ನಂದಿಗ್ರಾಮ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ಮೃತದೇಹ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ. ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಇದು ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದಯ್ ದುಬೆ ಮೃತ ವ್ಯಕ್ತಿ. ಮಾ.30ರಂದು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯನ್ನು ಬೆಂಬಲಿಸಿ ನಡೆದ ಚುನಾವಣಾ ಪ್ರಚಾರದಲ್ಲಿ ಹಿರಿಯ ನಟ ಮಿಥುನ್ ಚಕ್ರವರ್ತಿ ರೋಡ್ ಶೋ ನಡೆಸಿದ್ದರು. ಅದರಲ್ಲಿ ದುಬೆ ಅವರು ಭಾಗವಹಿಸಿದ್ದರಿಂದ ಕುಪಿತಗೊಂಡಿದ್ದ ಟಿಎಂಸಿ ನಾಯಕರು ಅವರನ್ನು ಬೆದರಿಸಿದ್ದರು. ಹೀಗಾಗಿ ದುಬೆ ಒತ್ತಡದಲ್ಲಿದ್ದರು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಸಾವಿನ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ದೂರಿದೆ. ‘ಕೌಟುಂಬಿಕ ಸಮಸ್ಯೆಗಳಿಂದ ದುಬೆ ಆತ್ಮಹತ್ಯೆ ಮಾಡಿ ಕೊಂಡಿರಬಹುದು’ ಎಂದು ಟಿಎಂಸಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಮರಣೋತ್ತರ ವರದಿ ಬಂದ ಬಳಿಕ ನಿಖರವಾದ ಕಾರಣ ತಿಳಿಯಬಹುದು’ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಮಾಜಿ ಸಹಾಯಕ ಸುವೇಂದು ಅಧಿಕಾರಿಯ ನಡುವೆ ತೀವ್ರ ಹಣಾಹಣಿ ನಡೆಯುತ್ತಿರುವ ಕಾರಣ ನಂದಿಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ