ವಿದೇಶ ವಾಸಿ
ಕಿರರ್ಣ ಉಪಾಧ್ಯಾಯ ಬಹ್ರೈನ್
ಅಬ್ಬಬ್ಬಾ ಎಂದರೆ ಐದೂವರೆ ಅಡಿ ಎತ್ತರದ, ತೆಳ್ಳಗಿನ ಸಾಮಾನ್ಯ ದೇಹ. ಸದಾ ಹಣೆಯ ಮೇಲೊಂದು ದೇವರ ಕುಂಕುಮದ ಬೊಟ್ಟು. ಸಭ್ಯ, ಸೌಜನ್ಯಶೀಲ, ವಿನೀತ, ವಿನಮ್ರ. ನೋಡಲು ಸೀದಾ ಸಾದಾ ನಮ್ಮ ಪಕ್ಕದ ಮನೆಯ ಹುಡುಗ. ಆದರೆ ಸಾಧನೆ ಅಗಾಧ. ಅದಕ್ಕೆ ಬೇಕಾಗಿ ಪಟ್ಟ ಶ್ರಮ, ಸವೆಸಿದ ಹಾದಿ ಅಪೂರ್ವ.
ಮೂರು ನಾಲ್ಕು ತಿಂಗಳ ಹಿಂದೆ ಯು. ಕೆ.ಯಲ್ಲಿರುವ ಮಿತ್ರ ಗಣಪತಿ ಭಟ್ ಜತೆ ಮಾತಾಡುವಾಗಲೇ ಆತನ ನಿಜ ವ್ಯಕ್ತಿತ್ವ ಅನಾವರಣವಾದದ್ದು. ಅದಕ್ಕೂ ಮೊದಲು ಯೂ ಟ್ಯೂಬ್‌ನಲ್ಲಿ ಒಂದೋ ಎರಡೊ ಬಾರಿ ಭಾರತ ಕ್ರಿಕೆಟ್ ತಂಡದ ದಿಗ್ಗಜರಾದ ರೋಹಿತ್ ಶರ್ಮಾ, ಸುರೇಶ್ ರೈನಾ, ಶಿಖರ್ ಧವನ್ ಮೊದಲಾದವರು ಆತನ ಕುರಿತು ಒಳ್ಳೆಯ ಮಾತಾಡಿದ್ದು ಕೇಳಿದ್ದೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡ ಆತನ ಜನ್ಮದಿನ ಆಚರಿಸಿದ್ದನ್ನು ನೋಡಿದ್ದೆ. ಆಗೆಲ್ಲ ಆತನ ಸಾಧನೆ ಏನೆಂದು ತಿಳಿದಿರಲಿಲ್ಲ. ಟೀಮ್ ಇಂಡಿಯಾದ ಸಹಾಯಕರಲ್ಲಿ ಹತ್ತರೊಟ್ಟಿಗೆ ಹನ್ನೊಂದು ಎಂದು ಎಣಿಸಿದ್ದೆ. ಆತ ನಮ್ಮ ಕರ್ನಾಟಕದ ಕುಡಿ ಎಂದೂ ತಿಳಿದಿರಲಿಲ್ಲ. ಗಣಪತಿ ಭಟ್ ಹೇಳಿದ ನಂತರವೇ ಆತನ ಕುರಿತು ಹೆಚ್ಚಿನ ವಿವರ ಲಭ್ಯವಾದದ್ದು, ಕುತೂಹಲ
ಕೆರಳಿದ್ದು. ಜೂನ್ ಹದಿನೆಂಟರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ವಿಶ್ವ ಕ್ರಿಕೆಟ್ ಟೆಸ್ಟ್ ಚಾಂಪಿಯನ್‌ಶಿಪ್
ಸಂದರ್ಭದಲ್ಲಿ ನಮಗೆ ಆತ ಮತ್ತೆ ನೆನಪಾದ. ಇದು ನಮ್ಮ ಕರ್ನಾಟಕದ ಕರಾವಳಿಯ ಕುಡಿಯ ಕತೆ. ಸಾಧಾರಣ ಕತೆಯಲ್ಲ, ಅಸಾಮಾನ್ಯ ಯಶೋಗಾಥೆ.
ಈ ಕತೆ ಆರಂಭವಾಗುವುದು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಒಬ್ಬ ಸಾಮಾನ್ಯ ಶಾಲಾ ಶಿಕ್ಷಕರ ಮನೆಯಿಂದ. ಆತನ ಹೆಸರು ರಾಘವೇಂದ್ರ ದಿವಗಿ. ಎಲ್ಲರೂ ಪ್ರೀತಿಯಿಂದ ಕರೆಯುವುದು ‘ರಘು’ ಎಂದು. ಕುಮಟಾದ ಸಮೀಪ ಇರುವ ದಿವಗಿ ಗ್ರಾಮದ ಶಿಕ್ಷಕರಾದ ಶ್ರೀಮೋಹನ್ ಮತ್ತು ಚಂದ್ರಕಲಾ ಅವರ ಮೂರು ಮಕ್ಕಳಲ್ಲಿ ರಘು ಎರಡನೆಯವ. ರಘುನ ತಂದೆ ತಾಯಂದಿರೂ ಕೂಡ ಬಹುತೇಕ ಪಾಲಕರಂತೆಯೇ ಮಗ ಡಾಕ್ಟರ್ ಅಥವಾ ಎಂಜಿನಿಯರ್ ಆಗಲಿ ಎಂದು ಕನಸು ಕಂಡಿದ್ದರು. ಪ್ರಾಥಮಿಕ ಶಿಕ್ಷಣ ಕುಮಟಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾರದಾ ನಿಲಯ, ಪ್ರೌಢ ಶಿಕ್ಷಣ ಗಿಬ್ ಹೈಸ್ಕೂಲ್‌ನಲ್ಲಿ.
ಮಾನವ ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು ಎನ್ನುವಂತೆ, ಮುಂದೆ ಆದದ್ದೇ ಬೇರೆ. ಶಾಲೆಯ ರಜಾ ದಿನಗಳಲ್ಲಿ ರಘು ಮುಂಬೈನಲ್ಲಿರುವ ಸಂಬಂಽಕರ ಮನೆಗೆ ಹೋಗುತ್ತಿದ್ದ. ಅದು 1996, 97ರ ಸಮಯ. ಆ ದಿನಗಳಲ್ಲಿ ಕ್ರಿಕೆಟ್‌ನ ದ್ರೋಣಾ ಚಾರ್ಯ ರಮಾಕಾಂತ್ ಆಚ್ರೇಕರ್ ಮುಂಬೈನಲ್ಲಿ ಕ್ರಿಕೆಟ್ ತರಬೇತಿ ನೀಡುತ್ತಿದ್ದರು. ಹೌದು, ಅದೇ ಸಚಿನ್ ತೆಂಡುಲ್ಕರ್ ಮತ್ತು ವಿನೋದ್ ಕಾಂಬ್ಳಿಯ ಗುರುಗಳಾದ ಆಚ್ರೇಕರ್. ರಘುನ ಕ್ರಿಕೆಟ್ ಹುಚ್ಚು ರಜೆಯಲ್ಲೂ ಸುಮ್ಮನೆ ಕುಳಿತುಕೊಳ್ಳಲು
ಬಿಡದೇ, ಆತನನ್ನು ಆಚ್ರೇಕರ್ ಅವರ ಬೇಸಿಗೆಯ ಶಿಬಿರದೆಡೆಗೆ ಎಳೆದು ತಂದಿತ್ತು. ಶಿಬಿರದ ಅಂತ್ಯದಲ್ಲಿ ಆಡಿದ ಪಂದ್ಯಗಳಲ್ಲಿ ರಘು ತನ್ನ ಆಫ್ ಸ್ಪಿನ್ ಬೌಲಿಂಗ್‌ನಿಂದ ಇಪ್ಪತ್ತಮೂರು ವಿಕೆಟ್ ಪಡೆದಿದ್ದ. ಇದು ಆತನಲ್ಲಿರುವ ಕ್ರಿಕೆಟ್ ಹುಚ್ಚನ್ನು ಇನ್ನಷ್ಟು ಬಲಗೊಳಿಸಿದ್ದಷ್ಟೇ ಅಲ್ಲದೆ, ಜೀವನದ ಪ್ರಮುಖ ಮೈಲಿಗಲ್ಲಾಯಿತು.
ಮುಂಬೈನಿಂದ ಊರಿಗೆ ಬಂದ ಬಾಲಕ ರಘು, ಕ್ರಿಕೆಟ್ ತಂಡದ ಆಯ್ಕೆಗಾಗಿ ಕರ್ನಾಟಕ ಸರಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ನೀಡಿದ ಪತ್ರಿಕಾ ಜಾಹೀರಾತು ಕಂಡು ಜಿಲ್ಲಾ ಕೇಂದ್ರ ಕಾರವಾರಕ್ಕೆ ತೆರಳಿದ. ಆರಂಭದಲ್ಲಿ ಅಲ್ಲಿಯ ತರಬೇತು ದಾರ ನಾಗರಾಜ್ ರಘುಗೆ ತರಬೇತಿ ನೀಡಲು ನಿರಾಕರಿಸಿದರು. ಆದರೆ ರಘುನ ಆಸಕ್ತಿ ಮತ್ತು ಶ್ರದ್ಧೆ ಅವರನ್ನು ಮಣಿಸಿತ್ತು. ಕುಮಟಾದಿಂದ ಸುಮಾರು ಎಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಕಾರವಾರಕ್ಕೆ ತರಬೇತಿಗಾಗಿ ರಘು ಪ್ರತಿನಿತ್ಯ ಹೋಗಿಬರುತ್ತಿದ್ದ. ಬೆಳಗ್ಗೆ ಆರು ಗಂಟೆಗೆ ಆರಂಭವಾಗುವ ತರಬೇತಿಗೆ ತಲುಪಲು ರಘು ನಾಲ್ಕು ಗಂಟೆಗೆ ಕುಮಟಾದಿಂದ ಬಸ್ ಹಿಡಿಯಬೇಕಿತ್ತು. ಅದಕ್ಕಾಗಿ ಬೆಳಗ್ಗೆ ಮೂರು ಗಂಟೆಗೆ ಏಳುತ್ತಿದ್ದ.
ಕೆಲವೇ ದಿನಗಳಲ್ಲಿ ರಘು ತರಬೇತುದಾರರ ಮೆಚ್ಚುಗೆ ಗಳಿಸಿದ. ಹೀಗಿರುವಾಗ ಒಂದು ದಿನ ರಘುನ ತಂದೆ ತರಬೇತಿ ನೀಡುವವ ರನ್ನು ಭೇಟಿಯಾಗಿ, ತಮ್ಮದು ಬಡ ಕುಟುಂಬ, ಆಟ ಆಡಿ ತಮ್ಮ ಮಗ ಏನೂ ಸಾಧಿಸಲಾರ, ಕ್ರಿಕೆಟ್‌ನಿಂದಾಗಿ ಮಗ ಓದಿನೆಡೆಗೂ ಹೆಚ್ಚು ಗಮನ ಕೊಡುತ್ತಿಲ್ಲ, ಅವನಿಗೆ ಕ್ರಿಕೆಟ್ ಬಿಟ್ಟು ಓದಿನೆಡೆಗೆ ಗಮನಹರಿಸುವಂತೆ ಮನವೊಲಿಸಿ ಎಂದು ಕಣ್ಣೀರಿಟ್ಟರು.
ಬೇಸರದಲ್ಲಿದ್ದ ತಂದೆಗೆ ಅಂದು ನಾಗರಾಜ್ ಸಮಾಧಾನ ಪಡಿಸಿ, ರಘುವನ್ನು ಪ್ರೋತ್ಸಾಹಿಸುವಂತೆ ಹೇಳಿ ಕಳುಹಿಸಿದ್ದರು.
ಕೆಲವು ದಿನಗಳ ನಂತರ ನಾಗರಾಜ್ ದಾವಣಗೆರೆಗೆ ವರ್ಗಾವಣೆಗೊಂಡರು. ಬಾಲಕ ರಘುವಿನಲ್ಲಿ ಮತ್ತೆ ಅನಾಥ ಪ್ರಜ್ಞೆ ಕಾಡಲಾರಂಭಿಸಿತು.
ಆಗ ನಾಗರಾಜ್ ಹುಬ್ಬಳ್ಳಿಯಲ್ಲಿಯ ತರಬೇತುದಾರರಲ್ಲಿ ಮಾತಾಡಿ, ರಘುಗೆ ಹುಬ್ಬಳ್ಳಿಗೆ ಹೋಗಲು ಹೇಳಿದರು. ಆಗಷ್ಟೇ ಹತ್ತನೆಯ ತರಗತಿ ಮುಗಿಸಿದ್ದ ಮಗನನ್ನು ನೂರ ಎಪ್ಪತ್ತೈದು ಕಿಲೋಮೀಟರ್ ದೂರ ಇರುವ ಹುಬ್ಬಳ್ಳಿಗೆ ಕಳುಹಿಸಲು ಪಾಲಕರಿಗೆ ಸುತಾರಾಂ ಮನಸ್ಸಿರಲಿಲ್ಲ. ಆದರೆ ಕ್ರಿಕೆಟ್ ಆಟದ ಗೀಳು ಮನೆಯವರ ಅಸಮಾಧಾನದ ನಡುವೆಯೂ ರಘುವನ್ನು ಹುಬ್ಬಳ್ಳಿಗೆ ಕರೆತಂದಿತ್ತು. ಹುಬ್ಬಳ್ಳಿಗೆ ಬಂದಾಗ ಬಾಲಕನ ಕಿಸೆಯಲ್ಲಿದ್ದದ್ದು ಕೇವಲ ಇಪ್ಪತ್ತೊಂದು ರುಪಾಯಿ!
ತರಬೇತಿಯ ವ್ಯವಸ್ಥೆಯಾಯಿತು. ಉಳಿಯಲು, ಊಟಕ್ಕೆ ಏನು? ಮೊದಲು ರಘುನ ವಾಸ್ತವ್ಯ ಹಳೆ ಬಸ್‌ಸ್ಟ್ಯಾಂಡ್ ನಲ್ಲಿ. ಒಂದು ವಾರದ ನಂತರ ರಾತ್ರಿ ಪಾಳಿಯ ಪೋಲಿಸರು ರಘುವನ್ನು ಅಲ್ಲಿಂದ ಹೊರಹಾಕಿದರು. ಅಲ್ಲಿಂದ ಹೊರಟ ರಘುನ ಮುಂದಿನ ಆಶ್ರಯ ತಾಣ ಮೊದಲಿಗಿಂತ ಸ್ವಲ್ಪ ಅಡ್ಡಿಯಿಲ್ಲ ಎಂಬಂತಿದ್ದ ಆಂಜನೇಯನ ಗುಡಿ. ಅಲ್ಲಿ ಎರಡು ವಾರ. ಸುತ್ತಲಿನ ಜನ ದೂರು ನೀಡಿದ್ದರಿಂದ ಅಲ್ಲಿಂದಲೂ ಬೊಕ್ಕಸ ಕಟ್ಟಬೇಕಾಯಿತು. ಅಸಲಿಗೆ, ಕಟ್ಟಲು ಅಂಥಾ ದೊಡ್ಡ ಬೊಕ್ಕಸವೇನೂ ಇರಲಿಲ್ಲ ಬಿಡಿ. ಬಹುಶಃ ಈ ಲೋಕದಲ್ಲಿ ಯಾರೂ ತಕರಾರು ತೆಗೆಯದೇ ಇರುವ ಸ್ಥಳವೆಂದರೆ ಸ್ಮಶಾನವೊಂದೇ. ಆ ಕ್ಷಣದಲ್ಲಿ ರಘುಗೂ ಹಾಗೇ ಅನಿಸಿರಬೇಕು. ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಪಕ್ಕದಲ್ಲಿರುವ ಸ್ಮಶಾನದಲ್ಲಿ ಉಳಿಯಲು ಆರಂಭಿಸಿದ.
ಆ ಸ್ಮಶಾನದಲ್ಲಿ ಗುಡಿಸಿಲಿನಂತಿರುವ ಸಣ್ಣ ಶೆಡ್ ಇತ್ತು. ಅಲ್ಲಿ ರಘು ಬರೋಬ್ಬರಿ ಮೂರು ವರ್ಷ ಉಳಿದುಕೊಂಡಿದ್ದ. ಬೆಳಗ್ಗೆ ಐದು ಗಂಟೆಗೆ ಎದ್ದು ಮೈದಾನದಲ್ಲಿ 20 ರಿಂದ 25 ಸುತ್ತು ಓಟ, ದಿನವಿಡೀ ಕ್ರಿಕೆಟ್ ಅಭ್ಯಾಸ, ಸಾಯಂಕಾಲ ಮಲಗಲು ಸ್ಮಶಾನದಲ್ಲಿರುವ ಶೆಡ್, ರಘುನ ದಿನಚರಿ ಯಾಗಿತ್ತು. ಆ ದಿನಗಳಲ್ಲಿ ಎರಡು ಮೂರು ಮಿತ್ರರು ರಘುನ ಊಟ, ತಿಂಡಿಗೆ, ಸಣ್ಣ ಪುಟ್ಟ ಖರ್ಚಿಗೆ ತಮ್ಮ ಕೈಯದ ಸಹಾಯ ಮಾಡುತ್ತಿದ್ದರು. ಉಳಿದಂತೆ, ಅಲ್ಲಿ ಇದ್ದಷ್ಟು ದಿನವೂ ಹಳೆಯ ಕ್ರಿಕೆಟ್ ಮ್ಯಾಟ್ ಆತನ ಹಾಸಿಗೆ, ಅದೇ ಹೊದಿಕೆ. ಆ ಶೆಡ್ ರಘುಗಷ್ಟೇ ಅಲ್ಲ, ಒಂದು ಹಾವಿಗೂ ಮನೆಯಾಗಿತ್ತು. ಅದರೊಂದಿಗೇ ವಾಸಿಸುವುದನ್ನು ರಘು
ರೂಢಿಸಿಕೊಂಡಿದ್ದ.
ಸ್ಮಶಾನದಲ್ಲಿ ಮಲಗುತ್ತಿದ್ದ ರಘು ಒಮ್ಮೆ ರಾತ್ರಿ ತಪಾಸಣೆ ಮಾಡುತ್ತಿದ್ದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ವ್ಯವಸ್ಥಾಪಕರಾಗಿದ್ದ ವಿ. ಬಿ. ಹಿರೇಮಠ ಅವರ ಕಣ್ಣಿಗೆ ಬಿದ್ದ. ಈ ವಿಷಯವನ್ನು ಅವರು ಕೆಎಲ್ಇ ಸಂಸ್ಥೆಯ ಅಧ್ಯಕ್ಷರಾದ
ಪ್ರಭಾಕರ ಕೋರೆಯವರ ಗಮನಕ್ಕೆ ತಂದರು. ಅವರು ರಘುಗೆ ಕೆಎಲಇಯ ಕಾಡಸಿದ್ದೇಶ್ವರ ಕಾಲೇಜಿನ ಹಾಸ್ಟೆಲ್ನಲ್ಲಿ ಉಚಿತವಾಗಿ ಉಳಿಯುವ ವ್ಯವಸ್ಥೆ ಮಾಡಿಕೊಟ್ಟರು.
ಕರ್ನಾಟಕ ರಾಜ್ಯ ವಿಶೇಷಚೇತನ ಕ್ರಿಕೆಟ್ ಸಂಘದವರು ಕಲಾ ವಿಭಾಗದಲ್ಲಿ ಪಿಯುಸಿ ಓದಲು ಅವಕಾಶ ಒದಗಿಸಿಕೊಟ್ಟರು.
ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಸಂದರ್ಭದಲ್ಲಿ, ಬಿವಿಬಿ ಇಂಜನಿಯರಿಂಗ್ ಕಾಲೇಜಿನ ಕ್ಯಾಂಟೀನ್, ಗುರುದತ್ತ ಭವನ ಮತ್ತು ಕರ್ನಾಟಕ ಭವನ ಹೋಟೆಲ್‌ಗಳು ರಘುನ ಸಹಾಯಕ್ಕೆ ನಿಂತವು. ಆದಾಗ್ಯೂ, ಒಂದು ದಿನವೂ ಆತ ತನ್ನ ಕಷ್ಟ ಗಳನ್ನು ಬೇರೆಯವರಲ್ಲಿ ಹೇಳಿಕೊಂಡಿಲ್ಲ, ಯಾರನ್ನು ದೂಷಿಸಲೂ ಇಲ್ಲ.
ಅದಾಗಲೇ ರಘು ಸಣ್ಣ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡಲು ಆರಂಭಿಸಿದ್ದ. ಒಂದು ದಿನ ಕಾಲೇಜಿನ ಮೆಟ್ಟಿಲ ಮೇಲಿಂದ ಬಿದ್ದದ್ದರಿಂದ ರಘುನ ಬಲಗೈಗೆ ದೊಡ್ಡ ಮಟ್ಟದ ಪೆಟ್ಟು ಬಿತ್ತು. ಆ ಘಟನೆ ರಘುನ ಕ್ರಿಕೆಟ್ ಆಡುವ ಕನಸಿಗೆ ಕೊಡಲಿ ಏಟು ಕೊಟ್ಟಿತ್ತು. ಅದರಿಂದ ಚೇತರಿಸಿಕೊಂಡು, ಧಾರವಾಡ ವಲಯದ ಹದಿನಾಲ್ಕು ವರ್ಷದ ಒಳಗಿನವರ ತಂಡಕ್ಕೆ ಸಹಾಯಕರಾಗಿ ಹೋಗಲು ಆರಂಭಿಸಿದ. ಆ ಸಂದರ್ಭದಲ್ಲಿ ರಘುಗೆ ಮಾಜಿ ಕ್ರಿಕೆಟಿಗ ದಯಾನಂದ ಶೆಟ್ಟಿಯವರ ಪರಿಚಯವಾಯಿತು. ಪಿಯುಸಿ ಮುಗಿದ ನಂತರ ಹಾಸ್ಟೆಲ್ ಬಿಡಬೇಕಾದಾಗ ದಯಾನಂದ ರಘುಗೆ ಉಳಿಯಲು ವ್ಯವಸ್ಥೆ ಮಾಡಿದರು.
ಕೆಲವು ದಿನಗಳ ನಂತರ ಬೆಂಗಳೂರಿಗೆ ಹೋಗುವಂತೆ ರಘುನ ಮನವೊಲಿಸಿದರು. ತಮ್ಮ ಸ್ನೇಹಿತ, ಕೋಚ್ ಇರ್ಫಾನ್ ಸೇಠ್ ಜತೆ ಮಾತನಾಡಿ ಕೆಐಒಸಿ (ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್)ಗೆ ಸೇರಿಸಿದರು. ರಘು ಅಲ್ಲಿ ಸಹಾಯಕನಾಗಿ ಕೆಲಸ ಮಾಡುವುದರ ಜತೆಗೆ ಸ್ವಸ್ತಿಕ್ ಯೂನಿಯನ್ ಕ್ಲಬ್ ಪರ ಆಡಲು ಆರಂಭಿಸಿದ. ಆ ಸಂದರ್ಭದಲ್ಲಿ ಎಲ್ಲರಿಗೂ ಸಲಹೆ ನೀಡುತ್ತಿದ್ದ, ಯಾರು ಎಷ್ಟೇ ಹೊತ್ತಿಗೆ ಅಭ್ಯಾಸಕ್ಕೆ ಬಂದರೂ ಸಹಕರಿಸುತ್ತಿದ್ದ ರಘು ಕೆಲವೇ ದಿನಗಳಲ್ಲಿ ಮಹಿಳಾ ಮತ್ತು ಪುರುಷ ಕ್ರಿಕೆಟಿಗರ ಪ್ರೀತಿಪಾತ್ರನಾದ.
ಕೆಐಒಸಿ ಕರ್ನಾಟಕ ರಾಜ್ಯ ತಂಡದ ಆಟಗಾರರಿಗೆ ಬೌಲಿಂಗ್ ಯಂತ್ರದಿಂದ ಸಹಾಯದಿಂದ ತರಬೇತಿ ನೀಡುತ್ತಿತ್ತು. ರಘು ಅದಕ್ಕೆ ಸಹಾಯ ಮಾಡುತ್ತಿದ್ದುದರಿಂದ ಎಲ್ಲಾ ಆಟಗಾರರ ಸಂಪರ್ಕ ಲಭ್ಯವಾಯಿತು. ವಿದ್ಯುತ್ ವ್ಯತ್ಯಯ ಉಂಟಾದಾಗ ರಘು ಗಂಟೆಗಟ್ಟಲೆ ಕೈಯಿಂದಲೇ ಚೆಂಡು ಎಸೆಯುತ್ತಿದ್ದ. ಅದರಿಂದ ಆತನಲ್ಲಿ ಅನುಭವ ವೃದ್ಧಿಸುವುದರ ಜತೆಗೆ ಚೆಂಡೆಸೆತದ ತಜ್ಞ (ಥ್ರೋಡೌನ್ ಸ್ಪೆಶಲಿಸ್ಟ್) ಆಗಬ ಎಂಬ ವಿಶ್ವಾಸ ಬಲವಾಯಿತು. ದಿನ ಕಳೆದಂತೆ ರಘು ಅನುಭವಿ ತಜ್ಞನಾದ.
150 ಕಿಮಿ. ವೇಗದಲ್ಲಿ ಚೆಂಡು ಎಸೆಯುವುದರ ಜತೆಗೆ ಬ್ಯಾಟ್ಸ್‌ಮನ್‌ಗಳಿಗೆ ಸಲಹೆಯನ್ನೂ ನೀಡುತ್ತಿದ್ದ. ಒಂದು ದಿನ ಚಿನ್ನ ಸ್ವಾಮಿ ಕ್ರೀಡಾಂಗಣದ ಜಿಮ್‌ಗೆ ಬಂದಿದ್ದ ಕರ್ನಾಟಕದ ವೇಗಿ ಜಾವಗಲ್ ಶ್ರೀನಾಥ್, ಮೈದಾನದಲ್ಲಿ ವಿಕೆಟ್ ಕೀಪರ್ ತಿಲಕ್ ನಾಯ್ಡುಗೆ ಬೌಲ್ ಮಾಡುತ್ತಿದ್ದ, ಕ್ರಿಕೆಟ್ ವಿಷಯ ಚರ್ಚಿಸುತ್ತಿದ್ದ ರಘುವನ್ನು ಕಂಡು ಪ್ರಭಾವಿತರಾದರು. ಆಗ ವೆಂಕಟೇಶ ಪ್ರಸಾದ್ ಕರ್ನಾಟಕ ತಂಡಕ್ಕೆ ಕೋಚ್ ಆಗಿದ್ದರು. ನಾಯ್ಡು ಮತ್ತು ಶ್ರೀನಾಥ್ ಮಾತಿಗೆ ಮನ್ನಿಸಿದ ಪ್ರಸಾದ್ ರಘುವನ್ನು
ಸಹಾಯಕ್ಕೆ ನೇಮಿಸಿಕೊಂಡರು. ಮುಂದೊಂದು ದಿನ ಬಾಲಚಂದ್ರ ಅಖಿಲ್ ಮತ್ತು ವಿಜಯ್ ಭಾರದ್ವಾಜ್ ರಘುವನ್ನು ರಾಹುಲ್ ದ್ರಾವಿಡ್‌ಗೆ ಪರಿಚಯಿಸಿದರು.
ಸೌರವ್ ಗಂಗೂಲಿ ನಾಯಕರಾಗಿದ್ದಾಗ ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ)ಗೆ ಆಗಮಿಸುತ್ತಿದ್ದ ಭಾರತೀಯ ತಂಡದ
ಆಟಗಾರರು ರಘುನ ಪ್ರತಿಭೆ ಗುರುತಿಸಲು ಆರಂಭಿಸಿದರು. ನಂತರ ಎನ್‌ಸಿಎದಲ್ಲಿಯೇ ಉಳಿಯುತ್ತಿದ್ದ ರಘು ಅಲ್ಲಿಯ ಎಲ್ಲ ಕೆಲಸವನ್ನೂ ಶ್ರದ್ಧೆಯಿಂದ ಮಾಡುತ್ತಿದ್ದು, ದಿನದ ಇಪ್ಪತ್ನಾಲ್ಕು ಗಂಟೆಯೂ ಲಭ್ಯವಿರುತ್ತಿದ್ದ. 2011ರಲ್ಲಿ ಮೊದಲ ಬಾರಿ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಹಾಯಕ ಸಿಬ್ಬಂದಿಯಾಗಿ ಆಯ್ಕೆಯಾದ. ಈ ನಡುವೆ ಅಹಮದಾಬಾದ್‌ನಿಂದ ಬಿಸಿಸಿಐನ ಲೆವೆಲ್ – ೧ ಕೋಚಿಂಗ್ ಮುಗಿಸಿದ. ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್‌ರಿಂದ ಹಿಡಿದು,
ದ್ರಾವಿಡ್, ಸೆಹ್ವಾಗ್, ಲಕ್ಷ್ಮಣ್, ಧೋನಿ, ಕೊಹ್ಲಿ ಎಲ್ಲರಿಗೂ ರಘು ಮೆಚ್ಚಿನವನಾದ. ಮನಿಶ್, ಮಾಯಾಂಕ್, ರಿಷಭ್ ರಂಥ ಯುವ ಆಟಗಾರರಿಗೆ ಮಾರ್ಗದರ್ಶಿಯೂ ಆದ.
ನೋಡುತ್ತಿದ್ದಂತೆ ರಘುವಿಂದ ‘ರಘು ಸರ್’ ಆದ. ರಘು ಸರ್ ಈಗ ಬಿಸಿಸಿಐನ, ಭಾರತ ತಂಡದ ಅವಿಭಾಜ್ಯ ಅಂಗ. ಹೈದರಾಬಾದ್ ಮೂಲದ ಸಂಸ್ಥೆಯೊಂದು ಕ್ರಿಕೆಟ್ ತರಬೇತಿಗೆ ಬಳಸುವ ಉಪಕರಣವನ್ನು ತಯಾರಿಸುತ್ತದೆ. ಸಂಸ್ಥೆ RoboArm (ರೋಬೋ ಆರ್ಮ್) ಹೆಸರಿನಲ್ಲಿ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಚೆಂಡನ್ನು ಎಸೆಯಬಹುದಾದ ಉಪಕರಣವೊಂದನ್ನು ತಯಾರಿಸಿದೆ.
ತಯಾರಿಸುವ ಮೊದಲು ಸಂಸ್ಥೆ ಯಾರ ಸಲಹೆ ಪಡೆದಿದೆ ಗೊತ್ತಾ? ಯೆಸ್, ರಘು ಸರ್ ಅವರದ್ದು. ಸಂಸ್ಥೆ ಉಪಕರಣದ ಮೊದಲ ಅಕ್ಷರ ”ನ್ನು ರಘು ಅವರಿಗೆ ಗೌರವ ಸೂಚಕವಾಗಿ ನೀಡಿದೆ. ಇಂದು ವಿಶ್ವದಾದ್ಯಂತ ರಘು ಅವರೂ ಸೇರಿದಂತೆ ಅನೇಕ ಬೌಲಿಂಗ್ ಕೋಚ್‌ಗಳು ಈ ಉಪಕರಣ ಬಳಸುತ್ತಾರೆ.
ಈ ಉಪಕರಣ ಬಳಸಿ ಸುಮಾರು 150 ಕಿಮಿ. ವೇಗದಲ್ಲಿ, ಮೂರುಗಂಟೆಯ ತರಬೇತಿಯಲ್ಲಿ ಒಂದು ಸಾವಿರ ಎಸೆತ ಎಸೆಯುವ ರಘು ಶುದ್ಧ ಸಸ್ಯಾಹಾರಿ, ಅಪ್ಪಟ ದೈವ ಭಕ್ತ. ಒಂದು ಕಾಲದಲ್ಲಿ ಫಾಸ್ಟ್ ಬೌಲಿಂಗ್ ಭಾರತದ ಬ್ಯಾಟ್ಸ್ ಮನ್‌ಗಳು ತರಗೆಲೆಯಂತೆ ಉದುರಿ ಹೋಗುತ್ತಿದ್ದರು. ಇಂದು ರಘು ಅವರು ಒದಗಿಸುವ ಅಭ್ಯಾಸದಿಂದ ಭಾರತದ ಬಹುತೇಕ ಬ್ಯಾಟ್ಸ್‌ಮನ್‌ಗಳು ವಿಶ್ವದ ವೇಗಿಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿzರೆ. ಕಳೆದ ಕೆಲವು ವರ್ಷಗಳಿಂದ ವಿಜಯ ಯಾತ್ರೆ ಮಾಡುತ್ತಿರುವ ಭಾರತ
ತಂಡದದಲ್ಲಿ ರಘು ಅವರ ಕೊಡುಗೆ ಸಾಕಷ್ಟಿದೆ. ಇದನ್ನು ಸಾಕಷ್ಟು ಸಲ ತಂಡದ ಬ್ಯಾಟ್ಸ್‌ಮನ್‌ಗಳೇ ಹೇಳಿದ್ದಾರೆ.ವಿಶ್ವದಾದ್ಯಂತ ಕ್ರಿಕೆಟ್ ಆಡುವ ದೇಶಗಳಲ್ಲಿ ಇಂದು ರಘು ಅವರಿಗೆ ಸಾಕಷ್ಟು ಬೇಡಿಕೆ ಇದೆ. ಆದರೆ ತನ್ನ ದೇಶ ಮೊದಲು ಎನ್ನುವ ರಘು ಮಹಾನ್ ದೇಶಭಕ್ತರೂ ಹೌದು. ಬಿಸಿಸಿಐಗೆ ನಿಷ್ಠರಾಗಿರುವ ರಘು ಬೇರೆ ದೇಶ ಬಿಡಿ, ಐಪಿಎಲ್ ತಂಡಗಳಿಂದ ಆಹ್ವಾನ ಬಂದರೂ ಹೋಗಿಲ್ಲ. ಯಾರಿಗಾದರೂ ಮೋಸ ಮಾಡುವುದು, ಡಗಾ ಹಾಕುವುದು, ಬೆಣ್ಣೆ ಸವರುವುದು ಅವರ ರಕ್ತದಲ್ಲಿಯೇ ಇಲ್ಲ.
ಯಾರ ಮುಂದೆಯೂ ಕೈ ಚಾಚಿದವರಲ್ಲ. ಮೊದಲು ಎಷ್ಟು ಪ್ರಾಮಾಣಿಕರೋ, ಇಂದಿಗೂ ಅಷ್ಟೇ ಪ್ರಾಮಾಣಿಕರು. ಅವರ
ಯಶೋಗಾಥೆ ನಿಂತಿಲ್ಲ. ಇನ್ನೊಂದಷ್ಟು ವರ್ಷ ಟೀಮ್ ಇಂಡಿಯಾ ಜತೆ ಮುಂದುವರಿಯಲಿದೆ. ಸಾಧಿಸಬೇಕೆಂಬ ದೃಢ ಸಂಕಲ್ಪ ವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಜೀವಂತ ಉದಾಹರಣೆ ರಘು. ಛಲ ಅಚಲವಾಗಿದ್ದರೆ ಬಂಡೆ ಯನ್ನೇ ಕರಗಿಸಬಹುದು ಎನ್ನುವುದಕ್ಕೆ ಸಾಕ್ಷಿ ರಘು. ಹ್ಯಾಟ್ಸ್ ಆಫ್ ಟು ಯು ರಘು. ನೀವು ನಮ್ಮೆಲ್ಲರ ಹೆಮ್ಮೆ