ಅನಿಸಿಕೆ
ಮೋಹನದಾಸ ಕಿಣಿ, ಹವ್ಯಾಸಿ ಬರಹಗಾರ
ಎಲ್ಲೋ ಓದಿದ ನೆನಪು: ಜೇಡ ಬಲೆ ಕಟ್ಟುತ್ತದೆ (ಕಾನೂನು). ಬಲಿಷ್ಠರು (ಹಣ- ಅಧಿಕಾರ) ತಪ್ಪಿಸಿಕೊಂಡರೆ, ದುರ್ಬಲರು ಸಿಕ್ಕಿ ಬೀಳುತ್ತಾರೆ!
ಇದು ಇಂದಿನ ಸಾಮಾಜಿಕ ವ್ಯವಸ್ಥೆಗೆ ಸರಿಯಾಗಿ ಹೊಂದುವಂತಿದೆ. ಇಂದು ಸಾಮಾಜಿಕ ಸ್ವಾಸ್ಥ್ಯ ಇಷ್ಟರಮಟ್ಟಿಗೆ ಕುಲಗೆಟ್ಟು ಹೋಗಲು ಪ್ರಮುಖ ಕಾರಣ ಪ್ರತಿಯೊಂದು ಕ್ಷೇತ್ರದಲ್ಲೂ ರಾಜಕೀಯ ಹಸ್ತಕ್ಷೇಪ. ಇದೆಲ್ಲದರಲ್ಲೂ ಇರುವ ಏಕೈಕ ಸಮಾನತೆ ಯೆಂದರೆ (ಬೆರಳೆಣಿಕೆಯಷ್ಟು ಜನರನ್ನು ಹೊರತುಪಡಿಸಿ) ಇಂತವರು ಎಲ್ಲಾ ಪಕ್ಷಗಳಲ್ಲಿರುವುದು!
ಉಂಡೂ ಹೋದ ಕೊಂಡೂ ಹೋದ ಚಲನಚಿತ್ರದ ಕಥೆ ಹೀಗಿದೆ. ನಿರುದ್ಯೋಗಿಯೊಬ್ಬ (ಅನಂತ ನಾಗ್) ಕುಗ್ರಾಮವೊಂದಕ್ಕೆ ಬಂದು, ತಾನು ವಿದೇಶಿ ಹಸುಗಳನ್ನು ವಿತರಿಸುವ ಸರಕಾರದ ಯೋಜನೆ ಅಂಗವಾಗಿ ಸಮೀಕ್ಷೆ ನಡೆಸಲು ಬಂದಿರುವುದಾಗಿ ಪ್ರಚಾರ ಮಾಡುತ್ತಾನೆ.
ಹಳ್ಳಿಯ ಮುಗ್ಧ ಜನರು ಇದನ್ನು ನಂಬಿ, ಯೋಜನೆ ಸದಸ್ಯತ್ವ ಶುಲ್ಕವಾಗಿ, ಹಸುವಿಗೆ ಇಷ್ಟು ಎಂಬಂತೆ ಪಾವತಿ ಮಾಡುತ್ತಾರೆ.
ಇದರ ಬಗ್ಗೆ ತಿಳಿದುಕೊಂಡ ಸ್ಥಳೀಯ ಶಾಸಕ, ಅಸ್ತಿತ್ವದಲ್ಲೇ ಇಲ್ಲದ ಯೋಜನೆ ಯುಕ್ತಾಯುಕ್ತತೆ ಬಗ್ಗೆಪರಿಶೀಲನೆ ಕೂಡಾ ಮಾಡದೆ ಇದೊಂದು ಕ್ರಾಂತಿಕಾರಿ ಯೋಜನೆಯಾಗಿದ್ದು ಅದು ಆತನ ಮುತುವರ್ಜಿಯಿಂದ ಬಂದ ಯೋಜನೆಯೆಂದು ಬಡಾಯಿ ಕೊಚ್ಚಿಕೊಳ್ಳುತ್ತಾನೆ.
ಕೊನೆಗೊಮ್ಮೆ ಸಮೀಕ್ಷೆ ಮುಗಿಯಿತು, ಕೆಲವೇ ದಿನಗಳಲ್ಲಿ ವಿದೇಶಿ ಹಸು ಬರುತ್ತದೆ ಎಂಬ ಆಶ್ವಾಸನೆ ನೀಡಿ ಬಸ್ಸು ಹತ್ತಿ ನಗರಕ್ಕೆೆ ಹೋಗುತ್ತಾನೆ. ತಿಂಗಳುಗಳೇ ಕಳೆದರೂ ಹಸು ಬಾರದಿದ್ದಾಗ ಹಳ್ಳಿಯವರಲ್ಲಿ ಅಲ್ಪಸ್ವಲ್ಪ ವಿದ್ಯಾವಂತರು ಬೆಂಗಳೂರಿಗೆ
ಬರುತ್ತಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಕಷ್ಟಪಟ್ಟು ಸಂಪರ್ಕಿಸಿದಾಗ ಮೋಸ ಹೋದದ್ದು ಗೊತ್ತಾಗುತ್ತದೆ. ಇದನ್ನು ಶಾಸಕರ ಗಮನಕ್ಕೆ ತರಲು ಪ್ರಯತ್ನಿಸಿದರೆ, ತನಗೆ ಸಂಬಂಧವೇ ಇಲ್ಲದಂತೆ ಮೌನವಾಗಿರುತ್ತಾರೆ. ಹೀಗೆ ಜನಪ್ರತಿನಿಧಿಗಳು ಯಾರೋ ಮಾಡಿದಂತಹ ಕೆಲಸದ ಕೀರ್ತಿ ಪಡೆಯಲು ಮುಂದೆ ಇರುತ್ತಾರೆ, ಆದರೆ ಜವಾಬ್ದಾರಿ ಪ್ರಶ್ನೆ ಬಂದಾಗ ನುಣುಚಿ ಕೊಳ್ಳುವುದರಲ್ಲಿ ಎತ್ತಿದ ಕೈ.
ಇದೇನಿದು ಎಲ್ಲದಕ್ಕೂ ರಾಜಕಾರಣಿಗಳನ್ನು ಹೊಣೆ ಮಾಡಿ ನೌಕರರು/ಅಧಿಕಾರಿಗಳು ಸಂಭಾವಿತರು ಎನ್ನುತ್ತಿದ್ದೇನೆ ಎಂದು ಕೊಳ್ಳುತ್ತೀರಾ? ನೈಜ ಘಟನೆಗಳನ್ನು ಆಧರಿಸಿದ ಒಂದಿಷ್ಟು ಉದಾಹರಣೆಗಳನ್ನು ಕೊಡುತ್ತೇನೆ, ನೀವೇ ನಿರ್ಧರಿಸಿ. ಸರಕಾರ ಹೊರಡಿಸುವಂತಹ ಆದೇಶಗಳಿಗೆ ಅಧೀನ ಕಾರ್ಯದರ್ಶಿಗಳು ಸಹಿ ಮಾಡುವುದು ನಿಯಮ. ಕೆಲವೊಮ್ಮೆ ಸರಕಾರದ ಪ್ರಧಾನ ಕಾರ್ಯದರ್ಶಿಯವರೂ ಸಹಿ ಮಾಡುತ್ತಾರೆ.
ಅಂತಹ ಆದೇಶಗಳಿಗೆ ಸಂಬಂಧಿಸಿದ ಯಾವುದಾದರೂ ತಕರಾರು ನ್ಯಾಯಾಲಯದಲ್ಲಿ ದಾಖಲಾದರೆ ಸರಕಾರದ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ಪ್ರಮಾಣಪತ್ರಕ್ಕೆ ಅದೇ ದರ್ಜೆಯ ಅಧಿಕಾರಿ ಸಹಿ ಮಾಡಬೇಕು. ನ್ಯಾಯಾಲಯದ ಆದೇಶವನ್ನು ಜ್ಯಾರಿಗೊಳಿಸುವುದಕ್ಕೆ ಸಹಿ ಮಾಡಿದ ಅಧಿಕಾರಿ ಹೊಣೆಯಾಗಿರುತ್ತಾರೆ. ಪ್ರಕರಣವೇನಾದರೂ ನ್ಯಾಯಾಂಗ
ನಿಂದನೆಯ ಹಂತಕ್ಕೆ ತಲುಪಿದರೆ, ಅಧಿಕಾರಿಯನ್ನು ನ್ಯಾಯಾಲಯ ಶಿಕ್ಷೆಗೆ ಒಳಪಡಿಸಬಹುದಾಗಿದೆ.
ಇಂತಹುದೊಂದು ಪ್ರಕರಣದಲ್ಲಿ ವಿಳಂಭಿಸಿದ್ದು ಕಡತಕ್ಕೆ ಅನುಮೋದನೆ ನೀಡಬೇಕಾದ ಸಚಿವರು, ಜೈಲು ವಾಸಕ್ಕೆ ಗುರಿಯಾ ದದ್ದು ಸಹಿ ಮಾಡಿದ ಅಧಿಕಾರಿ! ಶಾಸಕರು ಬದಲಾದೊಡನೆ ತಮ್ಮ ಮಾತು ಕೇಳುವ, ತಮಗೆ ಬೇಕಾದ ಅಧಿಕಾರಿಗಳನ್ನು ಆಯ ಕಟ್ಟಿನ ಜಾಗಗಳಲ್ಲಿ ನೇಮಿಸಿಕೊಡುವಂತೆ ಮಂತ್ರಿಗಳಿಗೆ ಒತ್ತಡ ಹೇರುತ್ತಾರೆ. ತಮಗೆ ಬೇಕಾದವರೆಂದರೆ ಅರ್ಥ? ಕಾನೂನಿನಂತೆ ಕೆಲಸ ಮಾಡುವವರೇ? ತಾವು ಆಡಿಸಿದಂತೆ ಆಡುವವರೇ? ಹಾಗಾದರೆ ಶಾಸಕಾಂಗದಲ್ಲಿ ಜ್ಯಾರಿಗೊಳಿಸುವ ಶಾಸನ ಯಾರಿಗಾಗಿ? ಖಾಸಗಿ ಸ್ಥಳವೊಂದರ ಮಾಲೀಕತ್ವದ ತಕರಾರು ಸುಧೀರ್ಘ ಕಾನೂನು ಹೋರಾಟದ ಬಳಿಕ ಉಚ್ಚ ನ್ಯಾಯಾಲಯ ದಲ್ಲಿ ಅದರ ಮೂಲ ಮಾಲೀಕರ ಪರವಾಗಿ ತೀರ್ಪು ಬಂದಿತ್ತು.
ಅದನ್ನು ಹಸ್ತಾಂತರಿಸುವ ಹೊಣೆ ಕಂದಾಯ ಇಲಾಖೆಯದಾಗಿದ್ದು, ಪೋಲಿಸ್ ಸಹಾಯದಿಂದ ಅದನ್ನು ಕಾರ್ಯಗತಗೊಳಿಸಲು
ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಅಲ್ಲಿಗೆ, ಶಾಸಕರು ಒಂದಿಷ್ಟು ಬೆಂಬಲಿಗರೊಂದಿಗೆ ಬಂದು ಅಧಿಕಾರಿಗಳ ಕಾರ್ಯ ನಿರ್ವಹಣೆಗೆ ಅಡ್ಡಿಪಡಿಸಿದರು. ಸ್ವತಃ ಜಿಲ್ಲಾ ಪೋಲಿಸ್ ಅಧೀಕ್ಷಕರೇ ಬಂದರೂ ಶಾಸಕರು ಸ್ಥಳ ಹಸ್ತಾಂತರ ಸಾಧ್ಯವೇ ಇಲ್ಲ, ಅದು ತನ್ನ ಪ್ರತಿಷ್ಠೆಯ ವಿಷಯವೆಂದು ಹೇಳಿ ವಾಪಸ್ಸು ಕಳುಹಿಸಿದರು.
ಪ್ರಕರಣ ಪುನಃ ನ್ಯಾಯಾಂಗ ನಿಂದನೆಯ ರೂಪದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿತು. ಆದರೆ ಇಲ್ಲಿ ಶಾಸಕರ ಪಾತ್ರ ಕಾಣಿಸಲೇ ಇಲ್ಲ, ಏಕೆಂದರೆ ಪತ್ರಿಕಾ ವರದಿಗಾರರು ಇಡೀ ಕಾರ್ಯಾಚರಣೆಯ ವೀಡಿಯೊ ಚಿತ್ರಣ ಮಾಡಿದ್ದರೂ, ಯಾರೂ ಅದನ್ನು ಇಲಾಖೆಗೆ ನೀಡಲಿಲ್ಲ. (ಆಗ ಈಗಿನಂತೆ ಮೊಬೈಲ್ ಚಿತ್ರೀಕರಣ ಇರಲಿಲ್ಲ) ನ್ಯಾಯಾಧೀಶರು ತರಾಟೆಗೆ ತೆಗೆದು ಕೊಂಡದ್ದು ಮಾತ್ರ ಜಿಲ್ಲಾ ಪೋಲೀಸ್ ಅಧಿಕಾರಿಯವರನ್ನು!
ಓರ್ವ ಪ್ರಭಾವಿ ರಾಜಕಾರಣಿ ಸ್ವಲ್ಪ ದಿನಗಳ ಹಿಂದೆ ತನ್ನ ವ್ಯಾಪ್ತಿಯಲ್ಲಿ ನೂತನ ಸಾರಿಗೆ ವ್ಯವಸ್ಥೆಯನ್ನು ಉದ್ಘಾಟಿಸುವ ಕಾರ್ಯಕ್ರಮದ ಅಂಗವಾಗಿ ಸರಕಾರಿ ಬಸ್ಸಿನಲ್ಲಿ ಕುಳಿತು ಸ್ವತಃ ಚಲಾಯಿಸುತ್ತಾರೆ. ಸಾಂಕೇತಿಕವಾಗಿ ಚಲಾಯಿಸಿ ಅಲ್ಲಿಗೇ ನಿಲ್ಲಿಸುವ ಬದಲು ಸಾಕಷ್ಟು ದೂರ ಮುಖ್ಯ ರಸ್ತೆಯಲ್ಲಿ ಚಲಾಯಿಸುತ್ತಾರೆ. ನಿಯಮಾನುಸಾರ ಸೂಕ್ತ ಚಾಲನಾ ಪರವಾನಗಿ ಯಿಲ್ಲದೆ ಸಾರ್ವಜನಿಕ ಸಾರಿಗೆ ಬಸ್ಸು ಚಲಾಯಿಸುವಂತಿಲ್ಲ. ಇಲ್ಲಿ ತಪ್ಪು ಮಾಡಿದ್ದು ಶಾಸಕರು. ನೋಟಿಸ್ ಬಂದದ್ದು ಡಿಪೋ ಮೆನೇಜರರಿಗೆ!
ಯಾವುದೇ ಕಾಮಗಾರಿಯಿರಲಿ, ಅದು ಯಾರ ಶ್ರಮದಿಂದಲೇ ಆಗಲಿ, ಅದ್ಧೂರಿ ಉದ್ಘಾಟನಾ ಸಮಾರಂಭ ಮಾಡಲೇ ಬೇಕು. ರಸ್ತೆ, ಸೇತುವೆ ಮುಂತಾದ ಜನರಿಗೆ ತೀರಾ ಉಪಯುಕ್ತ ಕಾಮಗಾರಿಗಳು ಮುಗಿದು ತಿಂಗಳುಗಳೇ ಕಳೆದರೂ ಉದ್ಘಾಟನೆಗೆ ನಾಯಕರ
ಮರ್ಜಿಗಾಗಿ ಕಾಯಬೇಕು. ಕೆಲವೊಮ್ಮೆ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುವುದರ ಜತೆಗೆ, ಜನರು, ಮಾಧ್ಯಮಗಳು ಗದ್ದಲ ವೆಬ್ಬಿಸಿದರೆ ತಲೆ ಕೆಡಿಸಿಕೊಳ್ಳಬೇಕಾದವರು ಅಧಿಕಾರಿಗಳು.
ಕೆಲವೊಂದು ಯಾತ್ರೆಗಳಿಗೆ ಹೋಗುವ ಮೊದಲು ರೋಗ ನಿರೋಧಕ ಲಸಿಕೆ ತೆಗೆದುಕೊಳ್ಳುವುದು ಕಡ್ಡಾಯ. ಸರಕಾರಿ ಆಸ್ಪತ್ರೆ ಯಲ್ಲಿ ಇದನ್ನು ಉಚಿತವಾಗಿ ಕೊಡಲಾಗುತ್ತದೆ. ನಿಯಮಾನುಸಾರ ಯಾತ್ರಾರ್ಥಿಗಳು ಆಸ್ಪತ್ರೆಗೆ ಬಂದು ಲಸಿಕೆಯ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ಆಸ್ಪತ್ರೆಗೆ ಬರಲು ಹೇಳುವ ಉದ್ದೇಶ, ಹಾಗೆ ಚುಚ್ಚುಮದ್ದು ತೆಗೆದುಕೊಂಡವರಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆಗಳು ಬಂದರೆ ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗಲು. ಇದರಲ್ಲಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ರಾಜಕಾರಣಿಗಳು ತಲೆ ಕೆಡಿಸಿಕೊಳ್ಳಲಿಲ್ಲ.
ತನ್ನ ಧರ್ಮದವರನ್ನು ತುಷ್ಟೀಕರಿಸುವುದಕ್ಕಾಗಿ ಸರ್ಕಾರಿ ವೈದ್ಯರು ಪರಿಕರಗಳೊಂದಿಗೆ ಪ್ರಾರ್ಥನಾ ಸ್ಥಳಕ್ಕೆ ಹೋಗಿ ನೀಡಲು ಮೌಖಿಕ ಆದೇಶ ನೀಡಲಾಗುತ್ತದೆ. ಯಾರಿಗಾದರೂ ಏನಾದರೂ ಹೆಚ್ಚು ಕಡಿಮೆಯಾದರೆ? ವೈದ್ಯರು ತಲೆ ಕೆಡಿಸಿಕೊಳ್ಳಬೇಕು.
ಏಕೆಂದರೆ ಯಾವುದೇ ಲಿಖಿತ ಆದೇಶವಿಲ್ಲ, ಬಂದಿರುವುದು ಕೇವಲ ಸಚಿವರ ಕಛೇರಿಯ ಮೌಖಿಕ ಸೂಚನೆ ಮಾತ್ರ. ಹಾಗಂತ ಆಜ್ಞೆ ಮೌಖಿಕವಾದರೇನಂತೆ, ಆಜ್ಞೆ-ಆಜ್ಞೆಯೇ; ಪಾಲಿಸಬೇಕು, ಅಷ್ಟೇ.
ಯಾವುದೇ ಕಾಮಗಾರಿಯ ಟೆಂಡರ್ ಮಂಜೂರಾತಿ, ನಿರ್ವಹಣೆಗಳಿಗೆ ನಿರ್ದಿಷ್ಟ ನಿಯಮಾವಳಿಗಳಿವೆ. ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿರುವ ಕಲ್ಪನೆಯೆಂದರೆ ಉತ್ತಮವಾದ ಕೆಲಸ ಮಾಡಿಸಿದ ಅನುಭವ ಇರುವವರಿಗೆ, ಕನಿಷ್ಠ ದರ ನಮೂದಿಸಿದವರಿಗೆ ಟೆಂರ್ಡ ಮಂಜೂರಾಗುತ್ತದೆ, ಇತ್ಯಾದಿ. ವಾಸ್ತವ ಹಾಗಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗುವ ಮೊದಲೇ ಯಾವ ಗುತ್ತಿಗೆ ಯಾರಿಗೆ ಸಿಗಬೇಕೆಂದು ನಿರ್ಣಯವಾಗಿರುತ್ತದೆ.
ದೊಡ್ಡ ಕಾಮಗಾರಿಗಳು ಯಾರಿಗೆ ಸಿಗಬೇಕೆಂದು ಸ್ಥಳೀಯ ರಾಜಕಾರಣಿಗಳು ನಿರ್ಣಯಿಸಿರುತ್ತಾರೋ ಅವರಿಗೆ ಸಿಗುವಂತೆ ಮಾಡು ವುದು ಅಧಿಕಾರಿಗಳ ಕರ್ತವ್ಯ. ಒಂದೊಮ್ಮೆ ಒಬ್ಬರಿಗಿಂತ ಹೆಚ್ಚು ಪ್ರಭಾವಿ ರಾಜಕಾರಣಿಗಳ ಬೆಂಬಲಿಗರು ಟೆಂಡರಿನಲ್ಲಿ ಭಾಗ ವಹಿಸಿದರೆ ಅಧಿಕಾರಿಗಳ ಗತಿ ಹರೋಹರ. ಟೆಂಡರ್ ಪ್ರಕ್ರಿಯೆಯಲ್ಲಿ ಕಾನೂನಿಗೆ ವಿರುದ್ಧವಾಗಿ ಕಡತ ನಿರ್ವಹಿಸಲು ಸ್ಥಳೀಯ ರಾಜಕಾರಣಿಯೊಬ್ಬರು ತಂದ ಒತ್ತಡವನ್ನು ನಿರಾಕರಿಸಿದ ಕಾರಣಕ್ಕೆ ಒಂದು ವರ್ಷಕ್ಕೂ ಹೆಚ್ಚು ಕಾಲ ಮನೆಯಲ್ಲಿ ವೇತನವಿಲ್ಲದೆ ಕುಳಿತದ್ದು, ಪದೋನ್ನತಿ ಇತ್ಯಾದಿಗಳಿಂದ ವಂಚಿತನಾದದ್ದು ನನ್ನ ಸ್ವಂತ ಅನುಭವ.
ರಾಜಕಾರಣಿಗಳು ಅಧಿಕಾರದಿಂದ ಇಳಿದ ಮೇಲೂ ಇಂತಹ ದರ್ಬಾರು ಮುಂದುವರಿಸುವುದಿದೆ. ಮಾತ್ರವಲ್ಲ, ಮುಂದೊಮ್ಮೆ ಪುನರಾಯ್ಕೆಯೇನಾದರೂ ಆದರೆ, ಅಧಿಕಾರದಲ್ಲಿ ಇಲ್ಲದಿದ್ದಾಗ ಅವರ ಮಾತು ಪಾಲಿಸದ ಅಧಿಕಾರಿಗಳ ಗ್ರಹಚಾರ ಕೆಡುತ್ತದೆ. ಒಂದು ವೇಳೆ ರಾಜಕಾರಣಿಗಳು ಮರೆತರೂ ಅವರ ಚಮಚಾಗಳು ನೆನಪಿಟ್ಟುಕೊಂಡು ದ್ವೇಷ ಸಾಧಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಕಾನೂನಿನಂತೆ ನಡೆಯುವುದೇ, ಹಾಲಿ ಶಾಸಕರ ಮಾತು ಕೇಳಬೇಕೇ, ಮಾಜಿಯವರ ಮಾತಿನಂತೆ ನಡೆಯುವುದೇ? ಇತ್ತೀಚೆ ಗಂತೂ ಇಂತಹ ವ್ಯವಹಾರದಲ್ಲಿ ರಾಜಕಾರಣಿಗಳಿಗಿಂತ ಹೆಚ್ಚಾಗಿ ಮರಿಪುಡಾರಿಗಳು, ಜಾತಿ ಸಂಘಟನೆಗಳೂ ಮೂಗು ತೂರಿಸುವು ದಿದೆ.