Thursday, 12th December 2024

ದೊಂಗಡಿಗಳ ದುಕಾನಿನಲ್ಲಿ ಚಟ್ಟಾಯಿಗಳ ದರಬಾರು..

ಅಲೆಮಾರಿಯ ಡೈರಿ

ಸಂತೋಷಕುಮಾರ ಮಹೆಂದಳೆ

ನೀವು ಲಗೇಜು ಇಟ್ಟು ನಾಡಿದ್ದು ಬರುತ್ತೀರಾ ಸರಿ, ನಿಮಗೆ ನಾಳೆ ಇಷ್ಟೊತ್ತಿಗೆ ಇಂಥಾ ಊಟ, ತಿಂಡಿ ಬೇಕಾ ಸರಿ. ಸ್ಥಳೀಯ ನೀರು
ಕುಡಿಯಲ್ಲ ಅದಕ್ಕೆ ಬಿಸ್ಲೇರಿ ಬೇಕಾ ಸರಿ. ನಿಮಗೆ ಪ್ರವಾಸ ಮಾಡಿಲಿಕ್ಕಾಗದೆ ಎರಡು ದಿನ ತೆಪ್ಪಗೆ ಇಲ್ಲೆ ಬಿದ್ದುಕೊಳ್ತೀರಾ ಸರಿ.

ಲೂಸ್ ಮೋಷನ್ ಶುರುವಾಗಿದೆಯಾ ಔಷಧಿ ವ್ಯವಸ್ಥೆ ಆಗಬೇಕಾ ಸರಿ. ದಕ್ಷಿಣ ಭಾರತೀಯರಿಗೆ ಇಲ್ಲಿನ ಊಟ ಉಣಿಸು  ಹಿಡಿಸುವುದಿಲ್ಲವಲ್ಲ ಅದಕ್ಕೆ ಬರೀ ಮ್ಯಾಗಿ, ಅವಲಕ್ಕಿ ಮತ್ತು ಬ್ರೆಡ್ಡು ಸೇರಿದಂತೆ ಇನ್ನೇನೋ ಮಾಡಿ ನಿಮ್ಮನ್ನು ಸಾಕಬೇಕಾ ಸರಿ. ನೀರು ಬಿಸಿ ನೀರೆ ಕುಡಿಯುತ್ತೀರಾ ಸರಿ.

ಅರೇ..ಎಲ್ಲದಕ್ಕೂ ಸರಿ.. ಏನಿದು..? ಲಾಹುಲ್ ಸ್ಪಿತಿ ವ್ಯಾಲಿಗೆಂದು ಮೇಲಿನ ಖರದುಂಗ್ಲಾದಿಂದ ಮೊರೆ ಪ್ಲೇನ್ ದಾಟಿ ಬರುತ್ತೀರಲ್ಲ (ಅಲ್ಲೆ ಕೆಳಗೆ ಕಿಲಾಂಗ್ ಹತ್ತಿರ ಅಟಲ್ ಟನಲ್‌ನ ಬಲತುದಿ ಇದೆ) ಹಾಗೆ ಬರುವಾಗ ನಿರ್ದಿಷ್ಟ ಜಾಗ, ದಾರಿ ಹೊರತು ಪಡಿಸಿದರೆ ಏನೆಂದರೆ ಏನೂ ಸಿಗುವುದೇ ಇಲ್ಲ. ಹತ್ತಾರು ಕಿ.ಮೀ. ಒಂದೊಂದು ಮನೆ ಸುತ್ತಮುತ್ತ ಬಟಾಟೆ, ಹಸಿರು ಬಟಾಣಿ ತೋಟ ಉಳಿದಂತೆ ನಿರವ ಮೌನ. ಆದರೆ ಪ್ರವಾಸಿಯಂತೂ ಹೋಗಲೇಬೇಕಲ್ಲ.

ಇವೆಲ್ಲ ಸೇವೆ ಇಲ್ಲದಿದ್ದರೆ ಹೇಗೆ..? ಆಗ ಪ್ರತಿ ಮನೆಯ ಗೃಹಿಣಿಯರು ಕಂಡುಕೊಂಡಿದ್ದೇ ಓಪನ್ ಹೌಸ್ ಸರ್ವೀಸು. ಇದನ್ನೆ ದೊಂಗಡಿ ಎನ್ನುತ್ತಾರೆ. ನಮ್ಮಲ್ಲಿ ಕೈಗಾಡಿಗಳಿದ್ದಂತೆ. ಆದರೆ ಇವೆಲ್ಲ ವರ್ಷದ ಅರ್ಧ ವರ್ಷ ಮಾತ್ರ ಫಿಕ್ಸ್. ದಾರಿಯ ಮೇಲೆ ಪ್ರತೀ ಹದಿನೈದು – ಇಪ್ಪತ್ತು ಕಿ.ಮೀ.ಗೆ ಇಂಥಾ ದೊಂಗಡಿಗಳನ್ನು ನಿರ್ಮಿಸಿ, ಟಾಪ್‌ಗೆ ದೊಡ್ಡ ನೈಲಾನ್ ಟಾರ್ಪಾಲು ಹಾಕಿ ಒಳಗೆ ಸಾಲಾಗಿ ಚಟ್ಟಾಯಿ ಹಾಸಿಗೆಗಳನ್ನು ಹಾಕಿಟ್ಟುಕೊಳ್ಳುತ್ತಾರೆ. ಇದನ್ನು ನಡೆಸುವುದರಿಂದ ಹೆಣ್ಣುಮಕ್ಕಳಿಗೆ, ಮನೆಗೆ ಬೇಕಾದ
ಹೆಚ್ಚುವರಿ ಆದಾಯವಾದರೆ, ಪ್ರವಾಸಿಗರಿಗೆ ಅತ್ಯಂತ ಸೋವಿಯ ವ್ಯವಸ್ಥೆ ಇದು.

ಕಾರಣ ಲೇಹ್‌ದಿಂದ ಆರಂಭಿಸಿ, ಲಾಹುಲ್ ಸ್ಪೀತಿ ವ್ಯಾಲಿವರೆಗೆ ಓಡಾಡುವ ಪ್ರವಾಸಿಗರಲ್ಲಿ ಹೆಚ್ಚಿನವರಿಗೆ ಅನಿರೀಕ್ಷಿತ ಬೇಡಿಕೆಗಳು ಇದ್ದೇ ಇರುತ್ತವೆ. ಮೇಲೆ ಹೇಳಿದಂತೆ ಇವತ್ತು ಮಲಗ್ಬೇಕಾ ಅದಕ್ಕೂ ಸರಿ. ಊಟ ಉಣಿಸು ಅದಕ್ಕೂ ಸರಿ. ದಿನಕ್ಕೆ ಕೇವಲ ನೂರು, ಕೆಲವೊಮ್ಮೆ ನಲ್ವತ್ತು ಐವತ್ತು ರುಪಾಯಿಗೂ ಒಂದು ಬೆಡ್ ಮತ್ತು ಹೊತ್ತು ಹೊತ್ತಿಗೆ ದಾಲ್ ರೋಟಿ ಲಭ್ಯ. ಅದಾಗಿಯೂ ಬಿಸ್ಕೇಟ್ಸ್, ನೀರು, ಕೂಲ್‌ಡ್ರಿಂಕ್ಸ್ ಪಕ್ಕಾ ಲಭ್ಯವಿರುತ್ತದೆ. ಹೀಗೆ ಆರೆಂಟು ಗೂಟ ಹುಗಿದು, ಟಾರ್ಪಾಲು ಹಾಕಿದ ಇಂಥಾ ಎರಡು
ಒಳಾವರಣದ ಮನೆಯ ರೂಪಕ್ಕೆ, ಸುತ್ತಲಿಂದ ಕಲ್ಲಿನ ಸಪೋರ್ಟು. ಒಳಗೆ ಸಾಲಾಗಿ ದಿವಾನ ತರಹದ ಹಗ್ಗದ ಮಂಚದ ಮೇಲೆ ಬೆಚ್ಚನೆಯ ಹಾಸಿಗೆ.

ಬಂದವರಿಗೆಲ್ಲ ಒಂದೊಂದು ಚಟ್ಟಾಯಿ. ಅದರ ಮೇಲೆ ಕೂತು, ಒರಗಿ, ತಿರುಗಿ, ಬಿದ್ದುಕೊಂಡು ರಾತ್ರಿಗೆ ಮಲಗಿ ಒಟ್ರಾಶಿ ದರಬಾರು. ಅಷ್ಟಾಗಿ ಇವೆಲ್ಲ ನಿರ್ವಹಿಸಲು ಈ ಎತ್ತರಕ್ಕೆ ಸಾಮಾನು ನಿಯಮಿತವಾಗಿ ಹೇಗೆ ತಲುಪುತ್ತೆ..? ಇಷ್ಟೆಲ್ಲಾ ಅಗತ್ಯ
ಸಾಮಾನುಗಳನ್ನು ಹೇಗೆ ಗುಡ್ಡೆ ಹಾಕಿಕೊಳ್ಳುತ್ತಾರೆ..? ಕಾರಣ ನೇರವಾಗಿ ಸರಕುಗಳನ್ನು ಪೂರೈಸಿ, ಆಗುವ ಹೋಗುವ ಕೆಲಸ
ಅಲ್ಲವೇ ಅಲ್ಲ ಇದೆಲ್ಲ. ದಿನಕ್ಕೆ ಇಷ್ಟೆ ಚಲಿಸುವ ಈ ದಾರಿಗಳಲ್ಲಿ ಸಾಮಾನ್ಯವಾಗಿ ಇತ್ತ ಕಡೆ ಬರುವ ಪೆಟ್ರೋಲ್, ಡಿಸೆಲ್
ಪೂರೈಕೆಯ ಟ್ರಕ್ಕುಗಳಲ್ಲಿ ಕೆಳಗಿನ ಮುಖ್ಯ ಸ್ಥಳಗಳಿಂದ ಒಂದೊಂದು ಬಾಕ್ಸು ಕಳಿಸುತ್ತಾರೆ.

ಸ್ಪಿತಿ ವ್ಯಾಲಿ ಕಡೆಯಾದರೆ ಕೆಳಗಿನ ಶಿಮ್ಲಾ ಅಥವಾ ರಾಮ್‌ಪುರ್ ಕಡೆಯಿಂದ ಬರುತ್ತದೆ. ಅದಕ್ಕೂ ಮೇಲೆ ಕೀಲಾಂಗ್ ಕಡೆಯಾದರೆ ಮನಾಲಿ ಅಥವಾ ಕುಲುನಿಂದ ಹೊರಡುವ ವಾಹನಗಳು ಪೂರೈಸುತ್ತವೆ. ಇಲ್ಲಿ ಒಂದು ಹೊಂದಾಣಿಕೆ ಎಂದರೆ ಇಂಥಾ ಎಲ್ಲ ತೈಲ ಪೂರೈಕೆಯ ಟ್ರಕ್ಕುಗಳಿಗೆ ಇವರೇ ಅನ್ನದಾತರು. ಕಾರಣ ಗಂಟೆಗೆ ಹತ್ತು ಹನ್ನೆರಡು ಕಿ.ಮೀ. ವೇಗ ದಕ್ಕುವ ಈ ರಸ್ತೆಗಳಲ್ಲಿ ಯಾವಾಗ ಎಲ್ಲಿ ನಿಲ್ಲಬೇಕಾಗುತ್ತದೋ ಗೊತ್ತಿರುವುದಿಲ್ಲ. ಹಾಗಾಗಿ ಸಾಮಾನ್ಯವಾಗಿ ಬೆಳಿಗ್ಗೆ ಬೇಗ ಹೊರಡುವ ಡ್ರೈವರ್ ಗಳು ಸಂಜೆ ನಾಲ್ಕರ ಹೊತ್ತಿಗೆ ಇಂಥಾ ಶೆಲ್ಟರ್ ಸಿಕ್ಕುತ್ತಿದ್ದಂತೆ ನಿಂತುಬಿಡುತ್ತಾರೆ. ಕಾರಣ ಮುಂದಿನ ಇಪ್ಪತ್ತೇ ಕಿ.ಮೀ.
ಹೋಗಬೇಕಾದರೂ ಎರ್ಡೂವರೆ ತಾಸು ಬೇಕಾಗುತ್ತದೆ.

ಯಾವಾಗ ಯಾವ ರ್ಟುನಲ್‌ನಿಂದ ಟ್ರಕ್ಕು ಹೊರಡುತ್ತದೆ ಎಂದೆಲ್ಲಾ ಪ್ರತೀ ಅಂಗಡಿಗೂ ಪಕ್ಕಾ ಮಾಹಿತಿ ಇರುತ್ತದೆ. ಜೊತೆಗೆ ಯಾವ ಅಂಗಡಿಗೆ ಯಾರು ಸರ್ವೀಸು ಕೊಡುತ್ತಾರೆ ಡ್ರೈವರ್‌ಗೂ ಗೊತ್ತಿರುವುದರಿಂದ, ಕೆಳಗಿನ ಟರ್ಮಿನಲ್ ಗಳಿಂದ ಟ್ರಕ್ಕು ತೆಗೆಯುವಾಗ ನಿಲ್ಲಿಸಿ, ಭಯ್ಯಾ ಪಾರ್ಸೆಲ್ ಹೈ ಕ್ಯಾ..? ಉಪರ್ ಜಾ ರಹಾ ಹೂಂ..ಎಂದರೆ ಅವನಿಗೆ ಅರ್ಥವಾಗುತ್ತದೆ. ಗಾಡಿ ಅಟಲ್ ಟನಲ್ ಕಡೆ ಎಡತಿರುವು ತೆಗೆದುಕೊಂಡು ಮುಂದೆ ಚಲಿಸಲಿದೆ ಎಂದರೆ ಆ ದಾರಿಯಲ್ಲಿ ಸಿಕ್ಕುವ ಕೆವಾರಿಂಗ್, ಹೆಯರ್, ಜಿಸ್ಪಾ, ಜಿಮೋರ್, ಥಂಡಿ, ಗೋಪಾಲಾ ಈ ಊರುಗಳ ಮೇಲೆ ಹಾಯಲಿದ್ದು, ಎಲ್ಲ ಎಡಕ್ಕೆ ಸಿಕ್ಕುತ್ತವೆ.

ಬಲಕ್ಕೆ ಆಳವಾದ ಭಾಗಾನದಿ ಬೀಸು ಬಿದ್ದು ಹರಿಯುತ್ತಿರುತ್ತದೆ. ಹಾಗಾಗಿ ನೂರಾರು ಕಿ.ಮೀ. ದಾರಿಯಲ್ಲಿ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಹಳ್ಳಿಗಳ ಹೆಸರಿನ ನಾಲ್ಕಾರು ಮನೆಗಳು ಲಭ್ಯವಾಗುತ್ತವೆ. ಇಂಥಾ ತಂಗುದಾಣಗಳೇ ಪ್ರವಾಸಿಗರಿಗೆ, ಬೈಕುದಾರರಿಗೆ ಅನಿವಾರ್ಯದ ಮತ್ತು ಅಗತ್ಯದ ತಾಣ. ಹಾಗಾಗಿ ಕೆಳಗಿನಿಂದ ಅವನ ಗಾಡಿಗೆ ಎರ್ಡ್ಮೂರು ಬಾಕ್ಸ್ ಹಾಕಿ ನಂಬರು
ಕೊಟ್ಟುಬಿಡುತ್ತಾರೆ.

ಸಹಜವಾಗಿ ಅಯಾ ದಿನದ ವಸ್ತಿಗೆ ಅವರ ಟ್ರಕ್ಕು ನಿಲುಗಡೆ ಮಾಡುವುದೂ ಇದ್ದೇ ಇರುತ್ತದಲ್ಲ. ಅಲ್ಲಲ್ಲಿ ಬಾಕ್ಸು ತೆಗೆದು ಕೊಡುತ್ತಾರೆ. ಅದಕ್ಕೆ ಬದಲಾಗಿ ಅವತ್ತೊಂದು ದಿನ ಡ್ರೈವರ್‌ಗಳು ಆ ಮನೆಯ ಒಂದು ಚಟ್ಟಾಯಿ ಮೇಲೆ ಮಲಗಿ ಎದ್ದು ಬೆಳಿಗ್ಗೆ ಮತ್ತೆ ಹೊರಡುತ್ತಾರೆ. ಕೆಳಗಿನ ಪೂರೈಕೆದಾರನಿಂದ ಮೇಲ್ಗಡೆಯ ಅಂಗಡಿಗಳವರೆಗೂ ಈ ಸಂವಹನ ಅತ್ಯಂತ ಕರೆಕ್ಟಾಗಿ ನಡೆಯುತ್ತದೆ. ಈಗೆಲ್ಲ ಮೊಬೈಲ್ ಇದ್ದು ಕೆಳಗಿನ ಅಂಗಡಿಯವರೇ ಟ್ರಕ್ ಹೈ .. ಬಕ್ಸಾ ಡಾಲಾ ಹೈ ಎಂದು ಬಿಡುತ್ತಾರೆ. ಅವರೂ
ನೆಮ್ಮದಿಯಾಗಿ ಇವತ್ತೋ ನಾಳೆನೋ ಬಂದಾಗ ಇಳಿಸಿಕೊಳ್ಳುತ್ತಾರೆ.

ನಾನು ಒಮ್ಮೆ ಸ್ಪಿತಿಯಿಂದ ಹೊರಕ್ಕೆ ಬರುವ ಮೊದಲು ಅನಿವಾರ್ಯವಾಗಿ ಇಂಥಾ ದೊಂಗಡಿಯಲ್ಲಿ ಉಳಿಯಬೇಕಾಗಿ ಬಂದಿತ್ತು. ಕಾರಣ ನಾನು ಮೇಲಿನ ಕಿಲಾಂಗ್‌ನಿಂದ ಎಡಕ್ಕೆ ತಿರುಗಿ ಸ್ಪಿತಿ ವ್ಯಾಲಿಗೆ ಇಳಿದಿದ್ದೆ. ಇಲ್ಲಿ ರಸ್ತೆಯ ಮೇಲೆ ನೂರಾರು ಮೀ.ಉದ್ದುದ್ದ ನೀರು ಹರಿಯುತ್ತಿರುತ್ತದೆ. ರಸ್ತೆ ಎನ್ನುವುದು ಕೇವಲ ಗುರುತು ಮಾತ್ರ. ನಿರ್ಮಾನುಷ್ಯ ವಸಾಹತು ಇದು. ಹಾಗಾಗಿ ಕೆಳಗೆ ಇಳಿದ ಒಂದು ದಿನ ಚಲಿಸಿ ಇನ್ನಷ್ಟೆ ಗಾಂಪು, ಬಟಾಲ್, ಕಾಝಾ ದಾಟಬೇಕಿತ್ತು.

ಇವೆಲ್ಲ ಹೇಗಿವೆ ಎಂದರೆ ಊರಿದೆ ಎಂದರೆ ಇದೆ ಇಲ್ಲ ಎಂದರೆ ಇಲ್ಲ ಲೆಕ್ಕದ್ದು. ಅದೇ ರೀತಿ ಸೊಲಾಂಗ್ ವ್ಯಾಲಿಯಿಂದ ಬಂದರೂ ಈ ರಸ್ತೆಯಲ್ಲಿ ಮೆಹರಿಯಿಂದ ರಾಣಿನಲ್ಲಾ ವರೆಗೆ ಏನೆಂದರೆ ಏನೂ ಸಿಕ್ಕುವುದೇ ಇಲ್ಲ. ಮುಂದಿನ ಅದ್ಭುತ ರೊಂಥಾಂಗ್‌ನ
ಘಾಟಾಲೂಪ್ ಸಿಕ್ಕುವುದೇ ಈ ದಾರಿಯಲ್ಲಿ. ಜಗತ್ತಿನ ಅದ್ಭುತ ರಸ್ತೆಗಳಲ್ಲಿ ಇದೂ ಒಂದು. ಇಪ್ಪತ್ತೆರಡು ಹೇರ್ ಪಿನ್ ತಿರುವುಗಳ ದಾಟಲೇ ನಾಲ್ಕಾರು ತಾಸು ಬೇಕು. ಈ ತಿರುವುಗಳ ಕೊನೆಯೇ ಸ್ಪಿತಿಗೆ ಹೆಬ್ಬಾಗಿಲು. ಮೇಲಿನ ಕೀಲಾಂಗ್‌ನಿಂದ ಬಂದರೆ ಗ್ರಾಂಪು ಎನ್ನುವುದೇ ಮಧ್ಯದ ಜಂಕ್ಷನ್.

ಹಾಗೆ ಅಲ್ಲಿ ಉಳಿದಾಗ ದೊಂಗಡಿಯ ನಡೆಸುವ ಪಾರಿಬೇನ್ ಸಹಜವಾಗಿ ಆದರಿಸಿ, ಬೈಟೊ ಬೈಟೊ ಎನ್ನುತ್ತಾ ಬಿಸಿಬಿಸಿ ಸೂಪ್ ಕೊಡುತ್ತಿದ್ದರೆ, ಮುಂದಿನ ಅರ್ಧ ತಾಸಿನಲ್ಲಿ ನಾನು ಚಟ್ಟಾಯಿ ಹಿಡಿದು ನಿದ್ದೆ ಹೊಡೆದಾಗಿತ್ತು. ಸಂಜೆ ಅವಳೆ ಎಬ್ಬಿಸಿ ಊಟಕ್ಕೆ ದಾಲ್ ಮತ್ತು ರೋಟಿ ಮಾಡುತ್ತಿದ್ದರೆ, ಎಲ್ಲೆಲ್ಲಿಂದಲೋ ಬೈಕು ಗುಡುಗುಡಿಸಿಕೊಂಡು ಬಂದ ಆರೆಂಟು ಜನ ಮನೆಯೇನೋ ಎನ್ನುವಷ್ಟು ಸಲೀಸಾಗಿ ಓಡಾಡಿಕೊಂಡಿದ್ದರು. ಸಂಜೆಯ ಊಟ ಆದರೆ ಅವತ್ತಿನ ಚಟುವಟಿಕೆ ಮುಗಿಯಿತೆಂದೆ.

ಕೊನೆಯಲ್ಲಿ ಬೇಕೆಂದರೆ ಮತ್ತೊಮ್ಮೆ ಚಹ ಮಾಡಿಕೊಡುತ್ತಾರೆ. ಆದರೆ ಅಂತಹ ಸ್ಥಳದಲ್ಲಿ ಕೊಡುವ ಯಾವುದೇ ಆಹಾರದ ಅದ್ಭುತ ರುಚಿ ನಮ್ಮನ್ನು ಮರುಳು ಮಾಡದೇ ಇರುವುದಿಲ್ಲ. ಹಾಗೆ ಉಳಿದಾಗ ಇದೆಲ್ಲ ಮಾಹಿತಿ ಸಿಕ್ಕಿದ್ದು. ಅಂದ ಹಾಗೆ ಕೂಲ್‌ಡ್ರಿಂಕ್ಸು, ಗುಳಿಗೆಗಳು, ಚಹ, ಬಿಸ್ಕೆಟು, ಮ್ಯಾಗಿ, ಬಟ್ಟೆ ಒಗೆದು ಕೊಡುವುದು, ಅಗತ್ಯಕ್ಕೆ ಬೇಕಿದ್ದರೆ ಬೆಡ್‌ಶೀಟು ಕೊಡುವುದು, ಬೈಕ್ ಅಲ್ಲೆ ಇಟ್ಟು ಇನ್ಯಾವಾಗಲೋ ಒಯ್ಯುತ್ತೇನೆ ಎಂದರೂ ಸರಿ. ಹಸಿ ಬಟ್ಟೆ ಇದ್ದರೆ ಅಲ್ಲೆ ಇಟ್ಟು ಹಿಂದಿರುಗುವಾಗ ಒಯ್ಯುವ,
ಅರ್ಜೆಂಟಿಗೆ ಒಂದೆರಡು ಲೀ. ಪೆಟ್ರೊಲು ಹೀಗೆ ಹತ್ತು ಹಲವು ಸೇವೆಗಳು ಈ ದೊಂಗಡಿಗಳಲ್ಲಿ ಲಭ್ಯ.

ಅಂದಹಾಗೆ ಹೀಗೆ ಸಲ್ಲಿಸುವ ಸೇವೆಗಳು ತುಂಬಾ ತುಟ್ಟಿಯೇನೂ ಇರುವುದಿಲ್ಲ. ತಿಂಗಳಿಗೆ ಒಂದಷ್ಟು ಸಾವಿರ ದುಡಿಯುವ ಈ
ಹೆಂಗಸರು ಸಂಸಾರಕ್ಕೆ ಕಾಪಿಟ್ಟುಕೊಳ್ಳುತ್ತಿದ್ದರೆ, ನನ್ನಂತೆ ಆವತ್ತಿನ ಮಟ್ಟಿಗೆ ನೆಮ್ಮದಿಯಾಗಿ ಇದ್ದು, ಎದ್ದು ಬರುವಾಗಲೂ ಅದೇ ಆತ್ಮೀಯತೆಯಲ್ಲಿ ಎರಡು ಪರೋಟಾ ಎತ್ತಿ, ಪ್ಲಾಸ್ಟಿಕ್ ಸುತ್ತಿ ಕೊಡುತ್ತಾಳೆ. ಇದಕೂ.. ಎಂಬ ಲೆಕ್ಕಾಚಾರ ಮನಸ್ಸಿನಲ್ಲಿ ಆರಂಭವಾಗುವ ಮೊದಲೆ, ದಾರಿ ಮೇಲೆ ಏನೂ ಸಿಗೋದಿಲ್ಲ. ಈ ಅಮ್ಮನ ನೆನಪಿರಲಿ ಎಂದು ಬಿಡುತ್ತಾಳೆ. ನಾನು ತಲೆ ತಗ್ಗಿಸುತ್ತೇನೆ. ಇನ್ಯಾವಾಗ ನೋಡುತ್ತೇನೋ ಗೊತ್ತಿರುವುದಿಲ್ಲ. ಆದರೆ ಆವತ್ತಿನ ಮಟ್ಟಿಗೆ ಆಕೆಯೇ ಅನ್ನಪೂರ್ಣೆ.

ಒಲ್ಲದ ಓಟವೇ ಆಟವಾದ ಸಾಗೋಲ್ ಕಂಜೈ.. ನೆನಪಾಗುತ್ತಿತ್ತು. ಇದಿನ್ನು ಮುಂದಿನ ವಾರಕ್ಕಿರಲಿ.