Sunday, 15th December 2024

ಭವಿಷ್ಯಕ್ಕೆ ಮಾರಕವಾಗುತ್ತಿವೆ ಬಾಲ್ಯ ವಿವಾಹ

ಅಭಿಮತ

ಛಾಯಾದೇವಿ

ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ವಿವಾಹದ ವಯಸ್ಸನ್ನು ಹದಿನೆಂಟು ವರ್ಷ ಎಂದು ನಿರ್ಧರಿಸಲಾಗಿದ್ದರೂ, ಆರ್ಥಿಕವಾಗಿ ಹಿಂದುಳಿದ ಜಿಗಳಲ್ಲಿ ಹೆಣ್ಣುಮಕ್ಕಳನ್ನು ಬಾಲ್ಯವಿವಾಹಕ್ಕೆ ನೂಕುತ್ತಿರುವುದರ ಬಗ್ಗೆ ವರದಿ ಆಗುತ್ತಿರುವುದನ್ನು ನಾವು ಗಮನಿಸ ಬಹುದಾಗಿದೆ.

ಕರೋನಾ ಎಂಬ ಸಾಂಕ್ರಾಮಿಕ ಕಾಯಿಲೆಯು ಸಾವು – ನೋವುಗಳನ್ನು ಉಂಟುಮಾಡುವುದಲ್ಲದೆ, ಹೆಣ್ಣುಮಕ್ಕಳ ಮುಂದಿನ ಭವಿಷ್ಯಕ್ಕೆ ದೊಡ್ಡ ಪೆಟ್ಟು ನೀಡಿದೆ. 2019 ಹಾಗೂ 202ರಲ್ಲಿ ಅತಿ ಹೆಚ್ಚಿನ ಬಾಲ್ಯವಿವಾಹಗಳು ನಡೆದಿರುವುದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಾಗೂ ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ಮಾರಕವಾಗಿದೆ. ಈ ವರ್ಷದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಒತ್ತಾಯ ಪೂರ್ವಕ ಬಾಲ್ಯ ವಿವಾಹಗಳು ನಡೆದಿರುವುದು ಹಲವು ಅಂಕಿ – ಅಂಶಗಳಿಂದ ತಿಳಿದುಬಂದಿದೆ.

ರಾಜ್ಯದಲ್ಲಿ ಶಾಲೆಗಳು ಮುಚ್ಚಿದ ಕಾರಣದಿಂದ ಶಾಲೆಗೆ ಹೋಗುತ್ತಿದ್ದ ಹೆಣ್ಣುಮಕ್ಕಳನ್ನು, ಚಿಕ್ಕ ವಯಸ್ಸಿನಲ್ಲಿಯೇ ವಿವಾಹ ಮಾಡಿಕೊಡುವ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ. ನಗರಗಳಿಗೆ ವಲಸೆ ಬಂದು ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಆಟೋ – ಟ್ಯಾಕ್ಸಿ ಓಡಿಸುವವರು, ಬೀದಿ ಬದಿಯ ವ್ಯಾಪಾರಿಗಳು, ಇನ್ನಿತರ ಚಿಕ್ಕಪುಟ್ಟ ಸ್ವಯಂ ಉದ್ಯೋಗಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಒಂದು ವರ್ಗ ಕರೋನಾ ಉಂಟುಮಾಡಿದ ಜೀವ ಭಯದಿಂದ ತಮ್ಮ ತಮ್ಮ ಹಳ್ಳಿಗಳಿಗೆ ತೆರಳಿದರು.

ಅವರಿಗೆ ಉಂಟಾದ ಆರ್ಥಿಕ ದುರ್ಬಲತೆಯ ಕಾರಣದಿಂದಾಗಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದರ ಬದಲು ವಿವಾಹ ಮಾಡಿಕೊಟ್ಟು, ತಮ್ಮ ಜವಾಬ್ದಾರಿಯಿಂದ ವಿಮುಖರಾಗುವುದು ಅವರಿಗೆ ಪರ್ಯಾಯ ಮಾರ್ಗವಾಗಿ ಗೋಚರಿಸಿತು. ಆಘಾತ ಕಾರಿ ವಿಷಯವೆಂದರೆ ಸುಶಿಕ್ಷಿತ ಜಿಗಳು ಎಂದು ಹೆಸರಾಗಿರುವ ಮೈಸೂರು, ಹಾಸನಗಳಲ್ಲಿಯೂ ಅತಿಹೆಚ್ಚಿನ ಬಾಲ್ಯವಿವಾಹಗಳು ಜರುಗಿರುವುದು ವಿಪರ್ಯಾಸವೇ ಸರಿ. ಇನ್ನು ಉತ್ತರ ಕರ್ನಾಟಕ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಬರುವಂಥ ಹಲವಾರು ಬುಡಕಟ್ಟು ಜನಾಂಗದವರು, ಆರ್ಥಿಕವಾಗಿ ಹಿಂದುಳಿದವರು, ಕರೋನಾದಿಂದ ಉಂಟಾದ ಆರ್ಥಿಕ ಅನಿಶ್ಚಿತತೆಯ ಕಾರಣ ದಿಂದಾಗಿ ತಮ್ಮ ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹ ಮಾಡಿ ಕೊಡುತ್ತಿರುವುದು ತಿಳಿದು ಬಂದಿದೆ.

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವರದಿಯ ಪ್ರಕಾರ ಈ ಕರೋನಾ ಸಮಯದಲ್ಲಿ 2219 ಬಾಲ್ಯ ವಿವಾಹಗಳು ನಡೆದಿವೆ. ಅದರಲ್ಲಿ 195 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಬಾಲ್ಯ ವಿವಾಹದಲ್ಲಿ ಹೆಣ್ಣು ಮಗು ತನ್ನ ಬಾಲ್ಯವನ್ನು ಕಳೆದು ಕೊಳ್ಳುವುದರ ಜತೆಗೆ ಶಿಕ್ಷಣದಿಂದ ವಂಚಿತವಾಗುವುದು ಅಷ್ಟೇ ಅಲ್ಲದೆ, ಆ ಮಗುವಿನ ಮೂಲ ಮಾನವ ಹಕ್ಕಿನ ಜತೆಗೆ ಮಹಿಳಾ ಹಕ್ಕು ಹಾಗೂ ಮಕ್ಕಳ ಹಕ್ಕಿನ ಉಲ್ಲಂಘನೆಯಾಗುತ್ತದೆ. ಹೆಣ್ಣುಮಗುವಿನ ಕೌಟುಂಬಿಕ ಅನಕ್ಷರತೆ, ಮೂಢನಂಬಿಕೆ, ಬಡತನ, ಅರಿವಿನ ಕೊರತೆ, ಸಂಪ್ರದಾಯ, ಮರ್ಯಾದೆ, ಸಾಮಾಜಿಕ ರೂಢಿಗಳು, ಧಾರ್ಮಿಕ ಕಾರಣದಿಂದ ಬಾಲ್ಯವಿವಾಹಗಳು ಹೆಚ್ಚಾಗಿ ಜರುಗುತ್ತಿವೆ.

ಬಾಲ್ಯವಿವಾಹದಿಂದ ಬಾಲ ಗರ್ಭಿಣಿಯರು, ತಾಯಂದಿರು ಸೃಷ್ಟಿಯಾಗುತ್ತಾರೆ. ಹೆರಿಗೆಯ ಸಮಯದಲ್ಲಿ ಸಾವು – ನೋವುಗಳು ಉಂಟಾಗುತ್ತವೆ. ಸಾಮಾಜಿಕ ಪ್ರತ್ಯೇಕತೆಗೆ ಒಳಗಾಗುತ್ತಾರೆ. ಸಾಮಾಜಿಕ, ಬೌದ್ಧಿಕ ಜ್ಞಾನದಿಂದ ಹೊರಗುಳಿಯುತ್ತಿದ್ದಾರೆ. ಬಾಲ್ಯವನ್ನ ಅನುಭವಿಸಬೇಕೊ, ಮನೆಯ, ಮಕ್ಕಳ ಜವಾಬ್ದಾರಿ ನಿರ್ವಹಿಸಬೇಕೊ ಎಂಬ ದ್ವಂದ್ವಕ್ಕೆ ಒಳಗಾಗಿ ಮಾನಸಿಕವಾಗಿ ಖಿನ್ನರಾಗುತ್ತಿದ್ದಾರೆ. ಇನ್ನೂ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳನ್ನು ಅವರ ವಯಸ್ಸಿಗಿಂತ ಎರಡು ಪಟ್ಟು ವಯಸ್ಸಿನ ಪುರುಷ ರೊಂದಿಗೆ ವಿವಾಹ ಮಾಡಿಕೊಡಲಾಗುತ್ತದೆ.

ವಯಸ್ಸಿನ ಅಂತರದ ಕಾರಣದಿಂದಾಗಿ ಇಬ್ಬರ ಮನಸ್ಥಿತಿ, ಯೋಚನಾ ಲಹರಿ, ಆಲೋಚನಾಶಕ್ತಿ ಹೊಂದಾಣಿಕೆಯಾಗುವುದಿಲ್ಲ. ಇದರಿಂದಾಗಿ ಕೌಟುಂಬಿಕ ಕಲಹಗಳು, ಮನಸ್ತಾಪಗಳಿಗೆ ಕಾರಣವಾಗುತ್ತದೆ. ಇಂಥ ಸಂದರ್ಭದಲ್ಲಿ ವಿವಾಹಿತ ಹೆಣ್ಣುಮಗಳು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಬಾಲ್ಯವಿವಾಹಗಳನ್ನು ತಡೆಯಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ. ಅದರಲ್ಲಿಯೂ ಈ ಲಾಕ್‌ಡೌನ್ ಸಮಯದಲ್ಲಿ ಬಾಲ್ಯವಿವಾಹಗಳನ್ನು ಮನೆಯಲ್ಲಿಯೇ, ಮನೆಯ ಸದಸ್ಯ ರನ್ನು ಮಾತ್ರ ಒಳಗೊಂಡು ನೆರವೇರಿಸಲಾಗುತ್ತಿದೆ. ಹೆಚ್ಚಿನ ಬಾಲ್ಯ ವಿವಾಹ ಪ್ರಕರಣಗಳು ಸುದ್ದಿಯಾಗುವುದಿಲ್ಲ ಹಾಗೂ ದಾಖಲಾಗುವುದಿಲ್ಲ.

ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯಿದೆ 2016ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕ್ರಿಯಾ ಯೋಜನೆಯನ್ನು ಸ್ಥಾಪಿಸಲಾಗಿದೆ. ಜತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದಲ್ಲಿ ಬಾಲ್ಯವಿವಾಹ ನಿಷೇಧ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ. ಆದರೂ ಬಾಲ್ಯವಿವಾಹಗಳು ಗುಟ್ಟಾಗಿ ನೆರವೇರಲ್ಪಡುತವೆ. ಆದ್ದರಿಂದ ಹಳ್ಳಿಗಳಲ್ಲಿ ಜರುಗುವ ಎಲ್ಲಾ ವಿವಾಹಗಳ ವಧು ವರರ ವಯಸ್ಸಿನ ದಾಖಲೆಯನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ದೃಢೀಕರಿಸಿ ನಂತರ ವಿವಾಹ ಮಾಡಲು ಅನುಮತಿ ಪಡೆಯಬೇಕು ಎಂಬುದಾಗಿ ಆದೇಶವನ್ನು ಹೊರಡಿಸಬಹುದಾಗಿದೆ.