ಅಭಿಮತ
ಡಾ.ಪ್ರಕಾಶ ಗ.ಖಾಡೆ
ನಮ್ಮ ಭಾಷೆ ಕೇವಲ ಸಂವಹನಕ್ಕೆ ಮಾತ್ರ ಸೀಮಿತವಾಗಿಲ್ಲ. ಅದನ್ನು ಮೀರಿ ಸೃಜನಾತ್ಮಕವಾದ ಸಾಹಿತ್ಯ ಸೃಷ್ಟಿ, ಸಂಶೋಧನೆ, ಆಲೋಚನೆ, ಅಭಿಪ್ರಾಯಗಳನ್ನು ಮಂಡಿಸಲು, ಇವುಗಳನ್ನು ಮುಂದಿನ ತಲೆಮಾರಿಗೆ ಕೊಂಡೊ ಯ್ಯಲು ಭಾಷೆಯು ಬಹಳ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಭಾಷೆಯನ್ನು ಕೇವಲ ಒಂದು ಸಂವಹನ ಮಾಧ್ಯಮ ವಾಗಿ ನೋಡದೇ ಅದು ಒಳಗೊಳ್ಳುವ ಮತ್ತು ಮುಖ್ಯವಾಗುವ ಎಲ್ಲ ಬಗೆಯ ಕಾಣ್ಕೆಗಳನ್ನು ನಾವು ನೋಡಬೇಕು.
ಭಾಷೆ ಇರದಿದ್ದರೆ ಏನಾಗುತ್ತಿತ್ತು ? ನಾಗರಿಕತೆಯೇ ಇರುತ್ತಿರಲಿಲ್ಲ, ಅಲ್ಲವೇ ? ಭಾಷೆ ಮಾನವರನ್ನು ಒಂದು ವ್ಯವಸ್ಥಿತ
ಬದುಕಿಗೆ ದಾರಿ ಹಾಕಿ ಕೊಟ್ಟಿದೆ. ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಅದೊಂದು ಸಮಗ್ರ ಬದುಕಿನ ಶಕ್ತಿ. ತಾನು ಬದುಕಿದ ಸಮಾಜದೊಟ್ಟಿಗೆ ವ್ಯಕ್ತಿ ಭಾಷೆಯನ್ನು ಕಟ್ಟಿಕೊಳ್ಳುತ್ತಾ ಸಾಗುತ್ತಾನೆ ಮತ್ತು ಸಾಗಬೇಕು.
ನಮ್ಮ ಚಿಂತನೆ, ಆಲೋಚನೆ, ಕನಸು, ಕಲ್ಪನೆಗಳಿಗೆ ಒಂದು ಬಗೆಯಲ್ಲಿ ಅರ್ಥವಂತಿಕೆ ತರುವುದು ಈ ಭಾಷೆಯೇ. ಹಾಗೆ ನೋಡಿ ದರೆ ಮನುಷ್ಯನ ದೈಹಿಕ ಬೆಳವಣಿಗೆಯ ಪೂರ್ಣತೆಯ ಮೇಲೆ ಭಾಷೆಯ ಬೆಳವಣಿಗೆಯ ಪೂರ್ಣತೆಯೂ ಅಡಗಿದೆ. ಭಾಷಾ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ವ್ಯವಹರಿಸಲು ಮನುಷ್ಯನ ದೈಹಿಕ ಪಕ್ವತೆ ಅಂದರೆ ಮೆದುಳಿನ ರಚನೆಯ ಕಾರ್ಯ ಚಟುವಟಿಕೆಗಳನ್ನು ಅವಲಂಬಿಸಿದೆ. ಈ ಮೆದುಳಿನ ಮೂಲಕವೇ ಅಲ್ಲವೇ ನಾವು ಆಲೋಚಿಸುವುದು, ಅಭಿವ್ಯಕ್ತಿಸು ವುದು, ಸಂವಹನಿಸುವುದು ಮತ್ತು ಗ್ರಹಿಸುವುದು.
ಹಾಗಾಗಿ ನಮ್ಮ ಮೆದುಳು ಭಾಷೆಯನ್ನು ಕಟ್ಟಿಕೊಳ್ಳಲು ಇರುವ ಅತ್ಯಂತ ಪ್ರಮುಖವಾದ ಅಂಗ. ಇದನ್ನು ನಾವು ಹೆಚ್ಚು
ಜೋಪಾನವಾಗಿ ನೋಡಿಕೊಂಡು ಬರಬೇಕಾಗಿದೆ. ಹಾಗೆ ನೋಡಿದರೆ ಭಾಷೆಯ ಉಗಮವು ಮಾನವನ ವಿಕಾಸದೊಂದಿಗೆ ಮೆದುಳಿನ ವಿಕಾಸ ಮತ್ತು ಕಲಿಯುವ ಅವಕಾಶಗಳನ್ನು ಹೊಂದಿದೆ. ನಮ್ಮ ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಮೆದುಳಿನ ವಿಶಿಷ್ಟ ಶಕ್ತಿ ಅಡಗಿದೆ. ಭಾಷೆಯ ಬಗೆಗೆ ಬ್ಲಾಕ್ ಮತ್ತು ಟ್ರೇಗರ್ ಒಂದು ಒಳ್ಳೆಯ ಮಾತು ಹೇಳಿದ್ದಾರೆ, ಯಾದೃಚ್ಛಿಕ, ಮೌಖಿಕ ಧ್ವನಿ ಸಂಕೇತಗಳು ವ್ಯವಸ್ಥೆಯಿಂದ ಕೂಡಿ ಸಮಾಜದ ಸಮೂಹ ಸಹಕಾರಕ್ಕೆ ಕಾರಣವಾಗುವುದೇ ಭಾಷೆ ಹಾಗಾಗಿ ಭಾಷೆಯೂ ಒಂದು ವ್ಯವಹಾರಿಕ ಸಾಧನ, ಸಂವಹನ ಕಲೆ, ಒಂದು ಅಭಿವ್ಯಕ್ತಿ, ಮಾನವನ ಆವಿಷ್ಕಾರದ ಬಹುದೊಡ್ಡ ವಾಹಕ ಭಾಷೆಯಾ ಗಿದೆ.
ಸಮುದಾಯ, ಸಮಾಜದ ಅಥವಾ ಹಲವು ಸಮಾಜಗಳ ಸದಸ್ಯರು ವಾಸಿಸುವ, ಸಮುದಾಯ ಸಂಸ್ಕೃತಿಗೆ ಸಂಬಂಧಿಸಿದಂತೆ ತಮ್ಮ ಆಲೋಚನೆ, ಭಾವನೆ, ಕಲ್ಪನೆ, ಅನುಭವಗಳನ್ನು ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಹಿಡಿದಿಡಲು ಮತ್ತು ಪರಸ್ಪರ ಹಂಚಿಕೊಳ್ಳಲು ಬಳಸುವಂಥ ಒಪ್ಪಿತ ಸಂಕೇತಗಳ ವ್ಯವಸ್ಥೆಯೇ ಭಾಷೆಯಾಗಿದೆ.
ಭಾಷೆಯೂ ಮನುಷ್ಯರಿಗೆ ಒಲಿದ ಬಹುದೊಡ್ಡ ಸಾಧನ. ಪ್ರಾಣಿಗಳಿಗಿಂತ ಮನುಷ್ಯರನ್ನು ಭಿನ್ನವಾಗಿ ನೋಡಲು ಇರುವ ಪ್ರಬಲ ಸಾಧನ ಭಾಷೆ. ಮನುಷ್ಯರಿಗೆ ಬುದ್ಧಿಶಕ್ತಿ ಪ್ರಧಾನವಾಗಿದ್ದರೆ, ಪ್ರಾಣಿಗಳಿಗೆ ದೈಹಿಕ ಶಕ್ತಿ ಪ್ರಧಾನವಾಗಿರುತ್ತದೆ. ಒಂದು ದೊಡ್ಡ ಮರವನ್ನು ಆನೆ ಕಿತ್ತೆಸೆಯಬಹುದು, ಆದರೆ ಮನುಷ್ಯನೊಬ್ಬನಿಂದ ಇದು ಸಾಧ್ಯವಿಲ್ಲ. ತನ್ನ ಬುದ್ದಿ ಶಕ್ತಿಯಿಂದ ಇದನ್ನು
ಸಾಧಿಸಬಲ್ಲ. ಮನುಷ್ಯ ಭಾಷೆಯ ಮೂಲಕ ತನ್ನ ಚಿಂತನಾ ಶಕ್ತಿ, ತಾರ್ಕಿಕ ಶಕ್ತಿ, ಆಲೋಚನಾ ಶಕ್ತಿಯನ್ನು ಆಗಾಧ ಪ್ರಮಾಣ ದಲ್ಲಿ ಹೊಂದಿದ್ದಾನೆ. ಆದರೆ ಇದು ಪ್ರಾಣಿಗಳಲ್ಲಿ ಆಗಾಧವಾಗಿಲ್ಲ.
ಮಾನವ ತನ್ನ ಸಂವಹನಕ್ಕೆ ವಿಶಿಷ್ಟ ಹಾಗೂ ಶಿಸ್ತುಬದ್ಧವಾದ ಭಾಷೆಯನ್ನು ಅಭಿವೃದ್ಧಿಪಡಿಸಿಕೊಂಡಿದ್ದಾನೆ. ಆದರೆ ಪ್ರಾಣಿ ಗಳಲ್ಲಿ ಸಂವಹನಕ್ಕೆ ಸೀಮಿತವಾದ ಧ್ವನಿ ಸಂಜ್ಞೆಗಳ ಬಳಕೆ ಇದೆ. ಉದಾಹರಣೆಗಾಗಿ ಅಂಬಾ.. ಎಂದು ಕೂಗುವುದು, ಕಾ..ಕಾ.. ಎಂದು ಧ್ವನಿ ಮಾಡುವುದು ಮುಂತಾಗಿ ಕೇಳುತ್ತೇವೆ.
ನಮ್ಮ ಭಾಷೆ ಕೇವಲ ಸಂವಹನಕ್ಕೆ ಮಾತ್ರ ಸೀಮಿತವಾಗಿಲ್ಲ. ಅದನ್ನು ಮೀರಿ ಸೃಜನಾತ್ಮಕವಾದ ಸಾಹಿತ್ಯ ಸೃಷ್ಟಿ, ಸಂಶೋಧನೆ, ಆಲೋಚನೆ, ಅಭಿಪ್ರಾಯಗಳನ್ನು ಮಂಡಿಸಲು, ಇವುಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಭಾಷೆಯು ಬಹಳ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಭಾಷೆಯನ್ನು ಕೇವಲ ಒಂದು ಸಂವಹನ ಮಾಧ್ಯಮವಾಗಿ ನೋಡದೇ ಅದು ಒಳಗೊಳ್ಳುವ ಮತ್ತು ಮುಖ್ಯವಾಗುವ ಎಲ್ಲ ಬಗೆಯ ಕಾಣ್ಕೆಗಳನ್ನು ನಾವು ನೋಡಬೇಕು.
ಶಬ್ಧ, ಪದ, ವಾಕ್ಯ, ಅರ್ಥ, ಧ್ವನಿ ಸಂಕೇತಗಳ ಮೂಲಕ ಭಾಷೆ ರೂಪುಗೊಳ್ಳುತ್ತದೆ. ಇದು ಭಾಷೆಯ ಭಾಷಿಕ ನೆಲೆಯಾದರೆ, ನಾವು ಮತ್ತೊಬ್ಬರೊಂದಿಗೆ ವ್ಯವಹರಿಸಲು, ಸಂವಹನ ಮಾಡಲು ಸಾಮಾಜಿಕವಾಗಿ ಭಾಷೆ ನೆರವಾಗುತ್ತದೆ. ನಾವು ಭಾಷಾ ಬಳಕೆಯನ್ನು ಅನುಕೂಲಿಸಲು ಮನೋವ್ಶೆಜ್ಞಾನಿಕ ತಳಹದಿ ಮುಖ್ಯವಾಗಿದೆ. ಭಾವನೆ, ಆಲೋಚನೆ, ಕಲ್ಪನೆ, ಚಿಂತನೆಗಳಿಗೆ ಮೂರ್ತರೂಪ ನೀಡಿ, ವಿಶ್ಲೇಷಣೆ ಮಾಡುವ, ನಿರೂಪಿಸುವ, ಸಂಕ್ಷೇಪಿಕರಿಸುವ, ಸ್ವನಿರ್ಧಾರಕ್ಕೆ ಬರುವ ಅವಕಾಶಗಳನ್ನು ಭಾಷೆ ದೊರಕಿಸುತ್ತದೆ.
ಒಟ್ಟಾರೆ ಭಾಷೆಯು ಮನುಕುಲದ ಅಮೂಲ್ಯ ಮತ್ತು ಅಗತ್ಯವಾದ ಒಂದು ಸಂವಹನ ಕ್ರಿಯೆ. ಭಾಷೆಯು ಆಯಾ ಪ್ರದೇಶ ಮತ್ತು ಭೌಗೋಳಿಕ ರಚನೆಗಳಲ್ಲಿ ಭಿನ್ನವಾಗಿ ಬಳಕೆಯಾಗುತ್ತದೆ. ಜಗತ್ತಿನ ತುಂಬ ಅನೇಕ ಭಾಷೆಗಳಿವೆ. ಬಳಕೆಯಿಂದ ಉಳಿದುಕೊಂಡು ಬಂದಿವೆ. ಭಾಷಾ ಬಳಕೆಯು ಇಂದಿನ ಅತಿ ತಾಂತ್ರಿಕತೆಯ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಪ್ರಾದೇಶಿಕ ಭಾಷೆಗಳೂ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿವೆ.
ಭಾಷೆಯ ಮೂಲಕ ಅನೇಕ ಸಾಹಿತ್ಯಿಕ ಕೃತಿಗಳು ಮನುಕುಲವನ್ನು ಉದ್ಧರಿಸಿವೆ. ರಂಜನೆ, ಮನರಂಜನೆ ಅಷ್ಟೇ ಕಾರಣವಾಗದೆ, ಮಾನವನ ಬೌದ್ಧಿಕ ವಿಕಾಸ ಮತ್ತು ಬೆಳವಣಿಗೆಗೆ ಭಾಷೆ ಕಾರಣವಾಗಿದೆ. ಭಾಷೆ ಇಲ್ಲದ ಮನುಕುಲ ಉಂಟೇ, ಭಾಷೆಯೇ ಮನುಕುಲದ ಬೆಳಕು.