Thursday, 12th December 2024

ಕೋವಿಡ್ ವ್ಯಾಕ್ಸೀನ್‌ಗಳು: ಇತ್ತೀಚಿನ ನೋಟ

ವೈದ್ಯವೈವಿಧ್ಯ

ಡಾ.ಎಚ್.ಎಸ್.ಮೋಹನ್‌

ಜಗತ್ತಿನಾದ್ಯಂತ ಈಗ ಕೋವಿಡ್ ವ್ಯಾಕ್ಸೀನ್ ಗಳನ್ನು ಹಾಕುವ ಭರಾಟೆ ನಡೆಯುತ್ತಿದೆ. ಇದುವರೆಗೆ ವಿವಿಧ ದೇಶಗಳಲ್ಲಿ 13  ವ್ಯಾಕ್ಸೀನ್ ಗಳು ಮಾನ್ಯತೆ ಪಡೆದು ಉಪಯೋಗದಲ್ಲಿವೆ. ಈ ವ್ಯಾಕ್ಸೀನ್‌ಗಳ ಪಾರ್ಶ್ವ ಪರಿಣಾಮಗಳ ಬಗ್ಗೆಯೂ ಹಲವು ವಿವರ ಗಳು ಹೊರ ಬಿದ್ದಿದ್ದು ಅವು ಚರ್ಚೆಯಲ್ಲಿವೆ. ಈ 13 ವ್ಯಾಕ್ಸೀನ್‌ಗಳತ್ತ ಒಂದು ನೋಟ ಹರಿಸೋಣ.

ವ್ಯಾಕ್ಸೀನ್‌ಗಳ ಸಾಮಾನ್ಯ ಪಾರ್ಶ್ವ ಪರಿಣಾಮ: ಈ ವ್ಯಾಕ್ಸೀನ್‌ಗಳು ದೇಹದಲ್ಲಿರುವ ಟಿ ಮತ್ತು ಬಿ ಲಿಂಫಸೈಟ್ಸ್‌ಗಳನ್ನು ಪ್ರಚೋದನೆಗೊಳಿಸಿ ದೇಹವು ಪ್ರತಿರೋಧ ಶಕ್ತಿಯನ್ನು ಉತ್ಪಾದಿಸುವಂತೆ ಮಾಡುತ್ತವೆ. ಈ ಮೇಲಿನ ಲಿಂ-ಸೈಟ್ಸ್‌ಗಳು ವೈರಸ್ ‌ಗಳನ್ನು ಗುರುತಿಸಿ ಅವುಗಳಿಗೆ ಬೇಕಾದ ಆಂಟಿಬಾಡಿಗಳನ್ನು ಉತ್ಪಾದಿಸುತ್ತವೆ.

ವ್ಯಾಕ್ಸೀನ್‌ನಿಂದಲೇ ಕೋವಿಡ್ ಕಾಯಿಲೆ ಬರುವ ಸಂಭವವಿಲ್ಲ. ಯಾವ ವ್ಯಾಕ್ಸೀನ್‌ ನಲ್ಲಿಯೂ ಕೋವಿಡ್ ಕಾಯಿಲೆ ಉಂಟು ಮಾಡುವ ಕರೋನಾ ವೈರಸ್ ಇರುವುದಿಲ್ಲ. ದೇಹದಲ್ಲಿ ವ್ಯಾಕ್ಸೀನ್‌ನಿಂದ ಪ್ರತಿರೋಧ ಶಕ್ತಿ ಹುಟ್ಟಿಕೊಳ್ಳು ತ್ತಿರುವಂತೆಯೇ ಅಂಥ ವ್ಯಕ್ತಿಯಲ್ಲಿ ವ್ಯಾಕ್ಸೀನ್‌ನಿಂದ ಕೆಲವು ಪಾರ್ಶ್ವ ಪರಿಣಾಮಗಳು (Side effects) ಕಾಣಿಸಿ ಕೊಳ್ಳಬಹುದು.

ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಸಿಡಿಸಿ ಪ್ರಕಾರ ಈ ವ್ಯಾಕ್ಸೀನ್‌ಗಳ ಪಾರ್ಶ್ವ ಪರಿಣಾಮಗಳೆಂದರೆ – ಜ್ವರ, ಸುಸ್ತು, ತಲೆ ನೋವು, ಮೈ ಕೈ ನೋವು, ದೇಹದಲ್ಲಿ ನಡುಕ, ವಾಂತಿ ಬರುವಂತೆ ಆಗುವುದು. ಕೆಲವರಲ್ಲಿ ಇಂಜೆಕ್ಷನ್ ಚುಚ್ಚಿದ ಜಾಗದಲ್ಲಿ ಸ್ವಲ್ಪ ನೋವು, ಆ ಭಾಗ ಉಬ್ಬಿಕೊಳ್ಳುವುದು, ಚರ್ಮ ಕೆಂಪಾಗುವುದು, ಚರ್ಮದಲ್ಲಿ ನವೆ.

ಆರೋಗ್ಯ ಅಧಿಕಾರಿಗಳ ಪ್ರಕಾರ ಮೇಲಿನ ಎಲ್ಲಾ 13 ವ್ಯಾಕ್ಸೀನ್‌ಗಳೂ ಸಹಿತ ಈ ರೀತಿಯ ಕೆಲವು ಪಾರ್ಶ್ವ ಪರಿಣಾಮಗಳನ್ನು ತರಬಲ್ಲವು. ಹೆಚ್ಚಿನ ಸಂದರ್ಭಗಳಲ್ಲಿ ಇವು ತೀರಾ ಸಣ್ಣ ಪ್ರಮಾಣದಲ್ಲಿದ್ದು ಅವು ಕೆಲವೇ ದಿನ ಕಾಣಿಸಿಕೊಳ್ಳುತ್ತವೆ.

ಅಲರ್ಜಿ ಮತ್ತು ಅನಾಫಿಲಾಕ್ಸಿಸ್: ವ್ಯಾಕ್ಸೀನ್ ನಲ್ಲಿರುವ ಯಾವುದೋ ಒಂದು ಘಟಕವು ಯಾವುದೋ ಒಬ್ಬ ವ್ಯಕ್ತಿಯಲ್ಲಿ ಅಲರ್ಜಿ ಉಂಟುಮಾಡಬಹುದು. ಚರ್ಮ ದಲ್ಲಿ ದದ್ದುಗಳು ಏಳಬಹುದು, ಮೈನಲ್ಲಿ ಕಡಿತ ಉಂಟಾಗಬಹುದು, ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಅಲರ್ಜಿಯ ತೀವ್ರ ಸ್ವರೂಪವೇ ಅನಾಫಿಲಾಕ್ಸಿಸ್ ಎಂಬ ಅತಿರೇಕದ ಪ್ರತಿಕ್ರಿಯೆ.

ಇದರಲ್ಲಿ ವ್ಯಕ್ತಿಯ ರಕ್ತದೊತ್ತಡ ತೀವ್ರವಾಗಿ ಕಡಿಮೆಯಾಗುತ್ತದೆ, ವಾಂತಿ ಬರುವಂತೆ ಆಗುವುದು, ಉಸಿರಾಡಲು ತೀವ್ರ ತೊಂದರೆ – ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ವ್ಯಾಕ್ಸೀನ್‌ನಿಂದ ಈ ರೀತಿಯ ಪಾರ್ಶ್ವ ಪರಿಣಾಮ ಉಂಟಾಗುವುದು ತುಂಬಾ ತುಂಬಾ ಅಪರೂಪ. ಅಮೆರಿಕದ ಸಿಡಿಸಿ ಪ್ರಕಾರ 1 ಮಿಲಿಯನ್ ಜನರಲ್ಲಿ 2-5 ಜನರಲ್ಲಿ ಮಾತ್ರ ಈ ರೀತಿಯ ತೀವ್ರ ಪರಿಣಾಮ ಕಂಡು ಬಂದಿದೆ.

ಅಂದರೆ 0.001% ಗಿಂತಲೂ ಕಡಿಮೆ ಜನರಲ್ಲಿ ಈ ತೊಂದರೆ ಕಂಡು ಬಂದಿದೆ. ಎಂಆರ್‌ಎನ್‌ಎ ವ್ಯಾಕ್ಸೀನ್‌ಗಳಲ್ಲಿ ಅಲರ್ಜಿ ಪರಿಣಾಮ ಕಂಡು ಬರುವುದು ಸ್ವಲ್ಪ ಜಾಸ್ತಿ ಎನ್ನಲಾಗಿದೆ. ಏಕೆಂದರೆ ಅವುಗಳಲ್ಲಿ ಪಾಲಿ ಎಥಿಲೀನ್ ಗ್ಲೈಕಾಲ್ (PEG) ಎಂಬ
ರಾಸಾಯನಿಕ ಇರುತ್ತದೆ. ಈ ರಾಸಾಯನಿಕವನ್ನು ಹಿಂದಿನ ಯಾವ ವ್ಯಾಕ್ಸೀನ್‌ಗಳಲ್ಲೂ ಉಪಯೋಗಿಸಿರಲಿಲ್ಲ.

ಆದರೆ ಇದು ಹಲವಾರು ಔಷಧಗಳಲ್ಲಿದೆ. ಹಾಗಾಗಿ ಅಂಥ ಔಷಧಗಳು ಅಲರ್ಜಿ ಉಂಟುಮಾಡುವುದು ಜಾಸ್ತಿ ಎನ್ನಲಾಗಿದೆ. ಇದು ವ್ಯಾಕ್ಸೀನ್‌ನಲ್ಲಿ ಎಂಆರ್‌ಎನ್‌ಎ ಘಟಕವನ್ನು ಸುತ್ತುವರಿಯುತ್ತದೆ. ಹಾಗೆಯೇ ಇದು ವ್ಯಾಕ್ಸೀನ್ ಜೀವಕೋಶಗಳ ಒಳಗೆ ತೂರಿಹೋಗಲು ಸಹಾಯ ಮಾಡುತ್ತದೆ. ಹಾಗೆಯೇ ಜಾನ್ಸನ್ ಮತ್ತು ಜಾನ್ಸನ್ ಅವರ ವ್ಯಾಕ್ಸೀನ್ ಬಗೆಯೂ ಆತಂಕಗಳಿವೆ.
ಏಕೆಂದರೆ ಅದರಲ್ಲಿ ಪಾಲಿಸಾರ್ಬೇಟ್ 80 ಎಂಬ ರಾಸಾಯನಿಕವಿದೆ. ಈ ರಾಸಾಯನಿಕವು ಪಿಇಜಿ ರಾಸಾಯನಿಕದ ರೀತಿಯದೇ ಆಕಾರ ಹೊಂದಿ ಅದರ ಹತ್ತಿರದ ಸಂಬಂಧಿ ಎಂದು ಹೇಳಬಹುದು.

ಎಂಆರ್ ಎನ್‌ಎ ಕೋವಿಡ್ ವ್ಯಾಕ್ಸೀನ್‌ಗಳ ಅಲರ್ಜಿ ಪರಿಣಾಮಗಳನ್ನು ವಿಶ್ಲೇಷಿಸಿದಾಗ ಹೆಚ್ಚಿನವರಲ್ಲಿ ಮೊದಲೇ ವಿವಿಧ
ರೀತಿಯ ಅಲರ್ಜಿ ಇತ್ತು ಎಂದು ಗೊತ್ತಾಗುತ್ತದೆ. ಅಂಥವರಲ್ಲಿ ಮಾತ್ರ ವ್ಯಾಕ್ಸೀನ್ ನಂತರ ತೀವ್ರ ರೀತಿಯ ಅಲರ್ಜಿ ಕಂಡು ಬಂದದ್ದು ಗೊತ್ತಾಗಿದೆ. ಹಾಗಿದ್ದರೂ ಮೇಲಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡರೂ ಎಂಆರ್‌ಎನ್‌ಎ ವ್ಯಾಕ್ಸೀನ್ ‌ಗಳಿಗೆ ಅನಾಫಿಲಾಕ್ಸಿಸ್ ರೀತಿಯ ತೀವ್ರ ರೀತಿಯ ಪರಿಣಾಮ ಉಂಟಾಗುವುದು ಬಹಳ ಕಡಿಮೆ ಎನ್ನಲಾಗಿದೆ.

ಹಾಗಿದ್ದರೂ ಸಿಡಿಸಿ ಸಂಸ್ಥೆಯು ನಿರ್ದಿಷ್ಟ ಅಲರ್ಜಿ ಟೆಂಡೆನ್ಸಿ ಮೊದಲಿನಿಂದ ಇರುವ ವ್ಯಕ್ತಿಗಳಲ್ಲಿ ವ್ಯಾಕ್ಸೀನ್ ಕೊಡುವ
ಮೊದಲು ಪ್ರಿ – ಸ್ಕ್ರೀನಿಂಗ್ ಮಾಡಬೇಕು ಎಂದು ಶಿಫಾರಸ್ಸು ಮಾಡುತ್ತದೆ. ಸಾಮಾನ್ಯ ರೀತಿಯ ಅಲರ್ಜಿ ಎಂದರೆ ವಿವಿಧ ಆಹಾರಕ್ಕೆ ಅಲರ್ಜಿ, ಸಾಕು ಪ್ರಾಣಿಗಳಿಗೆ ಅಲರ್ಜಿ, ವಾತಾವರಣದ ಹಲವು ಘಟಕಗಳಿಗೆ ಅಲರ್ಜಿ, ಹಲವು ಔಷಧಗಳಿಗೆ ಅಲರ್ಜಿ – ಹೀಗೆ ಅಲರ್ಜಿ ಹೊಂದಿರುವವರಲ್ಲಿಯೂ ಈ ವ್ಯಾಕ್ಸೀನ್‌ಗಳು ಅಪಾಯಕಾರಿಯಲ್ಲ ಎನ್ನಲಾಗಿದೆ.

ಸಿಡಿಸಿಯ ಮತ್ತೊಂದು ಶಿಫಾರಸ್ಸು ಎಂದರೆ ಯಾವುದೇ ಒಂದು ವ್ಯಾಕ್ಸೀನಿನ ಮೊದಲ ಡೋಸ್‌ಗೆ ಅಲರ್ಜಿ ಪರಿಣಾಮ ನಿರ್ದಿಷ್ಟ ವ್ಯಕ್ತಿಯಲ್ಲಿ ಕಂಡು ಬಂದಿದ್ದರೆ, ಅಂಥ ವ್ಯಕ್ತಿ ಅದೇ ವ್ಯಾಕ್ಸೀನಿನ ಎರಡನೇ ಡೋಸ್ ತೆಗೆದುಕೊಳ್ಳಬಾರದು.

ಮಹಿಳೆಯರಲ್ಲಿ ಪಾರ್ಶ್ವ ಪರಿಣಾಮಗಳು: ಕ್ಸೀನುಗಳ ಪಾರ್ಶ್ವ ಪರಿಣಾಮಗಳು ಪುರುಷರಿಗಿಂತ ಮಹಿಳೆಯರಲ್ಲಿ ಜಾಸ್ತಿ ಕಂಡು ಬರುತ್ತವೆ ಎಂದು ಗೊತ್ತಾಗಿದೆ. ಅಮೆರಿಕದ ಸಿಡಿಸಿಯ ಅಧ್ಯಯನದ ಪ್ರಕಾರ ಅಲ್ಲಿ ವ್ಯಾಕ್ಸೀನ್ ಕೊಟ್ಟ ಒಂದು ತಿಂಗಳ ನಂತರ
ಕಂಡು ಬಂದ ಪಾರ್ಶ್ವ ಪರಿಣಾಮಗಳಲ್ಲಿ ಶೇ.28.2% ಮಹಿಳೆಯರಲ್ಲಿ ಎಂದು ಗೊತ್ತಾಗಿದೆ.

ಹಾಗೆಯೇ ಅನಾಫಿಲಾಕ್ಸಿಸ್ ಪರಿಣಾಮಗಳಲ್ಲಿ 16 ರಲ್ಲಿ 15 ಜನ ಮಹಿಳೆಯರೇ ಎನ್ನಲಾಗಿದೆ. 2009ರ – ಸಾಂಕ್ರಾಮಿಕದ
ಸಂದರ್ಭದಲ್ಲಿ ಕೊಟ್ಟ ಎಚ್1ಎನ್1 ವ್ಯಾಕ್ಸೀನ್‌ಗಳ ಬಗ್ಗೆ 2013ರಲ್ಲಿ ಅಧ್ಯಯನ ನಡೆಸಲಾಯಿತು. ಆಗಲೂ ಇದೇ ರೀತಿಯ ಅಂಕಿಅಂಶಗಳು ಕಂಡು ಬಂದಿದ್ದವು ಎನ್ನಲಾಗಿದೆ. ಆಗ ಮಕ್ಕಳನ್ನು ಹೆರುವ ವಯಸ್ಸಿನ ಮಹಿಳೆಯರಲ್ಲಿ ಹೈಪರ್ ಸೆನ್ಸಿಟಿವಿಟಿ ಪರಿಣಾಮಗಳು ತುಂಬಾ ಜಾಸ್ತಿ ಎಂದು ಕಂಡು ಬಂದಿತ್ತು. ಇದಕ್ಕೆ ಕಾರಣ ಏನು ಎಂದು ಪರಿಶೀಲಿಸಿದಾಗ ಗರ್ಭಧಾರಣೆಗೆ ಸಂಬಂಧಿಸಿದ ಹಾರ್ಮೋನುಗಳಾದ ಈಸ್ಟ್ರೊಜೆನ್ ಮತ್ತು ಟೆಸ್ಟೋಸ್ಟಿರೋನ್‌ಗಳು ಮುಖ್ಯ ಪಾತ್ರ ವಹಿಸುತ್ತವೆ ಎನ್ನಲಾಗಿದೆ.

ಇಲಿಗಳಲ್ಲಿ ಕೈಗೊಳ್ಳಲಾದ ಪ್ರಯೋಗಗಳಲ್ಲಿ ಈಸ್ಟ್ರೊಜೆನ್ ಹಾರ್ಮೋನು, ದೇಹವು ಹೆಚ್ಚು ಆಂಟಿಬಾಡಿ ಉಂಟಾಗುವಂತೆ ಮಾಡುತ್ತದೆ. ಪರಿಣಾಮ ಎಂದರೆ ಹೆಚ್ಚಿನ ಪ್ರಮಾಣದ ಪ್ರತಿರೋಧದ ಪ್ರತಿಕ್ರಿಯೆಗಳು. ಇತ್ತೀಚೆಗೆ ಕೋವಿಡ್ ವ್ಯಾಕ್ಸೀನ್‌ಗಳ ನಂತರ ಗಂಭೀರ ರೀತಿಯ ಪಾರ್ಶ್ವ ಪರಿಣಾಮಗಳು ಕಂಡು ಬಂದಿವೆ. ಈ ಪರಿಣಾಮಗಳು ಆಕಸ್ಮಿಕವಾಗಿ ಕಂಡು ಬಂದ ಪರಿಣಾಮ
ಗಳು ಎನ್ನಲಾಗಿದೆ. ಏಕೆಂದರೆ ನಿರ್ದಿಷ್ಟ ವ್ಯಾಕ್ಸೀನ್‌ನಿಂದಲೇ ಈ ರೀತಿಯ ಗಂಭೀರ ಪರಿಣಾಮಗಳಾಗಿವೆ ಎನ್ನಲು ಸಾಕಷ್ಟು ಪುರಾವೆಗಳಿಲ್ಲ. ಹಾಗಿದ್ದರೂ ಕೂಡ ವ್ಯಾಕ್ಸೀನ್ ರೆಗ್ಯುಲೇಟರಿ ಸಂಸ್ಥೆಗಳು ಈ ಬಗೆಗೆ ಕೂಲಂಕಷವಾದ ವಿಶ್ಲೇಷಣೆ ನಡೆಸುತ್ತಿವೆ.

ಫೆಜರ್ ಬಯೋನ್ ಟೆಕ್ ಮತ್ತು ಮಾಡೆನಾರ್‌: ಈ ಎರಡೂ ವ್ಯಾಕ್ಸೀನ್‌ಗಳು 2 ಡೋಸ್‌ಗಳಲ್ಲಿ ಕೊಡಬೇಕಾದ ವ್ಯಾಕ್ಸೀನ್ ‌ಗಳು. ವ್ಯಾಕ್ಸೀನ್‌ಗಳ ಎರಡನೇ ಡೋಸ್ ನಂತರ ಹಲವು ರೀತಿಯ ಪಾರ್ಶ್ವ ಪರಿಣಾಮಗಳು ಹಲವರಲ್ಲಿ ಕಂಡು ಬಂದಿವೆ. ಎಂಆರ್‌ಎನ್‌ಎ ತಾಂತ್ರಿಕತೆ ಹೊಂದಿದ, ಮನುಷ್ಯರಲ್ಲಿ ಉಪಯೋಗಕ್ಕೆ ಅನುಮತಿ ದೊರಕಿಸಿಕೊಂಡ ಮೊಟ್ಟ ಮೊದಲ
ವ್ಯಾಕ್ಸೀನುಗಳು ಇವು. ಹಾಗಾಗಿ ಇವುಗಳು ಉಂಟುಮಾಡಬಹುದಾದ ದೀರ್ಘಕಾಲದ ಪರಿಣಾಮಗಳು ಸ್ಪಷ್ಟವಿಲ್ಲ.

ಹಾಗೆಯೇ ಇವು ದೇಹದ ಜೆನೆಟಿಕ್ ಮಾಹಿತಿಯನ್ನು ವ್ಯತ್ಯಯ ಮಾಡುತ್ತವೆಯೇ ಎಂಬ ಸಂಶಯ ಈ ವ್ಯಾಕ್ಸೀನ್ ಗಳ ಮೇಲಿದೆ. ಎಂಆರ್‌ಎನ್‌ಎ ವ್ಯಾಕ್ಸೀನ್‌ಗಳು ಈಗ ಹೊಸದಾಗಿ ಹೊರ ಬಂದಿದ್ದರೂ ಈ ತಾಂತ್ರಿಕತೆಯ ಮೇಲೆ ಸಂಶೋಧಕರು ಹಲವಾರು ವರ್ಷಗಳಿಂದ ಸಂಶೋಧನೆಯಲ್ಲಿ  . ಬೇರೆ ಕಾಯಿಲೆಗಳಿಗೆ ಎಂಆರ್‌ಎನ್‌ಎ ವ್ಯಾಕ್ಸೀನ್‌ಗಳನ್ನು ಉತ್ಪಾದಿಸಲು ಹಿಂದೆ ಪ್ರಯತ್ನಗಳು ನಡೆದಿದ್ದವು.

ಝೀಕಾ ವೈರಸ್ ಕಾಯಿಲೆಗೆ ಈ ರೀತಿಯ ವ್ಯಾಕ್ಸೀನ್ ಅಭಿವೃದ್ಧಿ ಪಡಿಸಲು ಯತ್ನಿಸಲಾಗಿತ್ತು. ಎಂಆರ್‌ಎನ್‌ಎ ವ್ಯಾಕ್ಸೀನುಗಳು ಜೆನೆಟಿಕ್ ಮಾಹಿತಿ ಗಳನ್ನು ವ್ಯತ್ಯಯ ಮಾಡುತ್ತವೆ ಅಥವಾ ತಿರುಚುತ್ತವೆ ಎಂಬುದು ಸತ್ಯಕ್ಕೆ ದೂರದ ಸಂಗತಿ ಎಂದು ಸಂಶೋಧಕ ವಿಜ್ಞಾನಿಗಳ ಅನಿಸಿಕೆ. ವ್ಯಾಕ್ಸೀನ್‌ನಲ್ಲಿರುವ ಎಂಆರ್‌ಎನ್ ಎಯು ಜೀವಕೋಶದ ಒಳಗಿನ ಕೇಂದ್ರ ಭಾಗ (Nucleus)
ವನ್ನು ಪ್ರವೇಶಿಸುವುದಿಲ್ಲ. ಈ ಕೇಂದ್ರ ಭಾಗದಲ್ಲಿಯೇ ಜೆನೆಟಿಕ್ ಮಾಹಿತಿಯ ಕೋಶ ಡಿಎನ್‌ಎ ಇರುವುದು.

ಈ ಎಂಆರ್ ಎನ್‌ಎಯು ಸೂಚಿತ ಕೆಲಸವಾದ ಕೂಡಲೇ ತನ್ನಿಂದ ತಾನೇ ನಾಶ ಹೊಂದುತ್ತದೆ. ಹಾಗಾಗಿ ಇದು ಜೆನೆಟಿಕ್ ಮಾಹಿತಿಯನ್ನು ಮಾರ್ಪಡಿಸುತ್ತದೆ ಎನ್ನುವುದು ನಿಜವಲ್ಲ. ಫೇಜರ್ ಬಯೋನ್ ಟೆಕ್ ವ್ಯಾಕ್ಸೀನ್ ನಂತರ  ಜನರು ನಾರ್ವೆಯಲ್ಲಿ ಮರಣ ಹೊಂದಿದರು ಎಂಬ ವರದಿ ಬಂದ ನಂತರ ಬಹಳ ಜನರು ಎಚ್ಚರಗೊಂಡರು. ಆದರೆ ಇವರೆಲ್ಲರ ಮರಣ ವ್ಯಾಕ್ಸೀನ್ ‌ನಿಂದಲೇ ಆಗಿದೆ ಎಂಬುದಕ್ಕೆ ಸರಿಯಾದ ಅಥವಾ ಸ್ಪಷ್ಟ ಪುರಾವೆ ದೊರಕಿಲ್ಲ.

ದೈಹಿಕ ಕ್ಷಮತೆ ಹೊಂದಿದ ಚಿಕ್ಕ ವಯಸ್ಸಿನ ವ್ಯಕ್ತಿಗಳಲ್ಲಿ ಸಾಮಾನ್ಯ ಪಾರ್ಶ್ವ ಪರಿಣಾಮಗಳು ಏನೂ ಅಪಾಯ ತರುವುದಿಲ್ಲ. ಆದರೆ ಅವು ವಯಸ್ಸಾದ ವ್ಯಕ್ತಿಗಳಲ್ಲಿ ಅವರ ಈಗಾಗಲೇ ಇರುವ ದೈಹಿಕ ಕಾಯಿಲೆಗಳನ್ನು ಹೆಚ್ಚು ಮಾಡುತ್ತವೆ ಎಂದು ನಾರ್ವೇ ಜಿಯನ್ ಮೆಡಿಕಲ್ ಏಜೆನ್ಸಿಯ ವೈದ್ಯಕೀಯ ನಿರ್ದೇಶಕ ಡಾ ಸ್ಟೀಸರ್ ಮ್ಯಾಡ್ ಸನ್ ಅಭಿಪ್ರಾಯ ಪಡುತ್ತಾರೆ. ವೈದ್ಯರುಗಳಿಗೆ ನಾವು ವ್ಯಾಕ್ಸಿನೇಷನ್ ಮುಂದುವರಿಸಲು ಸೂಚನೆ ಕೊಟ್ಟಿದ್ದೇವೆ.

ಆದರೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಷ್ಟ ವಯಸ್ಸಾದ ವ್ಯಕ್ತಿಗಳ ಆರೋಗ್ಯವನ್ನು ಹೆಚ್ಚುವರಿ ಮುತುವರ್ಜಿ ಯಿಂದ ನೋಡಿಕೊಳ್ಳಬೇಕು. ಏಕೆಂದರೆ ಅವರ ಹಳೆಯ ಕಾಯಿಲೆ ಉಲ್ಬಣಿಸಬಹುದು. ಎಂದು ಅವರು ಅಭಿಪ್ರಾಯ ಪಡುತ್ತಾರೆ. ಅಮೆರಿಕದಲ್ಲಿ ಇನ್ನೊಬ್ಬ ವ್ಯಕ್ತಿಯ ಮರಣ ವ್ಯಾಕ್ಸಿನೇಷನ್ ನಂತರ ಆಯಿತು.

ಆತನಲ್ಲಿ ರಕ್ತದಲ್ಲಿ ಕಡಿಮೆ ಪ್ಲೇಟ್ ಲೆಟ್ ಇರುವ ಕಾಯಿಲೆ ಥ್ರಾಂಬೋಸೈಟೋಪೀನಿಯಾ ಇತ್ತು. ಫೇಜರ್ ಅಥವಾ
ಮಾಡೆರ್ನಾ ವ್ಯಾಕ್ಸೀನ್‌ಗಳ ನಂತರ 20 ವ್ಯಕ್ತಿಗಳಲ್ಲಿ (ಅಮೆರಿಕದಲ್ಲಿ) ಥ್ರಾಂಬೋಸೈಟೋಪೀನಿಯಾ ಕಾಯಿಲೆ ಇರುವ ಅಂಶ ಗೊತ್ತಾಗಿದೆ. ಆದರೆ ಅವನ್ನು ವ್ಯಾಕ್ಸೀನ್‌ಗಳ ಜತೆ ಜೋಡಿಸುವ ಮಾಹಿತಿ ಇದುವರೆಗೆ ದೊರಕಿಲ್ಲ.

ಇನ್ನೊಂದು ಮುಖ್ಯ ಅಂಶ ಎಂದರೆ ಮಹಿಳೆಯರ ಗರ್ಭಿಣಿತನ ಮತ್ತು ಅವರ ಫಲವತ್ತತೆ (Fertility). ಈ ಬಗ್ಗೆ ಅಮೆರಿಕದ ಕಾಲೇಜ್ ಆಫ್ ಆಬ್ ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ಇತ್ತೀಚೆಗೆ ಅಂದರೆ ಫೆಬ್ರವರಿ 2021ರಲ್ಲಿ ಒಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದುವರೆಗೆ ವ್ಯಾಕ್ಸೀನ್ ತೆಗೆದುಕೊಂಡ ಜಗತ್ತಿನಾದ್ಯಂತ ಮಿಲಿಯನ್ ಗಟ್ಟಲೆ ಮಹಿಳೆಯರಲ್ಲಿ ಇನ್ ಫರ್ಟಿಲಿಟಿಯ ಬಗ್ಗೆ ಎಲ್ಲಿಂದಲೂ ವರದಿಯಾಗಿಲ್ಲ.

ಪ್ರಾಣಿಗಳಲ್ಲಿ ನಡೆಸಿದ ಅಧ್ಯಯನಗಳಲ್ಲಿ ಈವರೆಗೆ ಇನ್ ಫರ್ಟಿಲಿಟಿ ಕಂಡು ಬಂದಿಲ್ಲ. ಹಾಗಾಗಿ ವೈಜ್ಞಾನಿಕವಾಗಿ ಮಹಿಳೆ ಯರಲ್ಲಿ ಈ ವ್ಯಾಕ್ಸೀನ್‌ಗಳು ಮಕ್ಕಳನ್ನು ಹೆರುವ ಸಾಮರ್ಥ್ಯವನ್ನು ಕುಂದಿಸುತ್ತವೆ ಎಂದು ಹೇಳಲು ಬರುವುದಿಲ್ಲ. ಇದೇ ಸಮಯದಲ್ಲಿ ಫೈಜರ್ ಬಯೋನ್ ಟೆಕ್ ಸಂಸ್ಥೆಯವರು ತಾವು 4000 ಆರೋಗ್ಯವಂತ ಮಹಿಳೆಯರಲ್ಲಿ ಈ ವ್ಯಾಕ್ಸೀನ್‌ನ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದ್ದೇವೆ. ಅದರಲ್ಲಿ ಮಹಿಳೆ ಮತ್ತು ಗರ್ಭಸ್ಥ ಶಿಶುವಿನ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಿ
ಸದ್ಯದಲ್ಲಿಯೇ ಫಲಿತಾಂಶ ಹೊರ ತರುತ್ತೇವೆ ಎನ್ನುತ್ತಾರೆ.

ಆಕ್ಸರ್ಡ್ – ಆಸ್ಟ್ರಾಜೆನಿಕಾ ಮತ್ತು ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ : ಯುರೋಪಿನ ಮೆಡಿಕಲ್ ಏಜೆನ್ಸಿ ಮತ್ತು ಡಾನಿಷ್ ಆರೋಗ್ಯ ಅಧಿಕಾರಿಗಳು ಈ ಕ್ಸೀನ್ ನಂತರ ಹಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ (Blood Clotting) ಕಂಡು ಬಂದಿದೆ ಎಂದು ಕಂಡುಕೊಂಡಿದ್ದಾರೆ. ಇದುವರೆಗೆ ಸುಮಾರು 5 ಮಿಲಿಯನ್ ಜನರಲ್ಲಿ ಈ ವ್ಯಾಕ್ಸೀನ್ ಕೊಡಲಾಗಿ 30 ಜನರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡು ಬಂದಿದ್ದು ಡೆನ್ಮಾರ್ಕ್‌ನಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿದ್ದಾನೆ.

ಮಾರ್ಚ್ 18, 2021 ರಂದು ಹಲವು ಪರಿಶೀಲನೆಗಳ ನಂತರ ಈ ವ್ಯಾಕ್ಸೀನ್ ನಿಜವಾಗಿಯೂ ಸುರಕ್ಷಿತ ಹಾಗೂ ಇದು ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ಹೆಚ್ಚು ಮಾಡುವುದಿಲ್ಲ. ಸಾಮಾನ್ಯ ಜನರಲ್ಲಿ ಕಂಡು ಬರುವ ರಕ್ತ ಹೆಪ್ಪುಗಟ್ಟುವಿಕೆಯ ಪ್ರಮಾಣ ವ್ಯಾಕ್ಸೀನ್ ನಂತರದ ರಕ್ತ ಹೆಪ್ಪುಗಟ್ಟುವಿಕೆಯ ಪ್ರಮಾಣಕ್ಕಿಂತ ಜಾಸ್ತಿ ಎನ್ನಲಾಗಿದೆ.

ಕೆಲವರಲ್ಲಿ ಥ್ರಾಂಬೋಸೈಟೋಪೀನಿಯಾ ಕಂಡುಬಂದ ಉದಾಹರಣೆಗಳಿವೆ. ಇವು ನಂತರ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗ ಬಹುದು. ಡೆನ್ಮಾರ್ಕ್, ನಾರ್ವೆ, ಜರ್ಮನಿ, ಫ್ರಾನ್ಸ್‌ನಂಥ ಕೆಲವು ದೇಶಗಳು ಈ ವ್ಯಾಕ್ಸೀನ್ ಕೊಡುವುದನ್ನು ಸ್ವಲ್ಪ ಕಾಲ ನಿಲ್ಲಿಸಿ ದ್ದವು. ಈಗ ಮತ್ತೆ ಆರಂಭಿಸಿವೆ. ಭಾರತದಲ್ಲಿ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಇದೇ ಕಂಪನಿಯ ವ್ಯಾಕ್ಸೀನ್. ಆದರೆ ಭಾರತದಲ್ಲಿ ಒಂದೇ ಒಂದು ರಕ್ತ ಹೆಪ್ಪುಗಟ್ಟುವಿಕೆ ವರದಿಯಾಗಿಲ್ಲ ಎನ್ನಲಾಗಿದೆ.