ತಿಳಿರು ತೋರಣ
ಶ್ರೀವತ್ಸ ಜೋಶಿ
ಅಪ್ಸರೆಯರು ತಮ್ಮ ಶೈಶವ ಮತ್ತು ಕೌಮಾರ್ಯ ಕಳೆಯುವವರೆಗೆ ಅಜ್ಞಾತವಾಸದಲ್ಲಿದ್ದು, 17 ವರ್ಷ ಪ್ರಾಯವಾಗುತ್ತಲೇ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಹಠಾತ್ತನೆ ಭೂಮಿಯ ಮೇಲೆ ಕಾಣಿಸಿಕೊಂಡರೆ ಹೇಗಾದೀತು!? ಅದೇ ಆಗಿದೆ ಈಗ ಅಮೆರಿಕದ ಪೂರ್ವ ಕರಾವಳಿಯ ಹತ್ತಾರು ರಾಜ್ಯಗಳಲ್ಲಿ!
ಅಂದರೆ ನಾನಿರುವ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿಯೂ ಕೆಲ ದಿನಗಳಿಂದೀಚೆಗೆ ಎಲ್ಲಿ ನೋಡಿದರಲ್ಲಿ ಅಪ್ಸರೆಯರು! ಎಲ್ಲಿಯವರೆಗೆಂದರೆ ಮೊನ್ನೆ ಒಬ್ಬಳು ಅಪ್ಸರೆ ಅಮೆರಿಕಾಧ್ಯಕ್ಷ ಜೋ ಬೈಡನ್‌ರ ಹೆಗಲ ಮೇಲೆ ಕುಳಿತುಕೊಳ್ಳುವ ಧೈರ್ಯ ತೋರಿದ್ದಾಳೆ! ಏನಿದು ಒಗಟಿನಂಥ ಸಂಗತಿ ಎಂದು ಆಶ್ಚರ್ಯವಾಯಿತೇ? ಅಪ್ಸರೆಯರೆಂದರೆ ರಂಭೆ ಊರ್ವಶಿ ಮೇನಕೆ ತಿಲೋತ್ತಮೆಯರ ವಿಚಾರ ಹೇಳುತ್ತಿರುವುದಲ್ಲ. ಈಗ ಇಲ್ಲಿ ಅಮೆರಿಕದ ಪೂರ್ವ ಕರಾವಳಿ ಪ್ರದೇಶದಲ್ಲಿ ‘ಸಿಕೆಡಾ’ (Cicada) ಕೀಟಗಳು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ.
ಇದು ಇಲ್ಲಿ ಪ್ರತಿ 17 ವರ್ಷಗಳಿಗೊಮ್ಮೆ ನಡೆಯುವ ಒಂದು ಅದ್ಭುತವಾದ ಪ್ರಕೃತಿವಿಸ್ಮಯ. 2004ರಲ್ಲಿಯೂ ನಾನಿದಕ್ಕೆ ಸಾಕ್ಷಿಯಾಗಿದ್ದೆ. ಇದೀಗ 2021ರಲ್ಲಿ, ಕರಾರುವಾಕ್ಕಾಗಿ 17 ವರ್ಷಗಳ ತರುವಾಯ, ಮತ್ತೊಮ್ಮೆ ಸಿಕೆಡಾ ಕೀಟಗಳ ರಾಶಿ! ‘ಒಮ್ಮೆ ಅಪ್ಸರೆ ಅಂತೀರಿ ಮತ್ತೊಮ್ಮೆ ಕೀಟ ಅಂತೀರಿ ಏನದು ಸರಿಯಾಗಿ ಹೇಳಿ ಮಾರಾಯ್ರೇ!’ ಎಂದು ನೀವು ದುರುಗುಡುವ ಮುನ್ನವೇ
ತಿಳಿಸುತ್ತೇನೆ: ಈ ಸಿಕೆಡಾ ಕೀಟಗಳು ಮೊಟ್ಟೆ ಒಡೆದು ಲಾರ್ವ ಸ್ಥಿತಿಯಲ್ಲಿ ನೆಲದೊಳಗೆ ಪ್ರವೇಶಿಸಿದಂಥವು ಅಲ್ಲಿ ೧೭ ವರ್ಷಗಳ
ಸುದೀರ್ಘ ಆಯುಷ್ಯ ಕಳೆಯುತ್ತವೆ. ಆಮೇಲೆ ನೆಲದೊಳಗಿನ ಬಿಲದಿಂದ ಹೊರಬರುತ್ತವೆ.
ಹೊರಬರುವವರೆಗೂ ಅವುಗಳಿಗೆ ರೆಕ್ಕೆಗಳಿರುವುದಿಲ್ಲ. ಆ ಸ್ಥಿತಿಯಲ್ಲಿ ಅವುಗಳನ್ನು Nymph ಎಂದೇ ಗುರುತಿಸುವುದು, ಮತ್ತು ಈ ಪದದ ಅರ್ಥ ‘ಅಪ್ಸರೆ’ ಎಂದೇ ಇರುವುದು. ನೆಲದಿಂದ ಹೊರಬಂದ ಮೇಲೆ ರೆಕ್ಕೆ ಮೂಡುತ್ತವೆ. ಕೀಟಗಳು ನಾಲ್ಕಾರು ವಾರ ಕಾಲ ಬದುಕಿರುತ್ತವೆ. ಆ ಅವಧಿಯಲ್ಲಿ ಸಂತಾನೋತ್ಪತ್ತಿ ಮಾಡಿ ಸತ್ತು ನೆಲಕ್ಕೆ ಬೀಳುತ್ತವೆ. ಕಾವ್ಯಾತ್ಮಕವಾಗಿ ಆ ಅವಧಿಯಲ್ಲೂ ಅವುಗಳನ್ನು, ಕನಿಷ್ಠ ಹೆಣ್ಣು ಕೀಟಗಳನ್ನಾದರೂ, ಅಪ್ಸರೆ ಎನ್ನಲಿಕ್ಕಡ್ಡಿಯಿಲ್ಲ. ಎಷ್ಟೆಂದರೂ ಸಂತಾನೋತ್ಪತ್ತಿಗೆ ಸೌಂದರ್ಯ ಇರಲೇಬೇಕಲ್ಲವೇ? ಸಿಕೆಡಾಗಳದು ಸೋಜಿಗದ ಜೀವನಚಕ್ರ.
ಪ್ರಪಂಚದ ಬೇರೆ ಭಾಗಗಳಲ್ಲಾದರೆ ಒಂದು ವರ್ಷ ಜೀವಿತಾವಧಿಯ ಸಿಕೆಡಾ ಪ್ರಭೇದಗಳೂ ಇವೆ. ಅವುಗಳನ್ನು ಹೊರತುಪಡಿಸಿ 13 ವರ್ಷ ಜೀವಿತಾವಧಿಯ ಪ್ರಭೇದಗಳೂ ಇವೆ. ಆದರೆ ಇಲ್ಲಿ ಅಮೆರಿಕದ ಪೂರ್ವ ಕರಾವಳಿಯಲ್ಲಿ ಇರುವವು 17 ವರ್ಷ ಜೀವಿತಾವಧಿಯ ಸಿಕೆಡಾಗಳು. ಕೀಟಪ್ರಪಂಚದಲ್ಲಿ ದೀರ್ಘಾಯುಷ್ಯದ ಕೆಲವೇ ಕೆಲವುಗಳ ಪೈಕಿ ಇವುಗಳಿಗೆ ಪ್ರಮುಖ ಸ್ಥಾನ. ಸುಮಾರು 2-3 ಮಿಲಿಯನ್ ವರ್ಷಗಳಷ್ಟು ಹಿಂದಿನಿಂದ, ‘ಐಸ್ ಏಜ್’ ಎಂದು ಏನೆನ್ನುತ್ತೇವೋ ಆ ಲಾಗಾಯ್ತಿನಿಂದ, ಯಶಸ್ವಿ ಯಾಗಿ ಇವುಗಳ ತಲೆಮಾರುಗಳು ಮುಂದುವರಿದಿವೆ.
ನೋಡಲಿಕ್ಕೆ ಜಿರಳೆಯಷ್ಟು ಗಾತ್ರ. ಮೈಗೆ ನಸುಕಂದು ಮತ್ತು ತಲೆಯ ಸುತ್ತ ಕೇಸರಿ ಬಣ್ಣ. ಎರಡು ದೊಡ್ಡ ಕಣ್ಣು ಮತ್ತು ತಲೆಯ ಮೇಲೆ ಮೂರು ಚಿಕ್ಕ ಕಣ್ಣು – ಹೀಗೆ ಒಟ್ಟು ಐದು ಕಣ್ಣುಗಳು. ಕೊಡತಿ ಹುಳಕ್ಕಿರುವಂತೆ ಪಾರದರ್ಶಕ ರೆಕ್ಕೆಗಳು. ಹಗಲಿನಲ್ಲಿ, ಬಿಸಿಲಿದ್ದ ದಿನ ಹೆಚ್ಚು ಕ್ರಿಯಾಶೀಲವಾಗಿ, ಹಾರುತ್ತಿರುತ್ತವೆ. ಹೆಣ್ಣು ಕೀಟಗಳನ್ನು ಆಕರ್ಷಿಸಲಿಕ್ಕಾಗಿ ಗಂಡು ಕೀಟಗಳು ಕೀರಲು ಸ್ವರದಲ್ಲಿ ಕೂಗುತ್ತವೆ. ಮನುಷ್ಯರಿಗೆ ಕಚ್ಚುವುದಿಲ್ಲ ಚುಚ್ಚುವುದಿಲ್ಲ.
ಬೇರೆ ಕೀಟಗಳಂತಲ್ಲದೆ ಹಣ್ಣು – ತರಕಾರಿಗಳಿಗೆ ಗಿಡಗಳ ಎಲೆಗಳಿಗೆ ಸಂಚಕಾರ ತರುವುದಿಲ್ಲ. ಭೂಮಿಯಿಂದ ಹೊರಬಂದಮೇಲೆ
ಮರಗಳನ್ನೇರುವುದು ಅವುಗಳ ಸ್ವಭಾವ. ಮನುಷ್ಯರ ಕಾಲುಗಳನ್ನು ಅಥವಾ ಇಡೀ ಶರೀರವನ್ನೂ ಒಂದು ಮರ ಅಥವಾ ಕಂಬ ಎಂದುಕೊಂಡು ಏರುತ್ತವೆ, ಹಾರಿಬಂದು ಮೈಮೇಲೆ ಕುಳಿತುಕೊಳ್ಳುತ್ತವೆ.
ಅಮೆರಿಕಾಧ್ಯಕ್ಷ ಬೈಡನ್‌ರ ಭುಜದ ಮೇಲೆ ಒಂದು ಸಿಕೆಡಾ ಹಾರಿಬಂದು ಕುಳಿತುಕೊಂಡದ್ದೂ ಹಾಗೆಯೇ. ಅದೇನಾಯ್ತೆಂದರೆ ಮೊನ್ನೆ ಬುಧವಾರ ಬೈಡನ್ ಮಹಾಶಯರು ಸಪತ್ನೀಕರಾಗಿ ಯುರೋಪ್‌ಗೆ ಆಫೀಷಿಯಲ್ ಪ್ರವಾಸ ಹೊರಟರು. ಏರ್‌ಫೋರ್ಸ್-ವನ್ ವಿಮಾನ ಹತ್ತುವುದಕ್ಕೆ ಕೆಲವೇ ಕ್ಷಣಗಳ ಮೊದಲು ಬಯಲಲ್ಲೇ ನಿಂತುಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು. ಒಂದು ಸಿಕೆಡಾ ಹಾರಿಬಂದು ಅವರ ಬಲಭುಜದ ಮೇಲೆ ಕುಳಿತುಕೊಂಡಿತು.
‘ಯಾರು ತಿಳಿಯರು ನಿನ್ನ ಬಲಭುಜದ ಪರಾಕ್ರಮ…’ ಎಂದು ಹಾಡುತ್ತಲೇ ಬಂದಿತ್ತೇನೋ. ತತ್‌ಕ್ಷಣ ಗಮನಿಸಿದ ಬೈಡನ್ ಅದನ್ನು ಎಡಗೈಯಿಂದ ಕೊಡವಿದರು. ‘ಸಿಕೆಡಾಸ್! ಬಿವೇರ್ ಆಫ್ ದೆಮ್!’ ಎಂದು ಸುದ್ದಿಗಾರರಿಗೂ ನಸುನಗುತ್ತ ಹೇಳಿದರು. ಅದೊಂಥರ ರಷ್ಯದ ಹ್ಯಾಕರ್ಸ್ ಬಗ್ಗೆ, ಅಮೆರಿಕಕ್ಕೆ ಒಂದಿಲ್ಲೊಂದು ಉಪದ್ರವ ಕೊಡುತ್ತಲೇ ಇರುವ ವೈರಿಗಳ ಬಗ್ಗೆ, ಅನ್ಯೋಕ್ತಿ ರೀತಿಯಲ್ಲಿ ಹೇಳಿದಂತಿತ್ತು! ಅಲ್ಲಿಂದ ಹಾರಿಹೋದ ಸಿಕೆಡಾ ತನ್ನ ಬಳಗಕ್ಕೆ ವಾಪಸಾಗಿ ‘ನೋಡಿದ್ರಾ, ನಾನು ಅಮೆರಿಕದ ಅಧ್ಯಕ್ಷನ ಹೆಗಲು ಮುಟ್ಟಿ ಬಂದೆ!’ ಎಂದು ಜಂಬ ಕೊಚ್ಚಿರಬಹುದು.
ಅಮೆರಿಕಾಧ್ಯಕ್ಷರ ಸಿಕೆಡಾ ಎನ್‌ಕೌಂಟರ್ ಸುದ್ದಿ ಆವತ್ತು ಸಂಜೆ ಟಿವಿ ವಾಹಿನಿಗಳಲ್ಲಿ ರಾಷ್ಟ್ರೀಯ ವಾರ್ತೆಯಲ್ಲೂ ಪ್ರಸಾರ ವಾಯಿತು. ನನಗೆ ಆ ದೃಶ್ಯವನ್ನು ನೋಡಿದಾಗ ಮೂರನೆಯ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ‘ಸಿಂಹವನ್ನು ಸೋಲಿಸಿದ ನೊಣ’ ಪಾಠವೂ, ‘ಗಡ್ಡ ಎಳೆದವನಿಗೆ ಮಿಠಾಯಿ’ ಎಂಬ ಇನ್ನೊಂದು ಪಾಠವೂ ನೆನಪಾದವು.
ಅಲ್ವೇ ಮತ್ತೆ? ಸಿಕೆಡಾ ಒಂದು ಯಃಕಶ್ಚಿತ್ ಕೀಟ ಆದ್ದರಿಂದ ಆರಾಮಾಗಿ ಅಮೆರಿಕಾಧ್ಯಕ್ಷನ ಹೆಗಲು ಮುಟ್ಟಿ ಬಂತು. ಅದೇ ಯಾರಾದರೂ ಮನುಷ್ಯನು ಆ ದುಸ್ಸಾಹಸ ಮಾಡಿದ್ದರೆ? ತತ್‌ಕ್ಷಣವೇ ಬಂಧಿಸಿ ಶಿಕ್ಷೆ ಕೊಡುತ್ತಿರಲಿಲ್ಲವೇ! ಆಶ್ಚರ್ಯವೆಂಬಂತೆ ಅದೇ ದಿನ, ಅಮೆರಿಕಾಧ್ಯಕ್ಷರ ಯುರೋಪ್ ಪ್ರವಾಸಕ್ಕೆ ಸಂಬಂಧಿಸಿದಂತೆಯೇ, ಸಿಕೆಡಾಗಳಿಂದಲೇ, ಇನ್ನೊಂದು ಘಟನೆಯೂ ಸುದ್ದಿಯಾಯ್ತು. ಬೈಡನ್ ಸಾಹೇಬರು ಏರ್‌ಫೋರ್ಸ್ – ವನ್ ವಿಮಾನ ಹತ್ತಿದ್ದು ಅದಕ್ಕೆಂದೇ ಇರುವ ‘ಆಂಡ್ರ್ಯೂಸ್ ಏರ್‌ಬೇಸ್’ ವಿಮಾನ ನಿಲ್ದಾಣದಿಂದ. ಅಧ್ಯಕ್ಷರ ಯುರೋಪ್ ಪ್ರವಾಸವನ್ನು ಕವರ್ ಮಾಡುವ ಪತ್ರಕರ್ತರ ತಂಡದ ವಿಶೇಷ ವಿಮಾನ ಹೊರಟಿದ್ದು ವಾಷಿಂಗ್ಟನ್‌ನ ಮಾಮೂಲಿ ಏರ್‌ಪೋರ್ಟ್‌ನಿಂದ.
ಅಧ್ಯಕ್ಷರಿಗಿಂತಲೂ ಮೊದಲೇ ಯುರೋಪ್ ತಲುಪಬೇಕೆಂಬ ಉದ್ದೇಶದಿಂದ ಅದು ಸ್ವಲ್ಪ ಮೊದಲೇ ಹೊರಟಿತ್ತು. ಆದರೆ ರನ್
ವೇ ತಲುಪಿ ಇನ್ನೇನು ಟೇಕ್‌ಆಫ್ ಆಗಬೇಕು ಎನ್ನುವಷ್ಟರಲ್ಲಿ ಸಿಕೆಡಾಗಳ ಗುಂಪೊಂದು ಹಾರಿಬಂದು ವಿಮಾನದ ಎಂಜಿನ್
ನೊಳಗೆಲ್ಲ ಸೇರಿ ದಾಂಧಲೆ ಮಾಡಿತು. ಮೈಂಟೆನೆನ್ಸ್ ಸಿಬ್ಬಂದಿ ಐದಾರು ಗಂಟೆ ಕಾಲ ಹೆಣಗಾಡಿ ಸಿಕೆಡಾಗಳನ್ನೆಲ್ಲ ಹೊರಅಟ್ಟಿ
ವಿಮಾನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರೆನ್ನಿ. ಅಂತೂ ಸಿಕೆಡಾಗಳ ಪರಾಕ್ರಮ ಅಷ್ಟಿಷ್ಟಲ್ಲ ಅಂತ ಸಾಬೀತಾಯ್ತು.
ವಿಮಾನದತ್ತ ಹಾರಿಬಂದದ್ದು ಹೆಣ್ಣು ಸಿಕೆಡಾಗಳ ಗುಂಪು! ಏಕೆ ಗೊತ್ತೇ? ಸಿಕೆಡಾಗಳಲ್ಲಿ ಲೈಂಗಿಕ ಆಕರ್ಷಣೆ ಮತ್ತು
ಸಂತಾನೋತ್ಪತ್ತಿಯ ತಯಾರಿ ಆಗುವುದು ಗಂಡುಗಳ ಸತತ ಕೂಗಿನಿಂದ. ನೂರಾರು ಗಂಡುಗಳು ಸಾಮೂಹಿಕವಾಗಿ ಕೂಗಿದಾಗ ಆ ಶಬ್ದವು ಸುಮಾರು ೧೦೦ ಡೆಸಿಬೆಲ್‌ಗಳಷ್ಟು ಪ್ರಬಲವಾಗಿ ಇರುತ್ತದೆ. ಹುಲ್ಲು ಕತ್ತರಿಸುವ ಯಂತ್ರ ಅಥವಾ ಜನರೇಟರ್ ಮತ್ತಿತರ ಗೃಹೋಪಯೋಗಿ ಯಂತ್ರಗಳಿಂದ ಬರುವ ಶಬ್ದ, ರನ್‌ವೇ ತಲುಪುವವರೆಗೆ ವಿಮಾನದ ಎಂಜಿನ್ ನಿಂದ ಬರುವ ಶಬ್ದವೂ ಕೆಲವೊಮ್ಮೆ ಗಂಡುಗಳ ಕೋರಸ್ ಸಂಗೀತವೇನೋ ಎಂಬಂತೆ ಹೆಣ್ಣುಗಳಿಗೆ ಕೇಳಿಸುತ್ತದೆ.
ಆಕರ್ಷಣೆಯಿಂದ ಅವು ಓಡೋಡಿ ಬರುತ್ತವೆ. ಕೆಲವೊಮ್ಮೆ ಗಂಡುಗಳ ಸಮೂಹಗಾನ ಎಷ್ಟು ತಾರಕಕ್ಕೇರುತ್ತದೆಂದರೆ
ಸಿಕೆಡಾ ಗಳ ಬಗ್ಗೆ ಗೊತ್ತಿಲ್ಲದಿರುವವರು ಇದೇನೋ ಅಪಾಯಕಾರಿ ಶಬ್ದ ಕೇಳಿಸುತ್ತಿದೆಯೆಂದು ಎಮರ್ಜೆನ್ಸಿಯ 911 ಸಂಖ್ಯೆಗೆ ಕರೆ ಮಾಡಿದ ಪ್ರಸಂಗಗಳೂ ಇವೆ. ಮೊನ್ನೆ ಸಿನ್ಸಿನಾಟಿ ನಗರದಲ್ಲಿ ಒಂದು ವಿಚಿತ್ರ ಆಕ್ಸಿಡೆಂಟ್ ನಡೆಯಿತು. ಕಾರಿನ ಕಿಟಕಿಗಳ
ಗಾಜನ್ನು ಕೆಳಗೆ ಸರಿಸಿಕೊಂಡು ಡ್ರೈವ್ ಮಾಡುತ್ತಿದ್ದಾತನೊಬ್ಬನ ಕಾರಿನೊಳಗೆ ಒಂದು ಸಿಕೆಡಾ ನುಗ್ಗಿತು. ಝೇಂಕರಿಸುತ್ತ ಅವನ
ಮುಖದ ಸುತ್ತ ಹಾರಿತು.
ವಿಚಲಿತನಾದ ಡ್ರೈವರ್ ಬ್ಯಾಲೆನ್ಸ್ ತಪ್ಪಿ ಕಾರನ್ನು ರಸ್ತೆಬದಿಯ ಕರೆಂಟ್‌ಕಂಬಕ್ಕೆ ಗುದ್ದಿದನು. ಸಿಕೆಡಾ ಇನ್ವೇಷನ್ ರಸವಾರ್ತೆಗಳ ಸೀಸನ್ ಇದು. ಮೇ ಮಧ್ಯಭಾಗದಿಂದ ಆರಂಭವಾದದ್ದು ಜೂನ್ ಕೊನೆವರೆಗೂ ಇರುತ್ತದೆ. ಆಮೇಲೆ 17 ವರ್ಷ ಕಾಲ ಸಿಕೆಡಾಗಳ
ಸುದ್ದಿಯಿರುವುದಿಲ್ಲ. ದಿನೇಳೇ ಏಕೆ? ಏನಿದೆ ಆ ಸಂಖ್ಯೆಯಲ್ಲಿ ಮ್ಯಾಜಿಕ್? ಇದೂ ಜೀವಜಗತ್ತಿನ, ಪ್ರಕೃತಿಯ ಮಾಯೆಯ ಒಂದು ಅದ್ಭುತ ವಿಚಾರ. ಮಿಲಿಯಗಟ್ಟಲೆ ವರ್ಷಗಳಿಂದ ಅಸ್ತಿತ್ವದಲ್ಲಿರುವ, ಕೀಟಪ್ರಪಂಚದಲ್ಲಿ ದೀರ್ಘಾಯುಷ್ಯದ ಕೆಲವೇ ಕೆಲವುಗಳ ಪೈಕಿ ಸಿಕೆಡಾ ಒಂದು ಎಂದೆನಷ್ಟೆ? ಇದರಲ್ಲಿ 17 ಎಂಬ ಸಂಖ್ಯೆಯ ಪಾತ್ರವಿದೆ!
ನಮಗೆ ಗೊತ್ತಿರುವಂತೆ 17 ಎಂಬುದು ಸಾಕಷ್ಟು ದೊಡ್ಡದಾದ ಒಂದು ಅವಿಭಾಜ್ಯ ಸಂಖ್ಯೆ. ಅಂದರೆ 1 ನ್ನು ಬಿಟ್ಟರೆ 17ಕ್ಕೆ ಬೇರೆ ಅಪವರ್ತನಗಳಿಲ್ಲ. ಸಿಕೆಡಾಗಳಿಗೆ ಮಾರಕವಾಗಬಹುದಾದ ಜೀವಿಗಳು – ಉದಾಹರಣೆಗೆ ಪಕ್ಷಿಗಳು, ಹಲ್ಲಿ ಹಾವು ಮತ್ತಿತರ ಸರೀಸೃಪಗಳು, ಚಿಕ್ಕಪುಟ್ಟ ಪ್ರಾಣಿಗಳೂ, ಪ್ರಕೃತಿಯಲ್ಲಿ ಅನೇಕ ಇರಬಹುದು. ಅವುಗಳ ಒಂದು ತಲೆಮಾರಿನ ಅವಧಿ ಎರಡಂಕಿ ತಲುಪುವುದಿಲ್ಲ. ಒಂದುವೇಳೆ ಸಿಕೆಡಾಗಳು 12 ವರ್ಷಗಳಿಗೊಮ್ಮೆ ಭೂಮಿಯಿಂದ ಹೊರಬರುವವು ಅಂತಿಟ್ಕೊಳ್ಳೋಣ. ಆಗ ತಲೆಮಾರಿನ ಅವಧಿ 2,3,4 ಮತ್ತು 6 ವರ್ಷ ಇರುವ ಜೀವಿಗಳೆಲ್ಲವೂ ಸಿಕೆಡಾಗಳನ್ನು ಕಬಳಿಸಲಿಕ್ಕೆ ಬದುಕಿರುವ ಸಾಧ್ಯತೆಗಳು ಹೆಚ್ಚು, ಏಕೆಂದರೆ 2,3,4 ಮತ್ತು 6 ಇವು 12ರ ಅಪವರ್ತನ ಸಂಖ್ಯೆಗಳು.
ಸಿಕೆಡಾಗಳು 15 ವರ್ಷಗಳಿಗೊಮ್ಮೆ ಭೂಮಿಯಿಂದ ಹೊರಬರುವುದು ಅಂತಿದ್ದರೂ 5 ವರ್ಷ ಅವಧಿಯ ತಲೆಮಾರಿನ ವೈರಿಗಳು ಭಕ್ಷಿಸುವ ಸಾಧ್ಯತೆಯಿದೆ. 17ರಂಥ ಅವಿಭಾಜ್ಯ ಸಂಖ್ಯೆ ವರ್ಷಗಳಷ್ಟು ಆಯುಷ್ಯ, ಆ ಹದಿನೇಳು ವರ್ಷಗಳೂ ಭೂಮಿಯೊಳಗೆ ಇದ್ದು ಸಂತಾನೋತ್ಪತ್ತಿಗೆ ಮಾತ್ರ ಹೊರಬರುವಂತೆ ಆದೇಶ, ಸಿಕೆಡಾಗಳಿಗೆ ಕೊಟ್ಟಿದ್ದಾಳೆ ಪ್ರಕೃತಿಮಾತೆ! ಗಣಿತದಲ್ಲಿ 100/100 ಅಂಕ ತೆಗೆದೆ ಎಂದು ಬೀಗುವ ಮನುಷ್ಯರಿದ್ದರೆ ನಾಚಿ ತಲೆತಗ್ಗಿಸಬೇಕು.
ಲಕ್ಷೋಪಲಕ್ಷ ಅಂದರೆ ಬಹುಮಟ್ಟಿಗೆ ಅಗಣಿತ ಸಂಖ್ಯೆಯಲ್ಲಿ ಒಮ್ಮೆಲೇ ಹೊರಬರುವುದೂ ವೈರಿಗಳಿಂದ ರಕ್ಷಿಸಿಕೊಳ್ಳಲಿಕ್ಕೆ ಪ್ರಕೃತಿಯು ಮಾಡಿಕೊಟ್ಟಿರುವ ಏರ್ಪಾಡು. ಸರಿ, ಭೂಮಿಯೊಳಗೇ ಇರುವಾಗ 17 ವರ್ಷಗಳ ಗಣನೆಯನ್ನು ಸಿಕೆಡಾಗಳು ಹೇಗೆ ಮಾಡುತ್ತವೆ? ಭೂಮಿಯ ಹೊರಗೆ ಇದ್ದಿದ್ದಾದರೆ ಋತುಬದಲಾವಣೆಯ ವಾರ್ಷಿಕ ಚಕ್ರವನ್ನು ಗಮನಿಸುತ್ತವೆ ಎನ್ನಬಹುದಿತ್ತು. ಏಕೆಂದರೆ ಬೇರೆ ಎಷ್ಟೋ ಜೀವಿಗಳು ತಮ್ಮ ವಲಸೆಗೆ, ಸಂತಾನೋತ್ಪತ್ತಿಗೆ ಸೂರ್ಯ – ಭೂಮಿ – ಚಂದ್ರರ ಸಾಪೇಕ್ಷ ಚಲನೆಯನ್ನು
ಅವಲಂಬಿಸುವುದುಂಟು.
ಸಿಕೆಡಾಗಳು ಭೂಮಿಯೊಳಗೆ ಇದ್ದಾಗ ಅವುಗಳಿಗೆ ಈ ಸೌಲಭ್ಯ ಇಲ್ಲ. ಮತ್ತೆ ಹೇಗೆ ಲೆಕ್ಕವಿಡುತ್ತವೆ? ಅದೂ ಒಂದು ಸೋಜಿಗವೇ. ಮೊದಲನೆಯದಾಗಿ ಮೊಟ್ಟೆಯಿಂದ ಹೊರಬಂದು ಲಾರ್ವ ಸ್ಥಿತಿಯಲ್ಲಿರುವ ಸಿಕೆಡಾ ಭೂಮಿಯೊಳಗೆ ಬಿಲದಲ್ಲಿ ಇರುತ್ತದೆ ಅಂದಮಾತ್ರಕ್ಕೆ ಅದೇನೂ ನಿಶ್ಚೇಷ್ಟತೆ (ಹೈಬರ್‌ನೇಷನ್ )ಯಲ್ಲಿರುವುದಿಲ್ಲ. ಸತತವಾಗಿ ಮರಗಳ ಬೇರಿನ ರಸವನ್ನು
ಸ್ವಲ್ಪಸ್ವಲ್ಪವೇ – ಬದುಕುಳಿಯುವುದಕ್ಕೆ ಮಾತ್ರ, ಈಟಿಂಗ್ ಫಾರ್ ಲಿವಿಂಗ್ ಅಷ್ಟೇಹೊರತು ಲಿವಿಂಗ್ ಫಾರ್ ಈಟಿಂಗ್ ಅಲ್ಲ – ಮೆಲ್ಲುತ್ತಿರುತ್ತದೆ.
ಮರಗಳು, ಅದರಲ್ಲೂ ಅಮೆರಿಕದ ಪೂರ್ವ ಕರಾವಳಿಯ ಮರಗಳು ವಾರ್ಷಿಕ ಚಕ್ರವನ್ನು ಅತಿ ಕರಾರುವಾಕ್ಕಾಗಿ ಪಾಲಿಸುತ್ತವೆ.
ಬೇಂದ್ರೆಯವರು ಹೇಳಿದ ‘ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ’ ಸಾಲುಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿವೆಯೋ ಎಂಬಂತೆ. ಈ ಮರಗಳು ಚಿಗುರಿ ಹೂವು/ಹಣ್ಣು ಬಿಡುವಾಗ ಸಹಜ ವಾಗಿಯೇ ಅವುಗಳ ಬೇರುಗಳಲ್ಲಿ ಜೀವದ್ರವ್ಯದ ಸಂಚಾರ ದಟ್ಟವಾಗಿ ಆಗುತ್ತದೆ. ಇದು, ಆ ರಸವನ್ನು ಕುಡಿಯುವ ಸಿಕೆಡಾಗಳಿಗೂ ಗೊತ್ತಾಗುತ್ತದೆ. ಒಟ್ಟು ಎಷ್ಟು ಸಲ ಮರದ ಬೇರುಗಳಲ್ಲಿ ರಸಪ್ರವಾಹ ಹೆಚ್ಚಿತು ಎಂದು ಲೆಕ್ಕವಿಡುವ ಸಿಕೆಡಾ ಆ ಸಂಖ್ಯೆ 17 ಆದಕೂಡಲೇ ಬಿಲದಿಂದ ಹೊರಕ್ಕೆ ತಲೆಯೆತ್ತುತ್ತದೆ!
ಮೇ ತಿಂಗಳಲ್ಲಿ ಮಣ್ಣಿನ ತಾಪಮಾನ 64 ಡಿಗ್ರಿ ಫ್ಯಾರನ್‌ಹೀಟ್ ಆದಾಗ ಬಿಲ ಬಿಟ್ಟು ಹೊರಬರುತ್ತದೆ. ಮರಗಳನ್ನೇರಿ, ಅತ್ತಿಂದಿತ್ತ ಹಾರುತ್ತ ಚೀರುತ್ತ, ಗಂಡು-ಹೆಣ್ಣು ಮಿಲನಮಹೋತ್ಸವ ನಡೆಸಿ, ಹೆಣ್ಣುಗಳು ಮೊಟ್ಟೆಯಿಟ್ಟಾದ ಮೇಲೆ ತಂದೆ – ತಾಯಿ ಇಬ್ಬರೂ ಸತ್ತು ನೆಲಕ್ಕುರುಳುತ್ತವೆ. ಮರಗಳ ಎಲೆಗಳು ಮತ್ತು ರೆಂಬೆಕೊಂಬೆಗಳಲ್ಲಿರುವ ಮೊಟ್ಟೆಗಳು ಕೆಲ ವಾರಗಳ ಬಳಿಕ ಒಡೆದಾಗ ಬರುವ ‘ಅಪ್ಸರೆ’ಗಳು ನಿಧಾನಕ್ಕೆ ತೆವಳಿಕೊಂಡು ಭೂಮಿಯ ಒಳಕ್ಕಿಳಿಯುತ್ತವೆ. ಮತ್ತೊಮ್ಮೆ 17ರ ಗಣನೆ ಶುರು!
ಅಪರೂಪಕ್ಕೆ ಸಿಗುವ ಮಾಲು ಎಂದು ಇಲ್ಲಿನ ಕೆಲವು ಮಾಂಸಾಹಾರಿಗಳು ಸಿಕೆಡಾಗಳನ್ನು ಹಿಡಿದು, ಹುರಿದು ಕರಿದು ಅಥವಾ ಚಾಕೊಲೆಟ್ ಡಿಪ್‌ನಲ್ಲಿ ಅದ್ದಿ ತಿನ್ನುವವರಿದ್ದಾರೆ. ನಾಯಿ – ಬೆಕ್ಕುಗಳು ಎಲ್ಲೋ ಒಂದೆರಡು ಸಿಕೆಡಾಗಳನ್ನು ತಿಂದರೆ ಅಡ್ಡಿಯಿಲ್ಲ ಆದರೆ ಸಿಕ್ಕಾಪಟ್ಟೆ ಮುಕ್ಕದಂತೆ ಎಚ್ಚರವಹಿಸಿ ಎಂದು ತಜ್ಞರು ಹೇಳುತ್ತಾರೆ. ನಮ್ಮನೆಯ ಬೆಕ್ಕು ಮೊನ್ನೆ ಒಂದು ಸಿಕೆಡಾ ಹಿಡಿದು ಅದಕ್ಕೆ ಚಿತ್ರಹಿಂಸೆ ಕೊಟ್ಟು ಆನಂದಿಸುತ್ತಿತ್ತು.
ಯಾಕೋ ತಿನ್ನದೆ ಹಾಗೇ ಬಿಟ್ಟಿತು. ಬೆಳಗ್ಗೆ ಸಂಜೆ ನಾನು ವಾಕ್ ಹೋಗುವಾಗ ದಾರಿಯಲ್ಲೆಲ್ಲ ಸಿಕೆಡಾಗಳು ತರಗೆಲೆಯಂತೆ
ಬಿದ್ದದ್ದನ್ನು ನೋಡುತ್ತೇನೆ. ಕೆಲವು ಇನ್ನೂ ಹಾರುತ್ತ ಪ್ರಣಯೋನ್ಮತ್ತ ಸ್ಥಿತಿಯಲ್ಲಿರುತ್ತವೆ. ಬಿರುಬಿಸಿಲಿನ ವೇಳೆಯಲ್ಲಿ ಮಳೆ ನೀರು ಬಿದ್ದಂತಾಯ್ತಲ್ಲ ಎಂದು ಒಂದೆರಡು ಸಲ ಅನಿಸಿತ್ತು, ಮತ್ತೆ ನೋಡಿದರೆ ಅದು ಸಿಕೆಡಾಗಳು ಹಾರುತ್ತಿರುವಾಗಲೇ
ಉಚ್ಚೆ ಹೊಯ್ಯುವುದಂತೆ! ಆಮೇಲೊಮ್ಮೆ ಡ್ರೈವ್ ಮಾಡುತ್ತಿರುವಾಗ ಕಾರಿನ ವಿಂಡ್‌ಶೀಲ್ಡ್ ಮೇಲೆ ಸಂಪ್ರೋಕ್ಷಣ
ಆದದ್ದನ್ನು ನೋಡಿ ಇದು ಸಿಕೆಡಾ ಕೃತ್ಯವೇ ಎಂದು ಕಂಡುಕೊಂಡಿದ್ದೇನೆ.
ಕೊನೆಯಲ್ಲಿ, ಸಿಕೆಡಾ ಆತ್ಮಕಥೆ ಎಂಬ ಒಂದು ಕನ್ನಡ ಕವಿತೆಯನ್ನು ಪರಿಚಯಿಸುತ್ತೇನೆ. ಇದನ್ನು ಬರೆದವರು ನನ್ನೊಬ್ಬ
ಹಿರಿಯ ಮಿತ್ರ ಅಮೆರಿಕನ್ನಡಿಗ ಹಂ.ಕ.ರಾಮಪ್ರಿಯನ್. ಈ ಕವಿತೆ ದಟ್ಸ್‌ಕನ್ನಡ ಡಾಟ್ ಕಾಮ್ ಅಂತರಜಾಲ ಪತ್ರಿಕೆಯಲ್ಲಿ
ಪ್ರಕಟವಾದದ್ದು 17 ವರ್ಷಗಳ ಹಿಂದೆ 2004ರಲ್ಲಿ. ಆಗ ರಾಮಪ್ರಿಯನ್ ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಸಿಕೆಡಾ ಸಾನ್ನಿಧ್ಯ ಅವರಿಗೂ ಸಿಕ್ಕಿತ್ತು. ಈಗ ಅವರು ಕ್ಯಾಲಿಫೋರ್ನಿಯಾಕ್ಕೆ, ಅಮೆರಿಕದ ಪಶ್ಚಿಮ ಕರಾವಳಿಗೆ ವರ್ಗವಾಗಿದ್ದಾರೆ. ಅಲ್ಲಿ ಸಿಕೆಡಾ ಸಂಭ್ರಮ ಇಲ್ಲ.
ರಾಮಪ್ರಿಯನ್‌ರ ಈ ಕವಿತೆ ಸಿಕೆಡಾಗಳ ಬಗೆಗಿನ ಏಕೈಕ ಕನ್ನಡ ಕಾವ್ಯ ಎಂಬ ಅಗ್ಗಳಿಕೆಯದು. ನನ್ನ ನೆಚ್ಚಿನದೂ ಹೌದು.
ಅಂಕಣದಲ್ಲಿ ಸ್ಥಳನಿರ್ವವಣೆ ದೃಷ್ಟಿಯಿಂದ ಪದ್ಯದಂತಲ್ಲದೆ ಗದ್ಯದ ರೀತಿಯಲ್ಲಿ ಕೊಡುತ್ತಿದ್ದೇನೆ. ‘ಹದಿನೇಳು ವರುಷಗಳ ಹಿಂದೆನ್ನ ತಾಯ್ತಂದೆ ಜನುಮವನ್ನೆನಗಿತ್ತು| ಮೊಟ್ಟೆಯಾಗಿದ್ದೆನ್ನ ಪುಟ್ಟವೃಕ್ಷದ ಕಾಂಡ ಕೊರೆಯುತ್ತಲವಿತಿಟ್ಟು| ನೂರಾರು ಸೋದರ – ಸೋದರಿಯರನ್ನವರು ಮರಗಳಲಿ ಹುದುಗಿಟ್ಟು| ನಮ್ಮ ಪೀಳಿಗೆಯಿಂತು ಬೆಳೆಯುತಿರಲೆನ್ನುತಲಿ ಮುಚ್ಚಿದರು
ಕಣ್ಗಳನು|೧| ಎಂಟು ವಾರಗಳಲ್ಲಿ ಕಿರಿಯಿರುವೆಯಷ್ಟಾಗಿ ನೆಲದಲ್ಲಿ ನಾ ಬಿದ್ದೆ| ದಂಟಿನೆಳೆಗಿಂತಲೂ ತೆಳ್ಳಗಿಹ ಬಿಲವ
ಭೂಮಿಯಲಿ ಕೊರೆದಿದ್ದೆ| ಇಂತು ಒಂದಡಿಯಿಳಿದು ಕತ್ತಲಲಿ ಮನೆ ಮಾಡಿ ಬಲು ವರುಷ ನೆಲೆಸಿದ್ದೆ| ಸಂತತವು ಬೇರುಗಳ
ರಸವ ಹೀರುತಲಲ್ಲಿ ಸುಖದಿಂದ ಬೆಳೆದಿದ್ದೆ|2| ಶೈಶವದಿ ಬಾಲ್ಯದಲಿ ಮೆರೆಯುತ್ತ ಬಂದಿರಲು ಬಿಲದಲ್ಲೆ ನಾನಿಂತು|
ಒಂದು ದಿನ ಕನಸಿನಲಿ ಜನನಿಜನಕರು ಬಂದು ಹೇಳಿದರು ನನಗಿಂತು| ಎದ್ದೇಳೊ ಮತ್ತೆಷ್ಟು ದಿನವಿಲ್ಲಿ ಕತ್ತಲಲಿ ನಿದ್ರಿಸುತ
ನೀನಿರುವೆ?| ಎಂದು ನೀ ಹೊರಹೊರಟು ವಂಶವರ್ಧಕನಾಗಿ ಮೊಮ್ಮಕ್ಕಳನು ತರುವೆ?|3|
ಇದ ಕೇಳುತಿರಲೆನಗೆ ಹೊಸ ಹರೆಯದರಿವಾಗಿ ಬಿಲದಿಂದ ಹೊರಬಂದೆ| ಇದುವೆಂಥ ಸೋಜಿಗವೊ ರೆಕ್ಕೆಗಳು ಹುಟ್ಟಿರುವುವೆನ್ನ ದೇಹದೊಳ್ ಎಂದೆ| ಅತ್ತಿತ್ತ ನೊಡುತಲಿ ರೆಕ್ಕೆಗಳನಲುಗಿಸುತ ಮೆಲ್ಲಮೆಲ್ಲನೆ ಹಾರಿ ಮತ್ತಷ್ಟು| ಬಂಧುಗಳನೊಡಗೂಡಿ ಕುಳಿತೆ ನಾ ಮರದ ಕೊಂಬೆಯನೇರಿ|4| ಒಂದೆಕರೆ ಕಾಡಿನಲಿ ದಶಲಕ್ಷ ನಮ್ಮವರು ಮರಗಳಲಿ ಕುಳಿತಿರಲು| ಇಂದು ಸಿಕ್ಕಿಹುದೆಮಗೆ ಔತಣವು ಎನ್ನುತಲಿ ಹಕ್ಕಿಗಳು ಬಳಿ ಬರಲು| ಕೀಚು ಕೀಚ್ ಎಂದೆನುತಲುತ್ಕಂಠ ಘೋಷವನು ನಾವೆಲ್ಲ ಮಾಡಿದೆವು|
ಮುಚ್ಚಲಾಗದೆ ಕಿವಿಯ ಹಕ್ಕಿಗಳು ಬೆದರುತಲಿ ದೂರಕ್ಕೆ ಚೆದುರಿದವು|5|
ನನ್ನ ಕೀರಲು ದನಿಯು ಸಂತತವು ಕಾಡಿನಿಂ ತಾರದಲಿ ಹೊಮ್ಮುತಿರೆ| ಅನ್ಯಜೀವಿಗಳೆಲ್ಲ ಕೇಳಲಿದು ಬಲು ಕಠಿನ ಕರ್ಕಶ ವಿದೆನ್ನುತಿರೆ| ಎನ್ನ ಹಾಡನು ಮೆಚ್ಚಿ ಚೆಲುವೆಯೊಬ್ಬಳು ಬಂದಳಾದಳೆನ್ನಯ ಮಡದಿ| ಗಂಡು ಕತ್ತೆಯ ಹಾಡ ಕೇಳಿ ಮೆಚ್ಚುತ ಬಂದ ಹೆಣ್ಣು ಕತ್ತೆಯ ತೆರದಿ|6| ಸಗ್ಗವಿದುವೆಂದೆಣಿಸಿ ಕೆಲವೆ ದಿನ ನಲಿದಿರಲು ಚೆಲುವೆಯಾ ಸಂಗದಲಿ| ಹಿಗ್ಗ ಬಿಡಬೇಕೆನುವ ಸಮಯವಾಯಿತು ಬೇಗ ಜೀವನದ ರಂಗದಲಿ| ಮಡದಿ ನೂರಾರು ಮೊಟ್ಟೆಗಳನಿಟ್ಟಿಹಳು ಹುದುಗುವೆಡೆ ಹುಡುಕುತಲಿ| ಜನ್ಮ
ಸಾರ್ಥಕವಾಯ್ತು ಬಿಟ್ಟು ಹೋಗುವೆವೀಗ ಕಣ್ಗಳನು ಮುಚ್ಚುತಲಿ|7|’