Saturday, 23rd November 2024

ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಮೊದಲ ಹಂತದ ಮತದಾನ ಆರಂಭ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ ಆರಂಭ ವಾಗಿದೆ.

ಪಶ್ಚಿಮ ಬಂಗಾಳದ ಒಟ್ಟು 5 ಜಿಲ್ಲೆಗಳ 30 ಸ್ಥಾನಗಳಿಗೆ ಮತದಾನ ಆರಂಭವಾಗಿದೆ. 73 ಲಕ್ಷಕ್ಕೂ ಅಧಿಕ ಮತದಾರರು ಕಣದಲ್ಲಿರುವ 191 ಅಭ್ಯರ್ಥಿಗಳ ಹಣೆಬರಹ ತೀರ್ಮಾನಿಸಲಿದ್ದಾರೆ. ಟಿಎಂಸಿ ಮತ್ತು ಬಿಜೆಪಿಯ 29 ಅಭ್ಯರ್ಥಿಗಳು ಅಖಾಡ ದಲ್ಲಿದ್ದರೆ, ಎಡಪಕ್ಷ- ಕಾಂಗ್ರೆಸ್‌- ಐಎಸ್‌ಎಫ್ ಮೈತ್ರಿಯ 30 ಅಭ್ಯರ್ಥಿಗಳು ಮತ ಪರೀಕ್ಷೆ ಎದುರಿಸಲಿದ್ದಾರೆ.

ಅಸ್ಸಾಂನಲ್ಲಿನ ಒಟ್ಟು 126 ವಿಧಾನಸಭಾ ಕ್ಷೇತ್ರಗಳ ಪೈಕಿ 47 ಸ್ಥಾನಗಳಿಗೆ ಮತದಾನ ಇಂದು ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಒಟ್ಟು 81,09,815 ಮತದಾರರು 264 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. 40,77,210 ಪುರುಷರು, 40,32,481 ಮಹಿಳೆಯರು, 114 ತೃತೀಯ ಲಿಂಗಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸಿಎಂ ಸರ್ಬಾನಂದ ಸೋನೊವಾಲ್‌, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ರಿಪುನ್‌ ಬೊರೊ ಸೇರಿದಂತೆ ಪ್ರಮುಖ ಸಚಿವರು, ಮಾಜಿ ಮಂತ್ರಿಗಳ ಭವಿಷ್ಯವನ್ನು ಮತದಾರ ನಿರ್ಧರಿಸಲಿದ್ದಾನೆ.