ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಕಳೆದೊಂದು ವರ್ಷದಿಂದ ದೇಶವಲ್ಲ ಇಡೀ ಪ್ರಪಂಚದಲ್ಲಿ ಏನೇ ಸುದ್ದಿಯಾದರೂ, ಕೊನೆಯಲ್ಲಿ ಕರೋನಾಕ್ಕೆ ಬಂದು ನಿಲ್ಲದೇ ಮುಗಿದಿಲ್ಲ. ಅಷ್ಟರ ಮಟ್ಟಿಗೆ ಆತಂಕವನ್ನು ಜನ ಮಾನಸದಲ್ಲಿ ಕರೋನಾ ಸೃಷ್ಟಿಸಿದೆ.
ಕಳೆದ ಕೆಲ ತಿಂಗಳಿನಿಂದ, ಅದರಲ್ಲಿಯೂ ನೂತನ ವರ್ಷ ಆರಂಭವಾದ ಬಳಿಕ ಸೋಂಕಿನ ಸಂಖ್ಯೆ ಕಡಿಮೆಯಾಗುತ್ತ ಸಾಗಿತ್ತು. ಭಾರತ ಹಾಗೂ ಕರ್ನಾಟಕದಲ್ಲಿ ಬರುತ್ತಿದ್ದ ಸೋಂಕಿತರ ಸಂಖ್ಯೆ, ಅನೇಕರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಎಲ್ಲವೂ ಸರಿ ಹೋಯಿತು ಎನ್ನುವ ಹೊತ್ತಿಗೆ ಪುನಃ ’ಎರಡನೇ ಅಲೆ ’ ಎದುರಾಗಿದೆ. ಆದರೆ ಈ ಅಲೆಯನ್ನು ಸರಕಾರಗಳು
ಗಂಭೀರವಾಗಿ ಪರಿಗಣಿಸಿಲ್ಲವೇ? ಎನ್ನುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದವರು ಮೌನವಾಗಿದ್ದಾರೆ.
ಹೌದು, ಈ ಮಾತನ್ನು ಹೇಳುವುದಕ್ಕೆ ಕಾರಣವಿದೆ. ಮೊದಲ ಅಲೆಯ ಕರೋನಾ ಸಮಯದಲ್ಲಿ ಸರಕಾರ, ಅದರ ಲ್ಲಿಯೂ
ಕರ್ನಾಟಕ ಸರಕಾರ ನಡೆದುಕೊಂಡ ರೀತಿ ಇಡೀ ದೇಶಕ್ಕೆ ಮಾದರಿಯಾಗಿತ್ತು. ಕೇಂದ್ರ ಸರಕಾರ ಲಾಕ್ಡೌನ್ ಹೇರುವ ಮೊದಲೇ, ಯಡಿಯೂರಪ್ಪ ಅವರು ಘೋಷಿಸಿ, ಗಡಿಗಳನ್ನು ಬಂದ್ ಮಾಡಿಕೊಂಡು, ವಿಮಾನ ಪ್ರಯಾಣಿಕ ರಿಗೆ ಪ್ರತ್ಯೇಕ ಕೋವಿಡ್ ಕೇರ್ಗಳನ್ನು ಆರಂಭಿಸಿ ಹಲವು ಕ್ರಮವಹಿಸಿದ್ದರು.
ಇದರಲ್ಲಿ ಯಾವುದೇ ಅಡ್ಡಮಾತಿಲ್ಲ. ಆದರೆ ಎರಡನೇ ಅಲೆಯ ಸಮಯದಲ್ಲಿ ಮಾತ್ರ, ಸರಕಾರ ತಗೆದುಕೊಳ್ಳುತ್ತಿರುವ ಕೆಲವು
‘ಲಾಜಿಕ್ ಇಲ್ಲದ’ ನಿರ್ಧಾರಗಳು ಜನರನ್ನು ಇಕ್ಕಟ್ಟಿಗೆ ಹಾಗೂ ಆತಂಕಕ್ಕೆ ದೂಡುತ್ತಿದೆ. ಹಾಗೆ ನೋಡಿದರೆ, ಕರ್ನಾಟಕದಲ್ಲಿ ಎರಡನೇ ಅಲೆ ಇರುವುದು ಖಚಿತವಾಗುತ್ತಿದ್ದಂತೆ, ಸಿಎಂ ಯಡಿಯೂರಪ್ಪ ಆದಿಯಾಗಿ ಸಚಿವ ಸಂಪುಟದ ಸದಸ್ಯರೆಲ್ಲ ‘ಟಫ್ ರೂಲ್ಸ್’ ಎನ್ನುವ ಹೇಳಿಕೆಯನ್ನು ಘೋಷಿಸಿದರು. ಆದರೆ ಈ ಕಠಿಣ ನಿಯಮ ಎಂದರೆ ಏನು ಎನ್ನುವ ಪ್ರಶ್ನೆಗೆ ಸರಕಾರ ವಾಗಲಿ,
ತಜ್ಞರ ಸಮಿತಿಯಾಗಲಿ ಸ್ಪಷ್ಟ ಹೇಳಿಕೆಗಳನ್ನು ನೀಡುತ್ತಿಲ್ಲ.
ಭಾರತದಲ್ಲಿ ಎರಡನೇ ಅಲೆ ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಕರ್ನಾಟಕದಲ್ಲಿ ವೇಗವಾಗಿ ಹಬ್ಬುತ್ತಿದೆ. ಆದ್ದರಿಂದ ಕೇಂದ್ರ ಸರಕಾರ, ಕಳೆದ ಬಾರಿಯಂತೆ ಇಡೀ ದೇಶಕ್ಕೆ ಒಂದೇ ನಿಯಮ ಮಾಡುವ ಬದಲು, ರಾಜ್ಯಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಗೈಡ್ಲೈನ್ಸ್ಗಳನ್ನು ಹೇರುವಂತೆ ಸೂಚನೆ ನೀಡಿತ್ತು. ಆದರೆ ಈ ಗೈಡ್ಲೈನ್ಸ್ ಹೇರುವ ವಿಷಯದಲ್ಲಿ ರಾಜ್ಯ ಸರಕಾರಗಳು ತಮಗಿಷ್ಟ ಬಂದಂತೆ ನಿರ್ಧಾರಗಳನ್ನು ತಗೆದುಕೊಂಡಿರುವುದೇ ಇದೀಗ ಸಮಸ್ಯೆಗೆ ಕಾರಣವಾಗಿರುವುದು.
ಕರ್ನಾಟಕದಲ್ಲಿ ಎರಡನೇ ಅಲೆ ಶುರುವಾಗಿ, ನಿತ್ಯ ಸೋಂಕಿತರ ಸಂಖ್ಯೆ ಮೂರು ಸಾವಿರ ದಾಟುತ್ತಿದ್ದಂತೆ, ಎಲ್ಲೆಡೆ ಲಾಕ್ಡೌನ್ ಕೂಗು ಕೇಳಿಬಂದಿತ್ತು. ಆದರೆ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹಾಗೂ ಲಾಕ್ಡೌನ್ನಿಂದ ಸಾರ್ವಜನಿಕರ ಮೇಲೆ ಆಗಬಹುದಾದ ಪರಿಣಾಮವನ್ನು ಗಮನಿಸಿ, ರಾಜ್ಯ ಸರಕಾರ ಈ ನಿರ್ಧಾರವನ್ನು ತಗೆದುಕೊಳ್ಳಲು ಈಗಲೂ ಹಿಂದೇಟು ಹಾಕುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಈಗಾಗಲೇ ವೀಕೆಂಡ್ ಲಾಕ್ಡೌನ್ ಹಾಗೂ ಇನ್ನಿತರೆ ದಿನಗಳಲ್ಲಿ ನಿಷೇದಾಜ್ಞೆಯನ್ನು ಹೇರಿದೆ. ಹಾಗೆ ನೋಡಿದರೆ, ಸದ್ಯದ ಪರಿಸ್ಥಿತಿ ಯಲ್ಲಿ ಮಹಾರಾಷ್ಟ್ರದ ರೀತಿ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ದಾಟಿಲ್ಲ.
ಆದ್ದರಿಂದ ಆ ಪರಿಸ್ಥಿತಿ ನಮ್ಮಲ್ಲಿ ಇಲ್ಲ ಎನ್ನುವ ವಾದವನ್ನು ಸರಕಾರ ಹಾಗೂ ಆಡಳಿತದಲ್ಲಿ ಕೂತಿರುವ ಕೆಲವರು ಹೇಳುತ್ತಿದ್ದಾರೆ. ಆದರೆ ಆ ಪರಿಸ್ಥಿತಿಗೆ ಹೋಗದಂತೆ ತಡೆಯಲು ಏನು ಮಾಡಬೇಕೆಂಬ ಬಗ್ಗೆ ಸ್ಪಷ್ಟ ನಿರ್ಧಾರಗಳನ್ನು
ತೆಗೆದುಕೊಳ್ಳದಿರುವುದು ಸಮಸ್ಯೆ. ನಿಯಂತ್ರಣ ಎಂದ ಕೂಡಲೇ, ಲಾಕ್ಡೌನ್ ಎನ್ನುವ ವಾದವನ್ನು ನಾನು ಒಪ್ಪುವುದಿಲ್ಲ. ಆದರೆ ಲಾಕ್ಡೌನ್ ಹೊರತು ಏನು ಮಾಡಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಬೇಕು ಎನ್ನುವುದು ನನ್ನ ವಾದ.
ಸರಕಾರದ ನಡೆಯ ಬಗ್ಗೆ ಅಕ್ಷೇಪವ್ಯಕ್ತಪಡಿಸಲು ಕಾರಣಗಳು ಹಲವಿದೆ. ಸರಕಾರ ಲಾಜಿಕ್ ರಹಿತವಾಗಿ ಯೋಚಿಸಿ ದಂತೆ, ಕರೋನಾ ಸಹ ನಾನು ಅಂದುಕೊಂಡ ಲಾಜಿಕ್ನಲ್ಲಿ ಹಬ್ಬುತ್ತಿದೆ ಎನ್ನುವ ಭ್ರಮೆಯಲ್ಲಿ ನಾವಿರುವುದು ಸಹ ಅಷ್ಟೇ ತಪ್ಪು. ಕರೋನಾ ಮಾನವ ಲಾಜಿಕ್ ಮೀರಿ ಯಾವ ರೀತಿ ಹಬ್ಬುತ್ತಿದೆ ಎನ್ನುವುದನ್ನು ಉದಾಹರಣೆಗಳನ್ನು ಮುಂದೆ ನೀಡುತ್ತೇನೆ. ಆದರೆ ರಾಜ್ಯ ಸರಕಾರ, ಕರೋನಾ ನಿಯಂತ್ರಣಕ್ಕೆ ತಗೆದುಕೊಂಡ ಕೆಲ ನಿರ್ಣಯಗಳನ್ನು ‘ಯೂಟರ್ನ್‘ ಪಡೆಯುವ ಮೂಲಕ ಯಾವ ರೀತಿ ಸಮಸ್ಯೆ ಸೃಷ್ಟಿಸುತ್ತಿದೆ ಎನ್ನುವುದನ್ನು ಹೇಳುತ್ತೇನೆ.
ಎರಡನೇ ಅಲೆ ಇರುವುದು ಖಚಿತವಾಗುತ್ತಿದ್ದಂತೆ, ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬರುವ ಪ್ರತಿಯೊಬ್ಬರು ಕಡ್ಡಾಯವಾಗಿ ಕರೋನಾ ನೆಗೆಟಿವ್ ಫಲಿತಾಂಶವನ್ನು ತಗೆದುಕೊಂಡು ಬರಬೇಕು ಎನ್ನುವ ಆದೇಶವನ್ನು ಹೊರಡಿಸಿತ್ತು. ಆದರೆ ಆ ಆದೇಶ ಜಾರಿಗೆ ಬರುವುದು, ಆದೇಶ ಹೊರಡಿಸಿದ ಸರಿಸುಮಾರು ನಾಲ್ಕೈದು ದಿನಗಳ ಬಳಿಕ ಎಂದು ಹೇಳಿದರು. ಅಂದರೆ, ಆ ನಾಲ್ಕೈದು ದಿನದ ಅವಧಿಯಲ್ಲಿ ಹೊರರಾಜ್ಯದಿಂದ ಬರುವ ಯಾರಿಗೂ ಕರೋನಾ ಇರುವುದಿಲ್ಲ ಅಥವಾ ಆ ಅವಧಿಯಲ್ಲಿ ಬಂದರೆ ಕರೋನಾ ಹಬ್ಬುವುದಿಲ್ಲ ಎನ್ನುವ ಯಾವುದಾದರೂ ಫಾರ್ಮುಲಾ ಸರಕಾರಕ್ಕೆ ಸಿಕ್ಕಿತ್ತೇ? ಕರೋನಾದಿಂದ ಸುರಕ್ಷಿತವಾಗಿರಲು ಜನರು ಕಡ್ಡಾಯ ವಾಗಿ ಮಾಸ್ಕ್ ಧರಿಸಬೇಕು.
ಇಲ್ಲದಿದ್ದರೆ ಇಂತಿಷ್ಟು ದಂಡ ವಿಧಿಸುವುದಾಗಿ ಸರಕಾರ ಘೋಷಣೆ ಮಾಡಿತ್ತು. ಇದಿಷ್ಟೇ ಅಲ್ಲದೇ, ಮದುವೆ ಸಮಾರಂಭಕ್ಕೆ 200ಕ್ಕಿಂತ ಹೆಚ್ಚು ಜನ ಸೇರಬಾರದು, ಅಂತಿಮ ಸಂಸ್ಕಾರಕ್ಕೆ 50ರಿಂದ 100, ಇತರ ಕಾರ್ಯಕ್ರಮಗಳಿಗೆ ನೂರು ಮಂದಿ, ಧಾರ್ಮಿಕ ಕಾರ್ಯ ಕ್ರಮಗಳಿಗೆ ಹೆಚ್ಚು ಜನ ಸೇರುವಂತಿಲ್ಲ. ಹಬ್ಬ-ಹರಿದಿನಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳಬೇಕು. ಹೀಗೆ ಹಲವು ಮಾರ್ಗ ಸೂಚಿಗಳನ್ನು ನೀಡಿದರು. ಇದರಲ್ಲಿ ಯಾವುದೇ ಮಾರ್ಗ ಸೂಚಿಯನ್ನು ಮೀರಿದರೂ, ವಿವಿಧ ಸ್ತರದ ದಂಡವನ್ನು ವಿಧಿಸುವುದಾಗಿ ಹೇಳಿದ್ದರು.
ಆದರೆ ಇಷ್ಟೆಲ್ಲ ಕಠಿಣ ಮಾರ್ಗ ಸೂಚಿ ರೂಪಿಸಿದ್ದ ಸರಕಾರ, ರಾಜಕೀಯ ಸಮಾವೇಶ, ರ್ಯಾಲಿಗಳನ್ನು ಮಾತ್ರ ಪ್ರಾಯೋಗಿಕವಾಗಿ ಸೇರಿಸಿಲ್ಲ (ಏಕೆಂದರೆ, ರಾಜಕೀಯ ಸಮಾವೇಶಗಳಿಗೆ ಪ್ರತ್ಯೇಕ ಮಾರ್ಗಸೂಚಿಯಿದೆ. ಅದು ಪಾಲನೆಯಾಗುತ್ತಿಲ್ಲ.). ರಾಜ್ಯ
ಅಥವಾ ರಾಷ್ಟ್ರದ ವಿವಿಧ ಭಾಗದಲ್ಲಿ ನಡೆಯುತ್ತಿರುವ ನಾವಣಾ ಸಮಾವೇಶಗಳನ್ನು ನೋಡಿದರೆ, ಕರೋನಾ ಜಗತ್ತಿನಲ್ಲಿಯೇ ಇಲ್ಲವೇನೋ ಎನ್ನುವ ರೀತಿ ಕಾಣಿಸುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಕಾರಿನಲ್ಲಿ ಹೋಗುವಾಗ ಮಾಸ್ಕ್ ಹಾಕಿಲ್ಲವೆಂದು ದಂಡ ವಿಽಸುವ ಮಾರ್ಷಲ್ಗಳು, ರಾಜಕೀಯ ಸಮಾವೇಶದಲ್ಲಿ ಸಾವಿರಾರು ಮಂದಿ ಮಾಸ್ಕ್ ಧರಿಸದೇ ಸೆಲಿಗೆ ಪೋಸ್ ಕೊಟ್ಟರು ಯಾವುದೇ ದಂಡ ವಿಧಿಸಲ್ಲ.
ಎಲ್ಲಿಯಾದರೂ ರಾಜಕೀಯ ರ್ಯಾಲಿಯಲ್ಲಿ ಕರೋನಾ ಬರುವುದಿಲ್ಲ ಎನ್ನುವ ಅಘೋಷಿತ ನಿಯಮ ಮಾಡಿಕೊಂಡಿದೆಯೇ ಎನ್ನುವ ಅನುಮಾನ ಹುಟ್ಟುತ್ತದೆ. ಇನ್ನು ಸರಕಾರ ಕರೋನಾ ಮಾರ್ಗಸೂಚಿ ಹೆಸರಲ್ಲಿ ದಿನಕ್ಕೊಂದು ನಿರ್ಧಾರ ತಗೆದುಕೊಳ್ಳು ತ್ತಿದೆ. ಮೂರು ದಿನದ ಹಿಂದಷ್ಟೇ ಚಿತ್ರಮಂದಿರದಲ್ಲಿ ಶೇ.100ರಷ್ಟು ಆಸನಕ್ಕೆ ಅವಕಾಶವಿಲ್ಲ. ಜಿಮ್ಗಳ ಸ್ಥಗಿತಗೊಳಿಸಲು ಆದೇಶ ಹೊರಡಿಸಿತ್ತು. ಆದರೆ ಚಿತ್ರಮಂದಿರಗಳನ್ನು ಶೇ.50ರಷ್ಟು ಸೀಮಿತಗೊಳಿಸಿದರೆ, ‘ನಷ್ಟ’ವಾಗುತ್ತದೆ ಎಂದು ನಟ ಪುನೀತ್
ರಾಜ್ಕುಮಾರ್ ಮೊದಲು ಶುರುಮಾಡಿದರು.
ಪುನೀತ್ ನಟಿಸಿರುವ ‘ಯುವರತ್ನ’ ಚಿತ್ರ ತೆರೆಕಂಡ ಮರುದಿನವೇ ಈ ರೀತಿಯ ಆದೇಶದಿಂದ ನಮಗೆ ಸಮಸ್ಯೆಯಾಗುತ್ತದೆ ಎಂದರು. ಈ ವಾದವನ್ನು ಚಿತ್ರಮಂಡಳಿ ಸೇರಿದಂತೆ ಸ್ಯಾಂಡಲ್ವುಡ್ ಮಂದಿ ಸಹ ಒಪ್ಪಿದರು. ಇದಾಗುತ್ತಿದ್ದಂತೆ, ಪುನೀತ್ ಅವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತೆರವುಗೊಳಿಸುವಂತೆ ಮನವಿ ಮಾಡಿದರು. ಅದಕ್ಕೆ ಒಪ್ಪಿ, ಏ.೭ರವರೆಗೆ
ಚಿತ್ರಮಂದಿರಗಳನ್ನು ಹೌಸ್ ಫುಲ್ ಮಾಡಲು ಅವಕಾಶ ನೀಡಿದೆ. ಅಂದರೆ ಏ.೭ರವರೆಗೆ ಚಿತ್ರಮಂದಿರದಲ್ಲಿ ಕರೋನಾ
ಸೋಂಕು ಹೋಗುವುದಿಲ್ಲ.
ಏಳನೇ ತಾರೀಕಿನ ಬಳಿಕ ಚಿತ್ರ ಮಂದಿರದಿಂದ ಸೋಂಕು ಹಬ್ಬುವ ಸಾಧ್ಯತೆಯಿರುತ್ತದೆಯೇ ಎನ್ನುವ ಪ್ರಶ್ನೆಗೆ ಸರಕಾರವೇ ಉತ್ತರಿಸಬೇಕು. ಯುವರತ್ನ ಚಿತ್ರಕ್ಕೆ ಹಾಕಿದ ಬಂಡವಾಳ ನಷ್ಟವಾಗಬಾರದು ಎನ್ನುವ ಕಾರಣಕ್ಕೆ, ಏ.೭ರವರೆಗೆ ಹೌಸ್ ಫುಲ್ಗೆ ಅವಕಾಶ ನೀಡಿರುವ ಸರಕಾರವಾಗಲಿ ಅಥವಾ ಹಠಕ್ಕೆ ಬಿದ್ದು ಈ ಆದೇಶ ಮಾಡಿಸಿರುವ ಯುವರತ್ನ ಚಿತ್ರ ತಂಡವಾಗಲಿ, ಚಿತ್ರ
ನೋಡಲು ಬಂದು ಸೋಂಕು ಹಬ್ಬಿಸಿಕೊಂಡರೆ ಆ ವ್ಯಕ್ತಿಗೆ ಏನಾದರೂ ವಿಮೆ ನೀಡುವರೇ? ಥಿಯೇಟರ್ಗಳಿಗೆ ಹೌಸ್ ಫುಲ್ಗೆ ಅವಕಾಶ ನೀಡುತ್ತಿದ್ದಂತೆ, ಜಿಮ್ನವರು ತಮಗೂ ಜಿಮ್ ಆರಂಭಿಸಲು ಅವಕಾಶ ನೀಡಬೇಕು ಎನ್ನುವ ಮನವಿ ಸಲ್ಲಿಸಿದೆ.
ಇದಕ್ಕೂ ಸರಕಾರ ‘ಒಕೆ’ ಎಂದು ನಿರ್ಬಂಧವನ್ನು ತೆರವುಗೊಳಿಸಿದೆ. ಇದೇ ರೀತಿ ರಿಯಾಯಿತಿ, ವಿನಾಯಿತಿ ಕೇಳಿದವರಿಗೆಲ್ಲ ಅವಕಾಶ ನೀಡಿದರೆ, ಟಫ್ ರೂಲ್ಸ್ ಎನ್ನುವ ಪದ ಬಳಕೆಯ ಅಗತ್ಯವಾದರೂ ಏನಿದೆ ಎನ್ನುವುದು ಅನೇಕರ ಪ್ರಶ್ನೆ. ಇನ್ನು ಸರಕಾರದ ಎಡವಟ್ಟು ತೀರ್ಮಾನಗಳು ಒಂದೆಡೆ ಯಾದರೆ, ಕರೋನಾ ಸಹ ನಾವು ಅಂದುಕೊಂಡಂತೆ ಹಬ್ಬುತ್ತಿಲ್ಲ ಎನ್ನುವುದನ್ನು ಒಪ್ಪಬೇಕು. ಇಷ್ಟು ದಿನ ಒಮ್ಮೆ ಕರೋನಾ ಬಂದು ಬಿಟ್ಟರೆ, ಪುನಃ ಮರುಕಳಿಸುವುದಿಲ್ಲ. ಬಂದರೂ ಕೇವಲ
18ರಷ್ಟು ಮಂದಿಗೆ ಮಾತ್ರ ಬರುತ್ತದೆ. ಮೊದಲನೇ ಅಲೆಯಂತೆ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವುದಿಲ್ಲ.
ಇನ್ನು ಭಾರತದಲ್ಲಿ ಈಗಾಗಲೇ ಸಮುದಾಯಕ್ಕೆ ಕರೋನಾವನ್ನು ಎದುರಿಸಲು ಶಕ್ತಿ ಬಂದಿದೆ. ಆದ್ದರಿಂದ ಕರೋನಾಕ್ಕೆ ಹೆದರುವ
ಆತಂಕವಿಲ್ಲ ಎನ್ನುವ ಮಾತುಗಳನ್ನು ಅನೇಕರು ಆಡಿದ್ದರು. ಆದರೆ ಇದೀಗ ಈ ಎಲ್ಲವೂ ಉಲ್ಟಾ ಹೊಡೆಯುತ್ತಿದೆ. ತಜ್ಞರು
ಹೇಳಿರುವಂತೆ ಎರಡನೇ ಅಲೆಯಲ್ಲಿ ಸೋಂಕಿತರು ಮೃತಪಡುವ ಸಂಖ್ಯೆ ಕ್ಷೀಣಿಸಿದ್ದರೂ, ಕೆಲವರು ಸತ್ತರೂ ಅದು ‘ಲಾಸ್’ ಅಲ್ಲವೇ? ಇನ್ನು ಬಹುತೇಕರು ಲಸಿಕೆ ಸಿಗುತ್ತಿದ್ದಂತೆ, ಕರೋನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಜಯ.
ವಿಶ್ವವನ್ನು ಕರೋನಾದಿಂದ ಭಾರತ ಕಾಪಾಡಿದೆ ಎನ್ನುವ ಮಾತನ್ನು ಆಡಿದರು. ಆದರೆ ಲಸಿಕೆ ತಗೆದುಕೊಂಡ ಬಳಿಕ ಕರೋನಾ ಬರುವುದಿಲ್ಲ ಎನ್ನುವುದು ತಪ್ಪು. ಇಲ್ಲಿ ಎರಡು ಅಂಶವನ್ನು ಗಮನಿಸಬೇಕು. ಕರೋನಾ ಲಸಿಕೆಯನ್ನು ಎರಡು ಹಂತದಲ್ಲಿ ಪಡೆಯಬೇಕಿದೆ. ಮೊದಲ ಡೋಸ್ ಪಡೆದ ಬಳಿಕ ಆರರಿಂದ ಎಂಟು ವಾರದ ಬಳಿಕ ಮತ್ತೊಂದು ಡೋಸ್ ಪಡೆಯಬೇಕು. ಎರಡನೇ ಡೋಸ್ ಪಡೆದ 23 ದಿನಗಳ ಬಳಿಕವೇ ಸಂಪೂರ್ಣ ಸುರಕ್ಷಿತ ಎನ್ನುವ ವಾದವನ್ನು ತಜ್ಞರು ಮಂಡಿಸಿದ್ದರು. ಅಂದರೆ ಲಸಿಕೆ ಪಡೆಯಲು ಆರಂಭಿಸಿದ ಬಳಿಕ ಸುಮಾರು ನಾಲ್ಕೈದು ತಿಂಗಳು ಎಚ್ಚರಿಕೆ ಇಂದ ಇರಬೇಕು.
ಆದರೆ ಚಾಮರಾಜನಗರದ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರ ಪ್ರಕರಣದಲ್ಲಿ ಇದು ಸುಳ್ಳಾಗಿದೆ. ಅವರು ಕರೋನಾ ಲಸಿಕೆಯ ಮೊದಲನೇ ಹಾಗೂ ಎರಡನೇ ಡೋಸ್ ಅನ್ನು ಪಡೆದು, 23 ದಿನ ಪೂರ್ಣಗೊಂಡಿ ದ್ದರೂ ಪುನಃ ಕರೋನಾ ಸೋಂಕು
ದೃಢಪಟ್ಟಿದೆ! ಅಂದರೆ, ಲಸಿಕೆಯಿಂದಲೂ ಕರೋನಾವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ವಾದಕ್ಕೆ ಪುಷ್ಟಿ ಸಿಕ್ಕಿದೆ. ಈ ರೀತಿ ಕರೋನಾ ಕಾಣಿಸಿಕೊಂಡ ದಿನದಿಂದ ತಜ್ಞರೊಂದು ಕಂಡುಹಿಡಿದರೆ, ಅದಕ್ಕೆ ಮತ್ತೊಂದು ಸವಾಲನ್ನು ಈ ವೈರಾಣು ಹಾಕುತ್ತಿದೆ.
ಕಳೆದೊಂದು ವರ್ಷದಲ್ಲಿ ಸುಮಾರು 38ಕ್ಕೂ ಹೆಚ್ಚು ಮ್ಯೂಟೆಟೆಡ್ ವೈರಸ್ ಇರುವುದು ದೃಢಪಟ್ಟಿದೆ. ಹೀಗಿರುವಾಗ ಯಾವ ಲಾಜಿಕ್ ಬಳಸಬೇಕು ಎನ್ನುವ ಗೊಂದಲವಿದೆ. ಅಂದ ಮಾತ್ರಕ್ಕೆ ಕರೋನಾ ಲಸಿಕೆ ಕೆಲಸ ಮಾಡುವುದೇ ಇಲ್ಲ ಎನ್ನುವುದು ತಪ್ಪು. ಕರೋನಾ ಲಸಿಕೆ ಶೀಲ್ಡ್ ರೀತಿ ನಮ್ಮ ದೇಹವನ್ನು ಕಾಪಾಡುತ್ತದೆ. ಆದ್ದರಿಂದ ಕರೋನಾ ಲಸಿಕೆಯ ಅಭಿಯಾನಕ್ಕೆ ಇನ್ನಷ್ಟು ವೇಗ ಸಿಗಬೇಕಿದೆ. ಇದರೊಂದಿಗೆ ಜನರು ಜಾಗೃತರಾಗಿರಬೇಕಿದೆ. ಒಂದು ಕಡೆ ಕರೋನಾ ವಿಜ್ಞಾನಿಗಳ ಸಂಶೋಧನೆಗೆ ನಿಲುಕದಂತೆ ಹಬ್ಬುತ್ತಿದ್ದರೆ, ಅದರ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಸರಕಾರಗಳು ‘ಕೆಲವರ’ ಅಥವಾ ’ಕೆಲ’ ಅಂಶಗಳಿಗೆ ಕಟ್ಟುಬಿದ್ದು, ಎಲ್ಲವರನ್ನು
ತೆರೆದಿಟ್ಟು ಕೊಂಡಿದೆ.
ಇದಿಷ್ಟೆ ಅಲ್ಲದೇ ದಿನಕ್ಕೊಂದು ತೀರ್ಮಾನ, ದಿನಕ್ಕೊಂದು ಆದೇಶ ಎನ್ನುವ ಮೂಲಕ ರಾಜ್ಯದ ಜನರನ್ನು ಗೊಂದಲಕ್ಕೆ ಸಿಲುಕಿಸಬಾರದು. ಜನರ ಆರೋಗ್ಯದ ದೃಷ್ಟಿಯಿಂದ ಸರಕಾರ ಒಮ್ಮೆ ನಿರ್ಧಾರ ತಗೆದುಕೊಂಡರೆ, ಯೂಟರ್ನ್ ಪಡೆಯುವ ಸಂಪ್ರದಾಯ ಕೈಬಿಡಲಿ. ಅಂತಿಮವಾಗಿ, ನಿಮ್ಮ ರಾಜಕೀಯ ಕ್ಕಾಗಿ ನಡೆಯುವ ಕಾರ್ಯಕ್ರಮಗಳಲ್ಲಿಯೂ ಕರೋನಾ ಹಬ್ಬುತ್ತದೆ
ಎನ್ನುವುದು ಎಲ್ಲ ರಾಜಕಾರಣಿಗಳ ಮನಸಿನಲ್ಲಿದ್ದರೆ ಅರ್ಧ ಸಮಸ್ಯೆ ಇತ್ಯರ್ಥವಾದಂತೆ.