ಸ್ವಂತ ಸೂರಿಲ್ಲದೆ ಹೀನಾಯ ಬದುಕು
ವಿದ್ಯಾಭ್ಯಾಸ ಮೊಟಕು ಜಿಲ್ಲಾಡಳಿತದ ಆಸರೆಗಾಗಿ ಕಾದು ಸುಸ್ತು
ನಂಜನಗೂಡು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದ ಹಂದಿಜೋಗಿ ಕುಟುಂಬಗಳು ನಾಲ್ಕು ತಲೆಮಾರುಗಳಿಂದಲೂ ಸ್ವಂತ ಸೂರಿಲ್ಲದೆ ಹೀನಾಯ ಬದುಕು ಸಾಗಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
80 ವರ್ಷಗಳಿಂದ ತಾತ ಮುತ್ತಾತರ ಕಾಲದಿಂದ ಗುಡಿಸಲಿನಲ್ಲಿ ಜೋಪಡಿಯಲ್ಲಿ ವಾಸಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳ ಬಳಿ ಅಂಗಲಾಚಿ ವಾಸಿಸುವ ಮನೆ ಮತ್ತು ಮೂಲ ಸೌಕರ್ಯ ಕಲ್ಪಿಸಿಕೊಡಿ ಎಂದು ಕೇಳಿದ್ದರು. ಆದರೆ ಇದುವರೆಗೂ ಯಾವುದೇ ಅಧಿಕಾರಿ, ಜನಪ್ರತಿನಿಧಿಗಳು ಸೂರು ಕಲ್ಪಿಸಲು ಮುಂದಾಗಿಲ್ಲ.
ಟೆಂಟ್ನಲ್ಲಿ ಜೀವನ: ನಂಜನಗೂಡು ತಾಲೂಕಿನ ಹೊರಳವಾಡು ಗ್ರಾಮದ ಹೊಸೂರಿನಲ್ಲಿ 3-4 ತಲೆಮಾರುಗಳಿಂದಲೂ ಕೂಡ 2 ಕುಟುಂಬಗಳ ಎಳು ಜನರು ವಾಸಿಸುತ್ತಿದ್ದೇವೆ. ಗ್ರಾಮದ ಮತ್ತೊಬ್ಬರ ಜಾಗದಲ್ಲಿ ಟೆಂಟ್ ಹಾಕಿಕೊಂಡು ಜೀವನ
ಸಾಗಿಸುತ್ತಿದ್ದೇವೆ ಅವರು ಯಾವಾಗ ಬಂದು ಖಾಲಿ ಮಾಡಿ ಎನ್ನುತ್ತಾರೆ ಅವಾಗ ನಾವು ಖಾಲಿ ಮಾಡಬೇಕು.
ವಿದ್ಯಾಭ್ಯಾಸ ಮೊಟಕು: ಚುನಾವಣೆ ಬಂದರೆ ಮತ ಕೇಳುವುದಕ್ಕಾಗಿ ನಮ್ಮ ಜೋಪಡಿಯ ಬಳಿ ಬರುವ ಜನಪ್ರತಿನಿಧಿಗಳು ನಂತರ ಇತ್ತ ಸುಳಿಯುವುದೇ ಇಲ್ಲ. ನಮ್ಮ ಸಮಸ್ಯೆ ಮತ್ತು ಆರ್ಥಿಕ ಪರಿಸ್ಥಿತಿಯಿಂದ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ
ಮೊಟಕುಗೊಳಿಸಿದ್ದೇನೆ. ಜನಪ್ರತಿನಿಧಿ, ಅಧಿಕಾರಿಗಳನ್ನು ಅಂಗಲಾಚಿ ಬೇಡಿದರೂ ಸೂರು ಕಲ್ಪಿಸಿಲ್ಲವೆಂದು ಆರೋಪಿಸಿದರು.
ಗ್ರಾಮದ ಹಂದಿಜೋಗಿ ಕುಟುಂಬದ ಪಾಪಮ್ಮ ಮತ್ತು ಕುಟುಂಬಸ್ಥರ ರೋಧನೆಗೆ ಯಾವುದೇ ಅಧಿಕಾರಿ ಜನಪ್ರತಿನಿಧಿಗಳು ಸ್ಪಂದಿಸಿ, ಕಣ್ಣೀರೊರೆಸುವ ಪ್ರಯತ್ನ ಮಡಿಲ್ಲ. ಮೂಲ ಸೌಲಭ್ಯಕ್ಕಾಗಿ ಜನಪ್ರತಿನಿಧಿಗಳ ಮನೆಬಾಗಿಲು ತಟ್ಟಿ ಹಂದಿ ಜೋಗಿ ಕುಂಟುಂಬಗಳು ಬೇಸತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಕೂಡಲೇ ನಂಜನಗೂಡು ತಾಲೂಕಿನ ಹೊಸೂರು ಗ್ರಾಮದ
ಹಂದಿ ಜೋಗಿ ಕುಟುಂಬಗಳಿಗೆ ಆಸರೆಯಾಗುವುದೇ ಕಾದು ನೋಡಬೇಕಾಗಿದೆ.
ವಿಷ ಕೊಡಿ
ಈ ಬಗ್ಗೆ ಗ್ರಾಮದ ನಾಗರಾಜು ಎಂಬುವವರು ಮಾತನಾಡಿ, ಮೂಲ ಸೌಲಭ್ಯಗಳಿಲ್ಲದೆ ನರಳಾಡಿದ್ದೇವೆ, ಆಧುನಿಕ ಯುಗ ದಲ್ಲಿಯೂ ಕೂಡ ಇಷ್ಟೊಂದು ನರಳಾಟದಲ್ಲಿ ದಿನದೂಡುವುದು ಕಷ್ಟಕರ ವಾಗಿದೆ. ನಮಗೆ ಸರಕಾರದ ಸೌಲಭ್ಯ ಕಲ್ಪಿಸಿ
ಕೊಡಿ ಇಲ್ಲದಿದ್ದಲ್ಲಿ ವಿಷ ಕೊಡಿ, ಕುಡಿದು ಸಾಮೂಹಿಕವಾಗಿ ಸಾವನ್ನಪ್ಪುತ್ತೇವೆ ಎಂದು ಅಳಲು ತೋಡಿಕೊಂಡರು.