Thursday, 12th December 2024

ಸುದ್ದಿಮನೆಯಲ್ಲಿ ಶಾಮರಾಯರು ಹೇಳದೇ ಕಲಿಸಿದ ಪಾಠಗಳು

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

ಆ ದಿನ ಶಾಮರಾಯರು ಬುಸುಗುಡುತ್ತಲೇ ‘ಸಂಯುಕ್ತ ಕರ್ನಾಟಕ’ದ ಸುದ್ದಿಮನೆಯೊಳಗೆ ಧಾವಿಸಿದರು. ಕೋಪ ನೆತ್ತಿಗೇರಿದಾಗ ಅವರಿಗೆ ಮಾತಾಡಲು ಆಗುತ್ತಿರಲಿಲ್ಲ ಅಥವಾ ಈ ವರ್ತನೆಯನ್ನು ಅವರು ಒಂದು ಸುಂದರ ಅಭಿನಯವಾಗಿ ಮೈಗೂಡಿಸಿ ಕೊಂಡಿದ್ದರಾ ಗೊತ್ತಿಲ್ಲ.

ಬಂದವರೇ ಪತ್ರಿಕೆಯನ್ನು ಎತ್ತಿ, ಅಂದಿನ ಸಂಪಾದಕೀಯ ವಿಭಾಗದ ಮುಖ್ಯಸ್ಥರ ಮುಖಕ್ಕೆ ಎಸೆದು ಹೊರಟು ಹೋದರು.
ಅದಾಗಿ ಐದು ನಿಮಿಷಗಳ ನಂತರ ಮತ್ತೆ ಬರುವುದು ವಾಡಿಕೆ. ಐದು ನಿಮಿಷಗಳ ನಂತರ ಪುನಃ ರಾಯರು ಬಂದರು. ‘ಏನ್ರೀ… ಕುದುರೆಗಳನ್ನು ಇಟ್ಕೋ ಅಂದ್ರೆ ಕತ್ತೆಗಳನ್ನು ಇಟ್ಕೊಂಡಿದಿರಿ’ ಅಂತ ಅಬ್ಬರಿಸಿ, ಹೆಚ್ಚು ಮಾತಾಡಲಾಗದೇ ಹೊರಟು ಹೋದರು.

ಡೆಸ್ಕಿನಲ್ಲಿದ್ದ ನಮಗೆ ಡುಕಿ ಡುಕಿ. ಇಂದು ಏನು ಗ್ರಹಚಾರ ಕಾದಿದೆಯೋ ಎಂಬ ಭಯ. ಪತ್ರಿಕೆಯಲ್ಲಿ ಸಣ್ಣ ಪುಟ್ಟ ತಪ್ಪುಗಳಾ ದರೂ ರಾಯರು ಸಹಿಸುತ್ತಿರಲಿಲ್ಲ. ಟೆಲಿಪ್ರಿಂಟರಿನಲ್ಲಿ ಬಂದ ಕಾಪಿಯಲ್ಲಿದ್ದ ( ಭಾಷೆ ಕನ್ನಡ, ಆದರೆ ಲಿಪಿ ಇಂಗ್ಲಿಷ್) ‘ಹಳ್ಳಿಗಳ ಉದ್ಧಾರಕ್ಕೆ ಮುಖ್ಯಮಂತ್ರಿ ಕರೆ’ ಎಂಬ ಸುದ್ದಿಯನ್ನು, ‘ಹಲ್ಲಿಗಳ ಉದ್ಧಾರಕ್ಕೆ ಮುಖ್ಯಮಂತ್ರಿ ಕರೆ’ ಎಂದು ಉಪಸಂಪಾದಕ ರೊಬ್ಬರು ಬರೆದಾಗ ಅದು ಹಾಗೆ ಅಚ್ಚಾಗಿತ್ತು. ಅದನ್ನು ಸಹಿಸಿಕೊಳ್ಳದ ರಾಯರು, ಮರುದಿನ ಆ ಉಪ ಸಂಪಾದಕರಿಗೆ ಮನೆ ದಾರಿ ತೋರಿಸಿದ್ದರು!

ಪತ್ರಿಕೆಯಲ್ಲಿ ಏನೇ ತಪ್ಪು ಪ್ರಕಟವಾಗುವುದನ್ನು ಅವರು ಸಹಿಸುತ್ತಿರಲಿಲ್ಲ. ತಪ್ಪು ಮಾಡಿದರೆ ಔಟ್ ! ಆ ದಿನ ರಾಯರು ಮೂರನೇ ಸಲ ಡೆಸ್ಕ್ ಹತ್ತಿರ ಬಂದರು. ‘ಯಾರು ಹೀಗೆ ಬರೆದಿದ್ದು?’ ಎಂದು ಕಿರುಚಿದರು. ಎಲ್ಲರೂ ಥರಥರ ನಡುಗುತ್ತಿದ್ದರು. ಯಾರ ತಲೆ ಮೇಲೆ ಬಾಂಬ್ ಬೀಳುವುದೋ ಎಂಬ ಆತಂಕ. ಹೀಗ್ ಬರೆದಿದ್ದು ಯಾರು? ಅಭಿವ್ಯಕ್ತಿ ಅಂತ ಬರೆದಿದ್ದಾರಲ್ಲ…? ಯಾರು? ಎಂದು ಗದರಿದರು. ಇಡೀ ಸುದ್ದಿಮನೆಯಲ್ಲಿ ನಿಶ್ಯಬ್ದ.

ನನ್ನ ಬುಡಕ್ಕೆ ಬಂತಲ್ಲ ಎಂದು ನಾನು ಒಂದು ಸಲ ಕಂಪಿಸಿದೆ. ನನ್ನ ನೌಕರಿ ಹೋಯಿತು ಎಂದು ನಡುಗಲಾರಂಭಿಸಿದೆ. ರಾಯರು ಮತ್ತೊಮ್ಮೆ, ‘ಯಾರ್ರೀ ಹೀಗೆ ಅಭಿವ್ಯಕ್ತಿ ಬರೆದವರು?’ ಎಂದು ಕಿರುಚಿದರು. ನಾನು ಮೆಲ್ಲಗೆ ಎದ್ದು ನಿಂತೆ. ‘ಒಹೋ! ನೀನಾ ಹೀಗೆ ಬರೆದವನು?’ ಎಂದರು. ನಾನು ಹೌದು ಎಂಬಂತೆ ತಲೆ ಹಾಕಿದೆ. ರಾಯರು ನನ್ನನ್ನು ಅಪಾದಮಸ್ತಕ ನೋಡಿ, ತಮ್ಮ ಹತ್ತಿರ ಬರುವಂತೆ ಕಣ್ಣ ಹೇಳಿದರು. ನಾನು ಹತ್ತಿರ ಹೋದೆ.

‘ಅಲ್ಲಯ್ಯ, ನಿನಗೆ ಪತ್ರಿಕೋದ್ಯಮವನ್ನು ಹೇಳಿಕೊಟ್ಟವರಾರು? ಅಭಿವ್ಯಕ್ತಿ ಅನ್ನೋದು ಸಂಸ್ಕೃತ ಪದ. ಅದಕ್ಕೆ ಸಮನಾದ ಕನ್ನಡ ಪದಗಳಿರಲಿಲ್ಲವಾ? ಅದು ಬಿಟ್ಟು ಜನಸಾಮಾನ್ಯರಿಗೆ ಅರ್ಥವಾಗದ ಕಠಿಣ ಪದಗಳನ್ನೇಕೆ ಬಳಸಿದ್ದೀಯಾ? ನಾನು ದಿನಾ
‘ಸಂಯುಕ್ತ ಕರ್ನಾಟಕ’ ಪ್ರಕಟ ಮಾಡುವುದಲ್ಲದೇ, ಜತೆಯಲ್ಲಿ ಡಿಕ್ಷನರಿಯನ್ನೂ ಪ್ರಿಂಟ್ ಮಾಡಿಸಿ ಕೊಡಲಾ? ನಾವು ಬರೆದಿದ್ದು
ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ಹಳ್ಳಿಕಟ್ಟೆಯಲ್ಲಿ ಕುಳಿತವರೂ ನಾವು ಬರೆಯುವುದನ್ನು ಅರ್ಥ ಮಾಡಿಕೊಳ್ಳಬೇಕು.
ಅಭಿವ್ಯಕ್ತಿ ಎಂದು ಬರೆದರೆ ಹಲವರಿಗೆ ಗೊತ್ತಾಗಲಿಕ್ಕಿಲ್ಲ. ಇನ್ನೊಂದು ಸಲ ಈ ರೀತಿ ಬರೆಯಬೇಡ?’ ಎಂದು ಎಚ್ಚರಿಕೆ ನೀಡಿದರು.

‘ಅಯ್ಯೋ ಬಡ ಜೀವವೇ, ಬಚಾವಾದೆ ನೀನು’ ಎಂದು ಅಂದುಕೊಂಡೆ. ಅದಾದ ನಂತರ ನಾನು ಆ ಪದವನ್ನು ಬಳಸಿದ್ದು ತೀರಾ
ಕಡಿಮೆ. ಅದಕ್ಕೆ ಸಮಾನಾದ ಬೇರೆ ಪದ ಸರಿ ಹೊಂದುವುದಿಲ್ಲ ಎಂದಾಗ ಮಾತ್ರ ಬಳಸಿರಬಹುದು. (ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳುವಾಗ ರಾಯರಿಗೆ ತಪ್ಪು ದಂಡ ಇಟ್ಟು ಬಳಸಿರಬಹುದು) ಆದರೆ ಹಾಗೆ ಪ್ರತಿ ಸಲ ಬಳಸಿದಾಗಲೂ, ಬಳಸುವಾಗಲೂ, ಈಗಲೂ ರಾಯರೇ ಕಣ್ಣ ಮುಂದೆ ‘ಅಭಿವ್ಯಕ್ತ’ರಾಗುತ್ತಾರೆ !

ಈ ಘಟನೆ ನಡೆದಿದ್ದು ಮೂವತ್ತೆರಡು ವರ್ಷಗಳ ಹಿಂದೆ. ಆಗ ನಾನು ಬೆಂಗಳೂರು ಆವೃತ್ತಿಯ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ಯಲ್ಲಿ ಟ್ರೇನಿ ಪತ್ರಕರ್ತನಾಗಿ ಸೇರಿಕೊಂಡಿದ್ದೆ. ಅದೊಂದು ಪ್ರಸಂಗದ ಮೂಲಕ ರಾಯರು ಪತ್ರಿಕೋದ್ಯಮದ ದೊಡ್ಡ ಪಾಠ
ಹೇಳಿಕೊಟ್ಟಿದ್ದರು.

ಅದಾಗಿ ಆಗಿ ಕೆಲ ದಿನಗಳ ಬಳಿಕ, ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಒಂದು ಸಣ್ಣ ತಪ್ಪಾಗಿತ್ತು. ಆ ದಿನಗಳಲ್ಲಿ ‘ಕಸ್ತೂರಿ’ ಸಂಪಾದ ಕೀಯ ನಿರ್ವಹಣೆ ಹುಬ್ಬಳ್ಳಿ ಬದಲು, ಕೆಲ ಕಾಲ ಬೆಂಗಳೂರು ಕಚೇರಿಯಿಂದ ಆಗುತ್ತಿತ್ತು. ಚೀನಾ ಯುದ್ಧದ ಬಗ್ಗೆ ಖ್ಯಾತ
ಪತ್ರಕರ್ತ ಡಿ.ಆರ್.ಮಂಕೇಕರ್ ಬರೆದ ಕೃತಿಯನ್ನು ಅನುವಾದಿಸಿ, ಪುಸ್ತಕ ವಿಭಾಗದಲ್ಲಿ ಪ್ರಕಟಿಸುವಂತೆ, ಆ ಮಾಸಿಕವನ್ನು
ನೋಡಿಕೊಳ್ಳುತ್ತಿದ್ದ ನಿರ್ವಹಣಾ ಸಂಪಾದಕರಿಗೆ ಸೂಚಿಸಿದ್ದರು. ಅವರು ‘ಕಸ್ತೂರಿ’ಯನ್ನು ಬಹಳ ಸೊಗಸಾಗಿ ರೂಪಿಸುತ್ತಿದ್ದರು. ಆ ಬಗ್ಗೆ ರಾಯರಿಗೆ ಸಮಾಧಾನವಿತ್ತು. ಅಷ್ಟು ವರ್ಷಗಳ ಕಾಲ ಪಾವೆಂ ಆಚಾರ್ಯ, ಮಾಧವ ನಾ.ಮಹಿಷಿ ಮುಂತಾದ ಸಂಪಾದಕರು ನಿರ್ವಹಿಸುತ್ತಿದ್ದ ಆ ಪತ್ರಿಕೆಗೆ ಈಗಿನ ಸಂಪಾದಕರು ಒಳ್ಳೆಯ ನೇತೃತ್ವ ಕೊಟ್ಟಿದ್ದಾರೆಂದು ರಾಯರು ಹೇಳುತ್ತಿದ್ದರು.

ನಿತ್ಯ ತಮ್ಮ ಸುಪರ್ದಿಯಲ್ಲಿದ್ದರೆ, ‘ಕಸ್ತೂರಿ’ಯನ್ನು ಇನ್ನಷ್ಟು ಚೆಂದವಾಗಿ ತರಬಹುದು ಎಂದು ಆ ಪತ್ರಿಕೆಯ ಸಂಪಾದಕೀಯ
ಸಿಬ್ಬಂದಿಯನ್ನು ಬೆಂಗಳೂರಿಗೆ ವರ್ಗ ಮಾಡಿದ್ದರು. ಪಾವೆಂ ‘ಕಸ್ತೂರಿ’ಗೆ ಒಂದು ವಿಶಿಷ್ಟ ಸಂಪ್ರದಾಯ, ಬುನಾದಿ ಹಾಕಿಕೊಟ್ಟ ವರು. ಅವರು ಸಂಪಾದಕರಾಗಿದ್ದ ಸುಮಾರು ಹದಿನೆಂಟು ವರ್ಷಗಳ ಕಾಲ ಆ ಪತ್ರಿಕೆಯಲ್ಲಿ ಒಂದೇ ಒಂದು ಕಾಗುಣಿತ ದೋಷ ಇಣುಕದಂತೆ, ನಿಷ್ಠೆಯಿಂದ ಚೆಂದವಾಗಿ ರೂಪಿಸಿದ್ದರು.

‘ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ’ ಎನ್ನುವಂತೆ ಈ ಸಂಪ್ರದಾಯ ವನ್ನು ಅವರ ನಂತರ ಸಂಪಾದಕರಾಗಿ ಬಂದವರೆಲ್ಲ ಅನುಸರಿಸಿಕೊಂಡು ಬಂದರು. ಈ ಸಂಚಿಕೆಯಲ್ಲಿ ‘ಕಸ್ತೂರಿ’ಯಲ್ಲಿ ತಪ್ಪು ಮಾಹಿತಿ ಪ್ರಕಟವಾದರೆ, ಮುಂದಿನ ಸಂಚಿಕೆಯಲ್ಲಿ ಪಾವೆಂ ‘ತಿದ್ದುಪಡಿ’ ಪ್ರಕಟಿಸುತ್ತಿದ್ದರು. ಆದರೆ ಕಾಗುಣಿತ ದೋಷವನ್ನು ಮಾತ್ರ ಕೇಳಲೇಬೇಡಿ. ಅಷ್ಟು ಕರಾರುವಾಕ್ಕಾಗಿ ಪತ್ರಿಕೆ ಯನ್ನು ರೂಪಿಸುತ್ತಿದ್ದರು.

ಸರಿ, ಆ ದಿನ ರಾಯರು, ಆಗ ತಾನೇ ಪ್ರಕಟವಾದ ‘ಕಸ್ತೂರಿ’ ಪತ್ರಿಕೆ ಮೇಲೆ ಕಣ್ಣಾಡಿಸುತ್ತಾ ಹೋದರು. ಕೊನೆಯಲ್ಲಿ ಪುಸ್ತಕ
ವಿಭಾಗದ ತನಕ ಬಂದರು. ತಕ್ಷಣ ಅ ನಿಂತರು. ಡಿ.ಆರ್. ಮಂಕೇಕರ್ ಹೆಸರು, ‘ಮಂಕೀಕರ್’ ಎಂದು ಪ್ರಕಟವಾಗಿತ್ತು. ರಾಯರು ಇದ್ದಕ್ಕಿದ್ದಂತೆ ಜ್ವಾಲಾಮುಖಿಯಾಗಿಬಿಟ್ಟರು!

ಎಂದಿನಂತೆ, ಆ ಕೋಪೋದ್ರಿಕ್ತ ಕ್ಷಣದಲ್ಲಿ ಅವರಿಗೆ ಆ ಕ್ಷಣ ಮಾತಾಡಲು ಆಗಲಿಲ್ಲ. ಸ್ವಲ್ಪ ಸಾವರಿಸಿಕೊಂಡು ಬಂದರೂ,
ಅವರಿಗೆ ಕೋಪವನ್ನು ಹಿಡಿದಿಟ್ಟುಕೊಳ್ಳಲಾಗಲಿಲ್ಲ. ‘ಎಲ್ಲಿದ್ದಾನೆ ಅಂವ? ಏನ್ ಕೆಲಸ ಮಾಡ್ತೀರಿ? ಮಂಕೇಕರಗೆ ಮಂಕೀಕರ ಅಂತ ಬರೀತಿರಲ್ಲ? ಹೀಗ್ ಬರೆದವ ಮಂಕೀಕರನೇ ಇರಬೇಕು…’ ಎಂದು ಬುಸುಗುಡಲಾರಂಭಿಸಿದರು. ಈ ವಿಷಯ ಅದು ಹೇಗೋ, ‘ಕಸ್ತೂರಿ’ ನಿರ್ವಹಣಾ ಸಂಪಾದಕರಿಗೆ ಗೊತ್ತಾಯಿತು. ಅವರು ಮೆಲ್ಲಗೆ ರಾಯರಿಗೆ ಕಾಣದಂತೆ, ಆಫೀಸಿನಿಂದ ಪರಾರಿ ಯಾಗಿದ್ದರು! ಒಂದು ವೇಳೆ ಅಂದು ರಾಯರ ಕಣ್ಣಿಗೆ ಬಿದ್ದಿದ್ದರೆ ಇತ್ತು ಮಾರಿಹಬ್ಬ!

ವ್ಯಕ್ತಿಗಳ ಹೆಸರನ್ನು ತಪ್ಪಾಗಿ ಬರೆದರೆ, ಅವರಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ‘ನಿನ್ನ ಹೆಸರನ್ನು ತಪ್ಪು ಬರೆದರೆ ಸಹಿಸಿಕೊಳ್ಳು ತ್ತೀಯಾ? ವ್ಯಕ್ತಿಗಳ ಹೆಸರನ್ನು ಸರಿಯಾಗಿ ಬರೆಯುವುದು ಪತ್ರಿಕೋದ್ಯಮದ ಮೊದಲ ಪಾಠ’ ಎಂದು ಅವರು ಯಾವತ್ತೂ ಹೇಳುತ್ತಿದ್ದರು.

ಜೋಶಿಯವರ ಬರಹಕ್ಕೆ ನನ್ನೊಂದಿಷ್ಟು..


ಈ ವಾರ ನಮ್ಮ ಅಂಕಣಕಾರರಾದ ಶ್ರೀವತ್ಸ ಜೋಶಿಯವರು ಫಾರ್ಟ್‌ (fart – ಹೂಸು) ಬಗ್ಗೆ (ಕೆಳಗಿನ ಅಂಕಣ ನೋಡಿ) ಬರೆದಿದ್ದಾರೆ. ಸಾಮಾನ್ಯವಾಗಿ ಈ ವಿಷಯದ ಬಗ್ಗೆ ಯಾರೂ ಮಾತಾಡಲು, ಬರೆಯಲು ಬಯಸುವುದಿಲ್ಲ. ಆದರೆ ಜೋಶಿಯವರು ಒಂದು ಅಂಕಣವನ್ನೇ ಬರೆದಿದ್ದಾರೆ. ಅವರ ಧೈರ್ಯವನ್ನು ಮೆಚ್ಚಲೇಬೇಕು. ಅವರ ಲೇಖನಿಯಿಂದ ಈ ವಿಷಯದ ಬಗ್ಗೆ ಓದುವವರು ನಿಜಕ್ಕೂ”Fart’unate ಎಂದೇ ಹೇಳಬೇಕು. ಒಬ್ಬರೇ ಇದ್ದಾಗ ಬಿಡುವ, ಎರಡನೇ ವ್ಯಕ್ತಿಯಿದ್ದರೆ ಆ ಬಗ್ಗೆ ಮಾತಾ ಡಲು ಸಂದೇಹಪಡುವ ವಿಷಯವಿದು. ಹೀಗಿರು ವಾಗ ಜೋಶಿಯವರು ಹಿಡಿದ ಉಸಿರನ್ನು ಬಿಟ್ಟು, ಈ ವಿಷಯದ ಬಗ್ಗೆ ಬರೆದು ನಿರಾಳರಾಗಿದ್ದಾರೆ!

ಸುಮಾರು ಹನ್ನೊಂದು ವರ್ಷಗಳ ಹಿಂದೆ, ನಾನು ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣದ ಪುಸ್ತಕದ ಅಂಗಡಿಯಲ್ಲಿ ಕೆಲವು ಪುಸ್ತಕಗಳನ್ನು ಖರೀದಿಸಿದೆ. ಏರ್ ಪೋರ್ಟ್ ಖರ್ಚಿಗೆಂದು ಸ್ವಲ್ಪ ಪೌಂಡುಗಳನ್ನು ಇಟ್ಟುಕೊಂಡಿದದ್ದೆ. ನಾನು ಖರೀದಿಸಿದ ಪುಸ್ತಕದ ಬೆಲೆ 160 ಪೌಂಡ್ ಆಯಿತು. ಆದರೆ ನನ್ನ ಹತ್ತಿರ ಐದು ಪೌಂಡ್ ಕಡಿಮೆ ಇತ್ತು. ಯಾವುದಾದರೂ ಒಂದು ಪುಸ್ತಕ ಬಿಟ್ಟು ಬಿಲ್ ಮಾಡಿಸಲು ನಿರ್ಧರಿಸಿದೆ.

ಆದರೆ ನಾನು ಯಾವ ಪುಸ್ತಕವನ್ನು ತೆಗೆದಿಡಲು ನಿರ್ಧರಿಸಿದ್ದಾನೋ, ಅದೇ ಪುಸ್ತಕವನ್ನು ಮೂರ್ನಾಲ್ಕು ಸಲ ಹಿಂದೆ-ಮುಂದೆ ನೋಡುವುದನ್ನು ಗಮನಿಸಿದ ಅಂಗಡಿಯಾತ, ಆ ಪುಸ್ತಕದ ಬಗ್ಗೆ ನನಗಿರುವ ಕುತೊಹಲವನ್ನು ನೋಡಿ, ‘ಪರವಾಗಿಲ್ಲ, ಆ ಪುಸ್ತಕಕ್ಕೆ ಹಣ ಬೇಡ ಬಿಡಿ’ ಎಂದ. ಅವನ ಬಗ್ಗೆ ನನಗೆ ಹೆಮ್ಮೆಯಾಯಿತು. ಒಂದು ವೇಳೆ ಆತ ಗಟ್ಟಿಯಾಗಿ 160 ಪೌಂಡ್ ಕೊಡಲೇ ಬೇಕು ಎಂದು ಹೇಳಿದ್ದಿದ್ದರೆ, ಐದು ಪೌಂಡ್ ಬೆಲೆಯ ಆ ಪುಸ್ತಕವನ್ನು ಖರೀದಿಸಲು ಆಗುತ್ತಿರಲಿಲ್ಲ.

ಅಂದ ಹಾಗೆ ಆ ಪುಸ್ತಕದ ಹೆಸರು -The Art Of The Fart. ಅದರ ಲೇಖಕ ಸ್ಟೀವ್ ಬ್ರಯಾಂಟ್. ಈತ ಕಾಲೇಜು ಡ್ರಾಪ್ ಔಟ್. ಆದರೆ ತನಗೆ ಗೊತ್ತಿರುವ ಯಾವುದಾದರೂ ಒಂದು ವಿಷಯದ ಬಗ್ಗೆ ಒಂದು ಪುಸ್ತಕ ಬರೆದು ಭೇಷ್ ಅನಿಸಿಕೊಳ್ಳಬೇಕೆಂದು ಜಿದ್ದಿಗೆ ಬಿದ್ದು ಬರೆದ ಪುಸ್ತಕವಿದು. ಈ ಕೃತಿಯನ್ನು ಓದಿದಾಗಲೇ, ಮೊದಲ ಬಾರಿಗೆ fart ಬಗ್ಗೆ ಇಷ್ಟೆ ವಿಷಯಗಳಿವೆಯಾ ಎಂದು ಗೊತ್ತಾ ಗಿದ್ದು.

ಒಮ್ಮೆ ಅಮೆರಿಕದ ಅಧ್ಯಕ್ಷ ಗೆರಾಲ್ಡ್ ಫೋರ್ಡ್ ಶ್ವೇತ ಭವನದಲ್ಲಿ ಮಾಜಿ ರಾಷ್ಟ್ರಾಧ್ಯಕ್ಷರ ಗೌರವಾರ್ಥ ಔತಣ ಕೂಟ ಏರ್ಪಡಿಸಿ ದ್ದರು. ಆ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾಗಿದ್ದ ಲಿಂಡನ್ ಜಾನ್ಸನ್ ಕೂಡ ಭಾಗವಹಿಸಿದ್ದರು. ಆಗ ಜಾನ್ಸನ್ ತಮ್ಮ ಸ್ನೇಹಿತ ನಿಗೆ ಪೋರ್ಡ್ ಬಗ್ಗೆ ಹೇಳಿದರಂತೆ -Jerry (Gerald Ford) Ford is so dumb that he cant fart and chew gum at the same time.

ಖ್ಯಾತ ಬ್ರಿಟಿಷ್ ಸಾಹಿತಿ, ಕವಿ ಡಿ.ಎಚ್.ಲಾರೆನ್ಸ್ ಹೂಸಿನ ಬಗ್ಗೆಯೇ ಒಂದು ಕವನವನ್ನು ಬರೆದಿದ್ದಾರಂತೆ.  Song Of A Man Who Has Come Through ಎಂಬ ಶೀರ್ಷಿಕೆಯ ಆರಂಭಿಕ ಸಾಲನ್ನು ಗಮನಿಸಿದರೆ, ಆತ ಹೂಸಿನ ಬಗ್ಗೆಯೇ ಆ ಕವನ ಬರೆದಿರಬಹುದು ಎಂಬುದು ಬ್ರಯಾಂಟ್ ವಾದ. ಆ ಕವನ Not I, not I, but the wind that blows through me! ಎಂದು ಆರಂಭವಾಗುತ್ತದೆ. ಇದು ಹೂಸಿನ ಬಗ್ಗೆ ಅಲ್ಲವಾದರೆ, ಮತ್ಯಾವುದರ ಬಗ್ಗೆ ಇದ್ದೀತು ಎಂಬುದು ಬ್ರಯಾಂಟ್ ವಾದ.

ವಿಲ್ ಕಾರ್ಲಿಂಗ್ ಎಂಬ ಇಂಗ್ಲೆಂಡಿನ ರಗ್ಬಿ ಕ್ಯಾಪ್ಟನ್ ಬಗ್ಗೆ ಕೇಳಿರಬಹುದು. ಆತ ಮಹಾ ಕೋಪಿಷ್ಠ. ಆದರೆ ಉತ್ತಮ ಆಟಗಾರ. ಆತ ಸಿಟ್ಟಿನಿಂದ ಇಂಗ್ಲಿಷ್ ರಗ್ಬಿ ಯೂನಿಯನ್ ಕಮಿಟಿ ಬಗ್ಗೆ ಹೇಳಿದ ಮಾತು ಅವನ ಕ್ಯಾಪ್ಟನ್ ಪಟ್ಟಕ್ಕೆ ಕುತ್ತು ತಂದಿತು. ಆತ ಕೋಪದಿಂದ ಕಮಿಟಿಯ ಸದಸ್ಯರಿಗೆ Those 57 old farts ಎಂದು ಬೈದಿದ್ದ. ಅಷ್ಟಕ್ಕೇ ಆತನನ್ನು ಕ್ಯಾಪ್ಟನ್ ಪಟ್ಟದಿಂದ ತೆಗೆದು ಹಾಕಲಾಯಿತು.

ಅಷ್ಟಕ್ಕೇ ಸುಮ್ಮನಾಗದ ಆತ They neither fart nor shit ಎಂದು ಮತ್ತೊಮ್ಮೆ ಬೈದು ಸುದ್ದಿಯಾದ. ರೋಮನ್ ದೊರೆ ಕ್ಲಾಡಿ ಯಸ್ ಸೀಸರ್ ತನ್ನ ಅರಮನೆ ಕಟ್ಟಿಸುತ್ತಿದ್ದ. ಅದನ್ನು ಕಟ್ಟುವ ಕೂಲಿಕಾರ್ಮಿಕರ ಮುಖಂಡ ಆಳುಗಳಿಗೆ ಸರಿಯಾದ ಊಟ ಕೊಡುತ್ತಿರಲಿಲ್ಲ. ಅವರಿಗೆ ಆಲೂಗಡ್ಡೆ ಮತ್ತು ಗಡ್ಡೆಗೆಣಸುಗಳನ್ನಷ್ಟೇ ಕೊಡುತ್ತಿದ್ದ. ಇದರಿಂದ ಅವರಿಗೆ ತಡೆದುಕೊಳ್ಳಲು ಆಗದಷ್ಟು ಹೊಟ್ಟೆ ಉಬ್ಬು ಆಗುತ್ತಿತ್ತು. ಪದೇ ಪದೆ ಹೂಸು ಬಿಡುವುದು ಅನಿವಾರ್ಯವಾಗುತ್ತಿತ್ತು. ಆದರೆ ಹಾಗೆ ಹೂಸು ಬಿಟ್ಟರೆ ಆತ ಆಳುಗಳಿಗೆ ಹೊಡೆಯುತ್ತಿದ್ದ. ಹೀಗಾಗಿ ಅವರು ಕಷ್ಟಪಟ್ಟು ತಡೆದುಕೊಂಡಿರುತ್ತಿದ್ದರು.

ಆದರೆ ಎಷ್ಟು ಹೊತ್ತು ಹಾಗೆ ಇರಬಲ್ಲರು? ಆತ ಅಲ್ಲಿಂದ ಕದಲಿದರೆ ಸಾಕು, ಅಪಾನವಾಯು ಹೊರ ಹಾಕಿ ನಿರಾಳರಾಗುತ್ತಿದ್ದರು. ಆದರೆ ಇದು ಅವರಿಗೆ ಬರಬರುತ್ತಾ ಒಂದು ಶಿಕ್ಷೆಯಾಗಿ ಕಾಡಲಾರಂಭಿಸಿತು. ಕೊನೆಗೆ ದಾರಿ ಕಾಣದೇ, ಅವರೆಲ್ಲ ದೊರೆ ಕ್ಲಾಡಿ ಯಸ್ ಸೀಸರ್ ಬಳಿ ಹೋಗಿ ತಮ್ಮ ದುಃಖ ತೋಡಿಕೊಂಡರು. ಸೂಕ್ಷ್ಮ ಸಂವೇದಿಯಾದ ಅವನಿಗೆ ತನ್ನ ಪ್ರಜೆಗಳು ಅದೆಂಥ ಕಷ್ಟ ಅನುಭವಿಸುತ್ತಿದ್ದಾರಲ್ಲ ಎಂದು ಅನಿಸಿತು. ‘ನನ್ನ ರಾಜ್ಯದಲ್ಲಿ ಪ್ರಜೆಗಳು ತಮಗೆ ಅನಿಸಿದಾಗ, ಅನಿವಾರ್ಯವಾದಾಗ, ಯಾವ ಸಂದರ್ಭದದರೂ, ಯಾರ ಮುಂದಾದರೂ ಹೂಸು ಬಿಡಬಹುದು.

ಅದು ಅಪರಾಧವಲ್ಲ ಮತ್ತು ಅಸಭ್ಯ ನಡೆಯೂ ಅಲ್ಲ. ಅದನ್ನು ನೈಸರ್ಗಿಕ ಸಹಜ ಕ್ರಿಯೆ ಎಂದು ಭಾವಿಸತಕ್ಕದ್ದು’ ಎಂದು ಆದೇಶವನ್ನೇ ಹೊರಡಿಸಿದ. ಚಂದ್ರನ ಮೇಲೆ ಕಾಲಿಟ್ಟ ನೀಲ್ ಆರ್ಮಸ್ಟ್ರಾಂಗ್‌ಗೆ, ಅಂತರಿಕ್ಷಯಾನಿಯ ದಿರಿಸು ತೊಟ್ಟಾಗ, ಹೂಸು ಬಂದರೆ ಏನು ಮಾಡಬೇಕು ಎಂದು ಅನಿಸಿತ್ತಂತೆ. ಆತ ಈ ವಿಷಯವನ್ನು ತನ್ನ ಸಹೋದ್ಯೋಗಿಗಳ ಜತೆ ಚರ್ಚಿಸಿದಾಗ ಅವರೆಲ್ಲರೂ ಗೊಳ್ಳೆಂದು ನಕ್ಕರೂ, ‘ಇದು ನಿಜಕ್ಕೂ ಸೀರಿಯಸ್ ವಿಷಯ. ಅದಕ್ಕಾಗಿ ಪರಿಹಾರ ಕಂಡುಹಿಡಿಯಬೇಕು’ ಎಂದು ಹೇಳಿ ನಂತರ, ಗಗನಯಾತ್ರಿಗಳ ದಿರಿಸಿನ ಒಳಗೆ ಲಿಂಬು ವಾಸನೆ ಬರುವ ದ್ರವ್ಯ ಸಿಂಪಡಿಸುವ ವ್ಯವಸ್ಥೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದರು.

‘ನಾನು fart ಮತ್ತು ಅದಕ್ಕೆ ಸಂಬಂಧಿಸಿದ ಜೋಕುಗಳನ್ನು ಹೇಳದೇ, ಹಿಡಿದಿಡುವುದು ನನ್ನಿಂದ ಅಸಾಧ್ಯ ಎಂದು ಹೇಳಿದವರು
ಬ್ರಿಟನ್ ಪ್ರಧಾನಿ ಚರ್ಚಿಲ. ಒಮ್ಮೆ ಒಂದು ಪಾರ್ಟಿಯಲ್ಲಿ ಚರ್ಚಿಲ್ ಅವರಿಗೆ ಜನ ಯಾಕೆ fart ಮಾಡ್ತಾರೆ ಮತ್ತು ಅದಾದ
ಬಳಿಕ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ ಎಂದು ಕೇಳಿದಾಗ, Happiness comes from within. That’s why it feels so good to fart ಎಂದು ಹೇಳಿದ್ದರು.

ಪತ್ರಕರ್ತ ವೈಎನ್ಕೆ ಹೇಳುತ್ತಿದ್ದ ತಮಾಷೆ ಪ್ರಸಂಗ. ಒಮ್ಮೆ ಯಾವನೋ ನಂದಿ ಬೆಟ್ಟದ ಮೇಲಿರುವ ‘ಟಿಪ್ಪು ಡ್ರಾಪ್’ ತುದಿಯಲ್ಲಿ ನಿಂತಿದ್ದನಂತೆ. ಅಲ್ಲಿ ಸೇರಿದ್ದ ಜನರೆ ಅವನಿಗೆ, ‘ಬುದ್ಧಿಯಿಲ್ಲವಾ ಅಷ್ಟು ತುದಿಯಲ್ಲಿ ನಿಂತಿದ್ದೀಯಲ್ಲ, ಕೆಳಗೆ ಬಿದ್ದರೆ ಸತ್ತು ಹೋಗ್ತೀಯಾ’ ಎಂದು ಜೋರಾಗಿ ಕೂಗಿ ಹೇಳುತ್ತಿದ್ದರಂತೆ. ಇದನ್ನು ನೋಡಿದ ವೈಎನ್ಕೆ ಹೇಳಿದ್ದು – He is only a fart away from death. ಜೋಶಿಯವರ ಅಂಕಣ ಓದಿದಾಗ, ಈ ಎ ಸಂಗತಿಗಳನ್ನು ಹೇಳಬೇಕೆನಿಸಿತು.

ಒಂದು ಟ್ವೀಟ್ ಮತ್ತು ಪನ್
ಮೊನ್ನೆ ‘ದಿ ಹಿಂದು’ ಪತ್ರಿಕೆಯ ಸಂಪಾದಕರಾದ ಕೃಷ್ಣ ಪ್ರಸಾದ, ಒಂದು ವಾಟ್ಸಾಪ್ ಮೆಸೇಜ್ ಕಳಿಸಿದ್ದರು. ಅದು ರಕ್ಷಿತ್
ಪೊನ್ನಾಥಪುರ ಎಂಬುವವರ ಟ್ವೀಟ್. ರಕ್ಷಿತ್ ಅವರು ನಿತ್ಯಾನಂದನ ‘ಕೈಲಾಸ’ದ ಬಗ್ಗೆ ಪನ್ ಮಾಡಿ ಬರೆದಿದ್ದರು. ಅದು ಎಷ್ಟು
ಸೊಗಸಾಗಿತ್ತೆಂದರೆ, ಅದನ್ನು ನೋಡಿ ಕೃಷ್ಣ ಪ್ರಸಾದ ಉದ್ಗರಿಸಿದ್ದು – ‘ವೈಎನ್ಕೆ ಮಾತ್ರ ಈ ರೀತಿಯ ಪನ್ ಮಾಡುವುದು ಸಾಧ್ಯ!’
ಅಂದ ಹಾಗೆ, ರಕ್ಷಿತ್ ಹೀಗೆ ಟ್ವೀಟ್ ಮಾಡಿದ್ದರು -The road that leads to boating centre in Nityananda country, but call it Kayak Way, Kailasa !