Thursday, 12th December 2024

’ಪೆಟ್ರೋಲ್’ ಬೆಲೆ ಏರಿಕೆ ! ನೋಟು ಪ್ರಿಂಟ್ ಮಾಡಿ ಎಂದು ಬಿಟ್ಟಿ ಸಲಹೆ ನೀಡಿದ ’ಚಿದಂಬರಂ’

ವೀಕೆಂಡ್ ವಿಥ್ ಮೋಹನ್‌

ಮೋಹನ್‌ ವಿಶ್ವ

ಕೂಲಿ ಕಾರ್ಮಿಕರಿಗೆ ತಿಂಗಳಿಗಿಷ್ಟೆಂದು ಹಣ ನೀಡಿ, ಆಟೋ ಚಾಲಕರಿಗೆ ಹಣ ನೀಡಿ, ಕ್ಯಾಬ್ ಚಾಲಕರಿಗೆ ಹಣ ನೀಡಿ, ಮನೆ ಕೆಲಸದವರಿಗೆ ಹಣ ನೀಡಿ, ರೈತರಿಗೆ ಹಣ ನೀಡಿ, ರೈತರ ಸಾಲ ಮನ್ನಾ ಮಾಡಿ, ರೈತರ ಬೆಂಬಲ ಬೆಲೆಯನ್ನು ಹೆಚ್ಚಿಸಿ, ಶಿಕ್ಷಕರ ಖಾತೆಗಳಿಗೆ ಹಣವನ್ನು ನೀಡಿ, ಬಡತನ ರೇಖೆಗಿಂತ ಕೆಳಗಿರುವವರಿಗೆ ಅಕ್ಕಿ, ಬೇಳೆಯನ್ನು ನೀಡಿ, ಹಳ್ಳಿಗಳಲ್ಲಿನ ಕೂಲಿ ಕಾರ್ಮಿಕರಿಗೆ ‘ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ’ ಅಡಿಯಲ್ಲಿ ನೀಡುತ್ತಿರುವ ಹಣವನ್ನು ಹೆಚ್ಚು ಮಾಡಿ, ಹೂವು ಬೆಳೆಗಾರರಿಗೆ ನೀಡುತ್ತಿರುವ ಹಣವು ಸಾಲುತ್ತಿಲ್ಲ, ಹಾಲು ಉತ್ಪಾದಕ ಸಂಘದ ರೈತರ ಸಬ್ಸಿಡಿಯನ್ನು ಹೆಚ್ಚಿಸಿ, ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಿ, ಹೆದ್ದಾಯಲ್ಲಿನ ಟೋಲ್ ಶುಲ್ಕವನ್ನು ಕಡಿಮೆ ಮಾಡಿ, ಮೂರು ತಿಂಗಳುಗಳ ವಿದ್ಯುಚ್ಛಕ್ತಿಯ ಹೊರೆಯನ್ನು ಕಡಿಮೆ ಮಾಡಿ, ಕಾರ್ಖಾನೆಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿ, ಸಣ್ಣ ಉದ್ದಿಮೆದಾರರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿ, ಗೃಹ ಸಾಲದ ಬಡ್ಡಿಯನ್ನು ಮನ್ನಾ ಮಾಡಿ..

ಅಬ್ಬಬ್ಬಾ ಕಳೆದೆರಡು ತಿಂಗಳಿಂದ ಪ್ರತಿನಿತ್ಯ ವಿರೋಧ ಪಕ್ಷಗಳ ಬಾಯಲ್ಲಿ ದಿನಕ್ಕೊಂದು ಬೇಡಿಕೆಗಳು ಬರುತ್ತಲೇ ಇವೆ. ಕರೋನಾ ಸಂಕಷ್ಟದ ಸಮಯದಲ್ಲಿ ಇಡೀ ಜಗತ್ತಿನ ಆರ್ಥಿಕತೆಯು ಕುಸಿದು ಹೋಗಿರುವ ಸಂದರ್ಭದಲ್ಲಿ ಆದಾಯವೇ ಇಲ್ಲದೇ ಬೇಡಿಕೆಗಳು ಹೆಚ್ಚಾಗಿವೆ. ಭಾರತದಂಥ 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕರೋನಾ ಪೂರ್ವ ಸಂದಾಯ ವಾಗುತ್ತಿದ್ದಂಥ ಆದಾಯವೇ ಸಾಲುತ್ತಿರಲಿಲ್ಲ.

ಅಂತಹುದರಲ್ಲಿ ಕರೋನಾದಿಂದ ಕಂಗೆಟ್ಟ ಆರ್ಥಿಕತೆಯ ಆದಾಯದಿಂದ ಇಷ್ಟೊಂದು ಜನರನ್ನು ಸಾಕುವುದು ಹುಡುಗಾಟದ
ಮಾತಲ್ಲ. ಕಳೆದ 18 ತಿಂಗಳುಗಳಿಂದ ಆಗೊಂದು ಹೀಗೊಂದು ‘ಲಾಕ್ ಡೌನ್’ನ ಪರಿಣಾಮವಾಗಿ ದೇಶದ ಆರ್ಥಿಕತೆಯು
ಪಾತಾಳಕ್ಕಿಳಿದು ಸರಕಾರಗಳಿಗೆ ಸರಿಯಾದ ಆದಾಯವೇ ಇಲ್ಲದಂತಾಗಿದೆ. ಇಂಥ ವಿಷಮ ಪರಿಸ್ಥಿತಿಯನ್ನು ಸ್ವಾತಂತ್ರ್ಯದ
ನಂತರ ಯಾವ ಸರಕಾರವೂ ಎದುರಿಸಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ದೇಶವು ಉಳಿದರೆ ಸಾಕು ಬಾಕಿಯದನ್ನು ಆಮೇಲೆ ನೋಡಿಕೊಂಡರೆ ಸಾಕೆನ್ನುವ ಮನಸ್ಥಿತಿ ಇರುವಾಗ ರಾಜಕೀಯ ಪ್ರೇರಣೆಯಿಂದ ಮೋದಿ ವಿರೋಧಿಗಳು ಮತ್ತದೇ ಸುಳ್ಳು ಸುದ್ದಿ ಹರಡಿಸುವ ಪ್ರಯತ್ನಕ್ಕೆ ಕೈಹಾಕುತ್ತಲೇ ಇದ್ದಾರೆ.

ದೇಶವನ್ನು ನಡೆಸುವುದು ಒಂದು ಸಂಸಾರವನ್ನು ನಡೆಸಿದ ಹಾಗೆ. ಒಂದು ದೇಶ ಹಾಗೂ ಒಂದು ಸಂಸಾರವನ್ನು ನಡೆಸುವ ಬಗೆಯು ಬಹುಷ್ಯ ಒಂದೇ ರೀತಿಯಿರುತ್ತದೆ. ೧೦ ಜನರಿರುವ ಒಂದು ಸಂಸಾರದಲ್ಲಿ ಗಂಡ, ಹೆಂಡತಿ ಇರುತ್ತಾರೆ. ವಯಸ್ಸಾದ ಅಪ್ಪ, ಅಮ್ಮ ರುತ್ತಾರೆ. ಸಣ್ಣ ಮಕ್ಕಳಿರುತ್ತಾರೆ, ರೋಗಿಗಳಿರುತ್ತಾರೆ. ಇವರೆಲ್ಲರನ್ನೂ ಸಾಕಲು ತಿಂಗಳಿಗೆ ಬೇಕಿರುವ ಆದಾಯವನ್ನು  ಮಾತ್ರ ಗಂಡನೋ ಅಥವಾ ಹೆಂಡತಿಯೋ ಅಥವಾ ಇಬ್ಬರೂ ದುಡಿಯುತ್ತಿರುತ್ತಾರೆ. ಇಬ್ಬರ ದುಡಿಮೆಯಿಂದ 10 ಜನರನ್ನು ಸಾಕುವುದು ಸುಲಭದ ಮಾತಲ್ಲ. ಭಾರತದ ಪರಿಸ್ಥಿತಿಯು ಅಷ್ಟೇ, ಕೆಲವೇ ಕೆಲವರು ಕಟ್ಟುವ ತೆರಿಗೆಯ ಆದಾಯದಿಂದ 140 ಕೋಟಿಯಷ್ಟು ಜನರನ್ನು ಸಾಕಬೇಕು. ಇದರಲ್ಲಿ ದುಡಿಯಲು ಆಗದ ವಯಸ್ಸಾದವರಿದ್ದಾರೆ, ಸಣ್ಣ ಮಕ್ಕಳಿದ್ದಾರೆ, ಬಡವರಿದ್ದಾರೆ, ಮಾನಸಿಕ ಅಸ್ವಸ್ಥರಿದ್ದಾರೆ, ದೈಹಿಕ ಅಸ್ವಸ್ಥರಿದ್ದಾರೆ, ಕೆಲವೇ ಕೆಲವರ ತೆರಿಗೆಯ ಆದಾಯದಿಂದ ಎಲ್ಲರನ್ನೂ ಸಾಕಬೇಕಿರುವುದು ಮನೆ ಯಜಮಾನನ ಕರ್ತವ್ಯ.

ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದಂಥ ಸಂಸಾರದಲ್ಲಿ ಇದ್ದಕ್ಕಿದಂತೆಯೇ ಸಮಸ್ಯೆ ಉಂಟಾಗಿ ಆದಾಯಕ್ಕೆ ಕತ್ತರಿ ಬಿದ್ದರೆ ಮನೆಯ ಯಜಮಾನ ಏನು ಮಾಡಬೇಕು? ಒಂದೋ ಆತನ ಉಳಿತಾಯದ ಹಣದಲ್ಲಿ ಸಂಸಾರ ನಡೆಸಬೇಕು ಅಥವಾ ಸಾಲ ಮಾಡಬೇಕು. ಉಳಿತಾಯದ ಹಣದಿಂದ ಹೆಚ್ಚು ದಿನ ಸಂಸಾರ ನಡೆಸಲು ಸಾಧ್ಯವಿಲ್ಲ, ಈಗಾಗಲೇ ಅವರ ಅಪ್ಪ ಮಾಡಿರುವ ಸಾಲ ಹಾಗೂ ಬಡ್ಡಿಯ ಹೊರೆಯು ಅವನ ಮೇಲಿರುವಾಗ ಹೆಚ್ಚಿನ ಸಾಲವನ್ನು ಹೇಗೆ ತಾನೇ ಮಾಡಲು ಸಾಧ್ಯ? ಭಾರತದ ಪರಿಸ್ಥಿತಿಯು ಅಷ್ಟೇ, ವೇಗವಾಗಿ ಹೋಗುತ್ತಿದ್ದಂಥ ಆರ್ಥಿಕತೆಗೆ ಕರೋನಾ ಪರಿಣಾಮವಾಗಿ ದೊಡ್ಡದೊಂದು ಪೆಟ್ಟು ಬಿದ್ದಿದೆ.

‘ಲಾಕ್ ಡೌನ್’ ಪರಿಣಾಮವಾಗಿ ವ್ಯವಹಾರಗಳು ನಡೆಯುತ್ತಿಲ್ಲ. ವ್ಯವಹಾರಗಳು ನಡೆಯದ ಪರಿಣಾಮವಾಗಿ ತೆರಿಗೆ ಸಂಗ್ರಹಣೆ ಕಡಿಮೆಯಾಗಿದೆ. ಆದರೆ ವೆಚ್ಚ ಮಾತ್ರ ಹೆಚ್ಚಾಗಿದೆ. ನಾನು ಆಗಲೇ ಹೇಳಿದ ಹಾಗೆ ಎಲ್ಲರ ಬೇಡಿಕೆಗಳೂ ಹೆಚ್ಚಾಗಿವೆ. ಆದರೆ ಆದಾಯಕ್ಕೆ ಮಾತ್ರ ಕೋತ ಬಿದ್ದಿದೆ. ಸಾಲ ಮಾಡಬೇಕೆಂದರೆ ಹಿಂದಿನ ‘ಕಾಂಗ್ರೆಸ್’ ಸರಕಾರ ಮಾಡಿರುವ ಸಾಲ, ಅದರ ಮೇಲಿನ
ಬಡ್ಡಿಯನ್ನು ಇನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಾಗಿಲ್ಲ.

ಸಾಲ ಮಾಡುವುದು ತಪ್ಪಲ್ಲ. ಆದರೆ ಮಾಡಿದ ಸಾಲದ ಹಣವನ್ನು ಎಲ್ಲಿ ಬಳಸಲಾಯಿತೆಂಬುದು ಮುಖ್ಯ. ಸಾಲ ಮಾಡಿ
‘ಅಸ್ತಿ’ಯನ್ನು ಸಂಪಾದಿಸಿದರೆ ತಪ್ಪಲ್ಲ. ಮಾಡಿದ ಸಾಲವನ್ನೆ ಮತಬ್ಯಾಂಕಿನ ರಾಜಕಾರಣಕ್ಕಾಗಿ ಹೆಚ್ಚಾಗಿ ಸಾಮಾಜಿಕ
ಯೋಜನೆಗಳಿಗೆ ಬಳಸಿಕೊಂಡರೆ ಅದು ತಪ್ಪಾಗುತ್ತದೆ. ನರೇಂದ್ರ ಮೋದಿಯವರ ಅವಧಿಯಲ್ಲಿ ಸಾಲ ಹೆಚ್ಚಿದರೂ ಸಹ ಅವೆಲ್ಲವೂ ಮೂಲ ಸೌಕರ್ಯಗಳಿಗೆ ಬಳಕೆಯಾಗಿದೆ. ಹಿಂದೆಂದೂ ಕಾಣದ ಹೆದ್ದಾರಿಗಳು ದೇಶದಲ್ಲಿ ನಿರ್ಮಾಣವಾಗುತ್ತಿವೆ.

ಅಡುಗೆ ಅನಿಲವನ್ನು ಪೈಪ್ ಲೈನ್‌ಗಳ ಮೂಲಕ ಮನೆಗಳಿಗೆ ತಲುಪಿಸುವ ದೊಡ್ಡ ದೊಡ್ಡ ಕಾಮಗಾರಿಗಳು ನಡೆದಿವೆ. ಈಶಾನ್ಯ ಭಾರತದಲ್ಲಿ ಇಂದೆಂದು ಕಾಣದ ರಸ್ತೆ ಕಾಮಗಾರಿಗಳಾಗಿವೆ. ಅಂತಾರಾಷ್ಟ್ರೀಯ ಗಡಿಗಳಲ್ಲಿ ನೂರಾರು ಕಿಲೋ ಮೀಟರುಗಳ ರಸ್ತೆಗಳಾಗಿವೆ. ‘ಉಡಾನ್’ ಯೋಜನೆಯಡಿಯಲ್ಲಿ ದೇಶದಾದ್ಯಂತ ಅನೇಕ ವಿಮಾನ ನಿಲ್ದಾಣಗಳಾಗಿವೆ. ಕರ್ನಾಟಕದಲ್ಲಿಯೇ ಗುಲ್ಬರ್ಗ, ಮೈಸೂರು, ಬೀದರ್, ಬೆಳಗಾವಿ, ಬಳ್ಳಾರಿ, ಶಿವಮೊಗ್ಗ (ಕಾಮಗಾರಿ ಶುರುವಾಗಿದೆ) ನಗರಗಳಲ್ಲಿ ವಿಮಾನ ನಿಲ್ದಾಣಗಳಾಗಿವೆ.

ಬೆಂಗಳೂರು – ಮೈಸೂರಿನ ನಡುವೆ 7500 ಕೋಟಿ ವೆಚ್ಚದ ಹೆದ್ದಾರಿಯಾಗುತ್ತಿದೆ. ಬೆಂಗಳೂರಿನಿಂದ ಬೆಳಗಾವಿವರೆಗೂ
ಹೆದ್ದಾರಿಗಳ ದುರಸ್ತಿ ಕಾರ್ಯವಾಗಿದೆ. ಚಿತ್ರದುರ್ಗದಿಂದ ಹೊಸಪೇಟೆ ಹಾಗೂ ಬಳ್ಳಾರಿವರೆಗೂ ಹೆದ್ದಾರಿಗಳಾಗಿವೆ. ಅಷ್ಟೇ ಯಾಕೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದಂಥ ಸಿಗಂದೂರು ಸೇತುವೆಯ ಕಾರ್ಯ ಭರದಿಂದ ಸಾಗಿದೆ. ಕಾಂಗ್ರೆಸ್ಸಿನ ಕಾಲದಲ್ಲಿ ಮಾಡಿದ ಸಾಲದಲ್ಲಿ ಯಾಕೆ ಈ ಕಾಮಗಾರಿಗಳು ಶುರುವಾಗಲಿಲ್ಲ? ಯಾಕೆಂದರೆ ಅವರ ಸಾಲವೆಲ್ಲವು ಚುನಾವಣಾ ದೃಷ್ಟಿಯಿಂದ ಕೇವಲ ಜನರ ಮತಗಳನ್ನು ಪಡೆಯುವುದಕ್ಕಾಗಿ ಬಳಕೆಯಾಗಿದೆ. ಅವರು ಮತಕ್ಕಾಗಿ ಬಳಸಿದ ಸಾಲದ ಹಣವು ಎಂದಿಗೂ ವಾಪಾಸ್ ಬರುವುದಿಲ್ಲ. ಆದರೆ ಮೋದಿಯ ಸರಕಾರದ ಸಾಲದಿಂದ ನಿರ್ಮಾಣವಾಗಿರುವ ಮೂಲ ಸೌಕರ್ಯಗಳಿಂದ
ಉಂಟಾಗುವ ಲಾಭದಿಂದ ಬರುವ ಹಣವು ದೇಶದ ಅಭಿವೃದ್ಧಿಯಾಗುತ್ತದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಚರ್ಚೆಗಳು ಎಡೆ ಶುರುವಾಗಿದೆ. ಕಚ್ಚಾ
ತೈಲದ ಬೆಲೆ ಇಳಿಕೆಯಾಗಿದ್ದರೂ ಸಹ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯಾಗಿಲ್ಲವೆಂದು ವಿರೋಧ ಪಕ್ಷಗಳು ಹೇಳುತ್ತಿzರೆ.
ಕಚ್ಚಾತೈಲದ ಬೆಲೆ ‘ಡಾಲರ್’ನಲ್ಲಿ ಇಳಿಕೆಯಾಗಿದ್ದರೂ ಸಹ ಒಂದು ಡಾಲರಿಗೆ ಹತ್ತು ವರ್ಷಗಳ ಹಿಂದೆ ನೀಡುತ್ತಿದಂಥ ರುಪಾಯಿಯ ಮೌಲ್ಯ ಇಂದು ಕಡಿಮೆಯಾಗಿದೆ. ರುಪಾಯಿ ಮೌಲ್ಯ ಕಡಿಮೆಯಾಗಿದ್ದರ ಪರಿಣಾಮವಾಗಿ ಒಂದು ಡಾಲರ್ ಖರೀದಿಸಲು ಹೆಚ್ಚಿನ ರುಪಾಯಿಯನ್ನು ಇಂದು ನೀಡಬೇಕಾದಂಥ ಪರಿಸ್ಥಿತಿ ಎದುರಾಗಿದೆ.

ಕಚ್ಛಾತೈಲದ ಬೆಲೆಯನ್ನು ಡಾಲರ್‌ನಲ್ಲಿ ತಾಳೆಮಾಡುವುದಲ್ಲ, ಬದಲಾಗಿ ರುಪಾಯಿಯಲ್ಲಿ ತಾಳೆಮಾಡಿ ನೋಡಬೇಕೆಂಬ ಸಾಮಾನ್ಯ ಜ್ಞಾನ ಮೋದಿ ವಿರೋಧಿಗಳಿಗಿಲ್ಲ. ಇನ್ನು ಪೆಟ್ರೋಲ್ ಮೇಲಿನ ತೆರಿಗೆಯ ವಿಚಾರಕ್ಕೆ ಬರುವುದಾದರೆ, ಕೇಂದ್ರ ಸರಕಾರವು ಹೆಚ್ಚು ಮಾಡಿರುವ ಪೆಟ್ರೋಲ್ ಮೇಲಿನ ತೆರಿಗೆಯ ಶೇ.42 ಭಾಗವು ರಾಜ್ಯಗಳಿಗೆ ವಾಪಸ್ ಬರುತ್ತದೆ. ಅಂದರೆ
ಹತ್ತು ರುಪಾಯಿ ತೆರಿಗೆಯಲ್ಲಿ ಏಳು ರುಪಾಯಿ ರಾಜ್ಯದ ಪಾಲು, ಮೂರು ರುಪಾಯಿ ಮಾತ್ರ ಕೇಂದ್ರದ ಪಾಲು, ಹಾಗಾದರೆ
ತೆರಿಗೆಯನ್ನು ಇಳಿಸಬೇಕಾದದ್ದು ರಾಜ್ಯಗಳೋ ಅಥವಾ ಕೇಂದ್ರವೋ? ರಾಜ್ಯಗಳು ಪೆಟ್ರೋಲ್ ಮೇಲಿನ ತೆರಿಗೆಯನ್ನು
ಇಳಿಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ.

ರಾಜ್ಯಗಳಿಗೆ ಈಗ ಬರುತ್ತಿರುವ ಪೆಟ್ರೋಲ್ ಮೇಲಿನ ತೆರಿಗೆಯೇ ಸಾಕಾಗುತ್ತಿಲ್ಲ. ಇನ್ನು ತೆರಿಗೆ ಇಳಿಸಿದರೆ ಹೇಗೆ ರಾಜ್ಯವನ್ನು ನಡೆಸುವುದು? ನಾನು ಮೊದಲು ಹೇಳಿದ ಹಾಗೆ ಲಾಕ್ ಡೌನ್ ಪರಿಣಾಮವಾಗಿ ಆರ್ಥಿಕತೆಯೇ ಮುಗ್ಗರಿಸಿ ತೆರಿಗೆ ಕೋತವಾಗಿರು ವಾಗ ಹೇಗೆ ತಾನೇ ಇರುವ ತೆರಿಗೆಯನ್ನು ಕಡಿಮೆ ಮಾಡುವುದು? ಇನ್ನು ಒಂದು ವಿಷಯವನ್ನು ಹೇಳುತ್ತೇನೆ ಕೇಳಿ, ಲಾಕ್ ಡೌನ್ ಪರಿಣಾಮವಾಗಿ ಜನರು ಹೊರಗಡೆ ಓಡಾಡುತ್ತಲೇ ಇಲ್ಲ, ಕೈಗಾರಿಕೆಗಳು ಸ್ಥಗಿತಗೊಂಡಿವೆ.

ಹಲವು ಕಂಪನಿಗಳ ನೌಕರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇವೆಲ್ಲದರ ಪರಿಣಾಮವಾಗಿ ‘ಪೆಟ್ರೋಲ್’ ಹಾಗೂ ‘ಡೀಸೆಲ್’ ಬಳಕೆಯೇ ಕಡಿಮೆಯಾಗಿದೆ. ಬಳಕೆಯೇ ಕಡಿಮೆಯಾಗಿರುವುದರಿಂದ ಸರಕಾರದ ಬೊಕ್ಕಸಕ್ಕೆ ಹಣವೇ ಸಂದಾಯ ವಾಗುತ್ತಿಲ್ಲವೆಂಬ ಸಾಮಾನ್ಯ ಜ್ಞಾನ ಸಾಮಾಜಿಕ ಜಾಲತಾಣದ ಆರ್ಥಿಕ ತಜ್ಞರಿಗಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ಎರಡನ್ನೂ ‘GST’ ಅಡಿಯಲ್ಲಿ ತರಬೇಕೆಂದು ಮೋದಿ ವಿರೋಧಿಗಳು ಬೊಬ್ಬೆ ಹೊಡೆಯುತ್ತಿರುತ್ತಾರೆ, ‘GST’ಯಲ್ಲಿ ಅತೀ ಹೆಚ್ಚಿನ
ತೆರಿಗೆಯ ದರವು ಶೇ.28ರಷ್ಟಿದೆ.

ಈಗಿರುವ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯ ದರವು ಇದರ ಎರಡರಷ್ಟಿದೆ. ಈಗಿರುವ ತೆರಿಗೆಯ ದರದಿಂದ ಬರುತ್ತಿರುವ ಆದಾಯವೇ ಸಾಲುತ್ತಿಲ್ಲದಿರುವಾಗ ಹೇಗೆ ತಾನೇ ಕಡಿಮೆ ದರವಿರುವ ‘GST’ಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ತರಲು ಸಾಧ್ಯ? ಸಂವಿಧಾನದನ್ವಯ ಪೆಟ್ರೋಲ್ ಹಾಗೂ ಡೀಸೆಲ್ ಎರಡನ್ನು ‘GST’  ಅಡಿಯಲ್ಲಿ ತರಬೇಕೆಂದರೆ ಎ ರಾಜ್ಯಗಳೂ ಒಮ್ಮತದಿಂದ ಒಪ್ಪಬೇಕು, ಆದರೆ ಎಲ್ಲರ ಒಮ್ಮತವೂ ಇದುವರೆಗೂ ಸಾಧ್ಯವಾಗಿಲ್ಲ.

ಮತಬ್ಯಾಂಕಿನ ರಾಜಕೀಯದ ಉದ್ದೇಶದಿಂದ ಮಮತಾ ಬ್ಯಾನರ್ಜಿ, ಜಗನ್ ಮೋಹನ್ ರೆಡ್ಡಿ, ಚಂದ್ರಶೇಖರ್ ರಾವ್, ಸ್ಟಾಲಿನ್, ಪಿಣರಾಯ್ ವಿಜಯನ್, ಅರವಿಂದ್ ಕೇಜ್ರಿವಾಲ್, ಅಮರೇಂದರ್ ಸಿಂಗ್, ಅಶೋಕ್ ಗೆಹಲೋಟ್ ಇಲ್ಲಸಲ್ಲದ ಯೋಜನೆಗಳನ್ನು ಜನರಿಗೆ ನೀಡುವ ಭರವಸೆ ನೀಡಿರುವಾಗ ಕಡಿಮೆ ತೆರಿಗೆ ದರವಿರುವ ‘GST’ಯಡಿಯಲ್ಲಿ ಹೇಗೆ ತಾನೇ ‘ಪೆಟ್ರೋಲ್’ ಹಾಗೂ ‘ಡೀಸೆಲ್‌’ತರಲು ಒಪ್ಪುತ್ತಾರೆ? ಸಾಲ ನೀಡುವವರಿದ್ದಾರೆ, ಆದರೆ ಹೆಚ್ಚು ಸಾಲ ಮಾಡಲಾಗುವುದಿಲ್ಲ.

ನಾನು ಆಗಲೇ ಹೇಳಿದ ಹಾಗೆ ಸಾಲ ಮಾಡುವುದು ತಪ್ಪಲ್ಲ, ಮಾಡಿದ ಸಾಲವು ಸರಕಾರದ ಆಸ್ತಿಯ ಸಂಪಾದನೆಯಲ್ಲಿ ಬಳಕೆ ಯಾಗಬೇಕು. ಭಾರತವು ಸಾಲ ಮಾಡಬೇಕೆಂದರೆ ನೀಡುವವರಿಗೇನು ಕಡಿಮೆ ಇಲ್ಲ. ಇಂದು ನರೇಂದ್ರ ಮೋದಿಯವರ ಸಾಲದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗೆ 1991ರಲ್ಲಿ ತನ್ನದೇ ಸರಕಾರದ ಅವಧಿಯಲ್ಲಿ ‘ಭಾರತೀಯ ರಿಸರ್ವ್ ಬ್ಯಾಂಕ್ ’ನಲ್ಲಿದ್ದಂಥ ಚಿನ್ನವನ್ನು ಲಂಡನ್ನಿನ ಬ್ಯಾಂಕಿನಲ್ಲಿ ಅಡವಿಟ್ಟು ಹಣ ತಂದದ್ದು ಮರೆತುಹೋಗಿದೆ. ಅಂಥ ವಿಷಮ ಪರಿಸ್ಥಿತಿ ಇಂದು ಭಾರತಕ್ಕೆ ಎದುರಾಗಿಲ್ಲ.

ಈಗ ಹೆಚ್ಚಿನ ಸಾಲವನ್ನು ಮಾಡಿದರೆ ಅಂತಾರಾಷ್ಟ್ರೀಯ ಏಜೆನ್ಸಿಗಳು ಭಾರತದ ‘ಕ್ರೆಡಿಟ್ ರೇಟಿಂಗ್ಸ್’ಗಳನ್ನು ಕಡಿಮೆ ಮಾಡುವ ಸಾಧ್ಯತೆಗಳಿರುತ್ತವೆ. ರೇಟಿಂಗ್ಸ್ ಕಡಿಮೆಯಾದಷ್ಟೂ ಭಾರತದ ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀಳಲಿದೆ. ಭಾರತಕ್ಕೆ ಹರಿದು ಬರುತ್ತಿರುವ ವಿದೇಶಿ ಬಂಡವಾಳವು ಕಡಿಮೆಯಾಗುತ್ತದೆ, ವಿದೇಶಿ ಬಂಡವಾಳವು ಕಡಿಮೆಯಾದರೆ ಭಾರತದಲ್ಲಿನ ಉದ್ದಿಮೆಗಳ ಮೇಲೆ ಪ್ರಭಾವ ಬೀರುತ್ತದೆ, ಉದ್ದಿಮೆಗಳು ಸೊರಗಿದರೆ ನಿರುದ್ಯೋಗ ಸಮಸ್ಯೆ ಹೆಚ್ಚುತ್ತದೆ, ನಿರುದ್ಯೋಗ ಸಮಸ್ಯೆ ಹೆಚ್ಚಾದರೆ ಮತ್ತೆ ಇದೇ ವಿರೋಧ ಪಕ್ಷಗಳು ಬಾಯಿ ಬಡೆದುಕೊಳ್ಳುತ್ತವೆ.

ರಾಜ್ಯಗಳ ಮಟ್ಟದಲ್ಲಿ ಈಗಾಗಲೇ ಹಲವು ರಾಜ್ಯಗಳು ಸಾಲದ ಸುಳಿಯಲ್ಲಿ ಸಿಲುಕಿವೆ, ಕರ್ನಾಟಕ ರಾಜ್ಯವು ಸುಮಾರು ಮೂರು ಲಕ್ಷ ಕೋಟಿಯ ಸಾಲದಲ್ಲಿದೆ. ಈ ಮಟ್ಟದ ಸಾಲದ ಸಂಪೂರ್ಣ ಜವಾಬ್ದಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಬೇಕು, ಈಗಾಗಲೇ ಇರುವ ಸಾಲಕ್ಕೆ ಕಟ್ಟಬೇಕಿರುವ ಬಡ್ಡಿಯ ಜತೆಗೆ ಮತ್ತಷ್ಟು ಬಡ್ಡಿ ಸೇರಿದರೆ ಸರಕಾರ ನಡೆಸುವುದಾದರೂ ಹೇಗೆ? ಆಂಧ್ರ ಪ್ರದೇಶದ ಮುಖ್ಯಮಂತ್ರಿ ‘ಜಗನ್ ಮೋಹನ್ ರೆಡ್ಡಿ’ ತಿರುಪತಿ ದೇವಸ್ಥಾನಕ್ಕೆ ಸೇರಿದ ಜಾಗಗಳನ್ನು ಈಗಾಗಲೇ ಮಾರುವ ಸಿದ್ಧತೆಯಲ್ಲಿದ್ದಾರೆ.

ತಮಿಳುನಾಡು ತನ್ನ ಮತಬ್ಯಾಂಕಿನ ರಾಜಕೀಯದ ಪರಿಣಾಮವಾಗಿ ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿದೆ. ಪರಿಸ್ಥಿತಿ ಹೀಗಿರುವಾಗ ಯಾರೂ ಸಹ ಸಾಲ ಮಾಡುವ ಧೈರ್ಯ ಮಾಡುವುದಿಲ್ಲ.

ನೋಟ್ ಪ್ರಿಂಟ್ ಮಾಡಿ ಎಂದ ಚಿದಂಬರಂ: ಮಾಜಿ ವಿತ್ತ ಸಚಿವ ಚಿದಂಬರಂ ನೋಟು ಪ್ರಿಂಟ್ ಮಾಡಿ ಎಂದು ಸರಕಾರಕ್ಕೆ
ಬಿಟ್ಟಿ ಸಲಹೆ ನೀಡಿದ್ದಾರೆ. ತನ್ನ ಆಡಳಿತಾವಽಯಲ್ಲಿ ಭ್ರಷ್ಟಾಚಾರದ ಕೂಪದಲ್ಲಿ ಮುಳುಗೆದ್ದಿರುವ ಚಿದಂಬರಂ ಇಂಥ ಸಲಹೆ ಯನ್ನು ನೀಡಿದ್ದು ನನಗೇನು ಆಶ್ಚರ್ಯವೆನಿಸಲಿಲ್ಲ. ತನ್ನ ಆಡಳಿತಾವಧಿಯಲ್ಲಿ ಸಿಕ್ಕ ಸಿಕ್ಕವರಿಗೆ ಸಾಲವನ್ನು ನೀಡಿ ಬ್ಯಾಂಕು ಗಳನ್ನು ಹಾಳು ಮಾಡಿದ್ದ ಚಿದಂಬರಂ ತಲೆಯಲ್ಲಿ ಇಂಥ ಯೋಚನೆಗಳೇ ಬರುವುದು. ಕಷ್ಟ ಬಂತೆಂದು ನೋಟು ಪ್ರಿಂಟು ಮಾಡಬೇಕಾದರೆ,1991ರಲ್ಲಿ ಇವರದ್ದೇ ಸರಕಾರದಲ್ಲಿ ವಿತ್ತ ಸಚಿವರಾಗಿದ್ದಂಥ ‘ಮನ್ ಮೋಹನ್ ಸಿಂಗ್’ ಯಾಕೆ ಪ್ರಿಂಟ್ ಮಾಡಲಿಲ್ಲ? ಯಾಕೆಂದರೆ ಸಿಕ್ಕ ಸಿಕ್ಕ ಹಾಗೆ ನೋಟ್ ಪ್ರಿಂಟ್ ಮಾಡಲಾಗುವುದಿಲ್ಲ.

ಒಂದು ದೇಶದ ಒಟ್ಟಾರೆ ‘ಜವಾಬ್ದಾರಿ’ (LIABILITIES)ನಷ್ಟು ಮಾತ್ರ ನೋಟುಗಳನ್ನು ಪ್ರಿಂಟ್ ಮಾಡಲು ಸಾಧ್ಯ. ಅದನ್ನು ಮೀರಿ ನೋಟುಗಳನ್ನು ಪ್ರಿಂಟ್ ಮಾಡಲು ಸಾಧ್ಯವಿಲ್ಲ, ಅದನ್ನು ಮೀರಿ ಪ್ರಿಂಟ್ ಮಾಡಿದರೆ ರುಪಾಯಿ ತನ್ನ ಮೌಲ್ಯ ವನ್ನು ಕಳೆದುಕೊಳ್ಳುತ್ತದೆ. ರುಪಾಯಿ ಮೌಲ್ಯ ಕಳೆದುಕೊಂಡಾಕ್ಷಣ ಡಾಲರ್ ಮೌಲ್ಯ ಏರಿಕೆಯಾಗುತ್ತದೆ, ಒಂದು ಡಾಲರಿಗೆ 100 ರುಪಾಯಿಯನ್ನು ಕೊಡಬೇಕಾಗಿಬರುತ್ತದೆ. ಆಗ ಪೆಟ್ರೋಲ್‌, ಡೀಸೆಲ್ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ, ದಿನಬಳಕೆ
ವಸ್ತುಗಳ ಬೆಲೆ ಏರಿಕೆಯಾಗುತ್ತದೆ, ಹಣದುಬ್ಬರ ದರವು ನಿಯಂತ್ರಿಸಲಾಗದ ಹಂತಕ್ಕೆ ತಲುಪುತ್ತದೆ, ದೇಶವು ದಿವಾಳಿಯ
ಹಂತಕ್ಕೆ ತಲುಪುತ್ತದೆ. ಚಿದಂಬರಂ ನೀಡಿರುವ ಈ ಸಲಹೆ ದೇಶವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ನೋಡಿ.

‘ಗ್ರೀಸ್’ ಹಾಗೂ ‘ವೆನುಜುಲಾ’ನಂತಹ ದೇಶದದಂಥ ಆರ್ಥಿಕ ಮುಗ್ಗಟ್ಟಿನ ಉದಾಹರಣೆ ಕಣ್ಣಮುಂದಿರುವಾಗ ಚಿದಂಬರಂ ಈ ರೀತಿಯ ಸಲಹೆಯನ್ನು ನೀಡಿದ್ದು ಮಾತ್ರ ಹಾಸ್ಯಾಸ್ಪದವೇ ಸರಿ. ಮೋದಿಯನ್ನು ಕೆಳಗಿಳಿಸಲು ದೇಶವನ್ನಾದರೂ ಬಲಿ ಕೊಡಲು
ತುದಿಗಾಲಿನಲ್ಲಿ ನಿಂತಿದ್ದಾರೆ ಚಿದಂಬರಂ. ಬೆಲೆ ಏರಿಕೆ ಕೈಮೀರಿ ಹೋಗಿದ್ದರೆ ಬ್ಯಾಂಕುಗಳಲ್ಲಿ ‘ಠೇವಣಿ’ಗಳೇಕೆ ಹೆಚ್ಚುತ್ತಿದೆ? ಬೆಲೆ ಏರಿಕೆಯ ಪ್ರಮುಖ ಮಾಪನ ‘ಹಣದುಬ್ಬರ’ ಒಂದು ವರ್ಷದ ಒಟ್ಟಾರೆ ಖರ್ಚನ್ನು ಮತ್ತೊಂದು ವರ್ಷದ ಖರ್ಚಿಗೆ ತಾಳೆ ಮಾಡಿ ನೋಡಿದಾಗ ಮಾತ್ರ ಬೆಲೆ ಏರಿಕೆಯ ಬಿಸಿಯ ಅರಿವಾಗುತ್ತದೆ.

ಪ್ರಸ್ತುತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ನಡುವೆಯೂ ಭಾರತದ ಹಣದುಬ್ಬರ ಶೇ 6.30ನಷ್ಟಿದೆ. ಅಂದರೆ ಒಂದು ವರ್ಷದ ಒಟ್ಟಾರೆ ಖರ್ಚಿನಲ್ಲಿ ಆಗುತ್ತಿರುವ ಏರಿಕೆ ಶೇ.6.30ಮಾತ್ರ. ಹಿಂದಿನ ‘ಮನ್ ಮೋಹನ್ ಸಿಂಗ್’ ಸರಕಾರದಲ್ಲಿ ಹಣದುಬ್ಬರ ದರ ಎರಡಂಕಿಯನ್ನು ದಾಟಿತ್ತು, ಅಂದು ಬಾಯಿಗೆ ಬೀಗ ಹಾಕಿಕೊಂಡಿದ್ದಂಥ ವಿರೋಧಿಗಳು ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಮಾತನಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಕಾಂಗ್ರೆಸ್ ಆಡಳಿತದ ‘ರಾಜಸ್ತಾನ’ದಲ್ಲಿ ಅತೀ ಹೆಚ್ಚಿನ ಪೆಟ್ರೋಲ್ ದರವಿದೆ, ಕಾರಣ ರಾಜಸ್ಥಾನ ಸರಕಾರವು ಹೆಚ್ಚಿನ ತೆರಿಗೆಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೇರುತ್ತಿದೆ.

ಮನೆಯ ಮೇಲಿನ ಸಾಲ, ವಿದ್ಯಾಭ್ಯಾಸದ ಸಾಲ, ಕಾರುಗಳ ಮೇಲಿನ ಸಾಲ (ಡೀಸೆಲ್ ಬೆಲೆಯೇರಿಕೆಯ ಬಗ್ಗೆ ಮಾತನಾಡುವವರು ತಾವು ಕಟ್ಟುತ್ತಿರುವ ಬಡ್ಡಿಯಲ್ಲಿನ ಇಳಿಕೆಯ ಬಗ್ಗೆ ಮಾತನಾಡುವುದಿಲ್ಲ), ದ್ವಿಚಕ್ರ ವಾಹನಗಳ ಮೇಲಿನ ಸಾಲ, ವೈಯಕ್ತಿಕ ಸಾಲದ ಮೇಲಿನ ಬಡ್ಡಿಯ ದರದಲ್ಲಿನ ತೀವ್ರ ಇಳಿಕೆಯ ಬಗ್ಗೆ ಯಾರೂ ಸಹ ಮಾತನಾಡುವುದಿಲ್ಲ. ಬೆಲೆಯೇರಿಕೆ ಹಾಗೂ ಬೆಲೆ ಇಳಿಕೆ ಎರಡನ್ನೂ ಸಹ ಒಟ್ಟಾರೆ ತಾಳೆ ಮಾಡಿ ನೋಡುವುದನ್ನು ‘ಹಣದುಬ್ಬರ’ವೆನ್ನುತ್ತಾರೆ.

ಇವರೆಲ್ಲರೂ ಹೇಳುವ ಹಾಗೆ ಬೆಲೆ ಏರಿಕೆಯು ಕೈಮೀರಿ ಹೋಗಿದ್ದರೆ, ಬ್ಯಾಂಕುಗಳಲ್ಲಿ ‘ಠೇವಣಿ’ಗಳೇಕೆ ಪ್ರತೀ ತಿಂಗಳು ಏರುತ್ತಲೇ ಇದೆ? ಹಣವೆಲ್ಲಿಂದ ಬರುತ್ತಿದೆ? ಉಳಿತಾಯವೂ ಸಹ ಹೆಚ್ಚಾಗುತ್ತಿದೆ ಅಂತಾಯಿತಲ್ಲ. ಬ್ಯಾಂಕುಗಳಲ್ಲಿ ಠೇವಣಿಗಳು ಹೆಚ್ಚಾದ ಕಾರಣ ಬಡ್ಡಿಯ ದರವೂ ಕಡಿಮೆಯಾಗಿದೆ.

ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಂಬಂತೆ ಕರೋನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿ ಕೊಳ್ಳಲು ಮೋದಿ ವಿರೋಽಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಇಡೀ ಜಗತ್ತೇ ಕರೋನಾ ಸಂಕಷ್ಟ ದಿಂದಾಗಿ ನಲುಗುತ್ತಿರುವಾಗ ಭಾರತವೇನು ಅದಕ್ಕೆ ಹೊರತಲ್ಲ. ಕರೋನಾದಿಂದಾಗಿ ಪ್ರತಿಯೊಂದು ದೇಶದಲ್ಲಿಯೂ ಸಮಸ್ಯೆ ಗಳು ಇರುವ ಹಾಗೆ ನಮ್ಮಲ್ಲಿಯೂ ಆರ್ಥಿಕ ಸಮಸ್ಯೆಗಳಿವೆ. ಆದರೆ ಇವ್ಯಾವೂ ಸಹ ಶಾಶ್ವತವಲ್ಲ.