Thursday, 12th December 2024

ಪ್ರಸಿದ್ಧಿಯೂ ಪೀಡೆಯಾಗುತ್ತಿರುವ ದಿನಗಳಿವು …!

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಅದೊಂದು ಕಾಲವಿತ್ತು. ಪ್ರಸಿದ್ಧರನ್ನು ಯಾರೂ ಪರೀಕ್ಷಿಸುತ್ತಿದ್ದಿಲ್ಲ, ಪ್ರೀತಿಸುತ್ತಿದ್ದರು. ಗೌಣವಾಗಿ ಕಾಣುತ್ತಿದ್ದಿಲ್ಲ, ಗೌರವಿಸು ತ್ತಿದ್ದರು, ಸಹಕರಿಸುತ್ತಿದ್ದರು, ಗದರಿಸುತ್ತಿರಲಿಲ್ಲ, ಸಂದೇಹದಿಂದ ನೋಡುತ್ತಿದ್ದಿಲ್ಲ, ಸತ್ಕರಿಸುತ್ತಿದ್ದರು.

ಸಲಿಗೆ ತೆಗೆದುಕೊಳ್ಳುತ್ತಿರಲಿಲ್ಲ, ಆಶೀರ್ವಾದ ಬೇಡುತ್ತಿದ್ದರು, ಆಜ್ಞೆ ಮಾಡುತ್ತಿರಲಿಲ್ಲ, ಕೊನೆಯವರೆಗೂ ನಾನು ನನ್ನ ಗುರುಗಳಾದ ಬೀಚಿ ಯವರನ್ನು ಮುಖತಃ ನೋಡಲಿಲ್ಲ, ನನ್ನ ಮೆಚ್ಚಿನ, ಆದರ್ಶವಾದ ಡಾ.ರಾಜಕುಮಾರರನ್ನೂ ಕೂಡ ನೋಡಲಿಲ್ಲ. ಆದರೆ, ಇಬ್ಬರನ್ನೂ ನಾನು ಮರೆತಿಲ್ಲ. ಮರೆಯುವ ಹಾಗೂ ಇಲ್ಲ. ಬೀಚಿ ಹಾಸ್ಯ ಬದುಕಿಗೆ ಆಸರೆಯಾಗಿ ನಿಂತರೆ, ಮಾನವೀಯ ಸಂಬಂಧಗಳ ಅನುಕರಣೆಗೆ ಡಾ. ರಾಜಕುಮಾರ್ ವ್ಯಕ್ತಿತ್ವ ಆದರ್ಶವಾಗಿ ಉಳಿದಿದೆ.

ತಂತ್ರಜ್ಞಾನದ ಈ ಫೇಸ್‌ಬುಕ್, ಟ್ವಿಟರ್, ವಾಟ್ಸಾಪ್‌ಗಳು ಬಂದು ಅದರಲ್ಲಿ ಹಿಂದುಮುಂದು ಯೋಚಿಸದೇ ವಾಗ್ಬಾಣಗಳನ್ನು ಬಿಡುವ ಈ ಬಿಲ್ಲುಗಾರರು ಅಲ್ಲಲ್ಲ ಕ್ಷಮಿಸಿ, ಬೇಟೆಗಾರರಿದ್ದಾರಲ್ಲ, ಆಹಾ.. ಇವರಿಂದ ಇಂದಿನ ದಿನಗಳಲ್ಲಿ ಹೆಸರು ಮಾಡುವುದು ಕೂಡ ಹೊಲಸು ತಿನ್ನುವ ಕೆಲಸದಂತಾಗಿ ಹೋಗಿದೆ. ಕೆಲವರಿದ್ದಾರೆ, ಅವರಿಗೆ ಕಲಾವಿದರು, ನಟರು, ಸಾಹಿತಿ, ಲೇಖಕರೆಂದರೆ ಬಲು ತಾತ್ಸಾರ, ತಾವು ಮಾಡುವ ಕಳ್ಳ ದಂಧೆಗಳು ಬೇನಾಮಿ ಬಿಜಿನೆಸ್ಸುಗಳು, ಸರಕಾರದ ದುಡ್ಡನ್ನು ಸ್ವಂತ ಅಪ್ಪನ ಮನೆ
ದುಡ್ಡಂತೆ ಲಪಟಾಯಿಸುವುದೇ ಒಂದು ಬಿಜಿನೆಸ್ ಎಂಬಂತೆ ಬಿಂಬಿಸುವವರು.

ಇನ್ನು ಕೆಲವು ಶ್ರೀಸಾಮಾನ್ಯ ಅಭಿಮಾನಿಗಳಿದ್ದಾರೆ. ನಾನು ನಿಮ್ಮ ಅಭಿಮಾನಿ ಎಂದರೆ ಸಾಕು, ನಾವು ಆತನ ಇಚ್ಛೆ, ಬೇಡಿಕೆ, ಕಷ್ಟ, ಸುಖ ಎಲ್ಲವನ್ನೂ ಕೇಳಬೇಕು. ಆತ ಸಹಾಯ ಕೇಳಿದರೆ ಮಾಡಬೇಕು, ಯಾರದಾದರೂ ಫೋನ್ ನಂಬರ್ ಕೇಳಿದರೆ ಕೊಡಬೇಕು, ವಿಶೇಷವಾಗಿ ಹೆಣ್ಣು ಕಲಾವಿದರ ಫೋನ್ ನಂಬರ್ರೇ ಆತ ಕೇಳುವುದು. ಇಂಥವರದೆಲ್ಲ ಡೋಂಟ್‌ಲಿಫ್ಟ್ ಎಂಬ ಗ್ರೂಪ್ ಮಾಡಿ ಅದರಲ್ಲಿ ಸೇರಿಸಿದ್ದೇನೆ.

ಆತ ಫೋನ್ ಮಾಡಿದ ಕೂಡಲೇ ಸ್ಕ್ರೀನ್ ಮೇಲೆ ‘ಡೋಂಟ್‌ಲಿಫ್ಟ್, ಡೋಂಟ್‌ಲಿಫ್ಟ್’ ಎಂದೇ ಬರುತ್ತದೆ. ಒಮ್ಮೆ ಒಬ್ಬ ಕಲಾವಿದೆ ಫೋನ್ ನಂಬರ್ ಕೇಳಿದ ಕೊಟ್ಟೆ, ಸ್ವಲ್ಪ ಹೊತ್ತಿನ ಮೇಲೆ ಮತ್ತೆ ನನಗೆ ಫೋನ್ ಮಾಡಿ ‘ಮುಂಡೆ ಎತ್ತಲಿಲ್ಲ ಸಾರ್, ಅವಳದು ಇನ್ನೊಂದು ನಂಬರ್ ಇದೆಯಾ? ಎಂದು ಶುರುವಿಟ್ಟ. ಇವರೆಲ್ಲ ಕಲಾಭಿಮಾನಿಗಳಾ? ಮತ್ತೊಂದು ಘಟನೆ, ಅದೊಂದು ಊರು (ಹೆಸರುಬೇಡ) ವಾರ, ಹತ್ತು ದಿನಕ್ಕೊಮ್ಮೆ ಪರ್ಟಿಕ್ಯೂಲರ್ ಟೈಮಿಗೆ ಅಂದರೆ ಭರ್ತಿ ಮಧ್ಯಾಹ್ನ ನಾನು ಊಟ ಮಾಡಿ ಮಲಗಿರೋ ಹೊತ್ತಲ್ಲಿ ಫೋನ್ ಬರುತ್ತಿತ್ತು, ಎರಡು ಮೂವತ್ತು, ಮೂರು ಗಂಟೆ ಅನ್ನಿ.

ಅದೊಂದು ಗುಂಪು, ಅವರು ಎಣ್ಣೆ ಹಾಕುತ್ತಾ, ಊಟ ಮಾಡುತ್ತಾ ಫೋನ್ ಮಾಡುತ್ತಿದ್ದರು. ಏನೇನೂ ವಿಶೇಷವಿಲ್ಲ, ಕುಡಿತಾ ಕೂತಿದಿವಿ, ಜೋಕ್ ಹೇಳಿ ಸಾರ್ ಎಂಬ ಬೇಡಿಕೆ, ಎಂಟು ಹತ್ತು ಜನ, ಒಬ್ಬರಾದ ಮೇಲೆ ಒಬ್ಬರು ಫೋನ್ ಪಾಸ್ ಮಾಡುತ್ತಾ ಬಾಲಿಶ ಪ್ರಶ್ನೆ ಕೇಳೊದು, ‘ನಿಮಗಿನ್ನು ಕರೋನಾ ಬಂದಿಲ್ವಾ? ಬರಬಾರದು ಸಾರ್, ನೀವು ನಮ್ಮ ಆಸ್ತಿ, ಇಲ್ಲಿ ನಮ್ಮ ಸ್ನೇಹಿತರಲ್ಲಿ ಏಡ್ಸ್ ಬಂದು ಗುಣ ಆದವರು ಇದ್ದಾರೆ ಸಾರ್’ ಎಂದು ಹೋ.. ಎಂದು ನಗೋದು, ಒಂದು ಸಲ, ಎರಡು ಸಲ, ಮೂರು ಸಲ ಎತ್ತಿದೆ, ಉತ್ತರ ಕೊಟ್ಟೆ, ನೀವು ಫೋನ್‌ನಲ್ಲಿ ಜೋಕ್ ಹೇಳಲ್ಲಾ ಓಕೆ, ನಾವು ಹೇಳೋದನ್ನಾದ್ರೂ ಕೇಳ್ರಿ’ ಎಂದು ಅಶ್ಲೀಲ ಹಾಸ್ಯ
ಹೇಳೋದು, ಇತ್ತೀಚೆಗೆ ಫೋನ್ ಎತ್ತೋದೆ ಬಿಟ್ಟೆ.

ಇವರೆಲ್ಲ ಆ ಊರಿನ ಬಿಜಿನೆಸ್‌ಮನ್‌ಗಳ ಮಕ್ಕಳು, ತಂದೆ ಒಂದು ಆಸ್ತಿ ಮಾಡಿ ಇವರಿಗೆ ದಾರಿ ಮಾಡಿದ್ದಾನೆ. ವಾರಕ್ಕೆ, ಹತ್ತು ದಿನಕ್ಕೆ ಈ ಥರ ಒಂದೆಡೆ ಸೇರಿ ಕುಡಿದು ಹೀಗೆ ಎಂಜಾಯ್ ಹೆಸರಲ್ಲಿ ಇತರರ ಪ್ರಾಣ ತಿನ್ನೋದು ಇವರ ಕೆಲಸ, ಇವರು
ಅಭಿಮಾನಿಗಳಾ? ಇನ್ನೂ ಕೆಲವರಿದ್ದಾರೆ, ನನ್ನ ಈ ಅನುಭವವನ್ನು ನಿಮಗೆ ಹೇಳ್ತೇನೆ, ಅದಕ್ಕೆ ದಾಲ್, ಪನ್ನೀರ್, ಮಿರ್ಚಿ, ಮಸಾಲಾ ಸೇರಿಸಿ ಹೇಳಿ ಸಾರ್ ಎಂದು ಬಾಲಿಶ ತಮ್ಮ ಮಕ್ಕಳು ಹೆಂಡತಿ ಮನೆಯಲ್ಲಿ ಆಡಿದ ಮಾತು, ಘಟನೆಗಳನ್ನು ಹೇಳೋದು,
ಬೈದೆವೆನ್ನಿ, ಫೋನ್ ಇಟ್ಟಿವೆನ್ನಿ ವಾಟ್ಸಾಪ್‌ನಲ್ಲಿ ಮೊಳ ಉದ್ದದ, ಮೆಸೇಜುಗಳು, -ಸ್‌ಬುಕ್ಕುಗಳಲ್ಲಿ ಟೀಕೆ, ತಮ್ಮ ಹೆಸರು,
ವಿಳಾಸ ತಿಳಿಸದೇ ಬೇನಾಮಿ ಪತ್ರ ಬರೆದು ಹಾಕುವವರಿದ್ದಾರೆ.

ಅವರು ಕೇಳಿರೋ ಪ್ರಶ್ನೆಗಳು, ಮುಂದಿಟ್ಟಿರುವ ಸಮಸ್ಯೆಗಳಿಗೆ ನಾನು ಉತ್ತರ ಹೇಳಬೇಕೆಂದರೂ ಪಾಪ ಈ ರಣಹೇಡಿಗಳು
ತಮ್ಮ ವಿಳಾಸ, ಫೋನ್ ನಂಬರ್ ಕೊಟ್ಟಿರುವುದಿಲ್ಲ. ಬಹುಶಃ ಇವರೆಲ್ಲ ಸತ್ತು ಪ್ರೇತಗಳಾಗಿ ನರಕದಿಂದ ಪತ್ರ ಹಾಕಿರಬಹುದೆಂದು ನಕ್ಕು ಸುಮ್ಮನಾಗುತ್ತೇನೆ. ಇವರು ಅಭಿಮಾನಿಗಳಾ? ಫೇಸ್‌ಬುಕ್ಕು, ಟ್ವಿಟ್ಟರ್, ಇನ್‌ಸ್ಟಾಗ್ರಾಂ ಎಂಥ ಸುದ್ದಿ ವಾಹಕಗಳು, ಆದರೆ ಇವುಗಳನ್ನು ಪಶುಗಳು, ಓತಿಕ್ಯಾತಗಳು, ಗೂಬೆಗಳು ಬಳಸುತ್ತಿವೆಯಲ್ಲಾ ಎನಿಸುತ್ತದೆ.

ಷಂಡನ ಮುಖದ ಮೇಲಿನ ಮೀಸೆಗಳಿವು ಎನಿಸಿ ಸುಮ್ಮನಾಗುತ್ತೇನೆ, ಇನ್ನು ಕೆಲವರು ನಮ್ಮ ಮೇಲಿನ ಅಭಿಮಾನಕ್ಕೆ ನನ್ನನ್ನು ಒಂದು ಮಾತು ಕೇಳದೇ ಮೊನ್ನೆ ಇಡೀ ದಿನ ಹಿಂಸೆ ಅನುಭವಿಸುವಂತಾಯಿತು. ಅದೆಂದರೆ, ನನ್ನ ಹುಟ್ಟು ಹಬ್ಬ, ನನ್ನ ಜನ್ಮದಿನಾಂಕ ಸೆಪ್ಟೆಂಬರ್ ಎಂಟು ಆದರೆ, ಝೀ ವಾಹಿನಿ ಸ್ನೇಹಿತ ಹಿತೈಷಿಯೊಬ್ಬರು ಪಾಪ.. ಇನ್‌ಸ್ಟಾ ಗ್ರಾಂ ನಲ್ಲಿ ನನ್ನ ಫೋಟೋ ಸಹಿತ ನನಗೆ ಜನ್ಮದಿನದ ಶುಭಾಷಯ ಹೇಳಿದರು. ಇದು ಫೇಕ್ ಮೆಸೆಜ್, ಇದನ್ನು ನೋಡಿದ ನನ್ನದಲ್ಲದ ಫೇಸ್
ಬುಕ್‌ನಲ್ಲಿಯೂ ಹುಟ್ಟುಹಬ್ಬ ವೆಂದು ತೋರಿಸಿತು.

ಸರಿ ಶುರುವಾಯಿತು ನೋಡಿ, ಎಡೆಬಿಡದೇ, ಫೋನ್‌ರಿಂಗ್, ಒಬ್ಬರಿಗೆ ಇದು ‘ಅಲ್ಲಾ ಸಾರ್ ಯಾರೋ ಹಾಕಿದ್ದಾರೆ’ ಎಂದು ಅವರಿಗೆ ಹೇಳುವಲ್ಲಿ ಮಿಸ್ಡ್ ಕಾಲ್‌ಗಳು, ತೆರವಿಲ್ಲದೆ ದೇವಸ್ಥಾನದ ಗಂಟೆ ಹೊಡೆದಂತೆ ಹ್ಯಾಪಿ ಬರ್ತ್‌ಡೆ, ಹ್ಯಾಪಿ ಬರ್ತ್‌ಡೆ, ಢಣ್.. ಢಣ್.. ಎಂದು ಶುರುವಾಯಿತು. ಮೊದಲು ಹೇಳಿದವರು ಕಾಮಿಡಿ ಕಿಲಾಡಿಯ ಸ್ನೇಹಿತ ಅಪ್ಪಣ್ಣ. ಅವರಿಗೆ ಕಾಲ್ ಮಾಡಿ ‘ಇಲ್ಲ. ನನ್ನ
ಹುಟ್ಟುಹಬ್ಬ ಇವತ್ತಲ್ಲ, ಸೆಪ್ಟೆಂಬರ್ ಎಂಟು’ ಎಂದು ಹೇಳಿ ಅವರಿಗೆ ಅದನ್ನು ಡಿಲೀಟ್ ಮಾಡಲು ಹೇಳುವಷ್ಟರಲ್ಲಿ ಇದು
ಮಿತಿಮೀರಿ ಹೋಯಿತು. ‘ಸುಳ್ಳಿಗೆ ಕಾಲುಗಳು ಜಾಸ್ತಿ’, ‘ಸುಳ್ಳಿಗೆ ಪ್ರಚಾರ ಜಾಸ್ತಿ’, ‘ಸುಳ್ಳು ಸುಳ್ಳಾದರೂ ವಿಜೃಂಭಿಸೋದು ಎಂದಿಗೂ ಸುಳ್ಳೇ’, ‘ಸುಳ್ಳನ್ನು ಕಟ್ಟಿಹಾಕುವವರಿಲ್ಲ’, ‘ಸತ್ಯವನ್ನು ಹೊರಗೆ ಬಿಟ್ಟವರಿಲ್ಲ’, ‘ಸುಳ್ಳು ಬದುಕಿದಷ್ಟೂ ಹೊತ್ತು ಸತ್ಯದ ತಲೆಯ ಮೇಲೆ ಹೊಡೆದು ಬದುಕುತ್ತದೆ’ ಎಂಬ ಈ ಎಲ್ಲ ಓದಿದ ಗಾದೆ ಮಾತುಗಳೂ ನಿಜ ಎನಿಸಿ ಬಿಟ್ಟಿತು. (ಸತ್ಯ ಎದ್ದು ನಿಲ್ಲುವು ದರೊಳಗೇ ಸುಳ್ಳು ಪ್ರಪಂಚವನ್ನು ಮೂರುಬಾರಿ ಸುತ್ತಿರುತ್ತದೆ).

ಅಭಿಮಾನದಿಂದ ಹಾಕಿದವರಿಗೆ ಪಾಪ.. ನಾನು ಅನಿವಾರ್ಯವಾಗಿ ಗದರಿಸಬೇಕಾಯಿತು. ಅಂತೂ ಅದನ್ನು ತೆಗೆಯಲಾಯಿತು. ಇಡೀ ದಿನ ನನಗೆ ಶುಭಾಷಯಗಳು, ಫೋನುಗಳು ಒಟ್ಟು ಮುನ್ನೂರ ಅರವತ್ತೆಂಟು ಮೆಸೆಜುಗಳು, ಅರವತ್ತನಾಲ್ಕು ಕಾಲ್‌ಗಳು, ಕೆಲವನ್ನು ಓದಲೇ ಇಲ್ಲ, ಕೆಲವರ ಫೋನ್ ಎತ್ತಲೇ ಇಲ್ಲ, ಅದಕ್ಕೂ ಅವರಿಂದ ‘ವಿಶ್ ಮಾಡಕ್ಕೆ ಫೋನ್ ಮಾಡಿದ್ದೆವು ಸಾರ್, ಎತ್ತದಷ್ಟು ಧಿಮಾಕೆ?’ ಎಂಬ , ಹುಟ್ಟಿದ್ದೇ ತಪ್ಪಾಯಿತು ಎನಿಸಿಬಿಟ್ಟಿತು.

ಜತೆಗೆ ಫೇಮಸ್ ಆಗಬೇಕೆಂದು ಕನಸು ಕಾಣುವ ಯುವಕರಿಗೆ ಇದು ಸುಖವಲ್ಲ, ಹಿಂಸೆ ಎಂದು ಹೇಳಬೇಕೆನಿಸಿಯೇ ಇದನ್ನು
ಬರೆಯಬೇಕಾಯಿತು. ಅದರಲ್ಲೂ ಇಡೀ ದೇಶ, ರಾಜ್ಯ, ಜಗತ್ತಿನಾದ್ಯಂತ ಜನ ಖಾಲಿ ಕುಳಿತ ಕರೋನಾ ಸಮಯವಿದು. ಸತ್ತವರಿಗೆ ರಿಪ್ ಹಾಕಲು, ಹುಟ್ಟಿದವರಿಗೆ ಹ್ಯಾಪಿ ಬರ್ತ್‌ಡೇ ಹೇಳಲು ತುದಿಗಾಲ ಮೇಲೆ ಜನ ಸಿಗುತ್ತಿದ್ದಾರೆ. ಸೂಜಿ ಪೋಣಿಸುವಷ್ಟು
ಜನ ಕುತೂಹಲದಿಂದ ನೋಡುತ್ತಿದ್ದಾರೆ, ಆಕಾಶದಲ್ಲಿ ಕಪ್ಪನೆಯ ಮೋಡ ಕಾಣಿಸಿದರೆ ಅದರಿಂದ ಮಳೆಹನಿ ಹೇಗೆ ಬೀಳುತ್ತದೆ ಎಂದು ನೋಡಲು ಹೊರಗೆ ನಿಂತವರಿದ್ದಾರೆ. ಬಿಳಿ ಮೋಡ ಗಾಳಿಗೆ ನಿಧಾನ ಹೋಗುತ್ತಿದ್ದರೆ ಅದು ಕಾಣದಾಗುವವರೆಗೂ ಅದನ್ನು ಮಾಳಿಗೆ ಹತ್ತಿ ಅದನ್ನು ಕೊನೆಯವರೆಗೂ ನೋಡಿ ಈಗ ಯಾವ ಊರ ಮೇಲಿದೆ ಎಂದು ಬೆಟ್ ಕಟ್ಟಿದವರಿದ್ದಾರೆ.

ಕಾಗದದ ದೋಣಿ ಮಾಡಿ ಅದನ್ನು ಗಟಾರದ ನೀರಿನಲ್ಲಿ ಬಿಟ್ಟು ಅದರ ಹಿಂದೆ, ಹಿಂದೆಯೇ ಹೋದವರಿದ್ದಾರೆ. ತಮ್ಮದೇ ಬಿಟ್ಟು ನೇತು ಹಾಕಿದ ಪ್ಯಾಂಟ್‌ನ್ನು ಹಿಡಿದುಕೊಂಡು ಅದರ ಜಿಪ್‌ನ್ನು ಹರಿಯುವವರೆಗೆ ಮೇಲೆ-ಕೆಳಗೆ, ಮೇಲೆ-ಕೆಳಗೆ ಎಳೆದಾಡಿ ದವರಿದ್ದಾರೆ. ತಮ್ಮ ತಲೆಯ ಒಂದೊಂದೇ ಕೂದಲನ್ನು ಕಿತ್ತುಕೊಂಡು, ತಲೆ ಬೋಳಾಗಲು ಎಷ್ಟು ಕೂದಲು ಕಿತ್ತಬೇಕೆಂದು ಕೂದಲು ಎಣಿಸಿದವರಿದ್ದಾರೆ. ಹಾಸಿಗೆ ಹಾಸೋದು, ಮತ್ತೆ ಸುತ್ತೋದು ಮಾಡಿದವರಿದ್ದಾರೆ, ಮನೆ ಮುಂದೆ ಹೋಗೋ ದನ, ಕುರಿ, ನಾಯಿಗಳನ್ನು ಕರೆದು ಅವನ್ನೇ ನೋಡುತ್ತಾ ಕುಳಿತವರಿದ್ದಾರೆ, ಹಾರಲು ಬಂದಿದ್ದರೆ ಮರದಿಂದ ಮರಕ್ಕೆ ಹಾರಿಯೂ ಕೆಲವರು ಟೈಂಪಾಸ್ ಮಾಡುತ್ತಿದ್ದರು.

ಹೀಗಿರುವಾಗ ಇಂಥ ಸಮಯದಲ್ಲೇ ನನ್ನ ಜನ್ಮದಿನಾಂಕ ಸಿಕ್ಕು ವಿಶ್ ಮಾಡಿದರಾಗಲಿ, ನಾನು ಪ್ರಸಿದ್ಧ ಪುರುಷ ಅಲ್ಲ ಎಂದು ತಿಳಿಸಿದೆ. ಆದರೆ ಹೆಸರು, ಪ್ರಸಿದ್ಧಿ ಮಾಡಿದರೆ ಈ ಇಂಟರ್‌ನೆಟ್ ಯುಗದಲ್ಲಿ ಸುಖವಿಲ್ಲ, ವಿಚಾರಿಸಿದರೆ ಮೈಮೇಲೆ ಬರುತ್ತಾರೆ, ಬಿಟ್ಟರೆ ಸೊಕ್ಕು, ಗರ್ವ ಎನ್ನುತ್ತಾರೆ. ಅಣಕು ಕವಿ ನನ್ನ ಸ್ನೇಹಿತರಾದ ಎನ್. ರಾಮನಾಥ ಸುಧಾ ಪತ್ರಿಕೆಯಲ್ಲಿ ‘ನೀವು ಕೇಳಿದಿರಿ?’ ಎಂಬ ಅಂಕಣಕ್ಕೆ ಉತ್ತರ ಕೊಡುತ್ತಾರೆ, ಅವರಿಗೆ ಬಂದ ಪ್ರಶ್ನೆಗೆ ಉತ್ತರ ಈ ಲೇಖನಕ್ಕೆ ಪ್ರಸ್ತುತ ಎಂದು ಬರೆಯುತ್ತಿದ್ದೇನೆ.

ಮೈಸೂರಿನ ಮಹಿಳೆ ಯೊಬ್ಬರ ಪ್ರಶ್ನೆ ಹೀಗಿದೆ: ತುಂಬಾ ಹೆಸರು ಮಾಡಿರುವ ನಟರು, ಸಾಹಿತಿಗಳಲ್ಲಿ ಕೆಲವರು ಸಾಮಾನ್ಯರೊಡನೆ ಮಾತಾಡಲು ಬಯಸುವುದಿಲ್ಲ ಏಕೆ? ಅದಕ್ಕೆ ಗೆಳೆಯ ರಾಮನಾಥ್ ಉತ್ತರಿಸುತ್ತಾರೆ, ‘ಸಾಮಾನ್ಯರ ಒಳಿತಿಗೆ ಇದು. ಏಕೆಂದರೆ, ಹಾಲು ಮೊಸರಾದ ಮೇಲೆ, ಆ ಮೊಸರು ಹಾಲಿನೊಂದಿಗೆ ಸೇರಿದರೆ ಹಾಳಾಗುವುದು ಹಾಲೇ ಅಲ್ಲವೇ?’
ಸಾಧಕರೆನಿಸಿಕೊಂಡವರು ಸವೆಸಿದ ದಾರಿ ಸಾಮಾನ್ಯ ವಾಗಿರುವುದಿಲ್ಲ. ಹಲವು ಸ್ವಪ್ನಗಳ ಸಾಕಾರ ರೂಪವೇ ಸಾಧನೆ, ಅದನ್ನು ನೋಡಿ ಹಿರಿಯರು ಹರಸಿರುತ್ತಾರೆ.

ವಿವೇಕಿಗಳು ವೈಭವೀಕರಿಸುತ್ತಾರೆ. ಸಾಮಾನ್ಯರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ರುತ್ತಾರೆ. ಕುಹಕಿಗಳು ಕುಟುಕಿರುತ್ತಾರೆ.
ಬುದ್ಧಿಜೀವಿಗಳು, ವಿಚಾರವಾದಿಗಳು ಚಡಪಡಿಸುತ್ತಾರೆ. ಆದರೆ ಇದರಲ್ಲಿರುವ ಯಾವ ಕೆಟಗರಿಗೂ ಸೇರದವರು ನಾನೆಲ್ಲಿ ತೂರಲಿ ಎಂದು ಹವಣಿಸುತ್ತಿರುತ್ತಾರೆ. ಇವರನ್ನೆಲ್ಲ ದಾಟಿ, ಕೆಲವರನ್ನು ಪಕ್ಕಕ್ಕೆ ಸರಿಸಿ, ಕೆಲವರನ್ನು ಓಲೈಸಿ, ಕೆಲವರನ್ನು ಅಲಕ್ಷಿಸಿ ಬೆಳೆಯಲೇ ಬೇಕು.

ಬೆಳೆದು ನಿಂತ ಮೇಲೆ ಕಾಳಿಗೆ ಬರುವ ಕೆಲವು ಹಕ್ಕಿಗಳಂತೆ ಅವರೇ ಈ ಶುಭಾಷಯ ಕೋರುವ ಜನ. ಇವರನ್ನು ಪ್ರೋತ್ಸಾಹಿಸಿದರೆ ಹಿಂಸೆ, ಅಲಕ್ಷಿಸಿದರೆ ಸಂಕಟ, ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ ಎಂಬುದು ಹಿಂದಿನ ಗಾದೆ ಮಾತು. ಈಗ ಪ್ರಸಿದ್ಧ ನಾಗು, ಜನರ, ಅದರಲ್ಲೂ ಛಾನೆಲ್‌ಗಳ ಕಣ್ಣಿಗೆ ಬೀಳದಿರು ಎಂದು ಹೇಳಬೇಕಷ್ಟೆ.