ಪುಣೆ: ಸ್ಯಾಮ್ ಕರನ್ ಸಾಹಸಕ್ಕೆ ತನ್ನದೆ ಆದ ರೀತಿಯಲ್ಲಿ ಪ್ರತಿ ಸಾಹಸ ತೋರಿದ ಆತಿಥೇಯ ಟೀಂ ಇಂಡಿಯಾ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 7 ರನ್ನುಗಳ ರೋಚಕ ಜಯ ಸಾಧಿಸಿ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 48.2 ಓವರ್‌ಗಳಲ್ಲಿ 329 ರನ್ ಗಳಿಸಿದರೆ, ಇಂಗ್ಲೆಂಡ್ 9 ವಿಕೆಟಿಗೆ 322 ರನ್ ಗಳಿಸಿ ಗೆಲುವನ್ನು ಸ್ವಲ್ಪದರಲ್ಲೇ ಕಳೆದುಕೊಂಡಿತು. 8ನೇ ಕ್ರಮಾಂಕದಲ್ಲಿ ಆಡಲಿಳಿದು ದಿಟ್ಟ ಬ್ಯಾಟಿಂಗ್ ಹೋರಾಟ ನೀಡಿದ ಸ್ಯಾಮ್ ಕರನ್ 95 ರನ್ ಗಳಿಸಿ ಅಜೇಯರಾಗಿದ್ದರು (83) . ಅವರಿಗೆ ತಂಡವನ್ನು ದಡ ಮುಟ್ಟಿಸಲಾಗಲಿಲ್ಲ, ಶತಕವೂ ಒಲಿಯ ಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಶಿಖರ್ ಧವನ್-ರೋಹಿತ್ ಶರ್ಮ ಆರಂಭಿಕ ವಿಕೆಟಿಗೆ ದಾಖಲಿಸಿದ ಶತಕದ ಜತೆಯಾಟ, ಪಂತ್-ಹಾರ್ದಿಕ್ ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್ ಭಾರತದ ಸರದಿಯ ಆಕರ್ಷಣೆಯಾಗಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ-ಕೆ.ಎಲ್. ರಾಹುಲ್ ವೈಫಲ್ಯ, ಅಂತಿಮ 10 ಓವರ್‌ಗಳಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿ ಇಲ್ಲದಿದ್ದುದು ದೊಡ್ಡ ಕೊರತೆ ಯಾಗಿ ಕಾಡಿತು. 40 ಓವರ್ ಮುಕ್ತಾಯಕ್ಕೆ ಭಾರತ 6ಕ್ಕೆ 283 ರನ್ ಗಳಿಸಿತ್ತು. ಆದರೆ ಮುಂದಿನ 8.2 ಓವರ್‌ಗಳಲ್ಲಿ 46 ರನ್ ಮಾಡುವಷ್ಟರಲ್ಲಿ ಆಲೌಟ್ ಆಯಿತು.
ಧವನ್-ರೋಹಿತ್ ಜೋಡಿಯ ಆರಂಭ ಅಬ್ಬರದಿಂದ 14.4 ಓವರ್‌ಗಳಿಂದ 103 ರನ್ ಹರಿದು ಬಂತು. ರೋಹಿತ್ ಎಸೆತ ಮೂರುಕ್ಕೊಂದರಂತೆ 37 ರನ್ ಮಾಡಿ ರಶೀದ್‌ಗೆ ಬೌಲ್ಡ್ ಆದರು. ಧವನ್ 32ನೇ ಅರ್ಧ ಶತಕ ಬಾರಿಸಿ ಮುನ್ನುಗ್ಗಿದ್ದರು. ಧವನ್ ವಿಕೆಟ್ ಕೂಡ ರಶೀದ್ ಪಾಲಾಯಿತು.
ಹೀಗೆ ಮೊದಲ 3 ವಿಕೆಟ್ ಸ್ಪಿನ್ನರ್‌ಗಳ ಬುಟ್ಟಿಗೆ ಬಿದ್ದಾಗ ಆತಿಥೇಯರ ಪಾಳೆಯದಲ್ಲಿ ಸಹಜವಾಗಿಯೇ ಆತಂಕ ಶುರುವಾಯಿತು. ಟೀಮ್ ಇಂಡಿಯಾ ಸ್ಪೆಷಲಿಸ್ಟ್ ಸ್ಪಿನ್ನರ್‌ಗಳನ್ನು ಕೈಬಿಟ್ಟು ಗ್ಯಾಂಬ್ಲಿಂಗ್ ನಡೆಸಿತ್ತು!
4ನೇ ಕ್ರಮಾಂಕಕ್ಕೆ ಭಡ್ತಿ ಪಡೆದು ಬಂದ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಜತೆಗೂಡಿದ ಬಳಿಕ ಭಾರತದ ಬ್ಯಾಟಿಂಗ್ ಮತ್ತೆ ಬಿರುಸು ಪಡೆದುಕೊಳ್ಳತೊಡಗಿತು. ಫೋರ್, ಸಿಕ್ಸರ್ ಸರಾಗವಾಗಿ ಸಿಡಿಯತೊಡಗಿತು. 30ನೇ ಓವರ್‌ನಲ್ಲಿ 200 ರನ್ ಪೂರ್ತಿಗೊಂಡಿತು. ಇಬ್ಬರೂ ಅರ್ಧ ಶತಕ ಹೊಡೆದು ಸಂಭ್ರಮಿಸಿದರು.
ಪಂತ್ 62 ಎಸೆತ ನಿಭಾಯಿಸಿ 78 ರನ್ ಹೊಡೆದರು. 4 ಸಿಕ್ಸರ್, 5 ಬೌಂಡರಿ ಬಾರಿಸಿ ರಂಜಿಸಿದರು. ಇದು ಅವರ 3ನೇ ಅರ್ಧ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ. 20 ರನ್ ಒಟ್ಟುಗೂಡುವಷ್ಟರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಪೆವಿಲಿಯನ್ ಹಾದಿ ಹಿಡಿದರು. 44 ಎಸೆತಗಳಿಂದ 64 ರನ್ ಹೊಡೆದ ಪಾಂಡ್ಯ ಕೂಡ ಪಂತ್ ಅವರಂತೆ 4 ಸಿಕ್ಸರ್, 5 ಬೌಂಡರಿ ಚಚ್ಚಿದರು.
39ನೇ ಓವರ್ ವೇಳೆ 5ಕ್ಕೆ 276 ರನ್ ಗಳಿಸಿ ದೊಡ್ಡ ಮೊತ್ತದತ್ತ ದೌಡಾಯಿಸುವ ಸೂಚನೆ ನೀಡಿದ್ದ ಭಾರತ, ಹಾರ್ದಿಕ್ ಪಾಂಡ್ಯ ನಿರ್ಗಮನದೊಂದಿಗೆ ಕ್ಷಿಪ್ರ ಕುಸಿತ ಕಂಡಿತು. 53 ರನ್ ಅಂತರದಲ್ಲಿ ಕೊನೆಯ 5 ವಿಕೆಟ್ ಉರುಳಿತು. ಶಾರ್ದೂಲ್ ಠಾಕೂರ್ ಮಿಂಚಿನ ಆಟವಾಡಿ 21 ಎಸೆತಗಳಿಂದ 30 ರನ್ ಹೊಡೆದದ್ದು ಬೋನಸ್ ಆಗಿ ಪರಿಣಮಿಸಿತು.
ಭುವನೇಶ್ವರ್ ಅವರ ಮೊದಲ ಓವರಿನ ಮೊದಲೆರಡು ಎಸೆತಗಳನ್ನೇ ಜಾಸನ್ ರಾಯ್ ಬೌಂಡರಿಗೆ ಬಡಿದಟ್ಟಿದರು. 5ನೇ ಎಸೆತವೂ ಬೌಂಡರಿ ದಾಟಿತು. ಅಂತಿಮ ಎಸೆತದಲ್ಲಿ ಭುವಿಗೆ ರಾಯ್ (14) ಬೌಲ್ಡ್ ಆದರು!
ಮುಂದಿನ ಓವರಿನಲ್ಲೇ ಭುವನೇಶ್ವರ್ ಮತ್ತೋರ್ವ ಓಪನರ್, ಕಳೆದ ಪಂದ್ಯದ ಶತಕವೀರ ಬೇರ್‌ಸ್ಟೊ (1) ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಭಾರತ 2019ರ ವಿಶ್ವಕಪ್ ಬಳಿಕ ಆಡಿದ 18 ಏಕದಿನ ಪಂದ್ಯಗಳಲ್ಲಿ ಮೊದಲ ಸಲ ಪವರ್ ಪ್ಲೇ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ವಿಕೆಟ್ ಉರುಳಿಸಿತ್ತು.
ಮಲಾನ್-ಲಿವಿಂಗ್‌ಸ್ಟೋನ್ ಜತೆಗೂಡಿ ತಂಡಕ್ಕೆ ರಕ್ಷಣೆ ಒದಗಿಸುವ ಸೂಚನೆ ನೀಡಿದರು. 5ನೇ ವಿಕೆಟಿಗೆ 60 ರನ್ ಒಟ್ಟುಗೂಡಿತು. ಠಾಕೂರ್ ಇವರಿಬ್ಬರನ್ನೂ 13 ರನ್ ಅಂತರದಲ್ಲಿ ಪೆವಿಲಿಯನ್ನಿಗೆ ರವಾನಿಸಿ ಭಾರತವನ್ನು ಚಾಲಕನ ಸ್ಥಾನದಲ್ಲಿ ಕೂರಿಸಿದರು. ಮಾಲನ್ ಗಳಿಕೆ 50 ಎಸೆತಗಳಿಂದ 50 ರನ್. ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಮೊಯಿನ್ ಅಲಿ ಅವರನ್ನು ದ್ವಿತೀಯ ಸ್ಪೆಲ್‌ನ ಮೊದಲ ಓವರಿನಲ್ಲೇ ಭುವಿ ಉರುಳಿಸಿದರು. ಮುಂದಿನದು ಸ್ಯಾಮ್ ಕರನ್ ಆಟ. ಅವರು ಚೊಚ್ಚಲ ಅರ್ಧ ಶತಕ ಬಾರಿಸಿ ಇಂಗ್ಲೆಂಡಿಗೆ ಹೊಸ ಭರವಸೆ ಮೂಡಿಸಿದರು.
ಭಾರತ
ಶಿಖರ್ ಧವನ್ 67, ರಿಷಭ್ ಪಂತ್ 78, ಹಾರ್ದಿಕ್ ಪಾಂಡ್ಯ 64, ಕೃಣಾಲ್ ಪಾಂಡ್ಯ 25, ಶಾರ್ದೂಲ್ ಠಾಕೂರ್ 30.
ಒಟ್ಟು (48.2 ಓವರ್‌ಗಳಲ್ಲಿ ಆಲೌಟ್) 329
ಬೌಲಿಂಗ್; ಸ್ಯಾಮ್ ಕರನ್ 5/1, ರೀಸ್ ಟಾಪ್ಲಿ 66/1, ಮಾರ್ಕ್ ವುಡ್ 34/3, ಬೆನ್ ಸ್ಟೋಕ್ಸ್ 45/1, ಆದಿಲ್ ರಶೀದ್ 81/2,
ಮೊಯಿನ್ ಅಲಿ 39/1, ಲಿಯಮ್ ಲಿವಿಂಗ್‌ಸ್ಟೋನ್ 20/1.
ಇಂಗ್ಲೆಂಡ್
ಬೆನ್ ಸ್ಟೋಕ್ಸ್ 35, ಡೇವಿಡ್ ಮಲಾನ್ 50, ಲಿವಿಂಗ್‌ಸ್ಟೋನ್ 36, ಮೊಯಿನ್ ಅಲಿ 29, ಸ್ಯಾಮ್ ಕರನ್ ಔಟಾಗದೆ 95,
ರೀಸ್ ಟಾಪ್ಲಿ ಔಟಾಗದೆ 1.
ಒಟ್ಟು 322/೯
ಬೌಲಿಂಗ್;
ಭುವನೇಶ್ವರ್ ಕುಮಾರ್ 10/3, ಟಿ. ನಟರಾಜನ್ 73/1, ಶಾರ್ದೂಲ್ ಠಾಕೂರ್ 67/4,
ಸರಣಿಶ್ರೇಷ್ಠ: ಜಾನಿ ಬೇರ್‌ಸ್ಟೊ