Sunday, 15th December 2024

ಸರ್ವಪಕ್ಷಗಳೂ ಕೂಡಿ ನಡೆದರೆ ಸಮಾಜ ಸುಖ !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

ಎರಡು ವರ್ಷದ ಮುಗ್ಧ ಗಂಡುಮಗು ಧರಿಸಿರುವ ಚಡ್ಡಿ ಜಾರಿ ಸ್ವಲ್ಪ ಕೆಳಗೆ ಸರಿದರೆ ಹೇಗೆ ಕಾಣುತ್ತದೆಯೋ ಹಾಗೆಯೇ ಜನ
ಮುಖಕ್ಕೆ ಧರಿಸಿರುವ ಮಾಸ್ಕ್ ಮೂಗು ಬಾಯಿಯಿಂದ ಕೆಳಗೆ ಜಾರಿದಾಗ ಕಾಣುತ್ತದೆ.

ನಮ್ಮ ಜನರೇ ಹೀಗೆ ಮಾಸ್ಕ್ ಅನ್ನು ನೆಪಮಾತ್ರಕ್ಕೆ ಧರಿಸುತ್ತಾರೆ. ಆದರೆ ಮುಚ್ಚಿಕೊಳ್ಳಬೇಕಾದ ಮೂಗು ಬಾಯಿಯನ್ನೇ
ಮುಚ್ಚಿಕೊಳ್ಳದೆ ಅಸಡ್ಡೆ ತೋರುತ್ತಾರೆ. ಇದಕ್ಕೆ ವಿದ್ಯಾವಂತರೂ ಹೊರತಲ್ಲ. ಕಳೆದ ಒಂದು ವರ್ಷ ದಿಂದ ಮಾಸ್ಕ್ ಎಂಬುದು ಒಳಉಡುಪಿನಂಥ ಸ್ಥಾನವನ್ನು ಪಡೆದುಕೊಂಡಿದೆ. ಮಾಸ್ಕ್ ಧರಿಸದಿದ್ದರೆ ಅಥವಾ ಧರಿಸಿಯೂ ಮಗುವಿನ ಚಡ್ಡಿಯಂತೆ ಗಲ್ಲಕ್ಕೆ
ಇಳಿದಿದ್ದರೆ ಅದು ಒಂದು ರೀತಿ ಅಸಹಜ ಅಥವಾ ಅಶ್ಲೀಲವೋ ಎಂಬಂತೆ ಭಾಸವಾಗುತ್ತದೆ.

ಅಷ್ಟರ ಮಟ್ಟಿಗೆ ಮಾಸ್ಕ್ ಎಂಬುದು ಸಮಾಜದಲ್ಲಿ ಮಾನ ಮುಚ್ಚಿಕೊಳ್ಳುವ (ಇಂದು ಧರಿಸದಿದ್ದರೆ ಜನರೇ ಎಚ್ಚರಿಸುತ್ತಾರೆ) ಪುಟಗೋಸಿಯಂತೆ ಮುಖಗೋಸಿ ಯಾಗಿದೆ. ಸಾಮಾಜಿಕ ಅಂತರವೆಂಬುದು ನಾಟಕೀಯವಾಗಿ ಹೋಗಿದೆ. ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಜರ್ ಮಂಗಳಾರತಿ ತೀರ್ಥ ವಿನಿಯೋಗದಂತೆ ಕರೋನಾ ಕಾಟಾಚಾರವಾಗಿದೆ. ಒಂದೊಮ್ಮೆ ಥರ್ಮಲ್ ಸ್ಕ್ಯಾನಿಂಗ್‌ ನಲ್ಲಿ ಉಷ್ಣಾಂಶ ಹೆಚ್ಚು ತೋರಿಸಿದರೆ ‘ಏ, ಈ ಮೀಟರೇ ಸರಿಯಿಲ್ಲ ಹೋಗಯ್ಯ’ ಎಂದು ದಬಾಯಿಸಿ ಒಳನುಗ್ಗುತ್ತಾರೆ.

ಇನ್ನು ಇಪ್ಪತ್ತು ಸೆಕೆಂಡುಗಳ ಕಾಲ ಕೈತೊಳೆಯಬೇಕೆಂಬುದು ಕಠಿಣ ಯೋಗಾಸನ ಮಾಡಿದಂತೆ ಭಾವಿಸಿದಂತಿದೆ. ನಮ್ಮಲ್ಲಿ ಎಂತೆಂಥ ಜನಗಳಿರುತ್ತಾರೆಂದರೆ ದಾರಿಯಲ್ಲಿನ ಕಂಪೌಂಡು ಅಥವಾ ಮೋರಿಯಲ್ಲಿ ಮೂತ್ರವಿಸರ್ಜನೆ ಮಾಡಿ ಕೈತೊಳೆ ಯದೇ
ಅದೇ ಕೈಯಲ್ಲೇ ಎಲ್ಲವನ್ನು ಮುಟ್ಟಿಕೊಂಡು ತಿಂದು ಕೊಂಡು ಮನೆ ಸೇರುತ್ತಾರೆ. ಇಂಥವರಿಗೆ ಸಾಬೂನಿನಲ್ಲಿ ಕೈತೊಳೆಯು ವುದು ಅವೈಜ್ಞಾನಿಕವಾಗಿ ಕಾಣುತ್ತದೆ. ಹೀಗಾಗಿ ಇಂಥ ಅವಿವೇಕತನ ಅಸಡ್ಡೆಗಳಿಂದ ಕರೋನಾ ಅನೈತಿಕ ಲೇಡಿಯಂತೆ ಹಿತವಾಗಿ ಬಂದು ಮೋಹಿಸಿ ಸತಾಯಿಸಿ ಸಾಯಿಸುತ್ತಿದೆ.

ಆದರೆ ಜನ ಕರೋನಾ ಮಾರ್ಗಸೂಚಿಯನ್ನು ಧಿಕ್ಕರಿಸಿ ಕರೋನಾದೊಂದಿಗೆ ಹನಿಟ್ರ್ಯಾಪ್‌ಗೆ ಒಳಗಾಗುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಮಾರ್ಷಲ್‌ಗಳು, ಗೃಹದಳದವರು ಪೊಲೀಸರನ್ನು ನೇಮಿಸಿದರೂ ಅವರ ಮೇಲೂ ಅಟ್ಟಹಾಸ ಮೆರೆದು ದರ್ಪ, ದುರಂಹಕಾರ ಪ್ರದರ್ಶಿಸಿ ರೌಡಿತನ ತೋರಿಸುತ್ತಾರೆ. ಇನ್ನೆಲ್ಲಿ ಕರೋನಾ ನಿಯಂತ್ರಣ?. ದಿನದಿನಕ್ಕೂ ಏರುತ್ತಿರುವ ಕರೋನಾ ಸೋಂಕು ಮೊನ್ನೆ ಎರಡು ಮೂರು ದಿನಗಳಿಂದ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಸ್ವಲ್ಪ ಇಳಿಮುಖವಾಗಲು ಕಾರಣ
ವೇನು ಎಂದು ಖ್ಯಾತ ವೈರಾಣು ತಜ್ಞರಾದ ಡಾ.ರವಿ ಅವರನ್ನು ಪ್ರಶ್ನಿಸಿದಾಗ ಅವರು ಕೊಟ್ಟ ಕಾರಣ ನಿರಂತರ ರಜಾ ದಿನಗಳು ಇದ್ದದ್ದರಿಂದ ಎಂಬುದಾಗಿ ತಿಳಿಸುತ್ತಾರೆ.

ಅಂದರೆ ರಜಾ ದಿನಗಳಿದ್ದರಿಂದ ಜನ ಹೊರಗಡೆ ಬರುವುದು ಕಡಿಮೆಯಾದ್ದರಿಂದ ಕರೋನಾ ಬೀದಿಪಾಲಾಗಿ ಅನಾಥವಾಯ್ತು ಎಂಬುದು ಸಾಬೀತಾಯಿತು. ಇದರರ್ಥ ಕರೋನಾ ಕೊಲ್ಲಲು ಲಾಕ್‌ಡೌನ್ ಕ್ರಮವೇ ಸೂಕ್ತ ಎಂಬುದು ಪಕ್ಕಾ ಆಯ್ತು ಅಲ್ಲವೇ.
ಜತೆಗೆ ಲಾಕ್‌ಡೌನ್‌ಗಿಂತ ಜನರೇ ಸ್ವಯಂ ಪ್ರೇರಣೆಯಿಂದ ಲಾಕ್‌ಇನ್ ಆದರೆ ಅದಕ್ಕಿಂತ ದೊಡ್ಡ ಭಾಗ್ಯ ಬೇಕಿಲ್ಲ ಎನ್ನುತ್ತಾರೆ ತಜ್ಞರು. ಕಳೆದ ವರ್ಷ ಸರಿಯಾದ ಸಮಯದಲ್ಲಿ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಅಮೆರಿಕ ಇಟಲಿಗಳಲ್ಲಿ ಆದಂತೆ ನಮ್ಮ ದೇಶದಲ್ಲಿ ಜನರು ಬೀದಿಹೆಣಗಳಾಗಿ ಬೀಳಲಿಲ್ಲ.

ಆದರೆ ಲಾಕ್ ಡೌನ್‌ನಂಥ ಕಠಿಣ ಕ್ರಮವನ್ನು ಕೈಗೊಂಡು ಜನರ ಜೀವವನ್ನು ಉಳಿಸಿಕೊಂಡಿದ್ದು ದೊಡ್ಡ ಸಾಧನೆಯಾದರೂ ಅದರಿಂದ ದೇಶದ ಮೇಲಾದ ಆರ್ಥಿಕತೆಯ ದುಷ್ಪರಿಣಾಮದಿಂದ ಸಮಾಜ ಇಂದಿಗೂ ಚೇತರಿಸಿಕೊಳ್ಳುತ್ತಿದೆ. ಆದರೆ ಈ ವರ್ಷ ಕಳೆದ ವರ್ಷಕ್ಕಿಂತ ವೇಗವಾಗಿ ಹರಡುತ್ತಿದ್ದರೂ ಮತ್ತೆ ಲಾಕ್‌ಡೌನ್ ಜಾರಿ ಮಾಡುವುದು ಸರಕಾರಗಳಿಗೆ ಆರ್ಥಿಕ ಆತ್ಮಹತ್ಯೆ
ಮಾಡಿಕೊಂಡಂತೆ ಎಂಬುದು ಮನದಟ್ಟಾಗಿದೆ.

ದುರಂತವೆಂದರೆ ದೇಶದಲ್ಲಿನ ರಾಜಕಾರಣದ ಪ್ರತಿ ಪಕ್ಷಗಳಿಗೆ ಒಳಗೊಳಗೇ ಬೇಕಿರುವುದು ಈ ಆರ್ಥಿಕ ಆತ್ಮಹತ್ಯೆಯೇ. ಏಕೆಂದರೆ ಕಳೆದ ವರ್ಷ ಆದ ಲಾಕ್ ಡೌನ್ ಪರಿಣಾಮದಿಂದ ಬೆಳವಣಿಗೆ ಅಭಿವೃದ್ಧಿ ಉತ್ಪಾದನೆ ಕುಂಠಿತವಾಗಿ ನಿರುದ್ಯೋಗ ಬಡತನಗಳಿಗೆ
ಕಾರಣವಾದುದ್ದನ್ನೇ ಬಳಸಿಕೊಂಡು ಗತಿಗೆಟ್ಟ ರಾಜಕೀಯ ಪಕ್ಷಗಳು ಸಮಯ ಸಾಧಕರು ಕೃಷಿ ಕಾಯಿದೆ ರೈತರು ಅನ್ನ ಸಾರಿಗೆ ಎಂದೆಲ್ಲಾ ಸೇರಿಸಿ ಮಸಾಲೆ ಹರಿದು ಜನರನ್ನು ದಿಕ್ಕುತಪ್ಪಿಸಿ ಸರಕಾರದ ಮೇಲೆ ಗೂಬೆ ಕೂರಿಸುವ ತಂತ್ರವನ್ನು ಮಾಡಲಾರಂಭಿ
ಸಿದ್ದಾರೆ. ಇಂಥವರಿಗೆ ಒಂದು ಕಡೆ ಲಾಕ್‌ಡೌನ್ ಆಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಬೇಕು.

ಇನ್ನೊಂದು ಕಡೆ ಲಾಕ್‌ಡೌನ್ ಆಗದೆಯೂ ಹೆಚ್ಚೆಚ್ಚು ಜನರು ಸೋಂಕಿತರಾಗಿ ಹೆಣಗಳು ಬೀಳಲೂ ಬೇಕು. ಏಕೆಂದರೆ ಹೆಣಗಳು ಬಿದ್ದಾಗ ಸರಕಾರ ಸಾವಿನ ಏಜೆಂಟ್ ಎಂದು ದೂರುತ್ತಾ ತಮ್ಮ ರಾಜಕೀಯದ ಮಾಂಸವನ್ನು ಬೇಯಿಸಿಕೊಳ್ಳಬೇಕು. ಲಾಕ್‌ಡೌನ್ ಮಾಡಿದರೆ ಅದರಿಂದ ಸಹಜವಾಗಿ ಆಗುವ ಆರ್ಥಿಕ ಹಿನ್ನಡೆಯನ್ನು ಮರೆಮಾಚಿ ಕೇವಲ ಬೆಲೆ ಏರಿಕೆ, ಜಿಡಿಪಿ ಆರ್ಥಿಕ
ದಿವಾಳಿತನ ಎಂದು ಬಾಯಿ ಬಡಿದುಕೊಂಡು ಇವುಗಳನ್ನೇ ಅಪಪ್ರಚಾರ ಮಾಡಿ ಜನರನ್ನು ಎತ್ತಿಕಟ್ಟಿ ಲಾಭ ಮಾಡಿಕೊಳ್ಳುವ ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಈ ಅಂಶಗಳನ್ನೇ ಮುಂದಿನ ಚುನಾವಣೆಗಳಲ್ಲಿ ಬಳಸಿಕೊಂಡು ಬಾಯಿಗೆ ಬಂದಂತೆ ಭಾಷಣ ಮಾಡುತ್ತಾರೆ.

ಹೀಗೆ ದೇಶವನ್ನು ಮುನ್ನಡೆಸಬೇಕಾದ ಸಮಾಜವನ್ನು ಕಾಪಾಡಬೇಕಾದ ಸಂವಿಧಾನಾತ್ಮಕ ಬಾಧ್ಯತೆಯುಳ್ಳ ರಾಜಕೀಯ ಪಕ್ಷಗಳೇ ಮನೆಯೊಳಗಿನ ಶತ್ರುಗಳಂತೆ ಬದಲಾಗಿ ಹೋಗಿವೆ. ಇಂಥವರನ್ನು ವಿರೋಧ ಪಕ್ಷಗಳೆನ್ನಬೇಕೋ ಅಥವಾ ಸಮಾಜ ವಿರೋಧಿ ಗಳೆನ್ನಬೇಕೋ ಮೊದಲು ನಿರ್ಧರಿಸಬೇಕಿದೆ. ಹೀಗಾಗಿ ಆಡಳಿತ ಪಕ್ಷಗಳಿಗೆ ಸಾರ್ವಜನಿಕರಿಗಿಂತ ವಿರೋಧ ಪಕ್ಷಗಳ ಕಿತಾಪತಿ ಕುತಂತ್ರಗಳ ಕುರಿತೇ ಹೆಚ್ಚು ಚಿಂತಿಸುವಂತ್ತಾಗಿರುವುದು ಸುಳ್ಳಲ್ಲ. ಹೀಗಾಗಿ ಲಾಕ್‌ಡೌನ್ ಮಾಡಿತಾದರೂ ಕಷ್ಟ ಮಾಡಿದ್ದರೂ ಕಷ್ಟ ಎಂಬಂತ್ತಾಗಿದೆ.

ಇದಕ್ಕೆಲ್ಲಾ ನೇರ ಕಾರಣ ನಮ್ಮ ಮಹಾಪ್ರಜೆಗಳು. ಕರೋನಾ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಅಪಾಯವೆಂದು ಅರಿವಿದ್ದರೂ ಉಡಾ-ಯಿಂದ ವರ್ತಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ಕುರಿತು ದಿನಂಪ್ರತಿ ಎಚ್ಚರಿಸುತ್ತಿದ್ದರೂ ನಮ್ಮ ನಾಗರಿಕರಿಗೆ ಎನೂ ಅನಿಸುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಯಾವ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಯಥಾ ಪ್ರಕಾರ ಸಾಗುತ್ತಿದ್ದಾರೆ. ಯಾರ ಮಾತನ್ನೂ, ಯಾರ ಸೂಚನೆಯನ್ನೂ ಗಂಭೀರವಾಗಿ ತಲೆಗೆ ಹಾಕಿಕೊಳ್ಳುತ್ತಿಲ್ಲ.

ಇದರಿಂದ ಕರೋನಾ ಕೇಸುಗಳು ಹೆಚ್ಚುತ್ತಿದ್ದರೂ ಸರಕಾರಕ್ಕೆ ಆರ್ಥಿಕತೆಯ ದೃಷ್ಟಿಯಲ್ಲಿ ಲಾಕ್‌ಡೌನ್ ಜಾರಿಮಾಡುವುದು ಹೊರೆಯಾಗಿ ಕಾಣುತ್ತಿದೆ. ಮಾಡದಿದ್ದರೆ ಸೋಂಕು ಹೆಚ್ಚಾಗಿ ಬೀದಿಹೆಣಗಳಾಗಿ ಹೋಗುವ ದುಸ್ಥಿತಿಗೆ ಬರುವುದನ್ನು ನೋಡಬೇಕಾಗುತ್ತದೆ. ಈಗಾಗಲೇ ದೇಶದ ಹಲವೆಡೆ ಸೋಂಕಿನಿಂದ ಮೃತರಾದ ದೇಹಗಳನ್ನು ಸುಡಲು ಹೆಣ ಕಾಯಬೇಕಾದ ದುರ್ಗತಿ ಬಂದೊದಗಿದೆ. ಹೀಗಾದರೆ ದೇಶದ ಕಥೆ ಏನು ಎಂಬುದು ಸಾರ್ವಜನಿಕರು ಗಂಭೀರವಾಗಿ ಯೋಚಿಸಬೇಕಿದೆ. ಅದರಂತೆ ಅನವಶ್ಯಕವಾಗಿ ಮನೆಯಿಂದ ಹೊರಗಡೆ ಬರದೆ, ಬಂದಾಗ ಪರಸ್ಪರ ತಿಳುವಳಿಕೆಗಳಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸುವುದು ಇನ್ನಿತರ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕಾದ
ಹೊಣೆಗಾರಿಕೆಯನ್ನು ತೋರಲೇಬೇಕಿದೆ.

ಒಂದು ಕಡೆ ದೂರವಾಣಿ ಕರೆಮಾಡಿದರೆ ಸಾಕು ಕರೋನಾ ಎಚ್ಚರಿಕೆಯ ಸಂದೇಶ ಪುನರ್‌ವರ್ತಿಸುತ್ತದೆ. ಕಂಡಕಂಡಲ್ಲಿ ಕರೋನಾ ಜಾಗೃತಿ ಜಾಹೀರಾತುಗಳನ್ನು ಪ್ರದರ್ಶಿಲಾಗುತ್ತಿದೆ. ಮಾಧ್ಯಮಗಳಲ್ಲಿ ಮಾಲು ಮಾರ್ಕೆಟ್ಟು ಚಿತ್ರಮಂದಿರಗಳು ಹೋಟೆಲ್‌ಗಳು ಕೊನೆಗೆ ರಾಜಕೀಯದ ಪ್ರಚಾರ ಸಭೆಗಳಲ್ಲಿ ಮಾಸ್ಕ್ ಸಾಮಾಜಿಕ ಅಂತರಗಳನ್ನು ಪಾಲಿಸದ ದೃಶ್ಯಗಳನ್ನು
ಪ್ರತಿನಿತ್ಯ ತೋರಿಸುತ್ತಿದ್ದರೂ ಜನ ಬದಲಾಗುತ್ತಿಲ್ಲ.

ಲಾಕ್‌ಡೌನ್ ಮಾಡಿದರೆ ಜನಗಳ ಶಾಪ, ಮಾಡದೇ ಕರೋನಾ ನಿಯಂತ್ರಿಸಲು ಜನ ಸ್ಪಂದಿಸುತ್ತಿಲ್ಲ. ಇನ್ನು ವಿರೋಧ ಪಕ್ಷಗಳು ಮಲತಾಯಿಯಂತೆ ವರ್ತಿಸಿ ಪ್ರತಿಯೊಂದು ವಿಚಾರವನ್ನೂ ಸ್ವಾರ್ಥ ರಾಜಕೀಯ ತಟ್ಟೆಯಲ್ಲಿಟ್ಟೇ ನೋಡುತ್ತಾ ಆಡಳಿತ ಪಕ್ಷಗಳನ್ನು ಶತ್ರು ದೇಶದಂತೆ ಕಂಡು ಸಾಯ್ಲಿಬಿಡು, ಜನರಿಂದ ಚೆನ್ನಾಗಿ ಉಗಿಸಿಕೊಳ್ಳಲಿ, ಮುಂದಿನ ಚುನಾವಣೆಯಲ್ಲಿ
ನಮಗೇ ಮತನೀಡುತ್ತಾರೆ, ನನ್ನನ್ನೇ ಮುಖ್ಯಮಂತ್ರಿ ಮಾಡುತ್ತಾರೆ ಎಂಬ ಲೆಕ್ಕಾಚಾರದಲ್ಲೇ ವರ್ತಿಸುತ್ತಿರುವುದು ಸಾಮಾನ್ಯನಿಗೂ ಗೋಚರಿಸುತ್ತಿದೆ. ಹೀಗಾಗಿ ಸರಕಾರಕ್ಕೆ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.

ಹೀಗಾಗಿ ದಿಕ್ಕೆಟ್ಟವರಂತಾಗಿರುವ ಯಡಿಯೂರಪ್ಪನವರ ಸಂಪುಟ ಕರೋನಾ ನಿಯಂತ್ರಿಸಲು ನಾಳೆ ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಮೇಲ್ನೋಟಕ್ಕೆ ಸರ್ವಪಕ್ಷಗಳ ಸಭೆಯಾದರೂ ವಿರೋಧ ಪಕ್ಷಗಳಿಗೆ ಮಾತ್ರ ಇದು ಒಂದು ರೀತಿಯಲ್ಲಿ ತಿಥಿಯೂಟಕ್ಕೆ
ಹೋಗಿಬಂದಂತೆ. ಸರ್ವಪಕ್ಷಗಳ ಸಭೆಯಲ್ಲಿ ಸರಕಾರಕ್ಕೆ ಸಲಹೆ ಸೂಚನೆ ನೀಡುವುದು ಸರಕಾರದ ಕ್ರಮಗಳಿಗೆ ಬೆಂಬಲಿಸುವುದು ಆ ಮೂಲಕ ಸಾಮಾಜಿಕ ಸುಧಾರಣೆಗೆ ಕಾರಣವಾಗಿ ಆಡಳಿತ ಪಕ್ಷವನ್ನು ಗಟ್ಟಿಗೊಳಿಸುವುದರಿಂದ ನಮಗೇನು ಲಾಭ ಎಂಬ ಸ್ವಾರ್ಥದ ಚಿಂತನೆಯೇ ತಲೆಯಲ್ಲಿ ಕೂರುತ್ತದೆ.

ಅಷ್ಟರ ಮಟ್ಟಿಗೆ ರಾಜಕೀಯವೆಂಬುದು ಸಮಾಜಘಾತಕ ಶಕ್ತಿಯಾಗಿ ಬದಲಾಗಿದೆಯೆಂದರೆ ಅತಿಶಯೋಕ್ತಿಯಲ್ಲ. ನಮ್ಮ
ಶಾಸಕಾಂಗದಲ್ಲಿ ಆಡಳಿತ ಪಕ್ಷಕ್ಕಿರುವಷ್ಟೇ ಮಹತ್ವ ವಿರೋಧ ಪಕ್ಷಗಳಿಗೂ ಇದೆ. ಆದರೆ ಕೆಲಪಕ್ಷಗಳು ಗುಲಾಮರ ಪಕ್ಷಗಳಾಗಿ ಬದಲಾಗಿ ಪ್ರಜಾಪ್ರಭುತ್ವ- ಸಮಾಜ-ದೇಶಕ್ಕಿಂತ ತಮ್ಮ ಪಕ್ಷಗಳ ಹೆಣ ಹೊರವುದೇ ಪರಮ ಪವಿತ್ರ ಧ್ಯೇಯವಾಗಿಬಿಟ್ಟಿದೆ.

ಕರೋನಾ ಬಹಳ ಅಪಾಯಕಾರಿ ಮಟ್ಟ ತಲುಪಿರುವ ಇಂದು ಮೊದಲು ಜನಪ್ರತಿನಿಧಿಗಳ ಚಿಂತನೆಗಳು, ವರಸೆಗಳು ಬದಲಾಗಬೇಕು. ನೋಡಿ, ಚುನಾವಣೆ ಘೋಷಣೆಯಾದರೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ನಾಯಕರು ಕಾರ್ಯಕರ್ತರು ಪುಡಾರಿ
ಗಳು ಬೀದಿಗೆ ಬಂದು ಮನೆಮನೆಯ ಕದತಟ್ಟಿ ಕಾಲು ಕೈ ಮುಗಿದು ಅವರನ್ನು ಪ್ರೀತಿ ಗೌರವದಿಂದ ಮಾತನಾಡಿಸಿ ಮತಭಿಕ್ಷೆ ಬೇಡುವುದಿಲ್ಲವೇ?.

ಅದೇ ಕೆಲಸವನ್ನು ನಮ್ಮ ಸಂಸದರು ಶಾಸಕರು ಪಾಲಿಕೆ ಸದಸ್ಯರುಗಳು ಪಂಚಾಯಿತಿ ಸದಸ್ಯರು ಅಧ್ಯಕ್ಷರುಗಳು ಮತ್ತು ಇವರ
ಬಾಲಬುಡು ಕರು ಎಲ್ಲರೂ ಸೇರಿ ಕರೋನಾ ಮಾರ್ಗ ಸೂಚಿ ಪರಿಪಾಲಕರ ಮಾಡೆಲ್ ಆಗಿ ರಸ್ತೆಗೆ ಬಂದು ತೆರೆದ ವಾಹನದಲ್ಲಾ ಗಲಿ ಬೀದಿಬೀದಿಗೆ ಮನೆಮನೆಗೆ ತೆರಳಿ ಮತದಾರರ ಕೈಕಾಲು ಮುಗಿದು ದಯಮಾಡಿ ಕರೋನಾ ಸುರಕ್ಷತೆ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ, ಗುಂಪಾಗಿ ಸೇರಬೇಡಿ, ಮಾಸ್ಕ್ ಧರಿಸಿ, ಸಮಾಜವನ್ನು ಆರೋಗ್ಯವಾಗಿರಿಸಿ ನೀವುಗಳೂ ಆರೋಗ್ಯದಿಂದಿರಿ ಎಂದು ಅಂಗಲಾಚಬಹುದಲ್ಲವೇ.

ಇವರೊಂದಿಗೆ ನಮ್ಮ ಜಾತಿಮಠಗಳ ಮಹಾಸ್ವಾಮೀಜಿಗಳು ಸ್ಟಾರ್‌ಪ್ರಚಾರಕರು ಸಿನಿಮಾ ನಟನಟಿಯರು ಬುದ್ಧಿಜೀವಿಗಳು ವಿಚಾರವಾದಿಗಳು ಮನೆಯಿಂದ ಹೊರಗೆ ಬಂದು ಜನರಿಗೆ ಅರಿವು ಮೂಡಿಸುವ ಕೆಲಸ ಏಕೆ ಮಾಡಬಾರದು? ಇದಕ್ಕಿಂತ ಘನಂಧಾರಿ ಕೆಲಸ ಬೇರೇನಿದೆ ಇವರುಗಳಿಗೆ? ಒಬ್ಬ ಪಾಲಿಕೆ ಸದಸ್ಯ ಬೀದಿಗೆ ಬಂದರೆ ಸಾಕು ಆತನ ಹಿಂದೆ ನೂರು ಜನರು ಹಿಂಬಾಲಿಸುತ್ತಾರೆ. ಮತದಾರರು ಕೈಮುಗಿದು ಗೌರವಿ ಸುತ್ತಾರೆ.

ಆಗ ಆತ ಬೀದಿಯಲ್ಲಿ ಹೀಗೆ ಕಸ ಹಾಕಬೇಡಿ ಎಂದು ವಿನಮ್ರವಾಗಿ ಎಚ್ಚರಿಸಿದರೆ ಖಂಡಿತಾ ಸಾರ್ವಜನಿಕರು ಪಾಲಿಸುತ್ತಾರೆ. ಹಾಗೆಯೇ ಬಹಳ ಅನಿವಾರ್ಯತೆ ಯಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ, ಇಲ್ಲದಿದ್ದರೆ ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಜನಸ್ನೇಹಿಯಾಗಿ ಅವರವರ ಕ್ಷೇತ್ರಗಳಲ್ಲಿ ಸಮಾಜದೊಳಗೆ ತೊಡಗಿಸಿ ಕೊಂಡು ಹಗಲು
ರಾತ್ರಿ ಒಂದೊಂದು ಪ್ರದೇಶವನ್ನು ಸುತ್ತಿ ಜಾಗೃತಿ ಮೂಡಿಸಿದರೆ ಜನರು ಭಾವನಾತ್ಮಕಕ್ಕೆ ಒಳಗಾಗಿ ಕನಿಷ್ಠ ನಮ್ಮ ಜಾತಿಯವನು ಎಂದಾದರೂ ಇವರ ಮಾತನ್ನು ಕೇಳುತ್ತಾರೆ.

ಆದರೆ ನಮ್ಮ ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಮಾತ್ರ ಪ್ರಜೆಗಳ ಮನೆಗಳ ಮುಂದೆ ಬರುತ್ತಾರೆ. ಇನ್ನುಳಿದ ಸಮಯವನ್ನು ಎಸಿ ರೂಮಿನಲ್ಲಿ ಕೂತು ಐಷಾರಾಮಿ ಕಾರುಗಳಲ್ಲಿ ಓಡಾಡಿಕೊಂಡು ಬಿಳಿಆನೆಗಳಾಗಿರುತ್ತಾರೆ. ಇಂಥ ವೈಭವ ಕೆಲಸಕ್ಕೆ ಬಾರದ ದೊಡ್ಡಸ್ತಿಕೆಗಳನ್ನೆಲ್ಲಾ ಬದಿಗೊತ್ತಿ ಜನಪ್ರತಿನಿಧಿಗಳು ಜನರಿಗೆ ಹತ್ತಿರವಾಗಿ ನಿಂತು ಅವರನ್ನು ಸರಿಯಾದ
ದಿಕ್ಕಿನಲ್ಲಿ ಕೊಂಡೊಯ್ಯಬೇಕಾದ ನೈಜ ಯೋಗ್ಯತೆಯನ್ನು ಪ್ರದರ್ಶಿಸಬೇಕಿದೆ. ಈ ಸಾಂಕ್ರಾಮಿಕ ಕರೋನಾದಿಂದ ಮುಕ್ತರಾಗಿ ಜೀವ ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಯಲ್ಲಿ ಭಾಗವಹಿಸಿ ಸ್ವಯಂ ಜನತಾ ಕರ್ಫ್ಯೂ ಹೇರಿಕೊಂಡು ಸಾಧ್ಯವಾದಷ್ಟೂ ಮನೆಯಲ್ಲೇ ಆರೋಗ್ಯವಾಗಿರುವಂತೆ ಪ್ರಚೋದಿಸುವ ಕೆಲಸವನ್ನು ಜನಪ್ರತಿನಿಧಿಗಳೂ ಮಾಡಬೇಕಿದೆ.

ಜತೆಗೆ ಅಸಹಾಯಕರಿಗೆ ಉಚಿತ ಮಾಸ್ಕ್‌ಗಳನ್ನು ಸ್ಯಾನಿಟೈಜರ್‌ಗಳನ್ನು ರೋಗ ನಿರೋಧಕ ಶಕ್ತಿಹೆಚ್ಚಿಸುವ ಔಷಧಗಳನ್ನು ವಿತರಿಸಿ ನಿಮ್ಮ ಜೀವ ನಮಗೆ ಅತ್ಯಮೂಲ್ಯ ದಯಮಾಡಿ ಜೀವ ಉಳಿಸಿ ಕೊಳ್ಳಿ ಎಂದು ಕಣ್ಣೀರಿಟ್ಟರೆ ಜನ ಖಂಡಿತಾ ಕೇಳು ತ್ತಾರೆ.
ಅದನ್ನು ಬಿಟ್ಟು ಐಷಾರಾಮಿ ಸುಖವನ್ನು ಅನುಭವಿಸುತ್ತಾ, ನೆಗಡಿ ಬಂದಕೂಡಲೇ ದುಬಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾ, ಪತ್ರಿಕಾಗೋಷ್ಠಿ ಟ್ವೀಟರುಗಳಲ್ಲಿ ತೌಡುಕುಟ್ಟುವುದು ದೊಡ್ಡ ಜವಾಬ್ದಾರಿಗಳಲ್ಲ.

ಕೇವಲ ವೈದ್ಯರು, ಆಶಾ ಕಾರ್ಯಕರ್ತರು ಪೌರ ಕಾರ್ಮಿಕರು ಮಾತ್ರವಲ್ಲ ಕರೋನಾ ವಾರಿಯರ‍್ಸ್. ನಮ್ಮ ಜನಪ್ರತಿನಿಧಿಗಳು ರಾಜಕಾರಣಿ ಗಳೂ ಬೀದಿಗೆ ಬಂದು ಸ್ವತ: ಕರೋನಾ ವಾರಿಯರ‍್ಸ್ ಕಿಂಗ್ ಪಾತ್ರವನ್ನು ನಿರ್ವಹಿಸಬಹುದಾದ ಅತ್ಯಮೂಲ್ಯ
ಅವಕಾಶವಿದೆ. ಅದನ್ನೇ ಭಾರತರತ್ನ ಡಾ. ಭೀಮ್ ರಾವ್ ರಾಮ್‌ಜೀ ಅಂಬೇಡ್ಕರ್ ಅವರು ಬದುಕಲು ರಾಜಕೀಯಕ್ಕೆ ಬರ ಬೇಡಿ, ಬದುಕನ್ನು ಬದಲಾಯಿಸಲು ರಾಜಕೀಯಕ್ಕೆ ಬನ್ನಿ.

ಏಕೆಂದರೆ ರಾಜಕೀಯವು ಉದ್ಯೋಗವಲ್ಲ ಅದೊಂದು ಸಾಮಾಜಿಕ ಜವಾಬ್ದಾರಿ ಎಂದು ಹೇಳಿರು ವುದು. ನಾಳೆ ಸರ್ವಪಕ್ಷಗಳ ಸಭೆ ನಡೆಯುತ್ತಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿಯಂಥವರು ತಮ್ಮ ಮಾತನ್ನು ಕೇಳುವ ದೊಡ್ಡ ಸಮೂಹವನ್ನು ಹೊಂದಿದ್ದಾರೆ. ಎಲ್ಲರೂ ತಮ್ಮಲ್ಲಿನ ರಾಜಕೀಯ ಅಹಂನಿಂದ ಹೊರಬಂದು ಪಕ್ಷಭೇದವಿಲ್ಲದೇ ಒಗ್ಗೂಡಿ ಸಮಾಜಕ್ಕೆ ನಿಜವಾದ ಗಂಡಾಂತರಕಾರಿಯಾಗಿರುವ ಕರೋನಾವನ್ನು ಹಿಮ್ಮೆಟ್ಟಿಸಲು ವಾರ್ಡ್ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಜನಪ್ರತಿ
ನಿಽಗಳ ನೇತೃತ್ವದಲ್ಲಿ ತಂಡಗಳನ್ನು ಕಟ್ಟಿಕೊಂಡು ಜನರನ್ನು ಎಚ್ಚರಿಸುವ ಕೆಲಸ ಮೊದಲು ಮಾಡುವಂತಾಗಲಿ.

ಜತೆಗೆ ಎಲ್ಲಾ ಜಾತಿಮಠಗಳ ಸ್ವಾಮೀಜಿಗಳೂ ಜಾತಿಭೇದಗಳಿಲ್ಲದೆ ಬೀದಿಗೆ ಬಂದು ಅವಿವೇಕ ಅಸಡ್ಡೆ ಉಡಾಫೆ ತೋರುವ ಜನರನ್ನು ಎಚ್ಚರಿಸಿ ಗ್ರಾಮೀಣ ಪ್ರದೇಶದ ಮಂದಿಗಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾದ ಪ್ರವಚನ ನೀಡುವಂತಾಗಲಿ. ಇದನ್ನೇ ನಮ್ಮ ಆಚಾರ್ಯರು ಬಸವಣ್ಣ ಪುರಂದರಕನಕದಾಸರು ಸರ್ವಜ್ಞಮೂರ್ತಿ ಮೊದಲಾ ದವರು ಮಾಡಿ ಇತಿಹಾಸ ಪುರುಷರಾಗಿರುವುದು.

ಸಮಾಜ ಸಂಕಷ್ಟ ದಲ್ಲಿದ್ದಾಗ ಜನನಾಯಕರು ಜಾತಿ ಗುರುಗಳು ನಾಲ್ಕು ಗೋಡೆಗಳ ಮಧ್ಯೆ ಕೂರುವುದಕ್ಕಿಂತ ಸಮಾಜದಲ್ಲಿ
ಬೆರೆತು ಜನರಿಗೆ ಬದುಕುವುದನ್ನು ಜೀವ ಉಳಿಸಿಕೊಳ್ಳುವ ಮಾರ್ಗವನ್ನು ತೋರುವುದು ಶ್ರೇಷ್ಠ ಎನಿಸಿಕೊಳ್ಳುತ್ತದೆ. ಇದನ್ನೂ ಮೀರಿ ಜನಕ್ಕೆ ಬುದ್ಧಿಬರದಿದ್ದರೆ ಅದು ಅವರವರ ಕರ್ಮ? ನಾಯಿಬಾಲ..!!