Thursday, 12th December 2024

ಕೃಷ್ಣ ಟಾಕೀಸ್‌’ನಲ್ಲಿ ಜನಗಳೇ ಇಲ್ಲ

ತುಂಟರಗಾಳಿ

ಹರಿ ಪರಾಕ್‌

ಸಿನಿಗನ್ನಡ

ಕನ್ನಡ ಸಿನಿಮಾರಂಗ ಅಕ್ಷರಶಃ ಡೋಲಾಯಮಾನ ಪರಿಸ್ಥಿತಿಯಲ್ಲಿದೆ. ಸಿನಿಮಾಗಳನ್ನು ಬಿಡುಗಡೆ ಮಾಡೋದು ಕಷ್ಟ, ಮಾಡಿದರೂ ಜನ ಚಿತ್ರಮಂದಿರಕ್ಕೆ ಬರೋದು ಕಷ್ಟ ಅನ್ನುವಂಥ ಪರಿಸ್ಥಿತಿ ಇದೆ.

ಕರೋನಾ ಎಲ್ಲ ರಂಗಗಳನ್ನೂ ಅಫೆಕ್ಟ್ ಮಾಡಿದ್ದರೂ ಚಿತ್ರರಂಗಕ್ಕೆ ಒಂದು ತೂಕ ಜಾಸ್ತಿನೇ ತೊಂದರೆ ಆಗುತ್ತಿದೆ. ಆದರೆ ಇಂಥ ಸಮಯದಲ್ಲಿ ವಿವಿಧ ಸಿನಿಮಾಗಳ ಮಂದಿ ವಿವಿಧ ರೀತಿಯಲ್ಲಿ ವರ್ತಿಸುತ್ತಿರೋದು ಮಾತ್ರ ಆಶ್ಚರ್ಯ ತರಿಸುತ್ತಿದೆ. ಪುನೀತ್ ರಾಜ್‌ಕುಮಾರ್ ಅವರಂಥ ಸ್ಟಾರ್ ನಟನ ಚಿತ್ರವನ್ನೇ ಜನ ಚಿತ್ರಮಂದಿರಕ್ಕೆ ಬರೋದು ಅನುಮಾನ ಅಂತ ಅಮೆಜಾನ್ ಪ್ರೈಮ್‌ಗೆ ಮಾರಲಾಗಿದೆ. ಹೀಗಾಗಿ ಕೆಲವು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದರೂ ಅವುಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು
ಹಿಂದೇಟು ಹಾಕುತ್ತಿದ್ದಾರೆ.

ಆದರೆ ಪ್ರತಿವಾರ ಸಿನಿಮಾಗಳು ಬಿಡುಗಡೆ ಆಗೋದು ಮಾತ್ರ ತಪ್ಪಿಲ್ಲ. ಈ ವಾರ ಕೂಡ ಎರಡು ಚಿತ್ರಗಳು ಬಿಡುಗಡೆ ಆಗಿವೆ. ರಿವೈಂಡ್ ಮತ್ತು ಕೃಷ್ಣ ಟಾಕೀಸ್ ಚಿತ್ರಗಳು ಬಿಡುಗಡೆ ಆಗಿವೆ. ರಿವೈಂಡ್ ಏನೋ ಹೊಸಬರ ಚಿತ್ರ. ಹಾಗಾಗಿ ಅವರು ಸಿಕ್ಕಿದ್ದೇ ಛಾ ಅಂತ ಬಿಡುಗಡೆ ಮಾಡಿರಬಹುದು. ಆದರೆ ಅಜಯ್ ರಾವ್ ತಕ್ಕ ಮಟ್ಟಿಗೆ ಹೆಸರಿರುವ ನಟ. ಅವರ ಚಿತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಇದು ಅಜಯ್ ರಾವ್ ಅವರಿಗೆ ಮಾರ್ಕೆಟ್ ಇಲ್ಲ ಎನ್ನುವುದರ ಸೂಚನೆಯೂ ಇರಬಹುದು. ಆದರೆ ಕೃಷ್ಣ ಟಾಕೀಸ್ ನೋಡಲು ಟಾಕೀಸ್‌ನಲ್ಲಿ ಜನ ಇಲ್ಲ ಅನ್ನೋದು ಮಾತ್ರ ಸತ್ಯ. ಇನ್ನು, ಹೊಸಬರ ತಂಡವಾದ್ರೂ ತಕ್ಕ ಮಟ್ಟಿಗೆ ಸದ್ದು ಮಾಡಿದ್ದ ಕೊಡೆ ಮುರುಗ ಚಿತ್ರತಂಡ ಬಿಡುಗಡೆಯಾದ ಮೂರೇ ದಿನಕ್ಕೆ ಚಿತ್ರಮಂದಿರದಲ್ಲಿ ಪ್ರದರ್ಶನವನ್ನು ನಿಲ್ಲಿಸಿ, ಆಗನಲ್ಲಿ ಮರುಬಿಡುಗಡೆ ಮಾಡುತ್ತೇವೆ ಎಂದು ಹೇಳಿಕೊಂಡಿದೆ.

ಇಂಥ ಸಮಯದಲ್ಲಿ ಕೃಷ್ಣ ಟಾಕೀಸ್ ಯಾವ ಧೈರ್ಯದ ಮೇಲೆ ಬಿಡುಗಡೆಯಾಗಿದೆ ಅನ್ನೋ ಪ್ರಶ್ನೆ ಸಹಜ. ಇದಕ್ಕೆ, ಮಾರ್ಕೆಟ್ ಇಲ್ಲದ ಅಜಯ್ ರಾವ್ ಸಿನಿಮಾವನ್ನು ಅವಕಾಶ ಸಿಕ್ಕಾಗ ಬಿಡುಗಡೆ ಮಾಡಿ ಕೈ ತೊಳೆದುಕೊಳ್ಳುವ ಕೆಲಸವೂ ಇದಾಗಿರಬಹುದು ಅನ್ನೋದು ಗಾಂಧಿನಗರದ ಅಭಿಪ್ರಾಯ.

ನೆಟ್ ಪಿಕ್ಸ್

ಖೇಮು ಕುಡಿಯೋಕೆ ಅಂತ ಒಂದು ದೊಡ್ಡ ಪಬ್‌ಗೆ ಹೋದ. ಅದು ತುಂಬಾ ಹೈಟೆಕ್ ಪಬ. ತುಂಬಾ ಜನ ಇದ್ರು. ಫ್ಯಾಮಿಲಿ ಕೂಡಾ ಇದ್ರು. ಹಾಗಾಗಿ ಅಲ್ಲಿನವರೆಲ್ಲ ಒಂಥರಾ ಪ್ರೊಫೆಷನಲ್ ಡ್ರಿಂಕರ್ಸ್ ಥರಾ. ಡೀಸೆಂಟಾಗಿ ಕೂತು ಕುಡಿಯುತ್ತಿದ್ದರು. ಯಾರಾದರೂ ಕಿರಿಕ್ ಮಾಡಿದ್ರೆ ಹಿಡಿದು ಬಾರಿಸೋಕೆ ಅಂತ ಅಲ್ಲಿ ಬಾಡಿಗಾರ್ಡ್‌ಗಳೂ, ಬೌನ್ಸರ್‌ಗಳೂ
ಇದ್ದರು. ಖೇಮು ಮಾತ್ರ ಮೊದಲಿನಿಂದಲೂ ಕುಡಿದಾಗ ಕಿರಿಕ್ ಜಾಸ್ತಿ. ತಾನು ಏನ್ ಮಾಡ್ತೀನಿ ಅಂತ ಅವನಿಗೇ ಗೊತ್ತಿರಲ್ಲ. ಸ್ವಲ್ಪ ಜಾಸ್ತಿ ಕುಡಿದ್ರೆ ಅಷ್ಟೇ ಮುಗೀತು. ಅವನನ್ನು ಹಿಡಿಯೋಕಾಗಲ್ಲ. ಆದ್ರೂ ಅಲ್ಲಿನ ಜನರನ್ನ ನೋಡಿ ಖೇಮು ಇವತ್ತು ಯಾವ ಕಿರಿಕ್ ಕೂಡ ಮಾಡಬಾರದು, ಸುಮ್ನೆ ಕೂತು ಕುಡಿಬೇಕು ಅಂತ ಡಿಸೈಡ್ ಮಾಡಿ ವೇಯ್ಟರ್‌ನ ಕರೆದು ಒಂದು ಪೆಗ್ ವಿಸ್ಕಿ ಆರ್ಡರ್ ಮಾಡಿದ. ಮೊದಲ ಪೆಗ್ ಮುಗಿಸಿದ ತಕ್ಷಣ ಖೇಮು ಒಳಗಿದ್ದ ಕುಡುಕ ಜಾಗೃತ ಆದ.

ಅಲ್ಲಿ ಪಕ್ಕದ ಟೇಬಲ್‌ನಲ್ಲಿರೋರ ಜತೆ ಜಗಳ ಶುರು ಮಾಡಿದ. ಆಗ ಅಲ್ಲಿದ್ದ ಬೌನ್ಸರ್ಸ್ ಬಂದು ಖೇಮುಗೆ ಸರಿಯಾಗಿ ಬಾರಿಸಿ ವಾರ್ನಿಂಗ್ ಕೊಟ್ಟು ಹೋದ್ರು. ಖೇಮು ಇನ್ನೊಂದು ಪೆಗ್ ವಿಸ್ಕಿ ಆರ್ಡರ್ ಮಾಡಿದ. ಅದು ಮುಗಿದ ನಂತರ ಮತ್ತೆ ಪಕ್ಕದ
ಟೇಬಲ್‌ನಲ್ಲಿ ಗಂಡನ ಜತೆ ಕೂತಿದ್ದ ಹೆಂಗಸನ್ನು ನೋಡಿ, ‘ಲೇ ಖೇಮುಶ್ರೀ’ ಅಂತ ಅವಳನ್ನು ಕೀಟಲೆ ಮಾಡೋಕೆ ಶುರು ಮಾಡಿದ. ಆಗ ಆ ಹೆಂಗಸಿನ ಗಂಡ ಬಂದು ಖೇಮುಗೆ ಸರಿಯಾಗಿ ಬಾರಿಸಿ ಹೋದ.

ಹೀಗೆ ಖೇಮು ವಿಸ್ಕಿ ಕುಡಿಯೋದು, ಒದೆ ತಿನ್ನೋದು ಮುಂದುವರಿಯಿತು. ಆದರೆ ವಿಶೇಷ ಅಂದ್ರೆ ಹೀಗೆ ಒದೆ ತಿಂದಿದ್ದು, ಖೇಮುಗೆ ನೆನಪೇ ಇರುತ್ತಿರಲಿಲ್ಲ. ಅನೇಕ ಬಾರಿ ಒದೆ ತಿಂದಾದ ನಂತರ ಖೇಮು ವೇಯ್ಟರ್‌ನ ಕರೆದು ಒಂದು ಪೆಗ್ ರಮ್ ಕೊಡಪ್ಪಾ ಅಂದ.
ಅದಕ್ಕೆ ವೇಯ್ಟರ್, ಅಲ್ರೀ ಸಾರ್, ನೀವು ಇಷ್ಟೊತ್ತು ಕುಡಿತಾ ಇದ್ದಿದ್ದು ವಿಸ್ಕಿ ಅಲ್ವಾ? ಅಂದ. ಅದಕ್ಕೆ ಖೇಮು ಹೇಳಿದ, ಹೌದು, ಆದ್ರೆ ಯಾಕೋ ವಿಸ್ಕಿ ರಿಸ್ಕಿ ಅನ್ನಿಸ್ತಿದೆ, ಯಾಕೋ ಗೊತ್ತಿಲ್ಲ, ಪ್ರತಿ ಪೆಗ್ ಕುಡಿದ ಮೇಲೂ ಸಿಕ್ಕಾಪಟ್ಟೆ ಮೈ ಕೈ ನೋವು.
ಕೃಷ್ಣ ಟಾಕೀಸ್‌ನಲ್ಲಿ ಜನಗಳೇ ಇಲ್ಲ

ಲೂಸ್ ಟಾಕ್
ಪೊಲಿಟಿಕಲ್ ಲೀಡರ್
ಅ ಸಾರ್, ಜನಗಳಿಗೆ ನೀವೇ ಎಲ್ಲೂ ಹೊರಗೆ ಹೋಗ್ಬೇಡಿ, ಗುಂಪು ಸೇರಬೇಡಿ ಅಂತೀರಾ, ನೀವೇ ಚುನಾವಣಾ ಪ್ರಚಾರಕ್ಕೆ ಲಕ್ಷಾಂತರ ಜನ ಸೇರಿಸಲ್ತೀರಲ್ಲ?

ಏನ್ ಮಾಡೋದು, ಚುನಾವಣಾ ಪ್ರಚಾರದ ವಿಷ್ಯಕ್ಕೆ ಬಂದ್ರೆ ನಮ್ಮದು ಆಚಾರವಿಲ್ಲದ ನಾಲಿಗೆ.

ನಿಮ್ಮ ಎಲೆಕ್ಷನ್‌ಗೋಸ್ಕರ ಜನರಿಗೆ ತೊಂದ್ರೆ ಆಗ್ತಾ ಇದ್ರೂ ನೋಡ್ಕಂಡ್ ಸುಮ್ನೆ ಇದ್ದೀರಲ್ಲ, ಸರಿನಾ?

ನೋಡ್ರೀ ನಾವ್ ಎಲೆಕ್ಷನ್‌ನಿಗೆ ನಿಂತಿದೀವಿ, ಅದಕ್ಕೆ ಜನರನ್ನ ಓಡಾಡ್ಕೊಂಡ್ ಇರೋಕೆ ಬಿಟ್ಟಿದೀವಿ, ಆಮೇಲೆ ಮನೇಲೇ ಕೂತ್ಕೊಳ್ಳೋ ಥರ ಮಾಡ್ತೀವಿ.

ಅಂದ್ರೆ, ಎಲೆಕ್ಷನ್ ಮುಗಿದ ಮೇಲೆ ಲಾಕ್‌ಡೌನ್ ಮಾಡ್ತೀರಾ ಅಂತ ಆಯ್ತು. ಹಿಂಗಾದ್ರೆ ಜನ ಸಾಮಾನ್ಯರ ಜೀವನದ ಗತಿ ಏನು?

ಅಯ್ಯೋ, ಎರಡೂ ನೀವೇ ಹೇಳ್ತೀರಲ್ರೀ, ಲಾಕ್‌ಡೌನ್ ಮಾಡಿದ್ರೆ ಖುಷಿ ಪಡ್ರೀ, ಜನನ್ನ ಕೂತ್ಕೊಂಡ್ ತಿನ್ನೋ ಥರ ಮಾಡಿದ್ದೀವಿ ಅಂತ.

ಜನಕ್ಕೆ ರೋಗದ ಭಯ ಒಂದ್ ಕಡೆ, ಸರಿಯಾದ ಟ್ರೀಟ್‌ಮೆಂಟ್ ಸಿಗಲ್ಲ ಅಂತ ಭಯ. ಇನ್ನೊಂದ್ ಕಡೆ. ಏನ್ ಸಾರ್ ಈ ಪರಿಸ್ಥಿತಿ?
ಸರಿ, ನಾನು ಒಪ್ಕೊತೀನಿ, ಜನಕ್ಕೆ ಬೆಡ್, ಡೆತ್ ಬೆಡ್ ಎರಡೂ ಸಿಕ್ತಿಲ್ಲ. ಸದ್ಯಕ್ಕೆ ಬ್ರೆಡ್ ಆದ್ರೂ ಸಿಕ್ತಾ ಇದೆಯಲ್ಲ, ಸಂತೋಷ ಪಡಿ.

ಜಾತ್ರೆ, ಉತ್ಸವ, ಮಸೀದಿ ಅಂತ ಸಾವಿರಾರು ಜನ ಸೇರ್ತಾ ಇದ್ದಾರೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯ?
ನೋಡ್ರೀ ನಮ್ಮ ದೇಶದ ಜನರಿಗೆ ದೇವರ ಹತ್ರ ಹೋಗೋಕೆ ತುಂಬಾ ಆಸೆ ಇದೆ. ಅದಕ್ಕೇ ಹೋಗ್ತಾರೆ. ಅದನ್ನ ತಡೆಯೋಕೆ ನಾವ್ಯಾರು ?

ಲೈನ್ ಮ್ಯಾನ್

ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಸಿಎಸ್‌ಕೆ ಆರ್‌ಸಿಬಿ ಕೆಳಗಿದೆ

ಇದಕ್ಕೇ ಹೇಳೋದು, ದುಶ್ಮನ್ ಕಹಾ ಹೈ ಅಂದ್ರೆ ಬಗಲ್ ಮೇ ಹೈ ಅಂತ

ಯಾವಾಗಲೂ ಅಭಿಮಾನಿಗಳಿಗೆ ಸೋಲುವ ಭಯ ಹುಟ್ಟಿಸಿ ಗೆದ್ದರೂ, ಅಂಕಪಟ್ಟಿಯಲ್ಲಿ ಆರ್‌ಸಿಬಿ ಟಾಪ್‌ನಲ್ಲಿ ಇರೋದಕ್ಕೆ ಕಾರಣ ಅವರ ಅಂಕಗಣಿತ ಅಲ್ಲ.

ಬೀಜ ಗಣಿತ

ಮೋದಿ ಮಾಡ್ತಾ ಇರೋದು ವ್ಯಾಕ್ಸಿನ್ ಹಾಕುವ ಟೀಕಾ ಉತ್ಸವ 
ಅವರ ವಿರೋಧಿಗಳು ಮಾಡ್ತಾ ಇರೋದು ಟೀಕೆ ಮಾಡುವ ಟೀಕಾ ಉತ್ಸವ

ಶಾರ್ಟ್ ಟರ್ಮ್ ಮೆಮೋರಿ ಲಾಸ್ ಅಂದ್ರೇನು?
ರಾತ್ರಿ ಗುಂಡು ಹಾಕಿ, ಕಷ್ಟಗಳನ್ನು ಬೆಳಗ್ಗೆವರೆಗೂ ಮರೆಯೋದು

ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸುವ ಕೆಲಸ
ಹಾರ್ಟ್ ಅಟ್ಯಾಕ್

ಮೇಕ್ ಇಟ್ ಲಾರ್ಜ್ ಅನ್ನೋ ಆಲ್ಕೋಹಾಲ್ ಜಾಹೀರಾತು ನೋಡಿ ಗಾಬರಿಯಾಗೋದು ಯಾರು ?
ಹಾರ್ಟು, ಲಿವರ್

ಸದಾ ಉಗುರು ಕಡಿಯುವವನು
ಉಗುರು-ಗಾಮಿ

ಎಂಥಾ ಅನಕ್ಷರಸ್ಥ ಹುಡುಗನ ಎದೆ ಸೀಳಿದರೂ ಎರಡಕ್ಷರ ಇದ್ದೇ ಇರುತ್ತೆ
ಯಾವುದಾದರೂ ಹುಡುಗಿಯ ಹೆಸರಿನದ್ದು

ದುಬಾರಿ ಕಾರುಗಳನ್ನು ಇಟಾಲ್‌ಮೆಂಟ್‌ನ ತಗೋಬೇಕು
ಮೊದಲು, ಎಂಜಿನ್, ಆಮೇಲೆ ಬಾಡಿ, ಟೈರು, ಸೀಟು ಹೀಗೆ