Sunday, 15th December 2024

ಕೃತಜ್ಞತೆಗಿಂತ ಅಭಿಮಾನ ದೊಡ್ಡದು

ದಾಸ್‌ ಕ್ಯಾಪಿಟಲ್‌

ಟಿ.ದೇವಿದಾಸ್‌

ಕೋವಿಡ್ ಸಂದರ್ಭದಲ್ಲಿ ಕೆಲಸ ಮತ್ತು ಸಂಬಳದ ಕುರಿತಾಗಿ ಚರ್ಚೆಗಳು ಹುಟ್ಟಿಕೊಂಡಿದ್ದು ಸಹಜವಾಗೇ ಅಚ್ಚರಿಯೇನಲ್ಲ. ಕೆಲಸವೇ ಇಲ್ಲದೆ ಸಂಬಳ ಕೊಡುವುದಾದರೂ ಹೇಗೆ ಸಾಧ್ಯ ಎಂಬುದು ಯಜಮಾನಿಕೆಯ ಪ್ರಶ್ನೆ.

ಇದು ಸರಿಯಾದುದೇ ಆಗಿದೆ. ಕೆಲಸ ಮಾಡಿದರೆ ಸಂಬಳ ಕೊಡಲೇಬೇಕು. ಕೆಲಸ ಮಾಡಿಕೊಂಡರಂತೂ ಸಂಬಳ ಕೊಡಲೇಬೇಕು. ಎರಡರಲ್ಲೂ ಔಚಿತ್ಯವಿದೆ. ನ್ಯಾಯವೂ ಇದೆ. ಏನೂ ಕೆಲಸವಿಲ್ಲದೆ ಅಥವಾ ಕೆಲಸವನ್ನೇ ಮಾಡಿಸಿಕೊಳ್ಳದೇ ಸಂಬಳ ಕೊಡುವುದಾದರೂ ಹೇಗೆ? ಆದಾಯವೇ ಇಲ್ಲದೆ ಖರ್ಚಿಗೆ, ಸಂಬಳಕ್ಕೆ ಹಣವನ್ನು ಹೊಂದಿಸುವುದಾದರೂ ಹೇಗೆ? ಇದು ಅತ್ಯಂತ ಬಿಕ್ಕಟ್ಟಿನ ಸಮಸ್ಯೆ.

ಪರಿಹಾರವಂತೂ ತೀರಾ ಕಷ್ಟ. ಆದರೆ ಕೆಲವೆಡೆ ಅನುಕರಣೀಯವೂ ಅನುಸರಣೀಯವೂ ಆದ ಶ್ಲಾಘ್ಯ ಕಾರ್ಯಗಳು ನಡೆದಿವೆ. ಅದೂ ಮುಖ್ಯವಾಗಿ ಕೆಲಸ ಮತ್ತು ಸಂಬಳದ ವಿಚಾರದಲ್ಲಿ. ಸರಕಾರಿ ಉದ್ಯೋಗದಲ್ಲಿದ್ದವರಿಗೆ ಕೆಲಸ ಕಡಿಮೆಯಾದರೂ ಸಂಬಳ ಕಡಿಮೆಯಾಗಲೇ ಇಲ್ಲ. ಆದರೆ, ಸರಕಾರದ ಯಾವುದೇ ಅನುದಾನವಿಲ್ಲದೆ ಒಂದು ಸಾಂಸ್ಥಿಕ ವ್ಯವಸ್ಥೆಯೊಳಗೆ ಸೇವೆ ಮತ್ತು ಉದ್ಯೋಗ ಭದ್ರತೆಯೊಂದಿಗೆ ಕೆಲವು ವರ್ಷದಿಂದ ದುಡಿಯುತ್ತಿರು ವವರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಅಂಥಾದ್ದೇನೂ
ಕೆಲಸವಿಲ್ಲದಿದ್ದರೂ ಅಂದರೆ ನಿರ್ದಿಷ್ಟವಾದ ಪ್ರಮಾಣದಲ್ಲಿ ಮಾತ್ರ ಕೆಲಸವಿದ್ದು, ಅವರ ಅಗತ್ಯವಿಲ್ಲದಿದ್ದರೂ ಕೆಲಸದಿಂದ
ತೆಗೆಯದೆ ಮೊದಲಿನಷ್ಟೇ ಸಂಬಳ ಕೊಟ್ಟು ಉಳಿಸಿಕೊಂಡ ಯಜಮಾನಿಕೆಯನ್ನು, ಸಂಸ್ಥೆಗಳನ್ನು ಕೋವಿಡ್ ಸಂದಿಗ್ಧ
ಪರಿಸ್ಥಿತಿಯಲ್ಲೂ ನೋಡಲು ಸಾಧ್ಯವಾಗಿದೆ.

ತನ್ನಲ್ಲಿ ದುಡಿಯುವವರನ್ನು ಅಗತ್ಯವಿಲ್ಲವೆಂಬ ಕಾರಣ ನೀಡಿ ಕೆಲಸದಿಂದ ತೆಗೆಯದೆ ಹಾಗೆ ಉಳಿಸಿಕೊಂಡು ಸಂಬಳವನ್ನೂ
ನೀಡಿದ್ದು ಯಜಮಾನಿಕೆಯ ಧರ್ಮ, ಸಾಂಸ್ಥಿಕ ಧರ್ಮ. ಸರಕಾರದ ಅನುದಾನವಿಲ್ಲದೆ ನಡೆಯುವ ಖಾಸಗಿ ಸಾಂಸ್ಥಿಕ ವ್ಯವಸ್ಥೆಯಲ್ಲಿ ದುಡಿಯುವವರಿಗೆ ಕೆಲಸದಲ್ಲಿ ನಿಯತ್ತಿನ ಹಂಗು ಇರಲೇಬೇಕಾಗುತ್ತದೆ. ಸರಕಾರದ ಉದ್ಯೋಗದಲ್ಲಿ ನಿಯತ್ತು ಎಂಬುದು ತೀರಾ ವೈಯಕ್ತಿಕ ವಾದುದು. ಸರಕಾರದ ಕೆಲಸ ದೇವರ ಕೆಲಸ ಎಂದು ನಿಜವಾದ ನಿಯತ್ತನ್ನು ಉಳಿಸಿಕೊಳ್ಳವವರು ಕೆಲವರು ಮಾತ್ರ. ಯಾಕೆಂದರೆ, ಕಡಿಮೆ ಪ್ರಮಾಣದಲ್ಲಿ ಕೆಲಸ ಇದ್ದಾಗಲೂ ಉದ್ಯೋಗಿಗಳನ್ನು ತೆಗೆಯದೆ ಅಂಥ ಸಂಸ್ಥೆಗಳು
ತನ್ನ ಸಾಂಸ್ಥಿಕ ಧರ್ಮವನ್ನು ಮೀರಲಿಲ್ಲ.

ತನ್ನಲ್ಲಿ ದುಡಿಯುವವರ ಬದುಕನ್ನು ಎತ್ತಿಹಿಡಿದಿದೆ. ಅದು ಔದ್ಯೋಗಿಕ ಯಜಮಾನಿಕೆಯಲ್ಲಿ ಸಾರ್ವಕಾಲಿಕ ಧರ್ಮವನ್ನು ತನ್ನಲ್ಲಿ ಉಳಿಸಿಕೊಂಡೇ ಇರುವುದರಿಂದ ತನ್ನ ಉದ್ಯೋಗಿಗಳಿಗೆ ಸಂಬಳವನ್ನು ಕೊಡಲು ಸಾಧ್ಯವಾಗಿದೆ.

ಇಸ್ಲಾಮಿನಲ್ಲಿ ಒಂದು ದೃಷ್ಟಿಕೋನ ಹೀಗಿದೆ: ಶ್ರಮಿಕನ ಶ್ರಮದ ಬೆವರು ಆರುವ ಮೊದಲು ಅವನ ಶ್ರಮದ ಫಲ (ಸಂಬಳ) ವನ್ನು ನೀಡಬೇಕು ಎಂದು. ಎಷ್ಟೋ ಖಾಸಗಿ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳು, ಪತ್ರಿಕೆಗಳು, ಟಿವಿಯವರು, ಆಸ್ಪತ್ರೆಗಳು, ಫೈನಾನ್ಸಿಯಲ್ ಆರ್ಗನೈಸೇಷನ್‌ಗಳು ಇಂಥ ಧರ್ಮವನ್ನು ಉಳಿಸಿಕೊಂಡು ತನ್ನ ಉದ್ಯೋಗಿಗಳನ್ನು ಇಂಥ ಕಡು ಸಂಕಷ್ಟ ಕಾಲದಲ್ಲಿ ಕೈ ಬಿಡಲಿಲ್ಲ. ಅವರ ಬದುಕನ್ನು ಮೂರಾಬಟ್ಟೆಯಾಗಿಸಲಿಲ್ಲ.

ಹಾಗಂತ ಸಂಬಳ ಪಡೆದ ಉದ್ಯೋಗಿಗಳಲ್ಲಿ ಕೃತಜ್ಞತೆಯ ಭಾವವಿರುವುದು ಸಹಜ. ಅಂಥ ಕೃತಜ್ಞತೆಯನ್ನು ಸಲ್ಲಿಸುವುದರ ಹಿಂದೆ ಒಂದು ಕುಯುಕ್ತಿಯ ಬುದ್ಧಿಯೂ ಇರುತ್ತದೆ. ಅದೇನೆಂದರೆ, ಕಡಿಮೆ ಪ್ರಮಾಣದ ಇನ್ನು ಮುಂದೆಯೂ ಕೆಲಸವಿರಲಿ ಎಂಬ ದುರಾಗ್ರಹದ ಉದ್ದೇಶವೂ ಇರುತ್ತದೆ. ಆದ್ದರಿಂದ ಕೃತಜ್ಞತೆ ಮುಖ್ಯವಲ್ಲ, ಮಹತ್ವವೂ ಅಲ್ಲ.

ಮೇಲಾಗಿ ಕೃತಜ್ಞತೆಯು ಕೇವಲ ಮಾತುಗಳಲ್ಲಷ್ಟೇ ವ್ಯಕ್ತವಾಗುತ್ತದೆ. ಆ ಹೊತ್ತಿಗಿನ ಪ್ರತಿಸ್ಪಂದನಾ ಭಾವ ಮಾತ್ರ ಇರುತ್ತದೆ. ಆದ್ದರಿಂದ ಅದರ ಆಯಸ್ಸು ಕಡಿಮೆ. ಸಂಸ್ಥೆಯ ಬಗ್ಗೆ ಸಂವೇದನಾ ಶೀಲತೆ ಕೂಡ ಕಡಿಮೆಯೇ ಇರುತ್ತದೆ. ಒಬ್ಬನಿಗೆ ನೀವೇನಾದರೂ ಸಹಾಯ ಮಾಡಿದರೆ ಆ ಸ್ವಲ್ಪ ಸಮಯದಲ್ಲಿ ಅಥವಾ ಒಂದಷ್ಟು ದಿನ ಅವನಲ್ಲಿರುವ ಕೃತಜ್ಞತೆಯ ಭಾವ ತಿರುಗಿ ಏನನ್ನಾದರೂ ಸಹಾಯ ಮಾಡಲು ಸಿದ್ಧವಿರುತ್ತದೆ. ಒಂದು ಬಗೆಯ ಚಡಪಡಿಕೆಯೂ ಇರುತ್ತದೆ.

ಆದರೆ ಅಭಿಮಾನ ಇರುವುದಿಲ್ಲ. ಅಭಿಮಾನವಿಲ್ಲದೆ ನಾವು ಆಂತರ್ಯದಲ್ಲಿ ಸಶಕ್ತವಾಗಿರಲು ಸಾಧ್ಯವಿಲ್ಲ. ಉದಾಹರಣೆಗೆ, ಪಂಚಭೂತಗಳ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ನಮ್ಮ ನಮ್ಮ ಅರ್ಹತೆಗೆ ಅನುಗುಣವಾಗಿ
ಬದುಕಿಗೊಂದು ಉದ್ಯೋಗ ಕೊಟ್ಟು ಬದುಕಿನ ಪ್ರೈಮ್ ಟೈಮನ್ನು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ನೆಲೆಯಲ್ಲಿ ನಮ್ಮನ್ನು ಉದ್ಧರಿಸಿ ಯಾವ ತೊಂದರೆಯೂ ಆಗದಂತೆ ನಮ್ಮನ್ನು, ನಮ್ಮನ್ನು ನಂಬಿಕೊಂಡಿದ್ದವರನ್ನು ಕಾಪಾಡುವ ಸರಕಾರದ ಬಗ್ಗೆ, ಖಾಸಗಿ ಸಂಘ ಸಂಸ್ಥೆಗಳ ಬಗ್ಗೆ, ಶಿಕ್ಷಣ ಸಂಸ್ಥೆಗಳ ಬಗ್ಗೆ, ಇನ್ನಿತರ ಬ್ಯಾಂಕ್ ಒಕ್ಕೂಟಗಳ ಬಗ್ಗೆಯೇ ನಿಯತ್ತು ಸದಾಕಾಲ ಇರಬೇಕು.

ಎಲ್ಲಿ ನಾವು ಉದ್ಯೋಗ ಮಾಡುತ್ತಿರುತ್ತೇವೆಯೋ ಅಲ್ಲಿ ನಮ್ಮ ನಿಯತ್ತಿರಬೇಕಾದುದು ಧರ್ಮವೂ ಅಹುದು, ಕರ್ತವ್ಯವೂ ಅಹುದು. ನಮ್ಮ ಕೆಲಸದ ಬಗ್ಗೆ ಒಂದು ಉನ್ನತವಾದ ನಿಷ್ಠೆ ಮತ್ತು ಗೌರವ, ಅಭಿಮಾನವನ್ನು ನಾವು ಜೀವನದಲ್ಲಿ ಜತನವಾಗಿ
ಉಳಿಸಿಕೊಳ್ಳಬೇಕು. ಯಾವಾಗ ನಮ್ಮ ಕೆಲಸದ ಬಗೆಗಿನ ಕನ್ವಿಕ್ಷನ್ ದೊಡ್ಡದಾಗಿರುತ್ತದೋ ಆಗ ನಮ್ಮ ಔದ್ಯೋಗಿಕ ಯಜಮಾನ ನಮ್ಮನ್ನು ಗುರುತಿಸುತ್ತಾನೆ. ಗುಣಗ್ರಾಹಿತ್ವ ವೆಂಬುದು ಯಜಮಾನಿಕೆಯ ದೊಡ್ಡ ಸಂಪತ್ತು.

ಬರಿಯ ತೋರಿಕೆಗೆ ಮಾತ್ರ ಔದ್ಯೋಗಿಕ ಯಜಮಾನನನ್ನು ಗೌರವಿಸಿ ಕೆಲಸದಲ್ಲಿ ಅನಿಷ್ಠರಾಗಿರುವುದು ಅನ್ನದ್ರೋಹ,
ಸ್ವಾಮಿದ್ರೋಹ, ನಂಬಿಕೆಯ ದ್ರೋಹವಾಗುತ್ತದೆ. ಲಾಕ್ ಡೌನ್ ಅಂಥ ಸಂದಿಗ್ಧ ಸಮಯದಲ್ಲಿ ಉಳಿತಾಯವೆಲ್ಲ ಖಾಲಿಯಾಗಿ ಬದುಕು ಬೀದಿಗೆ ಬಂದು ನಿಲ್ಲುವಂಥ ಪರಿಸ್ಥಿತಿಯಲ್ಲಿ ಯಾವ ಔದ್ಯೋಗಿಕ ಯಜಮಾನ ಕೆಲಸದಿಂದ ತೆಗೆಯದೆ ಅಥವಾ ಎಲ್ಲವೂ
ಸರಿಯಾದ ಮೇಲೆ ಬನ್ನಿ ಅಂತ ಹೇಳಿ ಮನೆಗೆ ಕಳಿಸದೆ ತನ್ನ ಉದ್ಯೋಗಿಗಳನ್ನು ಆದಷ್ಟೂ ಪ್ರಮಾಣದಲ್ಲಿ ಉಳಿಸಿಕೊಂಡು
ಯಥೋಚಿತವಾಗಿ ಸಂಬಳವನ್ನೂ ಕೊಟ್ಟು ಕಾಪಿಟ್ಟನೋ ಅವನಿಗೆ ತೋರಬೇಕಾದುದು ಕೇವಲ ಕೃತಜ್ಞತೆಯಲ್ಲ;
ಅಂತ ರಂಗದ ಭರಪೂರ ಅಭಿಮಾನ. ಕೃತಜ್ಞತೆ ಒದಗಿದ ಕಷ್ಟವನ್ನು ತಾಳಿಕೊಳ್ಳಲಾಗದೆ ಕಂಬನಿ ಸುರಿಸುವುದು ಮೂರ್ಖತ ನವೇನಲ್ಲ.

ಆದರೆ ಅದೇ ಕಷ್ಟವನ್ನು ಎದುರಿಸಿ ನಿಲ್ಲುವ ಶಕ್ತಿಯನ್ನಾಗಿ ಮಾಡಿಕೊಳ್ಳುವುದರ ಮೂಲಕ ವ್ಯಕ್ತಿತ್ವದ ಒಂದು ಅಂಶವಾಗಿ ಏರುಮುಖದ ಬೆಳವಣಿಗೆ ಯನ್ನು ರೂಢಿಸಿಕೊಳ್ಳುವ ಬೌದ್ಧಿಕ ಮತ್ತು ವೈಚಾರಿಕ ಪಕ್ವತೆ ನಮಗೆ ಅಷ್ಟು ಸುಲಭವಾಗಿ ಬರುವು ದಿಲ್ಲ. ಆದರೆ, ಲಾಕ್ ಡೌನ್ ಸಮಯ ಅಂಥ ಪಕ್ವತೆಯನ್ನು ನಮ್ಮಲ್ಲಿ ಬೆಳೆಯುವುದಕ್ಕೆ ಪೂರಕವಾಗಿ ಒದಗಿತ್ತು ಎಂಬುದು ನಿಸ್ಸಂಶಯ. ನೆಗೆಟಿವಿಟಿಯನ್ನು ಸ್ವಾರ್ಥವನ್ನು ದಮನ ಗೊಳಿಸಿಕೊಂಡು ಮತ್ತೊಬ್ಬರ ಕಷ್ಟಕ್ಕೆ ಎರವಾಗುವುದನ್ನು ಈ ಲಾಕ್ ಡೌನ್ ಕಲಿಸಿತು. ಕಲಿತವರು ಬದುಕನ್ನು ಸಾಧ್ಯವಾದಷ್ಟೂ ಚೆನ್ನು ಮಾಡಿಕೊಂಡರು.

ಕಷ್ಟವನ್ನು ಪರಿಹರಿಸಿಕೊಳ್ಳುವ ಗಟ್ಟಿತನವನ್ನು ಕಲಿತರು. ಕಲಿಯದವರು ದೂಷಣೆಯನ್ನು ಆರೋಪಿಸುವುದನ್ನು ರೂಢಿಸಿ ಕೊಂಡರು. ವ್ಯವಸ್ಥೆಯ ವಿರುದ್ಧ ಗೊಣಗಲು ಆರಂಭಿಸಿದರು. ಇಂಥ ಸಂದರ್ಭದಲ್ಲಿ ಗಟ್ಟಿತನದ ಬಲಿಷ್ಠ ಶಕ್ತಿಯನ್ನು ರೂಢಿಸಿ ಕೊಳ್ಳುವಲ್ಲಿ ನಮ್ಮ ಹಿರಿಯರ ಬದುಕು ಮಾರ್ಗದರ್ಶಕವಾಗಿಯೂ ಪ್ರೇರಕವಾಗಿಯೂ ಇತ್ತು ಎಂಬುದು ಸತ್ಯಸ್ಯ ಸತ್ಯ. ಅಭಿಮಾನ ಹುಟ್ಟುವುದು ಇಂಥ ಗಟ್ಟಿ ಶಕ್ತಿಯನ್ನು ಸಂಚಯ ಮಾಡಿಕೊಂಡವರಲ್ಲಿ.

ಹಾಗೆ ಸಂಚಯ ಮಾಡಿಕೊಳ್ಳುವಂತೆ ಪ್ರೇರಣೆ ನೀಡಿದವರಲ್ಲಿ. ತನ್ನ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಅಥವಾ
ಸಿಂಪಥಿಯನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿ ಅನ್ಯರನ್ನು ಹಂಗಿಸುವವರಲ್ಲಿ, ಟೀಕಿಸುವವರಲ್ಲಿ ಇಂಥ ಶಕ್ತಿಯಿರಲಾರದು. ಇವರು ಇನ್ನಷ್ಟು ದೌರ್ಬಲ್ಯವನ್ನು, ಮಾನಸಿಕ ಹಿಂಸೆಯನ್ನು, ಬದುಕಿನ ಕಷ್ಟ, ದುಃಖವನ್ನು ಎದುರಿಸಲಾಗದ ಹೇಡಿತನವನ್ನು ಅನ್ಯರಲ್ಲಿ ಬೆಳೆಸಿ ಪ್ರಚೋದಿಸುತ್ತಾರೆ. ಇಂಥವರಿಂದ ಅಂತರವನ್ನು ಕಾಯ್ದುಕೊಳ್ಳುವುದು ವ್ಯಕ್ತಿತ್ವದ ಬೆಳವಣಿಗೆಯ ದೃಷ್ಠಿ ಯಿಂದ ಅತೀ ಅಗತ್ಯ. ದುರ್ವ್ಯಸನಿಗಳಿಗಿಂತ ಇಂಥವರು ಬಲು ಅಪಾಯಕಾರಿ. ಪ್ರತಿಯೊಬ್ಬರೂ ತಮ್ಮ ವೈಚಾರಿಕ ವ್ಯಕ್ತಿತ್ವ ದಿಂದಲೇ ಹೊರ ಪ್ರಪಂಚಕ್ಕೆ ಕಾಣಿಸಿಕೊಳ್ಳಬೇಕು, ಹೊರತು ಭಾವನಾತ್ಮಕ ವ್ಯಕ್ತಿತ್ವ ದಿಂದಲ್ಲ. ಮಗುವನ್ನು ಪ್ರೀತಿಸಲೇಬೇಕು. ಆದರೆ ಅಪ್ಪಿ ಮುzಡುವುದು ಆ ಹೊತ್ತಿನ ಅಭಿವ್ಯಕ್ತಿಯಾಗುತ್ತದೆ.

ಇಂದು ವಿಚಾರವಿದೆ: ಸಂಬಳವನ್ನು ಕೊಡುವವನಿಗೆ ಉದ್ಯೋಗಿಯ ಶ್ರಮದ ಬಗ್ಗೆ ಎಚ್ಚರವಿರಬೇಕು. ಅವನಲ್ಲಿರುವ ಕಾಯಕ ನಿಷ್ಠೆ, ಶ್ರಮಗೌರವದ ಬಗ್ಗೆ ಅರಿವಿರಬೇಕು. ಸೋಮಾರಿಗಳನ್ನು, ಕೆಲಸಗಳ್ಳರನ್ನು ಗುರುತಿಸುವ ಬೌದ್ಧಿಕ ಜಾಣ್ಮೆಯಿರ ಬೇಕಾಗು ತ್ತದೆ. ಹತ್ತು ಜನ ಉದ್ಯೋಗಿಗಳು ದುಡಿಯುವಲ್ಲಿ ಐದು ಜನ ಮಾತ್ರ ಸಕ್ರಿಯವಾಗಿದ್ದು ಉಳಿದೈದು ಜನ ನಿಷ್ಕ್ರಿಯ ರಾಗಿದ್ದರೆ ಔದ್ಯೋಗಿಕವಾದ ಅಸಮತೋಲನ ಉಂಟಾಗುತ್ತದೆಂಬ ಎಂಬ ಎಚ್ಚರ ಯಾಜಮಾನ್ಯಕ್ಕಿರಬೇಕು.

ಕೆಲಸ ಮತ್ತು ಸಂಬಳದ ವಿಚಾರದಲ್ಲಿ ಹುಟ್ಟುವ ಅಸಮತೋಲನ ಸಾಂಸ್ಥಿಕ ನೆಲೆಯಲ್ಲಿ ದೀರ್ಘಕಾಲದ ಒಡಕನ್ನು ಸೃಷ್ಟಿಸು ತ್ತದೆ. ತರತಮವನ್ನು ಬೆಳೆಸುತ್ತ ಹೋಗುತ್ತದೆ. ಇದರಿಂದ ವ್ಯವಸ್ಥೆ ಶಿಥಿಲವಾಗುತ್ತ ಹೋಗುತ್ತದೆ. ಈ ಬಗೆಯ ಶೈಥಿಲ್ಯದ
ಪರಿಣಾಮ ತಕ್ಷಣಕ್ಕೆ ಗೊತ್ತಾಗಲಾರದು. ಉದಾಹರಣೆಗೆ ಈ ಕಥೆಯನ್ನು ನೋಡಿ. ಒಂದು ಪೆಡಂಭೂತದಂತಿರುವ ಆಲದ
ಮರವನ್ನು ಸಾವಿರ ಆನೆಗಳು ಎಳೆದವಂತೆ. ಹಲವು ದಿನಗಳಿಂದ ಪ್ರಯತ್ನ ಪಟ್ಟರೂ ಆಲದ ಮರವನ್ನು ಕೀಳಲು ಬಿಡಿ, ಅಲುಗಾಡಿಸಲು ಸಾಧ್ಯವಾಗಿಲ್ಲವಂತೆ.

ಕೆಲವು ವರ್ಷಗಳ ಅನಂತರ ಕಾಗೆಯೊಂದು ಅದೇ ಮರದ ತುದಿಯ ಟೊಂಗೆಯಲ್ಲಿ ಕುಳಿತ ಮಾತ್ರಕ್ಕೆ ಇಡಿಯ ಮರವೇ ಮಗುಚಿ
ಬಿತ್ತಂತೆ. ಅದು ಹೇಗೆಂದು ಕಾರಣವನ್ನು ತಿಳಿಯುವುದು ಕಷ್ಟವೇನಲ್ಲ! ಗೆದ್ದಲು ಹುಳುಗಳು ಆ ಮರದ ಬೇರುಗಳನ್ನು ಶೈಥಿಲ್ಯ ಗೊಳಿಸಿದ್ದ ಪರಿಣಾಮದಿಂದ ಆ ಮರ ಮಗುಚಿ ಬೀಳುವುದಕ್ಕೆ ಕಾರಣವಾಗಿತ್ತು. ಈ ತರತಮ ಭಾವ, ಅಸಮತೋಲನ ವೆಂಬುದು ಗೆದ್ದಲು ಹುಳುಗಳಂತೆ. ಇದು  ಕಥೆಯೆಂದು ಮೇಲ್ನೋಟಕ್ಕೆ ಕಂಡರೂ ಶೈಥಿಲ್ಯವೆಂಬುದು ಎಂಥ ದೊಡ್ಡ ಶಕ್ತಿಯನ್ನೂ ಅಲುಗಾಡಿಸಿ ಬಿಡುತ್ತದೆಂಬುದಕ್ಕೆ ಉಜ್ವಲವಾಗಿ ಕಾಣುತ್ತದೆ.

ಗುಂಪುಗಾರಿಕೆ, ಪಕ್ಷಪಾತ, ಮೇಲು ಕೀಳು, ಕೆಲಸದ ಹಂಚಿಕೆಯಲ್ಲಿ ತಾರತಮ್ಯ ಇವೆಲ್ಲ ಗೆದ್ದಲು ಹುಳುಗಳ ಹುಟ್ಟಿಗೆ ಕಾರಣವಾಗಿ ವ್ಯವಸ್ಥೆ ಅವನತಿಯ ಹಾದಿಯನ್ನು ಹಿಡಿಯಲು ಕಾರಣವಾಗುತ್ತದೆ. ಯಾವುದೇ ಪ್ರಭುತ್ವ ಅಥವಾ ವ್ಯವಸ್ಥೆಯಲ್ಲಿ ತಾರತಮ್ಯ ದಿಂದ ಹುಟ್ಟುವ ಶೈಥಿಲ್ಯವೆಂಬುದು ಯಾವ ಬಗೆಯಲ್ಲಿ ಕೆಡುಕನ್ನು ಹುಟ್ಟಿಸಿ ಅಂತ್ಯವನ್ನು ಮುಟ್ಟಿಸುತ್ತದೆ ಎಂಬುದು ಸುಲಭಕ್ಕೆ ಅರ್ಥವಾಗುವ ವಿಚಾರವಲ್ಲ. ತಕ್ಷಣಕ್ಕೆ ಅರಿವಾಗುವ ಸಂಗತಿಯೂ ಅಲ್ಲ. ಮತ್ತೆ ಇಲ್ಲಿಯೂ ಪ್ರಧಾನವಾಗುವುದು ವೈಚಾರಿಕ ತೆಯೇ. ತನ್ನ ಔದ್ಯೋಗಿಕ ಯಜಮಾನನಿಗೆ ಮೋಸ ಮಾಡಬಾರದು ಎಂಬ ಎಚ್ಚರವನ್ನು ಉದ್ಯೋಗಿ ಸದಾ ಹೊಂದಿರಬೇಕು.

ಇದು ಕೆಲಸದ ಬಗ್ಗೆಯಾಗಲೀ, ವ್ಯವಸ್ಥೆಯ ಆಂತರ್ಯದ ವಿಚಾರಕ್ಕಾಗಲೀ, ಪ್ರತಿ ಹಂತದಲ್ಲೂ ಗೌಪ್ಯತೆಯನ್ನು ಕಾಯ್ದುಕೊಳ್ಳು ವುದು ವ್ಯವಸ್ಥೆಯ ಒಟ್ಟೂ ನಡೆಯ ಸಮಷ್ಟಿ ಪ್ರಜ್ಞೆಯ ನೆಲೆಯಲ್ಲಿ ತುಂಬಾ ಮಹತ್ತ್ವದ್ದಾಗಿರುತ್ತದೆ. ಕೃತಜ್ಞತೆಗಿಂತ ಅಭಿಮಾನ ನಮ್ಮನ್ನು ಎತ್ತರಕ್ಕೆ ಒಯ್ಯುತ್ತದೆಂಬುದರಲ್ಲಿ ಸಂದೇಹವಿಲ್ಲ. ವ್ಯಕ್ತಿತ್ವದ ಒಂದಂಶವಾಗಿ ಅಭಿಮಾನ ಪಡುವುದನ್ನು ಅಭ್ಯಾಸ
ಮಾಡಿಕೊಳ್ಳುವುದು ವ್ಯಷ್ಟಿ-ಸಮಷ್ಟಿ ಹಿತವನ್ನು ತರುತ್ತದೆ. ನಿಷ್ಠೆ ಉದ್ಯೋಗದಾತನ ಮೇಲಿರಬೇಕು. ಯಾಜಮಾನ್ಯವೂ
ಅದಕ್ಕೆ ಗೌರವವನ್ನು ಕೊಡಬೇಕು.

ಮೇಲಾಗಿ ಇಬ್ಬರ ಗುಣೌದಾರ್ಯವೂ ಇದರಲ್ಲಿದೆ. ಎಲ್ಲರ ನೆಮ್ಮದಿಯೂ ಇದರಲ್ಲಿದೆ. ಹಾಗಂತ ಹುಚ್ಚು ಅಭಿಮಾನ ತರವಲ್ಲ. ಅದು ಸಾಮಾಜಿಕ ಶಾಂತಿಯನ್ನು ಹಾಳುಮಾಡುತ್ತದೆ. ಉಪಕಾರವನ್ನು ಪಡೆದವನು ಉಪಕೃತನ ಹೊಣೆಗಾರಿಕೆಯಿಂದ
ಜಾರಿಕೊಳ್ಳುವುದು ಹೀನ ಸಂಸ್ಕೃತಿಯನ್ನು, ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ.

ಕೊನೆಯ ಮಾತು: ಗೆಳೆಯನೊಬ್ಬ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿzನೆ. ಅವನಿಗೆ ಸಹಾಯವನ್ನು ಮಾಡಬೇಕಾಗಿರುವುದು ಕೃತಜ್ಞತೆಯ ಭಾವದಿಂದಲ್ಲ. ಬದಲಾಗಿ ಅಭಿಮಾನದಿಂದ. ಯಾಕೆಂದರೆ ಕೃತಜ್ಞತೆಯು ಯಾವತ್ತೂ ತೀಕ್ಷ್ಣವಾಗಿರುತ್ತದೆ. ಪ್ರತಿಸ್ಪಂದನೆಯ ವೇಗ ತೀವ್ರವಾಗಿರುತ್ತದೆ. ಋಣಸಂದಾಯವೇ ಮುಖ್ಯ ವಾಗಿರುತ್ತದೆ. ಆದರೆ ಅದು ಅಲ್ಪಾವಧಿಯಲ್ಲಿ ಕೊನೆಗೊಳ್ಳುತ್ತದೆ.

ಗೆಳೆಯ ಆರೋಗ್ಯದಲ್ಲಿದ್ದರೂ ಪ್ರತಿಸ್ಪಂದಿಸುವುದು ಸಾಧ್ಯವಾಗುವುದು ಅಭಿಮಾನವಿದ್ದಾಗ ಮಾತ್ರ. ಆದ್ದರಿಂದ ಬದುಕು ಕೊಟ್ಟವರನ್ನು, ಕಷ್ಟ ಕಾಲದಲ್ಲಿ ಬದುಕನ್ನು ಎತ್ತಿಹಿಡಿದವರನ್ನು ಕೃತಜ್ಞತೆಯಿಂದ ನೋಡದೆ, ಅಭಿಮಾನದಿಂದ ನೋಡಬೇಕು. ಈ ಅಭಿಮಾನ ಬದುಕಿನುದ್ದಕ್ಕೂ ಇರುವಂತದ್ದು. ಅದು ಥ್ಯಾಂಕ್ಸ್ ಎಂದು ಹೇಳಿಸಿ ಋಣ ಸಂದಾಯವಾಯಿತು ಎಂಬ ಭಾವವನ್ನು ಉದ್ದೀಪಿಸುವುದಿಲ್ಲ.