ವಿದೇಶವಾಸಿ
ಕಿರಣ್ ಉಪಾಧ್ಯಾಯ ಬಹ್ರೈನ್
ನನಗೆ ಈ ಹೆಸರು ಬರಲು ಕಾರಣ ಈಜಿಪ್ಟ್ ದಕ್ಷಿಣ ತಟದಲ್ಲಿರುವ ಸೂಯೆಜ್ ಎಂಬ ಊರು. ನಾನು ಹುಟ್ಟಿರದಿದ್ದರೆ ಇಂದು ಸುಮಾರು ಎಂಟು ಲಕ್ಷ ಜನಸಂಖ್ಯೆ ಇರುವ, ತನ್ನ ಮಡಿಲಲ್ಲಿ ಆರು ಹಡಗುಕಟ್ಟೆಗಳನ್ನು ಹುದುಗಿಸಿಕೊಂಡಿ ರುವ ಈ ಊರಿನ ಹೆಸರು ನೂರರಲ್ಲಿ ಒಂದಾಗಿ ಸೇರಿಹೋಗುತ್ತಿತ್ತೋ ಏನೋ. ಈಗಲೂ ಸೂಯೆಜ್ ಎಂದರೆ ಜನರಿಗೆ ಮೊದಲು ನೆನಪಾಗುವುದು ಕಡಲ್ಗಾಲುವೆಯಾದ ನಾನು, ನಂತರ ನನ್ನದೇ ಹೆಸರಿನ ಪಟ್ಟಣ.
ಆ ಒಂದು ಘಟನೆ ನಡೆಯದಿದ್ದರೆ ನನ್ನ ವಿಷಯ ಅಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಬಾಲ್ಯದಲ್ಲಿ ಎಲ್ಲಾ ಒಮ್ಮೆ ನನ್ನ ವಿಷಯ ಓದಿ ಮರೆತವರೇ ಹೆಚ್ಚು. ಕಳೆದ ಒಂದು ವಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ಕುರಿತು ಸಾಕಷ್ಟು ಚರ್ಚೆಯಾ ಯಿತು. ಕೆಲವೊಮ್ಮೆ ಹಾಗೆ ಆಗುವುದಿದೆ. ಯಾವುದೋ ಕಾರಣಕ್ಕೆ ಯಾರೋ ಇದ್ದಕ್ಕಿದ್ದಂತೆ ಸುದ್ದಿಯಾಗುತ್ತಾರೆ. ಯಾರz ತಪ್ಪಿಗೆ
ಇನ್ಯಾರೋ ಪ್ರಚಾರಕ್ಕೆ ಬರುತ್ತಾರೆ.
ಅದಿರಲಿ, ನಾನು ಯಾರೆಂದು ತಿಳಿಯಿತಾ? ನನ್ನ ಹೆಸರು ‘ಖನಾತ್ ಅಲ್ ಸುವಯ್ಸ’. ಹಾಗೆಂದರೆ ಬಹಳಷ್ಟು ಜನರಿಗೆ ಅರ್ಥವಾಗ ಲಿಕ್ಕಿಲ್ಲ. ಅದೇ ಇಂಗ್ಲೀಷಿನಲ್ಲಿ ‘ಸೂಯೆಜ್ ಕೆನಾಲ’ ಅಥವಾ ಕನ್ನಡದಲ್ಲಿ ‘ಸೂಯೆಜ್ ಕಾಲುವೆ’ ಎಂದರೆ ಎಲ್ಲರಿಗೂ ಅರ್ಥ ವಾದೀತು. ಇಷ್ಟು ದಿನ ಎಲ್ಲವೂ ಸುರಳೀತ ನಡೆಯುತ್ತಿದ್ದುದರಿಂದ ಎಲ್ಲರೂ ನನ್ನನ್ನು ಮರೆತಂತಿತ್ತು. ಎವೆರ್ ಗಿವನ್ ಎಂಬ
ಹಡಗಿನಿಂದಾಗಿ ಬಹಳಷ್ಟು ಜನ ನನ್ನ ಇತಿಹಾಸದ ಪುಟಗಳನ್ನು ಮತ್ತೊಮ್ಮೆ ತಿರುವಿದರು.
ಆದರೂ ನನ್ನ ಕುರಿತು, ಮಾರ್ಚ್ 23 ರಂದು ಮತ್ತು ಅದರ ನಂತರ ನಡೆದ ಘಟನೆಯ ಕುರಿತು ಕೆಲವು ವಿಷಯ ನಿಮಗೆ ಹೇಳಲೇ ಬೇಕು. ನನಗೆ ಈ ಹೆಸರು ಬರಲು ಕಾರಣ ಈಜಿಪ್ಟ್ ದಕ್ಷಿಣ ತಟದಲ್ಲಿರುವ ಸೂಯೆಜ್ ಎಂಬ ಊರು. ನಾನು ಹುಟ್ಟಿರದಿದ್ದರೆ ಇಂದು ಸುಮಾರು ಎಂಟು ಲಕ್ಷ ಜನಸಂಖ್ಯೆ ಇರುವ, ತನ್ನ ಮಡಿಲಲ್ಲಿ ಆರು ಹಡಗುಕಟ್ಟೆಗಳನ್ನು ಹುದುಗಿಸಿಕೊಂಡಿರುವ ಈ ಊರಿನ ಹೆಸರು ನೂರರಲ್ಲಿ ಒಂದಾಗಿ ಸೇರಿಹೋಗುತ್ತಿತ್ತೋ ಏನೋ.
ಈಗಲೂ ಸೂಯೆಜ್ ಎಂದರೆ ಜನರಿಗೆ ಮೊದಲು ನೆನಪಾಗುವುದು ಕಡಲ್ಗಾಲುವೆಯಾದ ನಾನು, ನಂತರ ನನ್ನದೇ ಹೆಸರಿನ
ಪಟ್ಟಣ. ದಕ್ಷಿಣದ ಸೂಯೆಜ್ನಿಂದ ಉತ್ತರದ ಪೋರ್ಟ್ ಸೈದ್ವರೆಗೆ ನಾನು ಸಮುದ್ರ ಮಟ್ಟದಲ್ಲಿ ಮೈಚಾಚಿಕೊಂಡಿದ್ದೇನೆ. ನನ್ನ ಮಧ್ಯ ಭಾಗದಲ್ಲಿ ಗ್ರೇಟ್ ಬಿಟ್ಟರ್ ಲೇಕ್ ಎಂಬ ಸ್ಥಳವಿದೆ. ಸುಮಾರು ಐದು ಆರು ತಾಸಿನ ಪ್ರಯಾಣದ ನಂತರ ಹಡಗುಗಳು
ನಿಂತು, ಎದುರಿನಿಂದ ಬರುವ ಹಡಗಿಗೆ ದಾರಿ ಒದಗಿಸಲು ಇರುವ ತಂಗುದಾಣ ಇದು.
ನಾನು ಉತ್ತರದ ಮೆಡಿಟರೇನಿಯನ್ ಮತ್ತು ದಕ್ಷಿಣದ ಕೆಂಪು ಸಮುದ್ರವನ್ನು ಒಂದುಗೂಡಿಸುತ್ತೇನೆ. ದಕ್ಷಿಣ ಹಾಗೂ ಪೂರ್ವ ಏಷ್ಯಾ ಮತ್ತು ಯುರೋಪ್ ಖಂಡದ ನಡುವೆ ಸರಕು ಸಾಗಣೆಗೆ ನಾನೇ ಪ್ರಮುಖ ಕೊಂಡಿ. ನಾನು ಹುಟ್ಟಿಕೊಳ್ಳದಿದ್ದರೆ ಈ ಎರಡು ಖಂಡಗಳ ನಡುವೆ ಸರಕು ಸಾಗಿಸುವವರು ಆಫ್ರಿಕಾ ಖಂಡವನ್ನು ಸುಮಾರು ಐದು ಸಾವಿರ ಕಿಲೋ ಮೀಟರ್ನಷ್ಟು ಸುತ್ತಿ ಬರ ಬೇಕಿತ್ತು. ನಾನು ಅವರಿಗೆ ಎಂಟರಿಂದ ಹತ್ತು ಅಮೂಲ್ಯ ದಿನಗಳನ್ನು ಉಳಿಸಿಕೊಡುತ್ತಿದ್ದೇನೆ. ಈ ಮೂಲಕ ಪ್ರತಿನಿತ್ಯ ಸುಮಾರು ಐವತ್ತು ಸರಕು ಸಾಗಿಸುವ ನೌಕೆಗಳ ಇಂಧನ ಉಳಿಸಿ ಪ್ರಕೃತಿಗೆ ನನ್ನ ಕೊಡುಗೆ ನೀಡುತ್ತಿದ್ದೇನೆ.
ವಿಶ್ವದ ಸರಕು ಸಾಗಣೆಯ ನಾವೆಗಳಲ್ಲಿ ಶೇಕಡಾ ಹನ್ನೆರಡರಷ್ಟು ನನ್ನನ್ನು ಬಳಸಿಕೊಂಡು, ಪ್ರತಿನಿತ್ಯ ಒಂಬತ್ತರಿಂದ ಹತ್ತು
ಬಿಲಿಯನ್ ಡಾಲರ್ನಷ್ಟು ವಹಿವಾಟು ನಡೆಸುತ್ತವೆ ಎಂದರೆ ಅದು ಸಣ್ಣ ಪೆಟ್ಟಿನ ಆಟವಲ್ಲ. ಈಜಿಪ್ಟ್ ದೇಶಕ್ಕೆ ಆರ್ಥಿಕವಾಗಿ ನಾನು ಕೊಡುವ ಕೊಡುಗೆ ಎಷ್ಟು ಗೊತ್ತಾ? ಒಂದು ಹಡಗಿಗೆ ಸುಮಾರು ಮೂರು ಲಕ್ಷ ಡಾಲರ್ನಂತೆ ಪ್ರತಿನಿತ್ಯ ಹದಿನೈದು ಮಿಲಿಯನ್ ಡಾಲರ್, (ಭಾರತದ ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ ದಿನವೊಂದಕ್ಕೆ ನೂರ ಹನ್ನೆರಡು ಕೋಟಿ) ವರ್ಷಕ್ಕೆ ಐದು ಬಿಲಿಯನ್ ಡಾಲರ್ಗಿಂತಲೂ ಹೆಚ್ಚು.
ಇದು ಕೇವಲ ಸುಂಕ ವಸೂಲಿಯ ಲೆಕ್ಕ ಮಾತ್ರ. ಇನ್ನು ಆ ನಾವೆಗಳಲ್ಲಿ ಪ್ರಯಾಣಿಸುವವರು ನಿತ್ಯ ಬಳಕೆಗೆ ಖರೀದಿಸುವ ವಸ್ತುಗಳ ವ್ಯಾಪಾರ ಬೇರೆ. ಊಟ, ಉಪಾಹಾರದಿಂದ ಹಿಡಿದು ಉಡುಗೆ, ಉಡುಗೊರೆಯ ವಹಿವಾಟಿನದ್ದು ಒಂದು ದೊಡ್ಡ
ಮೊತ್ತವೇ ಇದೆ. ಈ ನಾವೆಗಳಲ್ಲಿ ಈಜಿಪ್ಟ್ ಸ್ಮಾರಕ ಮತ್ತು ಮೊಬೈಲ್ ಸಿಮ್ ಕಾರ್ಡ್ಗಳ ವ್ಯಾಪಾರವೇ ಪ್ರತಿನಿತ್ಯ ಇಪ್ಪತ್ತೈದು ಸಾವಿರ ಡಾಲರ್ ಎಂದು ಅಂದಾಜಿಸಲಾಗಿದೆ. ನನಗೇನಾದರೂ ಆದರೆ ವಿಶ್ವಕ್ಕೆ ವ್ಯಾಪಾರದ ಇಕ್ಕಟ್ಟು, ಈಜಿಪ್ಟ್ ದೇಶಕ್ಕೆ ರಾಷ್ಟ್ರೀಯ ಬಿಕ್ಕಟ್ಟು. ಆದ್ದರಿಂದ ನಾನು ಪ್ರತಿನಿತ್ಯ ಚಿನ್ನದ ನೀರು ಹರಿಸುವ ಕಾಲುವೆಯೇ ಹೊರತು ಕಾಕುಪೋಕು ನಾಲೆ ಯಂತೂ ಅಲ್ಲವೇ ಅಲ್ಲ.
ಫ್ರಾನ್ಸ್ ಮೂಲದ ಫರ್ಡಿನಾಂಡ್ ಡೆ ಲೆಸೆಪ್ಸ್ ನನ್ನ ಜನಕ. ಎಲ್ಲವೂ ಸರಿಯಾಗಿರುತ್ತಿದ್ದರೆ ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಮಹಾ ಸಾಗರವನ್ನು ಜೋಡಿಸುವ ನನ್ನ ಸಹೋದರಿ ಪನಾಮಾ ಕಾಲುವೆಯ ಜನಕರೂ ಇವರೇ ಆಗಿರುತ್ತಿದ್ದರು. ಕಾರಣಾಂತರ ಗಳಿಂದ ಅದು ಕೈಗೂಡಲಿಲ್ಲ, ಬಿಡಿ. ಇವರು ಮೊದಲು ಫ್ರೆಂಚ್ ರಾಯಭಾರಿಯಾಗಿದ್ದು, ನಂತರ ಉದ್ಯಮಿಯಾದವರು. ನನ್ನ ಜನನಕ್ಕೆ ಕಾರ್ಯ ಆರಂಭವಾದದ್ದು 1859ರಲ್ಲಿ. ನಾನು ಮೊದಲು ಅಂಬೆಗಾಲಿಟ್ಟು ಮುನ್ನಡೆದದ್ದು 1869ರ ನವೆಂಬರ್ ನಲ್ಲಿ.
ಅದಕ್ಕೂ ಆರು ದಶಕಗಳ ಮೊದಲೇ ಫ್ರೆಂಚ್ ಆಡಳಿತಗಾರ ನೆಪೋಲಿಯನ್ ಬೊನಾಪಾರ್ಟೆ ಈ ಯೋಜನೆಗೆ ಸಮೀಕ್ಷೆ ನಡೆಸಲು ಸೂಚಿಸಿದ್ದ ಎನ್ನುವುದನ್ನೂ ಮರೆಯುವಂತಿಲ್ಲ. ಹುಟ್ಟುವಾಗ ನಾನು ತೀರಾ ಸೊಣಕಲು. ಕೇವಲ ಇಪ್ಪತ್ತೆರಡು ಮೀಟರ್ ಅಗಲ, ಎಂಟು ಮೀಟರ್ ಆಳ ಅಷ್ಟೇ. ಈಗ ತ್ರಾಪಿಜ್ಯದ (ಟ್ರೆಪೆಜಾಯ್ಡ್) ಆಕಾರದಲ್ಲಿರುವ ನನ್ನ ಅಗಲ ಸರಾಸರಿ ಇನ್ನೂರ ಹತ್ತು ಮೀಟರ್ (ತಳದಲ್ಲಿ ನೂರ ಇಪ್ಪತ್ತು ಮೀಟರ್). ಆಳ ಇಪ್ಪತ್ತನಾಲ್ಕು ಮೀಟರ್. ಆರಂಭದ ದಿನಗಳಲ್ಲಿ 164 ಕಿಲೋ ಮೀಟರ್ ಇದ್ದ ನಾನು ಈಗ ಕೆಲವು ಮಾರ್ಪಾಟಿನೊಂದಿಗೆ 193 ಕಿಲೋ ಮೀಟರ್ ಉದ್ದ ಬೆಳೆದು ನಿಂತಿದ್ದೇನೆ.
ಮೊದಲ ನಾಲ್ಕು ವರ್ಷ ನನ್ನನ್ನು ಬಳಸಿಕೊಂಡ ನೌಕೆಗಳ ಸಂಖ್ಯೆ ಐದು ನೂರಕ್ಕೊ ಕಡಿಮೆ. ಅವು ಸಾಗಿಸಿದ ಸರಕು ಸುಮಾರು
ನಾಲ್ಕು ನೂರ ಐವತ್ತು ಸಾವಿರ ಟನ್ ಮಾತ್ರ. ಪ್ರಪಂಚ ಬೆಳೆದಂತೆ ನಾನೂ ಬೆಳೆದೆ. ಕಳೆದ ವರ್ಷ ವಿಶ್ವದಾದ್ಯಂತ ಕರೋನಾ ಸಂಕಷ್ಟ ಎದುರಾಗಿ ವ್ಯಾಪಾರ ವಹಿವಾಟು ಕಡಿಮೆಯಾಗಿದ್ದರೂ, ಹೆಚ್ಚು ಕಮ್ಮಿ ಎರಡು ಬಿಲಿಯನ್ ಟನ್ ತೂಕ ಹೊತ್ತು, ಹತ್ತೊಂಬತ್ತು ಸಾವಿರ ಹಡಗುಗಳು ನನ್ನ ಮೂಲಕ ಹಾದುಹೋಗಿದ್ದವು ಎಂದರೆ ನನ್ನ ಅಗಾಧತೆಯನ್ನು ಊಹಿಸಿಕೊಳ್ಳ
ಬಹುದು.
ಮೊದಲು ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ನಲವತ್ತು ಗಂಟೆ ಬೇಕಾಗುತ್ತಿತ್ತು. 2015ರ ನಂತರ, ಮಧ್ಯದ ಗ್ರೇಟ್ ಬಿಟ್ಟರ್ಲೇಕ್ನಿಂದ ಉತ್ತರಕ್ಕೆ ಇನ್ನೊಂದು ಜಲಪಥ ನಿರ್ಮಾಣವಾದ ನಂತರ ಈ ಅವಧಿ ಹನ್ನೆರಡರಿಂದ ಹದಿನೈದು ಗಂಟೆಗೆ ಇಳಿದಿದೆ. ಮಧ್ಯ ಭಾಗದಿಂದ ದಕ್ಷಿಣಕ್ಕೆ ಈಗಲೂ ಒಂದೇ ಪಥವಿದೆ. ಮಲೇಷ್ಯಾದಿಂದ ಹೊರಟು ನೆದರ್ಲ್ಯಾಂಡ್ ಸೇರಬೇಕಿದ್ದ, ಇಪ್ಪತ್ತೈದು ಭಾರತೀಯ ಸಿಬ್ಬಂದಿ ಗಳುಳ್ಳ ಎವೆರ್ ಗಿವೆನ್ ಸಿಕ್ಕಿ ಹಾಕಿಕೊಂಡದ್ದೇ ಇಲ್ಲಿ.
ಅಂದು ಬೆಳಿಗ್ಗೆ ಸ್ಥಳೀಯ ಸಮಯ 7:40ಕ್ಕೆ, ಗಂಟೆಗೆ 74 ಕಿಲೋಮೀಟರ್ ವೇಗದಲ್ಲಿ ಮರಳಿನ ಗಾಳಿ ಬೀಸುತ್ತಿತ್ತು. ಸ್ಥಳೀಯ ಭಾಷೆಯಲ್ಲಿ ಇದನ್ನು ‘ಶಮಾಲ’ ಎನ್ನುತ್ತಾರೆ. ಈ ಮರಳಿನ ಸುಂಟರಗಾಳಿ ಎದ್ದರೆ ಹಾಗೆಯೇ, ಯಾರದ್ದಾದರೂ ದಿಕ್ಕು
ತಪ್ಪಿಸುತ್ತದೆ. ಕೆಲವೇ ಮೀಟರ್ ದೂರದಲ್ಲಿ ಏನಿದೆ ಎನ್ನುವುದೂ ಕಾಣುವುದಿಲ್ಲ. ಅಂದು ಇದರ ಕೆನ್ನಾಲಗೆಗೆ ಸಿಕ್ಕಿದ್ದು ನಾಲ್ಕುನೂರು ಮೀಟರ್ ಉದ್ದ, ಅರವತ್ತು ಮೀಟರ್ ಅಗಲದ, ಸುಮಾರು ನಾಲ್ಕು ಫುಟ್ಬಾಲ್ ಮೈದಾನ ಸೇರಿದಷ್ಟು ಆಗುವ, ಅಮೆರಿಕದ ಎಂಪಾಯರ್ ಸ್ಟೇಟ್ ಕಟ್ಟಡವನ್ನು ಮಲಗಿಸಿ ಇಟ್ಟಂತೆ ಕಾಣುವ, ಟೈಟಾನಿಕ್ ಹಡಗಿನ ಎರಡು ಪಟ್ಟು ದೊಡ್ಡ ದಾದ, ಎವೆರ್ ಗಿವನ್ ಎಂಬ ಬಡಪಾಯಿ ಹಡಗು.
ಇದು ಕೇವಲ ಬಿರುಗಾಳಿಯಿಂದ ಆದದ್ದಲ್ಲ, ಮಾನವ ದೋಷವೂ ಇದೆ ಎಂಬ ಆಪಾದನೆ ಇದೆಯಾದರೂ, ತನಿಖೆಯ ನಂತರವೇ ಅದು ನಿರ್ಣಯವಾಗಬೇಕು. ಸದ್ಯಕ್ಕಂತೂ ಈಶಾನ್ಯ ದಿಕ್ಕಿನಿಂದ ಬೀಸಿದ ಮರಳ ಗಾಳಿ ನೌಕೆಯನ್ನು ಬಲಕ್ಕೆ ತಳ್ಳಿತು ಎನ್ನುವು ದನ್ನೇ ನಂಬಬೇಕು. ಸಣ್ಣ ಪುಟ್ಟ ಹಡಗಾದರೆ ಯಾರೂ ಅಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ ಸರಾಸರಿ ಇನ್ನೂರ ಹತ್ತು ಮೀಟರ್ ಅಗಲದ ಕಾಲುವೆಯಲ್ಲಿ, ಇಪ್ಪತ್ತು ಸಾವಿರ ಕಂಟೇನರ್ನಲ್ಲಿ ಒಂದು ಬಿಲಿಯನ್ ಡಾಲರ್ (ಸುಮಾರು ಏಳು ಸಾವಿರದ ಮುನ್ನೂರು ಕೋಟಿ ರುಪಾಯಿ) ಮೌಲ್ಯದ ಸರಕು ಹೊತ್ತ, ವಿಶ್ವದ ಅತಿ ದೊಡ್ಡ ಸರಕು ಸಾಗಣೆಯ ನೌಕೆಗಳಲ್ಲಿ ಒಂದು
ಎಂಬ ಹಿರಿಮೆಗೆ ಪಾತ್ರವಾದ ಹಡಗೊಂದು ಕಾಲುವೆಗೆ ಅಡ್ಡವಾಗಿ ನಿಂತಿತೆಂದರೆ ಹೇಗೆ? ಘಟನೆ ನಡೆದ ಅರ್ಧ ಗಂಟೆಯ ಒಳಗೆ ಅಗ್ನಿಶಾಮಕ ಮತ್ತು ತುರ್ತು ಪರಿಸ್ಥಿತಿ ನಿಭಾಯಿಸಲು ಇದ್ದ ನೌಕೆಗಳು ಸ್ಥಳಕ್ಕೆ ಬಂದು ತಲುಪಿದವಾದರೂ ಅದನ್ನು ತೆರವು ಗೊಳಿಸುವುದು ಅಷ್ಟೂ ಸುಲಭವಾಗಿರಲಿಲ್ಲ.
ಕಾರಣ, ಅದು ಹೊತ್ತು ನಿಂತ ತೂಕ ಬರೊಬ್ಬರಿ ಎರಡು ಲಕ್ಷ ಟನ್. ಅಂದರೆ ಸುಮಾರು ಎರಡು ಲಕ್ಷ ಕಾರು ತೂಗುವಷ್ಟು ತೂಕ.
ಹಡಗು ತೇಲುತ್ತಿದ್ದರೆ ದಿಕ್ಕು ತೋರಿಸುವುದು ಸುಲಭ, ಆದರೆ ಹೂತು ಹೋದ ಹಡಗಿಗೆ ದಿಕ್ಕು ತೋರಿಸುವುದಕ್ಕೆ ಇರುವುದು ಕೆಲವೇ ಆಯ್ಕೆಗಳು. ಮೊದಲನೆಯದಾಗಿ, ವಿಜ್ಞಾನದ ಲೆಕ್ಕಾಚಾರದಂತೆ, ಆ ಹಡಗಿನ ಮೇಲಿರುವ ತೂಕದ ಒಂದು ಮೂರಾಂಶ
ಭೂಮಿಗೆ ಹೊಂದಿಕೊಂಡಿದೆ ಎಂದರೂ ಅರವತ್ತಾರು ಸಾವಿರ ಟನ್ ಆಯಿತು. ಅದನ್ನು ಎಳೆಯಲು ಏನಿಲ್ಲವೆಂದರೂ ಅದರ ಅರ್ಧ ಸಾಮರ್ಥ್ಯವನ್ನು, ಅಂದರೆ ಮೂವತ್ತಮೂರು ಸಾವಿರ ಟನ್ ಬಳಸಬೇಕು.
ಅಷ್ಟು ದೊಡ್ಡ ಮಟ್ಟದ ಸಾಮರ್ಥ್ಯವಿರುವ ಟಗ್ ಬೋಟ್ಗಳು (ವಸ್ತುಗಳನ್ನು ಎಳೆಯಲು ಬಳಸುವ ನೌಕೆ) ಎಲ್ಲಿಯೂ ಇಲ್ಲ. ವಿಶ್ವದ ಅತಿ ಹೆಚ್ಚು ಸಾಮರ್ಥ್ಯದ ಟಗ್ ಬೋಟ್ ‘ಐಲೆಂಡ್ ವಿಕ್ಟರಿ’ 477 ಟನ್ ಎಳೆಯುವ ಸಾಮರ್ಥ್ಯ ಹೊಂದಿದೆ. ಅದನ್ನು
ಬಿಟ್ಟರೆ ‘-ರ್ ಸ್ಯಾಮ್ಸನ್’ ನೌಕೆ 420 ಟನ್ ಜಗ್ಗುವ ಸಾಮರ್ಥ್ಯವುಳ್ಳzಗಿದೆ. ಹಾಗಾದರೆ ಸಿಲುಕಿಕೊಂಡ ಹಡಗನ್ನು ಜಗ್ಗಲು ಇಂತಹ ಎಪ್ಪತ್ತರಿಂದ ಎಂಬತ್ತು ನೌಕೆಗಳು ಬೇಕು. ಅಷ್ಟು ನೌಕೆಗಳು ಒಟ್ಟಿಗೆ ನಿಲ್ಲುವಷ್ಟು ಅಲ್ಲಿ ಸ್ಥಳವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಈ ಎರಡೂ ಟಗ್ ಬೋಟ್ಗಳು ಇರುವುದು ಒಂದೊಂದೇ!
ಇನ್ನೊಂದು ಆಯ್ಕೆ, ಹಡಗು ಹೂತುಹೋದ ಜಾಗದ ಮಣ್ಣು ಅಗೆದು ಹಡಗನ್ನು ಬಿಡಿಸುವುದು. ಅದೂ ಅಷ್ಟು ಸುಲಭವಾಗಿರ ಲಿಲ್ಲ. ಬುಡದವರೆಗೆ ಅಗೆಯಬೇಕೆಂದರೆ ಅಗೆಯುವ ಯಂತ್ರ (ಎಕ್ಸ್ಕವೇಟರ್) ಹಡಗಿನಿಂದ ಸುಮಾರು ಮೂವತ್ತು ಮೀಟರ್ ದೂರ ನಿಂತು ಅಗೆಯಬೇಕಿತ್ತು. ಕಾರಣ ಹಡಗಿನ ಆಳ ಭೂಮಿಯೊಳಕ್ಕೆ ಹದಿನೈದು ಮೀಟರ್ ನಷ್ಟು, ಅಂದರೆ ಸುಮಾರು ನಾಲ್ಕು ಅಂತಸ್ತಿನ ಮನೆಯಷ್ಟು. ಮರಳಿನಲ್ಲಿ ನೇರವಾಗಿ ಅಗೆಯುವುದು ಸಾಧ್ಯವಿಲ್ಲ. ಅಗೆದಂತೆ ಮರಳು ಕುಸಿಯುವುದರಿಂದ
ಯಂತ್ರ ದೂರದಲ್ಲಿ ನಿಲ್ಲಬೇಕಿತ್ತು. ಇಲ್ಲವಾದರೆ ಅಗೆಯುವ ಯಂತ್ರವೇ ನೀರುಪಾಲಾಗುತ್ತದೆ.
ಜತೆಗೆ, ಅಷ್ಟು ದೂರ ನಿಂತು ಅಗೆಯುವ ಯಂತ್ರವೂ ಇಲ್ಲ. ಇನ್ನುಳಿದದ್ದು, ನೀರಿನಲ್ಲಿಯೇ ನಿಂತು ಹೂಳೆತ್ತುವ ಉಪಕರಣ ಬಳಸುವುದು. ಸಾಮಾನ್ಯವಾಗಿ ಇದನ್ನು ತಳದಲ್ಲಿದ್ದ ಮಣ್ಣನ್ನು ಅಗೆಯುವುದಕ್ಕೆ ಬಳಸುತ್ತಾರೆ. ಇದರಿಂದ ಅಕ್ಕ ಪಕ್ಕದ ಮಣ್ಣು ಅಗೆಯುವುದು ಕಷ್ಟದ ಕೆಲಸ. ಏನೇ ಆದರೂ ಈ ಹಡಗನ್ನು ಆದಷ್ಟು ಬೇಗ ಜಗ್ಗಲೇಬೇಕಿತ್ತು. ಅದಾಗಲೇ ಸುಮಾರು ನಾಲ್ಕು ನೂರ ಐವತ್ತು ಹಡಗುಗಳು ಎರಡೂ ಕಡೆಗಳಲ್ಲಿ ತಮ್ಮ ಮುಂದಿನ ಪ್ರಯಾಣದ ದಾರಿಗಾಗಿ ಕಾಯುತ್ತಿದ್ದವು.
ಒಂದು ಕಡೆ ಮರಳು ಅಗೆಯುವ ಕಾರ್ಯ ಆರಂಭವಾಯಿತು. ಜಪಾನಿನ ನಿಪ್ಪೊನ್ ಸಾಲ್ವೇಜ್ ಮತ್ತು ಸ್ಮಿತ್ ಸಾಲ್ವೇಜ್ ಎಂಬ ಡಚ್ ಸಂಸ್ಥೆ ಈ ಕಾರ್ಯದಲ್ಲಿ ಸಹಾಯಕ್ಕೆ ಬಂದವು. ಹೂಳೆತ್ತುವ ನೌಕೆಗಳೂ ಹಗಲಿರುಳೆನ್ನದೆ ಕೆಲಸ ಮಾಡಿದವು. ಅರ್ಧ
ಡಜನ್ನಷ್ಟು ಅಗೆಯುವ ಯಂತ್ರಗಳು ಹತ್ತು ದಿನದಲ್ಲಿ ಒಟ್ಟೂ ಮೂವತ್ತೆರಡು ಸಾವಿರ ಟನ್ ಮಣ್ಣನ್ನು ಅಗೆದು ತೆಗೆದಿದ್ದವು. ಒಂದು ಡಜನ್ನಷ್ಟು ಟಗ್ಬೋಟ್ಗಳು ಹಡಗನ್ನು ಜಗ್ಗಲು ಸಿದ್ದವಾದವು. ಅದೇ ಸಂದರ್ಭದಲ್ಲಿ ಅಲೆಗಳು ಉಬ್ಬರಿಸಿ ಬರುತ್ತದೆಂದು ಲೆಕ್ಕಹಾಕಿದ ತಜ್ಞರು ಅಂತೂ ಹಡಗನ್ನು ಮುಕ್ತಗೊಳಿಸುವಲ್ಲಿ ಯಶಸ್ವಿಯಾದರು.
ಇದಕ್ಕೆಲ್ಲ ನಾನು ಸಾಕ್ಷಿಯಾದೆ. ಇದರಿಂದ ಮನುಷ್ಯರು ಕಲಿಯಬೇಕಾದ ಒಂದು ಸಣ್ಣ ಪಾಠವಿದೆ ಎಂಬುದು ನನ್ನ ಅನಿಸಿಕೆ. ಪ್ರಯಾಣಕ್ಕೆ ಹೊರಟ ಎವೆರ್ ಗಿವೆನ್ ಹಡಗು ತಾನು ಈ ರೀತಿ ಸಂಕಷ್ಟದಲ್ಲಿ ಸಿಕ್ಕಿಕೊಳ್ಳುತ್ತೇನೆ ಎಂದು ಎಣಿಸಿರಲಿಕ್ಕಿಲ್ಲ.
ಯಾವುದೋ ಕಾರಣದಿಂದ ಅದು ಸಿಲುಕಿಕೊಳ್ಳಬೇಕಾಯಿತು. ಯಾರದ್ದೇ ಸಹಾಯ ದಿಂದ ಪ್ರಯಾಣ ಮುಂದುವರಿಯಿತು. ಮನುಷ್ಯನ ಜೀವನವೂ ಹಾಗೆಯೇ ಅಲ್ಲವೇ? ಮಾನವ ವರ್ಗದಲ್ಲಿ ‘ಬಾಳ ನೌಕೆ’ ಎಂದು ಮಾತಿಗೆ ಹೇಳುವುದಿದೆ ಎಂದು ಕೇಳಿದ್ದೇನೆ.
ಮನುಷ್ಯನ ಜೀವನದಲ್ಲಿಯೂ ಕೆಲವೊಮ್ಮೆ ಜೀವನ ನಿಂತೇ ಹೋಯಿತು ಎಂಬ ಅನುಭವ ಆಗುವುದಿದೆಯಂತೆ. ಕಾರಣ ಏನೂ
ಇರಬಹುದು. ಕರೋನಾ ಕಾಲದಲ್ಲಿ ಇದು ಸಾಕಷ್ಟು ಜನರ ಅನುಭವಕ್ಕೆ ಬಂದಿರಬಹುದು. ಆದರೆ ಕೆಲವು ಕಾಣುವ, ಕೆಲವು ಕಾಣದ ಕೈಗಳು ಸಹಾಯ ಮಾಡುತ್ತವೆ ಎಂಬ ನಂಬಿಕೆಯಿಂದ ಪಯಣವನ್ನು ಮುಂದುವರಿಸಬೇಕು. ಇದು ನನ್ನ ಅನುಭವದ
ಮಾತು.
ಇತಿ ನಿಮ್ಮ, ಸೂಯೆಜ್.