Friday, 22nd November 2024

‘ಮನ್ ಕೀ ಬಾತ್’ನಿಂದ ಕರೋನಾ ವಿರುದ್ದ ಹೋರಾಟ ಅಸಾಧ್ಯ : ರಾಹುಲ್ ವಾಗ್ದಾಳಿ

ನವದೆಹಲಿ: ತಿಂಗಳಿಗೊಮ್ಮೆ ಅರ್ಥಹೀನ ಮಾತುಕತೆಯೊಂದಿಗೆ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ರೇಡಿಯೊ ಕಾರ್ಯ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ.

ತಮ್ಮ ಟ್ವೀಟ್‌ ಖಾತೆಯಲ್ಲಿ ರಾಹುಲ್ ಗಾಂಧಿ, ಕೋವಿಡ್-19 ವಿರುದ್ಧ ಹೋರಾ ಡಲು ಸರಿಯಾದ ಬದ್ಧತೆ ಅಗತ್ಯವಿದೆ ಎಂದು ತಿವಿದಿದ್ದಾರೆ.

ಕೋವಿಡ್-19 ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಅಂಕಿಅಂಶವು ಸರಿಯಿಲ್ಲ ಎಂದು ಕೇರಳದ ವಯನಾಡು ಕ್ಷೇತ್ರದ ಸಂಸದ ಆಗಿರುವ ರಾಹುಲ್ ಗಾಂಧಿ, ಕರೋನಾ ತಡೆಗಟ್ಟದಿದ್ದರೆ ಮತ್ತಷ್ಟು ತೀವ್ರವಾಗಿ ಹರಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರದ ವ್ಯಾಕ್ಸಿನೇಷನ್ ಯೋಜನೆ ಸಮರ್ಪಕವಾಗಿಲ್ಲ ಎಂದು ಟೀಕಿಸಿದ್ದಾರೆ.

ಪ್ರತಿ ತಿಂಗಳು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾರೆ. ಇದು ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುತ್ತದೆ. ಮೇ 30ರಂದು ಮನ್ ಕೀ ಬಾತ್ 77ನೇ ಕಂತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋವಿಡ್-19 ವಿರುದ್ಧದ ಹೋರಾಟ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.