ಅಭಿಮತ
ಸಾನಿಯಾ ಜ.ಧನ್ನೂರ
ಮನುಷ್ಯ ಎಂಬುವವನು ಪರಿಸರವನ್ನು ತನ್ನಿಷ್ಟಕ್ಕೆ ಬಂದಂತೆ ಬಳಸುತ್ತಿದ್ದಾನೆ. ಪರಿಸರದ ಬಗ್ಗೆ ಕಾಳಜಿ, ರಕ್ಷಣೆ ಅದರ ಬಗ್ಗೆ ಅರಿವು ಎಲ್ಲವೂ ಕೂಡಾ ತಾತ್ಕಾಲಿಕವಾದ ಮಾತಷ್ಟೆ ಆಗಿವೆ.
ಇಂದೂ ಎಲ್ಲರೂ ಕೂಡಾ ಚಿಂತೆಯಲ್ಲಿ ಕೊರಗಿ ಚಿತೆಗೆ ಶರಣಾಗುತ್ತಿರುವುದು ಆಮ್ಲಜನಕ ಕೊರತೆಯಿಂದಾಗಿ ಇದಕ್ಕೆಲ್ಲಾ ಕಾರಣ ಸ್ವತಃ ಮಾನವನೇ. ಆದರೆ ಇಂದಿನ ಪರಿಸ್ಥಿತಿ ಹೇಗಿದೆ ಅಂದರೆ ಸಾವಿರಾರು ರುಪಾಯಿಗಳನ್ನು ಕೊಟ್ಟರೂ ಆಮ್ಲಜನಕ ಸಿಗುತ್ತಿಲ್ಲ. ಇರುವ ಆಮ್ಲಜನಕದ ಬೆಲೆ ಗಗನಕ್ಕೇರಿದೆ. ಆಮ್ಲಜನಕದ ಕೊರತೆಯಿಂದಾಗಿ ಮಾನವರು ನರಳಿ ನರಳಿ ಸಾಯುತ್ತಿದ್ದಾರೆ. ಕಣ್ಣಾರೆ ಇದನ್ನು ನೋಡುತ್ತಿರುವ ವೈದ್ಯಲೋಕ ಮನುಷ್ಯನನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿದೆ.
ಕೋಟಿ ಕೋಟಿ ಹಣವಿದ್ದರೂ ಉಸಿರಾಡಲು ಗಾಳಿಯೇ ಬೇಕು, ಹಸಿದಾಗ ತಿನ್ನಲು ಅನ್ನವೇ ಬೇಕು, ಬಾಯಾರಿದಾಗ ಕುಡಿಯಲು ನೀರೇ ಬೇಕು. ಯಾರೂ ಕೂಡಾ ದುಡ್ಡನ್ನು ತಿನ್ನಲು ಸಾಧ್ಯವಿಲ್ಲ. ಮನುಷ್ಯ ತನ್ನ ಅತೀ ಆಸೆಯಿಂದಾಗಿ ಮರಗಳನ್ನು ಕಡಿದು ತನ್ನ ಅನುಕೂಲಕ್ಕೆ ತಕ್ಕಂತೆ ಅವುಗಳನ್ನು ಬಳಸಿಕೊಂಡ ಆದರೆ ಮರಗಳನ್ನು ಕಡಿದಾಗ ಅದರ ಪ್ರತಿಯಾಗಿ ಸಸಿಗಳನ್ನು ನೆಡಲಿಲ್ಲ. ಮನುಷ್ಯನು ಎಲ್ಲವನ್ನು ಮುಂದಾಲೋಚನೆಯಿಲ್ಲದೇ ಬಳಸುತ್ತಾ ಹೋದರೆ ಎಲ್ಲವೂ ಕೂಡಾ ನಶಿಸಿ ಹೋಗುತ್ತದೆ.
ಇಂದು ಆಮ್ಲಜನಕ ನಾಳೆ ವಿದ್ಯುತ್ ಶಕ್ತಿ, ಜಲಶಕ್ತಿಯ ಕೊರತೆ ಎದುರಾಗುವ ಕಾಲ ದೂರವಿಲ್ಲ.
ಆಗ ಮನುಷ್ಯನು ಜೀವವಿದ್ದೂ ಜೀವವಿಲ್ಲದ ಬೆದರು ಗೊಂಬೆಯಾಗುತ್ತಾನೆ. ಪ್ರಕೃತಿಯು ಇಷ್ಟು ದಿನ ನಮ್ಮೆಲ್ಲರ ಮೇಲೆ ಕರುಣೆ ತೋರಿದೆ. ಮಾನವ ಕಡಿದ ಮರಗಳು ತಾವೇ ತಮ್ಮಷ್ಟಕ್ಕೆ ಮನುಜನ ಸಹಾಯವಿಲ್ಲದೇ ಬೆಳೆದು, ಮತ್ತೆ ಮಾನವನ ಮೇಲೆ ಉಪಕಾರದ ಹೊರೆಯನ್ನು ಹೊರಿಸಿವೆ. ಪ್ರಕೃತಿಯ ಈ ನಿಸ್ವಾರ್ಥತೆಯನ್ನು ಹೊಗಳಲು ಪದಗಳಿಲ್ಲ ನನ್ನ ಶಬ್ದ ಭಂಡಾರದಲ್ಲಿ.