ನವದೆಹಲಿ: ಅಲೋಪಥಿ ವೈದ್ಯಕೀಯ ಪದ್ಧತಿ ಕುರಿತು ಯೋಗ ಗುರು ರಾಮದೇವ್ ನೀಡಿರುವ ಹೇಳಿಕೆ ವಿರೋಧಿಸಿ ವೈದ್ಯರ ಸಂಘಗಳ ಒಕ್ಕೂಟ (ಫೋರ್ಡಾ) ಮಂಗಳವಾರ ಪ್ರತಿಭಟನೆ ಆರಂಭಿಸಿದೆ.
‘ರಾಮ್ದೇವ್ ಕ್ಷಮೆಯಾಚಿಸಬೇಕು. ಇಲ್ಲವೇ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒಕ್ಕೂಟದ ಸದಸ್ಯರು ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನೆ ಆರಂಭಿಸಿದ್ದಾರೆ.
‘ಅಲೋಪಥಿ ವೈದ್ಯಕೀಯ ಪದ್ಧತಿ ಕುರಿತು ಮಾತನಾಡಲು ಅರ್ಹತೆ ಇಲ್ಲದ ರಾಮದೇವ್, ಆ ಪದ್ಧತಿ ವಿರುದ್ಧ ಟೀಕೆ ಮಾಡಿದ್ದಾರೆ. ಅವರ ಟೀಕೆಗಳ ವಿರುದ್ಧ ನಾವು ಮಂಗಳವಾರ ಪ್ರತಿಭಟನೆ ಆರಂಭಿಸಿ ದ್ದೇವೆ’ ಎಂದು ಸಂಘಟ ನೆಯ ಹಿರಿಯ ಸದಸ್ಯರೊಬ್ಬರು ತಿಳಿಸಿದರು.
‘ಕೋವಿಡ್ 19 ಸಾಂಕ್ರಾಮಿಕವಿರುವ ಈ ದಿನಗಳಲ್ಲಿ ಇಂಥ ಹೇಳಿಕೆಗಳು ತಮ್ಮ ಜೀವ ಪಣಕ್ಕಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡು ತ್ತಿರುವ ವೈದ್ಯರ ಮನೋ ಸ್ಥೈರ್ಯದ ಮೇಲೆ ತೀವ್ರ ಪರಿಣಾಮ ಬೀರಿವೆ. ಆದ್ದರಿಂದ, ರಾಮ್ದೇವ್ ತಮ್ಮ ಹೇಳಿಕೆಗೆ ಬೇಷರತ್ತಾಗಿ ಸಾರ್ವಜನಿಕ ಕ್ಷಮೆಯಾಚಿಸಬೇಕು ಅಥವಾ ಸರ್ಕಾರ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ನಾವು ಒತ್ತಾಯಿಸುತ್ತೇವೆ’ ಎಂದು ಒಕ್ಕೂಟದ ಸದಸ್ಯರೊಬ್ಬರು ಆಗ್ರಹಿಸಿದ್ದಾರೆ.