Thursday, 12th December 2024

ಅವಕೃಪೆಗೆ ಒಳಗಾಗುತ್ತಿರುವ ರಾಜ್ಯವೊಂದಿದ್ದರೆ ಅದು ಕರ್ನಾಟಕ

ವಿದ್ಯಮಾನ

ಚಂದ್ರಶೇಖರ ಬೇರಿಕೆ

ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುವ ಕರ್ನಾಟಕ ಭಾರತದ ಜಿಡಿಪಿಗೆ ಅತಿ ಹೆಚ್ಚಿನ ಕೊಡುಗೆ ನೀಡುವ ಟಾಪ್ 5
ರಾಜ್ಯಗಳ ಪಟ್ಟಿಯಲ್ಲಿ ಒಂದು. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ನ್ಯಾಯವಾಗಿ ದಕ್ಕಬೇಕಾದ ವಿಚಾರದಲ್ಲಿ ಕರ್ನಾಟಕ ಹಿಂದಿನಿಂದಲೂ ತಾರತಮ್ಯ ಧೋರಣೆಗೆ ಒಳಗಾಗಿದ್ದೇ ಹೆಚ್ಚು.

ಅದು ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತದಲ್ಲಿದ್ದರೂ ಅಥವಾ ಬೇರೆ ಬೇರೆ ಪಕ್ಷ ಆಡಳಿತದಲ್ಲಿದ್ದರೂ ಈ ವಿಚಾರ ದಲ್ಲಿ ಯಾವ ಬದಲಾವಣೆಯೂ ಇಲ್ಲ. ಹಾಗಾಗಿ ಎಲ್ಲಾ ರಂಗಗಳಲ್ಲೂ ನಿರ್ಲಕ್ಷ ಕ್ಕೆ, ಅವಕೃಪೆಗೆ ಒಳಗಾಗುತ್ತಿರುವ ರಾಜ್ಯವೊಂದಿ ದ್ದರೆ ಅದು ಕರ್ನಾಟಕ. ಇದು ಕೇವಲ ಆಡಳಿತಾತ್ಮಕ ಮತ್ತು ಬಜೆಟ್ ಹಂಚಿಕೆ ವಿಚಾರಕ್ಕಷ್ಟೇ ಸೀಮಿತವಲ್ಲ. ಕೇಂದ್ರ ಸ್ವಾಮ್ಯದ ಉದ್ದಿಮೆಗಳು, ಸಂಸ್ಥೆಗಳು, ಕೈಗಾರಿಕೆಗಳಲ್ಲಿ ಉದ್ಯೋಗ ನೀಡಿಕೆಯಲ್ಲೂ ಕರ್ನಾಟಕದ ಅವಗಣನೆ ಯನ್ನು ಕಾಣಬಹುದು.

ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕೇಂದ್ರ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಅಂಗ ಸಂಸ್ಥೆ ಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ ಲಿಮಿಟೆಡ್ (ಎಂಆರ್ ಪಿಎಲ್)ನ ಉದ್ಯೋಗ ನೇಮಕಾತಿಯಲ್ಲಿ ಕರ್ನಾಟಕದವರನ್ನು ಕಡೆಗಣಿಸಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ.

ಸಾರ್ವಜನಿಕ ರಂಗದ ಒಎನ್‌ಜಿಸಿ 1988ರ ಮಾರ್ಚ್ 7 ದು ಮಂಗಳೂರಿನಲ್ಲಿ ತೈಲ ಸಂಸ್ಕರಣಾ ಘಟಕ (ಎಂಆರ್’ಪಿಎಲ್) ಸ್ಥಾಪಿಸಿತ್ತು. ಕರ್ನಾಟಕದ, ಅದರಲ್ಲೂ ಈ ಕೈಗಾರಿಕೆಗಾಗಿ ಭೂಮಿಯನ್ನು ಕಳೆದುಕೊಂಡ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಭರವಸೆಯನ್ನು ಎಂಆರ್‌ಪಿಎಲ್ ಮೂಡಿಸಿತ್ತು. ಆದರೆ ಇದೇ ಎಂಆರ್‌ಪಿಎಲ್ ಈಗ ಉದ್ಯೋಗ ನೇಮಕಾತಿಯಲ್ಲಿ ಅನ್ಯಾಯ ಎಸಗಿದೆ. ಅಕ್ಟೋಬರ್ 2019ರ ನೇಮಕಾತಿಗೆ ಸಂಬಂಧಪಟ್ಟಂತೆ ಒಟ್ಟು 224 ಹುದ್ದೆಗಳ ಪೈಕಿ ಕರ್ನಾಟಕಕ್ಕೆ ದಕ್ಕಿದ್ದು 13 ಹುದ್ದೆಗಳು.

ಅದರಲ್ಲೂ ಕರಾವಳಿ ಭಾಗಕ್ಕೆ ದೊರಕಿದ್ದು ಕೇವಲ 4 ಹುದ್ದೆಗಳು. ಸಿಂಹಪಾಲು ಹುದ್ದೆಗಳು ಉತ್ತರ ಭಾರತೀಯರಿಗೆ ಮೀಸಲು! ಇಲ್ಲಿಯ ನೆಲ, ಜಲ, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿ ಹೊರ ರಾಜ್ಯದವರಿಗೆ ಉದ್ಯೋಗಗಳಲ್ಲಿ ಪ್ರಾತಿನಿಧ್ಯ ನೀಡುತ್ತಿದೆ. ಇತ್ತ ಕರಾವಳಿ ಭಾಗದ ಸ್ಥಳೀಯ ಉದ್ಯೋಗಾಕಾಂಕ್ಷಿಗಳು ಬೆಂಗಳೂರು,
ಮುಂಬೈ ಅಲ್ಲದೇ ಕೊಲ್ಲಿ ರಾಷ್ಟ್ರಗಳಾದ ದುಬೈ, ಸೌದಿಗಳನ್ನು ನೆಚ್ಚಿಕೊಳ್ಳುವಂತಾಗಿದ್ದು ದುರಂತ.

ರಾಜ್ಯದ ಕರಾವಳಿ ಭಾಗದ ಜಿಗಳು ಕೈಗಾರಿಕೆಗಳು, ಉದ್ದಿಮೆಗಳಿಗೆ ಪ್ರಶಸ್ತವಾದ ಪ್ರದೇಶ. ಭೂ, ರೈಲು, ಜಲ ಮತ್ತು ವಾಯು ಸಾರಿಗೆ ಈ ನಾಲ್ಕೂ ವಿಧದ ಸಾರಿಗೆ ಸೌಲಭ್ಯಗಳನ್ನು ಹೊಂದಿರುವ ಪ್ರದೇಶ. ಇದೇ ಕಾರಣಕ್ಕಾಗಿ ಒಎನ್‌ಜಿಸಿ ಈ ಬೃಹತ್ ಪ್ರಮಾಣದ ತೈಲ ಸಂಸ್ಕರಣಾ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಿದ್ದು, ಬಾಳಾ, ಕಳವಾರು, ಕುತ್ತೆತ್ತೂರು, ಕಾಟಿಪಲ್ಲ ಮತ್ತು ಆದ್ಯಪಾಡಿ ಎಂಬ 5 ಗ್ರಾಮಗಳ ನಿವಾಸಿಗಳನ್ನು ಸ್ಥಳಾಂತರಿಸಿ ಸಾವಿರಾರು ಎಕರೆ ವಾಣಿಜ್ಯ ಉದ್ದೇಶಿತ ಕೃಷಿಯೋಗ್ಯ ಭೂಮಿಯನ್ನು ಆಕ್ರಮಿಸಿಕೊಂಡಿತ್ತು.

ಆ ಬಳಿಕ ಈ ಘಟಕವನ್ನು ಇನ್ನೂ ವಿಸ್ತರಿಸಿಕೊಳ್ಳುತ್ತಿದ್ದು, ಇನ್ನಷ್ಟು ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದೆ. ಕೈಗಾರಿಕೆ ಸ್ಥಾಪನೆ ಯಾಗುವ ಸಂದರ್ಭದಲ್ಲಿ ಕರಾವಳಿಯ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಪ್ರಮಾಣದ ಉದ್ಯೋಗವನ್ನು ಒದಗಿಸಿ ತಾಯ್ನಾಡಿನ ಕೆಲಸ ಮಾಡುವ ಅವಕಾಶಗಳ ಬಗ್ಗೆ ಆಶ್ವಾಸನೆ ನೀಡಿತ್ತು. ಇದರಿಂದಾಗಿ ದೂರದ ಊರುಗಳಿಗೆ, ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ವನ್ನು ಅರಸಿಕೊಂಡು ಹೋಗುವ ಪ್ರಮೇಯವಿರುವುದಿಲ್ಲ ಎಂಬುದನ್ನು ಜನತೆಯ ಮುಂದಿಟ್ಟಿತ್ತು. ನಿರುದ್ಯೋಗ ನಿವಾರಣೆಯ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಕನಸನ್ನು ಯುವ ಜನತೆಯ ತಲೆಯಲ್ಲಿ ಬಿತ್ತಿ ಆ ಭಾಗದ ಜನರನ್ನು ಸುಮ್ಮನಾ ಗಿಸುವ ಪ್ರಯತ್ನವನ್ನು ಮಾಡಿತ್ತು.

ಈ ಮೂಲಕ ಆ ಭಾಗದ ಜನರು ತಮ್ಮ ಭೂಮಿಯನ್ನು ಬಿಟ್ಟು ಕೊಡುವಂತೆ ಮನವೊಲಿಸಲಾಯಿತು. ಆದರೆ ಇದೀಗ ಆ ಭಾಗದ ಯುವಜನರು ಉದ್ಯೋಗಕ್ಕಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ದುರದೃಷ್ಟಕರ. ಎಂಆರ್‌ಪಿಎಲ್ ಸ್ಥಾಪನೆಯಾದ ಬಳಿಕ ಈ ಘಟಕಕ್ಕಾಗಿ ಭೂಮಿಯನ್ನು ಕಳೆದುಕೊಂಡವರ ಪೈಕಿ ಕೆಲವರಿಗೆ ಭೂಸ್ವಾಧೀನ ಕಾಯಿದೆಯ ನಿಯಮಗಳನ್ವಯ ಸಂಸ್ಥೆಯು ಉದ್ಯೋಗಗಳನ್ನು ನೀಡಿದ್ದು, ಉಳಿದಂತೆ ಸ್ಥಳೀಯರಲ್ಲಿ ಈ ಕಂಪನಿಗೆ ಬೇಕಾದ ನುರಿತ ಅಭ್ಯರ್ಥಿಗಳಿಲ್ಲ’ ಎಂಬ ಕಾರಣ ನೀಡಿ ಉದ್ಯೋಗದಲ್ಲಿ ಹೊರ ರಾಜ್ಯದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂಬ ಆರೋಪವಿದೆ.

ಒಂದು ಅಂದಾಜಿನ ಪ್ರಕಾರ ಮಂಗಳೂರಿನಲ್ಲಿ ಸ್ಥಾಪನೆಯಾಗಿರುವ ಎಂಆರ್‌ಪಿಎಲ್ ಮತ್ತು ಒಎನ್‌ಜಿಸಿ ಕಂಪನಿಗಳಲ್ಲಿ ಕರಾವಳಿ ಭಾಗದ ಕನಿಷ್ಠ ಶೇಕಡ 2 ರಷ್ಟು ಜನರಿಗೂ ಉದ್ಯೋಗ ಲಭಿಸಿಲ್ಲಎಂಬ ವರದಿಯಿದೆ. ಗುತ್ತಿಗೆ ಆಧಾರಿತ ಕೆಲಸಗಳಿಗಷ್ಟೇ
ಸ್ಥಳೀಯರನ್ನು ಪರಿಗಣಿಸಿ ಖಾಯಂ ಹುದ್ದೆಗಳಲ್ಲಿ ಹೊರ ರಾಜ್ಯದವರಿಗೆ ಆದ್ಯತೆ ನೀಡುತ್ತಿದೆ. ಎಂಆರ್‌ಪಿಎಲ್‌ನ ಮಾತೃಸಂಸ್ಥೆ ಯಾದ ಒಎನ್‌ಜಿಸಿ ಯಾವ ರಾಜ್ಯದಲ್ಲಿ ತನ್ನ ಘಟಕವನ್ನು ಸ್ಥಾಪಿಸಿದೆಯೋ ಆ ರಾಜ್ಯದ ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ನೇಮಕಾತಿ ಸಂದರ್ಭದಲ್ಲಿ ಆದ್ಯತೆಯನ್ನು ನೀಡುವುದು ಕಂಡು ಬರುತ್ತಿದೆ.

ಒಎನ್‌ಜಿಸಿ ಅಸ್ಸಾಂ ಘಟಕವು ಉದ್ಯೋಗಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ ಪ್ರಕಟಣೆಯಲ್ಲಿ ಅಭ್ಯರ್ಥಿಗಳಿಗೆ ಅಸ್ಸಾಂ ರಾಜ್ಯ ನಿವಾಸವನ್ನು ಹೊಂದಿರುವ ಭಾರತೀಯ ನಾಗರಿಕರು’ ಎಂಬ ಷರತ್ತನ್ನು ವಿಧಿಸಿದೆ. ಅಂದರೆ ಕೈಗಾರಿಕೆಗಳು ಉದ್ಯೋಗದಲ್ಲಿ ಕಡ್ಡಾಯವಾಗಿ ಆ ರಾಜ್ಯದವರಿಗೇ ಆದ್ಯತೆ ನೀಡಬೇಕು ಎಂಬ ನಿಯಮವನ್ನು ಅಸ್ಸಾಂ ರಾಜ್ಯ ರೂಪಿಸಿರುವುದು ನಮಗೆ ಮನದಟ್ಟಾಗುತ್ತದೆ. ಇದೇ ರೀತಿಯ ನೇಮಕಾತಿ ಪ್ರಕಟಣೆಗಳನ್ನು ನಾವು ಇತರ ರಾಜ್ಯದಲ್ಲೂ ಗಮನಿಸಬಹುದು.

ಕೇಂದ್ರದ ತ್ರಿಭಾಷಾ ಸೂತ್ರ ಮತ್ತು ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸಿನಡಿ ಎಲ್ಲಾ ಸಾರ್ವಜನಿಕ ವಲಯದ ಉದ್ದಿಮೆ ಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ನೀಡಬೇಕಾಗುತ್ತದೆ. 1983ರಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಯವರು ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಲು ಸರೋಜಿನಿ ಮಹಿಷಿ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು ಒಟ್ಟು 58 ಶಿಫಾರಸ್ಸುಗಳನ್ನು ಒಳಗೊಂಡ ಅಂತಿಮ ವರದಿಯನ್ನು 1986ರ ಡಿಸೆಂಬರ್ 30 ರಂದು ಕರ್ನಾಟಕ ಸರಕಾರಕ್ಕೆ ಸಲ್ಲಿಸಿತ್ತು.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವಂತೆ ಈ ಸಮಿತಿಯು ಶಿಫಾರಸ್ಸು ಮಾಡಿದ್ದು, ಆ ಪೈಕಿ ರಾಜ್ಯ ಸರಕಾರಿ ವಲಯ ಉದ್ಯಮಗಳಲ್ಲಿ ಶೇಕಡಾ 100, ರಾಜ್ಯ ಸರಕಾರಿ ವಲಯ ಕಚೇರಿಗಳಲ್ಲಿ ಶೇಕಡಾ 100 ಮತ್ತು ಕೇಂದ್ರ ಸರಕಾರಿ ವಲಯ ಉದ್ಯಮಗಳಲ್ಲಿ, ಕೇಂದ್ರ ಸರಕಾರಿ ವಲಯ ಕಚೇರಿಗಳಲ್ಲಿ, ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ, ಖಾಸಗಿ ಉದ್ಯಮಗಳಲ್ಲಿ (ಕಾರ್ಖಾನೆ, ಐಟಿ-ಬಿಟಿ ಮುಂತಾದ) ‘ಎ’ ಗ್ರೇಡ್ ಉದ್ಯೋಗದಲ್ಲಿ ಶೇಕಡಾ 65, ‘ಬಿ’ ಗ್ರೇಡ್ ಉದ್ಯೋಗ ದಲ್ಲಿ ಶೇಕಡಾ 80, ‘ಸಿ’ ಗ್ರೇಡ್ ಉದ್ಯೋಗದಲ್ಲಿ ಶೇಕಡಾ 100 ಹಾಗೂ ‘ಡಿ’ ಗ್ರೇಡ್ ಉದ್ಯೋಗದಲ್ಲಿ ಶೇಕಡಾ ೧೦೦ರಂತೆ ಹುದ್ದೆ ಗಳನ್ನು ಮೀಸಲಿಡಬೇಕು ಎಂದು ಸ್ಪಷ್ಟಪಡಿಸಿತ್ತು.

ಕರ್ನಾಟಕ ಕೈಗಾರಿಕಾ ನೀತಿ 2014-19ರಲ್ಲಿ ಸ್ಥಳೀಯ ಕನ್ನಡಿಗ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಅಂಶವನ್ನು
ಪ್ರತಿಪಾದಿಸಿದೆ. ಇತ್ತೀಚೆಗಷ್ಟೇ ಅನುಮೋದನೆಗೊಂಡಿರುವ 2020-25ನೇ ಸಾಲಿನ ಕರ್ನಾಟಕ ಕೈಗಾರಿಕಾ ನೀತಿಯಲ್ಲೂ ನೇಮ ಕಾತಿಯ ಒಟ್ಟು ಆಧಾರದ ಮೇಲೆ ಕನಿಷ್ಠ ಶೇಕಡಾ 79ರಷ್ಟು ಸ್ಥಳೀಯರನ್ನು ಹಾಗೂ ಗ್ರೂಪ್ ‘ಸಿ’ ಮತ್ತು ‘ಡಿ’ ಉದ್ಯೋಗ ಗಳಲ್ಲಿ ಶೇಕಡಾ 100ರಷ್ಟು ಸ್ಥಳೀಯ ಉದ್ಯೋಗಿಗಳಿಗೆ ಆದ್ಯತೆಯನ್ನು ಕಡ್ಡಾಯಗೊಳಿಸು ವಿಕೆಯ ಅಂಶವನ್ನು ಒತ್ತಿ ಹೇಳಿದೆ.

ಎಂಆರ್‌ಪಿಎಲ್ ಕಂಪನಿಯು ಸ್ಥಾಪನೆಯಾದ ಬಳಿಕ ಸುತ್ತಮುತ್ತಲಿನ ಭಾಗದ ಪರಿಸರ ಮಾಲಿನ್ಯ ಗೊಂಡಿದ್ದು, ಈ ಭಾಗದ ಜನತೆ ಹಲವು ರೀತಿಯ ಮಾಲಿನ್ಯ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗಿದ್ದಾರೆ ಎಂಬ ವರದಿಯೂ ಇದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪರಿಸರ ಮಾಲಿನ್ಯ ನಿಯಂತ್ರಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎನ್ನುತ್ತಾ ಎಂಆರ್‌ಪಿಎಲ್ ಘಟಕಗಳಿಂದ ಉಂಟಾದ ಪರಿಸರ ಮಾಲಿನ್ಯಕ್ಕೆ ಸಂಬಂಧಪಟ್ಟಂತೆ ಆ ಭಾಗದ ಜನರ ಕುಂದುಕೊರತೆಗಳನ್ನು ಪರಿಹರಿಸಲು 3 ಸದಸ್ಯರ ಒಂದು ಸಮಿತಿ ರಚಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಯವರಿಗೆ ಏಪ್ರಿಲ್ 5, 2015 ರಂದು ನಿರ್ದೇಶಿಸಿರುವುದು ಆ ಭಾಗದ ಪರಿಸರ ಮಾಲಿನ್ಯ ಸಮಸ್ಯೆಯನ್ನು ಪುಷ್ಠೀಕರಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು ಮಂಗಳೂರಿನ ಸಮಗ್ರ ಉದ್ಯಮವು ಪೆಟ್ರೋಲಿಯಂ ಸಚಿವಾಲಯದ ಮಹತ್ವದ ಕೇಂದ್ರವಾಗಿ ಗುರುತಿಸಿಕೊಂಡಿದೆ. ವಾಯು, ಜಲ, ರಸ್ತೆ, ರೈಲು ಸಂಪರ್ಕವಿರುವ ಮಂಗಳೂರು ಕೈಗಾರಿಕೋದ್ಯಮಗಳ ಜತೆಗೆ ಬೌದ್ಧಿಕ ಉದ್ಯಮಗಳಾದ ವೈದ್ಯಕೀಯ, ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಮುಂಚೂಣಿ ಯಲ್ಲಿದೆ.
ಇಲ್ಲಿರುವ ಜನರು ಉದ್ಯೋಗಕ್ಕಾಗಿ ಮುಂಬೈ, ಕೊಲ್ಲಿ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದು, ಇ ಉದ್ಯಮ ಸ್ಥಾಪಿಸುವ ಪರಿಸ್ಥಿತಿ
ನಿರ್ಮಿಸಬೇಕಿದೆ’ ಎಂದಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ, ವೃತ್ತಿ ಕೌಶಲ್ಯದಲ್ಲಿ ಮನ್ನಣೆ ಗಳಿಸಿಕೊಂಡು, ಸಾಮಾಜಿಕ ಜವಾಬ್ದಾರಿ ನಿರ್ವಹಣೆ ಯಲ್ಲಿ ಬದ್ಧತೆ ಮತ್ತು ವಿವೇಕತನ ತೋರಿ ಬುದ್ಧಿವಂತರ ಜಿಲ್ಲೆ ಎಂಬ ಹಿರಿಮೆಯನ್ನು ಹೊಂದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಯಲ್ಲಿ ಎಂಆರ್‌ಪಿಎಲ್‌ಗೆ ಬೇಕಾದ ನುರಿತ ಸ್ಥಳೀಯ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂಬ ಸಮರ್ಥನೆ ಹಾಸ್ಯಾಸ್ಪದ. ಎಂಆರ್‌ ಪಿಎಲ್ ಹಲವು ವರ್ಷಗಳಿಂದ ಇದೇ ತೆರನಾದ ಧೋರಣೆಯನ್ನು ಅನುಸರಿಸುತ್ತಿದ್ದು, ಇದರ ವಿರುದ್ಧ ಹಲವು ಹೋರಾಟಗಳೂ ನಡೆದಿವೆ. ಆದರೂ ಈ ಸಂಸ್ಥೆ ತನ್ನ ಧೋರಣೆಯನ್ನು ಬದಲಿಸಿಕೊಳ್ಳುತ್ತಿಲ್ಲ.

2019ರ ಅಕ್ಟೋಬರ್‌ನಲ್ಲಿ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕರು ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವಂತೆ
ನಿರ್ದಿಷ್ಟಪಡಿಸಲು ಯಾವುದಾದರೂ ಸ್ಥಳೀಯ ಕಾನೂನು ಇದ್ದರೆ ನಾವು ಸ್ಥಳೀಯರಿಗೆ ಆದ್ಯತೆ ನೀಡುವೆವು. ಆದರೆ ನಿರ್ದಿಷ್ಟ
ಕಾನೂನಿನ ಅನುಪಸ್ಥಿತಿಯಲ್ಲಿ ನಾವು ಕನಿಷ್ಠ ಆದ್ಯತೆಯನ್ನು ನೀಡುವಂತಾಗಿದೆ’ ಎಂದಿದ್ದರು. ಅಂದರೆ ನೇಮಕಾತಿ ವಿಷಯ ದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿಲ್ಲ ಎಂಬುದನ್ನು ಎಂಆರ್‌ಪಿಎಲ್ ನೇರವಾಗಿ ಒಪ್ಪಿಕೊಂಡಂತಾಯಿತು. ಆದರೆ ಸ್ಥಳೀಯರಿಗೆ ಉದ್ಯೋಗ ನೀಡುವ ಬಗೆಗಿನ ಕಾನೂನಿನ ಅನುಪಸ್ಥಿತಿಯ ವಿಚಾರಕ್ಕೆ ರಾಜ್ಯ ಸರಕಾರವೇ ಸ್ಪಷ್ಟನೆ ನೀಡಬೇಕಾಗುತ್ತದೆ.

ಕೈಗಾರಿಕಾ ನೀತಿಗಳಲ್ಲಿ ಸರಕಾರ ಈ ಬಗ್ಗೆ ಪ್ರಸ್ತಾಪ ಮಾಡುವ ಜತೆಗೆ ಅದನ್ನು ಕಾನೂನುಗಳ ಮೂಲಕವೂ ಜಾರಿಗೆ ತರಬೇಕು.
ನಮ್ಮ ನೆರೆಯ ರಾಜ್ಯಗಳು ಆ ರಾಜ್ಯದ ಭಾಷಿಕ ನಿವಾಸಿಕರಿಗೆ ಉದ್ಯೋಗವನ್ನು ಮೀಸಲಿರಿಸಿದೆ. ಅದರಂತೆ ಬೇರೆ ರಾಜ್ಯಗಳಲ್ಲೂ ಆಯಾಯ ರಾಜ್ಯದ ಯುವಜನರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ನಿಯಮಗಳನ್ನು ರೂಪಿಸಿಕೊಂಡಿದ್ದು, ಅಲ್ಲಿ ಹೊರ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಕಡಿಮೆ. ಹಾಗಾಗಿ ಕರ್ನಾಟಕದವರು ಆ ರಾಜ್ಯಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಿಲ್ಲ.

ಇತ್ತ ಕರ್ನಾಟಕದಲ್ಲೂ ಉದ್ಯೋಗದಲ್ಲಿ ಆದ್ಯತೆ ಕಲ್ಪಿಸದೇ ಹೋದರೆ ರಾಜ್ಯದ ಉದ್ಯೋಗಾಕಾಂಕ್ಷಿಗಳು ಎಲ್ಲಿಗೆ ಹೋಗಬೇಕು. ರಾಜ್ಯದಲ್ಲಿ ಅನೇಕ ಕೈಗಾರಿಕೆಗಳು ಎಂಆರ್ ಪಿಎಲ್ ಧೋರಣೆಯನ್ನು ಅನುಸರಿಸುತ್ತಿದೆ. ಕೈಗಾರಿಕೆಗಳನ್ನು ಸ್ಥಾಪಿಸಲು ಇಲ್ಲಿಯ ನೆಲ, ಜಲ, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳು ಬೇಕು. ಇಲ್ಲಿಯ ಜನರು ಪರಿಸರ ಮಾಲಿನ್ಯವನ್ನೂ ಸಹಿಸಿ ಕೊಂಡು ಸಹಕಾರ ನೀಡಬೇಕು. ಅದಕ್ಕಿಂತಲೂ ಮುಖ್ಯವಾಗಿ ಕಂಪನಿ ವಿಸ್ತರಿಸುತ್ತಿದ್ದಂತೆ ಆ ಭಾಗದ ಜನರು ಭೂಮಿ ಬಿಟ್ಟುಕೊ ಡಬೇಕು.

ಆದರೆ ಉದ್ಯೋಗದಲ್ಲಿ ಹೊರ ರಾಜ್ಯದವರಿಗೆ ಆದ್ಯತೆ ನೀಡಿದಾಗ ನಾವು ಕೈಗಾರಿಕಾಭಿವೃದ್ಧಿ, ಆರ್ಥಿಕಾಭಿವೃದ್ಧಿ, ಎಕಾನಮಿ
ಹಬ್ ಎಂಬ ಮಂತ್ರ ಪಠಿಸಿಕೊಂಡು ಕೂರಬೇಕು. ಕರ್ನಾಟಕದಲ್ಲಿ ಹೊರ ರಾಜ್ಯದವರಿಗೆ ಉದಾರತೆ ತೋರಲು ಕರ್ನಾಟಕ ಏನು ನುಸುಳುಕೋರರು ಅಥವಾ ವಲಸಿಗರ ಕೇಂದ್ರವೇ? ನಮ್ಮ ರಾಜ್ಯದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ನ್ಯಾಯ ದೊರಕಿಸಿ ಕೊಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದರೆ ಸರಳ ಉತ್ತರ ರಾಜಕೀಯ ಇಚ್ಛಾಶಕ್ತಿಯ ಕೊರತೆ.

ಜನಪ್ರತಿನಿಧಿಗಳ ಜಾಣ ಕುರುಡುತನದಿಂದಲೇ ಕರ್ನಾಟಕದ ಯುವಜನತೆ ತಾಯ್ನಾಡಿನಲ್ಲಿ ಉದ್ಯೋಗ ವಂಚಿತರಾಗುತ್ತಿದ್ದು, ಸಮಾಜದಲ್ಲಿ ಯುವಕರು ಅಹಿತಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರುದ್ಯೋಗವೇ ಕಾರಣ. ಉದ್ಯೋಗ ಸೃಷ್ಟಿಯ ಆಶ್ವಾಸನೆ ಈ ರಾಜಕಾರಣಿ ಮಹಾನುಭಾವರುಗಳಿಗೆ ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ನೆನಪಿಗೆ ಬರುತ್ತದೆ.

ಎಂಆರ್‌ಪಿಎಲ್ ವಿಚಾರದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಯ ಜನಪ್ರತಿನಿಧಿಗಳ ಒಟ್ಟಾರೆ ವೈಫಲ್ಯತೆ ಎದ್ದು ಕಾಣುತ್ತದೆ.
ಚುನಾವಣೆ ಸಂದರ್ಭದಲ್ಲಿ ಯಾವ ಆಧಾರದಲ್ಲಿ ಮತಯಾಚನೆ ಮಾಡಬೇಕು ಎಂಬುದನ್ನು ಅವರು ಬಹಳ ಚೆನ್ನಾಗಿ ಅರಿತಿ ದ್ದಾರೆ. ಯಾವುದೋ ಒಂದು ನಿರ್ದಿಷ್ಟ ಮತ್ತು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಗಿಟ್ಟಿಸಿಕೊಳ್ಳುವ ತಂತ್ರವನ್ನು ಅನುಸರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಕರಾವಳಿಯ ಯುವ ಜನತೆ ಆ ಭಾಗದ ರಾಜಕಾರಣಿಗಳಿಂದ ಉತ್ತಮ ಭವಿಷ್ಯವನ್ನು ನಿರೀಕ್ಷಿಸುವುದು ಮೂರ್ಖತನ ಎನಿಸಿ ಕೊಳ್ಳುತ್ತದೆ. ರಾಜಕಾರಣಿ ಗಳನ್ನು ನೆಚ್ಚಿಕೊಳ್ಳದೆ ಕರಾವಳಿಯ ಯುವಜನತೆ ಈಗ ಒಕ್ಕೊರಲಿನ ಧ್ವನಿ ಎತ್ತಿರುವುದು ಉತ್ತಮ ಬೆಳವಣಿಗೆ. ಅವಿಭಜಿತ ಜಿಯ ಜನಪ್ರತಿನಿಧಿಗಳು ಯುವಜನರ ಭವಿಷ್ಯಕ್ಕಾಗಿ ಉದ್ಯೋಗ ಸೃಷ್ಠಿಗೆ ಮುತುವರ್ಜಿ ವಹಿಸಿದರೆ
ಆ ಭಾಗದ ಯುವಜನತೆ ಹೊರ ರಾಜ್ಯಗಳಿಗೆ ಮತ್ತು ವಿದೇಶಗಳಿಗೆ ವಲಸೆ ಹೋಗುವುದು ತಪ್ಪಲಿದೆ ಮಾತ್ರವಲ್ಲ ಅವರ ಸೇವೆ ತಾಯ್ನಾಡಿಗೆ ಮುಡಿಪಾಗಲಿದೆ.