Sunday, 15th December 2024

ಆನ್‌ಲೈನ್‌ ಆಟಗಳನ್ನು ನಿಯಂತ್ರಿಸಲು ಕಾನೂನು ಅಗತ್ಯ

ಕಳಕಳಿ

ಉಮಾ ಮಹೇಶ ವೈದ್ಯ

ಸಂಘ ಜೀವಿಯಾದ ಮನುಷ್ಯನಿಗೆ ಯುಗ ಯುಗಾಂತರಗಳಿಂದ ಮನೋರಂಜನೆಗಾಗಿ ಕ್ರೀಡೆಗಳು ತಮ್ಮದೇ ಆದ ಕೊಡುಗೆಗೆಳನ್ನು
ನೀಡುತ್ತಾ ಬಂದಿವೆ. ಬಲಿಷ್ಠರಿಗೆ ಮಲ್ಲ ಕ್ರೀಡೆ, ಭಾರ ಎತ್ತುವ ಕ್ರೀಡೆ, ಕುದುರೆ, ಕಂಬಳ, ಇತ್ಯಾದಿ ಬಲ ಪ್ರದರ್ಶನದ ಆಟಗಳಾದರೆ, ಚಿನ್ನಿ ದಾಂಡು, ಲಗೋರಿ, ಕುಂಟೆ ಬಿ, ಚೌಕಾ ಬಾರಾ, ಮರ ಹತ್ತುವ ಆಟ, ಇತ್ಯಾದಿ ಮಕ್ಕಳ ಆಟಗಳಾಗಿದ್ದವು.

ಮಹಿಳೆಯರಿಗೆ ರಂಗೋಲಿ, ನೃತ್ಯ, ಹಾಡು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಆಟಗಳು ಅವರ ಸ್ವತ್ತಾಗಿದ್ದವು. ಇತ್ತ ಬುದ್ಧಿ ವಂತರಿಗೆ ಪಗಡೆ, ಚದುರಂಗದಂಥ ಪಂದ್ಯಗಳು ಮೀಸಲಾಗಿದ್ದವು. ಈ ರೀತಿಯಾಗಿ ನಾನಾ ರೀತಿಯ ಆಟಗಳು ಬದುಕಿನ ಅವಿಭಾಜ್ಯ ಅಂಗವಾಗಿ ವೈಯಕ್ತಿಕ ಹಾಗೂ ಸಾಮಾಜಿಕ, ಸಾಂಸ್ಕೃತಿಕ, ಆರೋಗ್ಯವನ್ನು ಕಾಪಾಡಿಕೊಂಡು ಬರುವಲ್ಲಿ ತಮ್ಮದೇ ಪಾತ್ರ ಹೊಂದಿದ್ದವು. ಆದರೆ ಕಾಲಾನಂತರ ಬ್ರಿಟೀಷರ ಆಳ್ವಿಕೆಯ ಪ್ರಭಾವದ ಫಲವಾಗಿ ವಿದೇಶದ ಆಟಗಳನ್ನು ಅಂದರೆ, ಕ್ರಿಕೆಟ್, ಫುಟ್ಬಾಲ್, ಹಾಕಿ, ಆಟಗಳು ಯುವ ಜನಾಂಗವನ್ನು ಆಕರ್ಷಿಸಿ ಪರಾಂಪರಾಗತ ಆಟಗಳನ್ನು ಹಿನ್ನಡೆಗೆ ಸರಿಸಿದವು.

ಎಲ್ಲರೂ ಸೇರಿ ಆಟವಾಡುತ್ತಿದ್ದ ಪಂದ್ಯ ಗಳನ್ನು ಈ ಕ್ರಿಕೆಟ್‌ನಂಥ ಆಟಗಳು ಕೇವಲ ಇಪ್ಪತ್ತೆರಡು ಜನ ಆಡುವ ಆಟವನ್ನು ನೂರಾರು ಜನ ಕುಳಿತು ನೋಡುವಂತಾಯಿತು. ಇದೇ ಸಮಯದಲ್ಲಿ ದೇಶವು ಜಾಗತೀಕರಣವನ್ನು ಅಪ್ಪಿಕೊಂಡ ನಂತರ ವಿದೇಶದ ವಿಡಿಯೋ ಗೇಮ್‌ಗಳು ಪರಿಚಯಗೊಂಡು, ಚಿತ್ರ ವಿಚಿತ್ರ ಆಟಗಳನ್ನು ಒಂದೆಡೆ ಕುಳಿತು ಆಟವಾಡುವ ಅಭ್ಯಾಸವನ್ನು ಯುವ ಜನಾಂಗ ಮೈಗೂಡಿಸಿ ಕೊಂಡಿತು ಎಂದರೆ ತಪ್ಪಾಗಲಿಕ್ಕಿಲ್ಲ. ವಿಡಿಯೋ ಗೇಮ್ ಸಾಧನ ತನ್ನ ಹತ್ತಿರವಿದೆ ಎನ್ನುವುದೇ ಅಂದಿನ ಬಾಲಕ ಬಾಲಕಿಯರಿಗೆ ಹೆಮ್ಮೆಯ ವಿಷಯವಾಗಿತ್ತು.

ಈ ವಿಡಿಯೋ ಗೇಮ್‌ಗಳು ಸಂಪರ್ಕ ಸಾಧನವಾದ ಮೊಬೈಲ್‌ಗಳಲ್ಲಿ ಅಳವಡಿಕೆಯಾಗಿ ಪ್ರತಿಯೊಬ್ಬರ ಕೈಯಲ್ಲಿ ಈ ವಿಡಿಯೋ ಗೇಮ್‌ಗಳು ವಯಸ್ಸಿನ ಮಿತಿಯನ್ನು ದಾಟಿಸಿ ಎಲ್ಲರ ಮನಸೂರೆಗೊಂಡವು. ಆದರೆ ಮಾಹಿತಿ ತಂತ್ರಜ್ಞಾನದ ಕ್ರಾಂತಿಕಾರಕ ಹೆಜ್ಜೆಯ ದಾಪುಗಾಲಿನಲ್ಲಿ ಈ ಮಾಹಿತಿ ಸಂಪರ್ಕಜಾಲ ದೇಶ ವಿದೇಶಗಳ ಭೌಗೋಳಿಕ ಸೀಮೆಗಳನ್ನು ಮೀರಿ ವಿಶ್ವದ ಪ್ರತಿ ಯೊಂದು ಮನೆಯ ಮೂಲೆಗೂ ಸಿಗುವಂತಾದಾಗ, ಇಂದು ಎಲ್ಲರೂ ದೈಹಿಕ ಕ್ರೀಡೆಗಳಲ್ಲಿ ತೊಡಗಿಕೊಳ್ಳುವ ಬದಲು ಈ ಆನ್‌ ಲೈನ್ ಆಟಗಳಲ್ಲಿಯೇ ಮುಳಿಗಿ ಹೋಗಿದ್ದಾರೆ ಎಂದರೂ ಸಹ ತಪ್ಪಾಗಲಿಕ್ಕಿಲ್ಲ.

ಯಾವುದೇ ಸಮಾರಂಭಗಳಲ್ಲಿ, ಮದುವೆಗಳಲ್ಲಿ, ಶುಭ – ಅಶುಭ ಕಾರ್ಯಗಳಲ್ಲಿ ತಮ್ಮ ತಮ್ಮ ಪಾತ್ರ ಹಾಗೂ ಕೆಲಸ ಮುಗಿದಾ ಕ್ಷಣ ಹೆಚ್ಚು ಜನರು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡ ಆನ್ ಲೈನ್ ಗೇಮುಗಳನ್ನು ಆಟವಾಡು ತ್ತಿರುವ ಸನ್ನಿವೇಶ ಗಳಿಗೆ ಹಾಗೂ ಘಟನೆಗಳಿಗೆ ನಾವೆಲ್ಲ ನೇರ ಸಾಕ್ಷಿಯಾಗಿದ್ದೇವೆ. ವಿದ್ಯಾರ್ಥಿಗಳಂತೂ ಮನೆ ಬಿಟ್ಟು ಆಟದ ಮೈದಾನ ಗಳೊಳಗೆ ಕಾಲಿಡುತ್ತಿಲ್ಲ. ಆನ್ ಲೈನ್ ಗೇಮುಗಳಿದ್ದರೆ ಸಾಕು ಸುತ್ತ ಮುತ್ತ ಯಾರೂ ಬೇಡ, ಊಟ ತಿಂಡಿಯೂ ಬೇಡ. ತಾನಾ ಯಿತು ತನ್ನ ಆನ್ ಲೈನ್ ಗೇಮಾಯಿತು. ಇವೆಲ್ಲವನ್ನು ನೋಡುತ್ತಿದ್ದರೆ, ಮುಂದೊಂದು ದಿನ ಬನ್ನಿ ಮೈದಾನದೊಳು
ಆಟವಾಡೋಣ ಅಭಿಯಾನ ಪ್ರಾರಂಭವಾದರೂ ಅಚ್ಚರಿಯೇನಿಲ್ಲ.

ಹಿಂದೆಲ್ಲ, ಆಟವಾಡಲು ಯಾವುದೇ ಹಣವನ್ನು ವೆಚ್ಚ ಮಾಡಬೇಕಿರಲಿಲ್ಲ. ಆದರೆ ಕ್ರಿಕೆಟ್, ಫುಟ್ಬಾಲ್‌ನಂಥ ಆಟವಾಡಲು ಮಕ್ಕಳಿಗೆ ಕನಿಷ್ಠ ಪ್ರಮಾಣದ ಹಣದ ಅವಶ್ಯಕತೆಯುಂಟಾಯಿತು. ಈಗ ಆನ್‌ಲೈನ್ ಗೇಮ್‌ಗಳನ್ನು ಆಡಲು ನಿಜಕ್ಕೂ ಸಾವಿ ರಾರು ರುಪಾಯಿಗಳನ್ನು ವ್ಯಯಿಸಲೇ ಬೇಕು.  ಉತ್ತಮವಾದ, ಒಳ್ಳೇ ಗುಣಮಟ್ಟದ ಮೊಬೈಲ್, ಲ್ಯಾಪ್‌ಟಾಪ್ ಬೇಕೇ ಬೇಕು. ಇಂಟರ್ ನೆಟ್ ವೈ- ಫೈ ಇರಲೇ ಬೇಕು. ಇವುಗಳಿಲ್ಲದಿದ್ದಲ್ಲಿ ಬದುಕೇ ಇಲ್ಲ ಎನ್ನುವ ಮಟ್ಟಿಗೆ ಇಂದು ಮಕ್ಕಳಾದಿಯಾಗಿ ಎಲ್ಲರೂ
ದಾಸರಾಗಿದ್ದಾರೆ.

ಆದರೆ ಈ ಆನ್‌ಲೈನ್ ಗೇಮ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿರುವ ಸಂಸ್ಥೆಗಳು ಯಾವ ರೀತಿಯ ಗೇಮ್‌ಗಳನ್ನು ರೂಪಿಸುತ್ತಿವೆ ಎಂಬುದನ್ನು ಗಮನಿಸಿದರೆ ನಿಜಕ್ಕೂ ಕೆಲವು ಬಾರಿ ಆತಂಕ ವುಂಟಾಗುತ್ತದೆ. ಉದಾಹರಣೆಗೆ ನೀವು ಗೂಗಲ್ ಪ್ಲೇ ಸ್ಟೋರ್‌ನೊಳಗೆ ನೋಡಿದರೆ ನಿಮ್ಮ ಗಮನಕ್ಕೆ ಬರುವುದು, ಆಕ್ಷನ್, ಅಡ್ವೆಂಚರ್, ಬೋರ್ಡ್, ಕಾರ್ಡ್, ಕ್ಯಾಸಿನೋ, ಇತ್ಯಾದಿ ರೀತಿಯ ಹತ್ತು
ಹಲವು ರೀತಿಯ ವಿಭಾಗಗಳನ್ನು ಕಾಣುತ್ತೇವೆ.

ಅವುಗಳಲ್ಲಿ ನೂರಾರು ರೀತಿಯ ಗೇಮ್ ಆಪ್ಲಿಕೇಷನ್ ಗಳು ಲಭ್ಯ. ಉಚಿತವಾಗಿ ಅಥವಾ ಹಣಕೊಟ್ಟು ಖರೀದಿಸಿ ಉಪಯೋಗಿ ಸಲು ಅವಕಾಶಗಳಿವೆ. ಆದರೆ ಆಸಕ್ತಿಕರ ಆಕರ್ಷಕವಾದ ಗೇಮ್‌ಗಳ ಪ್ರಾಥಮಿಕ ಹಂತ ಉಚಿತವಾಗಿದ್ದರೆ, ಮುಂದಿನ ಹಂತಗಳ
ಪ್ರವೇಶ ಪಡೆಯಲು ದುಡ್ಡುಕೊಟ್ಟು ಖರೀದಿಸಲೇ ಬೇಕು. ಉದಾಹರಣೆಗೆ ಈ ಮೊಬೈಲ್‌ಗೇಮ್‌ಗಳಲ್ಲಿ ಒಂದು ಆಟವಿದೆ. ಅದು ಹಂತ ಹಂತವಾಗಿ ರೂಪದರ್ಶಿಯ ಮೈಮೇಲಿನ ಬಟ್ಟೆಗಳನ್ನು ಹಂತ ಹಂತವಾಗಿ ತೆಗೆಯುವ ಆಟ.

ಒಂದು – ಎರಡು ಹಂತಗಳು ಉಚಿತವಾಗಿದ್ದು, ಮುಂದಿನ ಹಂತಗಳು ಖರೀದಿಗೆ ಮಾತ್ರ ಸಾಧ್ಯ. ಕುತೂಹಲದಿಂದ ಎಷ್ಟಾದರೂ ಹಣ ನೀಡಿ ಖರೀದಿಸಿ ಡೌನ್ ಲೋಡ್ ಮಾಡಿಕೊಂಡವರ ಸಂಖ್ಯೆಯನ್ನು ಗಮನಿಸದರೆ ಆಶ್ಚರ್ಯವಾಗುತ್ತದೆ. ಇಂಥ ಆಟಗಳು ಮನೋ ವಿಕೃತಿಯನ್ನು ಉದ್ದೀಪನ ಗೊಳಿಸುವಂಥವು. ಶೀಲ ಅಶ್ಲೀಲದ ಭೇದ ಭಾವಗಳಿಲ್ಲದೇ, ಹಿಂಸೆ ಅಹಿಂಸೆಗಳಿಗೆ ವ್ಯತ್ಯಾಸ ತಿಳಿಸದೇ ಎಲ್ಲಾ ರೀತಿಯ ಆಟಗಳು ಬೆರಳ ತುದಿಯಲ್ಲಿ ಈಗ ಲಭ್ಯ. ಆಯ್ಕೆ ನಿಮಗೆ ಬಿಟ್ಟಿದ್ದು.

ಇವನ್ನೆ ನೋಡಿದರೆ ಈಗಿರುವ ಸನ್ನಿವೇಶದಲ್ಲಿ ಈ ಆನ್‌ಲೈನ್ ಆಟಗಳು ಸಾರ್ವಜನಿಕ ವಲಯಕ್ಕೆ ಪರಿಚಯ ಮಾಡಿಸುವ ಮುನ್ನ
ಅವುಗಳನ್ನು ಪರಿಶೀಲಿಸುವ, ಅವುಗಳ ಗುಣಾವಗುಣಗಳನ್ನು ಕಂಡುಕೊಂಡು ಅವುಗಳ ಔಚಿತ್ಯದ ಬಗ್ಗೆ ನಿರ್ಧರಿಸುವ ಕಾನೂನು ಗಳಿವೆಯೇ? ಎಂದು ಒಮ್ಮೆ ಅವಲೋಕಿಸದರೆ ಸಿಗುವುದು ಶೂನ್ಯ ಫಲಿತಾಂಶ. ಸಂವಿಧಾನದ ಪ್ರಕಾರ ಆಟ ಇದು ರಾಜ್ಯ
ಸರಕಾರದ ವಿಷಯ. ಆದ್ದರಿಂದ ರಾಜ್ಯ ಸರಕಾರವೇ ಈ ವಿಷಯದ ಕುರಿತಂತೆ ಸೂಕ್ತ ಕಾನೂನು ಹಾಗೂ ನಿಯಮಗಳನ್ನು ರೂಪಿಸಿ ಜಾರಿಗೆ ತರುವ ಹೊಣೆಗಾರಿಕೆ ಇದೆ. ಸದ್ಯ ಭೌತಿಕ ಆಟಗಳನ್ನು ನಿಯಂತ್ರಿಸುವ ಏಕೈಕ ಕಾನೂನು ಕರ್ನಾಟಕ ಪೊಲೀಸ್ ಅಧಿನಿಯಮ 1963 ಮಾತ್ರ. ಆದರೆ ಈ ಅಧಿನಿಯಮದಲ್ಲಿ ಈ ಆನ್‌ಲೈನ್ ಗೇಮ್‌ಗಳನ್ನು ನಿಯಂತ್ರಿಸುವ ಯಾವುದೇ ನಿಬಂಧನೆಗಳಿಲ್ಲ.

ಮೇಲಾಗಿ ಈ ಅಧಿನಿಯಮ ಇಂದಿನ ಕಾನೂನಿನ ಅವಶ್ಯಕತೆಗಳನ್ನು ಪೂರೈಸುವಷ್ಟು ಅವಕಾಶ ಹೊಂದಿಲ್ಲ. ಉದಾಹರಣೆಗೆ ಆನ್‌ಲೈನ್ ಆಟಗಳು ಎನ್ನುವುದರ ಬಗ್ಗೆ ವ್ಯಾಖ್ಯಾನವಿಲ್ಲ, ಸೈಬರ್ ಸ್ಥಳ ಎನ್ನುವ ಪರಿಕಲ್ಪನೆಯಿಲ್ಲ. ದತ್ತಾಂಶಗಳ ಬಳಕೆ, ಇತ್ಯಾದಿಗಳ ಬಗ್ಗೆ ಪರಿಚಯ ವಿಲ್ಲದ ಕಾನೂನು. ಅತ್ತ ಭಾರತ ಸರಕಾರದ ಮಾಹಿತಿ ಹಾಗೂ ತಂತ್ರಜ್ಞಾನ ಅಧಿನಿಯಮ 2000 ಈ ಆನ್ ಲೈನ್ ಆಟಗಳನ್ನು ನಿಯಂತ್ರಿಸುವ ಯಾವುದೇ ನಿಬಂಧನೆ ಹೊಂದಿಲ್ಲ. ಈ ಕಾನೂನುಗಳನ್ನು ಅವಲೋಕಿಸಿದಾಗ ನಮಗೆಲ್ಲ ಸ್ಪಷ್ಟವಾಗುವುದೇನೆಂದರೆ, ಈ ಆನ್‌ಲೈನ್ ಆಟಗಳನ್ನು ನಿಯಂತ್ರಿಸಲು ಸದ್ಯ ಯಾವುದೇ ಕಾನೂನು ಇಲ್ಲ
ಎಂಬುದು.

ಕಾನೂನುಗಳು ಎಂಬುದು ವ್ಯಕ್ತಿಯ ಚಟುವಟಿಕೆಗಳನ್ನು ನಿಯಂತ್ರಿಸುವ ಅಥವಾ ನಿರ್ಬಂಧಿಸುವುದರ ಜತೆಗೆ ಪಾಲನೆ ಮಾಡುವರನ್ನು ರಕ್ಷಿಸಿ ಅಕ್ರಮ ಚಟುವಟಿಕೆದಾರರನ್ನು ಶಿಕ್ಷಿಸಿ ಕಾನೂನು ಸುವ್ಯವಸ್ಥೆ ಸಮಾಜ ಹಾಗೂ ದೇಶದಲ್ಲಿ ಸದಾ ಪರಿಣಾಮಕಾರಿಯಾಗಿರುವಂತೆ ನೋಡಿಕೊಳ್ಳುವ ವ್ಯವಸ್ಥೆ. ಅಂದರೆ ಮನೆಯಲ್ಲಿ ಹಿರಿಯರಿಂದ ಒಂದು ಶಿಸ್ತುಬದ್ಧ ಜೀವನ
ಕ್ರಮವನ್ನು ಸದಸ್ಯರೆಲ್ಲರಿಗೂ ಅಳವಡಿಸಿಕೊಂಡು ಸಾರ್ಥಕವಾಗಿ ಒಟ್ಟು ಕುಟುಂಬದ ರೀತಿಯಲ್ಲಿ ಜೀವಿಸುವಂತೆ ನೋಡಿ ಕೊಳ್ಳುವ ಜವಾಬ್ದಾರಿ.

ಒಂದು ವೇಳೆ, ಮನೆಯ ಯಜಮಾನ ತನ್ನ ಕುಟುಂಬದ ಸದಸ್ಯರಿಗೆ ಒಂದು ಚೌಕಟ್ಟು ರೂಪಿಸದೇ, ಯಾವುದೇ ಶಿಸ್ತು ಬದ್ಧ ಜೀವನಕ್ಕೆ ಸೂಚಿಸಿದೇ ಅವರವರಿಗೆ ತಿಳಿದಂತೆ ಬದುಕಲು ಬಿಟ್ಟರೆ ಆ ಕುಟುಂಬದ ವ್ಯವಸ್ಥೆ ಹಾಗೂ ಅವ್ಯವಸ್ಥೆ ಹೇಗಿರುತ್ತದೆಯೋ ಹಾಗೆ ಕಾನೂನು ಇಲ್ಲದೇ ಇರುವ ರಾಜ್ಯ ಹಾಗೂ ದೇಶ. ವಿಚಿತ್ರವೆಂದರೆ ಈ ಅನ್‌ಲೈನ್ ಆಟಗಳು ಮನೆ ಮನೆಗೆ ತಲುಪಿ ದಶಕಗಳೇ ಕಳೆದರೂ ಸರಕಾರಗಳಿಂದ ಅವುಗಳನ್ನು ನಿಯಂತ್ರಿಸುವ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಿಜಕ್ಕೂ ವಿಪರ್ಯಾಸ.

ಸರಕಾರಗಳ ಈ ದಿವ್ಯ ಮೌನದ ಪೂರ್ಣ ಲಾಭವನ್ನು ಪಡೆಯುತ್ತಿರುವ ದೇಶ ವಿದೇಶಗಳ ಆನ್‌ಲೈನ್ ಗೇಮ್‌ಗಳನ್ನಾಡಿಸುವ ಸಂಸ್ಥೆಗಳು ನಮ್ಮ ಶ್ರಮದ ಹಣವನ್ನು ಮೂಟೆಗಟ್ಟಲೆ ಲೂಟಿ ಮಾಡುತ್ತಿವೆ. ಒಂದು ಅಂದಾಜಿನ ಪ್ರಕಾರ ಈ ಆನ್‌ಲೈನ್ ಗೇಮ್
ಕ್ಷೇತ್ರದ ವಾಣಿಜ್ಯ ವಹಿವಾಟು ವಾರ್ಷಿಕ 20 ಸಾವಿರ ಕೋಟಿ ಎಂದರೆ ನಮಗೆಲ್ಲ ಒಂದು ಕ್ಷಣ ದಂಗಾಗುವುದಂತೂ ನಿಜ. ಆದರೆ ಈ ವಹಿವಾಟುಗಳಿಂದ ಸರಕಾರಗಳಿಗೆ ಯಾವುದೇ ಲಾಭ ಇಲ್ಲವೆಂಬುದೇ ನಮ್ಮ ಸರಕಾರಿ ವ್ಯವಸ್ಥೆಯ ಅಪಸ್ಯವ್ಯ ಚಿತ್ರಣವನ್ನು ಅನಾವರಣಗೊಳಿಸುತ್ತದೆ.

ಅಂದರೆ ಸರಕಾರಗಳಿಗೆ ಯಾವುದೇ ತೆರಿಗೆ ನೀಡದೇ, ರಾಜಾರೋಷವಾಗಿ ಭೌಗೋಳಿಕ, ಪ್ರಾದೇಶಿಕ ವ್ಯಾಪ್ತಿಗಳನ್ನು ಹಾಗೂ ಕಾನೂನುಗಳನ್ನು ಮೀರಿ ನಮ್ಮ ಜೇಬಿಗೆ ಕೈ ಹಾಕಿ ಅಕ್ರಮ ಲಾಭಗಳಿಸುತ್ತಿದ್ದೇವೆ ಎನ್ನುವುದು ಸ್ಪಷ್ಟ. ದಶಕಗಳಿಂದ ನಮ್ಮ ದೇಶದ ಹಾಗೂ ರಾಜ್ಯದ ಮನೆ ಮನಗಳಲ್ಲಿ ಸ್ವಯಂ ಅರಿವಿಗೆ ಬಾರದಂತೆ ಈ ಆನ್‌ಲೈನ್ ಆಟಗಳು ಮನೆ ಮಾಡಿ, ನಮ್ಮಲ್ಲಿನ
ಪಾರಂಪರಿಕ ಆಟಗಳ ಅಸ್ತಿತ್ವಗಳನ್ನು ಅಲುಗಾಡಿಸಿ, ಆಟಗಳ ಹಿಂದೆ ಇರುವ ಸಾಂಸ್ಕೃತಿಕ ಉದ್ದೇಶಗಳನ್ನು ಹಾಗೂ ಆಚರಣೆ ಗಳನ್ನು ಅಳಿಸಿಹಾಕಿ ತಮ್ಮ ಮರೆಮಾಚಿರುವ ಉದ್ದೇಶಗಳನ್ನು ಹಂತ ಹಂತವಾಗಿ ಸಮಾಜದಲ್ಲಿ ತಳ ಊರುವಂತೆ ಮಾಡಿರುವ ಹುನ್ನಾರವರಿತೂ ಇವುಗಳನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿ ನಾವೆಲ್ಲ ಸುಮ್ಮನಿದ್ದೇವೆ ಎಂದರೆ ಇದು ನಮ್ಮ ಅಸಹಾಯಕ ತನವೋ? ಸರಕಾರಗಳ ನಿರ್ಲಕ್ಷ್ಯತನವೋ? ಅಥವಾ ಜವಾಬ್ದಾರಿಯುತ ಅಧಿಕಾರಿಗಳ ಉದ್ದೇಶ ಪೂರ್ವಕ ಕೃತ್ಯಗಳೋ? ಎನ್ನುವುದು ಗೊತ್ತಾಗುತ್ತಿಲ್ಲ.

ಎಲ್ಲ ಆನ್‌ಲೈನ್ ಆಟಗಳು ದುಷ್ಪರಿಣಾಮ ಬೀರುತ್ತವಂತಲ್ಲ. ಅವುಗಳಲ್ಲಿಯೂ ಸಹ ಅನೇಕವು ವ್ಯಕ್ತಿತ್ವಗಳನ್ನು, ತಂತ್ರಗಾರಿಕೆ ಗಳನ್ನು ಹೆಚ್ಚಿಸಿಕೊಳ್ಳುವ ಹಾಗೂ ಪರಿಣತಿ ಸಾಧಿಸಿಕೊಳ್ಳಲು ಅನುಕೂಲಕರ ಆಟಗಳಿವೆ. ಉದಾಹರಣೆಗೆ ಚದುರಂಗದಾಟದ ಆಟಗಳು ವ್ಯಕ್ತಿಯಲ್ಲಿ ಪರಿಣತಿ ಪ್ರಮಾಣವನ್ನು ಹೆಚ್ಚಿಸಿ ನಿಪುಣತೆ ಪಡೆಯಲು ಉತ್ತಮ ಸಾಧನೆಯಾಗಿದೆ. ಮನೋರಂಜನೆ ಗಾಗಿರುವ ಕ್ಯಾಂಡಿ ಕ್ರಶ್, ಲೂಡೋ ಆಟಗಳಂಥವು ಮನೋರಂಜನೆ ನೀಡುವುದರ ಜತೆಗೆ ಬರು ಬರುತ್ತ ಚಟವಾಗಿಸಿ ಕೆಲಸ ವಿದ್ದಾಗ, ಇಲ್ಲದಿದ್ದಾಗ ಆಟವಾಡುವಂತೆ ಪ್ರೇರೇಪಿಸಿವುದಲ್ಲದೆ ಕನಸಿನಲ್ಲೂ ಅದೇ ಗುಂಗಿನಲ್ಲಿರುವಂತೆ ಪರಿಣಾಮ ಬೀರುವಂಥ ಅನೇಕ ಆಟಗಳಿವೆ.

ಈ ಆನ್‌ಲೈನ್ ಆಟಗಳು ಇಂದು ನಮ್ಮ ದೇಶದ ವೈರಿ ರಾಷ್ಟ್ರಗಳಿಗೆ ಪರೋಕ್ಷ ಯುದ್ಧ ಸಾರಲು ಇರುವ ಸಾಧನಗಳಾಗಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಉದಾಹರಣೆಗೆ ಪಬ್ಜಿ ಆಟವನ್ನು ಆಡುವವರಿಗೆ ಸದಾ ಯುದ್ಧ ಭೂಮಿಯಲ್ಲಿರುವಂಥ ಭಾವನೆ ಸದಾ ಇದ್ದು, ಒಬ್ಬರನ್ನೊಬ್ಬರು ಕೊಲ್ಲುವ, ಹಿಂಸಿಸುವ ಪ್ರವೃತ್ತಿಯನ್ನು ಯಾವಾಗಲೂ ಜಾಗೃತಿಯಾಗಿರಿಸಿಕೊಂಡು ಹಿಂಸಾ ಮನೋಭಾವ ವನ್ನು ಹೊಂದುವ ಸಾಧ್ಯತೆ ಇದೆ. ಇಂಥ ಮನೋಭಾವದ ಸಮೂಹ ದಿಂದ ಮುಂದೆ ಸಮಾಜದ ಸಾಮರಸ್ಯದ ಆರೋಗ್ಯಕ್ಕೆ ಧಕ್ಕೆ ಆಗಲಾರದು ಎಂದು ಯಾರೂ ಹೇಳಲಾರರು.

ಈ ಎಲ್ಲ ಹಿನ್ನೆಲೆಯಲ್ಲಿ ಸರಕಾರಗಳು ಹಾಗೂ ಜವಾಬ್ದಾರಿಯುತ ಅಧಿಕಾರಿಗಳು ಈ ಆನ್‌ಲೈನ್ ಆಟಗಳನ್ನು ನಿಯಂತ್ರಿಸಲು ಸೂಕ್ತವಾದ ಕಾನೂನು ತರುವುದು ಅತ್ಯವಶ್ಯ. ಒಂದು ವೇಳೆ ಈ ಆಟಗಳ ನಿಯಂತ್ರಣಾ ಕಾನೂನು ಜಾರಿಗೆ ಬಂದಲ್ಲಿ,
ಸರಕಾರಗಳು ಈ ಆನ್ ಲೈನ್ ಆಟಗಳನ್ನು ಸಾರ್ವಜನಿಕ ವಲಯಕ್ಕೆ ಪರಿಚಯವಾಗುವ ಮುನ್ನ ಅವುಗಳ ವಸ್ತು ಸ್ಥಿತಿಗಳನ್ನು ಪರೀಕ್ಷಿಸುವ, ಆ ಆಟಗಳಿಂದ ಸಮಾಜ ಹಾಗೂ ಜನಾಂಗದ ಮಾನಸಿಕ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮ
ಗಳನ್ನು ಮೊದಲೇ ಕಂಡುಕೊಳ್ಳುವ ಅವಕಾಶ ಉಂಟಾಗುತ್ತದೆ. ಸೂಕ್ತ ಆಟಗಳಿಗೆ ಪರವಾನಗಿ ಮೇರೆಗೆ ರಾಜ್ಯದೊಳು ಬರಲು ಅವಕಾಶ ಮಾಡಿಕೊಟ್ಟರೆ, ಬೊಕ್ಕಸಕ್ಕೆ ಆದಾಯದ ಮೂಲ ದೊರಕಿದಂತಾಗುತ್ತದೆ.

ಕಾನೂನು ಉಲ್ಲಂಘಿಸಿ ಒಳ ಬರುವ ಆನ್‌ಲೈನ್ ಆಟವನ್ನಾಡಿಸುವ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಸಮರ್ಪಕವಾಗಿ ಶಿಕ್ಷಿಸುವ ಅವಕಾಶ ದೊರೆಯುತ್ತದೆ. ಮುಖ್ಯವಾಗಿ ದೇಶದ ಸುರಕ್ಷತೆ ಹಾಗೂ ವ್ಯಕ್ತಿಗಳ ಖಾಸಗಿತನದ ರಕ್ಷಣೆಗೆ ದಾರಿ ಮಾಡಿಕೊಟ್ಟಂತಾ ಗುತ್ತದೆ. ಆದ್ದರಿಂದ ಸರಕಾರ ಈ ಆನ್ ಲೈನ್ ಆಟಗಳನ್ನು ನಿಯಂತ್ರಿಸಲು ಕಾನೂನು ಜಾರಿಗೆ ತರುವುದೇ?