Friday, 22nd November 2024

ವಿದ್ಯಾರ್ಥಿಗಳಿಗೆ ಅಂಕ ನೀಡುವ ಮಾನದಂಡ ಬಹಿರಂಗಪಡಿಸಿ: ಸುಪ್ರೀಂ

ನವದೆಹಲಿ : ಕರೋನಾ ಹಿನ್ನೆಲೆಯಲ್ಲಿ ಸಿಬಿಎಸ್‌ಇ  12ನೇ ತರಗತಿ ಪರೀಕ್ಷೆ ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ ಕೇಂದ್ರ ಸರಕಾರ, ಸಿಬಿಎಸ್ ಇ ಮತ್ತು ಐಸಿಎಸ್ ಇಗೆ ಹೊಸ ತಲೆನೋವು ಶುರುವಾದಂತಿದೆ.

ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲು ಅಳವಡಿಸಿಕೊಳ್ಳಬೇಕಾದ ವಸ್ತುನಿಷ್ಠ ಮಾನದಂಡವನ್ನು ಎರಡು ವಾರಗಳಲ್ಲಿ ಬಹಿರಂಗ ಪಡಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಸಿಬಿಎಸ್ ಇ ಮತ್ತು ಐಸಿಎಸ್ ಇಗೆ ಸೂಚಿಸಿದೆ. 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸುವ ನಿರ್ಧಾರದಿಂದ ‘ಸಂತೋಷವಾಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಿಬಿಎಸ್ ಇ ಜೂನ್ 1 ರಂದು 12ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಿತ್ತು, ನಂತರ ಐಸಿಎಸ್‌ಇ ತನ್ನ ವಿದ್ಯಾರ್ಥಿ ಗಳಿಗೆ ಪರೀಕ್ಷೆಯನ್ನು ರದ್ದುಗೊಳಿಸಿತು. ಈ ನಿರ್ಧಾರದ ನಂತರ, ಅನೇಕ ರಾಜ್ಯ ಮಂಡಳಿಗಳು ಸಹ ತಮ್ಮ 12ನೇ ತರಗತಿ ಪರೀಕ್ಷೆ ಗಳನ್ನು ರದ್ದುಗೊಳಿಸಲು ಮುಂದೆ ಹೋದವು.

ಸಿಬಿಎಸ್ ಇ ಮತ್ತು ಐಸಿಎಸ್ ಇಗೆ ಸಂಬಂಧಿಸಿದ ವಸ್ತುನಿಷ್ಠ ಮೌಲ್ಯಮಾಪನ ಮಾನದಂಡ ಸಮಸ್ಯೆ ಪರಿಹರಿಸಿದ ನಂತರ, 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಿರುವ 12ನೇ ತರಗತಿ ರಾಜ್ಯ ಮಂಡಳಿ ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆ ಗಳನ್ನು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ಪೀಠವು ‘ಸುಪ್ರೀಂ ಕೋರ್ಟ್ ಎಲ್ಲಾ 12ನೇ ತರಗತಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸುತ್ತದೆ’ ಎಂದು ಭರವಸೆ ನೀಡಿದರು.