Sunday, 15th December 2024

ನೂತನ ಡಿಎಚ್‌ಒ ಅಕ್ರಮ ನೇಮಕ ?

ಮೆಡಿಕಲ್ ಮಿನಿಸ್ಟರ್, ವೈದ್ಯಕೀಯ ಇಲಾಖೆ ಕಣ್ಣಿಗೆ ಮಣ್ಣೆರಚಿದರೇ?
ಅಧಿಕಾರ ಸ್ವೀಕರಿಸಿದ 48 ಗಂಟೆಯೊಳಗೇ ಅಕ್ರಮ ಸುದ್ದಿ ಬಯಲು

ವಿಶೇಷ ವರದಿ: ನಾಗಯ್ಯ ಲಾಳನಕೆರೆ ಮಂಡ್ಯ

ಮಂಡ್ಯದ ನೂತನ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ.ಎನ್. ಧನಂಜಯ ಅವರ ನೇಮಕವೇ ಅಕ್ರಮ ಎಂಬ ಅಂಶವೀಗ ಹೊರಬಿದ್ದಿದೆ.

ನಿನ್ನೆಯಷ್ಟೇ ನಿವೃತ್ತರಾದ ಡಾ.ಮಂಚೆಗೌಡರಿಂದ ತೆರವಾದ ಸ್ಥಾನಕ್ಕೆ ನಿಯೋಜನೆಗೊಂಡಿರುವ ಡಾ. ಟಿ.ಎನ್. ಧನಂಜಯ ಅವರು ಅಧಿಕಾರ ಸ್ವೀಕರಿಸಿದ 48 ಗಂಟೆಯೊಳಗೇ ಅಕ್ರಮ ನೇಮಕದ ಸುದ್ದಿ ಬಹಿರಂಗವಾಗಿದೆ.

ಸರ್ಕಾರವೇ ನಿಗದಿಪಡಿಸಿರುವ ನಿಯಮದ ಪ್ರಕಾರ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ನೇಮಕಗೊಳ್ಳುವವರು ಕನಿಷ್ಠ 20 ವರ್ಷ ಗಳ ಸೇವಾ ಅವಧಿಯನ್ನು ಪೂರೈಸಿರಬೇಕು. ಆದರೆ, ಡಾ. ಟಿ.ಎನ್. ಧನಂಜಯ ಅವರು ಸಲ್ಲಿಸಿರುವ ಅವಧಿ ಕೇವಲ 17 ವರ್ಷ.
ಆದರೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನಾಗಿ ಸರ್ಕಾರವೇ ನೇಮಕ ಮಾಡಿ ಆದೇಶ ಹೊರಡಿಸಿದೆ.  ಇದರೊಂದಿಗೆ ಸರ್ಕಾರವೇ ತಾನೇ ರೂಪಿಸಿರುವ ನಿಯಮವನ್ನು ಉಲ್ಲಂಘಿಸಿದೆ.

ಗುತ್ತಿಗೆ ನೇಮಕವಾಗಿತ್ತು: ಲಭ್ಯವಿರುವ ಮಾಹಿತಿಯ ಪ್ರಕಾರ ಡಾ. ಟಿ.ಎನ್. ಧನಂಜಯ 2003ರಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದರು. ಮದ್ದೂರು ತಾಲೂಕಿನ ಕದಲೂರು ಆರೋಗ್ಯ ಕೇಂದ್ರಕ್ಕೆ 2003ರಲ್ಲಿ ಮೊದಲಿಗೆ ಗುತ್ತಿಗೆ ವೈದ್ಯರಾಗಿ
ನಿಯೋಜನೆಗೊಂಡಿದ್ದರು. 2007ರಲ್ಲಿ ಸರ್ಕಾರಿ ವೈದ್ಯರಾಗಿ ನೇಮಕಗೊಂಡರು. ಅಂತೆಯೆ ಪ್ರಸಕ್ತ ವರ್ಷ 2021ಕ್ಕೆ ಲೆಕ್ಕ ಹಾಕಿಕೊಂಡರೂ 17 ವರ್ಷವಷ್ಟೇ ತುಂಬಲಿದೆ.

ಹೀಗಿದ್ದರೂ ಸರ್ಕಾರ ಯಾವ ಆಧಾರದ ಮೇಲೆ ಡಾ. ಟಿ.ಎನ್. ಧನಂಜಯ ಅವರನ್ನು ನೇಮಕ ಮಾಡಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಡಾ. ಟಿ.ಎನ್. ಧನಂಜಯ ಅವರು ಮಂಡ್ಯ, ನಾಗಮಂಗಲ ಸೇರಿದಂತೆ ವಿವಿಧೆಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ದ್ದಾರೆ. ಮೊನ್ನೆಯವರೆಗೂ ತುಮಕೂರು ಜಿಲ್ಲಾ ಸಂತಾನ ಮತ್ತು ಮಕ್ಕಳ ಆರೋಗ್ಯಾಧಿಕಾರಿಯಾಗಿದ್ದರು. ಡಾ.ಕೆ. ಮಂಚೇಗೌಡ ನಿವೃತ್ತರಾದ ಹಿನ್ನೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೀಗ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಸರಕಾರಿ ದಾಖಲೆ ಪ್ರಕಾರವೇ 20 ವರ್ಷ ಪೂರೈಸದ ಡಾ. ಟಿ.ಎನ್. ಧನಂಜಯ ಅವರನ್ನು ಆರೋಗ್ಯ ಇಲಾಖೆ ಕಣ್ಮುಚ್ಚಿಕೊಂಡು
ನೇಮಕ ಮಾಡಿಕೊಂಡಿದೆಯೇ? ಎಂಬ ಪ್ರಶ್ನೆ ಆರೋಗ್ಯ ಇಲಾಖೆಯಲ್ಲಿಯೇ ಎದ್ದಿದೆ.

ರಾಜಕೀಯ ಪ್ರಭಾವ: ಡಾ. ಟಿ.ಎನ್. ಧನಂಜಯ ಅವರು ಅರ್ಹತೆ ಇಲ್ಲದಿದ್ದರೂ ಪ್ರಭಾವಿ ರಾಜಕೀಯ ನಾಯಕರ ಬೆಂಬಲದಿಂದ ಅಧಿಕಾರ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಇಲಾಖೆ ಮಂತ್ರಿ ಸುಧಾಕರ್‌ಗೂ ಈ ಅಕ್ರಮದ ಮಾಹಿತಿ ಗೊತ್ತಾಗದಂತೆಯೇ ರಾಜಕೀಯ ಮಾಡಿದ್ದು ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿ
ಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಡಾ. ಟಿ.ಎನ್. ಧನಂಜಯ ನೇಮಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡರ ಕೈವಾಡವಿದೆ ಎನ್ನಲಾಗಿದೆ. ಡಾ. ಟಿ.ಎನ್.ಧನಂಜಯ ಅವರನ್ನು ಮಂಡ್ಯ ಮೂಲದವರೆಂಬ ಕಾರಣಕ್ಕೆ ವಿಶೇಷ ಒತ್ತು ಕೊಟ್ಟು ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯನ್ನಾಗಿ ನೇಮಿಸಿಕೊಂಡು ಬರುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಒಂದಲ್ಲ ಒಂದು ಅಕ್ರಮಗಳ ವಿವಾದದಿಂದಲೇ ಸುದ್ದಿಯಾಗುತ್ತಿರುವ ಮಂಡ್ಯ ಮಿಮ್ಸ್‌ನಲ್ಲಿ ಇದೀಗ ಡಿಹೆಚ್‌ಒ ನೇಮಕಾತಿಯ ವಿಚಾರ ಯಾವ ರೀತಿ ಪ್ರತಿಧ್ವನಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.