Saturday, 14th December 2024

ಕನ್ನಡ ಪ್ರೇಮಿ ಉದ್ಯಮಿಗೆ ನಾಡೋಜ ಗೌರವ

ಪ್ರಚಲಿತ

ಮಲ್ಲಿಕಾರ್ಜುನ ಹೆಗ್ಗಳಗಿ

ಡಿಪ್ಲೊಮಾ ಎಂಜಿನಿಯರಿಂಗ್ ಓದು ಮುಗಿಸಿ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕು ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡಾಗ ಆ ಹುಡುಗನ ಕಣ್ಣುಗಳಲ್ಲಿ ಅದೆಂಥ ಕನಸಿತ್ತೋ ಗೊತ್ತಿಲ್ಲ!

ಈ ಯುವಕ ಆತ್ಮವಿಶ್ವಾಸ, ಕಠಿಣ ಪರಿಶ್ರಮ ಮತ್ತು ಮಹತ್ವಾಕಾಂಕ್ಷೆಯಿಂದ ತಾನೂ ಒಂದು ಬೃಹತ್ ಕಾರ್ಖಾನೆ ಕಟ್ಟಿದ್ದಲ್ಲದೇ, ರಾಜ್ಯದ ಸಕ್ಕರೆ ಕಾರ್ಖಾನೆ ಗಳ ಮಹಾಮಂಡಳದ ಅಧ್ಯಕ್ಷನಾಗಿ ಬೆಳೆದದ್ದು ಮತ್ತು ದೇಶ ವಿದೇಶಗಳ ತುಂಬ 200ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಕಟ್ಟಲು ಮಾರ್ಗದರ್ಶನ ಮಾಡಿದ್ದು ನಿಜಕ್ಕೂ ಒಂದು ಸಾಹಸದ ಗಾಥೆ.

ಜಮಖಂಡಿ ತಾಲೂಕು ಸಿದ್ದಾಪುರ ಗ್ರಾಮದ ಹೊರವಲಯದಲ್ಲಿ ಅವರು 1999ರಲ್ಲಿ ತುಂಬ ಸಾಹಸದಿಂದ ಶ್ರೀ ಪ್ರಭುಲಿಂಗೇ ಶ್ವರ ಸಕ್ಕರೆ ಕಾರ್ಖಾನೆ ಕಟ್ಟಿದರು. ಇದು ಸ್ಥಳೀಯ ರೈತರಿಗೆ ವರದಾನವಾಗಿ ಬೆಳೆಯಿತು. ಈ ಕಾರ್ಖಾನೆ ಹೊಸ ತಂತ್ರಜ್ಞಾನ ದೊಂದಿಗೆ ರಾಜ್ಯಕ್ಕೆ ಮಾದರಿಯಾಗಿ ಬೆಳೆದಿದೆ.

ಉದ್ದಿಮೆ ಬೆಳವಣಿಗೆಯೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅವರು ದೊಡ್ಡ ಆಶ್ರಯದಾತರಾಗಿ ನಿಂತಿರುವುದು ಮೆಚ್ಚತಕ್ಕ ಸಂಗತಿಯಾಗಿದೆ. ಬಿಜಾಪುರ, ಬಾಗಲಕೋಟೆ ಜಿಲ್ಲೆಗಳ ಕನ್ನಡದ ಎಲ್ಲ ಕಾರ್ಯಗಳಿಗೆ ಅವರ ಪ್ರೋತ್ಸಾಹ, ಆರ್ಥಿಕ ನೆರವು ನಿಶ್ಚಿತ.
ಜಗದೀಶ ಗುಡಗುಂಟಿ ಅವರು ಜಮಖಂಡಿಯ ಪ್ರತಿಷ್ಠಿತ ಕನ್ನಡ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

1972ರಲ್ಲಿ ಸಮೀರ ವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತ ಒಂದು ದಶಕದ ಅವಧಿಯಲ್ಲಿ ಉದ್ದಿಮೆಯ ಅಂತರಂಗ – ಬಹಿರಂಗ ಚೆನ್ನಾಗಿ ಅಧ್ಯಯನ ಮಾಡಿದರು. ಕಾರ್ಖಾನೆಯ ಆಡಳಿತ ನಿರ್ವಹಣೆ ಹಣಕಾಸು, ಮಾರಾಟ, ಕಾನೂನು, ವೈಜ್ಞಾನಿಕ ಕಬ್ಬು ಬೇಸಾಯ ಸಾರ್ವಜನಿಕ ಸಂಪರ್ಕ ಇತ್ಯಾದಿ ಉದ್ದಿಮೆಗೆ ಸಂಬಂಧಿಸಿದ ವಿಷಯಗಳನ್ನು ಅವರು ಆಸಕ್ತಿಯಿಂದ ಅರಿತುಕೊಂಡರು.

ತಾನೂ ಒಂದು ಉದ್ದಿಮೆ ಸಮೂಹ ಕಟ್ಟಬೇಕು. ಸಾವಿರಾರು ಯುವಕರಿಗೆ ಉದ್ಯೋಗ ನೀಡಬೇಕು ಎಂಬ ಕನಸು ಸದಾ ಅವರ ಮನಸ್ಸನ್ನು ಕೆಣಕುತ್ತಿತ್ತು. ಗುಡಗುಂಟಿಯವರು ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ಸ್ನೇಹಿತರ ಸಹಕಾರದೊಂದಿಗೆ ಸಕ್ಕರೆ
ಕಾರ್ಖಾನೆಗೆ ಬೇಕಾಗುವ ಯಂತ್ರೋಪಕರಣ ಉತ್ಪಾದಿಸುವ ಎಕ್ಸ್‌ಟ್ರ್ಯಾಕ್ಟ್ ಎಂಜಿನಿಯರಿಂಗ್ ಘಟಕ ಆರಂಭಿಸಿದರು.

ಮಹಾರಾಷ್ಟ್ರ, ಕರ್ನಾಟಕ, ತಮಿಳನಾಡು ರಾಜ್ಯಗಳ ಸಕ್ಕರೆ ಕಾರ್ಖಾನೆಗಳಿಗೆ ಯಂತ್ರಪೂರೈಕೆಗೆ ಎಕ್ಸ್‌ಟ್ರ್ಯಾಕ್ಟ್ ಎಂಜಿನಿಯರಿಂಗ್ ಕಂಪನಿಗೆ ಬೇಡಿಕೆಗಳು ಬರತೊಡಗಿದವು. ಕೆಲವೆ ದಿನಗಳಲ್ಲಿ ಸಂಸ್ಥೆ ಸಕ್ಕರೆ ಕೈಗಾರಿಕೆಯಲ್ಲಿ ದೊಡ್ಡ ಹೆಸರು ಗಳಿಸಿತು.  ಎಕ್ಸ್‌ಟ್ರ್ಯಾಕ್ಟ್ ಎಂಜಿನಿಯರಿಂಗ್ ಸಂಸ್ಥೆ ಸಕ್ಕರೆ ಕಾರ್ಖಾನೆಗಳ ಕಬ್ಬು ಅರಿಯುವ ಸಾಮರ್ಥ್ಯ ಹೆಚ್ಚಳ ತಂತ್ರಜ್ಞಾನದ ಸುಧಾರಣೆಯ ಹೊಸ ಯೋಜನೆ ಆರಂಭಿಸಿತು. ಇಲ್ಲಿಯೂ ಸಂಸ್ಥೆಗೆ ಬಹುದೊಡ್ಡ ಯಶಸ್ಸು ದೊರೆಯಿತು. ಈ ಯಶಸ್ಸು
ಗುಡುಗುಂಟೆಯವರಿಗೆ ಸ್ವಂತದ ಸಕ್ಕರೆ ಕಾರ್ಖಾನೆ ಕಟ್ಟಲು ನೆರವಾಯಿತು.

ಜಮಖಂಡಿ ತಾಲೂಕು ಸಿದ್ದಾಪುರ ಗ್ರಾಮದ ಬಳಿ ಸುಮಾರು 200 ಎಕರೆ ಜಮೀನು ಖರೀದಿಸಿ ಸಕ್ಕರೆ, ವಿದ್ಯುತ್, ಡಿಸ್ಟಲರಿ,
ಎಥೆನಾಲ್ ಹಾಗೂ ಸಾವಯವ ಗೊಬ್ಬರವನ್ನು ಉತ್ಪಾದಿಸುವ ಬೃಹತ್ ಸಕ್ಕರೆ ಉದ್ದಿಮೆ ಸಮೂಹ ನಿರ್ಮಿಸಿದ್ದಾರೆ. ಹತ್ತು ವರ್ಷ ಗಳಿಂದ ಕಾರ್ಖಾನೆ ಪ್ರಗತಿ ಪಥದಲ್ಲಿ ಸಾಗುತ್ತಿದೆ. ದಿನಂಪ್ರತಿ ಹತ್ತು ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ಸಕ್ಕರೆಯೊಂದಿಗೆ  ದ್ಯುತ್, ಡಿಸ್ಟಿಲರಿ ಹಾಗೂ ಸಾವಯವ ಗೊಬ್ಬರ ಉತ್ಪಾದನೆಯ ಘಟಕಗಳನ್ನು ಗುಡಗುಂಟಿ ಅವರು ಕಟ್ಟಿದ್ದಾರೆ.

ಕಾರ್ಖಾನೆ ರೈತ ಸ್ನೇಹಿಯಾಗಿ ಅವರ ಅಭಿವೃದ್ಧಿ ಹರಿಕಾರನಾಗಿ ನಿಂತಿದೆ. ರೈತರು ಪೂರೈಸಿದ ಕಬ್ಬಿಗೆ ಸತತವಾಗಿ ಅಧಿಕ ಬೆಲೆ
ಕೊಡುವ ಸಂಪ್ರದಾಯವನ್ನು ಕಾರ್ಖಾನೆ ಬೆಳೆಸಿಕೊಂಡು ಬಂದಿದೆ. ಈ ಸಕ್ಕರೆ ಕಾರ್ಖಾನೆಯ ಉತ್ತಮ ಕಾರ್ಯ ಸಾಧನೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅಧಿಕ ಸಕ್ಕರೆ ಇಳುವರಿಗಾಗಿ ಸತತವಾಗಿ 3 ವರ್ಷ ಪಾರ್ಥಸಾರಥಿ ಪ್ರಶಸ್ತಿ ಲಭಿಸಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿಗಳು ಕಾರ್ಖಾನೆಗೆ ಲಭಿಸಿವೆ. ಈಗ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿರುವುದು ಅತ್ಯಂತ ಸೂಕ್ತವಾಗಿದೆ.

ರೈತರಿಗೆ ಹೆಚ್ಚು ಇಳುವರಿಯ ರೋಗ ರಹಿತ ಸುಧಾರಿಸಿದ ಕಬ್ಬಿನ ಬೀಜ ಪೂರೈಕೆಯ ಮಹತ್ವದ ಯೋಜನೆಯನ್ನು ಕಾರ್ಖಾನೆ ಹಮ್ಮಿಕೊಂಡಿದೆ ಕಾರ್ಖಾನೆ ಕಬ್ಬು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಆರಂಭಿಸಿದೆ. ರೈತರಿಗೆ ಉಚಿತವಾಗಿ ಮಣ್ಣು ಪರೀಕ್ಷೆ, ನೀರು ಪರೀಕ್ಷೆ ಮಾಡಿ ಕೊಡಲಾಗುತ್ತದೆ. ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳನ್ನು ಯೋಗ್ಯಬೆಲೆಗೆ ಪೂರೈಸ ಲಾಗುತ್ತಿದೆ.

ರೈತರ ಕೃಷಿ ಮಾಹಿತಿ ಕೈಪಿಡಿಗಳ ಉಚಿತ ವಿತರಣೆ ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ಹೊಸ ತಳಿಗಳ ಸಂಶೋಧನೆಯನ್ನು ಕಾರ್ಖಾನೆ ಆರಂಭಿಸಿದೆ. ರೈತರ ಹಾಗೂ ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ ಕಾರ್ಖಾನೆಯ ಆವರಣದಲ್ಲಿ ಶಾಲೆ ಆರಂಭಿಸ
ಲಾಗಿದೆ. ರೈತರ ಅನುಕೂಲಕ್ಕಾಗಿ ಪ್ರಭುಲಿಂಗೇಶ್ವರ ಸಹಕಾರಿ ಪತ್ತಿನ ಬ್ಯಾಂಕ್ ಸ್ಥಾಪಿಸಲಾಗಿದೆ. ಎಕ್ಸ್‌ಟ್ರ್ಯಾಕ್ಟ್ ಕಂಪನಿ ಆಧುನಿಕ ಸಕ್ಕರೆ ಯಂತ್ರೋಪಕರಣಗಳನ್ನು ಉತ್ಪಾದಿಸುವಲ್ಲಿ ಹೆಸರು ಗಳಿಸಿದೆ.

ಕೀನ್ಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮುಂತಾದ ದೇಶಗಳಿಗೆ ಸಕ್ಕರೆ ಕಾರ್ಖಾನೆಗಳ ಪೂರ್ಣ ಯಂತ್ರಗಳನ್ನು ಪೂರೈಸುವುದು ಹೆಮ್ಮೆಯ ವಿಷಯವಾಗಿದೆ. ಸಕ್ಕರೆ ಉದ್ಯಮ ಕೃಷಿ ಆಧರಿತ ಉದ್ದಿಮೆಯಾಗಿದೆ. ತಮ್ಮ ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿ ಬರುವ
ಸುಮಾರು ೩೦,೦೦೦ ರೈತರಿಗೆ ವೈಜ್ಞಾನಿಕ ಕಬ್ಬು ಬೇಸಾಯಕ್ಕೆ ಮಾರ್ಗದರ್ಶನ ನೀಡುವ ಸಂಶೋಧನಾ ಕೇಂದ್ರವನ್ನು ಆರಂಭಿಸಿದ್ದಾರೆ. ಈ ಕೇಂದ್ರವು ಹೆಚ್ಚು ಇಳುವರಿಯ ರೋಗ ರಹಿತ ಕಬ್ಬಿನ ಬೀಜದ ಸಂಶೋಧನೆಗೆ ಆದ್ಯತೆ ನೀಡಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳು ಕಾರ್ಖಾನೆಗೆ ಲಭಿಸಿವೆ.

ಈಗ ಜಗದೀಶ ಗುಡಗುಂಟೆ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಸೂಕ್ತವಾ ಗಿದೆ.