ಸಾಧನೆ
ಸಂತೋಷ್
ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ಪ್ರೇಕ್ಷಕರನ್ನು ಇಂದಿಗೂ ಆಕರ್ಷಿಸುತ್ತಿರುವ ಸರೋಜ್ ಖಾನ್ಳ ನೃತ್ಯ ನಿರ್ದೇಶನದ ಗೀತೆಗಳೆ ಆಕೆಯ ಜನಪ್ರಿಯತೆಗೆ ಸಾಕ್ಷಿ. ಜೀವನ ನಿರ್ವಹಣೆಗೆಂದು ಬಾಲಿವುಡ್ ಅಂಗಳವನ್ನು ಪ್ರವೇಶಿಸಿ ದರೂ, ತನ್ನ ತಲ್ಲೀನತೆ, ಸಾಧನೆಯಿಂದ ‘ದಿ ಡ್ಯಾನ್ಸ್ ಆಫ್ ಮದರ್’ ಎಂದು ಕರೆಸಿಕೊಳ್ಳುವ ಎತ್ತರಕ್ಕೆ ಬೆಳೆದದ್ದು ಮಹತ್ವದ ಸಂಗತಿ.
ಮನರಂಜನೆ ಕ್ಷೇತ್ರದ ಮಹತ್ವದ ಶಕ್ತಿಕೇಂದ್ರ ಬಾಲಿವುಡ್. ಇದನ್ನು ಭಾರತೀಯ ಚಿತ್ರರಂಗದ ರಾಜಧಾನಿ ಎಂಬುದಾಗಿಯೂ ಗುರುತಿಸಲಾಗುತ್ತದೆ. ಇಂಥ ಬಾಲಿವುಡ್ನಲ್ಲಿ ನಲವತ್ತಾರು ವರ್ಷಗಳ ಕಾಲ ಪ್ರಖ್ಯಾತ ಕಲಾವಿದರುಗಳನ್ನೆಲ್ಲ ತನ್ನ ನೃತ್ಯ
ಸಂಯೋಜನೆಯಲ್ಲಿ ಕುಣಿಸಿದಾಕೆ ಸರೋಜ್ ಖಾನ್.
ಬಾಲಿವುಡ್ ಈಕೆಯನ್ನು ಖ್ಯಾತ ನೃತ್ಯ ಸಂಯೋಜಕಿ ಎಂದು ಗುರುತಿಸುತ್ತದೆ. ಆದರೆ ಈಕೆಯ ನೃತ್ಯ ಸಂಯೋಜನೆಯಲ್ಲಿ ನುರಿತವರೆಲ್ಲರೂ ಖ್ಯಾತಿಯ ಉತ್ತುಂಗ ತಲುಪಿರುವುದು ಬೆರಗು ಮೂಡಿಸುವ ಸಂಗತಿ. ಬಾಲಿವುಡ್ ನಮ್ಮನ್ನೆಲ್ಲ ಆಕರ್ಷಿಸು ವಂತೆಯೇ ಸರೋಜ್ ಖಾನ್ ಬದುಕು ಸಹ ರೋಚಕ ಸಿನಿಮಾವೊಂದರ ಚಿತ್ರಕಥೆಗಿಂಥ ಕಡಿಮೆಯೇನಲ್ಲ.
ಅನುಕೂಲ ವ್ಯಾಪಾರಸ್ಥರಾಗಿದ್ದ ಪಾಕಿಸ್ತಾನ ಮೂಲದ ಕಿಶನ್ ಚಂದ್ ಸಾದು ಸಿಂಗ್, ಭಾರತ – ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಹಣ – ಆಸ್ತಿ ಎಲ್ಲವನ್ನು ಕಳೆದುಕೊಂಡು ಪತ್ನಿ ನೋನಿ ಸಿಂಗ್ನೊಡನೆ ಭಾರತದ ಮುಂಬೈ ತಲುಪುತ್ತಾರೆ. ಮುಂಬೈನ ಪೊಲೀಸ್ ಠಾಣೆಯೊಂದಕ್ಕೆ ಹೊಂದಿಕೊಂಡಿದ್ದ ಪುಟ್ಟ ಕೋಣೆಯೊಂದನ್ನು ಬಾಡಿಗೆಗೆ ಪಡೆದು ಜೀವನ
ಆರಂಭಿಸುತ್ತಾರೆ.
ಇಂಥ ಒಂದು ಕುಟುಂಬದಲ್ಲಿ 1948 ನವೆಂಬರ್ 22ರಂದು ಜನಿಸಿದ ಸರೋಜ್ ಖಾನ್ರ ಮೂಲ ಹೆಸರು ನಿರ್ಮಲ ನಾಗ್ಪಾಲ್. ಈಕೆ ಮಗುವಿದ್ದಾಗ ಯಾವುದಾದರೂ ಸದ್ದು ಕೇಳಿದಾಗ ಕೈಕಾಲುಗಳನ್ನು ಜೋರಾಗಿ ಅಲುಗಾಡಿಸುವುದನ್ನು ಕಂಡು ಮಾನಸಿಕ ರೋಗ ಇರಬಹುದೆಂದು ಪೋಷಕರು ನಿರ್ಧರಿಸುತ್ತಾರೆ. ಮಗುವನ್ನು ವೈದ್ಯರಲ್ಲಿಗೆ ಕರೆತರುತ್ತಾರೆ. ಪರೀಕ್ಷಿಸಿದ ವೈದ್ಯರು ಇದು ಮಾನಸಿಕ ರೋಗವಲ್ಲ, ಆಕೆಯಲ್ಲಿ ಸಂಗೀತವನ್ನು ಆಲಿಸುವ ಗುಣವಿದೆ ಎಂದು ತಿಳಿಸುತ್ತಾರೆ.
ವೈದ್ಯರ ಸಲಹೆ ನಂತರ ಈಕೆಯನ್ನು ಕಲಾವಿದೆಯಾಗಿ ರೂಪುಗೊಳ್ಳಲು ಪೋಷಕರು ಸಹಕಾರ ನೀಡುತ್ತಾರೆ. ಮೂರು ವರ್ಷದ ವಯಸ್ಸಿನಲ್ಲಿಯೇ ಬಾಲನಟಿ ಯಾಗಿ ಬಾಲಿವುಡ್ ಪ್ರವೇಶವಾಗುತ್ತದೆ. ಈಕೆಗೆ ಹತ್ತು ವರ್ಷ ವಯಸ್ಸಿರುವಾಗ ತಂದೆಯ ನಿಧನ ವಾಗುತ್ತದೆ. ಈ ವೇಳೆಗಾಗಲೇ ನಾಲ್ವರು ಸಹೋದರಿಯರು ಹಾಗೂ ಓರ್ವ ಸಹೋದರನ್ನು ಹೊಂದಿರುತ್ತಾಳೆ ಸರೋಜ್. ಕೇವಲ ಹತ್ತು ವರ್ಷದ ವಯಸ್ಸಿಗೆ ತಿಂಡಿ ಅಂಗಡಿಗಳಲ್ಲಿ ರಾತ್ರಿ ಉಳಿದಿದ್ದ ಆಹಾರ ಪದಾರ್ಥಗಳನ್ನು ತಂದು ತಿನ್ನುವ ಮೂಲಕ ಜೀವನ ನಿರ್ವಹಿಸುವಂಥ ಸ್ಥಿತಿ ತಲುಪುತ್ತದೆ ಈ ಕುಟುಂಬದ ಬದುಕು.
ಇಂಥ ಕಠಿಣ ಸ್ಥಿತಿಯಲ್ಲಿ ಆಕೆಗೆ ನೆರವಾಗುವುದು ಆಕೆಯೊಳಗಿದ್ದ ಕಲೆ. ಆಗ ಮತ್ತೆ ಈಕೆ ಚಲನಚಿತ್ರಗಳಲ್ಲಿ ನೃತ್ಯಕಲಾವಿದೆ
ಯಾಗಿ ನರ್ತಿಸಲು ಆರಂಭಿಸುತ್ತಾಳೆ. ಶಾಸ್ತ್ರೀಯವಾಗಿ ನೃತ್ಯ ಕಲಿಯದಿದ್ದರೂ ಬದುಕಿನ ನಿರ್ವಹಣೆಗಾಗಿ ವೆಸ್ಟನ್ ಶೈಲಿಯ ನೃತ್ಯವನ್ನು ಚೆನ್ನಾಗಿ ಬಲ್ಲವಳಾಗಿರುತ್ತಾಳೆ. ಈ ಹಂತದಲ್ಲಿ ಈಕೆಗೆ ನೃತ್ಯವೊಂದು ತನ್ನ ಬದುಕಿಗೆ ನೆರವಾಗಬಹುದಾದ ಒಂದು ಆಸರೆಯೇ ಹೊರತು ಸಾಧನೆ ಎಂಬುದಾಗಿ ಭಾವಿಸಿರುವುದಿಲ್ಲ. ಅಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ನರ್ತಕಿಯರ ಸಂಖ್ಯೆ ಕಡಿಮೆಯಿದ್ದ ಕಾರಣ ಸಿಗುವ ಅವಕಾಶ ತನ್ನ ಬದುಕಿಗೆ ದಾರಿಯಾಗಬಲ್ಲದು ಎಂದು ಹತ್ತನೆ ವಯಸ್ಸಿಗೆ ನರ್ತಕಿಯಾಗಿ ವೃತ್ತಿ ಆರಂಭಿಸುತ್ತಾಳೆ.
ಆದಾಗ ತಾನೇ ಭಾರತೀಯ ಚಿತ್ರರಂಗದಲ್ಲಿ ನೃತ್ಯಸಂಯೋಜನೆ ಎಂಬುದು ಮಹತ್ವಪಡೆಯುತ್ತಿದ್ದ ದಿನಗಳು. ಆದರೆ ಭಾರತೀಯ ನೃತ್ಯಕ್ಕೆ ಬೇಡಿಕೆಯಿರುತ್ತದೆ. ಈ ವಿಷಯ ಆಕೆಯ ಗಮನಕ್ಕೆ ಬಂದಾಗ ಆಕೆಗೆ 13ವರ್ಷ. ಈ ವಯಸ್ಸಿನಲ್ಲಿ ನೃತ್ಯಗಾರ್ತಿಯಾಗಿ
ಅಭಿನಯಿಸುತ್ತಲೇ ಶಾಸ್ತ್ರೀಯ ನೃತ್ಯವನ್ನೂ ಕಲಿತುಕೊಳ್ಳುವ ಈಕೆ, ತನ್ನ ಗುರುವಿನ ಮೋಹಕ್ಕೆ ಒಳಗಾಗುತ್ತಾಳೆ. ಆತನನ್ನೇ ತನ್ನ ಪತಿಯಾಗಿ ಭಾವಿಸುತ್ತಾಳೆ. ಆದರೆ ಈ ವ್ಯಕ್ತಿಯ ವಯಸ್ಸು ನಲವತ್ತು ದಾಟಿರುತ್ತದೆ.
ಮದುವೆಯಾಗಿ ಮಕ್ಕಳಿರುತ್ತವೆ. ಆದರೆ ಈಕೆಗಿನ್ನೂ 13ವರ್ಷ. ಆದರೂ ಈಕೆಯ ಬಲವಂತಕ್ಕೆ ಆತನೂ ಸಮ್ಮತಿ ಸೂಚಿಸುತ್ತಾನೆ.
ಈ ಮೂಲಕ ಈಕೆಯ ವೈವಿವಾಹಿಕ ಬದುಕೂ ಆರಂಭಗೊಳ್ಳುತ್ತದೆ. ಈಕೆಯನ್ನು ವಿವಾಹವಾಗುವ ಆವ್ಯಕ್ತಿ ಯಾರೆಂದರೆ ಅಂದಿನ ಕಾಲದ ಖ್ಯಾತ ನೃತ್ಯ ಸಂಯೋಜಕ ಬಿ.ಸೋಹನ್ ಲಾಲ್. ಹೀಗೆ ತನ್ನನ್ನು ತಾನು ಗುರುವಿಗೆ ಅರ್ಪಿಸಿಕೊಂಡು ಬಾಲಿವುಡ್ ಅಂಗಳದಲ್ಲಿ ನೃತ್ಯಕಲಾವಿದೆಯಾಗಿ ಮುಂದುವರಿಯುತ್ತಲೇ ಶಾಸ್ತ್ರೀಯ ನೃತ್ಯ(ಕಥಕ್ ಹಾಗೂ ಮಣಿಪುರಿ)ವನ್ನೂ ಕಲಿಯಲಾಗುತ್ತದೆ.
ನಂತರ 1974ರಲ್ಲಿ ನಾಮ್ ಚಿತ್ರದ ಮೂಲಕ ಸ್ವತಂತ್ರ ನೃತ್ಯನಿರ್ದೇಶಕಿಯಾಗುವ ಈಕೆ 46 ವರ್ಷಗಳ ಕಾಲ ಬಾಲಿವುಡ್ನಲ್ಲಿ ಸಾಧಿಸಿದ ಸಾಧನೆ ಮಹತ್ತರವಾದದ್ದು. ಸರೋಜ್ ಖಾನ್ ನೃತ್ಯ ನಿರ್ದೇಶಕಿಯಾದ ನಂತರ ಈಕೆಯೊಬ್ಬಳ ಅದೃಷ್ಟ ಮಾತ್ರವೇ ಬದಲಾಗಲಿಲ್ಲ. ಮೆಚ್ಚಿ ತನ್ನ ಕೈಯಿಂದ ಒಂದು ರುಪಾಯಿ ಹಣ ನೀಡಿದರೂ ಸಾಕು, ಅವರ ಅದೃಷ್ಟವೇ ಬದಲಾಗುತ್ತಿತ್ತು ಎಂಬ ಪ್ರತೀತಿಯೂ ಬಾಲಿವುಡ್ನಲ್ಲಿ ಜಾರಿಯಲ್ಲಿತ್ತು ಎಂಬುದು ಅಚ್ಚರಿ.
ತನ್ನ ಬದುಕಿಗೆ ಆಸರೆಯಾಗಲಿ ಎಂಬ ಏಕೈಕ ಕಾರಣದಿಂದ ಹತ್ತನೆ ವಯಸ್ಸಿಗೆ ನರ್ತಕಿಯಾಗಿ ವೃತ್ತಿಯನ್ನರಸಿ ಬಾಲಿವುಡ್ ಪ್ರವೇಶಿಸಿದಾಕೆ ನಂತರ 46 ವರ್ಷ ಖ್ಯಾತ ನಟ – ನಟಿಯರನ್ನು ಕುಣಿಸಿ ‘ದಿ ಡ್ಯಾನ್ಸ್ ಆಫ್ ಮದರ್’ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿದ್ದು ಅತ್ಯುತ್ತಮವಾದ ಸಾಧನೆ. ಬಾಲಿವುಡ್ನ ನೃತ್ಯ ನಿರ್ದೇಶನ ಕ್ಷೇತ್ರ ಸಂಪೂರ್ಣ ಪುರುಷರಿಂದ ಕೂಡಿದ್ದ ದಿನಗಳಲ್ಲಿ ಪುರುಷರಿಗೆ ಸಮಾನವಾಗಿ ಸಾಧಿಸಿದ ಸಾಧಕಿ. ಈ ಕಾರಣದಿಂದಾಗಿಯೇ ಸರೋಜ್ ಖಾನ್ರನ್ನು ಬಾಲಿವುಡ್ ಕ್ಷೇತ್ರ ‘ಮಾಸ್ಟರ್ ಜಿ’ ಎಂಬ ಗೌರವ ಸೂಚಕದೊಂದಿಗೆ ಗೌರವಿಸುತ್ತಿದ್ದದ್ದು ಸಾಧನೆಗೆ ಸಂದ ಗೌರವ.
1974ರಲ್ಲಿ ಗೀತಾ ಮೇರಾ ನಾಮ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕಿಯಾಗಿದ್ದು, 2019ರಲ್ಲಿ ಕಡೆಯ ನೃತ್ಯ ನಿರ್ದೇಶನದ ಚಿತ್ರ ಕಳಂಕ್ವರೆಗೂ ಕ್ರಿಯಾಶೀಲತೆ ಉಳಿಸಿಕೊಂಡು ಸಾಗಿದ ಉತ್ತಮ ಸಾಧಕಿ. 70ರ ಇಳಿವಯಸ್ಸಿನಲ್ಲಿಯೂ ಯುವತಿಯರಿ ಗಿಂತಲೂ ಚುರುಕಾಗಿ ನರ್ತಿಸುತ್ತಿದ್ದ ಉತ್ಸಾಹ ವನ್ನು ಗಮನಿಸಿದಾಗ, ನೃತ್ಯಕಲೆಯಲ್ಲಿ ಹೊಂದಿದ್ದ ತಲ್ಲೀನತೆ ಗೋಚರ
ವಾಗುತ್ತದೆ. ತನ್ನ 72ನೇ ವಯಸ್ಸಿನಲ್ಲಿ 2020ರ ಜೂನ್ 17ರಂದು ಮುಂಬೈನ ಬಾಂದ್ರಾದಲ್ಲಿರುವ ಗುರುನಾನಕ್ ಆಸ್ಪತ್ರೆಗೆ ದಾಖಲಾಗಿದ್ದು, ಜುಲೈ 3ರಂದು ನಿಧನ ಹೊಂದುತ್ತಾರೆ.
ಆಗ ಮಾಧ್ಯಮಗಳು ಡ್ಯಾನ್ಸ್ ಆಫ್ ಮದರ್ ಡೆತ್, ಬಾರದ ಲೋಕಕೆ ತೆರಳಿದ ಬಾಲಿವುಡ್ಡಿನ ನೃತ್ಯದ ರಾಣಿ, ಡೆತ್ ಆಫ್ ಇನ್ಸ್ಟಿಟ್ಯೂಟ್, ಬಾಲಿವುಡ್ ನ ಮಾಸ್ಟರ್ ಜಿ ಇನ್ನಿಲ್ಲ ಎಂಬುದಾಗಿ ಕೊಂಡಾಡಿದವು. ಈ ವರದಿಗಳೇ ಸಾಕು ಸರೋಜ್ ಖಾನ್ನ ಸಾಧನೆಯ ಮಹತ್ವ ತಿಳಿಯಲು. 2019ರಲ್ಲಿ ತೆರೆಕಂಡ ಕನ್ನಡದ ಗರ ಚಿತ್ರದ ಎರಡು ಗೀತೆಗಳು, ತಮಿಳಿನ ಶೃಂಗಾರಂ ಸೇರಿದಂತೆ ಬಾಲಿವುಡ್ನಲ್ಲಿ ಎರಡು ಸಾವಿರಕ್ಕೂ ಅಧಿಕ ಚಲನಚಿತ್ರಗಳ ಗೀತೆಗಳಿಗೆ ನೃತ್ಯ ನಿರ್ದೇಶಿಸಿರುವುದು ಈಕೆಯ ಮತ್ತೊಂದು ಮಹತ್ವದ ಸಾಧನೆ.
2003ರಲ್ಲಿ ದೇವದಾಸ್ ಚಿತ್ರದ ಡೋಲಾರೆ, ಡೋಲಾರೆ, 2006ರಲ್ಲಿ ತಮಿಳಿನ ಶೃಂಗಾರಂ, 2008ರಲ್ಲಿ ಜಬ್ ವಿ ಮಿಟ್ (ಹೇ ಇಷ್ಕ್ ಹೈ) ಗೀತೆಯ ನೃತ್ಯ ನಿರ್ದೇಶನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. 1989ರಲ್ಲಿ ತೇಜಾಬ್ ಚಿತ್ರದ ಏಕ್ ದೋ ತೀನ್, ಚಲ್ಬಾಜ್ (1990), ಸೈಲಾಬ್ (1991), ಬೇಟಾ (1993), ಖಳನಾಯಕ್ (1994), ಹಮ್ ದಿಲ್ ದೇಚುಕೆ ಸನಂ (2000), ದೇವದಾಸ್ (2003), ಗುರು (2008) ಚಿತ್ರದ ನೃತ್ಯ ನಿರ್ದೇಶನಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಗಳು ಸಂದಿವೆ.
ನಚುಬಲಿಯೇ ಹಾಗೂ ಜಲಕು ದಿಕಲಾಜಾ ರಿ ಯಾಲಿಟಿ ಶೋಗಳ ತೀರ್ಪುಗಾರ್ತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
8 ಬಾರಿ ಫಿಲ್ಮ್ ಫೇರ್, 3 ಬಾರಿ ರಾಷ್ಟ್ರೀಯ ಪುರಸ್ಕಾರದ ಜತೆಗೆ ಲಗನ್ ಚಿತ್ರದ ನೃತ್ಯನಿರ್ದೇಶನಕ್ಕಾಗಿ ಅಮೆರಿಕದ ಅಚಿವ್ ಮೆಂಟ್ ಪ್ರಶಸ್ತಿಯೂ ಲಭಿಸಿದೆ. ಸಿನಿಮಾ ನೃತ್ಯದಲ್ಲಿ ಜಾನಪದ ಮತ್ತು ಶಾಸ್ತ್ರೀಯ ನೃತ್ಯವನ್ನು ಎಥೆಚ್ಚವಾಗಿ ಬಳಸಿದ ಏಕೈಕ ನೃತ್ಯನಿರ್ದೇಶಕಿ ಎಂಬ ಹೆಗ್ಗಳಿಕೆಯೂ ಈಕೆಯದ್ದು.
ಮಿ.ಇಂಡಿಯಾದ ಹವಾ ಹವಾಯಿ, ಏಕ್ ದೋ ತೀನ್ (ತೇಜಾಬ್), ತಮ್ಮಾ ತಮ್ಮಾ (ತಾನೇದರ್), ದಕ್ ದಕ್ ಕರುನೇ ಲಗ (ಬೇಟ) ಗೀತೆಗಳ ನೃತ್ಯ ನಿದೇಶನ, ಇಡೀ ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ಪ್ರೇಕ್ಷಕರನ್ನು ಇಂದಿಗೂ ಆಕರ್ಷಿಸುತ್ತಿರುವ ಸರೋಜ್ ಖಾನ್ಳ ನೃತ್ಯ ನಿರ್ದೇಶನದ ಗೀತೆಗಳೆ ಆಕೆಯ ಜನಪ್ರಿಯತೆಗೆ ಸಾಕ್ಷಿ.
ಜೀವನ ನಿರ್ವಹಣೆಗೆಂದು ಬಾಲಿವುಡ್ ಅಂಗಳವನ್ನು ಪ್ರವೇಶಿಸಿದರೂ, ತನ್ನ ತಲ್ಲೀನತೆ, ಸಾಧನೆಯಿಂದ ‘ದಿ ಡ್ಯಾನ್ಸ್ ಆಫ್ ಮದರ್’ ಎಂದು ಕರೆಸಿಕೊಳ್ಳುವ ಎತ್ತರಕ್ಕೆ ಬೆಳೆದದ್ದು ಮಹತ್ವದ ಸಂಗತಿ.
1974ರಲ್ಲಿ ನಾಮ್ ಚಿತ್ರದ ಮೂಲಕ ಸ್ವತಂತ್ರ ನೃತ್ಯನಿರ್ದೇಶಕಿಯಾಗುವ ಈಕೆ 46 ವರ್ಷಗಳ ಕಾಲ ಬಾಲಿವುಡ್ನಲ್ಲಿ ಸಾಧಿಸಿದ ಸಾಧನೆ ಮಹತ್ತರವಾದದ್ದು. ಸರೋಜ್ ಖಾನ್ ನೃತ್ಯ ನಿರ್ದೇಶಕಿಯಾದ ನಂತರ ಈಕೆಯೊಬ್ಬಳ ಅದೃಷ್ಟ ಮಾತ್ರವೇ ಬದಲಾಗ ಲಿಲ್ಲ. ಮೆಚ್ಚಿ ತನ್ನ ಕೈಯಿಂದ ಒಂದು ರುಪಾಯಿ ಹಣ ನೀಡಿದರೂ ಸಾಕು, ಅವರ ಅದೃಷ್ಟವೇ ಬದಲಾಗುತ್ತಿತ್ತು ಎಂಬ
ಪ್ರತೀತಿಯೂ ಬಾಲಿವುಡ್ನಲ್ಲಿ ಜಾರಿಯಲ್ಲಿತ್ತು.