Thursday, 12th December 2024

ಕರೋನಾ ನಿವಾರಣೆಯಲ್ಲಿ ಸ್ವಚ್ಛಭಾರತ ಪಾತ್ರ

ಅಭಿಮತ

ಶ್ರೀಲಕ್ಷ್ಮೀ

ದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕೆಂಬ ಉದ್ದೇಶದಿಂದಲೇ ಸ್ವಚ್ಛ ಭಾರತ ಅಭಿಯಾನವನ್ನು ಪ್ರಧಾನ ಮಂತ್ರಿಗಳು 2014ನೆ ಇಸವಿಯ ಅಕ್ಟೋಬರ್ ಎರಡನೇ ತಾರೀಖಿನಂದು ಅಧಿಕೃತವಾಗಿ ಪ್ರಾರಂಭಿಸಿದರು.

ಕರೋನಾ ಬರುವ ಮುನ್ಸೂಚನೆ ಆಗಲೇ ಇತ್ತು ಎಂದು ದೂರಲು ಮುಂದಾಗುವುದು ಬೇಡ. ಅಲ್ಲಿ ಅವರಿಗಿದ್ದ ಸದುದ್ದೇಶ ವೆಂದರೆ ದೇಶದ ಸ್ವಚ್ಛತೆಗೆ ಎಲ್ಲರೂ ಕೈ ಜೋಡಿಸಬೇಕೆಂಬುದು. ಆದರೆ ಈಗ ನಮ್ಮೆಲ್ಲರ ಮುಂದಿರುವ ಜವಾಬ್ದಾರಿ ಎಂದರೆ ವೈಯಕ್ತಿಕ ಸ್ವಚ್ಛತೆ. ಇದು ಸಹ ಸ್ವಚ್ಛತೆಯ ಒಂದು ಭಾಗವಷ್ಟೇ. ಹೊರ ನೋಟದಿಂದ ನೋಡಿದಾಗ ಅಥವಾ ಕೇಳಿದಾಗ
ಸ್ವಚ್ಛ ಭಾರತ ಅಭಿಯಾನ ಕೇವಲ ಹಳ್ಳಿಗಳಲ್ಲಿ ಬಯಲು ಶೌಚ ನಿರ್ಮೂಲನೆಗಾಗಿ ಶೌಚಾಲಯ ನಿರ್ಮಾಣ ಮಾಡಿದ್ದು ಎಂದೇ ಇರುತ್ತದೆ.

ಆದರೆ ಈ ಅಭಿಯಾನದ ಅಡಿಯಲ್ಲಿ ಇನ್ನು ಹಲವು ಸ್ವಚ್ಛತಾ ಕಾರ್ಯಗಳು ನಡೆಯುತ್ತಲೆ ಬಂದಿವೆ. ಘನತ್ಯಾಜ್ಯ ನಿರ್ವಹಣೆ –
ಮರುಬಳಕೆ – ಸಂಸ್ಕರಣೆ ಸಂಪೂರ್ಣ ಕೊಳೆಗೇರಿ ನಿರ್ಮೂಲನೆ, ಮಲ ಹೊರುವ ಪದ್ಧತಿಯ ಸಂಪೂರ್ಣ ನಿರ್ಮೂಲನೆ. ಸ್ವಚ್ಛ ಭಾರತ ಅಭಿಯಾನದ ಮತ್ತೊಂದು ಮೂಲ ಉದ್ದೇಶ ಸಾರ್ವಜನಿಕರಲ್ಲಿ ನಿರ್ಮಲೀಕರಣ ಮತ್ತು ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಜನ ಜಾಗೃತಿ ಮೂಡಿಸುವುದು.

ಒಂದು ವಾಕ್ಯದಲ್ಲಿ ಹೇಳುವುದಾದರೆ ಈ ಅಭಿಯಾನವು ಭಾರತವನ್ನು ಸ್ವಚ್ಛ ಹಾಗೂ ಸ್ವಸ್ಥ ದೇಶವನ್ನಾಗಿಸುವುದಕ್ಕೆ ತುಂಬಾ ಪ್ರಮುಖವಾದುದು. ಎಂದರಲ್ಲಿ ಉಗಿಯುವುದು, ಕಸಕಡ್ಡಿ ಹಾಗೂ ತ್ಯಾಜ್ಯಗಳನ್ನು ಹಾಕುವಂಥ ಸಣ್ಣ ಸಮಸ್ಯೆಗಳನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದು ಸ್ವಚ್ಛ ಭಾರತ ಅಭಿಯಾನ. ಸ್ವಚ್ಛತೆಯತ್ತ ಇಡುತಿದ್ದ ಹೆಜ್ಜೆಗಳು ಕರೋನಾ ತಡೆಗೂ ಸ್ವಲ್ಪಮಟ್ಟದ ಸಹಕಾರಿಯೇ ಆಯಿತು ಎಂದು ಹೇಳಬಹುದು.

ಇದಲ್ಲದೆ ಈ ಅಭಿಯಾನದಡಿ, ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ರಾಷ್ಟ, ರಾಜ್ಯ, ತಾಲೂಕು, ಗ್ರಾಮಮಟ್ಟ ದಲ್ಲೂ ಹಲವಾರು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳುತ್ತಾ ಬಂದುದರಿಂದ ಅನೇಕರಿಗೆ ಇದರಿಂದ ಸ್ವಚ್ಛತೆಯ ಪಾಠ ವಾಗಿದ್ದು, ಅದನ್ನು ಅನುಸರಿಸುವಲ್ಲಿಯೂ ಮುಂದಾಗಿದ್ದರು. ತದನಂತರ ಮುಂದುವರಿದ ಪಾಠವಾಗಿ ಬಂದದ್ದು ಕೈಗಳನ್ನು ಆಗಾಗ ತೊಳೆಯುವುದು, ಹೊರಹೋಗುವಾಗ ಮೂಗು, ಬಾಯಿ ಮುಚ್ಚುವಂಥ ಮಾಸ್ಕ್ ಧರಿಸುವುದು ಹೀಗೆ.

ಭಾರತದ ಅತಿ ದೊಡ್ಡ ಸ್ವಚ್ಛತಾ ಡ್ರೈವ್ ಎಂದರೆ ಸ್ವಚ್ಛ ಭಾರತ ಅಭಿಯಾನ ಎಂದೇ ಹೇಳಬಹುದು. ಏಕೆಂದರೆ ಭಾರತದ ಬಹುಪಾಲು ನಾಗರಿಕರು ಈ ಅಭಿಯಾನದಲ್ಲಿ ಪಾಲ್ಗೊಂಡರು. ಅದಕ್ಕೂ ಹೆಚ್ಚಾಗಿ ಈ ಅಭಿಯಾನದ ನಂತರ ಜನರಲ್ಲಿ ಚಿಕ್ಕ ಪುಟ್ಟ ಬದಲಾವಣೆಗಳನ್ನು ಕಾಣಬಹುದಾಗಿತ್ತು. ಉದಾಹರಣೆಗೆ ಎಂದರಲ್ಲಿ ಕಸವನ್ನು ಎಸೆಯುವ ಮುನ್ನ ಯೋಚಿಸುವಂತೆ ಮಾಡಿತು ಈ ಅಭಿಯಾನ. ದೇಶಾದ್ಯಂತ ಸಾಮೂಹಿಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದ ಶ್ರೀನರೇಂದ್ರ ಮೋದಿಯವರು ತಾವೇ ಸ್ವತಃ ಪೊರಕೆ ಹಿಡಿದು, ಸ್ವಚ್ಛತೆ ಆರಂಭಿಸಿದ್ದರು.

ಜನರು ಸಾರ್ವಜನಿಕ ಸ್ಥಳಗಳಲ್ಲಿ ಉಗುಳ ಬಾರದು, ಇತರರಿಗೆ ಉಗುಳಲು ಬಿಡಬಾರದು ಎಂಬ ಕಿವಿಮಾತಿನೊಂದಿಗೆ ನಾವು ಗಲೀಜು ಮಾಡುವುದಿಲ್ಲ, ಗಲೀಜು ಮಾಡಲು ಬಿಡುವುದಿಲ್ಲ ಎಂಬುದು ಮಂತ್ರವಾಗಬೇಕು ಎಂದು ತಿಳಿಸಿದ್ದರು. ಈಗ ಯೋಚಿಸಿ ನೋಡಿದಾಗ ಅನಿಸುವುದೇನೆಂದರೆ ಈ ಅಭಿಯಾನದಿಂದ ಸ್ವಲ್ಪ ಮಟ್ಟದಲ್ಲಿಯಾದರೋ ಕರೋನಾ ಹರಡುವಿಕೆ ತಡೆಯಲು ಸಾಧ್ಯವಾಗಿದೆ.