ಕಳಕಳಿ
ಬಸವರಾಜ ಎನ್.ಬೋದೂರು
ನೀವು ಕಳೆದ ಆ ಬಾಲ್ಯದ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಬೆಳಗಿನ ಜಾವ ನಿದ್ದೆಯಿಂದ ಬಡಿದೆಬ್ಬಿಸುತ್ತಿದ್ದ ಆ ಪಕ್ಷಿಗಳ ಕಲರವ ಎಷ್ಟೋಂದು ಮಧುರ, ಸಂಜೆಯ ವೇಳೆ ಗೂಡಿಗೆ ಮರಳುವ ಅವುಗಳ ಚಿಲಿಪಿಲಿ ನಾದ ಎಷ್ಟೊಂದು ಇಂಪು.
ಯಾವುದೇ ಅಂಜಿಕೆ – ಅಳುಕಿಲ್ಲದೆ ನಾನೂ ಕೂಡ ಮನೆಯ ಸದಸ್ಯನೆಂದು ಮನೆಯೊಳಗೆ ನುಗ್ಗಿ ಪೋಟೊಗಳ ಹಿಂದೆ ಗೂಡು ಕಟ್ಟಿ ಗುಬ್ಬಚ್ಚಿಗಳು ಸಂಸಾರ ನಡೆಸುತ್ತಿದ್ದ ಆ ದಿನಗಳನ್ನು ಮರೆಯಲಾದಿತೆ? ಬಾಲ್ಯದಲ್ಲಿ ಗಿಜುಗುಡುತ್ತಿದ್ದ ಗುಬ್ಬಚ್ಚಿಗಳು ಈಗೆಲ್ಲಿ ಮರೆಯಾದವು? ಮನೆಯ ಮುಂದಿನ ಚಪ್ಪರದಲ್ಲಿ, ಮನೆಯ ಜಂತಿಗಳಲ್ಲಿ, ಪೋಟೊಗಳ ಹಿಂಬದಿಯಲ್ಲಿ, ಅಷ್ಟೆ ಯಾಕ, ಮನೆಯ ಸಂಧಿಗೊಂದಿಯನ್ನು ಬಿಡದೇ ಗೂಡು ಕಟ್ಟಿ ಮರಿ ಮಾಡಿಸಿ, ತಾಯಿ ಗುಬ್ಬಿ ಕೊಕ್ಕಿನಲ್ಲಿ ಆಹಾರವನ್ನು ಹೆಕ್ಕಿ ತಂದು ಮರಿ ಗುಬ್ಬಿಗೆ ತಿನ್ನಿಸುವಾಗ ಅವುಗಳು ಚಿಂವ್ ಚಿಂವ್ ಎನ್ನುತ್ತಿದ್ದ ನಿನಾದ ಕೇಳುತ್ತಿದ್ದರೇ ಮನಸ್ಸಿಗೆ ಮುದ ಎನಿಸುತ್ತಿತ್ತು.
ಅವ್ವ ಮೊರದಲ್ಲಿ ಕಾಳು ಅಸನಮಾಡಿ ಅಂಗಳದಲ್ಲಿ ಚೆಲ್ಲಿದ ಕಾಳುಗಳನ್ನು ಹಿಂಡು ಹಿಂಡಾಗಿ ಬಂದು ಮೆಯ್ದು ಹಾಯಾಗಿ ಹಾರಾಡುತ್ತಿದ್ದವು.ಈ ಒಂದು ಪ್ರೀತಿ ಗುಬ್ಬಚ್ಚಿ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧ ಬೆಸೆದಿತ್ತು. ಗುಬ್ಬಚ್ಚಿಗಳು ಮನುಷ್ಯನೊಂದಿಗೆ ಬದುಕುತ್ತಿದ್ದವು. ಮನೆಯಲ್ಲಿ ನಮ್ಮೊಂದಿಗಿರುತ್ತಿದ್ದವು. ನಾವು ಮಾಡುವ ಕೃಷಿಯಲ್ಲಿ ಗುಬ್ಬಚ್ಚಿಗಳಿಗೂ ಪಾಲು ನೀಡುತ್ತಿದ್ದೇವು. ಅವು ತಿಂದು ಉಳಿದ ಕಾಳುಗಳನ್ನು ನಾವು ತಿನ್ನುತ್ತಿದ್ದೇವು. ಬೆಳೆಗಳಿಗೆ ಕ್ರಿಮಿ, ಕೀಟಗಳು ಬಿದ್ದರೆ ಅಂದು ಅನ್ನದಾತನಿಗೆ ಭಯವಿರಲಿಲ್ಲ, ಗುಬ್ಬಚ್ಚಿಗಳು ಅವುಗಳನ್ನು ತಿಂದು ಬೆಳೆಗಳನ್ನು ರಕ್ಷಿಸುತ್ತಿದ್ದವು, ರೈತನಿಗೆ ನೆರವಾಗುತ್ತಿದ್ದವು. ಹೀಗೆ ಗ್ರಾಮೀಣ ಭಾಗದ ಜನರೊಂದಿಗೆ ಗುಬ್ಬಚ್ಚಿಗಳು ಮನೆ ಮಕ್ಕಳಂತೆ ಯಾರ ಹಂಗಿಲ್ಲದೇ ಮನೆಯೊಳಗೆ ಬರುತ್ತಿದ್ದವು.
ವಾಸಿಸುತ್ತಿದ್ದವು. ಆದರೆ ಇಂದು ಹುಡುಕಿದರೂ ಗುಬ್ಬಚ್ಚಿಗಳು ಕಾಣಸಿಗದಾಗಿವೆ. ಇಂದು ನಗರ ಪ್ರದೇಶಗಳು ಬೆಳೆಯುತ್ತಿವೆ. ಗಿಡಮರಗಳು ಕಾಣೆಯಾಗುತ್ತಿವೆ. ಬೃಹತ್ ಕಟ್ಟಡಗಳು ತಲೆ ಎತ್ತುತ್ತಿವೆ. ಕಟ್ಟಡಗಳ ಮೇಲೆ ಟವರ್ ಕಂಬಗಳು ಎದ್ದು ನಿಂತಿವೆ. ನಾಗರಿಕತೆ ಬೆಳೆದಂತೆ ನಾವು ಗುಬ್ಬಚ್ಚಿಗಳನ್ನು ನಾಶ ಮಾಡಲಾರಂಭಿಸಿದ್ದೇವೆ, ನಮಗೆ ಗೊತ್ತಾಗದಂತೆಯೇ ಗುಬ್ಬಚ್ಚಿಗಳು ಕ್ಷೀಣವಾಗುತ್ತಿವೆ. ಮೊಬೈಲ, ಅರಣ್ಯನಾಶ, ವಾಹನಗಳ ಇಂಗಾಲದ ಡೈ ಆಕ್ಸೆಡ್, ಕೃಷಿಗೆ ಬಳಸುವ ಕೀಟ ನಾಶಕ, ರಾಸಾಯನಿಕ ಗೊಬ್ಬರ, ಕಿರುಧಾನ್ಯಗಳು ಕ್ಷೀಣ, ಬಿಟಿ ಹತ್ತಿ ಹಾವಳಿಗೆ ಚಿಕ್ಕ ಚಿಕ್ಕ ಹಕ್ಕಿ ಪ್ರಬೇಧದ ಗುಬ್ಬಚ್ಚಿಗಳು ಅಳಿವಿನ ಅಂಚಿಗೆ ಬಂದು ನಿಂತಿವೆ. ಕಾಂಕ್ರೀಟ್ ಕಟ್ಟಡ, ಜನದಟ್ಟಣೆ, ಮರಗಿಡಗಳ ನಾಶದಿಂದ ಗೂಡು ಕಟ್ಟಿಕೊಳ್ಳಲು ಸ್ಥಳವಕಾಶದ ಕೊರತೆ, ಆಹಾರದ ಅಭಾವ, ಪೆಟ್ರೋಲ್ ಬಳಕೆಯ ಮಾಲಿನ್ಯ, ಮೊಬೈಲ್ ಟವರ್ಗಳಿಂದ ಹೊರಸೂಸುವ ವಿಕಿರಣಯುಕ್ತ ವಿದ್ಯುತ್ ಕಾಂತೀಯ ಸೂಕ್ಷ್ಮ ತರಂಗಗಳಿಂದಾಗಿ ಮೊಟ್ಟೆಯಿಂದ ಮರಿಯಾಗುವ ಪ್ರಕ್ರಿಯೆಗೆ ತಡೆಯಾಗುತ್ತಿದೆ.
ಹಸಿವಿನಿಂದ ಅರಚಾಡುವ ಗುಬ್ಬಿಮರಿಯ ಧ್ವನಿಯು ಶಬ್ದಮಾಲಿನ್ಯದಿಂದ ತಾಯಿ ಗುಬ್ಬಚ್ಚಿಗೆ ಕೇಳಿಸದಿರುವುದರಿಂದ ಮರಿಗಳು ಹಸಿವಿನಿಂದ ಸಾಯುತ್ತವೆ’ ಎಂದು ಲಂಡನ್ನಿನ ಶೆಫೀಲ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿದ ವಾಣಿಜ್ಯ ಬೆಳೆ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಬಳಕೆಯಿಂದ ಗುಬ್ಬಚ್ಚಿ ಮರಿ ಗಳಿಗೆ ಉಣಿಸಲು ಹಸಿರು ಕೀಡೆ, ಕೀಟಕ, ದವಸ ಧಾನ್ಯಗಳ ಅಭಾವ, ಬರಗಾಲ, ಗುಡಿಸಲು, ಮಣ್ಣಿನ ಮನೆಗಳ ಕ್ಷೀಣ ವಾಗಿರುವು ದರಿಂದ ಗೂಡುಕಟ್ಟಲು ಸುರಕ್ಷಿತ ಸ್ಥಳದ ಅಭಾವ, ಪರಿಸರ ನಾಶದಿಂದ ಗುಬ್ಬಚ್ಚಿಗಳ ಸಂಖ್ಯೆಯು ಕಡಿಮೆಯಾಗು ತ್ತಿದೆ.
ಗುಬ್ಬಚ್ಚಿಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು. ಬೇಸಿಗೆಯ ಬಿಸಿಲ ಝಳಕ್ಕೆ ನೀರಿನ ಸೆಲೆಗಳು ಬತ್ತಿಹೋಗಿವೆ. ಬಾಯಾರಿ ಕೆಂಗೆಡುವ ಬಾನಾಡಿಗಳು ಈ ಋತುವಿನಲ್ಲಿ ನೀರು ಸಿಗದೇ ಒದ್ದಾಡಿ ಪ್ರಾಣ ಬಿಡುತ್ತಿವೆ. ಪಕ್ಷಿಗಳು ಹನಿ ನೀರಿಗಾಗಿ ಪರಿತಪಿಸುತ್ತಿವೆ. ಹಾಗಾಗಿ ಪಕ್ಷಿಗಳಿಗೆ ನೀರುಣಿಸಿ ಅವುಗಳ ಜೀವ ಉಳಿಸೋಣ. ಮಕ್ಕಳಲ್ಲಿ ಗುಬ್ಬಚ್ಚಿಯ ಬಗ್ಗೆ ಪ್ರೀತಿಯನ್ನು ಬೆಳೆಸುವುದರ ಮೂಲಕ ಪುಟಾಣಿ ಜೀವಗಳನ್ನು ಸಂರಕ್ಷಿಸುವ ಕಾರ್ಯವನ್ನು ಮಾಡಲು ಮುಂದಾಗೊಣ.