Saturday, 23rd November 2024

ಗ್ರೇಟ್ ಚೇಸ್‌: ಮಾನವೀಯತೆಗೆ ಟಾನಿಕ್‌

ಬೈಕ್ ಅಡ್ಡಹಾಕಿ ಪ್ಲೀಸ್ ಹೆಲ್ಪ್ ಎಂದ ಪೊಲೀಸ್ ಭೇಷ್ ಎಂದ ಸೋಷಿಯಲ್ ಮೀಡಿಯಾ

ಚೆನ್ನೈ: ರಸ್ತೆಯಲ್ಲಿ ಎಲ್ಲಾದ್ರೂ ಪೊಲೀಸರು ನಿಲ್ಸಿ, ನಿಲ್ಸಿ ಅಂತಂದ್ರೆ ಜೀವ ಹೋಗಿ ಬಂದಂತಾಗುತ್ತದೆ. ಅವರು ಕೇಳೋ ಡಾಕ್ಯೂಮೆಂಟ್ಸ್‌ ತೋರಿಸಬೇಕು, ಇಲ್ಲಾಂದ್ರೆ ಫೈನ್ ಕಟ್ಟಬೇಕು, ಆಗ್ಲಿಲ್ಲ ಅಂದ್ರೆ ಇನ್ನೂರು- ಮುನ್ನೂರನ್ನ ಅವ್ರ ಜೇಬಿಗೆ ಇಳಿಸಿ, ಏನ್ ಜನ್ಮನ್ರೋ ನಿಮ್ದು ಅಂತ ಮನಸಲ್ಲೇ ಬೈಕೊಂಡು ಬರಬೇಕು.

ಇದೆಲ್ಲ ಕಾಮನ್ ಅನ್ನೋಥರ ಆಗಿದೆ. ಆದ್ರೆ, ತಮಿಳುನಾಡಿನ ಪೊಲೀಸರೊಬ್ಬರು ಬೈಕಿಗೆ ಅಡ್ಡ ಹಾಕಿ ನಿಲ್ಸಿ, ಮಾಡಿರೋ ಕೆಲಸ ಎಲ್ಲರ ಮನಗೆದ್ದಿದೆ.

ಆದೇನು ಕತೆ ಅಂತೀರಾ?: ಪುದುಚೇರಿಯಿಂದ ತೆಂಕಾಸಿ ಕಡೆಗೆ ಅರುಣ್ ಕುಮಾರ್ ಮೂಲ್ಯ ಎಂಬುವರು ಸೂಪರ್ ಬೈಕ್‌ನಲ್ಲಿ ಬರ್ತಿದ್ದಾಗ, ವಾಹನಗಳ ತಪಾಸಣೆ ಮಾಡುತ್ತಿದ್ದ ಪೇದೆಯೊಬ್ಬರು ಗಾಡಿ ನಿಲ್ಲಿಸಿ ಅಂದಿದ್ದಾರೆ. ಬೈಕ್ ನೋಡಿ, ‘ಓ, ನೀವ್
ಕರ್ನಾಟಕದವ್ರಾ? ನೋಡಿ, ಎದುರುಗಡೆ ಬರ್ತಿರೋ ಸರಕಾರಿ ಬಸ್ ಥರಾನೇ ಬಸ್ಸೊಂದು ನೀವ್ ಹೋಗ್ರಿರೋ ಕಡೆ ಹೋಗಿದೆ. ಯಾರೋ ಅಜ್ಜಿ ಟಾನಿಕ್ ಬಾಟಲ್ ಬೀಳಿಸಿಕೊಂಡಿದ್ದಾರೆ, ನೀವ್ ಚೇಸ್ ಮಾಡಿ ಅವರಿಗೆ ಕೊಡ್ತೀರಾ, ಪ್ಲೀಸ್’ ಅಂದಿದ್ದಾರೆ.

ಅದಕ್ಕೆ ಅರುಣ್, ಖಂಡಿತ ಕೊಡ್ತಿನಿ, ಕೊಡಿ ಸಾರ್ ಎಂದು ಬಾಟಲ್ ಪಡೆದು, ಸುಯ್ಯನೇ ತಮ್ಮ ಬೈಕಲ್ಲಿ ಚೇಸಿಂಗ್ ಆರಂಭಿಸಿ ದ್ದಾರೆ. ಪೊಲೀಸಣ್ಣ ಹೇಳಿದಂತೆ, ಬಸ್ ಡ್ರೈವರ್‌ಗೆ ಅಣ್ಣಾ ನಿಲ್ಸಿ ಅಂತ ಸನ್ನೆ ಮಾಡಿದ್ದಾರೆ. ಏನೋ ಎಮರ್ಜೆನ್ಸಿ ಎಂದು ಅರಿತ ಚಾಲಕ ಬಸ್ ನಿಲ್ಲಿಸಿದ್ದು, ಅಜ್ಜಿಯ ಕೈಗೆ ಔಷಧ ಸಿಕ್ಕಿದೆ. ಈ ಘಟನೆ ನಡೆದು ಸುಮಾರು 20 ದಿನಗಳಾಗಿದ್ದು, ಆದರೆ, ಇದೆಲ್ಲವೂ ಅರುಣ್ ಅವರ ಹೆಲ್ಮೆಟ್ ಮೇಲಿದ್ದ ರೈಡಿಂಗ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಅದನ್ನವರು 2 ದಿನದ ಹಿಂದಷ್ಟೇ ತಮ್ಮ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಅದಕ್ಕೀಗ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಪೊಲೀಸಣ್ಣನ ಮಾನವೀಯ ಮಿಡಿತಕ್ಕೆ ಭೇಷ್ ಎಂದಿದ್ದಾರೆ. ಆ ಚೇಸಿಂಗ್ ವಿಡಿಯೋ AnnyArun ಅನ್ನೋ
ಯೂಟ್ಯೂಬ್ ಪೇಜ್‌ನಲ್ಲಿ ಅರುಣ್ ಹಾಕಿದ್ದು, ನೀವೂ ನೋಡ್ಬಹುದು.

ವರಿಷ್ಠಾಧಿಕಾರಿ ಅರ್ಜುನ್ ಮೆಚ್ಚುಗೆ
ತೂತುಕುಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರ್ಜುನ್ ಸರವಣನ್ ಕೂಡ, ಪೇದೆಯ ಕೆಲಸವನ್ನು ಮನಸಾರೆ ಹೊಗಳಿದ್ದು, ಇಂತಹ ಪುಟ್ಟ ಕೆಲಸಗಳನ್ನು ಮಾಡುವ ದೊಡ್ಡ ಹೃದಯಗಳು ಇರುವುದು ನಮ್ಮ ಇಲಾಖೆಗೆ ಹೆಮ್ಮೆಯ ವಿಚಾರ ಎಂದು ಪೇದೆಯ ಫೊಟೋ ಹಾಕಿ ಟ್ವೀಟ್ ಮಾಡಿದ್ದಾರೆ.

***

ವಿಡಿಯೋ ಇಷ್ಟೆಲ್ಲ ವೈರಲ್ ಆಗಬಹುದೆಂಬ ಕಲ್ಪನೆಯೇ ಇರಲಿಲ್ಲ. ಸೋಲೋ ಬೈಕ್ ಪ್ರಯಾಣ ನನ್ನ ಹವ್ಯಾಸ. ಟ್ರಾವೆಲಿಂಗ್‌ ನಲ್ಲಿ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದೇನೆ. ಆದರೆ, ಮೊದಲ ಬಾರಿ ಪೊಲೀಸರೊಬ್ಬರು ಹೀಗೆ ಇನೊಬ್ಬರಿಗಾಗಿ ಪ್ಲೀಸ್ ಎಂದರು. ಇಂತಹ ಘಟನೆಗಳು ಮಾನವೀಯತೆ ಬಗ್ಗೆ ಮತ್ತುಷ್ಟು ನಂಬಿಕೆ ಮೂಡಿಸುತ್ತವೆ.
– ಅರುಣ್ ಕುಮಾರ್ ಮೂಲ್ಯ, ಬೈಕ್ ರೈಡರ್, ಪ್ರವಾಸಿಗ

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily