Thursday, 12th December 2024

ನಾವು ಯಾರಿಗೇನೂ ಕಡಿಮೆ ಇಲ್ಲ

ಪ್ರಚಲಿತ

ಪ್ರಕಾಶ್ ಶೇಷರಾಘವಾಚಾರ್‌

ಹಾದಿ ಬೀದಿ ರಂಪ ಮಾಡಿಕೊಳ್ಳುವ ಕಾಯಿಲೆ ಸರಕಾರದ ಅತ್ಯುನ್ನತ ಹುದ್ದೆಯಲ್ಲಿ ಇರುವವರಿಗೂ ಅಂಟಿಕೊಂಡಂತೆ ಕಾಣು ತ್ತಿದೆ. ರಾಜಕಾರಣಿಗಳು ಬೀದಿಯಲ್ಲಿ ಬಡಿದಾಡಿಕೊಂಡರೆ ಇವರ ಜಾಯಮಾನವೇ ಇಷ್ಟು ಎಂದು ಜನ ತಲೆಯನ್ನೇ ಕೆಡಿಸಿ ಕೊಳ್ಳುವುದಿಲ್ಲ. ಆದರೆ ಐಎಎಸ್ ಅಧಿಕಾರಿಗಳು ಬೀದಿಗಿಳಿದು ಜಗಳವಾಡಿದರೆ ಜನಕ್ಕೆ ವ್ಯವಸ್ಥೆಯ ಬಗ್ಗೆಯೇ ವಿಶ್ವಾಸ ಹೋಗುತ್ತದೆ.

ಇನ್ನು ಎಲ್ಲಾ ಮುಗಿದ ಹಾಗೆ ಎಂದು ಹತಾಶರಾಗುತ್ತಾರೆ. ಜನ ರಾಜಕಾರಣಿಗಳನ್ನು ತೂಗುವ ತಕ್ಕಡಿಯೇ ಬೇರೆ ಮತ್ತು
ಐಎಎಸ್ ಅಧಿಕಾರಿಗಳನ್ನು ಅಳೆಯುವ ತಕ್ಕಡಿಯೇ ಬೇರೆಯದು. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು
ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರ ಸಾರ್ವಜನಿಕವಾಗಿ ನಡೆದ ಕಿತ್ತಾಟ ಅಧಿಕಾರಿಶಾಹಿಯ ಮೇಲಿನ ವಿಶ್ವಾಸವನ್ನು ಅಲುಗಾಡಿಸಿದೆ.

ಇವರಿಬ್ಬರ ಕಿತ್ತಾಟ ತದನಂತರದ ಸಂಧಾನವೆಲ್ಲಾ ಮುಗಿದ ತರುವಾಯು ರಾಜ್ಯಸರಕಾರ ಇಬ್ಬರನ್ನು ಮೈಸೂರಿನಿಂದ
ಎತ್ತಂಗಡಿ ಮಾಡಿದರು. ಕರ್ನಾಟಕ ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ತತ್ತರಿಸಿದೆ. ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ನಮ್ಮಲ್ಲಿ ಇರುವುದು ಮತ್ತು ದಿನನಿತ್ಯ ೩೦೦ಕ್ಕೂ ಹೆಚ್ಚು ಸಾವು ಸಂಭವಿಸುತ್ತಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಅಽಕಾರಿಗಳು ತಮ್ಮ ಶ್ರಮ, ಶಕ್ತಿ ಮತ್ತು ಎಲ್ಲಾ ಗಮನವನ್ನು ಸೋಂಕು ನಿಯಂತ್ರಿಸಲು ಉಪಯೋಗಿಸಬೇಕಾಗಿತ್ತು. ಆದರೆ ಇಬ್ಬರಿಗೂ ಜನರ ಆರೋಗ್ಯ ಮತ್ತು ಪ್ರಾಣಕ್ಕಿಂತ ತಮ್ಮ ಅಹಂ ಮತ್ತು ಪ್ರತಿಷ್ಠೆಯೇ ಹೆಚ್ಚಾಗಿತ್ತು.

ಪ್ರಾಯಶಃ ಅಧಿಕಾರದ ಅಮಲು ಜನರ ಸಂಕಷ್ಟಕ್ಕೆ ಪ್ರಾಮುಖ್ಯತೆ ನೀಡಬೇಕು ಎಂಬ ಪ್ರಾಥಮಿಕ ಸಂಗತಿಯನ್ನೂ ಮರೆತ ಹಾಗೆ ಕಾಣುತ್ತದೆ ಎನ್ನುತ್ತಾರೆ ರಾಜ್ಯದ ಹಿರಿಯ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು. ಸರಕಾರದ ಹಿರಿಯ ಅಧಿಕಾರಿಗಳು ಮೇಲಾಟ ಮತ್ತು ಕಿತ್ತಾಟ ಮೊದಲ ಬಾರಿ ನಡೆದ ಘಟನೆಯಲ್ಲ ಮತ್ತು ಅಂತಿಮವೂ ಅಲ್ಲ. ಆಶ್ಚರ್ಯವೆಂದರೆ ಮೈಸೂರಿನಂತಹ ಸುಂದರ ಮತ್ತು ಅತ್ಯಂತ ಶಾಂತವಾದ ನಗರದಲ್ಲಿ ಅಧಿಕಾರಿಗಳು ಶಾಂತಿ ಕಳೆದು ಕೊಂಡು ಅಶಾಂತ ವಾತಾವರಣ ನಿರ್ಮಿಸಿ ಮೈಸೂರಿನ ವರ್ಚಸ್ಸಿಗೆ ಕಳಂಕ ತರುವಂತಹ ವರ್ತನೆ ಮತ್ತೆ ಪುನರಾವರ್ತನೆಯಾಗಿರುವುದು.

೧೯೯೧ನೇ ಇಸವಿಯಲ್ಲಿ ಅಂದು ಮೈಸೂರಿನ ಡಿಸಿಪಿಯಾಗಿದ್ದ ಸೋಮಶೇಖರ್ ಅವರು ತಮ್ಮ ಪತ್ನಿ ಈಜಾಡುತ್ತಿದ್ದನ್ನು ನೋಡುತ್ತಿದ್ದ ಎಂದು ಸತ್ಯದೇವ ಎಂಬ ಯುವಕನನ್ನು ಹೊಡೆದ ಹೊಡೆತಕ್ಕೆ ಆತ ಸತ್ತೇ ಹೋದನು. ಅಂದಿನ ದಿನದಲ್ಲಿ ಇದೊಂದು ದೊಡ್ಡ ಸುದ್ದಿ ಪ್ರಕರಣ ಹಲವು ತಿರುವು ಪಡೆದು ಅಂತಿಮವಾಗಿ ಸೋಮಶೇಖರ್ ಅವರ ಸಾವಿನಲ್ಲಿ ಕೊನೆ ಯಾಯಿತು. ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ನಿರ್ದೇಶಕಿಯಾಗಿದ್ದ
ಸಂದರ್ಭದಲ್ಲಿ ಸಂಸ್ಥೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಹಿಂದಿನ ನಿರ್ದೇಶಕಿ ಅಮಿತಾ ಪ್ರಸಾದ್ ರವರ ವಿರುದ್ದ ಸರಕಾರಕ್ಕೆ ೨೦೧೪ರಲ್ಲಿ ದೂರು ಸಲ್ಲಿಸುತ್ತಾರೆ.

ಸಿಬ್ಬಂದಿಯೊಬ್ಬರ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಲು ರಶ್ಮಿಯವರು ತೆರಳಿದಾಗ ಮೃತರ ಬಂಧುಗಳು ಇವರ ಮೇಲೆ ಹಲ್ಲೆಯನ್ನು ಮಾಡುತ್ತಾರೆ. ರಶ್ಮಿಯವರು ತಮ್ಮ ಹಿಂದಿನ ಮಹಾನಿರ್ದೇಶಕಿ ಅಮಿತಾ ಪ್ರಸಾದ್‌ರವರೇ ಇದಕ್ಕೆ ಕಾರಣ, ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತಾರೆ. ಘಟನೆ ನಡೆದು ಏಳು ವರ್ಷವಾದರೂ ಭ್ರಷ್ಟಾ ಚಾರದ ತನಿಖೆಯ ವರದಿಯು ಇನ್ನೂ ಹೊರ ಬರುವುದರಲ್ಲೇ ಇದೆ.

ಜಯಲಲಿತಾ ಸ್ನೇಹಿತೆ ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಡಿಐಜಿ(ಬಂದೀಖಾನೆ) ರೂಪಾ ಮೌದ್ಗಿಲ್‌ರವರು ತಮ್ಮ ಹಿರಿಯ ಅಧಿಕಾರಿ ಡಿಜಿ(ಬಂದೀಖಾನೆ) ಸತ್ಯನಾರಾಯಣ ರಾವ್ ವಿರುದ್ದ ಲಿಖಿತ ದೂರು ನೀಡಿ ದೊಡ್ಡ ವಿವಾದಕ್ಕೆ ಕಾರಣರಾಗಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ರೂಪ ಮುದ್ಗಲ್ ರವರನ್ನು
ವರ್ಗಾವಣೆ ಮಾಡಿ ಇಡಿ ಪ್ರಕರಣದ ತಿಪ್ಪೆಸಾರಿಸಿ ಮುಕ್ತಾಯ ಮಾಡಿದ್ದರು.

ರೂಪಾ ಮೌದ್ಗಿಲ್ ಅವರು ಗೃಹ ಕಾರ್ಯದರ್ಶಿ ಯಾಗಿದ್ದ ಸಂದರ್ಭದಲ್ಲಿ ನಿರ್ಭಯಾ ನಿಧಿಯಲ್ಲಿ ಸೇಫ್ ಸಿಟಿ ಯೋಜನೆಯಲ್ಲಿ ಬೆಂಗಳೂರಿಗೆ ಸಿಸಿಟಿವಿ ಕ್ಯಾಮರಾ ಖರೀದಿಸಲು ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಅಂದಿನ ಹೆಚ್ಚುವರಿ ಪೊಲೀಸ್ ಆಯುಕ್ತ ರಾಗಿದ್ದ ಮಂತ್ ನಿಂಬಾಳ್ಕರ್ ಅವರು ಅಕ್ರಮ ನಡೆಸಿದ್ದಾರೆ ಎಂದು ಸರಕಾರಕ್ಕೆ ದೂರು ನೀಡಿ ದೊಡ್ಡ ವಿವಾದಕ್ಕೆ ಕಾರಣ ರಾಗಿದ್ದರು. ಅಂತಿಮವಾಗಿ ರೂಪ ಮುದ್ಗಲ್ ಮತ್ತು ಹೇಮಂತ್ ನಿಂಬಾಳ್ಕರ್ ವರ್ಗಾವಣೆಯಲ್ಲಿ ಪ್ರಕರಣದ ಪರ್ಯವಸಾನ ವಾಯಿತು.

ಎಂ.ಎನ್.ವಿಜಯಕುಮಾರ್ ಐಎಎಸ್ ಇವರು ಹೋದ ಕಡೆಯಲ್ಲಾ ವಿವಾದಗಳ ಸಾಲು ಸಾಲೇ. ಕುಮಾರಸ್ವಾಮಿಯವರು ಇವರನ್ನು ಒಂದೇ ವರ್ಷದಲ್ಲಿ ಆರು ಬಾರಿ ವರ್ಗಾವಣೆ ಮಾಡಿದ್ದರು. ಇವರ ಶ್ರೀಮತಿಯವರು ಪತಿಗೆ ಅನ್ಯಾಯವಾಗುತ್ತಿದೆ ಎಂದು ಹೋರಾಟದ ಕಣಕ್ಕೆ ಧುಮುಕಿದ್ದರು. ಅಂತಿಮವಾಗಿ ೨೦೧೫ರಲ್ಲಿ ಇವರ ಸೇವಾವಧಿಯು ದಿನ ಉಳಿದಿರುವಾಗ
ಇವರನ್ನು ಕಡ್ಡಾಯ ನಿವೃತ್ತಿ ಗೊಳಿಸಲಾಯಿತು.

ಬಂಗಾರಪ್ಪ ಅವಧಿಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ಶಂಕರನಾರಾಯಣ ಅವರು ಕ್ಲಾಸಿಕ್ ಕಂಪ್ಯೂಟರ್ ಪ್ರಕರಣದಲ್ಲಿ ಸರಕಾರದ ನಿಲುವಿಗೆ ವಿರುದ್ಧವಾಗಿ ಪತ್ರಿಕೆಗೆ ಮಾತನಾಡಿದರೆಂದು ಅವರಿಗೆ ಹಿಂಬಡ್ತಿ ಮಾಡಿ ಎಂಎಸ್‌ಐಎಲ್‌ಗೆ ವರ್ಗಾವಣೆ
ಮಾಡಲಾಗಿತ್ತು. ಜಾನ್ ಮಥಾಯ್ ಎಂಬ ಕೆ.ಎ.ಎಸ್. ಅಧಿಕಾರಿ ಗೃಹ ಮಂಡಳಿಯಲ್ಲಿದ್ದಾಗ ಅಂದಿನ ವಸತಿ ಸಚಿವ ಅಂಬರೀಶ್
ವಿರುದ್ದವೇ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿ ಬಿಬಿಎಂಪಿಗೆ ವರ್ಗಾವಣೆ ಮಾಡಲಾ ಯಿತು. ಇಲ್ಲಿಯೂ ಸಹಾ ತಮ್ಮ ವಿವಾದಾತ್ಮಕ ನಡೆಯನ್ನು ಮುಂದುವರಿಸಿದ್ದರು.

ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹಸಚಿವರಾಗಿದ್ದ ಆರ್. ಎಲ್. ಜಾಲಪ್ಪನವರ ಆಪ್ತ ಪೊಲೀಸ್ ಅಧಿಕಾರಿಯಾಗಿದ್ದ ಡಿಸಿಪಿ ನಾರಾಯಣ್ ಅವರು ರಶೀದ್ ಕೊಲೆ ಪ್ರಕರಣದಲ್ಲಿ ಸಿಕ್ಕಿಕೊಂಡು ಸೆರಮನೆ ಸೇರಬೇಕಾಯಿತು. ಮಂತ್ರಿಗಳ ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯ ಕುರಿತು ಅಂದು ಇದು ಬಹು ಚರ್ಚಿತ ವಿಷಯವಾಗಿತ್ತು. ಹಾಲಿ ಸೇವೆಯಲ್ಲಿರುವ ಕರ್ನಾಟಕ ಮೂಲದ
ಐಎಎಸ್ ಅಧಿಕಾರಿಯೊಬ್ಬರ ಪ್ರಕಾರ ನಮ್ಮ ರಾಜ್ಯದಲ್ಲಿ ಆಂಧ್ರ ಮೂಲದ ಐಎಎಸ್ ಅಧಿಕಾರಿಗಳ ಪ್ರಾಬಲ್ಯವೇ ಹೆಚ್ಚು ಮತ್ತು ಅವರಿಗೆ ಒಳ್ಳೆ ಒಳ್ಳೇಯ ಸ್ಥಾನಗಳು ದೊರೆಯುತ್ತದೆ.

ರೋಹಿಣಿ ಸಿಂಧೂರಿಯವರ ಬೆಂಬಲಕ್ಕೂ ಇದೇ ಗುಂಪು ನಿಂತಿರುವ ಕಾರಣ ಅವರ ವಿರುದ್ದ ಸರಕಾರ ಯಾವ ಕ್ರಮವನ್ನು ಜರುಗಿಸಲು ಸಾಧ್ಯವಾಗಿಲ್ಲ ಎನ್ನುವುದು ಅವರ ಅಂಬೋಣ. ನಿವೃತ್ತ ಐಎಸ್ ಅಧಿಕಾರಿಯೊಬ್ಬರನ್ನು ಐಎಎಸ್‌ನಲ್ಲಿ
ಲಾಬಿಗಳಿರುವುದಾ ಎಂದು ಕೇಳಿದ್ದಕ್ಕೆ ಉದ್ದದ ಪಟ್ಟಿಯನ್ನೇ ಮುಂದಿಟ್ಟರು. ಬ್ಯಾಚ್ ಲಾಬಿ, ಜಾತೀಯ ಲಾಬಿ, ಹೊರ ರಾಜ್ಯಗಳ ಲಾಬಿ, ನೇರ ಐಎಎಸ್ ಮಾಡಿರುವವರ ಲಾಬಿ, ಕೆಎಎಸ್ ಮಾಡಿ ಬಡ್ತಿ ಪಡೆದವರ ಲಾಬಿ ಹೀಗೆ ಹಲವಾರು ಲಾಬಿಗಳು ಸಕ್ರಿಯವಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ.

ಹೊರಗಿನ ಅಧಿಕಾರಿಗಳು ಆಯಕಟ್ಟಿನ ಸ್ಥಳಗಳಿಗೆ ಸುಲಭವಾಗಿ ಬಂದು ಕೂರುತ್ತಾರೆ ಆದರೆ ನಮ್ಮ ರಾಜ್ಯದವರನ್ನು ಬೆಂಬಲಿಸು ವವರು ಯಾರು ಇಲ್ಲ ಎಂದು ನೋವಿನಿಂದ ಹೇಳಿಕೊಂಡರು. ಇದಕ್ಕೆ ಅಪವಾದ ಬಂಗಾರಪ್ಪನವರ ಅವಧಿಯಲ್ಲಿ ರಾಜ್ಯದ ಐಎಎಸ್‌ಗಳಿಗೆ ಉತ್ತಮ ಸ್ಥಳಗಳನ್ನು ನೀಡಿದ್ದರಂತೆ ಅವರ ನಂತರ ಯಾರಿಂದಲೂ ಸಾಧ್ಯವಾಗಿಲ್ಲ ಎನ್ನುತ್ತಾರೆ. ಆಂಧ್ರದ ಲಾಬಿ ಎಷ್ಟು ಪ್ರಬಲ ಎಂದರೆ ಐಎನ್‌ಎಸ್ ಪ್ರಸಾದ್ ಅವರು ಕಳೆದ ೧೦ ವರ್ಷದಿಂದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ  ಯಾಗಿಯೇ ಉಳಿದಿದ್ದಾರೆ.

ಹೊರ ರಾಜ್ಯದ ರಾಕೇಶ್ ಸಿಂಗ್ ಅವರು ಕನಿಷ್ಠ ನಾಲ್ಕು ಹುದ್ದೆಗಳನ್ನು ಸದ್ಯ ನಿರ್ವಹಿಸುತ್ತಿದ್ದಾರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗಲೂ ಇವರ ಪ್ರಭಾವ ಜೋರಾಗಿಯೇ ಇತ್ತು. ಲಾಬಿಗಳು ಪ್ರಬಲವಾಗಿದ್ದರೆ ಸರಕಾರ ಯಾವ ಪಕ್ಷದ್ದು
ಆದರೇನು ನಡೆಸುವವರು ನಾವೇ ಅನ್ನುವ ಧೋರಣೆ ಇವೆಲ್ಲಕ್ಕೂ ಕಾರಣ ಮೂರು ರೀತಿಯ ಐಎಎಸ್ ಅಧಿಕಾರಿಗಳು ಆಡಳಿತ
ವ್ಯವಸ್ಥೆಯಲ್ಲಿ ಕಾಣಬಹುದು. ನೇರವಾಗಿ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರು, ಕೆಎಎಸ್ ಅಧಿಕಾರಿಗಳು ತಮ್ಮ ಸೇವಾವಧಿಯ ಆಧಾರದ ಮೇಲೆ ಐಎಎಸ್‌ಗೆ ಬಡ್ತಿ ಪಡೆಯುವರು, ಮತ್ತು ನಾಗರಿಕ ಸೇವೆಯ ಹಿರಿಯ ಅಧಿಕಾರಿಗಳು ಕೂಡಾ ತಮ್ಮ ಸೇವೆಯ ಆಧಾರದ ಮೇಲೆ ಐಎಎಸ್‌ಗೆ ಬಡ್ತಿ ಪಡೆಯುತ್ತಾರೆ.

ಸರಕಾರದ ಅತ್ಯುನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇರುತ್ತದೆ. ಐಎಎಸ್ ಮತ್ತು ಐಪಿಎಸ್ ನಡುವೆ ಇದು ಜಿಲ್ಲಾ ಸ್ತರದಲ್ಲಿ ಮತ್ತಷ್ಟು ಹೆಚ್ಚಾಗಿರುತ್ತದೆ. ಆದರೆ ಈ ಯಾವುದೇ ತಿಕ್ಕಾಟಗಳು ಹೊರಗೆ ಬಾರದಂತೆ ಎಚ್ಚರವಹಿಸುತ್ತಾರೆ. ಯಾವುದೇ ಸರಕಾರ ಬಂದರೂ ಇವರನ್ನು ಎದುರು ಹಾಕಿಕೊಳ್ಳುವ ಧೈರ್ಯ ಮಾಡುವುದಿಲ್ಲ. ಇಡೀ ಆಡಳಿತ ಯಂತ್ರವೇ ಇವರ ಕೈಯಲ್ಲಿ ಇರುತ್ತದೆ ಸುಲಭವಾಗಿ ದಾರಿ ತಪ್ಪಿಸುವ ಕೆಲಸ ನಡೆದು ಹೋಗುತ್ತದೆ ಆಗ ಆಡಳಿತ ನಡೆಸುವವರು ಪರದಾಡ ಬೇಕಾಗುತ್ತದೆ.

ಇವೆಲ್ಲಕ್ಕಿಂತ ಮಿಗಿಲಾಗಿ ಸರಕಾರದ ಯೋಜನೆಗಳನ್ನು ಜಾರಿಗೆ ತರುವುದೇ ಈ ಹಿರಿಯ ಅಧಿಕಾರಿಗಳು. ಆಡಳಿತದ ಕೀಲಿ ಕೈ ಇವರ ಬಳಿಯೇ ಇರುವುದು ಎಂಬುದನ್ನು ಸರಕಾರ ನಡೆಸುವವರು ಮರೆತರೆ ರಾಜೀನಾಮೆ ಪತ್ರ ಸಿದ್ದವಾಗಿಟ್ಟು ಕೊಳ್ಳಬೇಕೇ ವಿನಹ ಬೇರೆ ದಾರಿಯೇ ಇಲ್ಲ. ಸಚಿವರಾದವರ ಆಯಸ್ಸು ಸಾಮಾನ್ಯವಾಗಿ ರಿಂದ ೧೦ ವರ್ಷ ಮಾತ್ರ ಆದರೆ ಐಎಎಸ್ ಅಧಿಕಾರಿಗಳ ಕಾಲಾವಧಿ ೩೫ ವರ್ಷವಿರುತ್ತದೆ. ಹೀಗಾಗಿ ಅಧಿಕಾರದ ಗುಟ್ಟುಗಳನ್ನು ಅರೆದು ಕುಡಿದಿರುತ್ತಾರೆ.

ಹಲವು ಬಾರಿ ನಿವೃತ್ತಿಯ ನಂತರವೂ ಇವರ ಸೇವೆಯನ್ನು ಸರಕಾರಗಳು ಪಡೆಯ ಬೇಕಾದ ಅನಿವಾರ್ಯತೆಯು ಇರುತ್ತದೆ.
ಅನೇಕ ಹಿರಿಯ ಅಧಿಕಾರಿಗಳು ರಾಜ್ಯದ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡಿರುವ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇರುವುದು. ಗೊಂದಲ ಗಲಾಟೆಗಳು ವ್ಯವಸ್ಥೆಯ ಭಾಗವು ಆದರೆ ಅಂತಹ ಘಟನೆಗಳು ನಡೆದಾಗ ಸರಕಾರ ಕೈಗೊಳ್ಳುವ ದಿಟ್ಟ ಕ್ರಮಗಳು ಆಡಳಿತದ ಗಟ್ಟಿತನವನ್ನು ತೋರಿಸಿ ಮುಂದೆ ಮರುಕಳಿಸದಿರಲು ಎಚ್ಚರಿಕೆಯ ಗಂಟೆಯಾಗುತ್ತದೆ.

ಗದ್ದಲ, ಗೊಂದಲ ಪರಸ್ಪರ ಕಚ್ಚಾಟಗಳು ಮತ್ತು ಪ್ರತಿಷ್ಠೆಯ ನಿಲುವುಗಳು ಕೇವಲ ರಾಜಕೀಯಕ್ಕೆ ಸಿಮೀತವಾಗಿಲ್ಲ ಅಧಿಕಾರಿಗಳ ವಲಯದಲ್ಲಿಯೂ ಈ ಪಿಡುಗು ದಟ್ಟವಾಗಿದೆ ಎಂಬುದನ್ನು ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್ ಅವರ ಪ್ರಕರಣ ನಮಗೆ ನೆನಪಿಸುತ್ತದೆ.