ಸುಮಾರು ೩ ಸಾವಿರಕ್ಕೂ ಅಧಿಕ ಮದ್ಯದ ಬಾಟಲಿ ಸಂಗ್ರಹ
ಹೊಸಪೇಟೆ: ಕರೋನಾದ ಲಾಕ್‌ಡೌನ್ ಸಂದರ್ಭದಲ್ಲಿ ಕೆಲವರು ಟೈಂ ಪಾಸ್ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಇನ್ನೂ ಕೆಲವರು ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧಾವಿಸಿದ್ದಾರೆ. ಈ ಎಲ್ಲದರ ನಡುವೆ ಇಲ್ಲೊಂದು ಯುವಕರ ತಂಡ ಪರಿಸರದ ಸ್ವಚ್ಛತೆಗೆ ಮುಂದಾಗುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಸ ಸಂಗ್ರಹ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ಹಸಿರು ಪರ್ವ ತಂಡದ ಯುವಕರು ಪಟ್ಟಣದಲ್ಲಿನ ವಿವಿಧೆಡೆ ಸ್ವಚ್ಛತೆಗೆ ಮುಂದಾಗುವ ಮೂಲಕ ಗಮನ ಸೆಳೆದಿದ್ದಾರೆ. ಪರಿಸರದಲ್ಲಿ ಬೆರೆತು ಹೋಗಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಕ್ಕಿ ತೆಗೆದು, ವೈಜ್ಞಾನಿಕವಾಗಿ ವಿಲೇವಾರಿಗೊಳಿಸಿ ನೈಜ ಪರಿಸರ ಕಾಳಜಿ ತೋರಿದ್ದಾರೆ.
ಪಟ್ಟಣದ ಯುವಕ ಟಿ. ಗಿರೀಶ್ ನೇತೃತ್ವದಲ್ಲಿ ಹಸಿರು ಪರ್ವ ತಂಡದ ಯುವಕರು ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ (ಐಟಿಐ) ಆವರಣದಲ್ಲಿ ಶ್ರಮದಾನ ನಡೆಸಿ, ಪ್ಲಾಸ್ಟಿಕ್ ಕಸದ ರಾಶಿಯನ್ನೇ ಸಂಗ್ರಹಿಸಿದ್ದಾರೆ.
ಪ್ಲಾಸ್ಟಿಕ್ ತೆರವು: ಸದ್ಯ ಕಳೆದ ಹಲವು ದಿನಗಳಿಂದ ಲಾಕ್‌ಡೌನ್ ನಿಂದ ಕೆಲ ಯುವಕರು ಸೇರಿದಂತೆ ಮದ್ಯಪ್ರಿಯರು
ಪಟ್ಟಣದ ಕೆಲ ಪ್ರದೇಶಗಳಲ್ಲಿ ಮದ್ಯ ಸೇವನೆಯನ್ನು ಕಾಯಕವನ್ನಾಗಿಸಿಕೊಂಡಿದ್ದರು. ಲಾಕ್‌ಡೌನ್ ಸಮಯದಲ್ಲಿಯೂ ಕೆಲವರು ಇದನ್ನೇ ರೂಢಿಸಿಕೊಂಡಿದ್ದರು. ಪಟ್ಟಣದ ಹೊರ ವಲಯದ ಬಯಲು, ಹರಪನಹಳ್ಳಿ ರಸ್ತೆಯಲ್ಲಿರುವ ಐಟಿಐ
ಕಾಲೇಜು ಸುತ್ತಮುತ್ತ ಪ್ರದೇಶ ಮದ್ಯ ಸೇವಿಸುವವರ ತಾಣವಾಗಿತ್ತು.
ಪ್ರತಿದಿನ ಸಂಜೆಯಾಗುತ್ತಿದ್ದಂತೆ ಮದ್ಯ ಸೇವಿಸುವವರ ಗುಂಪುಗಳು ಕಾಲೇಜು ಆವರಣಕ್ಕೆ ದಾಂಗುಡಿ ಇಡುತ್ತಿದ್ದವು. ಈ ತರಹದ
ಚಟುವಟಿಕೆ ನಿಯಂತ್ರಿಸಲು ಕಾಲೇಜು ಸಿಬ್ಬಂದಿ ಹರಸಾಹಸಪಟ್ಟರೂ ಸಾಧ್ಯವಾಗಿರಲಿಲ್ಲ. ಇದರ ಪರಿಣಾಮವಾಗಿ ಕಾಲೇಜು ಅಂಗಳ, ಗಿಡಮರಗಳ ಕೆಳಗೆ ಎಲ್ಲೆಂದರಲ್ಲಿ ಮದ್ಯದ ಬಾಟಲಿ, ನೀರಿನ ಬಾಟಲಿ, ಪ್ಯಾಕೇಟ್‌ಗಳು ಎಲ್ಲೆಂದರಲ್ಲಿ ಹರಡಿತ್ತು.
ಇದನ್ನರಿತ ಯುವಕರ ತಂಡ ಪರಿಸರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ತೀರ್ಮಾನ ಕೈಗೊಂಡ ಸುಮಾರು 10ಕ್ಕೂ ಹೆಚ್ಚು ಎಕರೆ ವಿಶಾಲವಾಗಿರುವ ಐಟಿಐ ಕಾಲೇಜು ಆವರಣದಲ್ಲಿ ಶ್ರಮದಾನ ನಡೆಸಿದ್ದಾರೆ.
ಅಪಾರ ಪ್ರಮಾಣದ ಮದ್ಯದ ಬಾಟಲಿ, ಅಂದಾಜು 300 ಕೆ.ಜಿಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಆರಿಸಿ ವಿಲೇವಾರಿಗೆ
ಪುರಸಭೆಗೆ ಹಸ್ತಾಂತರಿಸಿದ್ದಾರೆ. ಯುವಕರ ಪರಿಸರ ಕಾಳಜಿಯನ್ನು ಐ.ಟಿ.ಐ ಕಾಲೇಜು ಸಿಬ್ಬಂದಿ ಹಾಗೂ ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಛಾಯಾಚಿತ್ರ ತೆಗೆಸಿಕೊಳ್ಳುವುದಕ್ಕಾಗಿ ಗಿಡ ನೆಟ್ಟು ಸಾಂಕೇತಿಕ ಪರಿಸರ ದಿನ ಆಚರಿಸುವವರ ನಡುವೆ ನೈಜ ಪರಿಸರ ಕಾಳಜಿ ಮೆರೆದಿರುವ ಹಸಿರು ಪರ್ವ ತಂಡದ ಟಿ.ತಿರುಮಲ, ಕೆ.ಎಸ್. ಶಮಂತ್, ವಿನಾಯಕ, ಜಾನ್ ಬೆನ್ಸನ್, ಚಾಂದ ಬಾಷಾ, ಜಿ.ಪುನೀತ್, ಮಂಜುನಾಥ, ಭರತೇಶ, ಜೆ.ಸೇತುರಾಂ, ಟಿ.ಹರೀಶ್ ಮಾದರಿಯಾಗಿದ್ದಾರೆ.ಕಳೆದ ವರ್ಷ ಇದೇ ಸ್ಥಳದಲ್ಲಿ ಶ್ರಮದಾನ ನಡೆಸಿ ಕಾಲೇಜು ಆವರಣವನ್ನು ಶುಚಿಗೊಳಿಸಿದ್ದೆವು. ಇಲ್ಲಿಗೆ ಮದ್ಯ ಸೇವಿಸಲು ಬರುವವರು ಬಾಟಲಿ ಒಡೆದು ವಿಕೃತ ಮೆರೆಯುತ್ತಾರೆ. ಗಾಜುಗಳನ್ನು ಹೆಕ್ಕಿ ತೆಗೆಯುವುದು ಸಮಸ್ಯೆಯಾಗುತ್ತದೆ. ಕೈಗವಸು ಸೇರಿದಂತೆ ಸುರಕ್ಷಿತ ಸಾಧನಗಳನ್ನು ದಾನಿ ಗಳು ಒದಗಿಸಿದಲ್ಲಿ ಇನ್ನು ಹೆಚ್ಚಿನ ರೀತಿ ಸೇವೆ ಸಲ್ಲಿಸಲು ಸಿದ್ಧರಿದ್ದೇವೆ ಎನ್ನುತ್ತಾರೆ ಯುವಕರು.
***
ಪ್ಲಾಸ್ಟಿಕ್ ಮತ್ತು ಗಾಜನ್ನು ಎಲ್ಲೆಂದರಲ್ಲಿ ಬಳಸಿ ಬಿಸಾಡುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಪರಿಸರ ಸಂರಕ್ಷಣೆಯ
ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ನೇಹಿತರ ಜೊತೆಗೆ ಶ್ರಮದಾನ ಮಾಡಲಾಗಿದೆ.
-ಗಿರೀಶ್ ಹಸಿರು ಪರ್ವ ತಂಡ ಮುಖ್ಯಸ್ಥ
ಹಡಗಲಿ