Saturday, 23rd November 2024

ಆಹಾರವೆಂದು ಕೈ ಬಾಂಬ್ ತಿಂದ ಹಸು, ಬಾಯಿ ಸಂಪೂರ್ಣ ಛಿದ್ರ

ಕಾರವಾರ: ಮುಂಡಗೋಡದ ಸನವಳ್ಳಿ ಪ್ಲಾಟಿನ ಅಪ್ಪು ನಾರಾಯಣಸ್ವಾಮಿ ನಾಯರ ಎಂಬವರಿಗೆ ಸೇರಿದ ಆಕಳು ಜಲಾಶಯದ ಹತ್ತಿರ ಮೇಯುತ್ತಿದ್ದಾಗ ನೆಲದಲ್ಲಿ ಬಿದ್ದಿದ್ದ ಕೈಬಾಂಬ್‌ ಅನ್ನು ಆಹಾರವೆಂದು ತಿನ್ನಲು ಮುಂದಾಗಿದ್ದು, ಈ ವೇಳೆ ಬಾಂಬ್ ಸ್ಫೋಟಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಕಾಡುಪ್ರಾಣಿ ಬೇಟೆಗೆಂದು ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದ ಬಳಿ ಕೈಬಾಂಬ್‌ ಇಡಲಾಗಿತ್ತು. ಪರಿಣಾಮ ಆಕಳಿನ ಬಾಯಿ ಸಂಪೂರ್ಣ ಛಿದ್ರಗೊಂಡಿದ್ದು, ಮೂಖ ಪ್ರಾಣಿಯ ವೇದನೆ ನೋಡಲಾಗದ ಸ್ಥಿತಿಗೆ ತಲುಪಿದೆ. ಬಾಯಿ, ನಾಲಿಗೆ ಕಳೆದುಕೊಂಡು ಆಕಳು ನರಕಯಾತನೆ ಅನುಭವಿಸುವಂತಾಗಿದೆ. ಅದೃಷ್ಟವಶಾತ್ ದುರ್ಘಟನೆಯಿಂದ ಸ್ವಲ್ಪದರಲ್ಲೇ ಕಟ್ಟಿಗೆಗೆ ತೆರಳಿದ್ದ ಮಹಿಳೆಯರು ಪಾರಾಗಿದ್ದಾರೆ.

ಘಟನೆ ಬಗ್ಗೆ ಮಾಹಿತಿ‌ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮತ್ತೊಂದು ಜೀವಂತ ಕೈಬಾಂಬ್ ಪತ್ತೆ ಮಾಡಿದ್ದಾರೆ.  ದುಷ್ಕೃತ್ಯದಲ್ಲಿ ತೊಡಗುವ ಬೇಟೆಗಾರರ ಮೇಲೆ ನಿಗಾ ಇಡುವಂತೆ ಮತ್ತು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೈನಾಪಲ್ ಹಣ್ಣಿನಲ್ಲಿ ಸ್ಫೋಟಕ ಇಟ್ಟು ಆನೆಯನ್ನು ಕೊಂದ ಘಟನೆ ಕೇರಳದಲ್ಲಿ ವರದಿಯಾಗಿತ್ತು. ಕಾಡುಪ್ರಾಣಿಗಳ ಬೇಟೆಗೆಂದು ಇಲ್ಲಿ ಕೆಲವರು ಈ ಕೈಬಾಂಬ್ ಗಳನ್ನು ಇಡುತ್ತಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily