ನವದೆಹಲಿ : ದೇಶದಲ್ಲಿ ಕರೋನಾ ರೋಗಿಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಉತ್ಪಾದನೆ 10 ಪಟ್ಟು ಹೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದರು. ಆಕ್ಸಿಜನ್ ಪೂರೈಕೆಗಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿ, ಸಾಮಾನ್ಯವಾಗಿ 900 ಮೆಟ್ರಿಕ್ ಟನ್ಗಳಷ್ಟು ಒಂದು ದಿನಕ್ಕೆ ಎಲ್ಎಂಒ ಉತ್ಪಾದನೆ ನಡೆಯುತ್ತಿತ್ತು. ಇಂದು ದಿನಕ್ಕೆ 9,500 ಮೆಟ್ರಿಕ್ ಟನ್ಗಳ ಉತ್ಪಾದನೆಯಾಗುತ್ತಿದೆ’ ಎಂದರು.
ಹಿಂದೆ ಆಸ್ಪತ್ರೆಗಳಿಂದ ಆಕ್ಸಿಜನ್ ಕೊರತೆ ಕುರಿತು ಅನೇಕ ಎಸ್ಒಎಸ್ ಬರುತ್ತಿದ್ದವು. ಸಾಮಾಜಿಕ ಮಾಧ್ಯಮದಲ್ಲೂ ನಾಗರೀಕರ ಆಕ್ಸಿಜನ್ ಬೇಡಿಕೆಗಳು ಕಂಡುಬಂದವು. ಈ ಸನ್ನಿವೇಶದಲ್ಲಿ ಖಾಸಗಿ ಘಟಕಗಳಲ್ಲಿರುವ ಸ್ಟಾಕ್ ಸೇರಿದಂತೆ ಎಲ್ಲಾ ಲಿಖ್ವಿಡ್ ಆಕ್ಸಿಜನ್ಅನ್ನು ವೈದ್ಯಕೀಯ ಉದ್ದೇಶಕ್ಕೆ ಮಾತ್ರ ಬಳಸಬೇಕೆಂದು ಸರ್ಕಾರ ನಿರ್ದೇಶಿಸಿತು. ಜೊತೆಗೆ ವಿದೇಶದಿಂದ ತುರ್ತು ವೈದ್ಯಕೀಯ ಸಹಾಯ ಹರಿದುಬಂತು. ರಾಜ್ಯಗಳ ಆಕ್ಸಿಜನ್ ಬೇಡಿಕೆ ಈಡೇರಿಸಲು ವಿಶೇಷ ಆಕ್ಸಿಜನ್ ಎಕ್ಸ್ಪ್ರೆಸ್ ರೈಲುಗಳನ್ನು ಆರಂಭಿಸಲಾಯಿತು ಎಂದರು.
ಕರೊನಾ ವಿರುದ್ಧದ ಹೋರಾಟದಲ್ಲಿ ಕರೊನಾ ವಾರಿಯರ್ಗಳ ಮಹತ್ವಪೂರ್ಣ ಸೇವೆ ಎಲ್ಲರೂ ಹೆಮ್ಮೆ ಪಡುವಂಥದ್ದು. ಇಂದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಏಳು ವರ್ಷಗಳನ್ನು ಪೂರೈಸಿರುವುದನ್ನು ಕೇಳುಗರಿಗೆ ನೆನಪಿಸಿದ ಮೋದಿ, ತಮ್ಮ ಸರ್ಕಾರದ ಧ್ಯೇಯವಾದ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಎಂಬಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.