Sunday, 15th December 2024

ಶಿಲ್ಪ ಕೆತ್ತುವ ಶಿಲ್ಪಿಯಂತೆ ರಂಗಭೂಮಿ !

ತನ್ನಿಮಿತ್ತ

ಪೂಜಾಶ್ರೀ ತೋಕೂರು

ರಂಗಭೂಮಿ ಎಂದರೆ ಸಮಾಜದ ಪ್ರತಿಬಿಂಬ. ಬದುಕಿನ ಆಗುಹೋಗುಗಳನ್ನು ಸಾಹಿತಿಕವಾಗಿ, ರಾಜಕೀಯವಾಗಿ, ಸಾಮಾಜಿಕ ವಾಗಿ, ಕಟ್ಟಿಕೊಡುವ ವಿಧಾನ. ವಾಸ್ತವದ ದುಃಖದುಮ್ಮಾನಗಳಿಗೆ ಪರದೆ ಎಳೆದು ನಿರ್ಧಿಷ್ಟ ಕಥಾವಸ್ತುವಿನೊಂದಿಗೆ ನಟನೆಯಲ್ಲಿ ನವರಸಗಳನ್ನು ಪೋಣಿಸಿ ಮನೋರಂಜನೆ ಹಾಗೂ ಯಾವುದೇ ವಿಷಯದ ಅರಿವನ್ನು ಜನಸಾಮಾನ್ಯರಿಗೆ ತಲುಪಿಸುವ ಒಂದು
ಸೇತುವೆಯೇ ರಂಗಭೂಮಿ.

ಆಧುನಿಕ ದೃಶ್ಯಮಾದ್ಯಮಗಳ ಭರಟೆಯ ನಡುವೆಯೂ ತನ್ನದೇ ಆದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವ ರಂಗಭೂಮಿ ಕಲಾ ಸಕ್ತರನ್ನು ತನ್ನತ್ತ ಸೆಳೆಯಲು ನೂತನ ಪ್ರಯೋಗಗಳೊಂದಿಗೆ ಮೂಡಿಬರುತ್ತಿದೆ. ಕಲೆಗೆ ಪ್ರೋತ್ಸಾಹ ಹಾಗೂ ನಿರಾಂತರ ವಾಗಿರಬೇಕೆಂಬ ಉದ್ದೇಶದಿಂದ ‘ವಿಶ್ವ ರಂಗಭೂಮಿ ದಿನ’ ಆಚರಿಸಲಾಗುತ್ತಿದೆ.

ಇಡೀ ಜಗತ್ತಿನಾದ್ಯಂತ ಅಯಾ ಜನಾಂಗ, ದೇಶ, ಪ್ರದೇಶಗಳ ರಂಗಭೂಮಿ ರೂಪುಗೊಂಡದನ್ನು ನಾವು ಕಾಣಬಹುದು. ಇತಿಹಾಸ ರಂಗಭೂಮಿ ಉಗಮ ಸ್ಥಾನ ಪಾಶ್ಚಿಮಾತ್ಯ ದೇಶಗಳಲ್ಲಿ ಆಯಿತು ಎಂದು ತಿಳಿಸುತ್ತದೆ. ಮನುಷ್ಯನ ನಾಗರಿಕತೆ ವಿಕಾಸದೊಂದಿಗೆ ರಂಗಭೂಮಿ ರೂಪುಗೊಂಡಿದ್ದು, ಸುಮಾರು 2,500 ವರ್ಷಗಳಷ್ಟು ಹಳೆಯದಾಗಿರುವ ಈ ಕ್ಷೇತ್ರವು, ಧಾರ್ಮಿಕ ಚಟುವಟಿಕೆಗಳ ಮೂಲಕ ಜೀವತಳೆದಿದೆ.

ರಂಗಭೂಮಿಯ ಅಸ್ತಿತ್ವದ ಮೊದಲ ದಾಖಲೆಗಳು ಸಿಕ್ಕಿದ್ದು ಚೀನಾ ದೇಶದಲ್ಲಿ. ಅಲ್ಲಿಯ ಧಾರ್ಮಿಕ ಆಚರಣೆಗಳಲ್ಲಿ ನಾಟಕ ಗಳನ್ನು ಅಭಿನಯಿಸಲಾಗುತ್ತಿತ್ತು. ಜಪಾನೀಯರು ಕೂಡ ಇದೇ ರೀತಿ ರಂಗಭೂಮಿ ಚಟುವಟಿಕೆಗಳನ್ನು ಪ್ರಾರಂಭಿಸಿದರು. ಪ್ರಾಚೀನ ಭಾರತದಲ್ಲಿ ಕೂಡ ಇದೇ ರೀತಿಯ ರಂಗ ಚಟುವಟಿಕೆಗಳು ಎತ್ತರವಾದ ವೇದಿಕೆಯೊಂದರಲ್ಲಿ ನಡೆಯುತ್ತಿದ್ದವು. ಅದರ ಹಿಂದೆ, ಪರದೆ ಅಥವಾ ದೃಶ್ಯಗಳ ಚಿತ್ರಣ ಇರುತ್ತಿತ್ತು.

ಆದರೆ, ರಂಗಭೂಮಿಗೊಂದು ಸತ್ವ ಮತ್ತು ವೃತ್ತಿಪರತೆ ತಂದುಕೊಟ್ಟಿದ್ದು ಗ್ರೀಕರು. ಹುಲ್ಲುಹಾಸಿನ ಮೈದಾನದಲ್ಲಿ ನಡೆಯು ತ್ತಿದ್ದ ನಾಟಕಗಳನ್ನು ನೋಡಲು ಬೆಟ್ಟದ ಪಾರ್ಶ್ವದಲ್ಲಿ ಸ್ಥಳ ಕಲ್ಪಿಸಿದ್ದ ದಾಖಲೆಗಳಿವೆ. ಸ್ಕೇಸ್ ಎಂದು ಕರೆಯಲ್ಪಡುತ್ತಿದ್ದ ಕಟ್ಟಡದ ಮೂಲಕ ಪಾತ್ರಧಾರಿಗಳು ಗ್ರೀನ್ ರೂಂ ಪ್ರವೇಶಿಸುತ್ತಿದ್ದರು.

ಪ್ರಾಚೀನ ಗ್ರೀಕ್ ನಾಟಕಕಾರಲ್ಲಿ ಪ್ರಸಿದ್ದರಾದ ಈಸ್ಕಿಲಸ್, ಯೂರಿಪಿಡೀಸ್ ಮತ್ತು ಸೋಫಕ್ಲೀಸರು ಗ್ರೀಸಿನ ಇತಿಹಾಸ ಮತ್ತು ಐತಿಹ್ಯಗಳಿಂದ ವಸ್ತುವನ್ನಾಯ್ದುಕೊಂಡು ಅದ್ಭುತವಾದ ನಾಟಕಗಳನ್ನು ರಚಿಸಿದ್ದಾರೆ. ಮಧ್ಯಯುಗದ ಉಜ್ವಲ ಪ್ರದರ್ಶನ ಗಳಿಂದ (ಪೇಜೆಂಟ್ರಿ) ವಿಕಾಸವಾದ ನಾಟಕ ಮಾನವ ಸಹಜ ಭಾವೋದ್ರೇಕವನ್ನೂ ಮೈಗೂಡಿಸಿಕೊಂಡಂತೆ, ’ಇತಿಹಾಸಕಾರನ ಕ್ರಾನಿಕಲ್’ ನಿರೂಪಣೆಯಲ್ಲಿನ ರಾಗವೈವಿಧ್ಯ, ಉಜ್ವಲ ಚಿತ್ರಣದೊಂದಿಗೆ ಬೆರೆತಾಗ, ಈ ವರ್ಣರಂಜಿತ ಐತಿಹಾಸಿಕ ವ್ಯಕ್ತಿಗಳು
ನಾಟಕಕಾರನ ವಿಭಾವನೆಯನ್ನು ಪ್ರಬಲವಾಗಿ ಸೆಳೆದವು.

ಮಧ್ಯಯುಗದ ಕ್ರಾನಿಕಲ್’ ನಾಟಕಗಳಿಂದ ಹೀರಿಕೊಂಡ ಅಂಶಗಳನ್ನು ಷೇಕ್ಸ್‌ಪಿಯರ್ ತನ್ನ ಕಲ್ಪನೆ ಹಾಗೂ ಸಮಾಜಪ್ರಜ್ಞೆಯ ಮೂಸೆಯಲ್ಲಿಟ್ಟು ಕರಗಿಸಿ ರಮ್ಯ ಐತಿಹಾಸಿಕ ನಾಟಕಗಳನ್ನು ರಚಿಸಿದ. ಮೂಲದ ಕ್ರಾನಿಕಲ್ ನಾಟಕಗಳಲ್ಲಿಲ್ಲದ ರಚನಾ ಕೌಶಲ, ಪಾತ್ರವಿನ್ಯಾಸ, ಇತಿಹಾಸಪ್ರಜ್ಞೆ ಇವುಗಳನ್ನು ಷೇಕ್ಸ್‌‌‌ಪಿಯರ್ ಸಾಧಿಸಿದ. ಇನ್ನು ಕನ್ನಡ ರಂಗಭೂಮಿಯತ್ತ ಗಮನಹರಿಸಿದರೆ
ಕನ್ನಡ ಸಾಹಿತ್ಯದಲ್ಲಿ ನಾಟಕ ಪ್ರಕಾರಗಳು ಹೊಸದೇನು ಅಲ್ಲ. ರಾಮಾಯಣ ಮಹಾಭಾರತಗಳನ್ನು ಅವಲಂಬಿಸಿದ ಸಂಸ್ಕೃತ ನಾಟಕಗಳು ಕನ್ನಡಕ್ಕೆ ಬಂದಾಗಲೇ ಕನ್ನಡದಲ್ಲಿ ಐತಿಹಾಸಿಕ ನಾಟಕಗಳ ಜನನವೂ ಆಯಿತೆನ್ನಬಹುದು.

ಹೀಗೆ ಕನ್ನಡಕ್ಕೆ ಬಂದ ನಾಟಕಗಳ ಮೂಲ ಅವತರಿಣಿಕೆ ಸಂಸ್ಕೃತವೇ ಆಗಿದೆ. ಹೀಗೆ ಉಪಲಬ್ಧವಾದ ಮೊದಲ ಕನ್ನಡ ನಾಟಕ ಮಿತ್ರವಿಂದಾ ಗೋವಿಂದ; ಸಂಸ್ಕೃತ ರತ್ನಾವಳಿಯ ಭಾಷಾಂತರ. ಇದರ ಕತೃ ಮೈಸೂರು ಅರಸ ಚಿಕ್ಕದೇವರಾಜ ಒಡೆಯರ ಆಸ್ಥಾನಕವಿ ಸಿಂಗಾರಾರ್ಯ. ಈ ನಾಟಕದಲ್ಲಿ ಇತಿಹಾಸದ ಅಂಶಕ್ಕಿಂತ ಕಲ್ಪನಾಂಶವೇ ಹೆಚ್ಚು. ಹೀಗೆ ನಾಟಕಕಾರನ ಕಲ್ಪನೆ ಯಂತೆ ನಾಟಕಗಳು ಒಂದು ಒಂದಾಗಿ ಜನ್ಮ ತಳೆದಂತೆ ರಂಗಭೂಮಿಯು ವಿಕಾಸಗೊಂಡಿತು.

ರಂಗಭೂಮಿ ಕೇವಲ ನಟನೆಗೆ ಸೀಮಿತವಾಗದೆ ವಿವಿಧ ಕಲಾಪ್ರಕಾರವಾದ ನಾಟ್ಯ, ಯಕ್ಷಗಾನ, ಬೊಂಬೆಯಾಟ ಮೊದಲಾದ ಕ್ಷೇತ್ರಗಳೊಂದಿಗೆ ಐಕ್ಯಗೊಂಡು ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಿನಿಮಾರಂಗಕ್ಕೆ ಮನಸೋತಿರುವ ಯುವಜನತೆ ಅದರತ್ತ ಮುಖಮಾಡಿದೆ. ಆದರೆ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ಅದೇಷ್ಟೋ ಪ್ರತಿಭೆಗಳು ಈ
ರಂಗಭೂಮಿಯ ಮಕ್ಕಳೆಂಬುದನ್ನು ಯುವಜನತೆ ಮರೆಯುತ್ತಿದೆ. ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿರುವ ಅದ್ಭುತ ಕಲಾವಿದ, ನಿರ್ದೇಶಕರನ್ನು ಈ ರಂಗಭೂಮಿ ಸೃಷ್ಟಿಸಿದೆ. ಒಬ್ಬ ಅದ್ಭುತ ಕಲಾವಿದರನ್ನು ಒಂದು ರಂಗಭೂಮಿ ಸೃಷ್ಟಿಸುತ್ತದೆ ಸರ್ವಕಾಲಿಕ ಸತ್ಯ.