Sunday, 15th December 2024

ನಮಗೊಂದು ನ್ಯಾಯ, ಅವರಿಗೊಂದು ನ್ಯಾಯ

ನಾಡಿಮಿಡಿತ

ವಸಂತ ನಾಡಿಗೇರ

ಇದು ಎರಡು ತಿಂಗಳು ಹಿಂದಿನ ಘಟನೆ. ಸರಿಯಾಗಿ ಹೇಳಬೇಕೆಂದರೆ ಫೆಬ್ರವರಿ 25ರಂದು ನಡೆದಿದ್ದು. ಅವರು ಎರ್ನಾ
ಸೋಲ್‌ಬರ್ಗ್. ನಾರ್ವೆ ದೇಶದ ಪ್ರಧಾನಿ. ವಿಷಯ ಏನೆಂದರೆ ಆವರಿಗೆ ಪೊಲೀಸರು ೨೩೦೦ ಯುರೋ, ಅಂದರೆ ಸುಮಾರು ಲಕ್ಷ ರು. ದಂಡ ವಿಧಿಸಿದರು.

ಏನು? ದೇಶದ ಪ್ರಧಾನಿಗೇ ದಂಡವಾ? ಅಂಥದ್ದೇನು ಮಹಾಪರಾಧ ಮಾಡಿದ್ದು ಎಂದಿರಾ? ನಿಜ ಹೇಳಬೇಕೆಂದರೆ, ನಮ್ಮ ದೇಶ, ರಾಜ್ಯದ ಲೆಕ್ಕದಲ್ಲಿ ಅದು ಅಪರಾಧವೇ ಅಲ್ಲ. ಆದರೆ ನಾರ್ವೆಯಲ್ಲಿ ಜಾರಿಯಲ್ಲಿದ್ದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ದ್ದಾರೆ ಎನ್ನುವುದು ಅವರು ಮಾಡಿದ ಅಪರಾಧ. ಅದರ ಇನ್ನಷ್ಟು ವಿವರ ನೋಡೋಣ. ಆ ದಿನ ಎರ್ನಾ ಅವರ ೬೦ನೇ ಜನ್ಮದಿನದ ಆಚರಣೆ ಇತ್ತು.

ಅದಕ್ಕಾಗಿ ಗೀಲೊ ಎಂಬ ನಗರದ ರೆಸಾರ್ಟ್ ಒಂದರಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು. ಅದರಲ್ಲಿ ೧೩ ಜನರು ಭಾಗವಹಿಸಿ ದ್ದರು. ಅಲ್ಲಿನ ಕೋವಿಡ್ ನಿಯಮಗಳ ಪ್ರಕಾರ ೧೦ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಇವರ ಸಂಖ್ಯೆ ಹೆಚ್ಚಾಗಿತ್ತು. ಅದೂ
ಅಲ್ಲದೆ ಆ ಕೂಟದಲ್ಲಿ ಪ್ರಧಾನಿ ಭಾಗವಹಿಸಿರಲೂ ಇಲ್ಲ. ಆದರೆ ಮರುದಿನ ಎಲ್ಲ ೧೪ ಜನರು ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ಸೇರಿ ಭೋಜನ ಮಾಡಿದ್ದರು.

‘ನಾನು ರೆಸಾರ್ಟ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಆ ದಿನ ನಾನು ಕಣ್ಣಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದೆ. ಆದರೆ ನನ್ನ ಕುಟುಂಬ ಸದಸ್ಯರು ಮತ್ತು ಬಂದು ಬಾಂಧವರು ಭಾಗವಹಿಸಿದ್ದರು ಮತ್ತು ಕೋವಿಡ್ ನಿಯಮ ಉಲ್ಲಂಘಿಸಿದ್ದು ನಿಜ ಎಂದು ಸ್ವತಃ ಪ್ರಧಾನಿ ಒಪ್ಪಿಕೊಂಡಿದ್ದರು.

ಈ ಬಗ್ಗೆ ಪೊಲೀಸ್ ಕಮಿಷನರ್ ಅವರೇ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದರು. ‘ಎಲ್ಲರೂ ಸಮಾನರು, ಆದರೆ ಕೆಲವರು ಹೆಚ್ಚು ಸಮಾನರು. ಈ ತತ್ತ್ವದಲ್ಲಿ ಸಾಮಾನ್ಯವಾಗಿ ನಾವು ದೇಶದ ಪ್ರಧಾನಿಯಾದವರಿಗೆ ಈ ರೀತಿಯ ದಂಡವನ್ನು ವಿಧಿಸುವು ದಿಲ್ಲ. ಆದರೆ ನಮ್ಮ ಪ್ರಧಾನಿ ಕೋವಿಡ್ ನಿಯಮವನ್ನು ಬಹಳ ಅಚ್ಚುನಿಟ್ಟಾಗಿ ಜಾರಿಗೆ ತಂದಿದ್ದಾರೆ. ಯಾವುದೇ ಮುಲಾಜಿಲ್ಲದೆ ಅತ್ಯಂತ ಕಟ್ಟುನಿಟ್ಟಾಗಿ ಅದನ್ನು ಜಾರಿಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಇಂಥ ಸಂದರ್ಭದಲ್ಲಿ ನಾವು ಅವರನ್ನು ಹಾಗೆಯೇ ಬಿಟ್ಟರೆ ತಪ್ಪಾಗುತ್ತದೆ. ಕೆಟ್ಟ ಸಂದೇಶ ಹೋಗುತ್ತದೆ. ಅವರಿಗೆ ದಂಡ ವಿಧಿಸಿದರೆ, ಈ ದೇಶದ ಕಾನೂನಿನ ಬಗ್ಗೆ ಜನರ ವಿಶ್ವಾಸ ಹೆಚ್ಚುತ್ತದೆ. ನೈತಿಕ ಮೌಲ್ಯಗಳನ್ನು ಎತ್ತಿಹಿಡಿದಂತಾಗುತ್ತದೆ’ ಎಂದು ಅವರು ಹೇಳಿದರು. ಈ ಮಾತಿಗೆ ಸ್ವತಃ ಪ್ರಧಾನಿಯೂ ದನಿಗೂಡಿಸಿದರು. ‘ನಾನು ಈ ಕ್ರಮವನ್ನು ಪ್ರಶ್ನಿಸಿ ಮೇಲ್ಮನವಿ
ಸಲ್ಲಿಸುವುದಿಲ್ಲ. ಬದಲಾಗಿ ದಂಡ ಕಟ್ಟುವ ಮೂಲಕ ಕಾನೂನನ್ನು ಗೌರವಿಸುತ್ತೇನೆ.

ಇತರರಿಗೆ ಮಾದರಿಯಾಗುತ್ತೇನೆ. ಜತೆಗೆ ಈ ಘಟನೆ ಮತ್ತು ಪ್ರಮಾದಕ್ಕಾಗಿ ದೇಶದ ಜನರ ಕ್ಷಮೆ ಯಾಚಿಸುತ್ತೇನೆ’ ಎಂದು ಟೆಲಿವಿಷನ್ ಸಂದರ್ಶನವೊಂದರಲ್ಲಿ ತಿಳಿಸಿದರು. ಇಡೀ ಪ್ರಕರಣ ನಮಗೆ ವಿಚಿತ್ರ ಎನಿಸಬಹುದು. ಇಷ್ಟು ಸಣ್ಣ ವಿಷಯವನ್ನು ಇಷ್ಟು ದೊಡ್ಡದಾಗಿ ಮಾಡುವ ಅಗತ್ಯವೇನಿತ್ತು, ಇಂಥ ಚಿಲ್ಲರೆ ತಪ್ಪಿಗೆ ದಂಡ ವಿಧಿಸುವ – ಅದೂ ದೇಶದ ಪ್ರಧಾನಿಗೆ- ಅಗತ್ಯವೇ ನಿತ್ತು ಎಂಬ ಭಾವನೆ ಬರಬಹುದು. ಏಕೆಂದರೆ ನಮ್ಮಲ್ಲಿ ನಡೆಯುವುದೇ ಹಾಗೆ. ಆದರೆ ದಂಡ ಕಟ್ಟದೆ ಹೋಗಿದ್ದಿದ್ದರೆ ಇಲ್ಲವೆ ಘಟನೆಯ ಬಗ್ಗೆ ಕ್ಷಮೆಯಾಚಿಸದಿದ್ದಿದ್ದರೆ ನಾರ್ವೆ ಪ್ರಧಾನಿ ಇನ್ನಷ್ಟು ಸಂಕಷ್ಟಕ್ಕೆ, ಮುಜುಗರಕ್ಕೆ ಒಳಗಾಗುತ್ತಿದ್ದರು.

ಏಕೆಂದರೆ ಅವರು ಮತ್ತು ಅವರ ಕುಟುಂಬದವರು ಕೋವಿಡ್ ನಿಯಮ ಉಲ್ಲಂಘಿಸಿದ ವಿಷಯ ಗೊತ್ತಾಗುತ್ತಲೇ ಈ ಕುರಿತು
ದೊಡ್ಡಮಟ್ಟದ ಚರ್ಚೆಗಳು ಆರಂಭವಾದವು. ಈ ಬಗ್ಗೆ ತನಿಖೆ ನಡೆಸಬೇಕು ಎಂಬ ಆಗ್ರಹಗಳು ಕೇಳಿಬಂದವು. ಜನಸಾಮಾನ್ಯರಿಗೆ ಒದು ಕಾನೂನು. ಪ್ರಧಾನಿಗೆ ಒಂದು ಕಾನೂನಾ? ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಆಚಾರ ಹೇಳಿ ಬದನೆಕಾಯಿ ತಿಂದರೆ ಹೇಗೆ ಎಂಬಿತ್ಯಾದಿ ಅಭಿಪ್ರಾಯಗಳು ಕೇಳಿಬಂದವು. ಈ ವಿಚಾರದಲ್ಲಿ  ಪ್ರಧಾನಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ
ನೀಡಬೇಕು ಎಂಬ ಒತ್ತಾಯಗಳೂ ಕೇಳಿಬಂದವು.

ಇಷ್ಟೆಲ್ಲ ಆದ ಮೇಲೆ ಎರ್ನಾ ಹೇಗೆ ತಾನೆ ಸುಮ್ಮನಿರಲು ಸಾಧ್ಯ ? ಏಕೆಂದರೆ ಸ್ವತಃ ಅವರೇ ಬಹಳ ಕಟ್ಟುನಿಟ್ಟು. ಹಾಗೆ ನೋಡಿದರೆ ನಾರ್ವೆಯಲ್ಲಿ ಇತರ ಯುರೋಪಿನ ದೇಶಗಳಿಗೆ ಹೋಲಿಸಿದರೆ ಕರೋನಾ ಸೋಂಕಿನ ಪ್ರಕರಣಗಳು ಅಷ್ಟೊಂದು ಹೆಚ್ಚಾಗಿರಲಿಲ್ಲ. ಪರಿಸ್ಥಿತಿ ಗಂಭೀರವಾಗೇನೂ ಇರಲಿಲ್ಲ. ಆದರೆ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಧಾನಿಯೇ ಹಲವಾರು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದರು.

ಬಿಗಿಯಾದ ಆಡಳಿತದ ಕಾರಣದಿಂದಾಗಿಯೇ, ‘ಉಕ್ಕಿನ ಮಹಿಳೆ’ ಎಂದೇ ಖ್ಯಾತಿ ಪಡೆದಿದ್ದಾರೆ. ಇಂಥವರೇ ನಿಯಮ ಮುರಿದಿದ್ದಾರೆ ಎಂದರೆ ಜನ ಹೇಗೆ ತಾನೆ ಸಹಿಸಿಯಾರು? ಅದೂ ಅಲ್ಲದೆ ಮುಂದಿನ ವರ್ಷವೇ ಅಲ್ಲಿ ಚುನಾವಣೆ. ಇಂಥ ಅಪಖ್ಯಾತಿಯೊಂದಿಗೆ ಹೇಗೆ ಎದುರಿಸಿಯಾರು? ಈ ಉದಾಹರಣೆಯನ್ನು ಏಕೆ ಕೊಡುತ್ತಿದ್ದೇನೆ, ಈ ಘಟನೆಯನ್ನು ಏಕೆ ಇಷ್ಟು ವಿಷದವಾಗಿ ವಿವರಿಸಿದೆ
ಎಂಬುದು ಸ್ಪಷ್ಟ. ಇದೇ ಪ್ರಕರಣವನ್ನು ನಮಗೆ ಅನ್ವಯಿಸಿ ನೋಡಿದರೆ ಹೇಗಿರುತ್ತದೆ? ನಮ್ಮ ದೇಶ, ರಾಜ್ಯದಲ್ಲೂ ಕರೋನಾ ಸ್ಥಿತಿ ಅತಿ ಗಂಭೀರವಾಗಿದೆ.

ಆದರೆ ನಮ್ಮಲ್ಲಿ ಇಂಥ ನಿಯಮ ಪಾಲನೆ ಸಾಧ್ಯವೇ? ಸಾಧ್ಯವೇ ಇಲ್ಲ. ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ಇತ್ತಲ್ಲ. ಪಶ್ಚಿಮ ಬಂಗಾಳದಲ್ಲಿ ಇನ್ನೂ ಮುಗಿದಿಲ್ಲ. ಅದೇ ರೀತಿ ನಮ್ಮ ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ, ಬಸವಕಲ್ಯಾಣ
ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಿತು. ಆಗ ಹದಿನೈದು ದಿನಗಳ ಕಾಲ ಎಲ್ಲ ಪಕ್ಷಗಳ ಹಿರಿ ಕಿರಿ ಮುಖಂಡರು ಪ್ರಚಾರದಲ್ಲಿ ಭಾಗವಹಿಸಿದ್ದರು.

ಚುನಾವಣಾ ರ‍್ಯಾಲಿ, ಪ್ರಚಾರ ಕಾರ್ಯದಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಮೊದಲಾದ ನಿಯಮಗಳನ್ನು ಪಾಲಿಸುವುದು ಸಾಧ್ಯವೇ? ಆಗೆಲ್ಲ ಕರೋನಾ ಇರಲಿಲ್ಲವೆ? ಇತ್ತು. ಆದರೆ ಇವರಿಗೆ ಚುನಾವಣೆ ಮುಖ್ಯವಾಗಿತ್ತು. ಹೀಗಾಗಿ ಕರೋನಾ ನಿಯಮ ನೆಗೆದು ಬಿತ್ತು. ಅಲ್ಲಿ ಯಾವ ಎಗ್ಗಿಲ್ಲದೆ ನಿಯಮ ಉಲ್ಲಂಘನೆ ಆಯಿತು. ಆದರೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಯಾವ ಅಧಿಕಾರಿಗಳೂ ಧೈರ್ಯ ಮಾಡಲಿಲ್ಲ. ಏಕೆಂದರೆ ಇದು ನಾರ್ವೆಯೂ ಅಲ್ಲ; ಇಲ್ಲಿನ ರಾಜಕಾರಣಿಗಳು ಎರ್ನಾ ಸೋಲ್‌ಬರ್ಗ್ ಥರದವರೂ ಅಲ್ಲ. ನಮ್ಮ ಜನರು ಕೂಡ ನಾರ್ವೆ ದೇಶದ ಪ್ರಜೆಗಳಂತಲ್ಲ. ಕತ್ತಿನಪಟ್ಟಿಯನ್ನು ಹಿಡಿದು ಕೇಳುವುದಿಲ್ಲ. ಹೀಗಾಗಿ ಅಲ್ಲಿ ಕರೋನಾ ನಿಯಂತ್ರಣದಲ್ಲಿದೆ.

ನಮ್ಮಲ್ಲಿ ಉಲ್ಬಣಿಸಿದೆ ಅಷ್ಟೇ. ಇನ್ನು ರಾಷ್ಟ್ರಮಟ್ಟದಲ್ಲಿ ಐದು ರಾಜ್ಯಗಳ ಚುನಾವಣೆ ಸಂದರ್ಭದಲ್ಲೂ ಚಿತ್ರಣ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಜಿದ್ದಾಜಿದ್ದಿನ ಸೆಣಸಾಟ ನಡೆದಿದೆ. ಅಲ್ಲಿ ಯಾವ ರೂಲ್ಸೂ
ಇಲ್ಲ. ಇನ್ನು ಕರೋನಾ ರೂಲ್ಸು ಎಲ್ಲಾದರೂ ನಡೆಯುವುದುಂಟೆ. ನಮ್ಮ ಪ್ರಧಾನಿ, ಗೃಹಸಚಿವ ರಾದಿಯಾಗಿ ಘಟಾನುಘಟಿ ನಾಯಕರೆಲ್ಲ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಅವರೇ ಪ್ರತಿಪಾದಿಸಿದ ‘ದೋ ಗಜ ಕೀ ದೂರಿ’ ನಿಯಮವನ್ನು ಪ್ರಧಾನಿ ಎದುರಲ್ಲೇ ಗಾಳಿಗೆ ತೂರಲಾಯಿತು.

ಕಡೇ ಪಕ್ಷ ಚುನಾವಣಾ ಆಯೋಗವಾದರೂ ಕಠಿಣ ಕ್ರಮ ಕೈಗೊಳ್ಳಬಹುದಿತ್ತು. ಅದೂ ಕೂಡ ಮೂಕಪ್ರೇಕ್ಷಕ ನಂತಿತ್ತು. ಈಗ ನಮಗೊಬ್ಬ ಟಿ.ಎನ್. ಶೇಷನ್ ನಂಥವರು ಇರಬೇಕಿತ್ತು ಎಂದು ಉದ್ಗರಿಸಿದವರೆಷ್ಟೋ. ಇದೀಗ, ಊರೆಲ್ಲ ಕೊಳ್ಳೆ ಹೊಡೆದ ಮೆಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ, ಐದು ಹಂತದ ಮತದಾನದ ಬಳಿಕ, ರ‍್ಯಾಲಿಗಳನ್ನು ಮಾಡುವುದಿಲ್ಲ ಎಂದು ಔದಾರ್ಯ ಮೆರೆಯುತ್ತಿವೆ. ಆದರೆ ಎಷ್ಟು ಬೇಕೋ ಅಷ್ಟರ ಮಟ್ಟಿನ ಅನಾಹುತ ಆಗಿದೆ. ಸ್ವತಃ ಹಲವಾರು ರಾಜಕೀಯ ಮುಖಂಡರು ಕೋವಿಡ್‌ಗೆ ಬಲಿಯಾಗಿದ್ದಾರೆ.

ಅಷ್ಟೇಕೆ ನಮ್ಮ ಬೆಳಗಾವಿ ಸಂಸದ ಅಂಗಡಿಯವರು ನಿಧನರಾಗಿದ್ದೇ ಕೋವಿಡ್‌ನಿಂದ. ತಿರುಪತಿ, ಕನ್ಯಾಕುಮಾರಿಯಲ್ಲೂ ಅದೇ ಕಥೆ. ಅಂದರೆ ಕೋವಿಡ್‌ನಿಂದ ಅಭ್ಯರ್ಥಿ ನಿಧನರಾದ ಕಾರಣ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದರೂ ಯಾರಿಗೂ ಅದರ ಖಬರೇ ಇಲ್ಲದಂತೆ ವರ್ತಿಸುತ್ತಿರುವುದು ವಿಪರ್ಯಾಸ ಎನ್ನೋಣವೋ, ಭಂಡ ಧೈರ್ಯ ಎಂದು ತಿಳಿಯೋಣವೋ, ಅಥವಾ ಕಾನೂನಿಗೆ ಗೌರವವವಿಲ್ಲ ಎಂದು ಭಾವಿಸೋಣವೋ. ಅಥವಾ ನಾವು ಸೂಕ್ಷ್ಮತೆಯನ್ನೇ ಕಳೆದು ಕೊಂಡಿದ್ದೇವೆಯೋ. ಒಂದೂ ಅರ್ಥವಾಗುತ್ತಿಲ್ಲ. ರಾಜಕಾರಣಿಗಳ ಮಾತು ಬಿಡಿ. ಅವರು ಇರೋದೇ ಹೀಗೆ ಅಂದುಕೊಳ್ಳೋಣ.

ಏಕೆಂದರೆ ಅವರಿಗೆ ಅಧಿಕಾರ, ಆಸ್ತಿ, ಅಂತಸ್ತು, ಪ್ರತಿಷ್ಠೆ ಇರುತ್ತದೆ. ಅದನ್ನು ಚಲಾಯಿಸಬೇಕೆಂಬ ಹುಚ್ಚು ಆಸೆಯೂ ಇರುತ್ತದೆ.
ಆದರೆ ಉಳಿದವರಿಗೆ ಏನಾಗಿದೆ? ಹರಿದ್ವಾರದಲ್ಲಿ ಕುಂಭಮೇಳ ನಡೆಯಿತಲ್ಲ. ಅಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಕುಂಭ ಮೇಳದ ಸ್ಥಳ ಕರೋನಾ ಹಾಟ್‌ಸ್ಪಾಟ್ ಆಗುವುದಿಲ್ಲವೆ ಎಂದು ಕೇಳಿದರೆ ಕೆಲವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಬೇರೆ
ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತೀರಿ, ನಮ್ಮ ಆಚರಣೆ, ಸಂಪ್ರದಾಯಕ್ಕೆ ಮಾತ್ರ ಕೊಕ್ಕೆ ಹಾಕುತ್ತೀರಿ ಎಂಬ ಆಕ್ಷೇಪ ಕೇಳಿಬರುತ್ತದೆ. ಅಷ್ಟೇ ಏಕೆ. ಮೊನ್ನೆ ಮೊನ್ನೆ ದೆಹಲಿಯಲ್ಲಿ ನಡೆದ ಘಟನೆಯೊಂದರ ವಿಡಿಯೊ ಹರಿದಾಡುತ್ತಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವ ದಂಪತಿಯ ಪೈಕಿ ಮಹಿಳೆ ಮಾಸ್ಕ್ ಧರಿಸಿರಲಿಲ್ಲ.

ಹೀಗಾಗಿ ಪೊಲೀಸರು ಅವರನ್ನು ತಡೆದು ವಿಚಾರಿಸಲು ಮುಂದಾದರೆ ಅವರ ಮೇಲೆಯೇ ಆವಾಜ್ ಹಾಕುವುದೇ ಆ ಯಮ್ಮ? ಏನೇನೋ ಅಸಂಬದ್ಧ ಪ್ರಲಾಪ ಮಾಡಿ ಪೊಲೀಸರ ಬಾಯಿ ಮುಚ್ಚಿಸಲು ಯತ್ನಿಸಿದಲೇ ಹೊರತು ಮಾಸ್ಕ್ ಧರಿಸಬೇಕೆಂಬ
ಕಾಮನ್ ಸೆನ್ಸ್ ಇರಲಿಲ್ಲ. ಅಥವಾ ಅಷ್ಟೊಂದು ಉಡಾಫೆ, ಧಾರ್ಷ್ಟ್ಯವೋ ಗೊತ್ತಿಲ್ಲ.

ಇದು ಜಾತ್ರೆ, ಸಂತೆ, ಮಾಲ್, ಉತ್ಸವ, ಹಬ್ಬ ಎಲ್ಲಕ್ಕೂ ಅನ್ವಯಿಸುತ್ತದೆ. ಇಂಥ ವಿಶೇಷ ದಿನಗಳು ಬಂದರೆ ಸಾಕು. ಜನರು ಹುಚ್ಚರಂತೆ, ಹುಂಬರಂತೆ ಸೇರುತ್ತಾರೆ. ಅಲ್ಲಿ ಸಾಮಾಜಿಕ ಅಂತರ ಅಂದರೆ ಏನು ಎಂದು ಕೇಳುವ ಸನ್ನಿವೇಶ. ಇನ್ನು ಕಾನೂನುಗಳನ್ನು ಅನುಷ್ಠಾನಗೊಳಿಸುವ ನಮ್ಮ ಅಧಿಕಾರಿಗಳೂ ನಮ್ಮಂತೆಯೇ. ಸಿಕ್ಕಿದ್ದೇ ಚಾನ್ಸು ಅಂತ ಬಡಬಗ್ಗರ ಮೇಲೆ
ಕೋಪ, ದರ್ಪ ಪ್ರದರ್ಶಿಸುತ್ತಾರೆ. ಮಾಸ್ಕ್ ಹಾಕಲಿಲ್ಲ ಎಂದು ಮುಖಾಮೂತಿ ನೋಡದೆ ಬಾರಿಸುವುದು; ಅಂಗಡಿ, ಮುಂಗಟ್ಟಿನವರಿಗೆ ಸುಖಾಸುಮ್ಮನೆ ತೊಂದರೆ ಕೊಡುವುದು ಇವೆಲ್ಲವನ್ನು ನೋಡುತ್ತಿದ್ದೇವೆ. ಈ ಕುರಿತು ಬೇಕಾದಷ್ಟು ವಿಡಿಯೋಗಳು ಬರುತ್ತವೆ. ಆದರೆ ಅವರ ಕಾಯಕ ಹಾಗೆಯೇ ನಡೆದೇ ಇರುತ್ತದೆ.

ಸಮಸ್ಯೆ ಏನೆಂದರೆ ದೊಡ್ಡವರಿಗೆ ಎಂದೂ ಇದರ ಬಿಸಿ ತಟ್ಟುವುದೇ ಇಲ್ಲ. ಹೀಗಾಗಿ ಜನಸಾಮಾನ್ಯರ ಕಷ್ಟ, ನೋವು ಅರ್ಥವೇ ಆಗುವುದಿಲ್ಲ. ಈಗ ಕರೋನಾ ಎರಡನೇ ಅಲೆ ಜೋರಾಗಿ ಎದ್ದಿದೆ. ಅದರ ಪರಿಣಾಮ ನಮ್ಮ ಕಣ್ಣೆದುರಿಗೇ ಕಾಣಿಸುತ್ತಿದೆ.
ಆದರೂ ನಾವು ಒಪ್ಪಲು ತಯಾರಿಲ್ಲ. ಮಾಧ್ಯಮಗಳು ಸುಮ್ಮನೆ ಹೆದರಿಸುತ್ತಿವೆ ಎಂದು ಹೇಳಿ ಬೇಕಾಬಿಟ್ಟಿ ಓಡಾಡಿ ಸೋಂಕು ಉಲ್ಬಣಕ್ಕೆ ನಾವೆಲ್ಲರೂ ಕಾರಣರಾಗಿದ್ದೇವೆ. ಈಗ ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಸಿಗುತ್ತಿಲ್ಲ, ಔಷಧ ಕೊರತೆ ಎಂದೆಲ್ಲ
ಬಡಬಡಿಸುತ್ತಿದ್ದೇವೆ.

ಕೊನೆಗೆ ಸ್ಮಶಾನದಲ್ಲಿ ಶವಗಳನ್ನು ಸುಡಲು ಕೂಡ ಸಮರ್ಪಕ ವ್ಯವಸ್ಥೆ ಇಲ್ಲ. ನಮ್ಮ ವ್ಯವಸ್ಥೆಯಲ್ಲಿ ಇವೆಲ್ಲ ಮಾಮೂಲು ಎಂಬಂತಾಗಿದೆ. ಏಕೆಂದರೆ ಮೊತ್ತಮೊದಲನೆಯದಾಗಿ ನಾವು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕೊಳ್ಳುವುದರಲ್ಲೇ
ಸೋಲುತ್ತೇವೆ. ಸೂಕ್ಷ್ಮತೆ ಇಲ್ಲ. ನಮ್ಮ ರಾಜಕಾರಣಿಗಳು ಮತ್ತು ಆಡಳಿತ ಯಂತ್ರದ ಇಚ್ಛಾಶಕ್ತಿ ಮತ್ತು ಸಿದ್ಧತೆಯಯ ಕೊರತೆ- ಇವೆಲ್ಲವೂ ಸೇರಿ ಪರಿಸ್ಥಿತಿ ಈಗಿನಂತೆ ಬಿಗಡಾಯಿಸುವುದು. ಇದೆಲ್ಲದರ ಪರಿಣಾಮ ಅನುಭವಿಸುವವವರು ಕೊನೆಗೆ ನಾವೇ.
ಅಂದರೆ ಜನಸಾಮಾನ್ಯರೇ.

ಹಣ, ಪ್ರಭಾವ, ಅಧಿಕಾರ ಇದ್ದವರು ಹೇಗೋ ಬಚಾವಾಗುತ್ತಾರೆ. ಬಡವರು, ಬಡಪಾಯಿಗಳಿಗೇ ಎಲ್ಲ ಸಮಸ್ಯೆಯಾಗುವುದು.
ಏಕೆಂದರೆ ನಾವು ನಾರ್ವೆಯವರಲ್ಲ, ನಮ್ಮನ್ನು ಆಳುವವವರು ಎರ್ನಾ ಸೋಲ್‌ಬರ್ಗ್ ನಂಥವರು ಅಲ್ಲ. ನಾವು ಭಾರತೀಯರು. ಯಾವುದಕ್ಕೂ ಕಿಮ್ಮತ್ತು ಕೊಡದವರು. ಸದಾ ಗೊಣಗುತ್ತ ಇರುವವವರು.

ನಾಡಿಶಾಸ್ತ್ರ
ನಾರ್ವೆಯಲ್ಲಿದೆ ಕಾನೂನಿನ ನಾವೆ
ಆದರೆ ನಮಗಿಲ್ಲ ಅದರ ಪರಿವೆ
ಎಲ್ಲರೂ ಸಮಾನರು, ಕೆಲವರು
ಹೆಚ್ಚು ಸಮಾನರು ಎನ್ನುವರು