Thursday, 19th September 2024

ಇಂತಹ ದುರಿತ ಕಾಲದಲ್ಲೂ ರಾಜಕೀಯ ಮಾಡುವುದು ಸೂಕ್ತವಲ್ಲ

ಸಿದ್ದರಾಮಯ್ಯನ 26 ಪ್ರಶ್ನೆಗಳಿಗೆ ಕೇಂದ್ರ ಸಚಿವ ಜೋಶಿ ಉತ್ತರ

ಮಾನ್ಯ ಸಿದ್ದರಾಮಯ್ಯನವರೇ,

ನೀವು ನಾಡಬಾಂಧವರಿಗೆ ಬರೆದ ಕಾಳಜಿ ರಹಿತ ಪತ್ರವನ್ನು ನೋಡಿದ ನಂತರ ತಮಗೆ ನಾಡಜನತೆಯ ಪರವಾಗಿ ಕೆಲವು ಮಾಹಿತಿಗಳನ್ನು ಸಾರ್ವಜನಿಕವಾಗಿ ತಲುಪಿಸಲು ಇಚ್ಛಿಸುತ್ತೇನೆ.

ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ನಾಯಕರುಗಳ ಡಿಎನ್‌ಎದಲ್ಲಿ ಸತ್ಯದ ಅಂಶವೇ ಇಲ್ಲವೇನೋ ಅನಿಸುತ್ತಿದೆ. 1947ರಲ್ಲಿ ಭಾರತ
ಸ್ವಾತಂತ್ರವಾದಾಗಿನಿಂದಲೂ ದೇಶವನ್ನು ಕಟ್ಟುವುದಕ್ಕಿಂತ ಹೆಚ್ಚಾಗಿ ಇವರು ಕಟ್ಟಿರುವುದು ಸುಳ್ಳುಗಳ ಸಾಮ್ರಾಜ್ಯವನ್ನು.
ಇಂತಹ ಪಕ್ಷದ ಪ್ರತಿನಿಧಿಯಾದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ದೇಶದ ಇಂದಿನ ಗಂಭೀರ ಕರೋನಾ ಸ್ಥಿತಿಗೆ ಶ್ರೀ ಮೋದಿ ಹಾಗೂ ಮೋದಿಯವರ ಕೇಂದ್ರ ಸರಕಾರವೇ ಕಾರಣವೆಂದು ಜನರಿಗೆ ತಪ್ಪು ಮಾಹಿತಿ ನೀಡುವ 26 ಪ್ರಶ್ನೆ ಗಳನ್ನು ಮಾಧ್ಯಮದ ಮೂಲಕ ಕೇಳಿದ್ದಾರೆ.

26 ಪ್ರಶ್ನೆಗಳು ಸುಳ್ಳುಗಳ ಸರಮಾಲೆ ಹಾಗೂ ಅಪ್ರಬುದ್ಧತೆಯ ಪರಮಾವಧಿ ಎಂದು ಯಾರಿಗಾದರೂ ಅನಿಸುತ್ತದೆ. ಸಿದ್ಧರಾಮಯ್ಯನವರು ಕಾಂಗ್ರೆಸ್ಸಿಗೆ ವಲಸೆ ಬರುವ ಪೂರ್ವದಲ್ಲಿ ಅಲ್ಲಿ ಇಲ್ಲಿ ಕೆಲವು ಸತ್ಯದ ನುಡಿಗಳನ್ನಾದರೂ ನುಡಿಯು ತ್ತಿದ್ದರು. ಕಾಂಗ್ರೆಸ್ಸಿಗೆ ಬಂದ ನಂತರ ಅವರ ಡಿಎನ್‌ಎ ಕೂಡ ಬದಲಾಗಿರುವುದು ಸಹಜವೇ. ಒಂದು ಸುಳ್ಳನ್ನು 100 ಬಾರಿ ಹೇಳಿ, ಅದನ್ನೇ ಸತ್ಯವನ್ನಾಗಿ ಮಾಡುವ ಕಲೆಯನ್ನು ರೂಢಿಸಿಕೊಂಡಿದ್ದೀರಿ. ಗೋಬೆಲ್ ಪರಂಪರೆಯ ಬಗ್ಗೆ ಹೇಳುವ ಸಿದ್ಧರಾಮಯ್ಯ ಅವರು ಮೊದಲು ಅರ್ಥಮಾಡಿ ಕೊಳ್ಳಬೇಕಾಗಿದ್ದು ನಮ್ಮ ದೇಶಕ್ಕೆ ಗೋಬೆಲ್‌ನನ್ನು ಆಮದು ಮಾಡಿಕೊಂಡಿ ದ್ದು ನೆಹರು, ಗಾಂಧಿ ಕುಟುಂಬವೆಂಬುದನ್ನು. ಇಂತಹ ಪಕ್ಷದ ಪಳಿಯುಳಿಕೆ ಆಗಿರುವ ಸಿದ್ದರಾಮಯ್ಯನವರಿಂದ ಸತ್ಯದ ಆಧಾರದ ಮೇಲಿನಿಂದ ಪ್ರಶ್ನೆಗಳನ್ನು ನಿರೀಕ್ಷಿಸುವುದಾದರೂ ಹೇಗೆ?

ಮಾನ್ಯ ಸಿದ್ದರಾಮಯ್ಯನವರೇ, ವಿಶ್ವ ಆರೋಗ್ಯ ಸಂಸ್ಥೆಯು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿಯೇ ಭಾರತದಲ್ಲಿ ರೂಪಾಂತರ ಹೊಂದಿದ ಕರೋನಾ ವೈರಸ್ ಬಿ.1.617 ತಳಿಯ ಪತ್ತೆಯಾಗಿದೆ ಎಂದು ತಾವು ತಿಳಿಸಿರುವಿರಿ. ಆದರೆ ಈ ದ್ವಿ ರೂಪಾಂತರಿತ ವೈರಸ್ ತಳಿಯು ಮೊದಲನೇಯದಾಗಿ ಈ 484ಕ್ಯೂ ಎಂಬ ರೂಪಾಂತರವನ್ನು ಇಂಗ್ಲೆಂಡಿನಲ್ಲಿ ಪತ್ತೆಯಾದ
ಬಿ1.1.7 ನಿಂದ ಮತ್ತು ಬ್ರೆಜಿಲ್‌ನಲ್ಲಿ ಪತ್ತೆಯಾದ ಬಿ.1.351 ಈ ಎರಡು ವೈರಸ್‌ಗಳಿಂದ ರೂಪಾಂತರಿತವಾಗಿದೆ.

ಎರಡನೇಯದಾಗಿ ಎಲ್452ಆರ್. ಇದು ಬಿ1.427 ಕ್ಯಾಲಿಫೋರ್ನಿಯಾದಲ್ಲಿ ಪತ್ತೆಯಾದ ವೈರಸ್ ತಳಿಯಾಗಿದ್ದು, 1 ಮತ್ತು 2ನೇ ವೈರಸ್ ಗಳಿಂದ ಉಂಟಾದ ಬಿ.1.617 ದ್ವೀ ರೂಪಾಂತರಿತ ತಳಿಯು ಭಾರತದಲ್ಲಿ ಡಿಸೆಂಬರ್ 7, 2020 ರಂದು ಪತ್ತೆಯಾಗಿದೆ.

ಇದನ್ನು ದೇಶದ ಅತ್ಯುನ್ನತ ಸಂಸ್ಥೆಯಾದ Indian SARS COV 2 Genomic Consortia (INSACOG) ) ದೃಢಪಡಿಸಿದೆ. ಆದರೆ, ನಮ್ಮ ದೇಶದ ಅತ್ಯುನ್ನತ ಸಂಸ್ಥೆಯ ಭಾರತೀಯ ವಿಜ್ಞಾನಿಗಳು ದೃಢಪಡಿಸಿರುವುದರ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಏಕೆ ಇಷ್ಟು ಪರರ ಮೇಲೆ ಅವಲಂಬನೆ ನಿಮ್ಮದು? ಯಾವುದೇ ವೈರಸ್ ಆದರೂ ಅದು ಅಲೆಗಳ ರೂಪದಲ್ಲಿ ಬರುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದ ವಿಚಾರ.

ಬಹುತೇಕ ದೇಶಗಳಲ್ಲಿ ಕರೋನಾ ಸಹ ಅಲೆಗಳ ರೂಪದಲ್ಲಿಯೇ ಅಪ್ಪಳಿಸಿದೆ. ಬಿ.೧.೬೧೭ ಮೊದಲು ಕಾಣಿಸಿಕೊಂಡಿದ್ದು ಮಹಾರಾಷ್ಟ್ರದಲ್ಲಿ. ಸಿದ್ಧರಾಮಯ್ಯನವರಿಗೆ ಈ ಮೊದಲೇ ವಿಜ್ಞಾನಿಗಳ ಎಚ್ಚರಿಕೆ ಗೊತ್ತಿದ್ದರೆ ಅವರದೇ ಪಕ್ಷದ ಮಹಾರಾಷ್ಟ್ರ ಸರಕಾರಕ್ಕೆ ಈ ಮಹಾಮಾರಿಯನ್ನು ತಡೆಗಟ್ಟಲು ಏಕೆ ಸಲಹೆ ಕೊಡಲಿಲ್ಲ? ಇವತ್ತಿಗೂ ಮಹಾರಾಷ್ಟ್ರ ದೇಶದ ಅತಿ ಹೆಚ್ಚಿನ ಕರೋನಾದಿಂದ ಬಾಧಿತವಾದ ರಾಜ್ಯವಾಗಿದೆ.

ಅತಿ ಕಡಿಮೆ ಎಂದಿದ್ದರು: ಸಿದ್ದರಾಮಯ್ಯನವರೇ, ಜಗತ್ತಿನಲ್ಲಿಯೇ ಪ್ರಸಿದ್ಧವಾದ ಅಮೆರಿಕದ ವಾಷಿಂಗ್ ಟನ್ ಡಿ.ಸಿ ಮೂಲದ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್ ಎಕನಾಮಿಕ್ಸ್ ಆಂಡ್ ಪಾಲಿಸಿ ಸಂಸ್ಥೆಯ ಸುಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞ ಶ್ರೀ ರಮಣನ್ ಲಕ್ಷ್ಮೀನಾರಾಯಣನ್ ಅವರು ಫೆಬ್ರವರಿ 17, 2020 ರಂದು ‘ಭಾರತದಲ್ಲಿ 2ನೇ ಅಲೆಯ ಗೋಚರಿಸುವಿಕೆ ಕಂಡು ಬರುವುದಿಲ್ಲ.

ಕಂಡು ಬಂದರೂ ಅತಿ ಕಡಿಮೆ ಪ್ರಮಾಣದಲ್ಲಿರುತ್ತದೆ’ ಎಂದಿದ್ದರು. ಅಲ್ಲದೇ, ಅಮೆರಿಕದ ಮಿಶಿಗನ್ ವಿವಿಯ ಸಾಂಕ್ರಾಮಿಕ ರೋಗ ತಜ್ಞೆಯಾದ ಭ್ರಮರ್ ಮುಖರ್ಜಿ ಮತ್ತು ಅವರ ತಂಡದ ಸಂಶೋಧನೆಯ ಪ್ರಕಾರ ‘ಮಾರ್ಚ್ 2021ರ ಅಂತ್ಯದ ವೇಳೆಗೆ ಭಾರತವು ಅತೀ ಕಡಿಮೆ ಪ್ರಮಾಣದ ಸೊಂಕನ್ನು ದಾಖಲಿಸುತ್ತದೆ’ ಎಂದು ತಿಳಿಸಿದ್ದರು.

ನಾವು ದೇಶದ ಜನರ ಸಂಕಷ್ಟದಲ್ಲಿ ರಾಜಕೀಯ ಮಾಡುವುದಿಲ್ಲ. ತಮಗೆ ಕರ್ನಾಟಕದ ಜನತೆಯ ಮೇಲೆ ಪ್ರೀತಿ ಇದ್ದರೆ ಸಕಾರಾತ್ಮಕ ಸಲಹೆ, ಸೂಚನೆಗಳನ್ನು ರಾಜ್ಯ ಸರಕಾರಕ್ಕೆ ಕೊಡಲಿ. ರಾಜ್ಯ ಸರಕಾರ ಮತ್ತು ಕರ್ನಾಟಕ ಬಿಜೆಪಿ ಇದನ್ನು ಮುಕ್ತ
ಮನಸ್ಸಿನಿಂದ ಸ್ವೀಕರಿಸುತ್ತದೆ. ಆದರೆ ಈ ತುರ್ತು ಸಂದರ್ಭದಲ್ಲಿ ಪರಿಹಾರಾತ್ಮಕ ಸಲಹೆಗಳ ಮೂಲಕ ಜನರ ಒಳಿತಿಗೆ ಪ್ರತಿಯೊಬ್ಬರೂ ಕೆಲಸ ಮಾಡಬೇಕೆ ಹೊರತು ಇಲ್ಲಿಯೂ ಕ್ಷುಲ್ಲಕ ರಾಜಕೀಯ ಮಾಡುವ ಸಂದರ್ಭ ಇದಲ್ಲ.

ದೇಶದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು 8-2-2021 ರಂದು ರಾಜ್ಯಸಭೆಯಲ್ಲಿ ಮಾತನಾಡುತ್ತ ‘ಈಶ್ವರನ ಕೃಪೆಯಿಂದ ನಾವು ಭಾರತೀಯರು ಕರೋನಾವನ್ನು ಇಲ್ಲಿಯವರೆಗೆ ಚೆನ್ನಾಗಿ ನಿರ್ವಹಿಸಿದ್ದೇವೆ. ಇದರ ಎಲ್ಲ ಶ್ರೇಯಸ್ಸು
ಪ್ರತಿ ಯೊಬ್ಬ ಭಾರತೀಯನಿಗೂ ಸಲ್ಲಬೇಕು. ಯಾವುದೇ ವ್ಯಕ್ತಿಗಲ್ಲ’ ಎಂದು ಹೇಳಿದ್ದರು.

ಪ್ರಧಾನಿ ಹೆವಯ ಮಾತು: ಈ ಮಾತಿಗೆ ಕರ್ನಾಟಕದ ಎಲ್ಲ ಸಂಸದರೂ ಮತ್ತು ಪ್ರತಿ ಭಾರತೀಯನೂ ಹೆಮ್ಮೆಪಟ್ಟುಕೊಂಡರು. ಸಂಸದರು ದೇಶದ ಪ್ರಧಾನಿ ಈ ವಿನಮ್ರತೆಗೆ ಮೇಜು ಕುಟ್ಟಿ ಸ್ವಾಗತಿಸುವುದರಲ್ಲಿ ಸಿದ್ದರಾಮಯ್ಯನವರಿಗೆ ಮಾತ್ರ ತಪ್ಪು ಕಾಣಿಸು ತ್ತದೆ ಸಿದ್ದರಾಮಯ್ಯನವರೇ, ಬಿಜೆಪಿ ಅಥವಾ ನಮ್ಮ ಸರಕಾರಗಳು ಯಾವತ್ತಿಗೂ ಕರೋನಾ ಪಿಡುಗು ಅಂತ್ಯಗೊಂಡಿದೆ ಎಂದು ಎಲ್ಲೂ ಹೇಳಿಲ್ಲ ಅಥವಾ ಭಾವಿಸಿಲ್ಲ.

ದೇಶದ ಪ್ರತಿ ಟೆಲಿಫೋನ್ ಅಥವಾ ಮೊಬೈಲ್ ಕರೆಯ ಕಾಲರ್‌ ಟ್ಯೂನ್‌ನಿಂದ ಹಿಡಿದು ಪ್ರತಿಯೊಂದು ವಾಹಿನಿಯಲ್ಲಿ ಜನರಿಗೆ ಜಾಗೃತಿ ಮತ್ತು ಮುನ್ನಚ್ಚರಿಕೆ ಕೊಡುತ್ತಾ ಬಂದಿದ್ದೇವೆ. ಆದರೆ ಕಾಂಗ್ರೆಸ್ ಮತ್ತು ಅವರ ಸಂಗಡಿಗರು ಮೊದಲನೇ ಅಲೆಯಲ್ಲಿ ಮತ್ತು 2ನೇ ಅಲೆಯ ಪ್ರಾರಂಭದಲ್ಲಿ ಚುನಾವಣೆ ಸಂದರ್ಭ ಹೊರತುಪಡಿಸಿಯೂ ನೂರಾರು ರ‍್ಯಾಲಿ, ಜಾಥಾ, ಹರತಾಳ, ಧರಣಿ ಮತ್ತು ಬಂದ್‌ಗಳನ್ನು ಮಾಡಿ ಕರೋನಾ ಹರಡುವಿಕೆಗೆ ಕಾರಣೀಕರ್ತರಾಗಿದ್ದಾರೆ.

ಸಿದ್ಧರಾಮಯ್ಯನವರೇ, ಭಾರತ ಸರಿಸುಮಾರು 135 ಕೋಟಿ ಜನಸಂಖ್ಯೆಯ, ಹೆಚ್ಚಿನ ಜನಸಾಂದ್ರತೆಯುಳ್ಳ ದೇಶ. ಇಷ್ಟಾಗಿಯೂ ಜಗತ್ತಿನ ಅತೀ ಕಡಿಮೆ ಕೊವಿಡ್ ಸಂಬಂಧಿತ ಮರಣ ಪ್ರಮಾಣ ಹೊಂದಿದೆ. ಅತಿ ಅಭಿವೃದ್ಧಿ ಹೊಂದಿದ ದೇಶದ ಆರೋಗ್ಯ ವ್ಯವಸ್ಥೆ ಸಹಿತ ಕರೋನಾ ಮುಂದೆ ಮಂಡಿಯೂರಿ ಕೂತಿದೆ. ಈ ಒಂದು ಸಂದರ್ಭ ಜಗತ್ತಿನಾದ್ಯಂತ ಸಾಂಕ್ರಾಮಿಕ ವಿಕೋಪ ವಾಗಿ ಮಾರ್ಪಟ್ಟಿದೆ. ನಮ್ಮ ದೇಶದಲ್ಲಿ ಇದು ವಿಕೋಪವಲ್ಲ ಎಂದು ತಾವು ಹೇಳಿರುವುದು ಅಪ್ರಬುದ್ಧತೆಯ ಪರಮಾವಧಿ.

ಏಕೆಂದರೆ ಇವತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿದ ರಾಷ್ಟ್ರವಾದ ಜಪಾನ್ ಕೂಡ ಕರೋನಾ ಹೊಡೆತದಿಂದ ತತ್ತರಿಸಿದೆ.
ಯಾವುದೇ ರಾಷ್ಟ್ರ ಈ ಮಾರಿಯ ಹೊಡೆತದಿಂದ ಬಚಾವಾಗಿಲ್ಲ.

ನೆರೆಯ ರಾಷ್ಟ್ರಗಳಿಗೆ ಹರಡದಿರಲಿ: ಭಾರತದ ನಂತರ 2ನೇ ಅಲೆ ನಮ್ಮ ನೆರೆಯ ಪಾಕಿಸ್ತಾನ, ನೇಪಾಳ, ಥೈಲ್ಯಾಂಡ್ ಮುಂತಾದ ರಾಷ್ಟ್ರಗಳಿಗೆ ಹರಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ನಾವು ಭಾರತೀಯರು ಈ ಮಹಾ ಮಾರಿ ರೋಗವು ನಮ್ಮ ನೆರೆಯ ರಾಷ್ಟ್ರಗಳಿಗೆ ಹರಡದಿರಲಿ ಎಂದು ಆಶಿಸುತ್ತೇವೆ ಮತ್ತು ಸಹಕಾರವನ್ನು ನೀಡುತ್ತೇವೆ.
ಇವತ್ತಿಗೂ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ 2020 ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಕರೋನಾದಿಂದ ಮೃತಪಟ್ಟ ದೇಹಗಳು ವಿಲೇವಾರಿಯಾಗದೇ ಉಳಿದುಕೊಂಡಿವೆ. ಮಾನವೀಯತೆ ಹೊಂದಿದ ನಾಗರಿಕ ಸಮಾಜದ ಎಲ್ಲರೂ ಕರೊನಾ ವಿರುದ್ಧ
ಹೋರಾಡಬೇಕಿದೆ. ಮೇಲೆ ಹೇಳಿದಂತೆ ಭಾರತವು ಜಗತ್ತಿನಲ್ಲಿಯೇ ಕೋವಿಡ್‌ನಿಂದ ಉಂಟಾದ ಅತಿ ಕಡಿಮೆ ಮರಣ ಪ್ರಮಾಣ ಹೊಂದಿದೆ ಹಾಗೂ ಅತಿ ಹೆಚ್ಚು ಚೇತರಿಕೆ ಪ್ರಮಾಣ ದಾಖಲಿಸಿದೆ.

ಭಾರತ ಸರಕಾರವು ಈ ಸಾಂಕ್ರಾಮಿಕದ 2ನೇ ಅಲೆಗೆ ಪ್ರಾರಂಭದಲ್ಲಿಯೇ ಕಾರ್ಯಪ್ರವೃತ್ತವಾಗಿ 900 ಮೆಟ್ರಿಕ್ ಟನ್‌ನಿಂದ 9000 ಮೆಟ್ರಿಕ್ ಟನ್‌ವರೆಗೆ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ.

ಸಿದ್ದರಾಮಯ್ಯನವರೇ, ಕಾಂಗ್ರೆಸ್ ಪಕ್ಷ ಮತ್ತು ನಾಯಕರು ವ್ಯಾಕ್ಸೀನ್ ಬಗ್ಗೆ ನವೆಂಬರ್ 2020 ರಿಂದಲೇ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದರಿಂದ ಎಷ್ಟೋ ಜನರು ಲಸಿಕೆ ಬಗ್ಗೆ ಹೆದರಿಕೆ ಮತ್ತು ಭಯ ಬೆಳೆಸಿಕೊಂಡರು. ಈ ಅಪಪ್ರಚಾರದ ವಿರುದ್ಧ
ನೀವೇಕೆ ಧ್ವನಿ ಎತ್ತಲಿಲ್ಲ? ತಮಗೆ ಗೊತ್ತಿರಲಿ, ಒಮ್ಮೆ ಉತ್ಪಾದಿಸಿದ ಲಸಿಕೆಯ ಗರಿಷ್ಠ ಬಳಕೆಯ ಅವಧಿ ಕೇವಲ 3 ತಿಂಗಳು.

ಈ ಅಪಪ್ರಚಾರದಿಂದ ಕಂಪನಿಗಳು ಉತ್ಪಾದನಾ ಪ್ರಮಾಣವನ್ನು ಕಡಿಮೆ ಮಾಡುವುದರ ಜತೆಗೆ ಉತ್ಪಾದಿತ ಲಸಿಕೆಗಳನ್ನು ಇತರ ರಾಷ್ಟ್ರಗಳಿಗೆ ರಪ್ತು ಮಾಡಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸರಕಾರಗಳ ವಿಶೇಷ ಆಸಕ್ತಿ ಮತ್ತು ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಪ್ರಯತ್ನದಿಂದ ಇಂದು ಭಾರತದಲ್ಲಿ 20 ಕೋಟಿ ಜನರಿಗೆ ಲಸಿಕೆ ನೀಡಿದೆ.

ಜುಲೈ ಅಂತ್ಯದವರೆಗೆ 53 ಕೋಟಿ ಜನರಿಗೆ ಲಸಿಕೆ ದೊರೆಯಲಿದೆ. ಇಡೀ ಜಗತ್ತಿನಾದ್ಯಂತ 170 ಕೋಟಿ ಲಸಿಕೆಯನ್ನು
ನೀಡಲಾಗಿದೆ. ಅದರಲ್ಲಿ ನಮ್ಮ ದೇಶದ ಪಾಲು 20 ಕೋಟಿ. ಅಂದರೆ ಜಗತ್ತಿನ 11% ರಷ್ಟು ಲಸಿಕೆ ನೀಡಿಕೆ ನಮ್ಮಲ್ಲಿಯೇ ಆಗಿದೆ. ದೇಶದ 15% ಜನಸಾಮಾನ್ಯರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ.

ಎಲ್ಲರಿಗೂ ಲಸಿಕೆ ನೀಡುವುದು ನಮ್ಮ ಆದ್ಯ ಆಯ್ಕೆಯಾಗಿದ್ದು, ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳ ಒಳಗೆ 216 ಕೋಟಿ ಲಸಿಕೆ ನಮಗೆ ಲಭ್ಯವಾಗುವಂತೆ ಎಲ್ಲ ಕಂಪನಿ
ಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕಾರಣ ಈಗಾಗಲೇ ಉತ್ಪಾದನೆ ಅಧಿಕಗೊಂಡಿದೆ.

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಈ ವರ್ಷದ ಕೊನೆಯೊಳಗಾಗಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಲಸಿಕೆಯನ್ನು ನೀಡುವ ಬದ್ಧತೆ ನಮಗಿದೆ. ಭಾರತ ಸರಕಾರವು ಸೀರಂ ಇನ್ಸ್‌ಟ್ಯೂಟ್‌ಗೆ 3000 ಕೋಟಿ, ಭಾರತ ಬಯೋಟೆಕ್‌ಗೆ 1500 ಕೋಟಿ
ಮುಂಗಡ ಹಣ ಪಾವತಿಸಿರುವುದು ತಮ್ಮ ಗಮನಕ್ಕಿಲ್ಲವೇ?

ಪೂರ್ಣಪ್ರಮಾಣದ ಲಸಿಕೆ: ಭಾರತ ಸರಕಾರವು 135 ಕೋಟಿ ಜನರಿಗೆ ತಜ್ಞರ ಸಲಹೆಯಂತೆ ಲಸಿಕೆಯನ್ನು ಆದ್ಯತೆಯ ಮೇರೆಗೆ ಕೊಡುವ ನೀತಿಯನ್ನು ಜನವರಿಯಲ್ಲಿ ಪ್ರಕಟಿಸಿತ್ತು. ಅದರಂತೆ ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರು, 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಮೇರೆಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಈಗ 18 ರಿಂದ 45 ವರ್ಷ ದೊಳಗಿನವರಿಗೆ ಡಿಸೆಂಬರ್ ಒಳಗೆ ಪೂರ್ಣಪ್ರಮಾಣದ ಲಸಿಕೆ ನೀಡಿಕೆ ಯೋಜನೆ ಹಮ್ಮಿಕೊಂಡಿದೆ.

ಇದು ಜಗತ್ತಿನ ಅತಿ ದೊಡ್ಡ ಲಸಿಕಾ ಕಾರ್ಯಕ್ರಮವಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅತೀ ಮುಖ್ಯವಾಗಿದೆ. ಕೋವಿಡ್ ವಿರುದ್ಧದ ಈ ಹೋರಾಟದಲ್ಲಿ ಶಸ್ತ್ರಧಾರಿಗಳಾಗಿ ಹೋರಾಡುತ್ತಿರುವ ವೈದ್ಯಕೀಯ, ಅರೆವೈದ್ಯಕೀಯ ಹಾಗೂ ಇತರ ಸೇನಾನಿಗಳು ಈ ಲಸಿಕೆಯನ್ನು ಪ್ರಥಮ ಪ್ರಾಶಸ್ತ್ಯದಲ್ಲಿ ಪಡೆಯಲು ಯೋಗ್ಯರೆಂದು ನಾವು ಭಾವಿಸಿ, ಅದರಂತೆ ನೀತಿ- ನಿಯಮಗಳನ್ನು ರೂಪಿಸಿ ಜಾರಿಗೆ ತಂದು, ಅದರನ್ವಯ ಲಸಿಕೆ ನೀಡಲಾಗುತ್ತಿದೆ.

ಒಂದು ವೇಳೆ ಪ್ರಧಾನಿಯವರು ಮೊದಲು ಲಸಿಕೆ ಪಡೆದಿದ್ದರೆ ದೇಶಕ್ಕಿಂತ ತಾನು ಮತ್ತು ತನ್ನ ಸ್ವಹಿತ ಮುಖ್ಯವೆಂದು ನೀವು ಆರೋಪ ಮಾಡುತ್ತಿರಲಿಲ್ಲವೇ? ಇದೇ ಸಲಹೆಯನ್ನು ತಾವು ಜನವರಿಯಲ್ಲಿ ಏಕೆ ನೀಡಲಿಲ್ಲ? ಸರಕಾರದ ನೀತಿಯಂತೆ ಪ್ರಧಾನ ಮಂತ್ರಿಗಳು ಮಾರ್ಚ್ 1 ರಿಂದ 60 ವರ್ಷ ದಾಟಿದವರಿಗೆ ಲಸಿಕೆ ನೀಡಿಕೆ ಪ್ರಾರಂಭವಾದ ದಿನವೇ ಪ್ರಧಾನಿಗಳು ಲಸಿಕೆ ಪಡೆದು, ಅರ್ಹರೆಲ್ಲರೂ ಲಸಿಕೆ ಪಡೆಯಬೇಕೆಂದು ಮನವಿ ಮಾಡಿದ್ದಾರೆ. ಆದರೆ ತಾವು ಮೊದಲ ದಿನವೇ ಲಸಿಕೆಯನ್ನು ಪಡೆದು ರಾಜ್ಯದ ಜನರಿಗೆ ಲಸಿಕೆಯಿಂದ ಯಾವುದೇ ತೊಂದರೆಯಾಗದು, ಇದು ನಮ್ಮ ಪ್ರಾಣರಕ್ಷಕ ಔಷಧ ಎಂದು ತೋರಿಸುವ ಮಾದರಿ
ನಾಯಕರಾಗಬೇಕಿತ್ತು. ಆದರೆ ತಾವು ಮೊದಲ ಲಸಿಕೆಯನ್ನು ಮಾರ್ಚ್ 15ಕ್ಕೆ ಪಡೆದಿದ್ದೀರಿ.

15 ದಿನಗಳ ನಂತರ ಲಸಿಕೆ ಪಡೆದಿರುವುದು ಒಬ್ಬ ಮಾದರಿ ಹಾಗೂ ಜನಪರ ಕಾಳಜಿಯುಳ್ಳ ನಾಯಕನ ಲಕ್ಷಣವೇ? ಇನ್ನು ದೇಶಕ್ಕಿಂತ ಕುಟುಂಬವೇ ಮೇಲೆಂದು ತಾವು ಭಾವಿಸುವ ತಮ್ಮ ಅಧಿನಾಯಕಿ ಮಾರ್ಚ್ 1 ರಿಂದ ಇಂದಿನವರೆಗೂ ಹಾಗೂ ತಮ್ಮ
ಅಧಿನಾಯಕ ಏ. ರಿಂದ ಇಲ್ಲಿಯವರೆಗೂ ಲಸಿಕೆಯನ್ನು ಏಕೆ ಪಡೆದಿಲ್ಲ? ಲಸಿಕೆ ಪಡೆದು ಇತರರಿಗೆ ಏಕೆ ಮಾದರಿಯಾಗಿಲ್ಲ? ಇವರಿಗೆ ಭಾರತೀಯ ಲಸಿಕೆ ಮತ್ತು ವಿಜ್ಞಾನಿಗಳ ಮೇಲೆ ನಂಬಿಕೆ ಇಲ್ಲವೇ?

ಅನುಮಾನ ವ್ಯಕ್ತಪಡಿಸಿದ್ದೀರಿ: ನಿಮ್ಮ ಅಧಿಕೃತ ಕಾಂಗ್ರೆಸ್ ಟ್ವೀಟರ್ ಖಾತೆಯಲ್ಲಿ, ಲಸಿಕೆಗಳು ಪರಿಣಾಮಕಾರಿಯಾಗಿದ್ದರೆ ಲಸಿಕೆ ಪಡೆದಿದ್ದವರಿಗೆ ಸೋಂಕು ತಗುಲಿದ್ದು ಹೇಗೆ, ಏಕೆ? ಎಂದು ಲಸಿಕೆಗಳ ಪರಿಣಾಮದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ನಮ್ಮ
ಲಸಿಕೆಗಳ ಬಗ್ಗೆ ಕರ್ನಾಟಕ ಜನರಲ್ಲಿ ಗೊಂದಲ ಮೂಡಿಸಿದವರು ತಾವೇ ಅಲ್ಲವೇ? ಲಸಿಕೆ ಪಡೆದವರು ಕೋವಿಡ್‌ಗೆ ಒಳಗಾದ ವರು ಲಕ್ಷಣ ರಹಿತವಾಗಿದ್ದು, ಕೂಡಲೇ ಚೇತರಿಸಿಕೊಂಡಿದ್ದಾರೆ.

ಲಸಿಕೆ ಪಡೆದವರಲ್ಲಿ ಸಾವಿನ ಪ್ರಮಾಣ ತೀರಾ ಅಂದರೆ ತೀರಾ ವಿರಳ. ಈ ಸಾಮಾನ್ಯ ಅರಿವು ತಮಗೇಕಿಲ್ಲ? ತಮ್ಮದು ಇಬ್ಬಗೆ ನೀತಿ. ಹೇಗೆ ಬೇಕೋ ಹಾಗೆ ಹೊರಳುವ ಮನಸ್ಥಿತಿ. ಮೇ 18ರಂದು ಇದೇ ಟ್ವೀಟರ್ ಖಾತೆಯಿಂದ ‘ಕರೋನಾ ಎದುರಿಸಲು
ಲಸಿಕೆಯೊಂದೇ ಮಾರ್ಗ. ಶಾಸಕರ ನಿಧಿಯಿಂದ 90 ಕೋಟಿ, ಕೆಪಿಸಿಸಿ ವತಿಯಿಂದ 10 ಕೋಟಿ ಒಟ್ಟಾರೆ 100 ರು. ಕೋಟಿ ಯೊಂದಿಗೆ ಕಾಂಗ್ರೆಸ್ ಲಸಿಕೆ ಯೋಜನೆ ರೂಪಿಸಿದೆ ಎಂದು ಟ್ವೀಟ್ ಮಾಡಿದ್ದೀರಿ.

ಏ.16ರಂದು ತಾವೇ ಅನುಮಾನ ವ್ಯಕ್ತಪಡಿಸಿ ಈಗ ವ್ಯಾಕ್ಸೀನ್ ಇಲ್ಲವೆಂದು ಅರಚಾಡುವವರು ನೀವೇ. ಈ ಶಾಸಕರ ನಿಧಿ ಸರಕಾರದಲ್ಲವೇ? ಅದನ್ನು ನೀಡುವ ಮತ್ತು ಪಡೆಯುವ ಅಧಿಕಾರ ಮುಖ್ಯಮಂತ್ರಿಗಳು ಹಾಗೂ ಸರಕಾರಕ್ಕಿದೆ.

ಲಾಭಕ್ಕೆ ಮಾರಿಕೊಂಡಿಲ್ಲ: ಭಾರತವು ಗವಿ-ಕೋವಾಕ್ಸ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಸೀರಂ ಇನ್ ಟಿಟ್ಯೂಟ್‌ನ ಪತ್ರಿಕಾ ಪ್ರಕಟಣೆಯಂತೆ ಭಾರತವು ಗವಿ-ಕೋವಾಕ್ಸ್ ಒಪ್ಪಂದದನ್ವಯ ಸ್ವಲ್ಪ ಪ್ರಮಾಣದ ಲಸಿಕೆಯನ್ನು ಒಕ್ಕೂಟದ ಸದಸ್ಯ ರಾಷ್ಟ್ರ ಗಳಿಗೆ ಒಪ್ಪಂದದನ್ವಯ ವಿತರಿಸಲಾಗಿದೆ. ಇದು ಸಿದ್ದರಾಮಯ್ಯನವರು ಹೇಳುವ ಹಾಗೆ ಲಾಭಕ್ಕೆ ಮಾರಿ ಕೊಂಡ ಲಸಿಕೆಗಳಲ್ಲ. ಸೀರಂ ಇನ್ಸ್‌ಟಿಟ್ಯೂಟ್ ಸಹ ಆಸ್ಟ್ರಾಜೆನಿಕ್ ಕಂಪನಿಯ ಹಕ್ಕು ಸ್ವಾಮಿತ್ವದ ಲಸಿಕೆಯನ್ನು ಭಾರತದಲ್ಲಿ ಉತ್ಪಾದನೆ ಮಾಡುತ್ತದೆ. ಈ ಹಕ್ಕು ಸ್ವಾಮ್ಯದ ಒಪ್ಪಂದದನ್ವಯ ಇಂಗ್ಲೆಂಡ್ ದೇಶಕ್ಕೆ ಸ್ವಲ್ಪ ಲಸಿಕೆಯನ್ನು ರಫ್ತು ಮಾಡಲು ಅನುವು ಮಾಡಿಕೊಟ್ಟಿದೆ.

ಒಂದೇ ಒಂದು ಲಸಿಕೆಯೂ ಲಾಭಕ್ಕಾಗಿ ರಫ್ತು ಮಾಡಲಾಗಿಲ್ಲ, ಅಲ್ಲದೇ ಭಾರತದ ಕೋವ್ಯಾಕ್ಸೀನ್ ಲಸಿಕೆಯ ಹಕ್ಕು ಸ್ವಾಮ್ಯತ್ವ ವನ್ನು ಭಾರತ ಸರಕಾರ ಉಳಿದೆಲ್ಲ ಭಾರತೀಯ ಔಷಧ ಉತ್ಪಾದಕ ಕಂಪನಿಗಳೂ ಈ ಲಸಿಕೆಯನ್ನು ಉತ್ಪಾದನೆ ಮಾಡಲು
ಮುಕ್ತಗೊಳಿಸಿದೆ.

ಕಾಯಕವೇ ಕೈಲಾಸ ತತ್ವ: ಈ ವಿಷಯಗಳು ರಾಜ್ಯಕ್ಕೆ ಸಂಬಂಽಸಿದ್ದಾದರೂ ಕೇಂದ್ರ ಸರಕಾರವು ಗಂಭೀರವಾಗಿ ಪರಿಗಣಿಸಿ ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವದಂತೆ ಕಾರ್ಯಪ್ರವೃತ್ತವಾಗಿ ಲಸಿಕೆ ವಿಚಾರವನ್ನು ಪರಿಹರಿಸುವಲ್ಲಿ ಯಶಸ್ವಿ ಯಾಗಿದೆ.

ಮಾನ್ಯ ಸಿದ್ದರಾಮಯ್ಯನವರೇ, ತಾವು ಕೇಳಿರುವ ಪ್ರಶ್ನೆಗಳಲ್ಲಿ ಪ್ರಮುಖ ವಿಚಾರ ಲಸಿಕೆ. ಈ ವಿಷಯದಲ್ಲಿ ತಾವು ಅರ್ಥೈಸಿಕೊಳ್ಳ ಬೇಕಾದ ವಿಷಯವೆಂದರೆ ಲಸಿಕೆ ಉತ್ಪಾದನೆಯು ಮೊಸರು ಕಡಿದು ಮಜ್ಜಿಗೆ ಮಾಡುವಷ್ಟು ಸುಲಭವಲ್ಲ. ಈ ಬಿಕ್ಕಟ್ಟಿನ ಸಮಯದಲ್ಲಿ ತಾವು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

ಸಾವು ಬದುಕಿನ ಪ್ರಶ್ನೆಯಾಗಿರುವ ಲಸಿಕೆ ವಿಷಯಕ್ಕೆ ಯಾವುದೇ ರಾಜಕೀಯ ಬಣ್ಣವನ್ನು ಬಳಿಯುವುದು ತಪ್ಪು. ದೇಶದ ಹಿತದೃಷ್ಟಿಗಾಗಿ ಶ್ರಮಿಸಬೇಕೇ ಹೊರತು ಸುಳ್ಳು ಪ್ರಚಾರ ಮಾಡಬಾರದು. ಇದು ನಿಮ್ಮಂಥ ಪ್ರಜ್ಞಾವಂತರಿಗೆ ತಕ್ಕುದಲ್ಲ. ಈಗ ಕೆಟ್ಟ ರಾಜಕೀಯ ಮಾಡುವ ಬದಲಿಗೆ ಒಳ್ಳೆಯದನ್ನು ಮಾಡಿ.

ರಾಜಕೀಯ ಮುಖ್ಯವೇ ಅಥವಾ ರಾಷ್ಟ್ರೀಯ ಹಿತಾಸಕ್ತಿ ಮುಖ್ಯವೇ ಎಂಬುದನ್ನು ತಾವು ನಿರ್ಧರಿಸಬೇಕು.

ವಂದನೆಗಳು
ಪ್ರಲ್ಹಾದ ಜೋಶಿ