು ಒಂದು ಅತಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.’ ತನ್ನ ಯೋಚನೆಯನ್ನು ತನ್ನ ಸಹೋದ್ಯೋಗಿಗಳ ಜತೆ ಹಂಚಿಕೊಂಡ. ಅವರೆಲ್ಲರೂ ಡೇವ್ ಯೋಚನೆಯನ್ನು ಸಮ್ಮತಿಸಿದರು. ಸರಿ, ಡೇವ್ ಕಾರ್ಯಪ್ರವೃತ್ತನಾದ. ಒಲಿಂಪಿಕ್ ಕ್ರೀಡೆ ಸೇರಿದಂತೆ, ಅಂತಾರಾಷ್ಟ್ರೀಯ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಭಾಗವಹಿಸುವ, ಪದಕ ಗೆದ್ದ ಕ್ರೀಡಾಪಟುಗಳು ಉಪಯೋಗಿಸುವ ಮತ್ತು ಉಪಯೋಗಿಸಿದ ಸೈಕಲ್‌ಗಳನ್ನು ಕೂಲಂಕಷವಾಗಿ ಅಭ್ಯಸಿಸಿದ.

ಅವುಗಳ ಬಿಡಿಭಾಗಗಳನ್ನು ಪರಿಶೀಲಿಸಿದ. ಬ್ರಿಟನ್‌ನ ಸೈಕಲ್ ಸವಾರರು ಉಪಯೋಗಿಸುವ ಸೈಕಲ್‌ನಲ್ಲಿರುವ ನ್ಯೂನತೆಗಳನ್ನು ಪಟ್ಟಿ ಮಾಡಿದ. ಮೊದಲಿಗೆ ಸೈಕಲ್ ಸೀಟನ್ನು ಬದಲಿಸಿದ. ಅದರ ವಿನ್ಯಾಸವನ್ನು ಬದಲಿಸಲು ತೀರ್ಮಾನಿಸಿದ. ಪೆಡಲ್ ಮೇಲೆ
ಪಾದವನ್ನು ಇಟ್ಟುಕೊಳ್ಳುವ ಜಾಗಕ್ಕೆ ಸ್ವಲ್ಪ ಮೆತ್ತನೆಯ ಸ್ಪರ್ಶ ಕೊಟ್ಟ. ಹ್ಯಾಂಡಲ್ ಗ್ರಿಪ್ ಬದಲಿಸಿದ. ಗೇರ್‌ಗಳ ವಿನ್ಯಾಸವನ್ನು ಬದಲಿಸಿದ. ಇದರಿಂದ ಸೈಕಲ್ ತುಳಿಯುವ ಕ್ರಿಯೆ ಸ್ವಲ್ಪ ಆರಾಮವಾಯಿತು.

ಟೈರ್ ಗ್ರಿಪ್‌ನ್ನು ಹೆಚ್ಚಿಸುವ ಬಗ್ಗೆ ಟೈರ್ ತಯಾರಿಕೆ ಕಂಪನಿ ಜತೆ ಮಾತಾಡಿ ತನ್ನಿಷ್ಟದ ಟೈರ್‌ಗಳನ್ನು ಹಾಕಿಸಿಕೊಂಡ. ಸೈಕಲ್ ಟೈರ್ ಕಡ್ಡಿಗಳನ್ನು (ಸ್ಪೋಕ್ಸ್) ಇನ್ನಷ್ಟು ಸಪೂರವಾಗಿಸಿದ. ಇದರಿಂದ ಗಾಳಿ ಅಡ್ಡಿಯಾಗುವ ಸಾಧ್ಯತೆ ಕಮ್ಮಿಯಾಯಿತು.
ಸೈಕಲ್ ಹ್ಯಾಂಡಲ್‌ನಿಂದ ಸೀಟಿಗೆ ಸಂಪರ್ಕ ಕಲ್ಪಿಸುವ ಕಬ್ಬಿಣದ ಸಲಾಕೆಗಳ ಗಾತ್ರವನ್ನು ಕಮ್ಮಿ ಮಾಡಿ ಅದರ ಭಾರವನ್ನು ಕಡಿಮೆ ಮಾಡಿದ. ಸೈಕಲ್ ಸವಾರರಿಗೆ ಮಾಮೂಲಿ ದಿರಿಸಿನ ಬದಲು, ಎಲೆಕ್ಟ್ರಿಕ್ ಹೀಟೆಡ್ ಚಡ್ಡಿಗಳನ್ನು ಬಳಸುವಂತೆ ಸೂಚಿಸಿದ. ಇದರಿಂದ ತೊಡೆಯ ಮಾಂಸಖಂಡಗಳ ಉಷ್ಣಾಂಶ ಕಾಪಾಡಿಕೊಳ್ಳಲು ಸಹಾಯಕವಾಯಿತು.

ಸೈಕಲ್ ಬಾರ್‌ಗೆ ಬಯೋಫೀಡ್ ಬ್ಯಾಕ್ ಸೆನ್ಸರ್‌ಗಳನ್ನು ಅಳವಡಿಸಿದ. ಇದರಿಂದ ಒಂದು ಸುತ್ತು ತುಳಿಯಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆಂಬುದನ್ನು ಲೆಕ್ಕ ಹಾಕುವುದು ಸಾಧ್ಯವಾಯಿತು. ಸವಾರರು ಬಳಸುವ ಹೆಲ್ಮೆಟ್ ವಿನ್ಯಾಸವನ್ನು ಸಹ
ಬದಲಿಸಿದ. ಚೂಪು ಮುಂದಲೆಯ ವಿನ್ಯಾಸದಿಂದ ವೇಗ ವೃದ್ಧಿಸಿಕೊಳ್ಳಲು ಸಹಾಯಕವಾಗುವಂತೆ ಹೆಲ್ಮೆಟ್ ವಿನ್ಯಾಸ
ಮಾರ್ಪಡಿಸಿದ.

ಡೇವ್ ಅಷ್ಟಕ್ಕೆ ಸುಮ್ಮನಾಗಲಿಲ್ಲ. ದಿನಕ್ಕೊಂದು ಬದಲಾವಣೆ ತರಲು ಪಣತೊಟ್ಟಿದ್ದನಲ್ಲ, ಅದನ್ನು ಮುಂದುವರಿಸಿದ. ಸೈಕಲ್
ಸವಾರರಿಗೆ ತೊಡೆಯ ಮಾಂಸಖಂಡಗಳನ್ನು ಬಲಿಷ್ಠಗೊಳಿಸುವ ಕಸರತ್ತುಗಳಲ್ಲಿ ತರಬೇತಿಗೊಳಿಸಲು ನಿರ್ಧರಿಸಿದ. ಇದಕ್ಕಾಗಿ
ಮಸಾಜ್ ಪರಿಣತರನ್ನು ನೇಮಿಸಿದ. ಸೈಕಲ್ ಹ್ಯಾಂಡಲ್ ಗ್ರಿಪ್ ವೃದ್ಧಿಸಲು ಮುಷ್ಟಿಸ್ನಾಯು ಕಸರತ್ತುಗಳನ್ನು ಕಲಿಯುವಂತೆ
ಸವಾರರನ್ನು ಅಣಿಗೊಳಿಸಿದ. ಪಾದಗಳಿಗೆ ಮಸಾಜ್ ಮಾಡುವ ತಜ್ಞರನ್ನು ಥೈಲ್ಯಾಂಡಿನಿಂದ ಕರೆಸಿದ.

ಸೈಕಲ್ ಸವಾರರಿಗೆಂದೇ ಹಾಸಿಗೆ ಮತ್ತು ತಲೆದಿಂಬುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಅವರಿಗೆ ಕೊಟ್ಟ. ಪ್ರತಿಸಲ ಸೈಕಲ್ ಸವಾರಿ ಮುಗಿಸಿ ಬಂದ ನಂತರ ಅದನ್ನು ಹೇಗೆ ಒರೆಸಿ ಇಡಬೇಕು ಎಂಬುದನ್ನು ಕಲಿಸಿದ. ಧೂಳಿನ ಕಣಗಳು ಹೇಗೆ ಸೈಕಲ್‌ನ ಕಾರ್ಯಕ್ಷಮತೆಯನ್ನು ಕಡಿಮೆ ಗೊಳಿಸುತ್ತವೆ ಎಂಬುದನ್ನು ತೋರಿಸಿದ . ಸೀಟಿನ ಸ್ಪ್ರಿಂಗ್ ವಿನ್ಯಾಸ ಬದಲಿಸಲು ಸ್ಪ್ರಿಂಗ್‌ಗಳನ್ನು ಜರ್ಮನಿಯಿಂದ ತರಿಸಿದ. ಇದರಿಂದ ಸವಾರರಿಗೆ ಮೆತ್ತನೆಯ, ಪುಟಿಯುವ ಅನುಭವ ಸಿಗುವಂತಾಯಿತು.

ಜೋರಾಗಿ ಪೆಡಲ್ ತುಳಿಯುವಾಗ ಈ ಸ್ಪ್ರಿಂಗ್‌ಗಳು ತುಸು ಇಳಿಮುಖವಾಗುತ್ತಿದ್ದವು. ಇದರಿಂದ ಸವಾರನಿಗೆ ಇನ್ನಷ್ಟು ಶಕ್ತಿ ಹಾಕಿ
ತುಳಿಯಲು ಸುಲಭವಾಗುತ್ತಿತ್ತು. ಇಂಥ ಸಣ್ಣ ಪುಟ್ಟ ಒಂದೊಂದೇ ಬದಲಾವಣೆಗಳನ್ನು ಐದು ವರ್ಷಗಳ ವರ್ಷಗಳ ಅವಧಿ ಯಲ್ಲಿ ಜಾರಿಗೊಳಿಸಿದ. ಇವೆಲ್ಲ ಒಟ್ಟಿಗೆ ಸೇರಿ ಅಸಾಧಾರಣ ಬದಲಾವಣೆಗಳು ಕಣ್ಣಿಗೆ ಕಾಣುವಂತಾಗಿತ್ತು. ಪರಿಣಾಮ ಮಾತ್ರ ಅಚ್ಚರಿದಾಯಕವಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುವ ಐವತ್ತು ಯುವಕರ ಪಡೆ ಕಟ್ಟಿ ಅವರಲ್ಲಿ ಅದ್ಭುತ ಸೂರ್ತಿ, ಪ್ರೇರಣೆಯನ್ನು ತುಂಬಿದ.

2008ರ ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದ ಹೊತ್ತಿಗೆ, ಬ್ರಿಟನ್ ಸೈಕ್ಲಿಂಗ್ ತಂಡ ಸಜ್ಜಾಗಿ ನಿಂತಿತ್ತು. ವಿವಿಧ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬ್ರಿಟನ್ ಶೇಕಡಾ ಅರವತ್ತರಷ್ಟು ಪದಕಗಳನ್ನು ಬಾಚಿಕೊಂಡಿತು. ಅಸಾಧ್ಯವಾದುದನ್ನು ಸಾಧ್ಯವಾಗಿಸಿತು. ಅದಾದ ನಾಲ್ಕು ವರ್ಷಗಳ ನಂತರ ಲಂಡನ್‌ನಲ್ಲಿ ನಡೆದ ಒಲಿಂಪಿಕ್ ಸ್ಪರ್ಧೆಯಲ್ಲಿ, ಬ್ರಿಟನ್ ಸೈಕ್ಲಿಂಗ್ ತಂಡ ಒಂಬತ್ತು ದಾಖಲೆಗಳನ್ನು ಮತ್ತು ಏಳು ವಿಶ್ವ ದಾಖಲೆಗಳನ್ನು ಬರೆಯಿತು. ಅದೇ ವರ್ಷ ನಡೆದ ‘ಟೂರ್ ಡಿ ಫ್ರಾನ್ಸ್’ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಬ್ರಿಟನ್ ನ ಬ್ರಾಡ್ಲಿ ವಿಗ್ಗಿನ್ಸ್ ಮೊದಲ ಬಾರಿಗೆ ತನ್ನ ದೇಶಕ್ಕೆ ಬಂಗಾರದ ಪದಕ ತಂದುಕೊಟ್ಟ.

ಮುಂದಿನ ವರ್ಷ ಬ್ರಿಟನ್ ನ ಕ್ರಿಸ್ ಫ್ರೋಮ್ ಪದಕ ಬಾಚಿದ. ಅನಂತರ 2015, 2016 ಮತ್ತು 2017ರಲ್ಲಿ ಫೋಮ್ ಪ್ರತಿಷ್ಠಿತ ಟೂರ್ ಡಿ ಫ್ರಾನ್ಸ್ ಕ್ರೀಡಾಕೂಟದಲ್ಲಿ ಬಂಗಾರದ ಪದಕಗಳನ್ನು ಬೇರೆಯವರಿಗೆ ಬಿಟ್ಟುಕೊಡಲೇ ಇಲ್ಲ. ಅಂದರೆ ಆರು ವರ್ಷಗಳಲ್ಲಿ ಐದು ಸಲ ಬ್ರಿಟನ್ ಬಂಗಾರದ ಪದಕ ಗೆದ್ದು ಹೊಸ ದಾಖಲೆ ಬರೆಯಿತು. 2007 ರಿಂದ 2017ರ ತನಕ ಅಂದರೆ ಹತ್ತು ವರ್ಷಗಳ ಅವಧಿಯಲ್ಲಿ, ಬ್ರಿಟನ್ ಸೈಕಲ್ ಸವಾರರು ಅರವತ್ತಾರು ಒಲಿಂಪಿಕ್, ಪ್ಯಾರ ಒಲಿಂಪಿಕ್ ಪದಕ ಸೇರಿದಂತೆ 178 ವಿಶ್ವ ಚಾಂಪಿಯನ್ ಮತ್ತು ಐದು ಟೂರ್ ಡಿ ಫ್ರಾನ್ಸ್ ಕ್ರೀಡಾಕೂಟ ಚಾಂಪಿಯನ್ ಪಟ್ಟವನ್ನು ತಮ್ಮದನ್ನಾಗಿಸಿಕೊಂಡು ಇಡೀ ಜಗತ್ತೇ ಮೂಗಿನ ಮೇಲೆ ಬೆರಳಿಡುವ ಸಾಧನೆ ಮಾಡಿದರು. ನೂರಾಹತ್ತು ವರ್ಷಗಳ ಕಾಲ ಒಂದೇ ಒಂದು ಪದಕ ಪಡೆಯಲು ಅಶಕ್ತವಾದ ದೇಶ, ಕೇವಲ ಒಂದು ದಶಕದ ಅವಧಿಯಲ್ಲಿ ಇಂಥ, ಯಾರೂ ಕಂಡು-ಕೇಳರಿಯದ ಸಾಧನೆ ಮಾಡಿದ್ದಾದರೂ ಹೇಗೆ? ಸಾಮಾನ್ಯ ಅಥ್ಲೀಟುಗಳು ವಿಶ್ವ ಚಾಂಪಿಯನ್ ಗಳಾಗಿದ್ದು ಹೇಗೆ ?

ಬ್ರಿಟನ್‌ಗೆ ಸೈಕಲ್‌ಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದ ಕಂಪನಿಗಳು, ಏಕಾಏಕಿ ಇಡೀ ತಂಡವನ್ನು ಪ್ರಾಯೋಜಿಸಲು ಮುಂದೆ ಬಂದಿದ್ದಾದರೂ ಹೇಗೆ? ಇವೆ ಹೇಗೆ ಸಾಧ್ಯವಾಯಿತು? ಇದಕ್ಕೆ ಡೇವ್ ಬಹಳ ಸೊಗಸಾಗಿ ಹೇಳುತ್ತಾನೆ – ಮೊದಲು
ಬದಲಾವಣೆ ಅಸಾಧ್ಯ ಎಂಬ ಭಾವನೆಯನ್ನು ನಮ್ಮಿಂದ ಹೊಡೆದೋಡಿಸಬೇಕು. ಬದಲಾವಣೆ ರಾತ್ರಿ – ಬೆಳಗಾಗು
ವುದರೊಳಗೆ ಬರುವಂಥದ್ದಲ್ಲ. ಅದು ನಿಧಾನವಾಗಿ ಬರುವಂಥದ್ದು.

ಅಲ್ಲಿ ತನಕ ನಮಗೆ ಸಹನೆ ಇರಬೇಕು ಮತ್ತು ನಮ್ಮ ಪ್ರಯತ್ನವನ್ನು ನಿರಂತರವಾಗಿ ಮುಂದುವರಿಸಬೇಕು. ಮೊದಲ ಹೊಡೆತಕ್ಕೆ ಬಂಡೆ ಒಡೆಯುವುದಿಲ್ಲ. ನೂರಾಒಂದನೇ ಹೊಡೆತಕ್ಕೆ ಒಡೆಯಬಹುದು. ಅದಕ್ಕೂ ಮೊದಲಿನ ನೂರು ಹೊಡೆತಗಳು ನಿರರ್ಥಕ ಅಲ್ಲ. ಆ ನೂರು ಹೊಡೆತಗಳನ್ನು ಹೊಡೆದಿದ್ದರಿಂದಲೇ, ಮುಂದಿನ ಹೊಡೆತಕ್ಕೆ ಬಂಡೆ ಹೋಳಾಯಿತು. ಬದಲಾವಣೆಗಳು ಕಣ್ಣಿಗೆ ಕಾಣದಿರಬಹುದು. ಹಾಗಂತ ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು. ನಾನು ಮಾಡಿದ್ದೂ ಅದನ್ನೇ. ದಿನಕ್ಕೊಂದು ಸಣ್ಣ ಪುಟ್ಟ ಬದಲಾವಣೆ ಮಾಡಿದೆ. ಬದಲಾವಣೆಯನ್ನೇ ಅಭ್ಯಾಸ (habit) ಮಾಡಿಕೊಂಡೆ.

ಬಿಂದು ಬಿಂದುಗಳು ಸೇರಿಯೇ ನದಿಯಾಗುವುದು, ಸಾಗರ ವಾಗುವುದು, ಅದೇ ಕೊನೆಗೆ ಮಹಾಸಾಗರವಾಗುವುದು. ನಮ್ಮಲ್ಲಿ ಚಿಕ್ಕಪುಟ್ಟ ಬದಲಾವಣೆ ಮಾಡಿಕೊಂಡರೆ, ಅದನ್ನೇ ಅಭ್ಯಾಸ ಮಾಡಿಕೊಂಡರೆ, ಒಂದು ವರ್ಷದ ಅವಧಿಯಲ್ಲಿ ನಾವು ನಮಗೆ
ತಿಳಿಯದಂತೆ ಹೊಸ ವ್ಯಕ್ತಿಯಾಗಿರುತ್ತೇವೆ. ನನಗೆ ಚಿಕ್ಕ ಚಿಕ್ಕ ಬದಲಾವಣೆಗಳೇ ಮುಂದೆ ಅತ್ಯದ್ಭುತ ಬದಲಾವಣೆಗಳನ್ನು
ತರುತ್ತವೆ ಎಂಬ ಮಾತಿನಲ್ಲಿ ನಂಬಿಕೆ ಇತ್ತು. ಅಷ್ಟಕ್ಕೂ ನಾನು ಬದಲಾವಣೆ ತರಲಿಲ್ಲ. ಅದಕ್ಕೂ ಮುನ್ನ ನನ್ನಲ್ಲಿ ಈ ಬದಲಾವಣೆ ಗಳನ್ನು ತಂದುಕೊಂಡಿದ್ದೆ.’

ನಾಳೆಯಿಂದ ಓಡಲು ಆರಂಭಿಸಬೇಕು, ನನ್ನ ತೂಕವನ್ನು ನೂರು ಕೆ.ಜಿ.ಯಿಂದ ಎಪ್ಪತ್ತು ಕೆ.ಜಿ.ಗೆ ಇಳಿಸಬೇಕು ಎಂದು
ನಿರ್ಧರಿಸಿದರೆ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಹತ್ತು ದಿನ ಓಡಿ, ನಂತರ ನಿಲ್ಲಿಸಿದರೆ ಪ್ರಯೋಜನ ಇಲ್ಲ. ನೂರು ದಿನ
ಓಡಿದೆ , ಏನೂ ಬದಲಾವಣೆ ಆಗಲಿಲ್ಲ ಎಂದು ನಿಲ್ಲಿಸಿದರೂ ಪ್ರಯೋಜನ ಇಲ್ಲ. ಇಲ್ಲಿ ಮುಖ್ಯವಾಗುವುದೇನೆಂದರೆ, ನಿತ್ಯವೂ
ಓಡುವುದು. ಇಂದು ಮೂರು ಕಿಮಿ. ಓಡಿದರೆ , ನಾಳೆ ಮೂರೂವರೆ ಕಿಮಿ, ನಾಡಿದ್ದು ನಾಲ್ಕು ಕಿ.ಮಿ… ಹೀಗೆ ಅಂತರವನ್ನು ಹೆಚ್ಚಿಸುತ್ತಾ ಹೋಗಬೇಕು.

ಸಣ್ಣ ಸಣ್ಣ ಬದಲಾವಣೆಗಳು ಆರು ತಿಂಗಳ ಕೊನೆಯಲ್ಲಿ ಅಸಾಧಾರಣ ಬದಲಾವಣೆಗಳನ್ನು ತರುತ್ತವೆ. ನಾವಂದುಕೊಂಡಿ ದ್ದನ್ನು ಸಾಧಿಸಲು ಸಾಧ್ಯವಾಗುತ್ತವೆ. ಅಮೆರಿಕದ ಲಾಸ್ ಏಂಜಲೀಸ್ ನಿಂದ ನ್ಯೂಯಾರ್ಕ್‌ಗೆ ಹೋಗುತ್ತಿದ್ದಾಗ, ವಿಮಾನದ ಪೈಲಟ್ ಕೇವಲ 3.5 ಡಿಗ್ರಿ ದಕ್ಷಿಣಕ್ಕೆ ಹೊರಳಿಸಿದರೆ, ನ್ಯೂಯಾರ್ಕಿಗೆ ಹೋಗಬೇಕಾದ ವಿಮಾನ ವಾಷಿಂಗ್ಟನ್ ಡಿ.ಸಿ.ಗೆ (ಅಂದ ಹಾಗೆ ನ್ಯೂಯಾರ್ಕಿನಿಂದ ವಾಷಿಂಗ್ಟನ್ ಡಿ.ಸಿ.ಗೆ 225 ಮೈಲಿ ಅಂತರ) ಹೋಗುತ್ತಾನೆ.

ವಿಮಾನ ಟೇಕಾಫ್ ಆಗುವಾಗ 3.5 ಡಿಗ್ರಿ ಅಂದ್ರೆ ನಗಣ್ಯ. ವಿಮಾನದ ಮೂಗು ಕೇವಲ ಒಂದು ಮೀಟರ್ ದಕ್ಷಿಣಕ್ಕೆ ತಿರುಗಿದರೆ
ಯಾವುದೋ ಊರಿಗೆ ಹೋಗಬೇಕಾದವರು ಇನ್ಯಾವುದೋ ಊರು ತಲುಪುತ್ತಾರೆ. ದೂರ ಪ್ರಯಾಣದಲ್ಲಿ ಒಂದು ಡಿಗ್ರಿ ವ್ಯತ್ಯಾಸ
ವಾದರೂ ಬೇರೆ ಊರಲ್ಲ, ಬೇರೆ ದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಒಂದು ಡಿಗ್ರಿಯ ಮಹತ್ವವೇನು ಎಂಬುದು ಪೈಲಟ್‌ಗಿಂತ
ಬೇರೆಯವರಿಗೆ ಗೊತ್ತಿರಲು ಸಾಧ್ಯವಿಲ್ಲ. ಆದರೆ ನಮಗೆ ಸಣ್ಣ ಸಂಗತಿಗಳ ಮಹತ್ವವೇನು ಎಂಬುದು ಗೊತ್ತೇ ಆಗುವುದಿಲ್ಲ.

ದೊಡ್ಡ ಸಾಧನೆ ಮಾಡಲು ಚಿಕ್ಕ ಚಿಕ್ಕ ಸಂಗತಿಗಳೇ ಸಾಕು. ಆದರೆ ಅದನ್ನು ದಿನವೂ ಮಾಡಬೇಕು. ನಿಮ್ಮ ಟೇಬಲ್ ಮೇಲೆ ಒಂದು ಐಸ್ ಕ್ಯೂಬ್ (ಮಂಜುಗಡ್ಡೆ) ಇದೆಯೆನ್ನಿ. ನಿಮ್ಮ ರೂಮು ತಂಪಾಗಿದೆ ಎಂದು ಭಾವಿಸೋಣ. ರೂಮಿನಲ್ಲಿ ಇಪ್ಪತ್ತೈದು ಡಿಗ್ರಿ ತಾಪಮಾನವಿದೆಯೆನ್ನಿ. ನಿಧಾನವಾಗಿ ಒಂದೊಂದೇ ಡಿಗ್ರಿ ಜಾಸ್ತಿ ಮಾಡುತ್ತಾ ಹೋಗಿ. ಇಪ್ಪತ್ತಾರು…ಇಪ್ಪತ್ತೇಳು ….. ಇಪ್ಪತ್ತೆಂಟು …. ಮೂವತ್ತು ….. ಮೂವತ್ತೊಂದು… ನಿಮ್ಮ ಟೇಬಲ್ ಮೇಲಿನ ಐಸ್ ಕ್ಯೂಬ್ ಹಾಗೇ ಇರುತ್ತದೆ.

ಈಗ ಉಷ್ಣಾಂಶವನ್ನು ಒಂದು ಡಿಗ್ರಿ ಅಂದರೆ ಮೂವತ್ತೆರಡಕ್ಕೆ ಹೆಚ್ಚಿಸಿ. ಐಸ್ ನಿಧಾನವಾಗಿ ಕರಗಲು ಆರಂಭಿಸುತ್ತದೆ. ಕೇವಲ ಒಂದು ಡಿಗ್ರಿಗೆ ಮಂಜುಗಡ್ಡೆ ಕರಗಿತಾ? ಇದಕ್ಕೆ ಉತ್ತರ – ಇಲ್ಲ ಮತ್ತು ಹೌದು. ಮೂವತ್ತೊಂದು ಡಿಗ್ರಿಗೆ ಕರಗದ ಐಸ್ ಮೂವತ್ತೆರಡಾಗುತ್ತಿರುವಂತೆ ಕರಗಲಾರಂಭಿಸಿದ್ದು ಸುಳ್ಳಲ್ಲ. ನಿರ್ಣಾಯಕ ಸಂದರ್ಭಕ್ಕೆ, ಅದಕ್ಕೂ ಹಿಂದಿನ ಅನೇಕ ಘಟನೆಗಳು ಕಾರಣವಾಗಿರುತ್ತವೆ. ಇದೇ ರೀತಿ, ದೇಹದಲ್ಲಿ ಶೇಕಡಾ ಎಂಬತ್ತರಷ್ಟು ರೋಗಾಣುಗಳು ಹರಡಿಕೊಂಡು ಉಲ್ಬಣ ವಾಗುವವರೆಗೆ ಕ್ಯಾನ್ಸರ್ ಇದೆ ಎಂಬುದು ಗೊತ್ತೇ ಆಗುವುದಿಲ್ಲ.

ಅದಾದ ನಂತರವೇ ಕ್ಯಾನ್ಸರ್ ರೋಗ ಪತ್ತೆಯಾಗುತ್ತದೆ. ನೀವು ಗಮನಿಸಿರಬಹುದು, ಬಿದಿರನ್ನು ನೆಟ್ಟ ಮೊದಲ ಐದು ವರ್ಷ, ಅದು ಒಂದು ಮೀಟರ್ ಸಹ ಎತ್ತರ ಬೆಳೆದಿರುವುದಿಲ್ಲ. ಮುಂದಿನ ಆರು ತಿಂಗಳಲ್ಲಿ ಅದು ಮೂವತ್ತು ಅಡಿ ಎತ್ತರ ಬೆಳೆದಿರುತ್ತದೆ. ಇದನ್ನು ನಮ್ಮ ಪ್ರತಿ ಬೆಳವಣಿಗೆಯಲ್ಲೂ ಗಮನಿಸಬಹುದು. ನಮ್ಮೊಳಗೆ ಕೂಡ ಏಕಾಏಕಿ ಬದಲಾವಣೆ ಆಗುವುದಿಲ್ಲ. ದಿನವೂ ಶೇವ್ ಮಾಡುವ ನೀವು, ಎರಡು ದಿನ ಶೇವ್ ಮಾಡದಿದ್ದರೆ ಮುಖದಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಹತ್ತು ದಿನಗಳ ನಂತರವೂ ಮಾಡದಿದ್ದರೆ, ನಿಮ್ಮ ಮುಖವನ್ನೇ ನಿಮಗೆ ಗುರುತು ಹಿಡಿಯಲು ಆಗುವುದಿಲ್ಲ.

ಭೂಮಿಯ ಒಳಗಿನ ಕೆಲವು ಪದರಗಳ ನಡುವೆ ಶತಮಾನಗಳಿಂದ ಘರ್ಷಣೆ ನಡೆಯುತ್ತಿರುತ್ತವೆ. ಒಂದು ದಿನ ಆ ಎರಡು ಪದರಗಳು ಮತ್ತೊಮ್ಮೆ ಘರ್ಷಣೆಗೊಳಪಡುತ್ತವೆ. ಆಗ ಅವು ಭೂಕಂಪವಾಗಿ ಕಾಣಿಸಿಕೊಳ್ಳುತ್ತದೆ. ಮೊದಲ ಸಲ ಘರ್ಷಣೆ ಆದಾಗ ಭೂಕಂಪವಾಗುವುದಿಲ್ಲ. ಅಷ್ಟು ವರ್ಷಗಳ ತಿಕ್ಕಾಟಗಳ ನಂತರವೇ ಹಾಗೆ ಆಗೋದು. ಎಲ್ಲಾ ದೊಡ್ಡ ಸಂಗತಿಗಳೂ ಸಣ್ಣದರಿಂದಲೇ ಆರಂಭವಾಗೋದು.

ಗಿಡಗಳು ಮಣ್ಣಿನೊಳಗೆ ಬೇರುಗಳನ್ನು ಬಿಟ್ಟಿದ್ದೂ ಗೊತ್ತಾಗುವುದಿಲ್ಲ, ಮರವಾಗಿದ್ದೂ ಗೊತ್ತಾಗುವುದಿಲ್ಲ. ಹೂವು ಬಿಟ್ಟು, ಕಾಯಿಯಾಗಿ, ಹಣ್ಣಾಗಿದ್ದೂ. ಮನೆ ಮುಂದಿನ ಹೂಗಿಡದಲ್ಲಿ ಹೂವು ಅರಳುವ ತನಕ, ಅಂಥದ್ದೊಂದು ಕೌತುಕ ನಡೆ
ಯುತ್ತಿದೆ ಎಂಬುದು ಗೊತ್ತೇ ಆಗುವುದಿಲ್ಲ. ನಾವೂ ಹೀಗೆ. ನಮ್ಮಲ್ಲೂ ಇಂಥದೇ ಅಚ್ಚರಿ ಅಥವಾ ವಿಸ್ಮಯದಾಯಕ ಬದಲಾವಣೆ ಗಳನ್ನು ತರಲು ಸಾಧ್ಯ. ಅದಕ್ಕಾಗಿ ನಮ್ಮಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು.

ಇದನ್ನೇ ಸತತ ಅಭ್ಯಾಸವಾಗಿ ಮಾಡಿಕೊಳ್ಳಬೇಕು. ಒಂದು ದಿನ ನಮಗೆ ಗೊತ್ತಿಲ್ಲದ ಅಗಾಧ ಬದಲಾವಣೆ ಆಗಿರುತ್ತದೆ, ನಮಗೇ
ಗೊತ್ತಿಲ್ಲದಂತೆ. ಇಂಥದೇ ಬದಲಾವಣೆಯನ್ನೂ ನಮ್ಮ ಮನೆಯಲ್ಲಿ, ಬೀದಿಯಲ್ಲಿ, ಸಮಾಜದಲ್ಲಿ ತರಬಹುದು. ಒಂದು ಸಣ್ಣ ಪ್ರಸಂಗ ಹೇಳಿದರೆ ಇದು ಚೆನ್ನಾಗಿ ಅರ್ಥವಾಗಬಹುದು. ಕೆಲವು ವರ್ಷಗಳ ಹಿಂದೆ, ಅಮ್ಸ್ಟರ್ಡಮ್‌ನ ಶಿಪೋಲ್ ವಿಮಾನ್ ನಿಲ್ದಾಣದಲ್ಲಿ ರೆಸ್ಟ್ ರೂಮ್‌ನಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಪ್ರಯಾಣಿಕರು ಸುತ್ತಮುತ್ತ ಮೂತ್ರ ವಿಸರ್ಜಿಸುತ್ತಾರೆ, ಇದರಿಂದ ಕ್ಲೀನ್  ಮಾಡುವುದು ಕಷ್ಟ, ಇದಕ್ಕೆ ಅನಗತ್ಯ ಹಣ ಖರ್ಚಾಗುತ್ತದೆ ಮತ್ತು ಈ ನಡವಳಿಕೆಯನ್ನು ಸುಧಾರಿಸಲು ಸಾಧ್ಯವಾ ಎಂಬ ಬಗ್ಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ನಡುವೆ ಚರ್ಚೆ ಆಯಿತು.

ಪ್ರಯಾಣಿಕರು ನಿರ್ದಿಷ್ಟ ಜಾಗ ಬಿಟ್ಟು ಯೂರಿನಲ್ ಸುತ್ತೆಲ್ಲ ಮೂತ್ರ ಪಡಿಸುತ್ತಾರೆ, ಈ ಅಭ್ಯಾಸವನ್ನು ನಿಲ್ಲಿಸುವುದು ಹೇಗೆ ಎಂದು ಅವರೆಲ್ಲ ತಲೆ ಕೆಡಿಸಿಕೊಂಡರು. ಯಾರೋ ಒಬ್ಬರು ಒಂದು ಐಡಿಯಾ ಕೊಟ್ಟರು. ಯೂರಿನಲ್ ಮಧ್ಯ ಭಾಗದಲ್ಲಿ ಸಣ್ಣ ಹುಳು ಅಥವಾ ತಿಗಣೆ ಅಥವಾ ಜಿರಲೆಯ ಸ್ಟಿಕ್ಕರನ್ನು ಅಂಟಿಸಿ ಎಂದು. ಸರಿ, ಎಲ್ಲಾ  ಯೂರಿನಲ್ ನಲ್ಲೂ ಆ ಸ್ಟಿಕ್ಕರ್ ಅಂಟಿಸ ಲಾಯಿತು.

ಪರಿಣಾಮ ಮಾತ್ರ ನಂಬಲಸಾಧ್ಯವಾಗಿತ್ತು. ಯೂರಿನಲ್‌ನಲ್ಲಿ ತಿಗಣೆ ಅಥವಾ ಜಿರಳೆ ಇದೆಯೆಂದು, ಪ್ರಯಾಣಿಕರು ಅದಕ್ಕೆ
ಗುರಿಯಿಟ್ಟು ಮೂತ್ರ ವಿಸರ್ಜಿಸತೊಡಗಿದರು. ಇದರಿಂದ ಸುತ್ತಮುತ್ತ ಮೂತ್ರ ಚೆಲ್ಲುವುದು ನಿಂತೇ ಹೋಯಿತು. ಇದರಿಂದ
ರೆಸ್ಟ್ ರೂಮ್ ಕ್ಲೀನ್ ಮಾಡಲು ತಗಲುತ್ತಿದ್ದ ಖರ್ಚು ಶೇಕಡಾ ಎಂಟರಷ್ಟು ಉಳಿತಾಯವಾಯಿತು. ಒಂದು ಸಣ್ಣ ಕ್ರಮ ಅಗಾಧ
ಬದಲಾವಣೆಗೆ ಕಾರಣವಾಯಿತು. ಜಗತ್ತಿನಲ್ಲಿಯೇ ಎತ್ತರವಾದ ಮೌಂಟ್ ಎವರೆಸ್ಟ್ ಪರ್ವತ ತಾಸಿಗೆ ಒಂದು ಗುಲಗುಂಜಿಯಷ್ಟು
ಕರಗಲಾರಂಭಿಸಿದರೆ, ಅದೂ ಕೂಡ ಒಂದಲ್ಲ ಒಂದು ದಿನ ನೆಲಸಮವಾಗಬಹುದು. ಸಣ್ಣ ಬದಲಾವಣೆಗೆ ಅಂಥ ಶಕ್ತಿಯಿದೆ! ‘ಅಟಾಮಿಕ್ ಹ್ಯಾಬಿಟ್ಸ್’ ಬರೆದ ಜೇಮ್ಸ ಕ್ಲಿಯರ್‌ನ ಪುಸ್ತಕ ಓದಿದ ನಂತರ ನನ್ನಲ್ಲೂ ಒಂದಷ್ಟು ಬದಲಾವಣೆಗಳಾಗುತ್ತಿವೆ ಎಂಬುದನ್ನು ಹೇಳಲು ಇವನ್ನೆ ಹೇಳಬೇಕಾಯಿತು.