Sunday, 15th December 2024

ಭವಿಷ್ಯದ ನಗರಗಳ ನಿರ್ಮಾಣಕ್ಕೆ ನಗರ ಭಾರತದ ಹಸಿರೀಕರಣ

ಅವಲೋಕನ 

ಹರದೀಪ್‌ ಎಸ್‌.ಪುರಿ

ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವುದು 21 ನೇ ಶತಮಾನದ ನಿರ್ಣಾಯಕ ಕೆಲಸವಾಗಿದೆ. ಇದು ಎಡೆ, ಎಲ್ಲರ ಪ್ರಮುಖ ಆದ್ಯತೆಯಾಗಬೇಕು. – ಆಂಟೋನಿಯೊ ಗುಟೆರೆಸ್, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ 1974ರಿಂದ ಪ್ರತಿವರ್ಷ ಜೂನ್
5ರಂದು, ವಿಶ್ವ ಪರಿಸರ ದಿನವನ್ನು ಆಚರಿಸುವ ಮೂಲಕ ಜಗತ್ತಿನಾದ್ಯಂತ ದೇಶಗಳು, ಸಮುದಾಯಗಳು ಮತ್ತು ವೈಯಕ್ತಿಕವಾಗಿ ಜನರು ನಮ್ಮ ಗ್ರಹ ಮತ್ತು ಭವಿಷ್ಯದ ಪೀಳಿಗೆಗಾಗಿ ತಮ್ಮ ಕರ್ತವ್ಯವನ್ನು ಪಾಲಿಸಲು ಮತ್ತು ನೆನಪಿಸಿಕೊಳ್ಳಲು ಒಗ್ಗೂಡುತ್ತಾರೆ.

ಈ ವರ್ಷ, ಈ ದಶಕದ ಗುರಿಗಳತ್ತ ಸಾಗಲು ವಿಶ್ವಸಂಸ್ಥೆಯ ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯ ದಶಕಕ್ಕೆ ಚಾಲನೆ ನೀಡಲಾಗಿದೆ. ಅಭಿವೃದ್ಧಿಯ ಒತ್ತಡಗಳು ಹೆಚ್ಚಾಗುತ್ತಿವೆ, ಹಾಗೆಯೇ, ನಮ್ಮ ಸಮಾಜ, ಆರ್ಥಿಕತೆ ಹಾಗೂ ರಾಜಕಾರಣಕ್ಕೆ ಹಸಿರು ಮತ್ತು ಆರೋಗ್ಯಕರ ಭವಿಷ್ಯಕ್ಕಾಗಿ ಹೊಂದಿಕೊಳ್ಳುವ ಸಾಮರ್ಥ್ಯವೂ ಇದೆ. ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ
ನಡುವಿನ ಸೂಕ್ಷ್ಮ ಸಮತೋಲನವು ವಿಶ್ವಸಂಸ್ಥೆಯ 2030ರ ಕಾರ್ಯಸೂಚಿಯ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಗಳಲ್ಲಿ ಪ್ರಮುಖವಾಗಿದೆ. ಮೋದಿ ಸರಕಾರದ ಕಳೆದ ಏಳು ವರ್ಷಗಳಲ್ಲಿ ಈ ಎಸ್ ಡಿಜಿಗಳನ್ನು ಸಾಧಿಸಲು ಒಂದು ನೆಟ್ವರ್ಕ್ ವಿಧಾನ ವನ್ನು ಭಾರತದ ನೀತಿ ಮತ್ತು ರಾಜಕಾರಣದಲ್ಲಿ ಅಳವಡಿಸಲಾಗಿದೆ.

2030ರ ಕಾರ್ಯಸೂಚಿಯ ಧ್ಯೇಯವಾಕ್ಯ: ಸುಸ್ಥಿರ ಅಭಿವೃದ್ಧಿ ಗುರಿಗಳು – ‘ಯಾರನ್ನು ಹಿಂದೆ ಬಿಡದೆ’ ಎನ್ನುವುದು ಗಾಂಧೀಜಿಯವರ ಸರ್ವೋದಯ ಸಿದ್ಧಾಂತದ ಮೂಲತತ್ತ್ವವನ್ನು ಆಂತ್ಯೋದಯದ ಮೂಲಕ – ‘ಕಟ್ಟಕಡೆಯವರನ್ನು
ಮೊದಲು ತಲುಪುವುದು’ ಆಗಿದೆ. ಇದು ಭಾರತೀಯ ಚಿಂತನೆ ಮತ್ತು ನೀತಿಯ ಒಂದು ಭಾಗವಾಗಿದೆ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ಕಾರ್ಯಕ್ರಮಗಳು, ಅಭಿಯಾನಗಳನ್ನು ಕಾರ್ಯಗತಗೊಳಿಸಲು ಇದೊಂದು ಮೂಲಭೂತ ಗುಣವಾಗಿದೆ.

2014 14 ಆಗಸ್ಟ್ ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತಾ (ಕ್ಲೀನ್ ಇಂಡಿಯಾ) ಆಂದೋಲನವನ್ನು ಪ್ರಾರಂಭಿಸಿದರು. ಇದು ನಮ್ಮ ನಗರಗಳ ಭೂದೃಶ್ಯದ ಒಟ್ಟು ಪರಿವರ್ತನೆಗೆ ಕಾರಣವಾಯಿತು. ಜೂನ್ 2015ರಲ್ಲಿ, ವಿಶ್ವದ
ಅತ್ಯಂತ ವ್ಯಾಪಕವಾದ ನಗರೀಕರಣ ಕಾರ್ಯಕ್ರಮಗಳಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಮುಖ ಅಭಿಯಾನಗಳಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ), ಅಟಲ್ ಪುನರುಜ್ಜೀವ ಮತ್ತು ನಗರ ಪರಿವರ್ತನೆ
ಅಭಿಯಾನ (ಅಮೃತ್) ಮತ್ತು ಸ್ಮಾರ್ಟ್ ನಗರ ಮಿಷನ್ (ಎಸ್‌ಸಿಎಂ) ಮೂಲಕ ಚಾಲನೆ ನೀಡಲಾಯಿತು.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಮುಖ ಅಭಿಯಾನಗಳನ್ನು 2016 ರಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ ಡಿಜಿ) ಅಳವಡಿಸಿಕೊಳ್ಳುವುದಕ್ಕೆ ಸುಮಾರು ಒಂದು ವರ್ಷ ಮುಂಚೆಯೇ ಪ್ರಾರಂಭಿಸಲಾಗಿದೆ. ಗಮನಾರ್ಹ ವಾದ ಸಂಗತಿಯೆಂದರೆ, ಹೆಚ್ಚಿನ ಎಸ್ ಡಿಜಿಗಳು ಈ ಮಹತ್ವದ ಅಭಿಯಾನಗಳ ಪ್ರಮುಖ ಉದ್ದೇಶಗಳಲ್ಲಿ ಪ್ರತಿಫಲಿಸುತ್ತದೆ. ಸುಸ್ಥಿರ ಅಭಿವೃದ್ಧಿಯನ್ನು ಖಾತರಿಪಡಿಸುವ ಮೂಲಕ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಎದುರಿಸಲು ಈ ರಾಷ್ಟ್ರೀಯ ಅಭಿಯಾನಗಳು ತಮ್ಮ ನಿಗದಿತ ಗುರಿಗಳನ್ನು ಸಾಧಿಸಿವೆ.

ಸ್ವಚ್ಛ ಭಾರತ ಅಭಿಯಾನ (ನಗರ)ವು ಬಯಲು ಶೌಚಮುಕ್ತ ಭಾರತವನ್ನು ಸಾಧಿಸುವುದು, ಘನತ್ಯಾಜ್ಯ ನಿರ್ವಹಣಾ ಸಾಮರ್ಥ್ಯ ವನ್ನು ನಿರ್ಮಿಸುವುದು ಮತ್ತು ಸಮಾಜದಲ್ಲಿ ವರ್ತನೆಯ ಬದಲಾವಣೆಯನ್ನು ತರುವುದರತ್ತ ಗಮನ ಕೇಂದ್ರೀಕರಿಸಿದೆ. ವಾರ್ಷಿಕ ಸ್ವಚ್ಛ ಸರ್ವೇಕ್ಷಣೆಯ ಮೂಲಕ, ಸಹಕಾರಿ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯು ನಾಗರಿಕರ ನೇತೃತ್ವದ ‘ಜನಾಂದೋಲನ’
ದ ಪ್ರೇರಕ ಶಕ್ತಿಯಾಗಿದೆ. ಎಸ್‌ಬಿಎಂ – ಯು ಅಡಿಯಲ್ಲಿ ವಿವಿಧ ಉಪಕ್ರಮಗಳು 2022ರ ಹೊತ್ತಿಗೆ17.42 ದಶಲಕ್ಷ ಟನ್‌ಗಳಷ್ಟು ಇಂಗಾಲಕ್ಕೆ ಸಮನಾದ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸಬಹುದು ಎಂದು ಅಂದಾಜಿಸ ಲಾಗಿದೆ.

ಆಡಳಿತ, ಸುಸ್ಥಿರತೆ ಮತ್ತು ವಿಪತ್ತು ಅಪಾಯದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ನಮ್ಮ ನಗರಗಳ ತಾಂತ್ರಿಕ ಪ್ರಗತಿಯ ಜವಾಬ್ದಾರಿಯನ್ನು ಸ್ಮಾರ್ಟ್ ಸಿಟೀಸ್ ಮಿಷನ್ ವಹಿಸಿಕೊಂಡಿದೆ. ನಮ್ಮ ನಗರ ಕೇಂದ್ರಗಳಲ್ಲಿ ಇಂಧನ ದಕ್ಷತೆ ಮತ್ತು ಮೋಟಾರು
ರಹಿತ ಸಾರಿಗೆ ಸಾಮರ್ಥ್ಯವನ್ನು ಸುಧಾರಿಸಲು ಸ್ಮಾರ್ಟ್ ಪರಿಹಾರಗಳನ್ನು ಜಾರಿಗೆ ತರಲಾಗುತ್ತಿದೆ.

ನಮ್ಮ ನಗರಗಳ ಹವಾಮಾನ-ಸುಕ್ಷ್ಮ ಅಭಿವೃದ್ಧಿಗೆ ಮತ್ತಷ್ಟು ಪೂರಕವಾಗಿ, ಹವಾಮಾನ ಮೌಲ್ಯಮಾಪನ ಚೌಕಟ್ಟನ್ನು ಅಳವಡಿಸಲಾಗಿದೆ. ಹಸಿರು, ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ನಗರಗಳು ಅಂತಾರಾಷ್ಟ್ರೀಯ ಮಾನದಂಡಗಳನ್ನು ಸಾಧಿಸಲು ನಗರಗಳು ಉತ್ತಮ ಅಭ್ಯಾಸವನ್ನು ಅಳವಡಿಸಿಕೊಳ್ಳುವುದು ಮತ್ತು ವಿನಿಮಯ ಮಾಡಿಕೊಳ್ಳುವುದು ಈ ಚೌಕಟ್ಟಿನ
ಗುರಿಯಾಗಿದೆ.

ಇದುವರೆಗೆ, 417.5 ಕಿಲೋಮೀಟರ್ ಸ್ಮಾರ್ಟ್ ರಸ್ತೆಗಳು, 30 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸೌರ ಫಲಕಗಳು ಮತ್ತು 253.5 ಎಂಎಲ್‌ಡಿ ತ್ಯಾಜ್ಯ ನೀರಿನ ಸಂಸ್ಕರಣಾ ಸಾಮರ್ಥ್ಯದ ಮೂಲಸೌಕರ್ಯಗಳು ಪೂರ್ಣಗೊಂಡಿವೆ. ಎಸ್‌ಇಎಂ ಅಡಿಯಲ್ಲಿ ಜಾರಿಗೆ ತರಲಾದ ಯೋಜನೆಗಳು 2022ರ ವೇಳೆಗೆ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ಒಟ್ಟಾರೆ ಕಡಿತಗೊಳಿಸುವು ದರಿಂದ 4.93 ಮಿಲಿಯನ್ ಟನ್ ಇಂಗಾಲ ಹೊರಸೂಸುವಿಕೆ ತಗ್ಗುವ ನಿರೀಕ್ಷೆಯಿದೆ.

ಅಮೃತ್ ಯೋಜನೆಯಡಿಯಲ್ಲಿ, 500 ನಗರಗಳಲ್ಲಿ ನೀರು ಸರಬರಾಜು ಮತ್ತು ನಿರ್ವಹಣೆ, ಇಂಧನ ದಕ್ಷತೆ ಮತ್ತು ಹೆಚ್ಚಿನ ಹಸಿರು ಸ್ಥಳಗಳ ನಿರ್ಮಾಣ ಗುರಿಯಾಗಿವೆ. ಇದುವರೆಗೆ, 3700 ಎಕರೆಗೂ ಹೆಚ್ಚು ಪ್ರದೆಶದಲ್ಲಿ 1831 ಉದ್ಯಾನವನ
ಗಳನ್ನು ಅಭಿವೃದ್ಧಿಪಡಿಸಲಾಗಿದೆ, 85 ಲಕ್ಷ ಬೀದಿ ದೀಪಗಳನ್ನು ಬದಲಾಯಿಸಲಾಗಿದೆ, ಇದರ ಪರಿಣಾಮವಾಗಿ 185.33 ಕೋಟಿ ಯುನಿಟ್‌ಗಳಷ್ಟು ಇಂಧನ ಉಳಿತಾಯವಾಗಿದೆ ಮತ್ತು 106 ಜಲಮೂಲಗಳನ್ನು ಪುನಶ್ಚೇತನಗೊಳಿಸಲಾಗಿದೆ.

ಈ ಅಭಿಯಾನವು 2022ರ ವೇಳೆಗೆ 48.52 ಮಿಲಿಯನ್ ಟನ್ ಇಂಗಾಲಕ್ಕೆ ಸಮನಾದ ಹಸಿರು ಮನೆ ಅನಿಲ ಹೊರಸೂಸುವಿಕೆ ತಗ್ಗಿಸುವ ಸಾಧ್ಯತೆಯಿದೆ. 1.12 ಕೋಟಿ ಮನೆಗಳನ್ನು ಮಂಜೂರು ಮಾಡುವ ಮೂಲಕ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಯು ನಾವೀನ್ಯದ, ಪರಿಸರ ಸ್ನೇಹಿಯಾದ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವವನ್ನು ಹೊಂದಿರುವ ಹೊಸ ನಿರ್ಮಾಣ ತಂತ್ರಜ್ಞಾನಗಳತ್ತ ಗಮನ ಹರಿಸಿದೆ. ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ ಅನ್ನು ಪ್ರಾರಂಭಿಸಲಾಗಿದೆ ಮತ್ತು 54
ಹೊಸ ತಂತ್ರಜ್ಞಾನಗಳನ್ನು ಗುರುತಿಸಲಾಗಿದೆ.

2021 ರ ಜನವರಿ 01 ರಂದು ಪ್ರಧಾನಿಯವರು ಆರು ಲೈಟ್ ಹೌಸ್ ಯೋಜನೆಗಳಿಗೆ ಚಾಲನೆ ನೀಡಿದರು. ಇವು ಈಗಾಗಲೇ ದೇಶಾದ್ಯಂತ ಆರು ಭೂ –  ಹವಾಮಾನ ವಲಯಗಳಲ್ಲಿ ನಿರ್ಮಾಣ ಹಂತದಲ್ಲಿವೆ. ಹೆಚ್ಚುವರಿಯಾಗಿ, ಹಾರು ಬೂದಿ ಇಟ್ಟಿಗೆಗಳು / ಬ್ಲಾಕ್ ಮತ್ತು ಕಾಂಕ್ರೀಟ್ ಬ್ಲಾಕ್ ಗಳನ್ನು ಬಳಸಿ ಸುಮಾರು 43.3 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದೆ.

ಒಟ್ಟಾರೆ 2022 ರ ಹೊತ್ತಿಗೆ ಮಿಷನ್ ಸುಮಾರು 12 ಮಿಲಿಯನ್ ಟನ್ ಇಂಗಾಲಕ್ಕೆ ಸಮನಾದ ಹಸಿರು ಮನೆ ಅನಿಲ ಹೊರ ಸೂಸುವಿಕೆಯನ್ನು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕೊನೆಯದಾಗಿ, ಮೆಟ್ರೊ ರೈಲು ಅತ್ಯಂತ ಇಂಧನ ದಕ್ಷ ತ್ವರಿತ ಸಮೂಹ ಸಾರಿಗೆ ವ್ಯವಸ್ಥೆ ಗಳಂದಾಗಿದೆ. ಇದು 18 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 720 ಕಿ.ಮೀ.ಮಾರ್ಗಗಳನ್ನು ನಿರ್ಮಿಸಲಾಗಿದೆ.

27 ನಗರಗಳಲ್ಲಿ ಇನ್ನೂ 1055 ಕಿ.ಮೀ ಹೊಸ ಮೆಟ್ರೋ ಮಾರ್ಗ ನಿರ್ಮಾಣ ಹಂತದಲ್ಲಿದೆ. ಈ ವಿಸ್ತಾರವಾದ ಮೆಟ್ರೋ
ಜಾಲವು 2015-2022ರ ಅವಧಿಯಲ್ಲಿ ಸುಮಾರು 21.58 ಮಿಲಿಯನ್ ಟನ್ ಇಂಗಾಲಕ್ಕೆ ಸಮನಾದ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿ ಅನುಷ್ಠಾನದಲ್ಲಿರುವ ರಾಷ್ಟ್ರೀಯ ಅಭಿಯಾನಗಳು 2022 ರ ವೇಳೆಗೆ 93 ದಶಲಕ್ಷ ಟನ್ಗಳಿಗೂ ಹೆಚ್ಚು ಇಂಗಾಲಕ್ಕೆ ಸಮನಾದ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ನಿರೀಕ್ಷೆಯಿದೆ.

ಇಂದು, ಪರಿಸರ ಪ್ರಜ್ಞೆ, ತಾಂತ್ರಿಕ ಪ್ರಗತಿ ಮತ್ತು ಸಮಗ್ರ ಅಭಿವೃದ್ಧಿಯ ಪರಿವರ್ತಕ ಅಲೆಯು ಭಾರತದಲ್ಲಿ ಸುಸ್ಥಿರತೆಯ ಕಾರ್ಯಸೂಚಿಯನ್ನು ಪ್ರೇರೇಪಿಸುತ್ತಿದೆ. ಸಮಾಜ, ಪ್ರಕೃತಿ ಮತ್ತು ಅಭಿವೃದ್ಧಿಯ ನಡುವಿನ ಸಮತೋಲನವು ಕೋವಿಡ್
19 ಬಿಕ್ಕಟ್ಟಿನಿಂದ ಬೆಳಕಿಗೆ ಬಂದ ಒಂದು ಗಹನವಾದ ಅಂಶವಾಗಿದೆ. ಹವಾಮಾನ ಬದಲಾವಣೆಯಂತೆಯೇ, ಸಾಂಕ್ರಾಮಿಕ ರೋಗವೂ ಜಗತ್ತಿನಾದ್ಯಂತ ಸಮಾಜದ ಅತ್ಯಂತ ದುರ್ಬಲ ವರ್ಗಗಳ ಮೇಲೆ ಪರಿಣಾಮ ಬೀರಿದೆ.

ತಾಂತ್ರಿಕ ಪ್ರಜಾಸತ್ತೆ, ಸುಸ್ಥಿರ ಮೂಲಸೌಕರ್ಯ ನಿರ್ಮಾಣ ಮತ್ತು ನಡವಳಿಕೆಯ ಬದಲಾವಣೆಯಿಂದ ಉಂಟಾದ ಪರಿವರ್ತನೆಗಳು ಕೋವಿಡ್ -19 ಬಿಕ್ಕಟ್ಟನ್ನು ನಿಭಾಯಿಸಲು ನಮಗೆ ಸಹಾಯ ಮಾಡಿವೆ. ಸುಸ್ಥಿರತೆ, ವಿಪತ್ತು ಅಪಾಯದ ಸ್ಥಿತಿಸ್ಥಾಪಕತ್ವ, ಸಮುದಾಯ ನಿರ್ಮಾಣಗಳಂಥ ಪ್ರಗತಿಪರ ನಗರಾಭಿವೃದ್ಧಿಯು ಕಳೆದ 7 ವರ್ಷಗಳ ಮೋದಿ ಸರಕಾರದ ದಾರಿದೀಪವಾಗಿದೆ.

ಇದು ನಮ್ಮ ಪರಿಸರವನ್ನು ಕಾಪಾಡಲು, ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ಮತ್ತು ಮುಂಬರುವ ದಶಕಗಳಲ್ಲಿ
ಹವಾಮಾನ ಬದಲಾವಣೆಯಿಂದ ಉಂಟಾಗುವ ಅಪಾಯಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ.