Sunday, 15th December 2024

ವ್ಯಾಟಿಕನ್‌ ಸುದ್ದಿಮನೆಯಲ್ಲಿ ರಾರಾಜಿಸಲಿದೆ ನಮ್ಮ ಸಿರಿಗನ್ನಡ

ಪ್ರಚಲಿತ

ಸೌಮ್ಯ ಗಾಯತ್ರಿ

ವ್ಯಾಟಿಕನ್ ವಾರ್ತೆ ವಿಶ್ವದ ಅತಿ ದೊಡ್ಡ ಧರ್ಮಸಭೆ, ಸುಮಾರು ಎರಡು ಸಾವಿರ ವರ್ಷಗಳಿಂದ ನಿರಂತರ ಸಾಮಾಜಿಕ ಕಳಕಳಿಯಿಂದ, ಸಮಾಜದ ಏಳಿಗೆಗಾಗಿ ಅನವರತ ಶ್ರಮಿಸುತ್ತಾ ಬಂದಿರುವ, ಸಕ್ಷಮವಾಗಿ ಕಾರ್ಯ ನಿರ್ವಹಿಸು ತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆ ಎಂದರೆ ಈ ರೋಮನ್ ಕ್ಯಾಥೋಲಿಕ್ ಧರ್ಮಸಭೆಯ ಮೇಲ್ವಿಚಾರಕ ಸಂಸ್ಥೆ ಹೋಲಿ ಸೀ. ವಿಶ್ವದ ಅತಿ ಚಿಕ್ಕ ಮತ್ತು ಕನಿಷ್ಠ ಜನಸಂಖ್ಯೆಯುಳ್ಳ ದೇಶವೆಂದು ಜನಜನಿತ ವಾಗಿರುವ ವ್ಯಾಟಿಕನ್ ಪವಿತ್ರ ಪೀಠವು ಅನೇಕಾನೇಕ ರಾಷ್ಟ್ರಗಳೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ.

ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು ಎಂಬ ನಮ್ಮ ರಾಷ್ಟ್ರಕವಿ ಕುವೆಂಪುರವರ ಲೇಖನಿಯಿಂದ
ಹೊಮ್ಮಿರುವ ಈ ಸಾಲುಗಳು ಮೈ ಜುಮ್ಮೆನಿಸುವುದಲ್ಲದೆ ಕನ್ನಡ ಎಂದೊಡನೆ ಕಿವಿ ನಿರುವುದರ ಜತೆ ಜತೆಗೆ ಎದೆ ಬಡಿತ ಹೆಚ್ಚಾಗುವುದು ಖಚಿತ. ನಮ್ಮ ಭಾಷೆಯಲ್ಲಿ ಸ್ವಲ್ಪ ಮಾಧುರ್ಯತೆ, ಸವಿ ತುಸು ಹೆಚ್ಚೆ ಎಂದರೆ ತಪ್ಪಾಗಲಾರದು.

ಈ ಕನ್ನಡ ಭಾಷೆಗೆ ಈಗ ಮತ್ತೊಂದು ಹೆಚ್ಚಿನ ಆದ್ಯತೆ, ಮಾನ್ಯತೆ ಮತ್ತು ವಿಶೇಷ ದರ್ಜೆ ದೊರೆತಿರುವುದು ಅತೀವ ಸಂತೋಷ ದಾಯಕ ವಿಷಯ. ಏನಿದು ಎಂದು ಯೋಚಿಸುತ್ತಿದ್ದೀರೇ? ಕನ್ನಡ ಕ್ರೈಸ್ತ ಸಮುದಾಯದವರಿಗೆ ಬಹಳ ಸಂತಸದ ಸುದ್ದಿ ಇದು. ನಮ್ಮ ಸವಿಕನ್ನಡ ವ್ಯಾಟಿಕನ್ ಸುದ್ದಿಮನೆಯಲ್ಲಿ ಸದ್ದು ಮಾಡಲಿದೆ.

ಭಾರತದಲ್ಲಿ ಅಧಿಕೃತವಾಗಿ ಮನ್ನಣೆಗೊಳಗಾಗಿರುವ 4ನೆಯ ಭಾಷೆ ಇದಾಗಿದೆ. ಇನ್ನು ಮುಂದೆ ವ್ಯಾಟಿಕನ್ ಪವಿತ್ರ ಪೀಠಕ್ಕೆ ,ಪೋಪ್ ಜಗದ್ಗುರುಗಳಿಗೆ ಸಂಬಂಽಸಿದ ಎಲ್ಲ ಸುದ್ದಿ ಸಮಾಚಾರಗಳೂ ಪ್ರಪಂಚದಾದ್ಯಂತ ಕನ್ನಡದಲ್ಲೂ ಓದಿ ತಿಳಿಯಲು ಸಾಧ್ಯವಾಗಿದೆ.

ಪವಿತ್ರ ಪೀಠ ಎಂದರೇನು? ಏನಿದು ವ್ಯಾಟಿಕನ್ ವಾರ್ತೆ? ಇದರಿಂದ ಏನು ಪ್ರಯೋಜನ? ಇವೆಲ್ಲ ಪ್ರಶ್ನೆಗಳು ಹುಟ್ಟುವುದು ಸಹಜ. ಒಂದೊಂದಾಗಿ ಈ ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ. ಹೋಲಿ ಸೀ ಅಥವಾ ಕ್ರೈಸ್ತ ಧರ್ಮದ ಪವಿತ್ರ ಪೀಠ ಎನ್ನುವುದು ಕಥೋಲಿಕ ಧರ್ಮಸಭೆಯ ನೇತಾರ ಧರ್ಮಗುರು ಪೋಪ್ ಜಗದ್ಗುರುಗಳ ಆಡಳಿತಕ್ಕೆ ಸೇರಿದ ರೋಮ್ ನಗರ ಮತ್ತು ಅಂತಾರಾ ಷ್ಟ್ರೀಯ ಕಾನೂನಿನ ವ್ಯಾಪ್ತಿಯಲ್ಲಿ ವ್ಯಾಟಿಕನ್ ನಗರವನ್ನು ಆಳುವ ಒಂದು ಸಾರ್ವಭೌಮ ಘಟಕವಾಗಿದೆ.

ಈ ಹೋಲಿ ಸೀ ಅಥವಾ ಪವಿತ್ರ ಪೀಠ ರಾಜಕೀಯ ಅಸ್ತಿತ್ವವಾಗಿದ್ದು ಒಂದು ಕೇಂದ್ರೀಕೃತ ಸರಕಾರವನ್ನು ಹೊಂದಿದೆ ರೋಮ್ ಮತ್ತು ವ್ಯಾಟಿಕನ್ ನಗರದ ಭೌಗೋಳಿಕ ಪ್ರದೇಶದ ಮೇಲೆ ಸಾರ್ವಭೌಮತ್ವವನ್ನು ಹೊಂದಿದೆ. ಈ ಪವಿತ್ರ ಪೀಠವನ್ನು ಕ್ಯಾಥೊ ಲಿಕ್ ಚರ್ಚಿನ ಕೇಂದ್ರ ಸರಕಾರವಾದ ರೋಮನ್ ಕ್ಯೂರಿಯಾ ಅಂದರೆ ರೋಮನ್ ಸಚಿವಾಲಯ ನಿರ್ವಹಿಸುತ್ತದೆ. ಈ ರೋಮನ್ ಕ್ಯೂರಿಯಾನಲ್ಲಿ ಅನೇಕ ಸಚಿವಾಲಯಗಳು ಇವೆ.

ಕಾರ್ಡಿನಲ್ ಸ್ಟೇಟ್ ಸೆಕ್ರೆಟರಿ ಅದರ ಮುಖ್ಯ ನಿರ್ವಾಹಕರಾಗಿರುತ್ತಾರೆ. ಕೆಥೋಲಿಕ ಸಂಪ್ರದಾಯದ ಪ್ರಕಾರ ಇದನ್ನು ಸಂತರು ಗಳಾದ ಪೀಟರ್ ಮತ್ತು ಪೌಲ್ ರವರು ಮೊದಲನೆಯ ಶತಮಾನದಲ್ಲಿ ಸ್ಥಾಪಿಸಿದರು. ಪವಿತ್ರ ಪೀಠವು ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಪವಿತ್ರ ಪೀಠಕ್ಕೆ ಪೋಪ್ ಸಾರ್ವಭೌಮ ವ್ಯಕ್ತಿ. ಈ ಪವಿತ್ರ ಪೀಠವನ್ನು ಕೆಲವೊಮ್ಮೆ ವ್ಯಾಟಿಕನ್ ಎಂದು ಕರೆಯ ಲಾದರೂ, ಇಟಲಿ ಮತ್ತು ಹೋಲಿ ಸೀ ನಡುವೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ ವ್ಯಾಟಿಕನ್ ರಾಜ್ಯವನ್ನು ವಿಶಿಷ್ಟ ವಾಗಿ ಸ್ಥಾಪಿಸಲಾಗಿದೆ.

ಈ ವ್ಯಾಟಿಕನ್ ರಾಜ್ಯವು ತಾತ್ಕಾಲಿಕ, ರಾಜತಾಂತ್ರಿಕ ಮತ್ತು ಪೋಪ್ ಜಗದ್ಗುರುಗಳ ಅಧ್ಯಾತ್ಮಿಕ ಸ್ವಾತಂತ್ರ್ಯದ ಮತ್ತು ರಾಜ ಪ್ರಭುತ್ವದ ಘಟಕವಾಗಿದೆ.  ಪವಿತ್ರ ಪೀಠವನ್ನು ಕೆಥೋಲಿಕ ಧರ್ಮಸಭೆಯ ಕೇಂದ್ರ ಸರಕಾರವೆಂದು ಪರಿಗಣಿಸಲಾಗುತ್ತದೆ.
ಕಥೋಲಿಕ ಕಾನೂನನ್ನು ಕ್ಯಾನನ್ ಲಾ ಎಂದು ಕರೆಯಲಾಗುತ್ತದೆ. ಇದರಲ್ಲಿ ಸೂಚಿಸಿರುವಂತೆ ಪ್ರಪಂಚದ ಅನೇಕ ರಾಜ್ಯಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ವ್ಯಾಟಿಕನ್ ರಾಜ್ಯದಿಂದಲ್ಲದೆ ಈ ಪವಿತ್ರ ಪೀಠದ ಪ್ರತಿನಿಧಿಗಳನ್ನು ಕಳುಹಿಸಲಾಗುತ್ತದೆ.

ಪವಿತ್ರ ಪೀಠವು ವಿಶ್ವದ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಸೌಲಭ್ಯಗಳ ಅತಿದೊಡ್ಡ ಸರಕಾರೇತರ ಪೂರೈಕೆದಾರ ಎಂಬುದು
ಗಮನಾರ್ಹ ಅಂಶ. ವ್ಯಾಟಿಕನ್ ವಾರ್ತೆ ವಿಶ್ವದ ಅತಿ ದೊಡ್ಡ ಧರ್ಮಸಭೆ, ಸುಮಾರು ಎರಡು ಸಾವಿರ ವರ್ಷಗಳಿಂದ ನಿರಂತರ ಸಾಮಾಜಿಕ ಕಳಕಳಿಯಿಂದ, ಸಮಾಜದ ಏಳಿಗೆಗಾಗಿ ಅನವರತ ಶ್ರಮಿಸುತ್ತಾ ಬಂದಿರುವ, ಸಕ್ಷಮವಾಗಿ ಕಾರ್ಯ ನಿರ್ವಹಿಸು
ತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆ ಎಂದರೆ ಈ ರೋಮನ್ ಕ್ಯಾಥೋಲಿಕ ಧರ್ಮಸಭೆಯ ಮೇಲ್ವಿಚಾರಕ ಸಂಸ್ಥೆ ಹೋಲಿ ಸೀ.

ವಿಶ್ವದ ಅತೀ ಚಿಕ್ಕ ಮತ್ತು ಕನಿಷ್ಠ ಜನಸಂಖ್ಯೆಯುಳ್ಳ ದೇಶವೆಂದು ಜನಜನಿತ ವಾಗಿರುವ ವ್ಯಾಟಿಕನ್ ಪವಿತ್ರ ಪೀಠವು ಅನೇಕಾ ನೇಕ ರಾಷ್ಟ್ರಗಳೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ. ವ್ಯಾಟಿಕನ್ ಪವಿತ್ರ ಪೀಠವು ಪ್ರಪಂಚದಾದ್ಯಂತ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಕ್ರೈಸ್ತ ಧರ್ಮಾಧ್ಯಕ್ಷರುಗಳೊಂದಿಗೆ ನೇರ ಸಂಪರ್ಕದಲ್ಲಿರುವುದಲ್ಲದೆ, ಅವರ ಆಯ್ಕೆ ಪ್ರಕ್ರಿಯೆ ಮತ್ತು ಅನೇಕ ಚರ್ಚ್‌ಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಪೋಪ್ ಜಗದ್ಗುರುಗಳು ಖುದ್ದಾಗಿ ತೆಗೆದುಕೊಳ್ಳುತ್ತಾರೆ.

ಸುಮಾರು 3500 ಧರ್ಮಕ್ಷೇತ್ರ ಗಳ ನಿರ್ವಹಣೆ ಮತ್ತು ಅವುಗಳ ಬೆಳವಣಿಗೆ ಈ ಪೀಠದ ಆಡಳಿತದ ಸುಪರ್ದಿಗೆ ಒಳಪಟ್ಟಿದೆ. ಈ ಪೀಠದ ಎಲ್ಲಾ ಮಾಹಿತಿಗಳೂ ವ್ಯಾಟಿಕನ್ ನ್ಯೂಸ್ (ವ್ಯಾಟಿಕನ್ ವಾರ್ತೆ) ವೆಬ್‌ಸೈಟ್ (ಜಾಲತಾಣ) https://www.
vaticannews.va/en.html  ನಲ್ಲಿ ನೋಡಬಹುದು, ಓದಿ ತಿಳಿಯಬಹುದು. ಈ ಜಾಲತಾಣದ ಕಾರ್ಯವನ್ನು ಸಂಪರ್ಕ
ಮಾಧ್ಯಮಗಳ ಅಧಿಕೃತ ಸಭೆಯು (Dicastery for ommunication) ನಿಭಾಯಿಸುತ್ತಿದೆ.

ಈ ಜಾಲತಾಣದಲ್ಲಿ ಪವಿತ್ರ ಪೀಠದಲ್ಲಿ ನಡೆಯುವ ಸಕಲ ಆಗುಹೋಗುಗಳು, ಪೋಪ್ ಜಗದ್ಗುರುಗಳ  ಅನೇಕ ಕಾರ್ಯ ಕಲಾಪಗಳು, ಸಂದೇಶಗಳು, ಅವರ ವಿದೇಶ ಸಂಪರ್ಕಗಳು, ಅವರ ಪ್ರಾರ್ಥನೆ, ಸಮುದಾಯಕ್ಕೆ ನೀಡುವ ಕರೆಗಳು, ಧಾರ್ಮಿಕ ರೀತಿ ರಿವಾಜುಗಳು, ರಾಜಕೀಯ ಮತ್ತು ಸಾಮಾಜಿಕ ಕಳಕಳಿಯ ಸಮಗ್ರ ಮಾಹಿತಿಗಳು, ಧರ್ಮಸಭೆಯ ಆಡಳಿತ ಸಂಬಂಧಿಸಿದ ವಿಚಾರಗಳು 39 ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಲಭ್ಯವಿದೆ. ಇದು ಬಳಕೆದಾರರ ಬಲು ಸ್ನೇಹಿ ಜಾಲತಾಣವಾಗಿದೆ.

ಭಾರತದಿಂದ ಹಿಂದಿ, ತಮಿಳು ಮತ್ತು ಮಲಯಾಳಂ ಈಗಾಗಲೇ ಈ 39 ಭಾಷೆಗಳಲ್ಲಿ ಸೇರ್ಪಡೆಯಾಗಿರುವುದು ಮತ್ತು ಈಗ ನಮ್ಮ ಕನ್ನಡ 4ನೆಯ ಭಾಷೆಯಾಗಿ ಸೇರ್ಪಡೆ ಯಾಗುತ್ತಿರುವುದು ಬಹಳ ಸಂತಸದ ವಿಷಯ. ಈ ನಿಟ್ಟಿನಲ್ಲಿ ಕರ್ನಾಟಕ
ಪ್ರಾಂತೀಯ ಧರ್ಮಾಧ್ಯಕ್ಷರು ಗಳ ಮಂಡಳಿ ಹಾಗೂ ಬೆಂಗಳೂರು ಮಹಾಧರ್ಮ ಕ್ಷೇತ್ರವು ವ್ಯಾಟಿಕನ್ ಪವಿತ್ರ ಪೀಠದ ಸಂಪರ್ಕ ಮಾಧ್ಯಮ ಕೇಂದ್ರದ ಆಹ್ವಾನ ಮೇರೆಗೆ ಕನ್ನಡದಲ್ಲಿ ವ್ಯಾಟಿಕನ್ ವಾರ್ತಾ ಪ್ರಸಾರ ಮಾಡುವ ಪ್ರಯತ್ನಕ್ಕೆ ಕೈ ಹಚ್ಚಿರುವುದು,
ಅದರಲ್ಲಿ ಯಶಸ್ಸನ್ನು ಕಾಣುವ ಹಾದಿಯಲ್ಲಿ ಸಾಗುತ್ತಿರುವುದು ನಿಜವಾಗಿಯೂ ಪ್ರಶಂಸಾರ್ಹ ವಿಷಯ.

ಇದರ ಸಲುವಾಗಿ ಶ್ರಮಿಸಿದ ಬೆಂಗಳೂರು ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರು ಮತ್ತು ಕರ್ನಾಟಕ ಪ್ರಾಂತೀಯ ಧರ್ಮಾಧ್ಯಕ್ಷರ
ಮುಖ್ಯಸ್ಥರಾದ ಪೀಟರ್ ಮಚಾಡೋ, ಬಳ್ಳಾರಿ ಧರ್ಮಾಧ್ಯಕ್ಷರು ಹಾಗೂ ರಾಜ್ಯ ಕ್ರೈಸ್ತ ಸಂವಹನ ಮಾಧ್ಯಮ ಮಂಡಳಿಯ ಮುಖ್ಯಸ್ಥರಾದ ಹೆನ್ರಿ ಡಿಸೋಜಾ ರವರಿಗೆ ತುಂಬು ಹೃದಯದ ಧನ್ಯವಾದ ಗಳು ಸಲ್ಲಲೇಬೇಕು. ಈ ಕಾರ್ಯದಲ್ಲಿ ಯಶಸ್ಸಿಗಾಗಿ
ಅಹೋರಾತ್ರಿ ಶ್ರಮಿಸುತ್ತಿರುವ ಬೆಂಗಳೂರು ಮಹಾಧರ್ಮಕ್ಷೇತ್ರದ ಸಂಪರ್ಕ ಮಾಧ್ಯಮಗಳ ಕೇಂದ್ರದ ನಿರ್ದೇಶಕರಾದ ಸಿರಿಲ್ ವಿಕ್ಟರ್ ಜೋಸೆಫ್ ಅವರು ನಾನಾ ಕ್ಷೇತ್ರಗಳಿಂದ ಆಯ್ದ 20 ಮಂದಿ ಅನುವಾದಕರ ತಂಡದ ರಚನೆಯನ್ನು ಮಾಡಿದ್ದು
ವ್ಯಾಟಿಕನ್ ಜಾಲತಾಣದ ಸುದ್ದಿಯನ್ನು ಕನ್ನಡದಲ್ಲಿ ಉಣಬಡಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಕೆಲವು ತಾಂತ್ರಿಕ ಕಾರ್ಯಗಳು, ವ್ಯವಸ್ಥೆಗಳು ಇನ್ನೂ ಪ್ರಗತಿಯಲ್ಲಿರುವ ಕಾರಣ ವಿಶ್ವದಾದ್ಯಂತ ಕನ್ನಡಿಗರು ಸ್ವಲ್ಪ ಸಮಯ ತಾಳ್ಮೆಯಿಂದ ಕಾಯಬೇಕಾಗಿದೆ. ಇನ್ನೂ 3 ತಿಂಗಳುಗಳಲ್ಲಿ ಕನ್ನಡದಲ್ಲಿ ವ್ಯಾಟಿಕನ್ ಜಾಲತಾಣದಲ್ಲಿ ಕನ್ನಡ ಕಂಗೊಳಿಸಲಿದೆ. ಈ ಮಧ್ಯೆ ತಾಂತ್ರಿಕ ನೈಪುಣ್ಯತೆ ಗಳಿಸಲು, ಭಾಷಾ ಶ್ರೇಷ್ಠತೆ ಕಾಯ್ದಿರಿಸಿಕೊಂಡು, ಗುಣಮಟ್ಟದ ಅನುವಾದ ಗಳನ್ನು ಮಾಡಲು
ಶ್ರಮಿಸುವಂತೆ ಕೋರುತ್ತಾ, ಬೆಂಗಳೂರಿನ ಮಹಾಧರ್ಮಾಧ್ಯಕ್ಷರು ಭಾನುವಾರ, ಮೇ 22 ರಂದು ಬೆಂಗಳೂರು ಧರ್ಮಕ್ಷೇತ್ರದ ಜಾಲತಾಣದಲ್ಲಿ https://www.bangalorearchdiocese.org/ ಈ ವ್ಯಾಟಿಕನ್ ಸುದ್ದಿ ಲಭ್ಯವಾಗುವಂತೆ ಅದನ್ನು
ಔಪಚಾರಿಕವಾಗಿ ಬಿಡುಗಡೆಗೊಳಿಸಿದರು.

ಎಲ್ಲವೂ ಬಹಳ ಸುಸಜ್ಜಿತವಾಗಿ ನಿಯೋಜಿಸಿದಂತೆ ನಡೆದಲ್ಲಿ, ನಮ್ಮ ಅನುವಾದದ ಗುಣಮಟ್ಟಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಲ್ಲಿ ಇನ್ನು ಕೇವಲ 6 ತಿಂಗಳಲ್ಲಿ ವ್ಯಾಟಿಕನ್ ರೇಡಿಯೋ ಕನ್ನಡ ವ್ಯಾಟಿಕನ್ ಸುದ್ದಿಯನ್ನು ಬಿತ್ತರಿಸುತ್ತದೆ. ಮಹಾ ಧರ್ಮಕ್ಷೇತ್ರದ ಈ ಹೆಜ್ಜೆ ನಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿ ವಿಶ್ವದಾದ್ಯಂತ ಕನ್ನಡದ ಕಂಪನ್ನು ಹರಡುವ
ಸುಕಾರ್ಯಕ್ಕೆ ಅಡಿಪಾಯ ಹಾಕಿದಂತಾಗಿದೆ. ಹೀಗೆ ಅನೇಕ ರೀತಿಯ ಜನಮನರನ್ನು ಮುಟ್ಟುವ ಕಾರ್ಯಗಳು ಆ ಭಗವಂತನ ಕೃಪೆಯಿಂದ ನಡೆಯಲಿ ಎಂಬುದು ಮನದಾಳದ ಹಾರೈಕೆ.