ಗುವಾಹಟಿ: ದೇಶದಲ್ಲಿ ಮತ್ತೆ ಚುನಾವಣೆಯ ಕಾವು ಆರಂಭವಾಗಿದೆ. ಮಾ.27ರಿಂದ ಮೇ 2ರವರೆಗೆ ಐದು ವಿಧಾನಸಭೆಗಳ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾ ಡಳಿತ ಪ್ರದೇಶದ ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಮತ್ತು ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉಳಿದ ಮೂರು ಕಡೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ.
ಇದಲ್ಲದೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಕ್ಷೇತ್ರಗಳು ಮತ್ತು ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಎಲ್ಲ ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.
ಮಾರ್ಚ್ 27ರಂದು ಮೊದಲ ಹಂತದ ಮತದಾನದಲ್ಲಿ ಅಸ್ಸಾಂನ 47 ಕ್ಷೇತ್ರ ಮತ್ತು ಪಶ್ಚಿಮ ಬಂಗಾಳದ 30 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಶನಿವಾರ ನಡೆಯಲಿರುವ ಮತದಾನದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಲಭ್ಯವಾಗಲಿದೆ.