Friday, 22nd November 2024

ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಮತದಾನ ಪ್ರಗತಿಯಲ್ಲಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರಗಳ 5 ಜಿಲ್ಲೆಗಳ 44 ಕ್ಷೇತ್ರಗಳಿಗೆ ನಾಲ್ಕನೇ ಹಂತದ ಮತದಾನ ಶನಿವಾರ ಆರಂಭವಾಗಿದೆ.

ಹೌರಾ, ಹೂಗ್ಲಿ, ದಕ್ಷಿಣ 24 ಪರ್ಗಾನ, ಅಲಿಪುರ್ದೌರ್ ಮತ್ತು ಕೂಚ್ ಬೆಹರ್ ಗಳಲ್ಲಿ ಮತದಾನ ನಡೆಯುತ್ತಿದೆ. ಪ್ರತಿಷ್ಠಿತ ಟೊಲ್ಲಿಗುಂಗೆ ಕ್ಷೇತ್ರದಲ್ಲಿ ಬಿಜೆಪಿಯ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ರನ್ನು ಟಿಎಂಸಿ ಶಾಸಕ ಅರೂಪ್ ಬಿಸ್ವಾಸ್ ವಿರುದ್ಧ ನಿಲ್ಲಿಸಲಾಗಿದೆ.

ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಬಿಸ್ವಾಸ್ ಸಚಿವ ಆಗಿದ್ದಾರೆ. ಸಮಾಜವಾದಿ ಸಂಸದೆ ಜಯಾ ಬಚ್ಚನ್ ಟಿಎಂಸಿ ಅಭ್ಯರ್ಥಿ ಅರೂಪ್ ಬಿಸ್ವಾಸ್ ಪರ ಮತಯಾಚನೆ ಮಾಡಿದ್ದಾರೆ. ಸಿಪಿಎಂನಿಂದ ಡೆಬ್ಟಟ್ ಘೋಷ್ ಚುನಾವಣಾ ಕಣಕ್ಕಿಳಿದಿದ್ದಾರೆ.

ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ತೃಣಮೂಲ ಕಾಂಗ್ರೆಸ್ ಸಿಟಲ್ಕುಚಿ, ನಟಲ್ಬರಿ, ಟುಫಂಗಂಜ್ ಮತ್ತು ದಿನ್ಹಟಗಳಲ್ಲಿ ಬಿಜೆಪಿಯ ಗೂಂಡಾಗಳು ಮತಗಟ್ಟೆಯ ಹೊರಗೆ ದಾಂಧಲೆ ಎಬ್ಬಿಸಿದ್ದು, ಮತಗಟ್ಟೆಯ ಒಳಗೆ ಹೋಗಲು ಟಿಎಂಸಿ ಏಜೆಂಟ್ ಗಳಿಗೆ ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕೇಂದ್ರ ಪಡೆಗಳಿಗೆ ನೆರವಾಗಲು ರಾಜ್ಯ ಪೊಲೀಸ್ ಪಡೆಗಳನ್ನು ಕಾರ್ಯತಂತ್ರದ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳಿಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮೇ 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily