Thursday, 12th December 2024

ಲಸಿಕಾಕರಣದ ಸವಾಲು, ಒಬ್ಬೊಬ್ಬರಿಗೂ ಒಂದೊಂದು ತಲೆ ನೋವು !

ಅವಲೋಕನ

ಜಿ.ಪ್ರತಾಪ ಕೊಡಂಚ

ಎಲ್ಲಿಂದ ಹೇಳುವುದೋ? ಶುರುವಿನಲೆ ಮುಗಿಯುವುದೋ? ಮುಗಿತಪ್ಪ ಅಂದುಕೊಂಡ್ರೆ , ಮತ್ತೆ ಶುರುವಾಗುವುದೋ! ಎಂಬ ಯೋಗರಾಜ ಭಟ್ಟರ, ಹಾಡಿನ ಸಾಲುಗಳು, ನೀವು ಕೇಳಿರಬಹುದು.

ಜಗತ್ತನ್ನೇ ಕಳೆದೊಂದು ವರ್ಷದಿಂದ ಹೈರಾಣಾಗಿಸಿದ ಕೋವಿಡ್ -19 ಸಾಂಕ್ರಾಮಿಕದ ಸುದ್ದಿ ನೋಡಿದಾಗಲೆಲ್ಲ, ನೆನಪಾಗು ವುದು ಇವೆ ಸಾಲುಗಳು! ಮುಗಿತಪ್ಪ, ಅಂದುಕೊಳ್ಳುತ್ತಲೇ ಹೊಸ ಅವತಾರದೊಂದಿಗೆ, ಆಗಷ್ಟೇ ನಿಟ್ಟುಸಿರು ಬಿಡಲು
ತಯಾರಾದವರನ್ನು ಮತ್ತೆ ಮಣಿಸುತ್ತಿರುವ ಕೋವಿಡ್, ಈ ತಲೆಮಾರು ಕಂಡ ಅತ್ಯಂತ ಭೀಕರ ಸಾಂಕ್ರಾಮಿಕ. ಪರಿಣಾಮಕಾರಿ
ಮದ್ದು ಕಂಡುಹಿಡಿಯುವ ಪ್ರಯತ್ನದಲ್ಲಿ ತಕ್ಕ ಮಟ್ಟಿನ ಯಶಸ್ಸು ದೊರಕಿ ಈಗಾಗಲೇ ಸುಮಾರು 17 ವಿಭಿನ್ನ ಲಸಿಕೆಗಳು
ಜಗತ್ತಿನಾದ್ಯಂತ ಕಂಡುಕೊಳ್ಳಲಾಗಿದೆ.

ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತ ಇನ್ನೂ ಸುಮಾರು 308 ಲಸಿಕೆಗಳು ಆವಿಷ್ಕಾರದ ವಿವಿಧ ಹಂತ ದಲ್ಲಿವೆಯಂತೆ! ಕ್ಷಿಪ್ರವಾಗಿ ರೋಗವೊಂದಕ್ಕೆ ಮದ್ದು ಕಂಡು ಹಿಡಿದುದರ ಹೊಸ ದಾಖಲೆಯಿದೆಂಬ ಹೆಮ್ಮೆ ಒಂದೆಡೆ ಯಾದರೆ, ರೋಗಾಣುವಿನ ಉಗಮ, ಸಹಜವೋ? ಮಾನವ ನಿರ್ಮಿತವೋ? ಎಂಬ ಅನುಮಾನಕಾಡುತ್ತಿರುವುದು ಕೂಡ, ನಮ್ಮ ತಲೆ ಮಾರಿನ ಅತೀ ದೊಡ್ಡ ದುರಂತ!

ಲಸಿಕೆಯೇನೋ ಕಂಡು ಹಿಡಿದೆವೆಂದು, ನಿಟ್ಟುಸಿರುವ ಬಿಡುವ ಹೊತ್ತಿಗೆ ಎದುರಾದದ್ದು, ಜನಸಂಕುಲವನ್ನು ಲಸಿಕಾಕರಣ ಕ್ಕೊಳಪಡಿಸುವ ಸವಾಲು ಮತ್ತು ಹೊಣೆಗಾರಿಕೆ. ಲಭ್ಯವಿರುವ 17 ಲಸಿಕೆಗಳಲ್ಲಿ ಸಂಪೂರ್ಣ ದೇಶೀಯವಾಗಿ ಮೂಡಿಬಂದ ಭಾರತ್ ಬೈಯೊಟೆಕ್‌ನ ಕೋವಾಕ್ಸಿನ್, ಭಾರತದ ತಯಾರಾಗುತ್ತಿರುವ ಅಸ್ಟ್ರಾಜೆನಕ ಮತ್ತು ಆಕ್ಸರ್ಡ್ ವಿಶ್ವವಿದ್ಯಾಲಯದ ಸಹಭಾಗಿತ್ವದ ಕೋವಿಶೀಲ್ಡ್ ಪ್ರಮುಖ ಲಸಿಕೆಗಳು. ಈ ದೃಷ್ಟಿಯಲ್ಲಿ ಮುಂದುವರಿದ ರಾಷ್ಟ್ರಗಳಿಗೂ ಮಿಗಿಲಾದ ಸಾಧನೆ ಭಾರತ ಮಾಡಿದ್ದು ಹೆಮ್ಮೆಯ ವಿಷಯ!

ಸುಲಭವಾಗಿ ಸಂಗ್ರಹಿಸಿಟ್ಟು, ಸಾಗಿಸಬಲ್ಲ ವಿಶ್ವಾಸರ್ಹ ಲಸಿಕೆಗಳಲ್ಲಿ ಕೋವಾಕ್ಸಿನ್, ಕೋವಿಶೀಲ್ಡ ಅಗ್ರಮಾನ್ಯ. ಫೈಸರ್,
ಮಾಡರ್ನಾದಂಥ ಲಸಿಕೆಗಳಿಗೆ ಮೊದಲಿಗೆ ಬೇಕಾಗಿದ್ದ ಶೀತಲೀಕರಣದ ವ್ಯವಸ್ಥೆ, ಜಗತ್ತಿನ ಹಲವೆಡೆ ಲಸಿಕೆ ತಲುಪಿಸುವುದೇ
ದುಸ್ತರವೆಂಬ ಚಿಂತೆ ಸೃಷ್ಟಿ ಮಾಡಿತ್ತು ಕೂಡಾ! ಔಷಧಿ ದೊರೆತ ಕೂಡಲೇ, ತ್ವರಿತ ಉತ್ಪಾದನೆ ಮತ್ತು ವಿತರಣೆಗೆ ಸೈನ್ಯಗಳನ್ನು
ಬಳಸಿಕೊಳ್ಳುವ ಯೋಚನೆ, ವ್ಯವಸ್ಥೆಗಳನ್ನು ಕೂಡ ಅಮೆರಿಕಾ ದಂಥ ಶ್ರೀಮಂತ ರಾಷ್ಟ್ರಗಳು ಮಾಡಿಕೊಂಡಿದ್ದವು.

ಲಸಿಕೆಯೂ ದೊರೆತಿದೆ, ವಿತರಣೆಗೂ ತಕ್ಕ ಮಟ್ಟಿನ ವ್ಯವಸ್ಥೆ ಗಳು ರೂಪುಗೊಂಡಿವೆ. ಆದರೆ ಈಗ ಜಗದ ಮುಂದಿರುವುದು ಮೂರು ಪ್ರಮುಖ ಸಮಸ್ಯೆಗಳು. ಭಾರತದಂಥ ರಾಷ್ಟ್ರಗಳಿಗೆ ಲಸಿಕೆ ಬೇಕಾದಷ್ಟು ಪ್ರಮಾಣದಲ್ಲಿ ದೊರಕದಿರುವುದು ಒಂದು ಬಗೆಯ ಸಮಸ್ಯೆಯಾದರೆ, ಲಸಿಕೆ ಕಂಡುಹಿಡಿಯುವ ಅಥವಾ ತರಿಸುವ ವ್ಯವಸ್ಥೆ, ಶಕ್ತಿ, ಸಂಪನ್ಮೂಲಗಳಿಲ್ಲದ ಚಿಕ್ಕ ರಾಷ್ಟ್ರಗಳದ್ದು ಎರಡನೇ ಬಗೆಯ ಸಮಸ್ಯೆ. ಮೂರನೆಯ ಬಗೆಯದ್ದು ಅತ್ಯಂತ ವಿಚಿತ್ರದ ಸಮಸ್ಯೆ, ಸಂಪನ್ಮೂಲ ಇದೆ, ಲಸಿಕೆಯೂ ಅಗತ್ಯಕ್ಕಿಂತ ಹೆಚ್ಚು ಲಭ್ಯವಿದೆ. ಆದರೆ ಜನರೇ ಲಸಿಕೆ ಹಾಕಿಸಿಕೊಳ್ಳಲು ನಿರಾಸಕ್ತರಾಗಿರುವುದು.

ಆರಂಭದಲ್ಲಿ ಭಾರತದಲ್ಲಿಯೂ ಇದ್ದಿದ್ದು ಮೂರನೇ ಬಗೆಯ ಸಮಸ್ಯೆ! ಅನುಮಾನ, ಅಸಡ್ಡೆ ಮತ್ತು ಪ್ರಸ್ತುತ ಆಡಳಿತದ
ವಿರೋಧಿಗಳ ಅಪಪ್ರಚಾರದ ಸುಳಿಯಲ್ಲಿ ಸಿಲುಕಿದ ಜನಸಮೂಹ ಲಸಿಕೆ ಪಡೆಯಲು ಉತ್ಸಾಹ ತೋರಿಸಲಿಲ್ಲ. ಆಗಲೇ ಲಸಿಕಾಕರಣ ವೇಗ ಪಡೆದುಕೊಂಡಿದ್ದರೆ, ಈಗ ಲಸಿಕೆ ಪಡೆದುಕೊಂಡಿದ್ದ ಎರಡರಷ್ಟು ಜನ ಸುರಕ್ಷಿತವಾಗುತ್ತಿದೆರೆನಿಸುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ, ಎರಡನೇ ಅಲೆಯ ತೀವ್ರತೆ ಸ್ವಲ್ಪವಾದರೂ ಕಡಿಮೆಯಾಗುತ್ತಿತ್ತೆನಿಸುತ್ತದೆ.

ಜವಾಬ್ದಾರಿಯುತ ಭಾರತ ತೀರಾ ಅವಶ್ಯವಿದ್ದ 95ಕ್ಕೂ ಹೆಚ್ಚುದೇಶಗಳಿಗೆ ಲಸಿಕೆ ಒದಗಿಸಿ ರಾಜತಾಂತ್ರಿಕ ಔದಾರ್ಯದ ಜತೆಗೆ, ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ನುಡಿಯಂತೆ ನಡೆದುಕೊಂಡು ಹೆಮ್ಮೆ ಮೂಡಿಸಿತು. ಕೋವಿಡ್ ಲಸಿಕೆಯ ವಿಚಾರ ದಲ್ಲಿ ಔದಾರ್ಯ ತೋರಿದ ಪ್ರಪಂಚದ ಮೊತ್ತ ಮೊದಲ ರಾಷ್ಟ್ರವೂ (ಚೀನಾ ಹೊರತು ಪಡಿಸಿದರೆ) ನಮ್ಮದೇ ಇರಬೇಕು! ಚೀನಾ ಬಿಡಿ, ಕೋವಿಡ್ ಆರಂಭದಿಂದ ಇಂದಿನ ತನಕ ಕಿಂಚಿತ್ತೂ ವಿಚಲಿತಗೊಳ್ಳದ, ಕೋವಿಡ್ ದಾಳಿಯ ಯಾವುದೇ ವಿಶ್ವಾಸಾರ್ಹ ಅಂಕಿಅಂಶ ಹಂಚಿಕೊಳ್ಳದ ಜಗತ್ತಿನ ಏಕ ಮಾತ್ರ ರಾಷ್ಟ್ರವೆನಿಸುತ್ತೆ!

ಸಾಂಕ್ರಾಮಿಕವನ್ನು ಹೇಗೆ ಯಶಸ್ವಿಯಾಗಿ ಹಣಿದೆವು? ಎಂಬುದನ್ನೂ ಹೇಳದೆ, ತಲ್ಲಣಗೊಂಡಿರುವ ಅನೇಕ ದೇಶಗಳಿಗೆ ತನ್ನ ಉತ್ಪನ್ನಗಳನ್ನು ಮಾರಿ ವ್ಯಾಪಾರದ ಏಕಸ್ವಾಮ್ಯ ಸೃಷ್ಟಿಸುವತ್ತ ಚೀನಾ ಕಳ್ಳ ಹೆಜ್ಜೆ ಹಾಕುತ್ತಿದೆ. ಭಾರತೀಯರ ಆಹಾರ, ಜೀವನ ಪದ್ಧತಿಯೇ ಹೆಚ್ಚಿನ ರೋಗನಿರೋಧಕತೆ ಒದಗಿಸಿದೆ, ಮೊದಲ ಅಲೆಯನ್ನು ಸಮರ್ಥವಾಗಿ ಎದುರಿಸಿ ಗೆದ್ದಿದ್ದೇವೆಂಬ ಭಾವನೆ ಕೂಡಾ ನಮ್ಮ ಜನರನ್ನೂ, ಸರಕಾರವನ್ನೂ ಅತಿಯಾದ ಆತ್ಮವಿಶ್ವಾಸ ತರಿಸಿ ಎಡವುವಂತೆ ಮಾಡಿತು. ಎರಡನೇ ಅಲೆಗೆ ತತ್ತರಿಸಿದ ಭಾರತ ಈ ಸಮಸ್ಯೆಯಿಂದ ಹೊರಬಿದ್ದು ಅವಶ್ಯಕತೆಗೆ ತಕ್ಕಷ್ಟು ಲಸಿಕೆ ದೊರಕದಿರುವ ಮೊದಲನೇ ವರ್ಗದ ಸಮಸ್ಯೆಗೆ ಸಿಕ್ಕಿಕೊಂಡಿದೆ.

ಹೌದು, ನಮ್ಮಲ್ಲಿನ 130 ಕೋಟಿಗೂ ಮೀರಿದ ಜನಸಂಖ್ಯೆಗೆ ಲಸಿಕಾಕರಣ ಬಹುದೊಡ್ಡ ಸವಾಲು. ಅದರಲ್ಲೂ ಕ್ಷಿಪ್ರವಾಗಿ ಔಷಧ
ಉತ್ಪಾದನೆ ಒಂದು ಹಂತಕ್ಕಿಂತ ಹೆಚ್ಚಿಸುವುದು ತತಕ್ಷಣಕ್ಕೆ ಸುಲಭಸಾಧ್ಯವಲ್ಲವೇ ಅಲ್ಲ! ಮೊದಲನೇ ಹಂತದಲ್ಲಿ ಕಟ್ಟುನಿಟ್ಟಿನ
ನಿಯಮಗಳ ಮೂಲಕ ನಿಯಂತ್ರಣ ಸಾಧಿಸಿದ್ದ ಕೇಂದ್ರ ಸರಕಾರ, ಬಡ ಮಧ್ಯಮವರ್ಗದವರ ಜೀವನ ವಿರೋಧಿ ನಿಲುವಿನ ಸರಕಾರ ಎಂಬ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಅತಿಯಾದ ಆತ್ಮವಿಶ್ವಾಸದಿಂದಲೋ, ಅಥವಾ ಹೊಣೆಗಾರಿಕೆಯನ್ನು
ಹಂಚಿಕೊಳ್ಳೋಣ ಎಂತಲೋ ಎರಡನೇ ಅಲೆಯಲ್ಲಿ ನಿರ್ವಹಣೆಯ ಹೊರೆಯನ್ನು ರಾಜ್ಯ ಸರಕಾರಗಳಿಗೆ ವಹಿಸಿ ಸುಮ್ಮನಾ ಯಿತು. ಇದು ಚಾಲಕನೊಬ್ಬ, ಬೆಟ್ಟಗುಡ್ಡ ಕ್ರಮಿಸಿದ ನಂತರ ಪರಿಣತನಲ್ಲದ ನಿರ್ವಾಹಕನ ಕೈಯಲ್ಲಿ ಸ್ಟಿಯರಿಂಗ್ ಕೊಟ್ಟು ಮಂಪರಿಗೆ ಜಾರಿದಂತೆ!

ಸ್ವಲ್ಪ ಚಲಿಸಿದ ಲಾರಿ ತದನಂತರ ನಿಯಂತ್ರಣ ತಪ್ಪಿ, ನಿದ್ರೆಗೆ ಜಾರಿದ ಚಾಲಕ ಎದ್ದು ನೋಡುವಾಗ ಕಂದಕದಲ್ಲಿತ್ತು! ಈಗ ಎಚ್ಚೆತ್ತ ಕೇಂದ್ರ ಸರಕಾರ, ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹೊಣೆಗಾರಿಕೆ ಪ್ರಸ್ತುತಪಡಿಸಿದೆಯಾದರೂ, ಅದಾಗಲೇ ಆಗಿರುವ ಹಾನಿ ಭಯಂಕರ ಮತ್ತು ಕ್ರಮಿಸಬೇಕಾದ ಹಾದಿ ಖಂಡಿತಾ ಸುಲಭದ್ದಲ್ಲ. ಮೊದಲನೆಯ ಸಮಸ್ಯೆ ಲಸಿಕೆಯ ಲಭ್ಯತೆ. ಉತ್ಪಾದನಾ ಘಟಕಗಳ ಕ್ಷಮತೆ ಹೆಚ್ಚಿಸುವುದು, ಹೊಸ ಆವಿಷ್ಕಾರಕ್ಕೆ ಪ್ರೋತ್ಸಾಹಿಸುವ ಯೋಜನೆಗಳು ರೂಪಿಸಿದ್ದರೂ, ಇದಾವುದು ಕ್ಷಣಮಾತ್ರದಲ್ಲಿ ಸಾಧಿಸಬಹುದಾದ ಕಾರ್ಯವಲ್ಲ. ಆವಿಷ್ಕಾರದ ಸ್ವಾಮ್ಯತೇ, ತಂತ್ರಜ್ಞಾನ ಮುಕ್ತವಾಗಿ ಹಂಚಿ ಕೊಳ್ಳುವತ್ತ ಸಫಲಗೊಂಡ ಕಂಪನಿಗಳು ತೆರೆದುಕೊಂಡರೆ, ಇನ್ನಷ್ಟು ಉತ್ಪಾದಕರು ಮುಂದೆ ಬಂದು ಕೊರತೆ ನೀಗಿಸುವುದಕ್ಕೆ ಸಹಕಾರಿಯಾಗಬಲ್ಲದು.

ಭಾರತ, ಫ್ರಾನ್ಸ್‌ನಂಥ ದೇಶಗಳು ಈಗಾಗಲೇ, ಮಾನವೀಯ ನೆಲೆಯಲ್ಲಿ ಕೋವಿಡ್ ಲಸಿಕೆಯ ಬೌದ್ಧಿಕ ಹಕ್ಕುಸ್ವಾಮ್ಯ ಇತರ
ಉತ್ಪಾದಕರೊಂದಿಗೆ ಹಂಚಿಕೊಳ್ಳುವಂತಾಗಬೇಕೆಂಬ ಪ್ರಯತ್ನದಲ್ಲಿ ತೊಡಗಿದೆ ಕೂಡಾ. ಇದರಿಂದ ಉತ್ಪಾದನೆ ಹೆಚ್ಚುವ ಜತೆಗೆ,
ಸಂಪನ್ಮೂಲ ಕೊರತೆಯ ರಾಷ್ಟ್ರಗಳಲ್ಲೂ ಔಷಧ ಸುಲಭವಾಗಿ  ದೊರಕುವ ಪ್ರಯತ್ನ ಸಫಲವಾಗಬಲ್ಲದು. ವಿದೇಶಿ ಲಸಿಕೆ ಗಳನ್ನು ತರಿಸುವಲ್ಲಿ ಭಾರತ ನಿಧಾನಿಸಿದ್ದು ನಿಜವಾದರೂ, ಇತ್ತೀಚಿಗೆ ಪ್ರಯತ್ನಗಳು ವೇಗ ಪಡೆದುಕೊಂಡಿವೆ.

ಲಸಿಕೆ ಜನಸಮೂಹ ಕ್ಷಿಪ್ರವಾಗಿ ತಲುಪಲು ಹೊಸ ತಂತ್ರಗಾರಿಕೆಯೂ ಅವಶ್ಯವೆನಿಸುತ್ತದೆ. ಉತ್ಪಾದನೆ ಹೆಚ್ಚಿಸುವುದು,
ಆವಿಷ್ಕಾರಗಳಿಗೆ ಪೂರಕವಾದ ವಾತಾವರಣ, ಬೆಂಬಲ ಸರಕಾರ ಈಗಾಗಲೇ ಆದ್ಯತೆಯಾಗಿಸಿಕೊಂಡಿದೆ. ಕೋವ್ಯಾಕ್ಸಿನ್,
ಕೋವಿಶೀಲ್ಡ್ ಜತೆಗೆ ರಷ್ಯಾದ ಸ್ಪುಟ್ನಿಕ್-ವಿ ಕೂಡ ನಮ್ಮಲ್ಲಿ ಲಭ್ಯವಿದೆ. ಜೆಜೆ ನಿರ್ಮಾಣದ ಲಸಿಕೆ ಕೂಡಾ ಜುಲೈ ಅಂತ್ಯಕ್ಕೆ
ಲಭ್ಯವಾಗುವ ನೀರಿಕ್ಷೆ ಇದೆ. ಫೈಸರ್ ಮತ್ತಿನ್ನಿತರ ಲಸಿಕಾ ಕಂಪನಿಗಳೊಂದಿಗೂ ಮಾತುಕತೆ ನಡೆದಿದೆ.

ಕೇಂದ್ರ ಸರಕಾರವೇ ಪೂರೈಕೆಯ ಜವಾಬ್ದಾರಿ ಹೊತ್ತು, ತಯಾರಕರೊಂದಿಗೆ ವ್ಯವಹರಿಸಿ ರಾಜ್ಯಗಳಿಗೆ ಲಸಿಕೆ ಒದಗಿಸಲಿದೆ ಎಂಬುದನ್ನೂ ಪ್ರಧಾನಿ ಇತ್ತೀಚಿಗೆ ಸ್ಪಷ್ಟ ಪಡಿಸಿದ್ದಾರೆ. ದೇಶಿಯ ನಿರ್ಮಿತ, ಮೂಗಿಗೆ ಸಿಂಪಡಿಸಬಲ್ಲ ಔಷಧ ಕೂಡ ಯಶಸ್ವೀ ಪರೀಕ್ಷೆಯ ನಂತರ ಸದ್ಯವೇ ಲಭ್ಯವಾಗಬಹುದೆಂಬ ಆಸೆ ವ್ಯಕ್ತವಾಗಿದೆ. ಫ್ರಾನ್ಸ್‌ನಂಥ ಮುಂದುವರಿದ ರಾಷ್ಟ್ರಗಳೇ ಕೋವಿಡ್ ಸೋಂಕು ಗುಣಮುಖರಾದವರಿಗೆ ಒಂದೇ ಹಂತದ ಲಸಿಕೆ ಸಂಪೂರ್ಣ ಸುರಕ್ಷತೆ ಒದಗಿಸಬಲ್ಲದೆಂಬ ವೈಜ್ಞಾನಿಕ ಅಂಶ ಆಧರಿಸಿ, ಒಂದೇ ಡೋಸ್ ಲಸಿಕೆ ನೀಡುತ್ತಿವೆ.

ಭಾರತದ ವೈಜ್ಞಾನಿಕ ಪರಿಣತರು ಈ ಅಂಶವನ್ನು ವಿಮರ್ಶಿಸಿ ದೃಢಪಡಿಸಿದರೆ ಲಸಿಕಾಕರಣದ ವ್ಯಾಪ್ತಿ ಕ್ಷಿಪ್ರವಾಗಿ ವಿಸ್ತರಿಸಲು ಸಹಾಯವಾಗಬಹುದು. ಇವೆಲ್ಲ ನಡೆದರೆ ಬಹುಸಂಖ್ಯೆಯ ದೇಶವಾಸಿಗಳಿಗೆ ಶೀಘ್ರವಾಗಿ ಲಸಿಕೆ ದೊರಕಿ ಕೋವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ಹುಮ್ಮಸ್ಸು ಬರಲಿದೆ. ಎಲ್ಲಕ್ಕಿಂತ ಹೆಚ್ಚಿನ ಬಲ ದೊರಕುವುದು, ಲಸಿಕಾಕರಣದ ಪ್ರಗತಿ ಒಂದು ಹಂತ ತಲುಪುವವರೆಗೆ ನಮ್ಮವರು ಎಚ್ಚರಿಕೆಯಿಂದ ಕೋವಿಡ್ ನಿಯಮದ ಅನುಷ್ಠಾನಕ್ಕೆ ಅಂಟಿಕೊಳ್ಳುವ ಸಹನೆ ತೋರುವುದರಿಂದ ಮದುವೆ, ಧಾರ್ಮಿಕ ಕಾರ್ಯಕ್ರಮ ರದ್ಧು ಪಡಿಸಿದ್ದೇವೆ ಎಂದು ತಾವು ನಿರ್ಭಿತರಾಗಿ ಗುಂಪುಕೂಡುವ ಶಾಸಕ, ಮಂತ್ರಿಗಳೂ, ಆಡಳಿತದ ವೈಫಲ್ಯ ಖಂಡಿಸಿ ಹೋರಾಟಕ್ಕಿಳಿಯುವ ವಿರೋಧ ಪಕ್ಷಗಳ ನೇತಾರರು ತಾವೇ ಹೊರಡಿಸಿದ ನಿಯಮಕ್ಕೆ
ಬದ್ಧರಾಗಬೇಕಿದೆ.

ಇಲ್ಲದಿದ್ದರೆ ಇವರೆಲ್ಲ ನಮ್ಮ ನಡುವಿನ ಕೋವಿಡ್ ಬಾಂಬ್‌ಗಳಾಗಿ ಸಾಮೂಹಿಕ ವಿನಾಶಕ್ಕೆ ಹೊಣೆಗಾರರಾಗುತ್ತಾರಷ್ಟೆ. ಭಾರತ ತನ್ನ ಲಸಿಕಾಕರಣದ ನೀತಿಯಲ್ಲಿ ಎಡವಿದೆ, ಎಂದು ಹುಯಿಲೆಬ್ಬಿಸುತ್ತಿರುವವರು, ಹೇಗೆ ಸಫಲರಾಗಬಹುದಿತ್ತು? ಎಂಬ
ಸಕಾರಾತ್ಮಕ ಸಲಹೆ ನೀಡುತ್ತಿಲ್ಲ. ಇವರೆಲ್ಲ ಉರಿಯುವ ಬೆಂಕಿಯಲ್ಲಿ ಚಳಿ ಕಾಯಿಸುತ್ತಿರುವ ಸಮಯಸಾಧಕರೇ ಹೊರತು, ನಿಜವಾದ ಕಾಳಜಿಯವರಲ್ಲ. ಕೋವಿಡ್ ನಿರ್ವಹಣೆಯಲ್ಲಿ ಭಾರತ ಸರಕಾರ ಎಡವಿಯೇ ಇಲ್ಲ ಎಂದು ನನ್ನ ವಾದವಲ್ಲವೇ ಅಲ್ಲ. ಎಡವಿದ್ದನ್ನು ನೋಡಿ ಆಡಿಕೊಳ್ಳುವುದು ಸಾಧನೆಯಲ್ಲವೇ ಅಲ್ಲ. ಈ ತನಕ ಅತೀ ಹೆಚ್ಚು (ಸಂಪೂರ್ಣ ಅಥವಾ ಎರಡೂ ಹಂತದ) ಲಸಿಕೆ ಕೊಟ್ಟಿರುವ ದೇಶ ಇಸ್ರೇಲ್ (57%). ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಬರುವುದೇ ಬಹ್ರೈನ್ (53%), ಉರುಬಾ(52%), ಮಾಲ್ಟಾ (52%), ಮಂಗೋಲಿಯಾ (51%), ಚಿಲಿ (48%), ಕುರಸೋ (44%), ಯುಕೆ (45%), ಅಮೆರಿಕ (44%), ಕತಾರ್ (42%).

ಭಾರತದಲ್ಲಿ ಈ ತನಕ ಆಗಿದ್ದು ಸುಮಾರು 3.5%, ಈ ತನಕ ಭಾರತದಲ್ಲಿ ಸಂಪೂರ್ಣ ಲಸಿಕೆ ತೆಗೆದುಕೊಂಡವರ ಸಂಖ್ಯೆ 4.75
ಕೋಟಿ. ಅಂದರೆ ನಾವೀಗಾಗಲೇ 5 ಇಸ್ರೇಲಿನಷ್ಟು, ನಲವತ್ತೆಂಟು ಬಹ್ರೈನ್‌ನಷ್ಟು, 475 ಆರುಬಾದಷ್ಟು, 95 ಮಾಲ್ಟಾದಷ್ಟು, ೧೪ ಮಂಗೋಲಿಯಾದಷ್ಟು, ಎರಡುವೊರೆ ಚಿಲಿಯಷ್ಟು, ಮುನ್ನೂರಕ್ಕೂ ಹೆಚ್ಚು ಕುರಾಸೋನಷ್ಟು, ಅಷ್ಟೇ ಏಕೆ ಮುಕ್ಕಾಲು ಇಂಗ್ಲೆಂಡಿನಷ್ಟು ಮತ್ತು ಸುಮಾರು ಐದನೇ ಒಂದು ಅಮೆರಿಕದಷ್ಟು ಸಂಪೂರ್ಣ ಲಸಿಕಾಕರಣ ಮಾಡಿದ್ದೇವೆ.

ಭಾರತದ ಜನಸಂಖ್ಯೆಯ ದೃಷ್ಟಿಯಲ್ಲಿದು ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತಾದರೂ, ಸಾಧಿಸಿದ ಪ್ರಗತಿ ಕಳಪೆಯಲ್ಲವೇ ಅಲ್ಲ! ಅದರಲ್ಲೂ, ಉಳಿವಿಗಾಗಿ ಹುಲ್ಲುಕಡ್ಡಿಯ ಆಸರೆ ಹುಡುಕುತ್ತಿರುವ ಸರಕಾರದ ವಿರೋಧಿಗಳ ಬಗೆಬಗೆಯ ರಾಜಕೀಯ ಚೆಟಗಳ ನಡುವೆ ಈ ಪ್ರಗತಿ ಉತ್ತಮವೇ. ಪ್ರಪಂಚದ ಬೇರಾವ ದೇಶದಲ್ಲೂ ನಮ್ಮಷ್ಟು ಕೋವಿಡ್ ರಾಜಕೀಯ ನಡೆದ ಕುರುಹುಗಳಿಲ್ಲ. ಅಮೆರಿಕ, ಇಸ್ರೇಲ್ ದೇಶಗಳಲ್ಲಿ ಸರಕಾರಗಳೇ ಬದಲಾದರೂ ಸಾಂಕ್ರಾಮಿಕವನ್ನು ಬಡಿದೋಡಿಸುವತ್ತ ಲಕ್ಷ ವಿತ್ತೇ ಹೊರತು, ತಪ್ಪು ಹೊರಿಸುವ ರಾಜಕೀಯ, ಅಪಪ್ರಚಾರದ ಕೊಚ್ಚೆ ಕೆಸರಾಟ ನಡೆಯಲಿಲ್ಲ.

ಇವೆದರ ನಡುವೆ ಲಸಿಕಾಕರಣ ವೇಗ ಹೆಚ್ಚಿಸಿ, ವಿಸ್ತೃತ ಜನಸಮೂಹವನ್ನು ತಲುಪಿ ಮುಂದಿನ ಹೋರಾಟಕ್ಕೆ ಅಣಿಯಾಗಲೇ ಬೇಕಾಗಿದೆ. ಬಹುತೇಕ ರಾಷ್ಟ್ರಗಳು ಅವಶ್ಯಕತೆಗೆ ತಕ್ಕಷ್ಟು ಲಸಿಕೆ ಲಭ್ಯವಿಲ್ಲವೆಂದು ಚಿಂತೆಗೀಡಾಗಿದ್ದರೆ. ಅಮೆರಿಕದಂಥ
ಕೆಲ ಮುಂದುವರಿದ ರಾಷ್ಟ್ರಗಳು ಲಸಿಕೆ ತಗೆದುಕೊಳ್ಳಲು ನಿರುತ್ಸಾಹಕ ಜನಸಮೂಹವನ್ನು ಪ್ರೇರೇಪಿಸಲು ತಲೆಕೆಡಿಸಿಕೊಂಡಿವೆ. ತನ್ನೆಲ್ಲ ಪ್ರಯತ್ನಗಳ ನಂತರವೂ ಶೇ.44ನಷ್ಟೇ ಜನಸಮೂಹಕ್ಕೆ ಸಂಪೂರ್ಣ ಲಸಿಕೆ ತಲುಪಿಸಿದ, ಲಸಿಕಾಕರಣದ ವೇಗ ಹೆಚ್ಚಿಸಲು ತಿಣುಕಾಡುತ್ತಿದೆ. ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ದೊರಕಿದವರಿಗೆ ಹಲ್ಲೆ ಇಲ್ಲದ ಪರಿಸ್ಥಿತಿ!

ಮೊದಮೊದಲು ಲಸಿಕೆ ತೆಗೆದುಕೊಂಡವರಿಗೆ ಅಲ್ಲಲ್ಲಿ ಕಾಫಿ, ಡೋನಟ್ ಇತ್ಯಾದಿ ಆಮಿಷ ಒಡ್ಡಲಾಗಿತ್ತಾದರೂ, ಈಗ ಸರಕಾರವೇ ಒಂದು ಹೆಜ್ಜೆ ಮುಂದೆ ಹೋಗಿ, ಲಸಿಕೆ ತೆಗೆದುಕೊಳ್ಳಿ ಮತ್ತು ಬಿರ್ಯ ಸವಿಯಿರಿ (Get a shot! Have a beer!) ಎಂಬ ಅಭಿಯಾನ ಪ್ರಾರಂಭಿಸಿದೆ! ಮೊನ್ನೆ ನಮ್ಮ ಪ್ರಧಾನಿ ಮೋದಿಯವರು ಕೇಂದ್ರ ಸರಕಾರವೇ ಎಲ್ಲರಿಗೂ ಲಸಿಕೆ ಮುಕ್ತವಾಗಿ ಒದಗಿಸಲಿದೆ ಎಂದಾಗ ಅದಾಗಲೇ ಖಾಸಗಿಯಾಗಿ ಲಸಿಕೆ ತೆಗೆದುಕೊಂಡವರು ತಮಗೆ ಲಸಿಕೆಯ ವೆಚ್ಚ ಬರಿಸಿಕೊಡಿ ಎಂದು ಕೂಗಿಕೊಂಡಂತೆ, ಅಮೆರಿಕಾದಲ್ಲಿ ಅದಾಗಲೇ ಲಸಿಕೆ ತೆಗೆದುಕೊಂಡವರು ಕಳೆದುಕೊಂಡ ಬಿಯರ್ ನೆನೆದು ಮರುಗುತ್ತಿರಬೇಕು!

ಇರುವುದೆಲ್ಲವ ಬಿಟ್ಟು ಇಲ್ಲದರ ಕುರಿತು ಕೊರಗುವುದರಲ್ಲಿ ನಮ್ಮನ್ನು ಮೀರಿಸಿದವರಾರು ಹೇಳಿ?