ಕೋಲ್ಕತ್ತ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಲಿಕುರ್ಚಿಯಲ್ಲಿ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಬಲಪ್ರದರ್ಶನ ನಡೆಸಿದರು.
ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಏಪ್ರಿಲ್ 1ರಂದು ನಂದಿಗ್ರಾಮದಲ್ಲಿ ಮತದಾನ ನಡೆಯಲಿದೆ. ಇಲ್ಲಿ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಪಕ್ಷದ ಹಿರಿಯ ನಾಯಕರೊಂದಿಗೆ ಮಮತಾ ಗಾಲಿಕುರ್ಚಿಯಲ್ಲಿ ರೇಯಾಪರಾ ಖುದಿರಾಮ್ ಮೋರ್ನಿಂದ ಠಾಕೂರ್ಚೌಕ್ ವರೆಗೆ ರೋಡ್ ಶೋವನ್ನು ಮುನ್ನಡೆಸಿದರು. ಸಾವಿರಾರು ಪಕ್ಷದ ಕಾರ್ಯಕರ್ತರು ಮಮತಾ ಪರ ಘೋಷಣೆ ಕೂಗಿದರು.
ಪ್ರಸಕ್ತ ತಿಂಗಳಲ್ಲಿ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಪ್ರಚಾರದ ವೇಳೆ ಅಪರಿಚಿತರು ತಳ್ಳಿದ ಪರಿಣಾಮ ಮಮತಾ ಕಾಲಿಗೆ ನೋವಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಹಾಗಿದ್ದರೂ ಮಮತಾ ಆರೋಪಗಳನ್ನು ಚುನಾವಣಾ ಆಯೋಗವು ತಳ್ಳಿ ಹಾಕಿತ್ತು. ಈ ಘಟನೆಯ ಬಳಿಕ ನಂದಿಗ್ರಾಮದಲ್ಲಿ ನಡೆಸಿದ ಮೊದಲ ಪಾದಯಾತ್ರೆ ಇದಾಗಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ