Saturday, 23rd November 2024

ಅಕ್ರಮ ಪರವಾನಗಿ: ಕ್ಯಾಡ್ಬರಿ ಇಂಡಿಯಾ ಲಿ. ಎಫ್‌ಐಆರ್ ದಾಖಲಿಸಿದ ಸಿಬಿಐ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿನ ತನ್ನ ಕಾರ್ಖಾನೆಗಾಗಿ (2009-10) ಪರವಾನಗಿ ಪಡೆದುಕೊಳ್ಳುವಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಎಸಗಿದ ಆರೋಪದಲ್ಲಿ ಕ್ಯಾಡ್ಬರಿ ಇಂಡಿಯಾ ಲಿ. ಮತ್ತು ಕೇಂದ್ರ ಅಬಕಾರಿ ತೆರಿಗೆ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಕ್ಯಾಡ್ಬರಿ ಇಂಡಿಯಾ ಹೊಸ ಚಾಕೊಲೇಟ್ ಉತ್ಪಾದನಾ ಘಟಕಕ್ಕೆ ಪರವಾನಗಿ ಪಡೆಯಲು 241 ಕೋಟಿ ರೂ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಅಬಕಾರಿ ಇಲಾಖೆ ಅಧಿಕಾರಿಗಳ ಜತೆ ಸಂಚು ನಡೆಸಿತ್ತು ಎಂದು ಆರೋಪಿಸಲಾಗಿದೆ.

ಹಿಮಾಚಲ ಪ್ರದೇಶದ ಬಡ್ಡಿ ಪ್ರದೇಶದಲ್ಲಿ ನಿರ್ಮಿಸಿದ್ದ ಘಟಕದಲ್ಲಿ 5 ಸ್ಟಾರ್ ಮತ್ತು ಜೆಮ್ಸ್ ಚಾಕೋಲೇಟ್‌ಗಳನ್ನು ಉತ್ಪಾದನೆ ಮಾಡಲಾಗುತ್ತಿತ್ತು. ಕ್ಯಾಡ್ಬರಿ ಇಂಡಿಯಾ ಲಿ.ಯ ಅಧಿಕಾರಿಗಳು, ಅಬಕಾರಿ ಇಲಾಖೆಯ ಸುಪರಿಂಟೆಂಡೆಂಟ್ ನಿರ್ಮಲ್ ಸಿಂಗ್, ಇನ್‌ಸ್ಪೆಕ್ಟರ್ ಜಸ್ಪ್ರೀತ್ ಕೌರ್ ಸೇರಿದಂತೆ ಹತ್ತು ಮಂದಿಯನ್ನು ಸಿಬಿಐ ಆರೋಪಿಗಳನ್ನಾಗಿ ಹೆಸರಿಸಿದೆ.

ಅಬಕಾರಿ ಸುಂಕ ಮತ್ತು ಆದಾಯ ತೆರಿಗೆಗಳಿಂದ ವಿನಾಯಿತಿ ಪಡೆಯುವ ಸಲುವಾಗಿ ಮೊಂಡೆಲೆಜ್ ಫುಡ್ಸ್ ಪ್ರೈ ಲಿ. ಸುಳ್ಳು ಮಾಹಿತಿಗಳು, ತಿರುಚಿದ ದಾಖಲೆಗಳು ಹಾಗೂ ಲಂಚಗಳನ್ನು ನೀಡಿತ್ತು ಎಂದು ಸಿಬಿಐನ ಶಿಮ್ಲಾ ಶಾಖೆಯ ಭ್ರಷ್ಟಾಚಾರ ನಿಯಂತ್ರಣ ಶಿಮ್ಲಾ ಘಟಕದ ಅಧಿಕಾರಿಗಳು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.