ನವದೆಹಲಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅಸ್ಸಾಂ ಸಚಿವ, ಬಿಜೆಪಿ ಮುಖಂಡ ಹಿಮಂತ ಬಿಸ್ವಾ ಶರ್ಮಾರಿಗೆ ವಿಧಿಸಲಾಗಿದ್ದ 48 ಗಂಟೆಗಳ ಪ್ರಚಾರ ನಿಷೇಧವನ್ನು 24 ಗಂಟೆಗೆ ಇಳಿಸಲಾಗಿದೆ ಎಂದು ಶನಿವಾರ ಚುನಾವಣಾ ಆಯೋಗ ತಿಳಿಸಿದೆ.
ಶರ್ಮಾ ಪ್ರಚಾರಕ್ಕೆ ನಿಷೇಧ ಹೇರಿರುವ ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಮೊರೆ ಹೋಗುವುದಾಗಿ ಬಿಜೆಪಿ ಘೋಷಿಸಿದ ಬೆನ್ನಲ್ಲೇ, ಆಯೋಗ ಪ್ರಚಾರ ನಿಷೇಧದ ಅವಧಿಯನ್ನು ಕಡಿಮೆಗೊಳಿಸಿದೆ.
ಏಪ್ರಿಲ್ 6 ರಂದು ಮತದಾನ ನಡೆಯಲಿರುವ ಕ್ಷೇತ್ರದಲ್ಲಿ ತಾವು ಸ್ವತಃ ಅಭ್ಯರ್ಥಿಯಾಗಿದ್ದು, ಪ್ರಚಾರ ನಿಷೇಧದ ಅವಧಿ ಕಡಿಮೆ ಮಾಡುವಂತೆ ಶರ್ಮಾ ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು ಮತ್ತು ಅದನ್ನು ಆಯೋಗ ಪರಿಗಣಿಸಿದೆ.
ಅಸ್ಸಾಂ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಹಿಮಂತ ಬಿಸ್ವಾ ಶರ್ಮಾ ಅವರು ಬೋಡೊ ಪೀಪಲ್ಸ್ ಫ್ರಂಟ್‌ನ (ಬಿಪಿಎಫ್) ಮುಖ್ಯಸ್ಥ ಹಾಗರಾಮ್ ಮೊಹಿಲಾರಿ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಬಿಪಿಎಫ್‌ನ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ