ಅಹಮದಾಬಾದ್: ಟಿ ೨೦ ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಆಪತ್ಬಾಂಧವನಾಗಿ ಮೂಡಿಬಂದ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕವು ಟೀಂ ಇಂಡಿಯಾ ಪಾಲಿಗೆ ಸಂಜೀವಿನಿಯಾಯಿತು.
ಪ್ರವಾಸಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 8 ರನ್ ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-2 ರಿಂದ ಸಮಬಲ ಸಾಧಿಸಿದೆ.
ಗುರುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡಿತು. ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿ, ಆಂಗ್ಲರ ಗೆಲುವಿಗೆ 186 ರನ್ ಗಳ ಗುರಿ ನೀಡಿತು.
ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 12 ರನ್ ಮತ್ತು ಕೆಎಲ್ ರಾಹುಲ್ 14 ರನ್ ಬಾರಿಸಿ ಔಟಾದರು. ಈ ವೇಳೆ ಅಬ್ಬರದ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ 31 ಎಸೆತಗಳಲ್ಲಿ 57 ರನ್ ಬಾರಿಸಿ ಔಟಾದರು. ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ 1 ರನ್ ಗಳಿಸಿ ಔಟಾದರು. ರಿಷಬ್ ಪಂತ್ 30 ರನ್ ಗಳಿಸಿದರೆ, ಶ್ರೇಯರ್ ಅಯ್ಯರ್ 37 ರನ್ ಗಳಿಸಿ ಔಟಾದರು.
ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 4, ಅದಿಲ್ ರಶೀದ್, ಮಾರ್ಕ್ ವುಡ್, ಬೆನ್ ಸ್ಟೋಕ್ಸ್ ಮತ್ತು ಸಾಮ್ ಕುರಾನ್ ತಲಾ 1 ವಿಕೆಟ್ ಪಡೆದಿದ್ದಾರೆ. ಪ್ರತಿಯಾಗಿ ಉತ್ತರ ನೀಡಲಾರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಜಾಸನ್ ರೇ ಹಾಗೂ ಆಲ್ರೌಂಡರ್ ಸ್ಟೋಕ್ಸ್ ಅವರ ಸ್ಪೋಟಕ ಆಟ ತಂಡಕ್ಕೆ ಗೆಲುವನ್ನು ತಂದುಕೊಡಲಿಲ್ಲ.
ಟೀಂ ಇಂಡಿಯಾ ಪರ ಶಾರ್ದೂಲ್ ಠಾಕೂರ್ ಮೂರು, ಪಾಂಡ್ಯ ಮತ್ತು ಪಾದಾರ್ಪಣಾ ಪಂದ್ಯವನ್ನಾಡಿದ ರಾಹುಲ್ ಚಹರ್ ತಲಾ ಎರಡು ವಿಕೆಟ್ ಹಾಗೂ ಪ್ರಧಾನ ವೇಗಿ ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಕಿತ್ತರು.
ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಸೂರ್ಯ ಕುಮಾರ್ ಯಾದವ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.