Saturday, 14th December 2024

ಪಾಶ್ಚಾತ್ಯರ ನರಮೇಧಗಳಿಗೆ ಕ್ಷಮೆ, ದಂಡ ಮಾತ್ರ ಸಾಕೇ ?

ವಿಶ್ಲೇಷಣೆ

ಕಿಶೋರ್‌ ನಾರಾಯಣ್‌

ಈಗಿನ ನಮೀಬಿಯಾ 1904ರಲ್ಲಿ ಜರ್ಮನರ ಆಳ್ವಿಕೆಯ ಜರ್ಮನ್ ನೈಋತ್ಯ ಆಫ್ರಿಕಾ ಎಂದು ಕರೆಯಲ್ಪಡುತ್ತಿತ್ತು. ಹೆರೆರೊ
ಎನ್ನುವ ಒಂದು ಗೊಲ್ಲ ಬುಡಕಟ್ಟು ಜನಾಂಗ ಹಾಗೂ ಜರ್ಮನ್ ಸೇನೆಯ ನಡುವೆ ಕದನ ಪ್ರಾರಂಭವಾಗಿತ್ತು.

ಆರಂಭಿಕ ಹಂತಗಳಲ್ಲಿ ಜರ್ಮನ್ ಸೇನೆಯ ಅನೇಕ ಸೈನಿಕರು ಸಾವನ್ನಪ್ಪಿದ್ದರು. ಬಲಿಷ್ಠವಾದ ಜರ್ಮನ್ ಸೇನೆಗೆ ಹಾಗೂ ಜರ್ಮನ್ ಸರಕಾರಕ್ಕೆ ಇದನ್ನು ಸಹಿಸಲು ಸಾಧ್ಯವಾಯಿತು. ಹೆರೆರೊ ಜನಾಂಗವನ್ನೇ ಇಲ್ಲದಂತೆ ಮಾಡಿ ಎನ್ನುವ ಆದೇಶ ಜರ್ಮನ್ ರಾಜಧಾನಿ ಬರ್ಲಿನ್ ನಿಂದ ಬಂದಿತು. ಸೇನೆ ಹೆರೆರೊ ಜನರ ಮೇಲೆ ಪ್ರತಿದಾಳಿ ಪ್ರಾರಂಭಿಸಿತು. ಹೆರೆರೊ ಜನಾಂಗದ ಸುಮಾರು 80000 ಜನ ಕಲಾಹಾರಿ ಮರುಭೂಮಿಯ ಉದ್ದಗಲಕ್ಕೂ ಓಡಲಾರಂಭಿಸಿದರು.

ತಿನ್ನಲು ಆಹಾರವಿಲ್ಲದೆ ಕುಡಿಯಲು ನೀರಿಲ್ಲದೆ ಮಕ್ಕಳು ಹೆಂಗಸರು ವೃದ್ಧರು ಎಲ್ಲರೂ ಓಡತೊಡಗಿದರು. ಕೊನೆಗೆ ಮರುಭೂಮಿ ಯ ಮತ್ತೊಂದು ಕೊನೆ ತಲುಪಿದ್ದು ಕೇವಲ 15000 ಜನ. ಅರೆಜೀವ ಉಳಿದಿದ್ದ ಇವರನ್ನೂ ಪುನಃ ಕಾರಾಗೃಹಗಳಲ್ಲಿ ಹಾಕಲಾ ಯಿತು. ಕೆಲವರನ್ನು ಕೊಂದು ಅವರು ತಲೆ ಬುರುಡೆಗಳನ್ನು ಜರ್ಮನಿಯ ವಸ್ತು ಸಂಗ್ರಹಾಲಯಗಳಿಗೆ ಪ್ರದರ್ಶನಕ್ಕಾಗಿ ಕೊಂಡೊಯ್ಯಲಾಯಿತು. ಇಂತಹ ದುಷ್ಟ ಕೃತ್ಯಗಳು ಇದಕ್ಕೆ ಮೊದಲೂ ನಡೆದಿವೆ.

ಇದಾದ ನಂತರವೂ ಬಹಳಷ್ಟು ನಡೆದಿವೆ. 1919ರಲ್ಲಿ ಭಾರತದ ಅಮೃತಸರದಲ್ಲಿನ ಜಲಿಯಾನ್ ವಾಲಾ ಬಾಘ್‌ನಲ್ಲಿಯೂ ಈ ರೀತಿಯ ನರಮೇಧ ಜನರಲ್ ಡೈಯರ್ ಅವರ ಆದೇಶದ ಮೇರೆಗೆ ನಡೆಸಲಾಗಿದ್ದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. 1943 ರಲ್ಲಿ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಬರ್ಮಾ ಮೇಲೆ ಜಪಾನ್ ಮುತ್ತಿಗೆ ಹಾಕಿದೆ ಎನ್ನುವ ಕಾರಣಕ್ಕೆ ಬ್ರಿಟಿಷರು
ಬಂಗಾಳ ಅಕಾಲದ ಪರಿಸ್ಥಿತಿಯಿದ್ದರೂ ಅಲ್ಲಿಂದ ದವಸ ಧಾನ್ಯಗಳನ್ನು ಹೊತ್ತೊಯ್ದು ಕನಿಷ್ಠ 21 ಲಕ್ಷ ಬಂಗಾಳಿಯರ ದುರ್ಮ ರಣಕ್ಕೆ ಕಾರಣರಾಗಿದ್ದರು.

ಈ ಎಲ್ಲ ಕಥೆಗಳು ಪಾಶ್ಚಾತ್ಯರು ಅವರು ಆಡಳಿತ ನಡೆಸಿದ ವಸಾಹತುಗಳಲ್ಲಿ ಅಲ್ಲಿನ ಜನರ ಜತೆ ಹೇಗೆ ವ್ಯವಹರಿಸಿದರು ಎನ್ನುವು ದನ್ನು ನಿದರ್ಶಿಸುತ್ತದೆ. ನಾವು ಕಾಕೇಶಿಯನ್ ಜನಾಂಗದವರು ಎನ್ನುವ ಅಹಂ ಅವರಲ್ಲಿ ಮನೆಮಾಡಿತ್ತು. ಶ್ವೇತವರ್ಣದ ತ್ವಚೆ, ಎತ್ತರದ ಗಾತ್ರ, ದೃಢ ಮೈಕಟ್ಟು ನಮ್ಮ ದೈಹಿಕ ಗುರುತಗಳು. ಈ ದೈಹಿಕ ಗುಣಲಕ್ಷಣಗಳು ಮಾನವ ಸಂಕುಲದ ವಿಕಸನದಲ್ಲಿ ಅತ್ಯುನ್ನತ ಸ್ಥಾನದ್ದಾಗಿದೆ. ಹಾಗಾಗಿ, ನಾವು ಅನ್ಯ ಜನಾಂಗದವರಿಗಿಂತ ಉತ್ತಮ ಎಂದೂ ಅನ್ಯರು ಅಧಮರೆಂದೂ ಬಲವಾಗಿ ನಂಬಿದ್ದರು.

ಈ ನಂಬಿಕೆ ಒಂದೆಡೆಯಾದರೆ ಅವರು ನಂಬಿದ್ದ ಅವರ ಧರ್ಮ ಮತ್ತೊಂದೆಡೆ. ಅನೇಕ ಪಂಗಡಗಳಿಗೆ ಸೇರಿದವರಾಗಿದ್ದರೂ ಈ ಎಲ್ಲ ಪಾಶ್ಚಾತ್ಯರು ಕ್ರೈಸ್ತ ಧರ್ಮದ ಅನುಯಾಯಿಗಳು. ಇಲ್ಲಿ ಅವರ ಅಹಂ ಉತ್ತುಂಗ ಕ್ಕೇರಿತ್ತು. ನಾವು ಅನುಸರಿಸುತ್ತಿರುವ ಧರ್ಮ ಎಲ್ಲ ಕಾಲಕ್ಕೂ ಎಲ್ಲ ಜನಗಳಿಗೂ ಸೂಕ್ತವಾದುದು ಎನ್ನುವುದು ಅವರ ಬಲವಾದ ನಂಬಿಕೆ. ಅಂತೆಯೇ ಪೋರ್ಚು ಗೀಸರು ಗೋವಾಕ್ಕೆ ಬಂದಾಗ ಅಲ್ಲಿನ ಅನ್ಯ ಮತೀಯರನ್ನು ಬಲವಂತವಾಗಿ ಧರ್ಮಾಂತರಿಸಿದ ಕಥೆಗಳನ್ನು ಹೆಚ್ಚಾಗಿ
ಮುಚ್ಚಿಡಲಾಗಿದೆ.

20ನೇ ಶತಮಾನದಲ್ಲಿ ಎರಡನೇ ವಿಶ್ವ ಯುದ್ಧದ ನಂತರದಲ್ಲಿ ಅನೇಕ ಏಷ್ಯಾದ ಹಾಗೂ ಆಫ್ರಿಕಾದ ದೇಶಗಳು ಸ್ವತಂತ್ರವಾದವು. ಆಗಿನ ಆ ದೇಶಗಳ ಪರಿಸ್ಥಿತಿ ಅತ್ಯಂತ ದಯನೀಯವಾಗಿದ್ದಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ತನಗಾಗಿ ಒಂದು ಸಂವಿಧಾನ ರಚನೆಯಿಂದ ಹಿಡಿದು ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳ ರಚನೆಯೇ ಈ ನವಜಾತ ರಾಷ್ಟ್ರಗಳ ಪ್ರಮುಖ
ಕಾರ್ಯಗಳಾಗಿದ್ದವು. ಈಗ 6-8 ದಶಕಗಳ ನಂತರ ಈ ರಾಷ್ಟ್ರಗಳು ಸ್ವಾತಂತ್ರ್ಯಪೂರ್ವದಲ್ಲಿ ಅವರಿಗಾದ ಅನ್ಯಾಯಗಳ ಬಗ್ಗೆ ತಗಾದೆ ಎತ್ತಲಾರಂಭಿಸಿವೆ.

ಅಂತೆಯೇ ನಮೀಬಿಯಾ ಕೂಡ ಜರ್ಮನಿ ಮಾಡಿದ್ದ ದುಷ್ಕ್ರತ್ಯಗಳ ಬಗ್ಗೆ ಘಂಟಾಘೋಷವಾಗಿ ಹೇಳತೊಡಗಿದೆ. ಈ ರೀತಿಯ ಕೂಗು ಪಾಶ್ಚಾತ್ಯ ರಾಷ್ಟ್ರಗಳ ರಾಜಧಾನಿಗಳಲ್ಲಿ ಕಳೆದ 15-20 ವರ್ಷಗಳಿಂದ ಜೋರಾಗಿ ಕೇಳಿಸತೊಡಗಿದೆ. ಐರೋಪ್ಯ ದೇಶಗಳ ನಾಗರಿಕರೂ ಅಮೆರಿಕದ ನಾಗರಿಕರೂ ಈ ಕೂಗಿಗೆ ದನಿಗೂಡಿಸತೊಡಗಿದ್ದಾರೆ. ನಮ್ಮ ದೇಶದವರು ಅಮಾನುಷವಾಗಿ ನಡೆದು ಕೊಂಡಿದ್ದಕ್ಕಾಗಿ ನಮಗೆ ನಾಚಿಕೆಯಾಗುತ್ತಿದೆ.

ಇದಕ್ಕೆ ಏನಾದರೂ ಪರಿಹಾರ ಹುಡುಕಿಕೊಳ್ಳಬೇಕು ಎನ್ನುವುದು ಆ ನಾಗರಿಕರ ವಾದ. ಇದಕ್ಕೆ ಪೂರಕವಾಗಿ ಸಮಾಜವಾದ ಸಮಾನತಾವಾದ ಯೂರೋಪ್‌ನಲ್ಲಿ ಹಾಗೂ ಅಮೆರಿಕನಲ್ಲಿ ನೆಲೆಯೂರಿದೆ. ಹಾಗಾಗಿ ನಮ್ಮ ಇರುವ ಅನ್ಯ ವರ್ಣದ ನಾಗರಿಕರ ವಿಚಾರದಲ್ಲಿಯೂ ನಾವು ಉತ್ತಮವಾಗಿ ನಡೆದು ಕೊಳ್ಳಬೇಕು ಎನ್ನುವ ಇಂಗಿತವೂ ವ್ಯಕ್ತವಾಗುತ್ತಿದೆ.

ಇಂಗಿತಕ್ಕೂ ಪ್ರಾಯಶ್ಚಿತ್ತಕ್ಕೂ ವ್ಯತ್ಯಾಸವಿಲ್ಲವೇ? ಖಂಡಿತ ಇದೆ. ಕೆಲವೊಂದು ಬಾರಿ, ದೇಶದ ಸರಕಾರಗಳು ಅವರು ನಡೆಸಿದ ದುಷ್ಕೃತ್ಯಗಳನ್ನು ಒಪ್ಪಿಕೊಳ್ಳುವುದೇ ಇಲ್ಲ. ಉದಾಹರಣೆಗೆ ಟರ್ಕಿ ದೇಶ ಅರ್ಮೇನಿಯನ್ ಜನಾಂಗದವರ ಮೇಲೆ ಮೊದಲ ವಿಶ್ವ ಯುದ್ಧದ ಕಾಲದಲ್ಲಿ ಎಸಗಿದ್ದ ಅತ್ಯಾಚಾರಗಳನ್ನು ನರಮೇಧ ಎಂದು ಒಪ್ಪಿಕೊಳ್ಳುವುದಕ್ಕೂ ಹಿಂದೇಟು ಹಾಕುತ್ತಿದೆ. ಆಗ
ಇದ್ದದ್ದು ಒಟ್ಟೊಮಾನ್ ಟರ್ಕ್ ಸಾಮ್ರಾಜ್ಯ. ಟರ್ಕಿ  ರ್ಮೇನಿಯ ನಡುವಿನ ಕದನದಲ್ಲಿ ತುರ್ಕರೂ ಸಾವನ್ನಪ್ಪಿದ್ದರು ಎನ್ನುವ ಬೂಟಾಟಿಕೆಯ ಮಾತುಗಳನ್ನು ಹೇಳುತ್ತಿದೆ.

ಕದನದಲ್ಲಿ ಸಂಭವಿಸುವ ಮರಣಗಳಿಗೂ ಜನಾಂಗೀಯ ನರಮೇಧ ಗಳಿಗೂ ಸಮಾನತೆಯನ್ನು ಟರ್ಕಿ ಸಾರಿ ಹೇಳುತ್ತಿದೆ. ಇದು ಅರ್ಮೇನಿಯನ್ನರನ್ನು ಮತ್ತಷ್ಟು ಕೆರಳಿಸಿದೆ. ನಮಗಾದ ಕಷ್ಟ ನೋವು ದುಃಖಗಳನ್ನು ನೀವು ಮುಚ್ಚಲು ಯತ್ನಿಸುತ್ತಿದ್ದೀರಿ ಎಂದು ಅರ್ಮೇನಿಯ ಹೇಳುತ್ತಿದೆ. ಇತ್ತೀಚಿಗೆ ಅಮೆರಿಕದ ಅಧ್ಯಕ್ಷ ಬೈಡೆನ್ ಟರ್ಕಿಯವರು ಮಾಡಿದ್ದು ನರಮೇಧವೇ ಎಂದು ಹೇಳಿದರು. ಹೀಗಾಗಿ ಮಿತ್ರ ರಾಷ್ಟ್ರವಾಗಿದ್ದರೂ ಅಮೆರಿಕ ನಮ್ಮ ವಿರುದ್ಧವಾಗಿ ಹೀಗೆ ಹೇಳಿತಲ್ಲ ಎಂದು ಟರ್ಕಿಯವರು ಕೋಪಗೊಂಡಿದ್ದಾರೆ.

ಹಾಗೆಂದರೆ ಅಮೆರಿಕ ರಾಷ್ಟ್ರ ಈ ರೀತಿ ನಡೆದ ನರಮೇಧ ಗಳನ್ನು ಖಂಡಿಸುವಲ್ಲಿ ಪರಿಹಾರ ಹುಡುಕುವುದರಲ್ಲಿ ಮುಂಚೂಣಿ ಯಲ್ಲಿದೆಯೇ? ಇಲ್ಲವೇ ಇಲ್ಲ. ಕಳೆದ ವಾರವಷ್ಟೇ ಅಮೆರಿಕ ಅಧ್ಯಕ್ಷ ಬೈಡೆನ್ ಒಕ್ಲಹೋಮ ರಾಜ್ಯದ ಟಲ್ಸಾ ನಗರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಕೊಟ್ಟ ಭಾಷಣವೊಂದರಲ್ಲಿ 100 ವರ್ಷಗಳ ಹಿಂದೆ ನಡೆದ ಹತ್ಯಾಕಾಂಡದ ಬಗ್ಗೆ ನಿರರ್ಗಳವಾಗಿ ಮಾತನಾಡಿ ರಾಷ್ಟ್ರ ಗಳು ಅವರು ಮಾಡಿರುವ ತಪ್ಪುಗಳನ್ನು ಒಪ್ಪಿಕೊಳ್ಳಬೇಕು, ಆಗಲೇ ಅವು ಮಹಾನ್ ಎಂದು ಅನ್ನಿಸಿ ಕೊಳ್ಳುವುದಕ್ಕೆ ಲಾಯಕ್ಕಾಗುತ್ತದೆ. ನಮ್ಮ ರಾಷ್ಟ್ರ ಕೃಷ್ಣವರ್ಣೀಯರ ಮೇಲೆ ಅನೇಕ ಅಪರಾಧಗಳನ್ನು ಎಸಗಿದೆ.

ಇದೆಲ್ಲದಕ್ಕೂ ನಮಗೆ ನಾಚಿಕೆಯಾಗುತ್ತದೆ. ನಾವು ಈ ರೀತಿಯ ಕುಕೃತ್ಯಗಳನ್ನು ಒಪ್ಪುವುದಿಲ್ಲ ಎಂದರು. ಆಗ ಎಲ್ಲರ ಬಾಯಲ್ಲೂ ಒಂದೇ ಪ್ರಶ್ನೆ. ಕೇವಲ ಮರುಗಿದರೆ ಸಾಕೆ? ನಿಜವಾದ ಪಶ್ಚಾತ್ತಾಪ ಮರುಕದಿಂದ ಮಾತ್ರ ಸಾಧ್ಯವೇ ಎಂದು ಕೇಳಲಾರಂಭಿಸಿ ದ್ದಾರೆ. ಆಸ್ಟ್ರೇಲಿಯಾದಲ್ಲಿ ಅಲ್ಲಿನ ಬುಡಕಟ್ಟು ಜನಗಳ ಮೇಲೆ ಮಾಡಲಾದ ಅನೇಕ ಅಪರಾಧಗಳಿಗೆ ಅಲ್ಲಿನ ಈಗಿನ ಸರಕಾರ ಅನೇಕ ದೋಷ ಪರಿಹಾರ-ರೂಪ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನವರಿ 26 ಆಸ್ಟ್ರೇಲಿಯಾದಲ್ಲಿ ರಾಷ್ಟ್ರೀಯ ದಿನ ಎಂದು ಆಚರಿಸುತ್ತಾರೆ. ಆದರೆ ಅಲ್ಲಿನ ಬುಡಕಟ್ಟು ಜನ, ನೀವು ಬಂದಿಳಿದಿದ್ದು ಜನವರಿ 26ರಂದು, ಹಾಗಾಗಿ ಅದು ನಮ್ಮ ಪಾಲಿಗೆ ಆಕ್ರಮಣ ದಿನವಾಗಿ ಪರಿಣಮಿಸಿದೆ ಎಂದು ದನಿಯೆತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಶ್ವೇತವರ್ಣೀಯರು ಸಹ ದನಿ ಗೂಡಿಸಿ, ನಮ್ಮ ರಾಷ್ಟ್ರೀಯ ದಿನವನ್ನು ಮತ್ತೊಂದು ದಿನಕ್ಕೆ ಬದಲಾಯಿಸ ಬೇಕು ಎಂದು ಹೋರಾಟಕ್ಕಿಳಿದಿದ್ದಾರೆ. ಇತ್ತ ಜರ್ಮನಿ ಕೂಡ ನಮೀಬಿಯಾ ಸರಕಾರದ ಜತೆ ಮಾತುಕತೆಗಳನ್ನು ನಡೆಸಿ ನಾವು ಎಸಗಿದ ಅಪರಾಧಗಳಿಗೆ ಕ್ಷಮೆ ಇರಲಿ. ನಾವು ಪರಿಹಾರ ರೂಪದಲ್ಲಿ ನಿಮ್ಮ ದೇಶದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ದೇಣಿಗೆ ರೂಪದಲ್ಲಿ 1.1 ಬಿಲಿಯನ್ ಯೂರೋಗಳು (10 ಸಾವಿರ ಕೋಟಿ ರುಪಾಯಿಗಳು) ಪರಿಹಾರ ಕೊಡುತ್ತೇವೆ ಎಂದು ಘೋಷಿಸಿದೆ. ನಮೀಬಿಯಾ ಕೂಡ ಇದನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದೆ.

ಆದರೆ ಹೆರೆರೊ ಜನಾಂಗದವರು ಮಾತ್ರ ಇದರಿಂದ ತೃಪ್ತಿ ಪಟ್ಟುಕೊಂಡಂತಿಲ್ಲ. ನೀವು ಮಾಡಿದ ಅನ್ಯಾಯ ಹೆರೆರೊ ಜನಾಂಗ ದವರ ಮೇಲೆ, ಮತ್ಯಾವುದೋ ಅಭಿವೃದ್ಧಿ ಕಾರ್ಯಕ್ರಮಗಳಿಗೆ ದೇಣಿಗೆ ಕೊಟ್ಟ ಮಾತ್ರಕ್ಕೆ ನಮಗೆ ಕೊಟ್ಟಂತಾಗುವುದಿಲ್ಲ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಹೆರೆರೊ ಜನಾಂಗದವರು ಸುಮ್ಮನೆ ಹೇಳುತ್ತಿದ್ದಾರೆ ಎಂದು ಅನಿಸಿದರೂ ಅವರ ತಗಾದೆಯಲ್ಲಿ ಒಂದು ಅರ್ಥವಿದೆ. ಬ್ರಿಟಿಷ್ ಸರಕಾರ ಜಲಿಯನ್ ವಾಲಾ ಬಾಘ್‌ಗೆ ಪರಿಹಾರವಾಗಿ ಇನ್ಯಾವುದೋ ಅಭಿವೃದ್ಧಿ ಕಾರ್ಯಕ್ರಮ ಗಳಿಗೆ ದುಡ್ಡು ಚೆಲ್ಲಿದರೆ ಅದೆಂತಹ ಪರಿಹಾರ? ನಿಜವಾದ ಪರಿಹಾರ ಆದ ನೋವಿಗೆ ಮುಲಾಮು ಹಚ್ಚಿದಾಗ ಮಾತ್ರ
ಲಭಿಸುತ್ತದೆ ಎನ್ನುವುದು ಹೆರೆರೊ ಜನಾಂಗದವರ ವಾದ.

ಈ ರೀತಿಯ ಕೂಗು ಪ್ರಪಂಚದ ಅನೇಕ ಮೂಲೆಗಳಿಂದ ಕೇಳಿ ಬರುತ್ತಿದೆ. ಪಾಶ್ಚಾತ್ಯ ಸರಕಾರಗಳು ಅಂದು ಇಂದು ಎನ್ನುವಂತೆ ಒಂದೊಂದು ನರಮೇಧಕ್ಕೆ ಮಾತ್ರ ಕ್ಷಮೆ ಯಾಚಿಸುತ್ತಾ ಪರಿಹಾರ ಕೊಡಲು ಮುಂದಾಗುತ್ತಿದೆ. ಇದರಿಂದ ಯಾರ ನೋವು
ಶಮನವಾಗುವುದಿಲ್ಲ, ಬದಲಾಗಿ ಇನ್ನಷ್ಟು ಘಾಸಿಯಾಗುತ್ತದೆ. 16ನೇ ಶತಮಾನ ದಲ್ಲಿ ವಸಾಹತುಗಳ ಪ್ರಾರಂಭದಿಂದ 20ನೇ ಶತಮಾನದಲ್ಲಿ ಸ್ವಾತಂತ್ರ್ಯ ಕೊಡುವುದರವರೆಗೂ ನಡೆಸಿದ ಎಲ್ಲ ನರಮೇಧಗಳಿಗೆ ಹತ್ಯಾಕಾಂಡಗಳಿಗೆ ಪಾಶ್ಚಾತ್ಯ ಸರಕಾರಗಳು ಹೊಣೆ ಹೊತ್ತು ಕ್ಷಮೆ ಕೇಳಿ ಪರಿಹಾರ ನೀಡಬೇಕಾಗಿದೆ. ಆಗ ಮಾತ್ರ ಬುಡಕಟ್ಟು ಜನಾಂಗದವರ ಅನ್ಯವರ್ಣೀಯರ ನೋವುಗಳು ವಾಸಿಯಾಗುತ್ತದೆ.