ತಿಳಿರುತೋರಣ
ಶ್ರೀವತ್ಸ ಜೋಶಿ
ಅದರಲ್ಲೇನಿದೆ ಅಷ್ಟು ಖುಷಿಯಾಗುವಂಥ ವಿಚಾರ? – ಎಂದು ಬೇರೆಯವರಿಗೆ ಅನಿಸುವ ಹಲವಾರು ಸಣ್ಣ ಸಣ್ಣ ಸಂಗತಿಗಳು ನನಗೆ ಯಾವತ್ತಿಗೂ ಖುಷಿ ಕೊಡುವಂಥವೇ. ಬಹುಮಟ್ಟಿಗೆ ಅಂಥ ಖುಷಿಯನ್ನು ನನ್ನ ಪಾಡಿಗೆ ನಾನು ಅನುಭವಿಸಿ ಆನಂದಿಸು ತ್ತೇನೆ, ಮುಂದಿನ ಖುಷಿಯನ್ನರಸುತ್ತ ಹೆಜ್ಜೆಯಿಡುತ್ತೇನೆ.
ಆದರೆ ಕೆಲವೊಮ್ಮೆ ನನಗಾದ ಖುಷಿಯನ್ನು ನಾಲ್ಕಾರು ಜನರೊಡನೆ ಹಂಚಿಕೊಂಡು ಅದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದೂ ಇದೆ. ಇದು ಆ ಎರಡನೆಯ ರೀತಿಯದು. ನಾನಿಲ್ಲಿ ತರಿಸುವ ‘ದ ವಾಷಿಂಗ್ಟನ್ ಪೋಸ್ಟ್’ ದಿನಪತ್ರಿಕೆಯ ಕಳೆದ ಭಾನುವಾರದ (ಎಪ್ರಿಲ್ 18) ಸಂಚಿಕೆ ಹೊತ್ತುತಂದ ಒಂದು ಸಿಹಿ ಅಚ್ಚರಿ. ಆವತ್ತಿನ ಸಂಚಿಕೆಯೊಂದಿಗಿದ್ದ ಸಾಪ್ತಾಹಿಕ ಪುರವಣಿಯ ಮುಖಪುಟ ದಲ್ಲಿ ದಾಸವಾಳದ ಚಿತ್ರ ವಿಜೃಂಭಿಸಿದ ವೈಖರಿ. ಸೋ ವ್ಹಾಟ್? ಅಂತನಿಸಬಹುದು ಬೇರೆಯವರಿಗೆ.
ಆದರೆ ನನಗದು ಸೋ ಗ್ರೇಟ್! ಇನ್ನೊಂದು ಬಲವಾದ ಕಾರಣವೆಂದರೆ ಇತ್ತೀಚಿನ ಹಲವು ವಾರಗಳಲ್ಲಿ ಮ್ಯಾಗಜಿನ್ ಮುಖಪುಟ ದಲ್ಲಿದ್ದದ್ದು ಕೋವಿಡ್ ಸಂಬಂಽತ ದೃಶ್ಯಗಳು, ಅಮೆರಿಕದಲ್ಲಿ ಅವ್ಯಾಹತ ಸಾಗಿರುವ ಗನ್ – ವಯಲೆನ್ಸ್, ವರ್ಷವರ್ಷವೂ ಏರುತ್ತಿರುವ ಕಾಲೇಜು ಶಿಕ್ಷಣ ಶುಲ್ಕ, ಟ್ರಂಪಾಯಣ ಮತ್ತು ತದನಂತರದ ರಾಜಕೀಯ ಸ್ಥಿತಿಗತಿಗಳು, ಗಡಿ ದಾಟಿ ಬರುತ್ತಿರುವ
ನಿರಾಶ್ರಿತರು… ಇತ್ಯಾದಿ ಪ್ರತಿಯೊಂದೂ ಚಿಂತಾಕ್ರಾಂತರನ್ನಾಗಿಸುವ ಸಂಗತಿಗಳೇ.
ಹಾಗಿರುವಾಗ ನೀಲಾಕಾಶದ ಹಿನ್ನೆಲೆಯಲ್ಲಿ ಒಂದು ಸುಂದರ ಕೆಂಪು ದಾಸವಾಳದ ಚಿತ್ರ ಮುಖಪುಟದಲ್ಲಿ ಕಾಣಿಸಿಕೊಂಡರೆ ಯಾರಿಗೆ ತಾನೆ ಖುಷಿ ಆಗಲಿಕ್ಕಿಲ್ಲ? ವಾಷಿಂಗ್ಟನ್ ಪೋಸ್ಟ್‌ನ ಸಂಡೇ ಮ್ಯಾಗಜಿನ್ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ನಿಮಗೆ ಹೇಳಬೇಕು. ಇದು ಪತ್ರಿಕೆಯ ಬೇರೆಲ್ಲ ಸಪ್ಲಿಮೆಂಟ್‌ಗಳಂತೆ ಬ್ರಾಡ್ ಶೀಟ್ ರೀತಿಯಲ್ಲಿ ಬರುವುದಲ್ಲ. ಸುಧಾ-ತರಂಗ ಆಕಾರದ ಪುಸ್ತಕ ರೂಪದ ಮ್ಯಾಗಜಿನ್. ನಯವಾದ ಕಾಗದ ಬಳಸಿ ಮುದ್ರಿಸಿದ ಸುಮಾರು 40 ಪುಟಗಳ ಸ್ಲಿಮ್ ಏಂಡ್ ಟ್ರಿಮ್ ಕಲರ್ ಫುಲ್ ಪುಸ್ತಿಕೆ.
ತುಸು ಗಂಭೀರವಾದ್ದೊಂದು ಕವರ್‌ಸ್ಟೋರಿ, ಮತ್ತೆ ಕೆಲವು ಸ್ಥಿರಶೀರ್ಷಿಕೆಗಳು, ರೆಸ್ಟೊರೆಂಟ್ ರಿವ್ಯೂ, ಪದಬಂಧ, ‘ಬಿಲೋ ದ
ಬೆಲ್ಟ್‌ವೇ’ ಅಂತೊಂದು ಹಾಸ್ಯ ಅಂಕಣ ಇತ್ಯಾದಿ ಭಾನುವಾರಕ್ಕಾಗುವಂತೆ ಅಕ್ಷರಭೋಜನ. ಅಮೆರಿಕದಲ್ಲಿ ಇತರ ಕೆಲ ಪ್ರಮುಖ ದಿನಪತ್ರಿಕೆಗಳ ಸಂಡೇ ಮ್ಯಾಗಜಿನ್ಸ್ ಹೀಗೆ ಪುಸ್ತಕರೂಪದಲ್ಲೇ ಪ್ರಕಟವಾಗುತ್ತವೆ. ನಿಮ್ಮಲ್ಲಿ ಕೆಲವರಿಗೆ ನೆನಪಿರಬಹುದು – ವಿಶ್ವೇಶ್ವರ ಭಟ್ಟರು ಈಹಿಂದೆ ಕನ್ನಡಪ್ರಭದ ಪ್ರಧಾನ ಸಂಪಾದಕರಾಗಿದ್ದಾಗ ಒಮ್ಮೆ ಭಾನುವಾರದ ಪುರವಣಿಯನ್ನು ಈ ರೀತಿ ಪುಸ್ತಕ ರೂಪದಲ್ಲಿ ತರುವ ಸಾಹಸ ಮಾಡಿದ್ದರು. ಅದರ ಹೆಸರು ‘ಖುಷಿ’ ಅಂತ ಇತ್ತೆಂದು ನೆನಪು.
ನಾಲ್ಕಾರು ವಾರ ಹಾಗೆ ಪ್ರಕಟವಾಗಿರಬಹುದು, ಆ ಫಾರ್ಮ್ಯಾಟ್ ಅಷ್ಟು ಕ್ಲಿಕ್ ಆಗಲಿಲ್ಲ. ಓದುಗರಿಗೆ ಇಷ್ಟವಾಗಲಿಲ್ಲ ಅಂತಲ್ಲ,
ವಿತರಕರು ತಕರಾರೆಬ್ಬಿಸಿದರಂತೆ. ಬ್ರಾಡ್ ಶೀಟ್ ಆಗಿರದೆ ಪುಸ್ತಕದಂತಿದ್ದರೆ ಮುಖ್ಯ ಪತ್ರಿಕೆಯ ಜೊತೆ ಸೇರಿಸುವುದು ಕಷ್ಟ,
ಕೆಲವೊಮ್ಮೆ ಬಿದ್ದುಹೋಗುತ್ತದೆ, ಹೀಗೆ ಪ್ರಕಟಿಸಬೇಡಿ ಎಂದು ಅವರ ಕ್ಯಾತೆ. ಆಮೇಲೆ ಆ ಫಾರ್ಮ್ಯಾಟ್ ನಿಂತುಹೋಗಿ ಮಾಮೂಲಿ ಬ್ರಾಡ್ ಶೀಟ್ ರೀತಿಯಲ್ಲಿ ಪ್ರಕಟಣೆ ಮುಂದುವರಿಯಿತು. ಈಗ ಕೋವಿಡ್‌ಗೆ ತತ್ತರಿಸಿರುವ ಸುಮಾರಷ್ಟು ಪತ್ರಿಕೆಗಳಲ್ಲಿ ಭಾನುವಾರ ಪ್ರತ್ಯೇಕ ಪುರವಣಿ ಇಲ್ಲ; ಮುಖ್ಯ ಸೆಕ್ಷನ್‌ನಲ್ಲೇ ಒಂದೆರಡು ಪುಟಗಳು.
ಉದಯವಾಣಿಯಲ್ಲಂತೂ ಅದೂ ಇಲ್ಲವಾಗಿದೆ ಎನ್ನುವುದು ಖೇದಕರ ಬೆಳವಣಿಗೆ. ಸರಿ, ವಾಷಿಂಗ್ಟನ್ ಪೋಸ್ಟ್‌ನ ಸಂಡೇ ಮ್ಯಾಗಜಿನ್ ಮುಖಪುಟದಲ್ಲಿ ದಾಸವಾಳದ ಚಿತ್ರವಿತ್ತು ಎಂದೆನಷ್ಟೆ? ಅದನ್ನು ನೋಡಿಯೇ ನನಗೆ ಎಲ್ಲಿಲ್ಲದ ಪುಳಕ. ದಾಸವಾಳದ ಬಗ್ಗೆಯೇ ಕವರ್‌ಸ್ಟೋರಿ ಇರುತ್ತಿದ್ದರೆ ಇನ್ನೂ ಭಯಂಕರ ಖುಷಿಯಾಗಿರುತ್ತಿತ್ತು, ಹಾಗಾಗಲಿಲ್ಲ. ಅದು ಪರಿಸರ
ಸಂರಕ್ಷಣೆಯ ತುರ್ತಿನ ಬಗೆಗೆ ಒಂದು ಗಂಭೀರ ನುಡಿಚಿತ್ರ.
ಎಪ್ರಿಲ್ 22ರ ‘ಭೂಮಿದಿನ’ದ ಸಂದರ್ಭಕ್ಕೆಂದು ಆಯ್ದುಕೊಂಡದ್ದಿರಬಹುದು. ಎರಡು ತಿಂಗಳ ಹಿಂದೆ ಟೆಕ್ಸಸ್ ಸಂಸ್ಥಾನದಲ್ಲಿ ಕಂಡುಕೇಳರಿಯದ ಹಿಮಪಾತವಾದಾಗ, ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಮತ್ತು ಆಮೇಲೆ ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು ತಾಂಡವವಾಡಿದಾಗ, ಮನುಷ್ಯರಷ್ಟೇ ಅಲ್ಲ ಪ್ರಾಣಿಪಕ್ಷಿಗಳೆಲ್ಲ ಯಾವ ಪ್ರಮಾಣದಲ್ಲಿ ತೊಂದರೆಗೊಳಗಾದುವು, ಮತ್ತೊಮ್ಮೆ ಹೀಗಾಗದಂತೆ ಏನು ಮಾಡಬಹುದು ಇತ್ಯಾದಿ ಸೋದಾಹರಣ ನಿರೂಪಣೆ.
ಜಾಗತಿಕ ತಾಪಮಾನ ಏರಿಕೆ, ಧ್ರುವಪ್ರದೇಶಗಳಲ್ಲಿ ಹಿಮದ ಪದರಗಳು ಕರಗಿ ಸಮುದ್ರಗಳಲ್ಲಿ ನೀರಿನ ಮಟ್ಟದ ಹೆಚ್ಚಳ, ಆಧುನಿಕ
ತಂತ್ರಜ್ಞಾನದ ನೆಪದಲ್ಲಿ ಪರಿಸರಪ್ರದೂಷಣ… ಮನಮುಟ್ಟುವ ವಿವರಣೆ ಚಿಂತನಯೋಗ್ಯವಾಗಿಯೇ ಇತ್ತು. ಆದರೆ ಮುಖಪುಟ ದಲ್ಲಿ ಪ್ರಾತಿನಿಧಿಕವಾಗಿ ದಾಸವಾಳದ ಚಿತ್ರವಿತ್ತೇ ಹೊರತು ಇಡೀ ಲೇಖನದಲ್ಲಿ Hibiscus ಎಂಬ ಪದ ಒಮ್ಮೆಯೂ ಕಾಣಿಸಿ ಕೊಳ್ಳಲಿಲ್ಲ!
ಅಷ್ಟರ ಮಟ್ಟಿಗೆ ನನಗೆ ನಿರಾಸೆಯಾದರೂ ಮುಖಪುಟದಲ್ಲಿ ದಾಸವಾಳ ರಾರಾಜಿಸಿದೆಯೆಂಬ ಹಿಗ್ಗು ಅದನ್ನೆಲ್ಲ ಮರೆಸಿತು.
ಏಕೆ ನನಗೆ ದಾಸವಾಳವೆಂದರೆ ಅಷ್ಟು ಹಿಗ್ಗು? ಕಾರಣವಿದೆ. ಆ ಪ್ರಖ್ಯಾತ ಗಜಲ್‌ನಲ್ಲಿ ಜಗಜಿತ್ ಸಿಂಗ್‌ಗೆ ಹೇಗೆ ‘ಕಾಗಜ್ ಕೀ ಕಶ್ತೀ, ಬಾರಿಶ್ ಕಾ ಪಾನೀ, ಬುಲ್‌ಬುಲ್ ಚಿಡಿಯಾ, ತಿತ್ಲೀ ಗುಡಿಯಾ…’ಗಳೆಲ್ಲ ಬಾಲ್ಯದ ನೆನಪನ್ನು ತರುತ್ತವೆಯೋ, ನನಗೆ ದಾಸವಾಳ ಕೂಡ ಹಾಗೆಯೇ ನೆನಪುಗಳ ಓಣಿಯಲ್ಲಿ ಮೆರವಣಿಗೆ ಹೊರಡಿಸುತ್ತದೆ.
ನಾನು ಹುಟ್ಟಿ ಬೆಳೆದ ಹಳ್ಳಿಯಲ್ಲಿ ಎಲ್ಲರ ಮನೆಗಳಲ್ಲೂ ಇದ್ದಂತೆ ನಮ್ಮನೆಯ ಪ್ರಾಕಾರದಲ್ಲೂ ಹತ್ತಾರು ವಿಧದ ಹೂಗಿಡಗಳು. ದಿನಾ ಬೆಳಗ್ಗೆ ದೇವರ ಪೂಜೆಗೆ ಹೂ ಕೊಯ್ಯುವ ಕೆಲಸ. ಚಿಕ್ಕಂದಿನಲ್ಲಿ ಕೆಲ ವರ್ಷ ಆ ಡ್ಯೂಟಿಯನ್ನು ನಾನು ಮಾಡಿದ್ದೇನೆ. ಭಾರೀ ಧರ್ಮಭೀರುವಾಗಿ ಭಕ್ತಿಪರವಶನಾಗಿ ಮಾಡುತ್ತಿದ್ದೆನೆಂದು ಖಂಡಿತ ಹೇಳಲಾರೆ. ದಿನಾ ನಾನೇ ಏಕೆ ಮಾಡಬೇಕು ಎಂದು ಗೊಣಗಿದ್ದೂ ಇರಬಹುದು. ಅದರಲ್ಲೂ ಮಳೆಗಾಲದಲ್ಲಿ ಛತ್ರಿ ಮತ್ತು ಬುಟ್ಟಿ ಎರಡನ್ನೂ ಹಿಡಿದುಕೊಂಡು, ಒದ್ದೆ ಗಿಡಗಳಿಂದ ಹೂ ಕೊಯ್ಯುವುದು ಬಲುಸಂತಸದ ಕೆಲಸವೇನಲ್ಲ.
ಆದರೆ ದಾಸವಾಳ ಹೂಗಳು ನನ್ನ ನೆರವಿಗೆ ಬರುತ್ತಿದ್ದವು. ಏಕೆಂದರೆ, ತುಂಬೆ ಪುನ್ನಾಗ ಜಾಜಿ ಗೋರಟಿಗೆ ಮುಂತಾದ ಚಿಕ್ಕಪುಟ್ಟ ಸುಕೋಮಲ ಹೂವುಗಳಿಗಿಂತ ‘ಬುಟ್ಟಿ ತುಂಬ ಹೂ ಕೊಯ್ದುತಂದೆ!’ ಎಂದು ಪೌರುಷ ತೋರಿಸುವಂತಾಗುತ್ತಿದ್ದದ್ದು ದೊಡ್ಡ ಸೈಜಿನ ದಷ್ಟಪುಷ್ಟ ದಾಸವಾಳಗಳಿಂದಲೇ. ಬಿಳಿ, ಹಳದಿ, ಕೆಂಪು, ಸಿಂಗಲ್ ಲೇಯರ್ ಪಕಳೆಗಳವು, ಮಲ್ಟಿಲೇಯರ್ ಪಕಳೆಗಳವು… ಹೀಗೆ ಥರಾವರಿ. ಅಂತೆಯೇ ಕತ್ತರಿದಾಸವಾಳ, ಜಿರಳೆದಾಸವಾಳ, ಅಜಸ್ರ ಮುಂತಾಗಿ ಇನ್ನೊಂದಿಷ್ಟು ವೆರೈಟಿ. ಪೂಜೆಗೆ ಹೂ ಕೊಯ್ಯುವುದು ಮಾತ್ರವಲ್ಲ, ಕೆಲವೊಮ್ಮೆ ತಂದೆಯವರಿಗೇನಾದರೂ ಕೆಲಸಗಳಿದ್ದರೆ, ಪರವೂರಿಗೆ ಹೋಗುವು ದಿದ್ದರೆ ಆಗ ದೇವರಪೂಜೆಯ ಜವಾಬ್ದಾರಿಯೂ ನನಗೇ. ಸಂತೋಷ ದಿಂದಲೇ ಮಾಡುತ್ತಿದ್ದೆ, ಮುಖ್ಯವಾಗಿ ದಾಸವಾಳಗಳನ್ನು ಸಮಮಿತಿಯಲ್ಲಿ ಆಕಡೆ ಈಕಡೆ ಸಿಕ್ಕಿಸುತ್ತ ದೇವರ ಮಂಟಪವನ್ನು ಅಲಂಕರಿಸುವುದೆಂದರೆ ಎಲ್ಲಿಲ್ಲದ ಖುಷಿ.
ಪೂಜೆಯ ಮಂತ್ರಗಳೆಲ್ಲ ಬರುತ್ತಿದ್ದವೆಂದೇನಿಲ್ಲ, ಗಂಟೆ-ಜಾಗಟೆ ಶಬ್ದಗಳೇ ದೊಡ್ಡದಾಗಿ ಹೆಚ್ಚುಹೊತ್ತು ಕೇಳಿಸುತ್ತಿದ್ದದ್ದೂ ಹೌದು. ಅಲಂಕಾರ ಮಾತ್ರ ಟಾಪ್ ಕ್ಲಾಸ್. ಮನೆಗೆ ಅತಿಥಿಗಳಾರಾದರೂ ಬಂದಿದ್ದಾಗ ಅವರು ಅದನ್ನು ನೋಡಿ ಮನಸಾರೆ ಕೊಂಡಾಡಿದ್ದೂ ಇದೆ. ಅದು ದಾಸವಾಳಗಳಿಂದಾಗಿಯೇ ಸಾಧ್ಯವಾಯ್ತು ಎಂದು ಈಗಲೂ ನಾನು ನಂಬುತ್ತೇನೆ. ಅದಕ್ಕೋ ಸ್ಕರವೇ ದಾಸವಾಳವೆಂದರೆ ನನಗೆ ‘ಬಚ್‌ಪನ್ ಕೀ ಮಧುರ್ ಯಾದೇಂ’.
ಇಲ್ಲಿ ಸಂದರ್ಭೋಚಿತವಾಗಿ ಇನ್ನೊಂದು ಉಲ್ಲೇಖವನ್ನು ತರುತ್ತೇನೆ. ಕವಿ, ಲೇಖಕ ಎಚ್.ಎಸ್.ವೆಂಕಟೇಶ ಮೂರ್ತಿಯವರು ಅಂಕಣದಂತೆ ಬರೆಯುತ್ತಿದ್ದ ‘ಅನಾತ್ಮಕಥನ’ ದಲ್ಲಿ ಒಂದು ಕಂತಿನಲ್ಲಿ ಹೀಗೆ ಮನೆಯಲ್ಲಿ ದೇವರ ಮಂಟಪ, ಪೂಜೆ, ಪುಟ್ಟಪುಟ್ಟ ವಿಗ್ರಹಗಳು, ಪೀಠ – ಪ್ರಭಾವಳಿಗಳ ಮೆರುಗು, ಹೂಗಳ ಅಲಂಕಾರ ಇತ್ಯಾದಿಯ ಬಗ್ಗೆ ಯಥಾಪ್ರಕಾರ ಅವರ ಆಪ್ಯಾಯಮಾನ ಶೈಲಿಯಲ್ಲಿ ಬರೆದಿದ್ದರು. ಅದರಲ್ಲಿ, ‘ಪೂಜೆಗೆ ಆಸ್ತಿಕತೆಯ ಅಗತ್ಯವೇ ಇಲ್ಲ ಎಂದು ನನಗೆ ಅನೇಕ ಬಾರಿ ಅನಿಸಿದೆ. ವಾಸ್ತವವಾಗಿ ಅದೊಂದು ಸೌಂದರ್ಯಾವರ್ತದ ಪ್ರಜ್ಞಾಪೂರ್ವಕ ವಿನ್ಯಾಸ.
ನೀಲಾಂಜನದ ನೆರಳು ಬೆಳಕಿನಾಟದಲ್ಲಿ ನಡೆಯುವ ಕಲಾಚಮತ್ಕಾರ. ದಾಸವಾಳ ಎಲ್ಲಿಡಬೇಕು, ಸೇವಂತಿಗೆ ಎಲ್ಲಿ ಇಡಬೇಕು, ಮಲ್ಲಿಗೆಯ ಜಾಗ ಯಾವುದು, ಕರ್ಣಕುಂಡಲ ಎಲ್ಲಿ ತೂಗಬಿಡಬೇಕು, ತುಳಸಿಯ ದಂಡೆಗೆ ಜಾಗ ಯಾವುದು ಇದೆಲ್ಲಾ ಬರೀ ಭಕ್ತಿಯಿಂದ ನಿರ್ಧಾರಿತಗೊಳ್ಳುವ ಸಂಗತಿಯಲ್ಲ. ಕಲಾನಿರ್ಮಾಣದ ಏಕಾಗ್ರತೆಯೇ ಇಲ್ಲಿ ನಿಜಕ್ಕೂ ಕ್ರಿಯಾಶೀಲವಾಗು ವಂಥದ್ದು…’ ವಾಹ್! ಅಲಂಕಾರದ ಬಗ್ಗೆಯೇ ಅಲಂಕಾರದ ಮಾತುಗಳು! ಆ ವಾಕ್ಯಗಳನ್ನು ಓದುವಾಗಂತೂ ನಾನು ಅದೆಷ್ಟು ರಿಲೇಟ್ ಮಾಡಿಕೊಂಡಿದ್ದೆನೆಂದರೆ ಅವುಗಳನ್ನು ನನ್ನ ಜರ್ನಲ್‌ನಲ್ಲಿ ದಾಖಲಿಸಿಟ್ಟುಕೊಂಡಿದ್ದೆ.
ಅಲ್ಲೂ ಆದದ್ದು ದಾಸವಾಳದ ‘ಹೂವೊಂದು ಬಳಿಬಂದು ತಾಕಿತು ಎನ್ನೆದೆಯ’ ಪ್ರಕ್ರಿಯೆಯೇ. ಅದಾದ ಬಳಿಕ ದಾಸವಾಳ ನನ್ನನ್ನು ಅಷ್ಟು ತೀವ್ರವಾಗಿ ತಟ್ಟಿದ್ದು ಮೊನ್ನೆ ವಾಷಿಂಗ್ಟನ್ ಪೋಸ್ಟ್ ಮ್ಯಾಗಜಿನ್ ಮುಖಪುಟ ನೋಡಿದಾಗಲೇ. ಅದರ ಪರಿಣಾಮವೇ ಈ ಲಹರಿ. ಎಚ್ಚೆಸ್ವಿಯವರಷ್ಟು ಸತ್ತ್ವಯುತವಾಗಿ ಪ್ರಬುದ್ಧವಾಗಿ ಬರೆಯಲಾರೆನೆಂದು ಗೊತ್ತು, ಆದರೂ ಒಂದು ಪ್ರಯತ್ನ. ದಾಸವಾಳವನ್ನು ಶ್ರೇಷ್ಠ ಹೂವು ಎಂದು ನಾನು ಪರಿಗಣಿಸುವುದಕ್ಕೆ ಇನ್ನೂ ಕೆಲವು ಕಾರಣಗಳಿವೆ.
ಅದು ಬರೀ ಆಲಂಕಾರಿಕ ವಸ್ತುವಲ್ಲ. ವಿಧವಿಧ ವಿನ್ಯಾಸ, ಆಕಾರ, ಗಾತ್ರ ಮತ್ತು ಬಣ್ಣಗಳ ಆಕರ್ಷಣೆ ಮಾತ್ರ ಅದರ ಹಿರಿಮೆ ಯಲ್ಲ. ಬಹುಶಃ ನನಗಿಂತ ಚೆನ್ನಾಗಿ ನಿಮಗೇ ಗೊತ್ತಿರುತ್ತದೆ ದಾಸವಾಳ ಹೂವಿನ ಬಹೂಪಯೋಗಿ ಗುಣ. ಹೂವಷ್ಟೇ ಅಲ್ಲ, ಗಿಡದ ಎಲೆ, ತೊಗಟೆ, ಬೇರು ಎಲ್ಲವೂ ಉಪಯೋಗಿ. ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯ ಮುಂತಾದ ಕಾಯಿಲೆಗಳಿಗೆ ಔಷಧವಾಗಿ, ಕೂದಲ ಆರೈಕೆಗೆ ಕಂಡೀಷನರ್ ಆಗಿ, ತಂಬುಳಿ ಇಡ್ಲಿ ದೋಸೆಯೇ ಮುಂತಾಗಿ ಅಡುಗೆಪದಾರ್ಥ ವಾಗಿ, ನೈಸರ್ಗಿಕ ಬಣ್ಣಗಳ ತಯಾರಿಯಲ್ಲಿ, ಏನೂ ಇಲ್ಲವೆಂದರೆ ಪಕಳೆಗಳಲ್ಲಿ ಗಾಳಿಯೂದಿ ಗುಳ್ಳೆ ತರಿಸುವ ಮಕ್ಕಳಾಟದಲ್ಲಿ… ಒಂದೇ, ಎರಡೇ!
ನನಗನಿಸುತ್ತದೆ ಪ್ರಾಣಿಪ್ರಪಂಚದಲ್ಲಿ ಗೋವು ‘ನೀನಾರಿಗಾದೆಯೋ ಎಲೈ ಮಾನವಾ…’ ಎನ್ನಬಹುದಾದರೆ ಪುಷ್ಪಪ್ರಪಂಚದಲ್ಲಿ ಅಂಥದೊಂದು ಅರ್ಹತೆ ಯೋಗ್ಯತೆ ಇರುವುದು ದಾಸವಾಳಕ್ಕೇ. ಅಷ್ಟಾದರೂ ಮಲ್ಲಿಗೆಗೆ ನಾವು ಕೊಡುವ ಮಹತ್ತ್ವ, ಗುಲಾಬಿಗೆ ನಾವು ಕೊಡುವ ಗೌರವ, ಸಂಪಿಗೆಗೆ ನಾವು ಕೊಡುವ ಸಮ್ಮಾನ… ಇವ್ಯಾವುವೂ ದಾಸವಾಳಕ್ಕಿಲ್ಲ. ಎಷ್ಟೇ ಹೂವುಗಳ-ಹುಚ್ಚು ಉಳ್ಳವರಾದರೂ ಹೆಂಗಳೆಯರು ದಾಸವಾಳ ಮುಡಿದುಕೊಳ್ಳುವುದಿಲ್ಲ.
ದುಂಬಿಗಳೂ ದಾಸವಾಳವನ್ನು ಅಷ್ಟೇನೂ ಬಯಸುವುದಿಲ್ಲ. ಕರ್ಣಾಟಭಾರತ ಕಥಾಮಂಜರಿಯ ಸಭಾಪರ್ವದ ಒಂದು
ಪದ್ಯದಲ್ಲಿ ಕುಮಾರವ್ಯಾಸ ‘ಜಪಾಕುಸುಮಾವಳಿಗಳಲಿ ಮಧುಕರನ ಮೋಹರಕೆ ಮನ್ನಣೆಯೆ?’ ಎಂದಿದ್ದಾನೆ. ಅದು ಕೃಷ್ಣನನ್ನು ಶಿಶುಪಾಲನು ಹೀಯಾಳಿಸುವ ಸನ್ನಿವೇಶ. ‘ಬೇವಿನ ವನವು ಕಳಹಂಸಗಳಿಗೆ ಒಪ್ಪಿಗೆಯಾದೀತೇ? ದುಂಬಿಗಳು ದಾಸವಾಳದ ಹೂವನ್ನು ಒಪ್ಪುವವೇ? ಈ ವಿಕಾರ ಯಜ್ಞದಲ್ಲಿ ರಾಜರಿಗೆ ಮನ್ನಣೆ ಸಿಕ್ಕೀತೇ? ನೀನು ಗೋಪೀಜಾರನಾದುದರಿಂದ ಇಲ್ಲಿ ಶಿಷ್ಟನಾದೆ’ ಎಂದು ಶಿಶುಪಾಲನಿಂದ ಕೃಷ್ಣನಿಂದನೆ.
ಕುಮಾರವ್ಯಾಸನ ದೃಷ್ಟಿಯಲ್ಲಿ ದಾಸವಾಳ ಫಡಪೋಶಿ. ಛಂದಸ್ಸಿಗೋಸ್ಕರ ಇರಬಹುದು ದಾಸವಾಳ ಎನ್ನದೆ ‘ಜಪಾಕುಸುಮ’ ಎಂಬ ಸಂಸ್ಕೃತ ಪದವನ್ನು ಕುಮಾರವ್ಯಾಸ ಬಳಸಿದ್ದಾನೆ. ಸರ್ವಜ್ಞ ಕವಿಯಾದರೋ ಅಚ್ಚಕನ್ನಡದಲ್ಲೇ ‘ಕೆಂಪಿನಾ ದಾಸಾಳ| ಕೆಂಪುಂಟು ಕಂಪಿಲ್ಲ| ಕೆಂಪಿನವರಲ್ಲಿ ಗುಣವಿಲ್ಲ| ಕಳ್ಳ ತಾ ಕೆಂಪಿರ್ದಡೇನು ಸರ್ವಜ್ಞ||’ ಎಂದು ಬರೆದು ದಾಸವಾಳವನ್ನು ಪರಿಮಳವಿಲ್ಲದ ಪುಷ್ಪ ಎಂದು ಜರಿದಿದ್ದಾನೆ.
ಆದಿಕವಿ ಪಂಪನದು ಇನ್ನೂ ಘೋರ ಕೃತ್ಯ. ವಿಕ್ರಮಾರ್ಜುನವಿಜಯ ಕೃತಿಯಲ್ಲಿ ಒಂದುಕಡೆ ‘ದಾಸವಣ ದಂಡೆಯಂ ತೋರದಿಂಡೆಯಾಡಿದಂತೆ ದೆಸೆ ದೆಸೆಗೆ ಕೆದರಿದ ಕಂಡದಿಂಡೆಗಳುಂ…’ (ದಾಸವಾಳದ ಹೂವಿನ ಹಾರವನ್ನು ದೊಡ್ಡದಾಗಿ ರಾಶಿಮಾಡಿದಂತೆ ದಿಕ್ಕುದಿಕ್ಕಿಗೆ ಚೆದುರಿದ ಮಾಂಸದ ಉಂಡೆಗಳೂ, ಕಿತ್ತೀಳೆಯ ಮತ್ತು ಬಣ್ಣಬಣ್ಣದ ಬಟ್ಟೆಯ ಬಾವುಟಗಳಂತೆ ಗಗನಕ್ಕೆ ಅತ್ತಿತ್ತ ಚಲಿಸುವ ಮತ್ತು ಚಿಮ್ಮಿ ಹಾರುವ ರಕ್ತದ ಸುಂಟರಗಾಳಿಗಳೂ ಅತಿ ಭಯಂಕರಾಕಾರದವು…) ಎಂದು ರಣರಂಗದ ಬಣ್ಣನೆ. ರಕ್ತಸಿಕ್ತ ಹೆಣಗಳ ಚಿತ್ರಣಕ್ಕೆ ದಾಸವಾಳದ ಬಳಕೆ. ಅಕಟಕಟಾ!
ಅಂದಹಾಗೆ ಈ ಎಲ್ಲ ಸಾಹಿತ್ಯ ಕೃತಿಗಳನ್ನು ಈ ಆಸಾಮಿ ಓದಿಕೊಂಡಿದ್ದಾನೆಯೇ ಎಂದು ನೀವು ನನ್ನ ಬಗ್ಗೆ ಹುಬ್ಬೇರಿಸಿ ವೃಥಾ ನಿಮ್ಮ ಹುಬ್ಬುಗಳಿಗೆ ಶ್ರಮ ಕೊಡಬೇಡಿ. ದೇವರಾಣೆಗೂ ನಾನು ಓದಿಲ್ಲ. ಇಂಥ ರಸಘಟ್ಟಿಗಳನ್ನು ಮಾತ್ರ ಎಲ್ಲೆಲ್ಲಿಂದಲೋ
ಸಂಗ್ರಹಿಸಿಟ್ಟುಕೊಳ್ಳುತ್ತೇನೆ. ಸೂಕ್ತ ಸಂದರ್ಭದಲ್ಲಿ ಬಳಸುತ್ತೇನೆ ಅಷ್ಟೇ. ಉದಾಹರಣೆಗೆ, ಪಂಪನ ಆ ವಾಕ್ಯ ನನಗೆ ಖಂಡಿತ
ಗೊತ್ತಿರಲಿಲ್ಲ. ಆದರೆ, ‘ಇಗೋ ಕನ್ನಡ’ದಲ್ಲಿ ಜಿ. ವೆಂಕಟಸುಬ್ಬಯ್ಯನವರು ಒಮ್ಮೆ ದಾಸವಾಳದ ಬಗ್ಗೆ ಒಂದು ಟಿಪ್ಪಣಿ ಬರೆದಿದ್ದ ರೆಂದು ನೆನಪಿತ್ತು. ‘ಇಗೋ ಕನ್ನಡ’ ಸಂಪುಟಗಳಾದರೂ ಇಲ್ಲಿ ನನ್ನ ಬಳಿ ಇವೆಯೇ? ಅದೂ ಇಲ್ಲ.
ಮೊನ್ನೆ ಏನಾಯ್ತೆಂದರೆ ವೆಂಕಟಸುಬ್ಬಯ್ಯನವರ ನಿಧನದ ವೇಳೆ ಅವರನ್ನು ಭಾವಪೂರ್ಣವಾಗಿ ಸ್ಮರಿಸುತ್ತ ತಿಳಿರುತೋರಣದ
ಖಾಯಂ ಓದುಗಾರ್ತಿ ಶಿರಸಿಯ ವೀಣಾ ಹೆಗಡೆಯವರೊಡನೆ ಐದು ನಿಮಿಷಗಳ ವಾಟ್ಸಪ್ ವಿಚಾರವಿನಿಮಯದಲ್ಲಿ ‘ಇಗೋ
ಕನ್ನಡ’ದ ಪ್ರಸ್ತಾವವೂ ಬಂತು. ಅದರ ಮೂರೂ ಸಂಪುಟಗಳು ತನ್ನ ಬಳಿ ಇವೆ ಎಂದರು. ಈ ವಾರ ನಾನು ಅಂಕಣದಲ್ಲಿ
ದಾಸವಾಳದ ಬಗ್ಗೆ ಬರೆಯುತ್ತಿದ್ದೇನೆ ಎಂದು ಹೇಳದೆ, ‘ಇಗೋ ಕನ್ನಡ’ದಲ್ಲಿ ವೆಂಕಟಸುಬ್ಬಯ್ಯನವರು ದಾಸವಾಳದ ಬಗ್ಗೆ
ಬರೆದಿದ್ದನ್ನು ಹುಡುಕಿ ಆ ಪುಟದ್ದಷ್ಟೇ ಡಿಜಿಟಲ್ ಪಟ ತೆಗೆದು ಕಳಿಸುವಿರಾ ಎಂದು ವೀಣಾರನ್ನು ಕೇಳಿದೆ.
ಒಂದು ತಾಸಿನೊಳಗೆ ಅದು ನನ್ನ ವಾಟ್ಸಪ್‌ಗೆ ರವಾನೆಯಾಗಿ ಬಂತು! ದಾಶಾಳ, ದಾಶಿವಾಳ, ದಾಸಳ, ದಾಸಾಣ, ದಾಸವಾಣ, ದಾಸಿವಣ ಮುಂತಾದ ಹೆಸರುಗಳೊಂದಿಗೆ ಪಂಪನ ‘ದಾಸವಣ’ ಪದಪ್ರಯೋಗವನ್ನೂ ವೆಂಕಟಸುಬ್ಬಯ್ಯನವರು ಅದರಲ್ಲಿ
ಉಲ್ಲೇಖಿಸಿದ್ದಾರೆ. ಆಯ್ತಲ್ಲ ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು, ದಾಸವಾಳಪ್ರಬಂಧವೆಂಬ ಉಪ್ಪಿನಕಾಯಿ!
ಮತ್ತೆ, ದಾಸವಾಳಕ್ಕಾಗಿರುವ ಅನ್ಯಾಯದ ವಿಚಾರಕ್ಕೆ ಬರೋಣ. ದೇವರಪೂಜೆ ಮಾಡುವಾಗಿನ ಮಂತ್ರಗಳಲ್ಲಿ ಪುಷ್ಪ-ಪತ್ರ ಪಟ್ಟಿಯಿರುವ ಒಂದು ಮಂತ್ರ ಬರುತ್ತದೆ, ‘ಸೇವಂತಿಕಾ ಬಕುಲ ಚಂಪಕ ಪಾಟಲಾಬ್ಜೈಃ| ಪುನ್ನಾಗ ಜಾತಿ ಕರವೀರ ರಸಾಲ ಪುಷ್ಪೈಃ| ಬಿಲ್ವಪ್ರವಾಲ ತುಲಸೀದಲ ಮಾಲತೀಭಿಃ| ತ್ವಾಂ ಪೂಜಯಾಮಿ ಜಗದೀಶ್ವರ ಮೇ ಪ್ರಸೀದ||’ ಎಂದು. ಇದು, ಯಾವ್ಯಾವ ಹೂವು ಮತ್ತು ಪತ್ರೆಗಳನ್ನು ನಿನ್ನ ಅರ್ಚನೆಗೋಸ್ಕರ ತಂದಿದ್ದೇನೆ ಎಂದು ದೇವರಿಗೆ ತಿಳಿಸುವ ಮಂತ್ರ.
ದೇವರು ತನಗೆ ಇಂಥಿಂಥ ಹೂವುಗಳದೇ ಅಲಂಕಾರ ಬೇಕು ಎಂದು ಕೇಳುವುದಿಲ್ಲ. ಅದೇನಿದ್ದರೂ ಮನುಷ್ಯನ ಕಲ್ಪನೆ ಅಷ್ಟೇ. ಆದರೂ, ‘ತುಳಸಿ ಇಲ್ಲದ ಪೂಜೆ ಹರಿ ಒಲ್ಲನು’, ‘ಶಿವನಿಗೆ ತುಂಬೆ ಹೂ ಅಂದ್ರೆ ತುಂಬ ಇಷ್ಟ, ತುಳಸಿ ಕೂಡದು’, ‘ಕೇದಗೆ ಹೂವಿಗೆ ತ್ರಿಮೂರ್ತಿಗಳ ಶಾಪ ಇದೆ, ಅದನ್ನು ಪೂಜೆಯಲ್ಲಿ ಬಳಸುವಂತಿಲ್ಲ’… ಅಂತೆಲ್ಲ ಸ್ವಾರಸ್ಯಕರ ನಂಬಿಕೆಗಳು ದೇವರ ಬಗೆಗಿನ ನಮ್ಮ ಕಲ್ಪನೆಯನ್ನು, ಭಕ್ತಿಶ್ರದ್ಧೆಗಳನ್ನು ಚಂದಗೊಳ್ಳುವಂತೆ ಮಾಡುತ್ತವೆ.
ಇಂಥಿಂಥ ಹೂವುಗಳು ದೇವರಿಗೆ ಇಷ್ಟವಾಗಬಹುದು ಎಂದುಕೊಂಡು ‘ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾ ನಿಂದೆ ತೆರೆಯೋ ಬಾಗಿಲನು ರಾಮ…’ ಎನ್ನುತ್ತ ಭಕ್ತಿಪೂರ್ವಕ ಪುಷ್ಪಾಂಜಲಿ ಸಲ್ಲಿಸುವುದರಲ್ಲೂ ಒಂದು ಪುಳಕ ಇದೆ, ಪುಣ್ಯ ಇದೆ. ಆದರೆ ವಿಷಾದಕರ ವಿಷಯವೇನು ಗೊತ್ತೇ? ಮೇಲಿನ ಮಂತ್ರದಲ್ಲಿ ಸೇವಂತಿಗೆ, ರೆಂಜೆ ಹೂ, ಸಂಪಿಗೆ, ತಾಮ್ರಪುಷ್ಪ, ಪುನ್ನಾಗ, ಜಾಜಿ, ಕರವೀರ, ಮಾವಿನ ಹೂ, ಬಿಲ್ವಪತ್ರೆ, ರಕ್ತಚಂದನದ ಪತ್ರೆ, ತುಲಸೀದಲ, ಮಾಲತಿ ಹೂವು- ಇವಿಷ್ಟು ನಾನಾ ವಿಧ ಪರಿಮಳ ಪುಷ್ಪ – ಪತ್ರೆಗಳು ಇವೆಯೇ ಹೊರತು ದಾಸವಾಳ ‘ಕಾನ್ಸ್ ಪಿಕ್ಯುವಸ್ ಬೈ ಆಬ್ಸೆನ್ಸ್’! ಪಾಪ, ಏನು ಪಾಪ ಮಾಡಿದೆ ಅದು? ಆದರೆ ಎಲೈ ದಾಸವಾಳವೇ, ಚಿಂತಿಸಬೇಡ.
ಯಾರು ಏನೇ ಹೇಳಲಿ ಬರೆಯಲಿ ಜರೆಯಲಿ. ವ್ಯಾಸೋಚ್ಛಿಷ್ಟಂ ಜಗತ್ಸರ್ವಮ್ ಎಂಬ ಮಾತನ್ನು ಕೇಳಿದ್ದಿಯಷ್ಟೆ? ಅಂಥ ವೇದವ್ಯಾಸರು ನಿನಗೆ ಆಚಂದ್ರಾರ್ಕ ಅಗ್ರಪೀಠ ಕೊಟ್ಟಿದ್ದಾರೆ. ನವಗ್ರಹ ಸ್ತೋತ್ರವನ್ನು ಅವರು ಆರಂಭಿಸಿರುವುದೇ ನಿನ್ನ ಉಲ್ಲೇಖ ದಿಂದ. ಅದೂ ಅಂಥಿಂಥ ಉಲ್ಲೇಖವಲ್ಲ, ಜಗವನೆಲ್ಲ ಬೆಳಗುವ ಸೂರ್ಯನು ನಿನ್ನಂತೆ ಕಾಂತಿಯುಳ್ಳವನು ಎಂಬ ಹೋಲಿಕೆ!
‘ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್|
ತಮೋoರಿಂ ಸರ್ವಪಾಪಘ್ನಂ ಪ್ರಣತೋoಸ್ಮಿ ದಿವಾಕರಮ್||’
ಎಂಬ ಶ್ಲೋಕವನ್ನು ಸೂಕ್ಷ್ಮವಾಗಿ ಗಮನಿಸು. ನಿನ್ನನ್ನು ಸೂರ್ಯನಿಗೆ ಹೋಲಿಸಿದ್ದಲ್ಲ, ಸೂರ್ಯನನ್ನು ನಿನಗೆ ಹೋಲಿಸಿದ್ದು! ಯಾರಿಗುಂಟು ಅಂಥ ಭಾಗ್ಯ?